ಪಶ್ಚಿಮ ಘಟ್ಟಗಳಲ್ಲಿ ಹುಟ್ಟುವ ಹೊಳೆಗಳಂತೆ ಕಾರಂತರ ಸೃಜನ ಸಾಮರ್ಥ್ಯ. ಅದು ನಿರಂತರವಾಗಿದೆ, ಸಮೃದ್ಧವಾಗಿದೆ, ವೈವಿಧ್ಯಮಯವಾಗಿದೆ. ಅದು ಅವರ ಕೃತಿಗಳ ಮೂಲಕ ನಿಶ್ಚಿತವಾದ ಚಲನಶೀಲತೆಯನ್ನು ಕಾಯ್ದುಕೊಂಡು ಬಂದಿದೆ.

ಕಾರಂತರು ಬದುಕಿನ ಸಮಸ್ತ ಅನುಭವಗಳಿಗೆ ತಮ್ಮನ್ನು ಒಡ್ಡಿಕೊಂಡವರು. ಅದರ ಸಂಘರ್ಷಗಳಿಂದ ಬೆಳೆದವರು. ಅದರ ವಾಸ್ತವಿಕ ಅನುಭವವೇ ಅವರ ಪಾಲಿಗೆ ಒಂದು ಪುಸ್ತಕ. ಅತ್ಯಂತ ಪ್ರಾಮಾಣಿಕತೆಯಿಂದ, ತೀವ್ರತೆಯಿಂದ ಬದುಕಿನೊಂದಿಗೆ ತಮ್ಮನ್ನು ತೊಡಗಿಸಿಕೊಂಡವರು ಅವರು. ಈ ವಾಸ್ತವದ ನೆಲೆಯಮೇಲೆ ಗಟ್ಟಿಯಾಗಿ ನಿಂತು, ಅದರೊಳಗಿನ ಹಾಗೂ ಅದರಾಚೆಯ ಗೂಢವನ್ನು ಅತ್ಯಂತ ಆಳವಾಗಿ ಅನ್ವೇಷಿಸಿದವರು.

ಕಾರಂತರು, ಯಾರೋ ಸಿದ್ಧಪಡಿಸಿ ಇರಿಸಿದ ತೀರ್ಮಾನಗಳಿಂದ ಬದುಕನ್ನು ಒಪ್ಪಿಕೊಳ್ಳಲು ಅಥವಾ ಅಳೆಯಲು ಹೊರಟವರಲ್ಲ; ಅಥವಾ ಬದುಕನ್ನು ಯಾವುದೇ ಸಿದ್ಧ ತೀರ್ಮಾನಗಳಿಗೆ ಒಳಪಡಿಸಲು ಹೊರಟವರೂ ಅಲ್ಲ. ಹಾಗೆಯೇ ತಾನು ಕಂಡುದಷ್ಟೇ ಸತ್ಯ, ಇದಲ್ಲದೆ ಬೇರೆಯದು ಇಲ್ಲ ಎಂಬ ಧೋರಣೆಯವರೂ ಅಲ್ಲ.ಈ ಬಗೆಯ ತೆರೆದ ಮನಸ್ಸಿನಿಂದ, ಸಂಪ್ರದಾಯದ ಗೆರೆಯಾಚೆ ನಿಂತು ಬದುಕನ್ನು ಅರ್ಥಮಾಡಿಕೊಳ್ಳಲು, ಅರ್ಥಮಾಡಿಕೊಡಲು ಪ್ರಯತ್ನಿಸಿದ ‘ಪ್ರಯೋಗ ಪರಿಣತಮತಿ’ಗಳು ಕಾರಂತರು. ಇದು ಕಾರಂತರ ವೈಚಾರಿಕತೆಯ ನೆಲೆಗಟ್ಟು.

