ಹಸಿದಾದ ಹುಲಿಯ ಚರ್ಮ – ನನ್ಹರ ನಿಮಗೆ
ವಿಷಕಂಠ ರುಂಡಮಾಲೆ
ಹಸನಾದ ಜೋಗಯ್ಯ ಹೊಸದಾಗಿ ಬಂದವುನೆ
ಹೆಸರ ಕೇಳುವ ಬನ್ನಿರೇ | ಸೊಲ್ಲು |
ಗೆಜ್ಜೆಗಳು ಘಲಿರೆನ್ನುತ – ಜೋಗಯ್ಯನ
ಹುಬ್ಬೆರಡು ನಲಿದಾಡುತ
ಜಗ್ಗೀಸಿ ಕುಣಿಯುವ ಜೋಗಯ್ಯನ ಕಂಡು
ನಾರಿಯರು ಬೆರಗಾದರು |

ಅಕ್ಕಯ್ಯ ನೋಡು ಬಾರೆ – ಇವನೋಲಿಕೆಯ
ಚಿಕ್ಕವಳೆ ನೋಡು ಬಾರೆ – ಇವನೋರಗೆಯ
ಚಿಕ್ಕವಳೆ ನೋಡು ಬಾರೆ
ಅಕ್ಕರುಕ್ಕಿಸುವಾತ ನಕ್ಕು ನಲಿಸುವಾತ
ಚಿಕ್ಕಂದಿನಿಂದ ಕಾಣೊ |

ಆಡಿದರೆ ಅರಗಿಣಿಯು _ ಈ ಜೋಗಿ
ಕುಣಿದರೆ ನವಿಲುಮರಿಯು
ಸೊರವೆತ್ತಿ ಹಾಡಿದರೆ ಕೋಗಿಲೆಗು ಇವ ಮಿಗಿಲು
ಹಡದವ್ವ ಯಾರೋ ಇವನ |

ನೋಡಿ ಬೆರಗಾದರಾಗ – ಅರ್ಜುನನ
ಅಂಗೈಲಿ ಪಾತ್ರೆಗಳು – ಅರ್ಜುನನ
ಮುಂಗೈಲಿ ಶಿವಜೋಳಿಗೆ
ಕಾಲಲ್ಲಿ ಕಿರುಗೆಜ್ಜೆ ಎದೆ ಮೇಲೆ ಕಿನ್ನುಡಿ
ಬಾಯಲ್ಲಿ ನಾಗಸ್ವೊರ – ಅರ್ಜುನನು
ಭಾರಿ ತ್ರಿಶೂಲ ಹಿಡಿದು – ಕಲಿಪಾರ್ಥ
ಏಳೇಳು ಲೋಕ ಮೆರೆದು – ಬಂದಂಥ
ಅರ್ಜುನನ ಕಂಡರಾಗ – ರಮಣೀರು
ನೋಡಿ ಬೆರಗಾದರಾಗ |

ಒತ್ತೊತ್ತಿ ಹೆಜ್ಜೆ ಇಡುತ – ಅರ್ಜುನ
ಅರ್ಥದಲಿ ಸೊರವ ಕೊಡುತ – ಅರ್ಜುನ
ಗೆಜ್ಜೆಗಳ ಲಾದು ಕೊಡುತ
ಅರವತ್ತಾರು ಭಾಷೆ ಮೂವತ್ತೆರಡು ರಾಗಗಳ
ರಾಗರಚನೆ ಮಾಡುತಾನೆ – ಅರ್ಜುನರಾಯ
ನಲಿದು ನಾಂಟ್ಯನಾಡುತಾನೆ |

ಗೌಡರ ಬೀದಿಯೊಳಗೆ – ಅರ್ಜುನರಾಯ
ಅರ್ತಿಯಲಿ ಕುಣಿಯುತಿರಲು
ಮುದ್ದೇಗೌಡರ ಮಡದಿ ಮುದ್ದುಮ್ಮತಾಯವರು
ಸೊಸೆಯರನು ಕೂಗಿ ಕರೆದರು – ಮುದ್ದಮ್ಮ
ಸೊಸೆಯರನು ಕೂಗಿ ಕರೆದರು |

ಮುದ್ದೇಗೌಡರಿಗೆ ಐದು ಜನ ಗಂಡು ಮಕ್ಕ
ಐದು ಜನಕ್ಕೂ ಮದುವೆ ಆಗದೆ
ಮುದ್ದಮ್ಮ ಐದು ಜನ ಸೊಸೇರ‍್ನು ಕೂಗಿ ಕರೆದಿದ್ದಾರೆ
ಐದು ಜನ ಸೊಸೇರು ಅತ್ತೆ ಮುಂದೆ ನಿಂತಿದ್ದಾರೆ
“”ಅಮ್ಮಾ ಸೊಸೆಮುದ್ದಿಗಳಾ
ಈವತ್ತು ಸೋಮಾರ

