ಹೊಸಗನ್ನಡ ಸಾಹಿತ್ಯ ಸಂದರ್ಭದಲ್ಲಿ ದೇವುಡು (ನರಸಿಂಹ ಶಾಸ್ತ್ರೀ) ಅವರ ಕೊಡುಗೆ ಬಹುಮುಖಿಯಾದದ್ದು. ಕತೆ, ಕಾದಂಬರಿ, ರಂಗಭೂಮಿ, ಪತ್ರಿಕೋದ್ಯಮ, ಶಿಕ್ಷಣ, ಚಿತ್ರರಂಗ- ಇತ್ಯಾದಿ ಕ್ಷೇತ್ರಗಳಲ್ಲಿ ತಮ್ಮನ್ನು ತೊಡಗಿಸಿಕೊಂಡು ಕ್ರಿಯಾಶೀಲವಾದ ಒಂದು ವ್ಯಕ್ತಿತ್ವ ಅವರದು. ಎಲ್ಲದಕ್ಕಿಂತ ಮುಖ್ಯವಾದ ಮಾತೆಂದರೆ, ಅವರು ವೇದ ವೇದಾಂತಾದಿ ಶಾಸ್ತ್ರಗಳನ್ನು ಕರಗತ ಮಾಡಿಕೊಂಡ ಘನ ವಿದ್ವಾಂಸರು, ಮತ್ತು ಈ ವಿದ್ವತ್ತಿನ ಅನುಭವಗಳಿಂದ ಕನ್ನಡದಲ್ಲಿ ಮರೆಯಲಾಗದ ಹಲವು ಪೌರಾಣಿಕ ಕಾದಂಬರಿಗಳನ್ನು ಬರೆದವರು.

ಆಧುನಿಕ ಕನ್ನಡ ಸಾಹಿತ್ಯ ಸಂದರ್ಭದಲ್ಲಿ, ಕಳೆದ ಶತಮಾನದಲ್ಲಿ ವಿಮರ್ಶೆಗೆ ಗುರಿಯಾದ ಮುಖ್ಯ ಕೃತಿಗಳನ್ನು ಮರು ವಿಮರ್ಶೆಯ ಮೂಲಕ ಹೊಸ ನೆಲೆಗೆ ತಂದುಕೊಳ್ಳುವ ಕೆಲಸ ಮಾತ್ರವಲ್ಲ, ಯಾಕೋ ಏನೋ ವಿಮರ್ಶೆಯ ನಿರ್ಲಕ್ಷ್ಯಕ್ಕೆ ಒಳಗಾದ ಇನ್ನೆಷ್ಟೋ ಮುಖ್ಯ ಕೃತಿಕಾರರನ್ನು ಮರು ಓದಿಗೆ ತಂದುಕೊಂಡು ಅವರ ಮಹತ್ವವನ್ನು ಗುರುತಿಸುವ ಕೆಲಸವೂ ಆಗಬೇಕಾಗಿದೆ. ಅಂಥ ಕೃತಿಕಾರರಲ್ಲಿ ದೇವುಡು  ಅವರು ಒಬ್ಬರೆಂದು ನನ್ನ ತಿಳಿವಳಿಕೆ. ಗಮನಿಸಬೇಕಾದ ಸಂಗತಿ ಎಂದರೆ ‘ವಿಮರ್ಶೆಯ ನಿರ್ಲಕ್ಷ್ಯಕ್ಕೆ ಒಳಗಾದವರು’ ಎಂದರೆ, ಓದುಗರ ನಿರ್ಲಕ್ಷ್ಯಕ್ಕೆ ಗುರಿಯಾದವರು ಎಂದೇನೂ ಅಲ್ಲ. ದೇವುಡು ಅವರ ಕಾದಂಬರಿಗಳು ಏಳೆಂಟು ಪುನರ್ ಮುದ್ರಣಗಳನ್ನು ಪಡೆದುಕೊಂಡಿರುವುದೇ ಸೂಚಿಸುತ್ತದೆ ಕನ್ನಡ ಓದುಗ ವರ್ಗ ಅವರನ್ನು ತನ್ನ ಹೃದಯ ಸಂವಾದಕ್ಕೆ ಒಳಗುಪಡಿಸುತ್ತಲೇ ಬಂದಿದೆ ಎನ್ನುವುದನ್ನು. ಒಬ್ಬ ಬರಹಗಾರ ಹೀಗೆ ಉದ್ದಕ್ಕೂ ಸಹೃದಯರಿಂದ ಸ್ವೀಕೃತನಾಗಿದ್ದಾನೆ ಎನ್ನುವುದೇ ಅವನ ಬರೆಹದ ಮೌಲಿಕತೆಗೆ ಒಂದು ಪ್ರತೀತ ಎನ್ನಬಹುದು.