ಈ ಒಂದು ತಾತ್ವಿಕ ಹಿನ್ನೆಲೆ ಅವರ ‘ಹುಚ್ಚು ಮನಸ್ಸಿನ ಹತ್ತು ಮುಖಗಳು’ ‘ಗ್ನಾನ’ ‘ಬಾಳ್ವೆಯೆ ಬೆಳಕು’ ‘ಬಿಡಿ ಬರೆಹಗಳು’-ಇತ್ಯಾದಿಗಳಲ್ಲಿ ಕಾಣಿಸಿಕೊಂಡಿದೆ. ಆದರೆ ಕನ್ನಡಕ್ಕೆ ಮೂರನೆಯ ಬಾರಿಗೆ, ಭಾರತೀಯ ಜ್ಞಾನಪೀಠ ಪ್ರಶಸ್ತಿಯನ್ನು, ಪೂರ್ಣ ಪ್ರಮಾಣದಲ್ಲಿ ಕಾರಂತರು ಗೆದ್ದುಕೊಳ್ಳಲು ಕಾರಣವಾದ ‘ಮೂಕಜ್ಜಿಯ ಕನಸುಗಳು’  ಎಂಬ ಪ್ರಸ್ತುತ ಕಾದಂಬರಿಯ ನಿಲುವು, ಮುಖ್ಯವಾಗಿ ಅವರ ‘ಬಾಳ್ವೆಯೆ ಬೆಳಕು’ (೧೯೪೫) ಎಂಬ ಕೃತಿಯಲ್ಲಿ ಸಿದ್ಧವಾದದ್ದು. ಈ ಕಾದಂಬರಿಯ ಪುಟ ಪುಟಗಳಲ್ಲಿ ‘ಬಾಳ್ವೆಯೆ ಬೆಳಕು’ ಎಂಬ ಕೃತಿಯ ವಿಚಾರದ ಎಳೆ ಎಳೆಗಳನ್ನು ಯಾರಾದರೂ ಗುರುತಿಸಬಹುದು.

‘ಮೂಕಜ್ಜಿಯ ಕನಸುಗಳು’ ಒಂದು ವಿಶಿಷ್ಟರೀತಿಯ ಕಾದಂಬರಿ. ಒಂದು ಜನಾಂಗದ ಸಾಮೂಹಿಕ ಸ್ಮೃತಿಪರಂಪರೆಗೆ ಮಾಧ್ಯಮವಾಗುವಂಥ ಪಾತ್ರವೊಂದರ ನಿರ್ಮಿತಿಯ ಮೂಲಕ, ಕಾರಂತರು, ಇಡೀ ಮಾನವ ಜನಾಂಗದ ಇತಿಹಾಸವನ್ನು ಪುನರ್‌ರಚಿಸಿ (reconstruct)ದ್ದಾರೆ. ಮೂಕಜ್ಜಿಯ ‘ವರ್ತಮಾನ’ ನಮ್ಮ ನಿಮ್ಮದರಂತೆ ಗತಕಾಲದ ಸಂವೇದನೆಯಿಲ್ಲದ ವರ್ತಮಾನ ಅಲ್ಲ; ವರ್ತಮಾನದ ಯಾವೊಂದು ವಸ್ತುವೂ ಆಕೆಗೆ ಗತಕಾಲದ ಅಥವಾ ಇತಿಹಾಸದ ಗವಾಕ್ಷಗಳಾಗುತ್ತ, ಇಡೀ ಮಾನವ ಜನಾಂಗದ ಏಳು ಬೀಳಿನ ಸಂಗತಿಗಳನ್ನು ಕಣ್ಣೆದುರಿಗೆ ಕಾಣಿಸುತ್ತವೆ. ಅವಳಂತೆಯೆ, ಗತಕಾಲದ ಬಗ್ಗೆ ಆಸಕ್ತನಾದ, ಅವಳ ಮೊಮ್ಮಗ ಸುಬ್ಬರಾಯನು ತಂದು ಕೈಗೆಕೊಡುವ ಒಂದೊಂದು ವಸ್ತುವೂ-ಕಲ್ಲೋ, ಕವಡೆಯೋ, ಎಲುಬಿನ ತುಂಡೋ, ಕಂಚಿನ ವಿಗ್ರಹವೋ-, ಆಕೆ ಕೈಗೆ ತೆಗೆದುಕೊಂಡ ಒಡನೆಯೇ ಆಕೆಯ ಒಳತಿಳಿವಿನಲ್ಲಿ ಗತ ಇತಿಹಾಸವು ಸುರಳಿ ಬಿಚ್ಚತೊಡಗುತ್ತವೆ. ಅಷ್ಟೇ ಅಲ್ಲ ಆಕೆಗೆ, ವರ್ತಮಾನದ ಪರಿಸರದ ವ್ಯಕ್ತಿಗಳ ‘ಭೂತ’ವನ್ನೂ ಹಾಗೂ ಅಂತರಂಗವನ್ನು ತಿಳಿಯುವ ಸಾಮರ್ಥ್ಯವಿದೆ. ಇಂಥ ಒಂದು ವಿಲಕ್ಷಣವಾದ ಪಾತ್ರನಿರ್ಮಾಣದ ಮೂಲಕ ಕಾರಂತರು “ನಾಲ್ಕೈದು ಸಾವಿರವರ್ಷಗಳಿಂದ ಹರಿದುಬಂದ ‘ಸೃಷ್ಟಿ ಸಮಸ್ಯೆ’ಯೊಂದನ್ನು ಬಿಡಿಸಲು”[1] ಇಲ್ಲಿ ಯತ್ನಿಸುತ್ತಾರೆ.

ಇಲ್ಲಿ ಮುಖ್ಯವಾಗಿ ಎರಡು ಪ್ರಶ್ನೆಗಳು ಉದ್ಭವಿಸುತ್ತವೆ. ಒಂದು, ಕಾರಂತರು ತಮ್ಮ ವೈಚಾರಿಕತೆಯ ಅಭಿವ್ಯಕ್ತಿಗೆ ಉದ್ದೇಶಪೂರ್ವಕವಾಗಿಯೇ ಮೂಕಜ್ಜಿಯ ಪಾತ್ರವನ್ನು ನಿರ್ಮಾಣಮಾಡಿಕೊಂಡು, ಆ ಪಾತ್ರದ ಮೂಲಕ ತಾವೇ ಮಾತಾಡುವಂತೆ ತೋರುತ್ತದೆಯಲ್ಲವೇ? ಇದರ ಜೊತೆಗೆ ಮೂಕಜ್ಜಿಯಂಥ ವ್ಯಕ್ತಿಗಳು ಇರುವುದು ಅಸಂಭವ ಎಂದು ತೋರುವುದಿಲ್ಲವೆ?

ಎರಡನೆಯದು, ಈ ಮೂಕಜ್ಜಿ ಯಾವುದಾದರೊಂದು ವಸ್ತುವನ್ನು ಮುಟ್ಟಿದರೆ, ಆಕೆಗೆ ಅದರ ಇತಿಹಾಸವೇ ಕಾಣತೊಡಗುತ್ತದೆ. ಆಗ ಆಕೆ ತನಗೆ ತಾನೇ ಅದನ್ನು ಕುರಿತು ಮಾತನಾಡತೊಡಗುತ್ತಾಳೆ. ಆದರೆ ಇದಲ್ಲದ ಬೇರೆಯ ಬದುಕಿನ ಸಂದರ್ಭಗಳಲ್ಲಿ ಅವಳು ಅತ್ಯಂತ ಆಧುನಿಕ ಪ್ರಖರ ವಿಚಾರವಂತಳಂತೆ, ದೇವರನ್ನು ಕುರಿತು, ಧರ್ಮವನ್ನು ಕುರಿತು ತೀರಾ ಹೊಸತಾಗಿ ಮಾತನಾಡುತ್ತಾಳೆ. ಈ ಎರಡೂ ಬೇರೆಬೇರೆಯೆ ಅನ್ನಿಸುತ್ತದೆಯಲ್ಲವೆ? ಇತಿಹಾಸವನ್ನು ಕುರಿತ ಅವಳ, ‘ಕಾಣ್ಕೆ’ಗೂ, ಮತ್ತು ಅವಳು ಸಂಪ್ರದಾಯದ ಗೆರೆಯಾಚೆ ನಿಂತು ಮಾಡುವ ವಿಚಾರಕ್ಕೂ ಸಂಬಂಧವನ್ನು ಕಲ್ಪಿಸುವುದು ಹೇಗೆ? ಎರಡನೆಯದು, ಮೊದಲನೆಯದರ ಪರಿಣಾಮವೆ ಅಥವಾ ಬೇರೆ ಬೇರೆಯೆ?

ಮೊದಲ ಪ್ರಶ್ನೆಗೆ ಉತ್ತರವನ್ನು ಹೇಳಿಕೊಳ್ಳಬಹುದಾದರೆ, ಕಾರಂತರು ತಮ್ಮ ವೈಚಾರಿಕತೆಯ ಅಭಿವ್ಯಕ್ತಿಗೆ ‘ಮೂಕಜ್ಜಿ’ಯಂಥ ವಿಲಕ್ಷಣವಾದ ಪಾತ್ರವೊಂದನ್ನು ನಿರ್ಮಾಣಮಾಡಿಕೊಂಡಿದ್ದಾರೆ ಎನ್ನುವುದೇನೋ ನಿಜವೆ. ಲೇಖಕ, ಕಲಾವಿದ ಮಾಡುವಂಥ ಕೆಲಸವೇ ಅದು. ಆದರೆ ಈ ಕಾರಣದಿಂದ ಮೂಕಜ್ಜಿಯಂಥವರ ಇರುವಿಕೆಗೆ ಮನಸ್‌ಶಾಸ್ತ್ರ ಸಾಕಷ್ಟು ದಾಖಲೆಗಳನ್ನು ಕೊಡಬಲ್ಲದು. ಮನುಷ್ಯನ ಮನಸ್ಸಿಗೆ ಯಾವ ಯಾವ ತೆರನಾದ ಶಕ್ತಿ-ಸಾಮರ್ಥ್ಯಗಳಿವೆ ಎನ್ನುವುದನ್ನು ಇನ್ನೂ ಮನಸ್‌ಶಾಸ್ತ್ರ ಸಂಪೂರ್ಣವಾಗಿ ಕಂಡುಕೊಳ್ಳಲು ಸಾಧ್ಯವಾಗಿಲ್ಲ; ಬಹುಶಃ ಸಾಧ್ಯವಾಗುವುದೂ ಇಲ್ಲ. ಮೂಕಜ್ಜಿಯಂಥ ಶುದ್ಧ, ಮುಗ್ಧ ‘ಗ್ರಾಹಕರು’ ಇರುವುದಾದರೆ, ಹೀಗೆ ವಾಸ್ತವತೆ ತನ್ನ ಆಚೆಯದನ್ನು ತೆರೆಯುವುದು ಅಸಾಧ್ಯವೇನಲ್ಲ. ಆಕೆಗೆ ವ್ಯವಹಾರಿಕ ಜಗತ್ತಿನೊಂದಿಗೆ ತಪ್ಪಿದ ಸಂಪರ್ಕರಾಹಿತ್ಯ, ತನ್ಮೂಲಕ ಆಕೆಗೆ ಪ್ರಾಪ್ತವಾದ ತೀವ್ರವಾದ ಏಕಾಂತತೆ ಮತ್ತು ಎಳೆಯಂದಿನಿಂದಲೂ ಹೇಗೋ ಏನೋ ಆಕೆಗೆ ವಸ್ತುಗಳಾಚೆಯ ಸಂಗತಿಗಳು ಕಾಣಿಸತೊಡಗುವಂಥ ಒಂದು ಸಂವೇದನಾ ಸಾಮರ್ಥ್ಯ, ಇವುಗಳ ಹಿನ್ನೆಲೆಯನ್ನು ಕಲ್ಪಿಸುವುದರ ಮೂಲಕ ಇಂಥ ಒಂದು ವ್ಯಕ್ತಿ ಇರುವುದು ಸಂಭಾವ್ಯವೆನ್ನುವಂತೆ ಚಿತ್ರಿಸಿದ್ದಾರೆ. ಇಂಥ ವ್ಯಕ್ತಿಗಳಿರುವುದು ಸಾಧ್ಯವೆ ಎಂಬ ಶಂಕೆ ಬರುವುದು ಕೇವಲ ವಾಸ್ತವವಷ್ಟೆ ಸತ್ಯ ಎಂದು ತಿಳಿದವರಿಗೆ; ಆದರೆ ವಾಸ್ತವ ಹಾಗೂ ಅವಾಸ್ತವ ಇವೆರಡರ ಭೇದ ತೀರ ಕಡಿಮೆಯೆಂಬುದನ್ನು ಅರಿತವರಿಗಲ್ಲ. ಈ ಕಾದಂಬರಿಯ ಪಾತ್ರವಾದ ಸುಬ್ಬರಾಯ ಹೀಗೆನ್ನುತ್ತಾನೆ: ‘ನನಗೆ ವಾಸ್ತವಿಕ ಜೀವನ ಅವಾಸ್ತವಿಕವಾಗಿ ಕಾಣುತ್ತದೆ. ಅವಾಸ್ತವಿಕತೆ ವಾಸ್ತವಿಕವಾಗಿಯೂ ಕಾಣುತ್ತದೆ. ಇವೆರಡರೊಳಗಣ ಮೇರೆ, ಅಂತರ ಬಹಳ ಕಡಿಮೆ-ಎನ್ನಿಸುತ್ತದೆ’.[2]

ಇನ್ನು ಎರಡನೆಯ ಪ್ರಶ್ನೆ ಎಂದರೆ, ಅವಳ ಅತೀಂದ್ರಿಯ ಸಾಮರ್ಥ್ಯದ ‘ಕಾಣ್ಕೆ’ಗೂ, ಅದರ ಸ್ವಗತ ಅಥವಾ ನಿರೂಪಣೆಗೂ, ಮತ್ತು ಅದರಿಂದ ಬೇರೆಯೆಂಬಂತೆ ತೋರುವ ಅವಳ ವೈಚಾರಿಕ ಸರಣಿಗೂ ಸಂಬಂಧ ಹೇಗೆ-ಅನ್ನುವುದು. ಬಹುಶಃ ಸಂಬಂಧವನ್ನು ಕಲ್ಪಿಸಬಹುದೇನೋ. ಕಾರಂತರು ಈ ಎರಡು ಕ್ರಿಯೆಗಳ ಮೂಲಕ ಬಹು ಮುಖ್ಯವಾದ ಸಂಗತಿಯನ್ನು ಎತ್ತಿಹಿಡಿದಿದ್ದಾರೆ. ಅದೆಂದರೆ, ಕೇವಲ ನಂಬಿಕೆಗಳನ್ನು ಮುಂದುವರಿಸಿಕೊಂಡು ಬದುಕುವವರಿಗೂ ಮತ್ತು ನಂಬಿಕೆಗಳ ಹಿಂದಿರುವ ವಾಸ್ತವ ಚಾರಿತ್ರಿಕ ಸಂಗತಿಗಳನ್ನು ಕಂಡವರಿಗೂ ವ್ಯತ್ಯಾಸವಿದೆ ಎನ್ನುವುದು. ಮೂಕಜ್ಜಿಗೆ ಬದುಕು ಕಾಣಿಸುವುದು ಕೇವಲ ಪರಂಪರಾಗತವಾದ ನಂಬಿಕೆಗಳ ಸರಣಿ ಎಂದಲ್ಲ; ಅದು ನಂಬಿಕೆಗಳಿಗೆ ಹಿನ್ನೆಲೆಯಾದ ವಾಸ್ತವ ಚರಿತ್ರೆಯಾಗಿ. ಕೇವಲ ನಂಬಿಕೆಗಳನ್ನು ಹಿಡಿದು ಬದುಕುವವರಿಗೆ, ಅದರ ಇತಿಹಾಸದ ಬಗ್ಗೆ ಆಸಕ್ತಿಯಿಲ್ಲ; ಅದರ ಬದಲು ಭಯವಿದ್ದರೂ ಇರಬಹುದು. ನಂಬಿಕೆಗಳನ್ನು ಅವಿಚಾರಿತವಾಗಿ ಅವಲಂಬಿಸಿದ ಬಹು ಜನಕ್ಕೆ ಅದರ ಬೇರುಗಳನ್ನು ಅಲುಗಿಸುವಂಥವರ ಬಗೆಗೂ ಭಯ. ಹೀಗಾಗಿ ಅಂಥ ಬಹುಸಂಖ್ಯಾತರು ನಾನಾ ಕಾರಣಗಳಿಂದಾಗಿ ತಮ್ಮ ಪರಂಪರಾಗತವಾದ ನಂಬಿಕೆಗಳನ್ನು ಪ್ರಶ್ನಿಸಲು ಹೋಗುವುದಿಲ್ಲ. ಆದರೆ ಮೂಕಜ್ಜಿಗೆ, ಈ ಎಲ್ಲ ನಂಬಿಕೆಗಳು ಎಷ್ಟೊಂದು ಹುಸಿ ಅನ್ನುವುದು ತನಗೆ ತಾನೇ ಸ್ಪಷ್ಟವಾಗುತ್ತದೆ. ತತ್ಪರಿಣಾಮವಾಗಿ ಅವಳಾಡುವ ಮಾತು ಅತ್ಯಂತ ಆಧುನಿಕ ವೈಚಾರಿಕ ದೃಷ್ಟಿಯದಾಗಿ ಕಾಣುತ್ತದೆ. ಅವಳ ಪಾಲಿಗೆ ದೇವರೋ ಮತ್ತೊಂದೋ ಹೇಗೆ ಮಾನವನ ಆಚರಣೆಗಳಲ್ಲಿ, ವಿಧಿಗಳಲ್ಲಿ ರೂಪುಗೊಂಡಿತೆಂಬುದರ ಇತಿಹಾಸ ಅವಳ ಅತೀಂದ್ರಿಯ ಸಾಮರ್ಥ್ಯದಿಂದ ಗೋಚರಿಸುತ್ತದೆ; ಹಾಗೆಯೇ ಮಾನವ ಜೀವನದ ವೈಭವ-ಅಟ್ಟಹಾಸಗಳ ವಿಫಲತೆಯನ್ನು ಕಾಣುವ ಈಕೆಗೆ, ನಮ್ಮ ವರ್ತಮಾನದ ಅಹಂಕಾರ-ವಿಲಾಸಗಳು ಎಷ್ಟೊಂದು ಪೊಳ್ಳು ಎಂಬುದೂ ತಿಳಿಯುತ್ತದೆ. ಒಂದರ್ಥದಲ್ಲಿ ನಿಜವಾದ ತತ್ವಜ್ಞಾನದ ಅಥವಾ ಪರಿಣತಿಯ ನಿಲುವು ಇದು. ಒಟ್ಟಿನಲ್ಲಿ ಮನುಷ್ಯನ ಅನಂತ ಕಾಲದ ಇತಿಹಾಸದ ಹಿನ್ನೆಲೆಯಲ್ಲಿ ವರ್ತಮಾನವನ್ನು ಇಟ್ಟುನೋಡುವುದನ್ನು ಕಲಿಯದ ಹೊರತು, ನಾವು ಬದುಕನ್ನು ಸರಿಯಾಗಿ ಅರ್ಥಮಾಡಿಕೊಳ್ಳಲಾರೆವು ಮತ್ತು ನಿಜವಾದ ವಿಚಾರ-ವಿವೇಕ ನಮ್ಮಲ್ಲಿ ಬೆಳೆಯಲಾರದು.

‘ಮೂಕಜ್ಜಿಯ ಕನಸುಗಳು’ ಈ ಹತ್ತು ವರ್ಷಗಳಲ್ಲಿ ಕಾರಂತರು ಬರೆದ ಅತ್ಯಂತ ಶ್ರೇಷ್ಠವಾದ ಕಾದಂಬರಿಯೇನೂ ಅಲ್ಲ. ಆದರೆ ಅದೊಂದು ವಿಶಿಷ್ಟವಾದ ಕಾದಂಬರಿ  ಎಂಬುದು ನಿಜ. ಅವರ ‘ಅಳಿದಮೇಲೆ’ ‘ಮೈಮನಗಳ ಸುಳಿಯಲ್ಲಿ’ ‘ಕೇವಲ ಮನುಷ್ಯರು’ ಈ ಕಾದಂಬರಿಗಳಿಗಿರುವ ಒಂದು ಸಾವಯವತೆ ಹಾಗೂ ಬಿಗಿ ಇದಕ್ಕಿಲ್ಲ. ಆದರೆ ಮಾನವ ಜನಾಂಗದ ಚರಿತ್ರೆಯ ಒಳನೋಟವನ್ನು ಕಾಣಿಸುತ್ತಾ, ಪರಂಪರಾಗತವಾಗಿ ಬಂದಿರುವ ನಂಬಿಕೆಗಳನ್ನು ವೈಚಾರಿಕ ಚಿಕಿತ್ಸೆಗೆ ಒಳಗುಪಡಿಸುವ ಮತ್ತು ಪರಂಪರೆಯಲ್ಲಿ ಬೇರೂರಿದ ನಂಬಿಕೆಗಳ ಬುಡವನ್ನೆ ಅಲ್ಲಾಡಿಸುವ ಈ ಕಾದಂಬರಿ, ಕಾರಂತರ ಕಾದಂಬರಿಗಳಲ್ಲಿಯೆ ತೀರಾ ವಿಶಿಷ್ಟವಾದದ್ದು. ಈ ಕಾದಂಬರಿಯ ಪಾತ್ರವಾದ ‘ಮೂಕಜ್ಜಿ’ಯ ನಡವಳಿಕೆಗಳನ್ನು ಕುರಿತು, ಈ ದೇಶದ ಯಾವ ಮನಸ್‌ಶಾಸ್ತ್ರಜ್ಞರ ಗಮನವೂ ಹರಿಯದೆ ಇರುವುದು ಆಶ್ಚರ್ಯದ ಸಂಗತಿಯಾಗಿದೆ. ವಿವಿಧ ಜ್ಞಾನದ ಶಾಖೆಗಳಲ್ಲಿ ಕೆಲಸಮಾಡುವ ಬುದ್ಧಿವಂತರು, ಸಾಹಿತ್ಯವನ್ನು ತಮ್ಮ ತಿಳಿವಿನ ದೃಷ್ಟಿಯಿಂದ ಅಧ್ಯಯನಕ್ಕೆ ಒಳಗುಪಡಿಸದೆ ಇರುವ ಈ ತಾಟಸ್ಥ್ಯ ವಿಲಕ್ಷಣವಾಗಿದೆ. ಸಾಹಿತ್ಯ ಎಂಬುದು ಕೇವಲ ಸಾಹಿತ್ಯಾಸಕ್ತರೆಂಬ ವರ್ಗದವರಿಗೆ ಸಂಬಂಧಿಸಿದ್ದೆಂಬಂತೆ. ಆದಕಾರಣ ಅದಕ್ಕೂ ತಮಗೂ ಸಂಬಂಧವಿಲ್ಲವೆಂಬಂತೆ, ಬೇರೆ ಬೇರೆಯ ಶಾಖೆಯ ಪರಿಣತರು ತಿಳಿಯುತ್ತ ಬಂದಿದ್ದಾರೆ. ಹೀಗಾಗಿ ನಿಜವಾದ ವಿಮರ್ಶಕನ ಜವಾಬ್ದಾರಿ ಹೆಚ್ಚಾಗಿದೆ. ಅಲ್ಲದೆ ಸಾಹಿತ್ಯ ವಿಮರ್ಶಕ ಬೇರೆ ಬೇರೆಯ ಜ್ಞಾನದ ಶಾಖೆಗಳ ತಿಳಿವಿನಿಂದ ತನ್ನನ್ನು ತಾನು ಸಿದ್ಧಪಡಿಸಿಕೊಳ್ಳಬೇಕಾಗಿದೆ. ಹಾಗಾದಾಗ ಮಾತ್ರ ನಮ್ಮಲ್ಲಿ ಸಮಗ್ರವಾದ ವಿಮರ್ಶೆ ಬೆಳೆದೀತು. ಈ ಹಿನ್ನೆಲೆಯಲ್ಲಿ ಹೇಳಬಹುದಾದ ಮಾತೆಂದರೆ, ಕಾರಂತರಂಥವರ ಕಾದಂಬರಿಗಳನ್ನು ಕುರಿತು ವಿಮರ್ಶೆಮಾಡುವವರಿಗೆ ಕೇವಲ ಸಾಹಿತ್ಯಕವಾದ ಸಿದ್ಧತೆಯಷ್ಟೇ ಸಾಲದು.

ಪ್ರತಿಕ್ರಿಯೆ-೧೯೮೨


[1] ‘ಮೂಕಜ್ಜಿಯ ಕನಸು’ಗಳು ಮುನ್ನುಡಿಯಲ್ಲಿ, ಪು, ii

[2] ಮೂಕಜ್ಜಿಯ ಕನಸುಗಳು, ಪು. ೧೪