ಇದು ಬಸವಣ್ಣನ ಜಿವುಸ
ಮೀದು ಮಡಿ ಉಟ್ಕೊಂಡು
ಅಮ್ಮಗಳೇ ಮನೆಮಠದ ಕಸಮುಸುರೆ ತಗ್ದು
ಮನೆಕೊನೇನೆಲ್ಲ ಸಾರ‍್ಸಿ ರಂಗ್ವಾಲೆ ಬುಟ್ಟು
ಹೊಸ್ಲುಬಾಗುಲ್ಗೆ ಅರುಸ್ನ ಕೂಕುಮ ಹಸ್ಸಿ ಹೂಮಡಿಗಿ
ಬಸವಣ್ಣನ ತೊಳುದು ಈಬುತ್ತಿ ಗಂಧ ಹಸ್ಸಿ
ಕಡ್ಡಿ ಕಲ್ಪುರ ಬೆಳಗಿ –

ಪೂಜೆಗಳ ಮಾಡಬೇಕು – ಬಸವಣ್ಣನ
ಪೂಜೆಗಳ ಮಾಡಬೇಕು
ಬೇಗ ಬೇಗನೆ ಹೋಗಿ ಪೂಜೆಗೆ ಹದಗೂಡಿ
ಅಡಿಗೆಗಳ ಬೇಗ ಮಾಡಿ

ಅತ್ತೆ ತಾಬುನ ಸೊಸೆಯರು
ಅತ್ತ ಮಾತನ್ನು ಸಿರುಸದ ಮೇಲೆ ಮಡೀಕೊಂಡು
ಮನೆ ಕಸಮುಸುರೆನೆಲ್ಲ ತಗದು
ಮನೆಕೊನೆ ತಾರಿಸಿ
ಪಾತ್ರೆ ಪಗಡಿನೆಲ್ಲ ಬೆಳಗಿ ತೊಳದು
ಮನೆಗೆ ಗಂಗೋದಕವನ್ನು ತಂದಿದ್ದಾರೆ
ಒಲೆಯನ್ನು ತಾರ‍್ಸಿ ರಂಗೋಲೆ ಮಡ್ಗಿ
ಅರಿಸಿನ ಕೂಕುಮ ಈಬುತ್ತಿ ಹಸ್ಸಿ
ಕಡ್ಡಿ ಕಲ್ಪುರದಿಂದ ಬೆಳಗಿದ್ದಾರೆ
ಅಗ್ಗಿದೇವುನ ಪೂಜೆ ಮಾಡಿ ಒಲೆ ಕಚ್ಚಿದ್ದಾರೆ –

ಹಾಲಿಗಕ್ಕಿಯ ಸುರಿದರು – ಸೊಸೆ ಮುದ್ದೀರು
ಬ್ಯಾಳೆಯ ಹದಗೂಡಿಸಿ
ಹಾಲಾಗ್ರ ಮೇಲಾಗ್ರ ಕೀಲು ಸ್ಯಾವಿಗೆ ಪಾಯ್ಸ
ತನಿಹಾಲ ಮಾಡುತಾರೆ – ಸೊಸೆಯರು
ತನಿಹಾಲ ಮಾಡುತಾರೆ |

ಐದು ಜನ ಸೊಸೇರು ಒಂದೊಂದು ಕೆಲ್ಸ ಮಾಡ್ತಿದ್ದಾರೆ
ಎಲ್ಲುರ‍್ಗೂ ಹಿರಿಯೋಳು ದೇವಾಜಮ್ಮ
ಮನೆ ಜಗ್ಗಿ ಮ್ಯಾಲೆ ಸ್ಯಾಪೆ ಹಾಸ್ಕೊಂಡು
ತನ್ನ ಮೂರ‍್ತಿಂಗ್ಳು ಮಗುವನ್ನು ತೊಡಮ್ಯಾಲೆ ಮನುಗುಸ್ಕೊಂಡು

ಹಿರೇದಕಾಯಿ ಪಳ್ಳುದಕಾಯಿ ಸೋರೆ ಕಾಯ್ಗಳನ್ನು
ಈಳ್ಗೆ ಮಣೆಯಲ್ಲಿ ಉತ್ರುಸ್ತಿದ್ದಾಳೆ –
ಜೋಗಪ್ಪ ಬಂದರಲ್ಲ – ಆ ಕೇರೀಗೆ
ಜೋಗುಪ್ಪ ಬಂದರಲ್ಲ
ಬೀದೀಯ ಬಾಗಲಲ್ಲಿ ಜೋಗಪ್ಪ ಕುಣಿವಾದ
ದಿಟ್ಟೀಸಿ ನೋಡುತಾರೆ – ಸೊಸೆಮುದ್ದೀರು
ಜೋಗಪ್ಪನ ನೋಡುತಾರೆ |