ದೇವುಡು ಬರೆಯಲು ಪ್ರಾರಂಭಿಸಿದ್ದು ಹೊಸಗನ್ನಡದ ಎರಡು ಮೂರನೆಯ ದಶಕದಲ್ಲಿ. ‘ಅಂತರಂಗ’ ಎಂಬ ಅವರ ಕಾದಂಬರಿ ಪ್ರಕಟವಾದನದ್ದು ೧೯೩೦ರಲ್ಲಿ ಕನ್ನಡದ ಮೊದಲ ಮನೋ ವೈಜ್ಞಾನಿಕ ಕಾದಂಬರಿ ಇದು ಎಂದು ವಿಮರ್ಶಕರು ಗುರುತಿಸಿದ್ದಾರೆ. ಇದರ ವಸ್ತು ಆ ಕಾಲಕ್ಕೆ ತುಂಬ ಕ್ರಾಂತಿಕಾರಕವಾದದ್ದು. ಸಂಪ್ರದಾಯ ನಿಷ್ಠನಾದ ಸದ್‌ಗೃಹಸ್ಥನೂ, ಬ್ರಾಹ್ಮಣನೂ ಆದವನೊಬ್ಬನು, ದೇವಸ್ಥಾನಕ್ಕೆ ಬಿಟ್ಟ ‘ಬಸವಿ’ಯೊಬ್ಬಳನ್ನು ಕಂಡು ಮೋಹಗೊಂಡ ಮನಃಸ್ಥಿತಿಯ ಸಂಘರ್ಷಗಳೆ ಇದರ ವಸ್ತು. ಕನ್ನಡ ವಿಮರ್ಶೆ ಯು.ಆರ್.ಅನಂತಮೂರ್ತಿಯವರ ‘ಸಂಸ್ಕಾರ’ ಕಾದಂಬರಿಯು, ದೇವುಡು ಅವರ ‘ಅಂತರಂಗ’ದೊಂದಿಗೆ ಹೊಂದಿರುವ ವಸ್ತು ಸಾಮ್ಯವನ್ನು ಗುರುತಿಸಿ ಚರ್ಚಿಸಿದೆ. (ಡಾ.ಜಿ.ಎಸ್.ಅಮೂರ: ಕನ್ನಡ ಕಥನ ಸಾಹಿತ್ಯ ೧೯೪೪). ದೇವುಡು ಅನಂತರ ಬರೆದ ‘ಮಹಾಬ್ರಾಹ್ಮಣ’ (೧೯೬೨) ‘ಮಹಾಕ್ಷತ್ರಿಯ’(೧೯೬೨) ಮತ್ತು ‘ಮಹಾದರ್ಶನ’ (೧೯೬೭)-ಈ ಮೂರೂ ಕನ್ನಡದಲ್ಲಿ ಹೊಸ ಪರಂಪರೆಯೊಂದನ್ನು ಕಟ್ಟಿದ ಕಾದಂಬರಿಗಳು.

ಈ ಮೂರು ಕಾದಂಬರಿಗಳು ಮೂಲತಃ ದೇವುಡು ಅವರ ವೇದ-ಪುರಾಣ-ಶಾಸ್ತ್ರ-ಆಗಮಾದಿಗಳ ಅಧ್ಯಯನ ಪ್ರಪಂಚಕ್ಕೆ ಸೇರಿದವುಗಳು. ಪ್ರಾಚೀನ ಭಾರತದ ವೇದೋಪನಿಷತ್ತುಗಳ ಅಧ್ಯಾತ್ಮ ಜಗತ್ತಿಗೆ ಸೇರಿದ ಮಹಾವ್ಯಕ್ತಿಗಳ ಮಹತ್ ಸಾಧನೆಯ ಅಪೂರ್ವ ಕಥೆಗಳು ಇವು. ‘ಮಹಾಬ್ರಾಹ್ಮಣ’, ಮೂಲತಃ ಕ್ಷತ್ರಿಯನಾಗಿದ್ದ ವಿಶ್ವಾಮಿತ್ರನು, ವಶಿಷ್ಠರ ಬ್ರಹ್ಮ ತೇಜಸ್ಸಿನಿಂದ ಭಂಗಿತನಾಗಿ, ತಾನೂ ತಪಸ್ಸಿಗೆ ತೊಡಗಿ, ರಾಜರ್ಷಿಯಾಗಿ ಮಹರ್ಷಿಯಾಗಿ, ಅನಂತರ ಬ್ರಹರ್ಷಿಯಾಗಿ ಪರಿವರ್ತನೆಗೊಂಡ ಒಂದು ಯೋಗ ಸಾಹಸದ ಕಥನವಾಗಿದೆ. ಆದರೆ ಎಲ್ಲಿಯೂ ವಶಿಷ್ಠರು ವಿಶ್ವಾಮಿತ್ರನನ್ನು ತಮ್ಮ ಪ್ರತಿಸ್ಪರ್ಧಿ ಎಂಬಂತೆ ಭಾವಿಸುವುದಿಲ್ಲ; ವಿಶ್ವಾಮಿತ್ರನ ಊರ್ಧ್ವ ಯಾತ್ರೆಗೆ ವಶಿಷ್ಠರು ಪರೋಕ್ಷವಾಗಿ ನೆರವಾಗುತ್ತ ವ್ಯಕ್ತಿಯ ಹಾಗೂ ಲೋಕದ ಶ್ರೇಯಸ್ಸಿನ ಪರವಾಗಿ ನಿಲ್ಲುತ್ತಾರೆ. ಇದರ ಜತೆಗೆ ಗುರುತಿಸಿಕೊಳ್ಳಬೇಕಾದ ಸಂಗತಿಯೆಂದರೆ ಇದೇ ಸಂದರ್ಭದಲ್ಲಿ ವಿ.ಕೃ.ಗೋಕಾಕರೂ ‘ತ್ರಿಶಂಕುವಿನ ಪ್ರಜ್ಞಾಪ್ರಭಾತ’ ಮತ್ತು  ತಮ್ಮ ಮಹಾಕಾವ್ಯ ‘ಭಾರತ ಸಿಂಧು ರಶ್ಮಿ’ಯಲ್ಲಿ ವಿಶ್ವಾಮಿತ್ರನ ಸಾಹಸದ ಕಥೆಯನ್ನು ನಿರ್ವಹಿಸುತ್ತಿದ್ದರು. ದೇವುಡು ಅವರ ‘ಮಹಾ ಕ್ಷತ್ರಿಯ’ ಪುರಾಣ ಪ್ರಸಿದ್ಧವಾದ ನಹುಷ ಚಕ್ರವರ್ತಿಯ ಕಥೆ. ಕಾರಣಾಂತರದಿಂದ ತೆರವಾದ ಇಂದ್ರನ ಸ್ಥಾನವನ್ನು ದೇವತೆಗಳ ಕೋರಿಕೆಯ ಮೇರೆಗೆ, ಸ್ವಲ್ಪ ಕಾಲ ಅಲಂಕರಿಸಿ, ತನ್ನ ನಡವಳಿಕೆಯಿಂದ, ದೇವತೆಗಳಿಗಿಂತ ಮನುಷ್ಯನೇ, ಶ್ರೇಷ್ಠ ಎಂಬ ಅಗ್ಗಳಿಕೆಗೆ ಪಾತ್ರವಾದವನ ಕಥನ. ಇನ್ನು ಅವರ ‘ಮಹಾದರ್ಶನ’ ಜನ್ಮತಃ ಅಸಾಧಾರಣವಾದ ಚೈತನ್ಯವೊಂದು ತನ್ನ ಪಾರ್ಥಿವತೆಯನ್ನು ದಾಟಿ ನಿಂತು, ಹೊಸ ಉಪನಿಷತ್ತುಗಳನ್ನು ರಚಿಸಿ ‘ಭಗವಾನ್’ ಆದ ಯಾಜ್ಞ್ಯವಲ್ಕರ ಅಧ್ಯಾತ್ಮಿಕ ಸಾಹಸದ ಕಥನ.

ಈ ಎಲ್ಲ ಕಾದಂಬರಿಗಳ ಪಾತ್ರಗಳು, ಮಹಾ ಪುರುಷರು, ಯೋಗಿಗಳು, ದಾರ್ಶನಿಕರು. ಅವರ ಸಂಚಾರ ಭೂಮಿಕೆಯೆಲ್ಲವೂ ಲೋಕೋತ್ತರವಾದ ಅಧ್ಯಾತ್ಮಿಕ ಹಾಗೂ ಯೌಗಿಕ ಅನುಭವಗಳ ಜಗತ್ತು. ಮರ್ತ್ಯಲೋಕ ಇದ್ದಕ್ಕಿದ್ದ ಹಾಗೆ ದೇವತೆಗಳ ಸಂಚಾರದ ನೆಲೆಯಾಗುತ್ತದೆ. ಮರ್ತ್ಯರೂ ತಮ್ಮ ಯೋಗ ಸಾಮರ್ಥ್ಯದಿಂದ ಲೋಕ ಲೋಕಾಂತರಗಳಲ್ಲಿ ಸಂಚರಿಸುತ್ತಾರೆ. ಅತ್ಯಂತ ಗಹನವಾದ ಅಸ್ತಿತ್ವದ ಪ್ರಶ್ನೆಗಳ ವಿಸ್ಮಯಕಾರಿಯಾದ ಚರ್ಚೆಗಳು ಹಾಗೂ ಅತ್ಯಂತ ತರ್ಕಸಮ್ಮತವಾದ ಉತ್ತರಗಳೂ ಇಲ್ಲಿವೆ. ಪ್ರಾಚೀನ ಭಾರತೀಯ ಸಂಸ್ಕೃತಿಯ ಪ್ರಖರತೆ ನಮ್ಮನ್ನು ಎಷ್ಟೋವೇಳೆ ಬೆರಗುಗೊಳಿಸುವಂತೆ ದೇವುಡು ಅವರ ಕೃತಿಗಳಲ್ಲಿ ಪ್ರಸ್ತಾಪಿತವಾಗಿದೆ.

ಒಂದು ರೀತಿಯಲ್ಲಿ ‘ಅವಾಸ್ತವ’ ಎನ್ನಬಹುದಾದ, ಆದರೆ ನಿಜವಾಗಿಯೂ ಲೋಕೋತ್ತರ ಎಂದು ಹೇಳಬಹುದಾದ ವಸ್ತು ಪ್ರಪಂಚವನ್ನುಳ್ಳ ಈ ಕಾದಂಬರಿಗಳನ್ನು ದೇವುಡು ಬರೆದ ಸಂದರ್ಭ, ಕನ್ನಡ ಸಾಹಿತ್ಯಯದಲ್ಲಿ ವಾಸ್ತವವಾದೀ ಪರಂಪರೆಯೊಂದು ಸುಭದ್ರವಾಗಿ ನೆಲೆಗೊಳ್ಳುತ್ತಿದ್ದ ಕಾಲ. ಕುವೆಂಪು, ಕಾರಂತ, ಮಾಸ್ತಿ, ಅನಕೃ ಇಂಥ ಕಾದಂಬರಿಕಾರರು ವಾಸ್ತವ ಬದುಕಿನ ದೈನಂದಿನ ಘಟನೆಗಳನ್ನು ಕುರಿತು ಬರೆಯುವುದರ ಮೂಲಕ, ಬದುಕಿನ ಶೋಧನೆಯನ್ನು, ಮನುಷ್ಯತ್ವದ ಘನತೆಯನ್ನೂ, ಸಾಮಾಜಿಕ ಪ್ರಜ್ಞೆಯನ್ನು ತೆರೆದು ತೋರಿದ ಕಾಲ. ಇಂಥ ಪರಿಸರದಲ್ಲಿ ದೇವುಡು ಪುರಾಣ ಪ್ರಪಂಚದ ವಸ್ತುಗಳನ್ನು ಆರಿಸಿಕೊಂಡು ಕಾದಂಬರಿಗಳನ್ನು ಬರೆದದ್ದು ಅವರು ಹಿಡಿದ ಭಿನ್ನ ಮಾರ್ಗದ ಸೂಚನೆಯಾಗಿದೆ.

ಹಾಗಾದರೆ ಈ ಪೌರಾಣಿಕ ವಸ್ತು ನಿರ್ವಹಣೆಯ ಮೂಲಕ ದೇವುಡು ತಮ್ಮ ಸಮಕಾಲೀನತೆಗೆ ವಿಮುಖರಾದರೆ, ಅಥವಾ ಈ ಬಗೆಯ ಕೃತಿ ರಚನೆ ಮಾಡುತ್ತಲೆ ಸಮಕಾಲೀನತೆಯ ಸವಾಲುಗಳನ್ನು ಎದುರಿಸಿದರೆ? ಆಧುನಿಕ ಜಗತ್ತಿನ ಪ್ರಶ್ನೆಗಳಿಗೆ ಅವರು ಕಂಡುಕೊಂಡ ಉತ್ತರಗಳೇನು? ವಾಸ್ತವ ಮಾರ್ಗವನ್ನು ಬಿಟ್ಟು ಕೊಟ್ಟಿದ್ದರಿಂದ, ಅವರ ಕೃತಿಗಳು, ಎದುರಿಸಿದ ಸಮಸ್ಯೆಗಳೇನು? ಇತ್ಯಾದಿ ಪ್ರಶ್ನೆಗಳಿವೆ.

ನಿಜ, ದೇವುಡು ಬರಹಕ್ಕೆ ತೊಡಗಿದ್ದು, ಕನ್ನಡ ಕಾದಂಬರಿ ಸ್ಪಷ್ಟವಾದ ವಾಸ್ತವವಾದಿ ಪರಂಪರೆಯಲ್ಲಿ ನೆಲೆಗೊಂಡ ಕಾಲ. ಈ ಕುರಿತು ದೇವುಡು ಅವರ ಪ್ರತಿಕ್ರಿಯೆ ಹೀಗಿದೆ: ‘ಈಗ ಸಾಹಿತ್ಯವು ಮನುಷ್ಯ ಸಾಮಾನ್ಯವನ್ನು ಚಿತ್ರಿಸುವ ಕಾಲದಲ್ಲಿದೆ. ತುಂಬೆಯ ಗಿಡದಲ್ಲಿ ತೆಂಗಿನಕಾಯಿ ಸಿಗುವುದಿಲ್ಲವೆಂದು ತೆಂಗಿನತೋಟ ನಡುವ ಕೆಲಸ ಇಲ್ಲಿ ನಡೆದಿರುವುದು. ಸಾಣೆಗೆ ಒಡ್ಡುವುದು ರತ್ನವನ್ನೇ ಹೊರತು ಕಲ್ಲನ್ನಲ್ಲ. ಹಾಗೆ ಮಹಾವಿಷಯಗಳನ್ನು ವಿಮರ್ಶಿಸಬೇಕೆಂಬ ಆಸೆ ಇದ್ದವರು ಮಹಾಪುರುಷರನ್ನು ಚಿತ್ರಿಸಲು ಹೊರಡದೆ ಬೇರೆ ದಾರಿ ಇಲ್ಲ’ (ಮಹಾಬ್ರಾಹ್ಮಣ: ಮುನ್ನುಡಿ). ವಾಸ್ತವವಾದದ ಬಗ್ಗೆ ಹಾಗೂ ‘ಮನುಷ್ಯ ಸಾಮಾನ್ಯವನ್ನು ಚಿತ್ರಿಸುವ’ ಕಾರ್ಯದ ಬಗ್ಗೆ ದೇವುