ಕಾಡಬ್ಯಾಡ ಕರುಣಮಾಡೆ ಮಾದೇವಿ
ನಿನ್ನ ಕರುಣದಿಂದ ನಮ್ಮ ಶರಣು ಮಾದೇವಿ  ೧

ಕರುಣದಿಂದ ನನ್ನ ಶರಣು ಮಾದೇವಿ
ನಿನ್ನ ಸುತ್ತಮುತ್ತ ಏಳುಕೊಳ್ಳ ಮಾದೇವಿ      ೨

ಸುತ್ತಮುತ್ತ ಏಳುಕೊಳ್ಳ ಮಾದೇವಿ
ನಿನ್ನ ನಟ್ಟ ನಡುವ ಗಚ್ಚಿನ ಗುಡಿಯು ಮಾದೇವಿ        ೩

ನಟ್ಟ ನಡುವೆ ಗಚ್ಚಿನ ಗುಡಿಯು ಮಾದೇವಿ
ನಿನ್ನ ಗುಡಿಯ ಮ್ಯಾಲ ಬಂಗಾರ ಕಳಸ ಮಾದೇವಿ     ೪

ಗುಡಿಯ ಮ್ಯಾಲ ಬಂಗಾರ ಕಳಸ ಮಾದೇವಿ
ನಿನ್ನ ಎಡ ಮಗ್ಗುಲ ಏಳುಕೊಳ್ಳ ಮಾದೇವಿ    ೫

ಎಡಮಗ್ಗುಲ ಏಳುಕೊಳ್ಳ ಮಾದೇವಿ
ನಿನ್ನ ಬಲಗಡೇಕ ಸವದತ್ತಿ ಮಾದೇವಿ         ೬

ಬಲಗಡೇಕ ಸವದತ್ತಿ ಮಾದೇವಿ
ನಿನ್ನ ಎಡಬಲಕ ಏಳುಕೊಳ್ಳ ಮಾದೇವಿ       ೭

ಹಣಿಯಮ್ಯಾಲ ಭಂಡಾರ ಬೇಕು ಮಾದೇವಿ
ನಿನ್ನ ಹಣಿಯಮ್ಯಾಲ ಕುಂಕುಮ ಬೊಟ್ಟು ಮಾದೇವಿ    ೮

ಹಣಿಯ ಮ್ಯಾಲ ಕುಂಕುಮ ಬೊಟ್ಟು ಮಾದೇವಿ
ನಿನ್ನ ಕೊರಳಲ್ಲಿ ಸರುಪದ ಮಾಲೆ ಮಾದೇವಿ  ೯

ಕೊರಳಲ್ಲಿ ಸರುಪದ ಮಾಲೆ ಮಾದೇವಿ
ನಿನ್ನ ಕೈಯವೊಳಗೆ ಬೇದಂಡೆ ಮಾದೇವಿ     ೧೦

ನಿನ್ನ ಕೈಯವೊಳಗೆ ಬೇದಂಡೆ ಮಾದೇವಿ
ನಿನ್ನ ಕಾಲವೊಳಗೆ ಕಿರಿಯ ಗೆಜ್ಜಿ ಮಾದೇವಿ   ೧೧

ಕಾಲವೊಳಗ ಕಿರಿಯ ಗೆಜ್ಜಿ ಮಾದೇವಿ
ನಿನ್ನ ತಲಿಯ ಮ್ಯಾಲೆ ಜಳಕದ ಕೊಡ ಮಾದೇವಿ       ೧೨

ತಲಿಯ ಮ್ಯಾಲ ಜಳಕದ ಕೊಡ ಮಾದೇವಿ
ನಿನ್ನ ಮಗ್ಗುಲದಲ್ಲೇ ಚಾವುಂಡಿಕೆ ಮಾದೇವಿ   ೧೩

ಮಗ್ಗುಲದಲ್ಲೇ ಚಾವುಂಡಿಕೆ ಮಾದೇವಿ
ನಿನ್ನ ತೊಡೆಯ ಮ್ಯಾಲ ಪರಸರಾಮ ಮಾದೇವಿ       ೧೪

ಕಾಡಬ್ಯಾಡ ಕರುಣಮಾಡೆ ಮಾದೇವಿ
ನಿನ್ನ ಕರುಣದಿಂದ ನಮ್ಮ ಶರಣು ಮಾದೇವಿ  ೧೫