“”ಅಕ್ಕಾ ಇಂಥ ಜೋಗೀಶ್ವರುನ್ನ
ನಾವು ಯಾವಾಗ್ಲೂ ನೋಡಿರ‍್ನಿಲ್ಲ
ಅವರ ಅಂದ ಚಂದ ರೂಪ ರಾವಣ್ಯಗಳನ್ನು –

ಅಕ್ಕಯ್ಯ ನೋಡು ಬಾರೆ – ಇವುನೋರಿಗೆಯ
ಚಿಕ್ಕವಳೆ ನೋಡು ಬಾರೆ – ಅಕ್ಕಯ್ಯ
ಹೊದ್ದವುನೆ ಹುಲಿಯ ಚರ್ಮ – ಜೋಗಪ್ಪ
ಬುಟ್ಟವುನೆ ಕೆಂಜೆಡೆಗಳ
ನಾಗಭೂಷಣಸ್ವಾಮಿ ನರನ ಅವತಾರ ತಾಳಿ
ನಾಡ ಮೇಲೆ ಬಂದನೇನೆ – ಅಕ್ಕಯ್ಯ
ನಾಡ ಮೇಲೆ ಬಂದನೇನೆ” |

ಅಕ್ಕ ದೇವಾಜಮ್ಮ ಜಗ್ತೀಮ್ಯಾಲೆ ಕುತ್ಕೊಂಡು
ಸೋರೆ ಕಾಯನ್ನು ಕುಯ್ತಾ ಇದ್ದಾಳೆ –
ಈಳಿಗೆ ಮಣೆ ಏಣುಗೆ – ತಾಯಮ್ಮ
ಸೋರೇಯ ಕಾಯ ಮಡಗಿ
ಉತ್ತರಿಸು ಕಾಲಕ್ಕೆ ಅತ್ತಿಂದಿತ್ತ ಕುಣಿವ
ಜೋಗಪ್ಪ ಬಂದನಲ್ಲಿ – ಆ ಕೇರಿಗೆ
ಜೋಗಪ್ಪ ಬಂದನಲ್ಲಿ |

ಜೋಗಯ್ಯ ಬಂದನಲ್ಲ – ಮನೆ ಮುಂದಕೆ
ಜೋಗಯ್ಯ ಬಂದನಲ್ಲ
ಬೀದೀಯ ಬಾಗುಲಲ್ಲಿ ನಲಿದಾಡೊ ಜೋಗಯ್ನ
ದಿಟ್ಟಿಸಿ ನೋಡುತಾರೆ – ಜೋಗಯ್ಯನ
ದಿಟ್ಟಿಸಿ ನೋಡುತಾರೆ |

ದೇವಾಜಮ್ಮನವರು
ತಾಯಿ ಸಂತೋಷವಾಗಿ ಕಣ್ಬುಟ್ಟುದ್ದೇ ಸರಿ
ಕಣ್ರೆಪ್ಪೆ ಹುಯ್ಯದೆಯೆ
ಆ ಮಾತ್ಮುರನ್ನು ಅಷ್ಟು ದ್ರಿಷ್ಟಿಯಾಗಿ ನೋಡ್ತಾ ಇದ್ದ ತಾಯಿ
ಸೋರೆಕಾಯಿ ಕುಯ್ತಾ ಇದ್ಲಲ್ಲ ತಾಯಿ
ದ್ರುಷ್ಟಿಯೆಲ್ಲ ಜೋಗಪ್ಪುನ ಮ್ಯಾಲೆ
ಕೈಯೆಲ್ಲ ಸೋರೆಕಾಯಿ ಮ್ಯಾಲೆ
ಜೋಗಪ್ಪನ ನಾಂಟ್ಯಗಳನ್ನು ನೋಡಿ
ಮುದ್ದೇಗೌಡರ ಸೊಸೆ ದೇವಾಜಮ್ಮ –

ಮಂಕು ಮರುಳಾದಳಾಗ – ದೇವಾಜಮ್ಮ
ಡಿಂಕುಡಿರುಳಾದಳಾಗ
ಕಣುರೆಪ್ಪೆ ಹೊಡಿಯದೆ ಜೋಗೀಯ ನೋಡುತ
ತುಳಿಗಳನು ಮಾಡುತಾಳೆ – ಸೋರೆಕಾಯ
ತುಳಿಗಳನು ಮಾಡುತಾಳೆ |
ಸೋರೆಕಾಯಿ ಮುಗುದು ಬಂತು ಅನ್ನುವಂತಾದ್ದು ತಾಯಿಗೆ ಅರುವಾಗ್ನಿಲ್ಲ
ಕೈ ಮಡುಗುದಾಗ ಅವುಳ ಕೈಗೆ ಅವಳ ಮಗ ಸಿಕ್ಕಿ
ಮಗಾ ಅನ್ನಾದು ತಿಳೀದೆ
ತಾಯಿ ಆ ಮೊಗೀನ ತೊಡೆಯನ್ನು ಕತ್ತುರ‍್ಸಿ

ತುಳಿಗಳನು ಮಾಡುತಾಳೆ – ದೇವಾಜಮ್ಮ
ತೊಡೆಯ ಉತ್ತರಿಸುತಾಳೆ
ತನ್ನ ಕಂದನ ತೊಡೆ ಅನ್ನೋದೆ ಗೊತ್ತಿಲ್ದೆ
ತುಳಿಗಳನು ಮಾಡುತಾಳೆ |

ಮುದ್ದೇಗೌಡರ ಸೊಸೆ ಮೊಗುವಿನ ಕಾಲನ್ನು ತೊಡೆಯನ್ನು ತುಳಿಗಳನ್ನು ಮಾಡಿ
ಮತ್ತೆ ಕೈಹಾಕಿ ಮಗುವನ್ನು ಎತ್ತಿ ಕುತ್ತಿಗೆಯನ್ನು ಕತ್ರುಸಿದ್ದಾಳೆ
ಅಷ್ಟೊತ್ತಿಗೆ ಅರ್ಜುನನಾದರೂ –
ಮುಂದಲ ಬೀದಿಗ್ಹೊರಟ – ಕಲಿಪಾರ್ಥ
ಮುಂದು ಮುಂದಕೆ ಹೊರಟ
ಮುಂದಲ ಬೀದೀಲಿ ಆ ಕಲಿಪಾರ್ಥನು

ಕುಣುದು ನಾಂಟ್ಯವನಾಡಿದ – ಜೋಗಪ್ಪ
ರಾಗಗಳ ರಚಿಸಿ ಹಾಡಿದ |
ಅತ್ಲಾಗಿ ಲಿಂಗಾಯುತ್ರು ಬೀದಿ ಓಷ್ಟುಮರ ಬೀದಿ
ಕುರುಬ್ರು ಬೀದಿ ಕುಂಬಾರ್ರು ಬೀದಿ
ಕುಂಚಿಟುಗ್ರು ಬೀದಿ

ಜೇನಿಗರ ಬೀದಿ ಉಪ್ಪಾರ್ರ ಬೀದಿ ತೊರೇರ ಬೀದಿ
ಗೊಲ್ಲರ ಬೀದಿ ಮಲ್ಲರ ಬೀದಿಗಳ ಕಡೆ ಹೋಯ್ತಾ ಇದ್ರೆ
ಇತ್ಲಾ ಕಡೆ ದೇವಾಜಮ್ಮ ನೋಡ್ತಿದ್ದಾಳೆ
ಸೋರೆಕಾಯಿ ಜೊತೆ ಮಗೂನ ಕೂದಿದ್ದಾಳೆ –

ಕೆಟ್ಟೇನೆಂದಳು ತಾಯಿ – ಕೈಯೀನ
ನಟ್ಟೀಯ ನುರುಕಿದಾಳು
ಜೋಗಿಯ ನೋಡುತ್ತ ನನ ಮೊಗೀನ ಜೀವ ಹೊಯ್ತು
ಸಿಸುಹತ್ಯೆ ನಡೆದೋಯಿತು – ಅಂತ್ಹೇಳಿ
ಲಬಲಬನೆ ಬಾಯ ಬಡಿದ |

“”ಅಕ್ಕ ದೇವಮ್ಮ
ಅತ್ತೆ ಮಾವ ಬರೋ ಹೊತ್ತಾಯ್ತು
ಇನ್ನು ಅಡಗೆ ಕೆಲ್ಸಾ ಮುಗುದಿಲ್ಲ
ಸ್ಟಾರೆಕಾಯ್ ಉತ್ರುಸ್ ಆಗಿದ್ರೆ ಕೊಡು” ಅಂತ್ಹೇಳಿ
ಬಂದು ನೋಡಿದ್ದಾರೆ
ಘೋರುವಾದ ಕಾರ್ಯ ಆಗಿ ಹೋಗಿದೆ.
ಆಗ ಆ ಎಲ್ರೂ –

ಲಬಲಬನೆ ಬಾಯ ಬಡುದು – ಆ ಸೊಸೆಯರು
ತಲೆತಲೆ ಚಚ್ಚಿಕೊಂಡರು
“”ಈ ಹಾಳು ಜೋಗಿಯಿಂದ ಗಾಳುಗೋಳು ಉಂಟಾಯ್ತು
ಸಿಸುಹತ್ಯೆ ನಡೆದೋಯಿತು” |

“”ಅಯ್ಯೊ ಪರಮಾತ್ಮ
ಇಷ್ಟೊಂದು ಕಥೆಯೆಲ್ಲ ಜೋಗಪ್ನಿಂದ್ಲೆ ತಾನೆ ಆಯ್ತು
ಆ ಜೋಗಪ್ಪುಂಗೆ ಹೇಳಿ ನನ್ನ ಮಗುವನ್ನು
ಪಡ್ಕೊಂಬತ್ತೀನಿ” ಅಂತ್ಹೇಳಿ
ತುಳಿ ಮಾಡಿದ ಈಳ್ಗೆಮಣೆ ಸೈತುವಾಗಿ –
ಮಾತ್ಮರ ಬಳುಗೆ ಬಂದ – ಆ ತಾಯಮ್ಮ
ಜೋಗಪ್ಪನ ಬಳುಗೆ ಬಂದ
ಗೋಳಾಡಿಕೊಂಡು ಬಂದು ಜೋಗಪ್ನ ಪಾದ ಹಿಡಿದು
ಬಾಯಿ ಬಾಯಿ ಬಡುಕೊಂಡಳು – ದೇವಾಜಮ್ಮ
ತಲೆ ತಲೆ ಚಚ್ಚಿಕೊಂಡಳು |

“”ಅಮ್ಮಾ ತಾಯಿ ಏನಾಯಿತಮ್ಮ ?
ಯಾತುಕಮ್ಮ ಹಿಂಗೆ ದುಕ್ಕಗಳ್ನ ಮಾಡ್ತಿದ್ದೀಯೆ ?”
“”ಸ್ವಾಮಿ ನೀವು ನಮ್ಮ ಬೀದಿಗೆ ಬಂದ್ರಿ
ಹಾಡುದ್ರಿ ಕುಣುದ್ರಿ
ನಾನು ಜಗ್ತಿ ಮ್ಯಾಲೆ ಮಗೀನ ತೊಡೆ ಮೇಲಾಕೊಂಡು
ಸೋರೆಕಾಯ ತುಳಿ ಮಾಡ್ತಿದ್ದಿ
ನೀವು ನಲ್ದು ನಾಂಟ್ಯನಾಡದ ನೋಡ್ದಿ
ಬಾಳ ಸಂತೋಷವಾಗಿ
ಮೈಮ್ಯಾಲೆ ಗ್ಯಾನವಿಲ್ದಂಗಾಗಿ
ಈ ಮೋಗೀನ ತೊಡೆಯನ್ನು ಸೋರೆಕಾಯಿ ಅಂತ ತಿಳುಕೊಂಡು
ಉತ್ರುಸಿ ತುಳಿ ಮಾಡ್ಬುಟ್ಟಿ
ಕುತ್ತಿಗೇನು ಕತ್ರುಸಿ ಕೈಲಿಡ್ಕೊಂಡಿದ್ದಿ
ಅಷ್ಟೊತ್ಗೆ ನೀವು ಈಚೆ ಬೀದೀಗೆ ಬಂದ್ರಿ
ಆಗ ನನ್ನ ವಾರಗಿತ್ತೀರು ಬಂದು ನೋಡುದ್ರು
ಅವುರು ಹೇಳಿದ್ಮ್ಯಾಕೆ ನನಗೆ ಗೋಚುರವಾಯ್ತು
ಅಯ್ಯೋ ಗುರುವೆ ಗುರುಪಾದುವೆ
ನಾನು ನನ್ನ ಮಗೂನ ಕೊಳ್ಳು ಕೂದು ಸಿಸುಹತ್ತೆ ಮಾಡಿದ್ದೀನಿ
ಇದುಕ್ಕೆ ನಿಮ್ಮ ಕುಣುತ್ವೇ ಕಾರ‍್ಣ
ಆದ್ದರಿಂದ ಈ ಮಗೂನ ನೀವೇ ಬದುಕಿಸಿ ಕೊಡಬೇಕು
ಇಲ್ಲಿದ್ರೆ ನನ್ನ ಅತ್ತೆ ಮಾವ ನನ್ನ ಬಿಟ್ಟೀರ
ನನ್ನ ಗಂಡ ನನ್ನ ಬಿಟ್ಟೀನ ಗುರುವೆ ?
ನೀವೆ ಕಾಪಾಡಬೇಕು ಸ್ವಾಮಿ”
“”ಅಮ್ಮಾ ತಾಯಿ ನೀನು ಮೊಗೀನ ಕೂದ್ಬುಟ್ಟು
ನನ್ ಮ್ಯಾಲೆ ಹಾಕ್ತಿದ್ದಿಯಲ್ಲವ್ವ
ಇದು ನ್ಯಾಯುವ ? ಧರ್ಮುವ ?”
“”ಸ್ವಾಮಿ ನಾನು ಸುಳ್ಳಾಡೋಳಲ್ಲ
ನಮ್ಮಿಂದ್ಲೇ ಇದು ಆಗಿರದು
ನೀವು ಈ ಮೊಗೀನ ಬದುಕಿಸಿ ಕೊಟ್ಟಿದ್ದೇ ಆದ್ರೆ ಸರಿ
ಇಲ್ದಿದ್ರೆ ನಿಮ್ಮ ಪಾದದ ಮ್ಯಾಲೆ ಬಿದ್ದು ಪ್ರಾಣ ಕಳ್ಕೋತೀನಿ”
“”ಏನಮ್ಮ ಇತೆ ಮಾತಾಡ್ತಿಯಲ್ಲ ತಾಯಿ
ನಿನ್ನ ಮೊಗೀನ ಬದುಕಿಸಿಕೊಡಕೆ
ನಾನೇನು ವಿಷ್ಣೂನ ? ಬ್ರಮ್ಮಾನ ? ಈಶ್ವುರುನ ?
ನಾನೆಂಗೆ ಬದುಕಿಸಿಕೊಡ್ಲಿ ತಾಯಿ ?”
“”ಸ್ವಾಮಿ ನೀವು ಹಂಗಂದ್ಬುಟ್ರೆ
ಮೊಗಾ ಇಲ್ದೆ ನಾನು ಮನೆಗೋಗದುಂಟ ?
ಹೋಗಿ ನಾನು ಬದುಕೋದುಂಟ ?
ಆದ್ರಿಂದ ನನ್ನೂ ನೀವೇ ಕತ್ರುಸಿ ಎಸೆದ್ಬುಡಿ ಸ್ವಾಮಿ
ಹಂಗಾರೂ ಈ ಘಟ ಮರೆಯಾಗ್ಲಿ”
“”ದುಡುಕ ಬ್ಯಾಡ ತಾಯಿ
ನಾನು ನೀನು ತಿಳ್ಕೊಂಡಂಗೆ ಪರಮಾತ್ಮ ಅಲ್ಲಮ್ಮ
ಆದ್ರೆ ನನಗೆ ಜೋಗಿ ದೀಕ್ಷ್ಯವನ್ನು ಕೊಟ್ಟಂತ
ನನ್ನ ಗುರು ಭೈರವೇಶ್ವರಸ್ವಾಮಿ ಇದ್ದಾರೆ
ಅವರಲ್ಲಿ ಪ್ರಾರ್ಥಿಸಿಕೊಳ್ತೀನಮ್ಮ
ಅವರು ನಿನ್ನ ಮಗುವನ್ನು ಬದುಕಿಸಿ ಕೊಟ್ರೆ
ನಿನ್ನ ಮಗುನ್ನ ಆ ಸ್ವಾಮಿಗೆ ಜೋಗಿ ಬುಡ್ತಿಯೇನಮ್ಮ ?”
“”ಆಗಬವುದ ಸ್ವಾಮಿ”.
“”ನಿಮ್ಮ ವಂಶಿಕರಲ್ಲಿ ಒಬ್ಬುಂಗಾದ್ರೂ
ಅನ್ನದಾನಿ ಭೈರುವ ಅಂತ ಹೆಸ್ರಿಡ್ತಿರೇನ್ರಮ್ಮ ?”
“”ಅಗಬವುದು ಸ್ವಾಮಿ”
“”ನಿಮ್ಮ ಒಕ್ಕುಲನ್ನು ಜೋಗಿ ಒಕ್ಲು ಅಂತ ಕರೀತೀರೇನಮ್ಮ ?”
“”ಆಗಬವುದು ಸ್ವಾಮಿ”
ದೇವಾಜಮ್ಮ ಒಪ್ಪಿಕೊಂಡ ಕೂಡಲೆ
ಅರ್ಜುನ ಸ್ವಾಮಿಯು
ಮಗುವಿನ ತಲೆಯನ್ನು ಕತ್ತುಗೆ ಸೇರಿಸಿ –
ಮುತ್ತೀನ ಜೋಳಿಗೆಯಲಿ – ಇದ್ದಂಥ
ಮಾಯದ ಬೂದಿ ತೆಗೆದು
ಭೈರೂವ ಸ್ವಾಮಿಯ ಮಂತ್ರವ ಜಪಿಸುತ
ಮಗುವೀಗೆ ಪಿಡಿದರಾಗ – ಜೋಗಪ್ಪ
ಮಗುವೀಗೆ ಪಿಡಿದರಾಗ |
ಮಂತ್ರುಗಳ ಜಪುನೆ ಮಾಡಿ ಆ ಮಗುವನ್ನು
ಚುಂಚನಗಿರಿ ಭೈರವೇಶ್ವರನ ದಯದಿಂದ ಬದುಕಿಸಿದ್ದಾರೆ
ಮಗುವನ್ನು ಪಡೆದ ಸತ್ಯಕೆ ಒಲುದು
ಪುರುಜನುವೆಲ್ಲ ಜೋಗಪ್ಪನ ಪಾದ್ಕೆ ಶರಣು ಮಾಡುದ್ರು
ಆಗ ಅರ್ಜುನದೇವ
“”ಏನಮ್ಮ ನಿನ್ನ ಮಗ ಬದುಕಿದಾನೆ
ಮರೀಬ್ಯಾಡ ಮಗಳೆ
ಈ ಮಗುವನ್ನು ಚುಂಚನಗಿರಿ ಭೈರವಸ್ವಾಮಿಗೆ ತಪ್ಪದೆ ಜೋಗಿ ಬುಡಬೇಕು
ನಿಮ್ಮ ವಂಶಿಕರಲ್ಲಿ ಒಬ್ಬರಿಗಾದ್ರೂ ಅನ್ನದಾನಿ ಭೈರುವ ಅಂತ ಹೆಸ್ರು ಕರೀಬೇಕು
ನಿಮ್ಮನ್ನ ಭೈರವನ ಒಕ್ಲು ಅಂತ್ಹೇಳಬೇಕಮ್ಮ
ಈ ಮಗುವನ್ನ ಜೋಗಿ ಮಾಡಿ
ಅವನ ಕಿಮೀಗಳಿಗೆ ಕಾಮಾಕ್ಷಿ ಧರೂಸಿ
ಕೊಳ್ಳುಗೆ ರುದ್ರಾಕ್ಷಿ ಮಣಿ ಕಟ್ಟಿ
ಸಿಂಗುನಾಥವನ್ನು ಧರಿಸಿ
ನವಿಲುಗರಿದೊಂದೆ ಜೋಳುಗೆ ತ್ರಿಶೂಲಗಳನ್ನು ಹಿಡ್ಕೊಂಡು
ಬಿರುದು ಲಾಂಛನಗಳನ್ನು ಹೊತ್ಕೊಂಡು
ಜಗತ್ತುನಲ್ಲಿ ಭೈರುವನ ಒಕ್ಕಲು ಅಂತ ಹೆಸ್ರು ಪಡೀಬೇಕಮ್ಮ” ಅಂತ ಹೇಳುದ್ರು
ಇವ್ಳು “”ಆಗಬವುದು ಸ್ವಾಮಿ” ಅಂತ್ಹೇಳಿ ಮಗುವನ್ನು ಎತ್ಕೊಂಡ್ಳು
ಎತ್ಕೊಂಡ್ರೆ ಕತ್ತುಗೆ ತಲೆ ಸೇರಿಸಿದ್ರೆ ಹೊರ‍್ತು
ತುಳೀ ಮಾಡಿದ್ದಂಥ ತೊಡೇನ ಸೇರುಸಿಯೆ ಇಲ್ಲ
ಆಗ ಆ ತಾಯಿ ದೇವಾಜಮ್ಮ
“”ಸ್ವಾಮಿ ಮಗುವನ್ನೇನೋ ಪಡುದುಕೊಟ್ರಿ
ಆದ್ರೆ ಎಡಗಾಲು ಸೇರುಸ್ಲೇ ಇಲ್ಲುವಲ್ಲ ಸ್ವಾಮಿ ?”
“”ಅಮ್ಮ ನೀನು ತುಳಿ ಮಾಡಿದ್ದ ಕಾಲನ್ನು
ಸೇರುಸ್ದೇ, ಹಂಗೇ ಬುಟ್ಟೋಯ್ತು
ಈಗ ಮತ್ತೆ ಕಾಲನ್ನು ಸೇರುಸೋಕೆ
ಭೈರುವಸ್ವಾಮಿಯನ್ನು ಬೇಡ್ಕಳದು ಹೆಂಗಮ್ಮ ?
ಸತ್ತವನನ್ನು ಎತ್ತಿ ಕೊಟ್ಟಾಗದೆ
ಮತ್ತೆ ಭೈರೂವಸ್ವಾಮಿಯನ್ನು ಬೇಡೋದು ತರವಲ್ಲ ತಾಯಿ
ಜೀವ ಉಳುಸ್ಕೊಟ್ಟಿದ್ದೀನಿ
ತಿರುಗಿ ಕಾಲನ್ನು ಕೊಡು ಅಂತ ಕೇಳುದ ಬೇಡಮ್ಮ” ಅಂದ್ರು
ಅಷ್ಟೋತ್ಗೆ ಮುದ್ದೇಗೌಡ ಅವನ ಹೆಂಡ್ತೀ ಮಕ್ಳೆಲ್ಲ ಬಂದ್ರು
ಅವುರ‍್ಗೆಲ್ಲ ಭೈರವಸ್ವಾಮಿ ಕೃಪೆ ಮಾಡಿದ್ದನ್ನೆಲ್ಲ ಹೇಳಿ
“”ನೋಡ್ರಪ್ಪ ನಾನು ಹನ್ನೆರಡೊರ್ಷದ ತನ್ಕ ಜೋಗಿ ಆಗಿದ್ದು
ಲೋಕ ಸೆಂಚರಣೆ ಮಾಡಿ ಹನ್ನೆರಡೊರ್ಷ ಆದ್ಮೇಕೆ
ಈ ಬಿರುದುಗಳ್ನೆಲ್ಲ ಇವುನ್ಗೆ ಕೊಟ್ಟೋಯ್ತಿದ್ದೀನಿ
ಇವುನನ್ನು ಭೈರವನ ಜೋಗಿ ಬುಡ್ರಪ್ಪ” ಅಂತ್ಹೇಳಿ
ದೇವಾಜಮ್ಮುಂಗೆ ಹೇಳ್ತಿದ್ದಾರೆ
“”ಈ – ಕಂದನಿಗೆ ಒಂದೆ ಕಾಲು – ಕೇಳಮ್ಮ
ಇವನೀಗೆ ಒಂದೆ ಕಾಲು
ಒಂದೆ ಕಾಲವನೀಗ ಒಕ್ಕಾಲು ಕಾಣಮ್ಮ
ಒಕ್ಕಾಲಿಗ ಇವನು ತಾಯಿ – ದೇವಮ್ಮ
ಒಕ್ಕಾಲಿಗ ಇವನು ತಾಯಿ |
ಲೋಕಕ್ಕೆ ಅನ್ನ ಕೊಡುವ – ನಿನ್ನ ಮಗ
ಒಕ್ಕಲಿಗ ಕಾಣೆ ತಾಯಿ
ಭೂಮಿತಾಯಿಯ ಮಗನು ಭೈರವನ ಸಿಸುಮಗನು
ನಿನ್ನ ಮಗ ಕಾಣೆ ತಾಯಿ – ದೇವಮ್ಮ
ಒಕ್ಕಲಿಗ ಇವನು ತಾಯಿ |
“”ಅಯ್ಯಾ ಮುದ್ದೇಗೌಡ ಈ ಒಕ್ಕಾಲನ ಹುಡುಗನಿಂದ
ನಿಮ್ಮ ವಮುಸಕ್ಕೆ ಒಕ್ಕಲಿಗರು ಅನ್ನೊ ಹೆಸ್ರಾಗ್ಲಪ್ಪ”
ಅಂತ ಅಸುರ‍್ವಾದ ಮಾಡುಬುಟ್ಟು ಮುಂದುಕೋದ್ರು
ಆಗ ಮುದ್ದೇಗೌಡನ ಹೆಂಡ್ತಿ ಮಗುವನ್ನ ನೋಡುದ್ಲು –
ಕಂದನನು ಎತ್ತಿಕೊಂಡು – ಮುದ್ದಮ್ಮ
ಆನಂದದಲಿ ಮುದ್ದಾಡುತ
ಜೋಗಪ್ಪನ ಪಾದಕೆ ಎಲ್ರೂ ಸರಣು ಮಾಡಿ
ಮನೆ ಕಡೆಗೆ ನಡೆದರಾಗ – ಅವರೆಲ್ಲ
ಮನೆ ಕಡಗೆ ನಡೆದರಾಗ |
ರುದ್ರಕುಶಲ ಶೂರ ಜಯತೊ – ಅರ್ಜುನನ
ಭದ್ರಗುಣಕೊಲಿದೆ ಜಯತೊ
ಸಿದ್ಧಕಲಿ ಪಾರ್ಥನಿಂದ ಜೋಗಿ ಒಕ್ಕಲು ಪಡೆದ
ಆದಿಭೈರವನೆ ಜಯತೊ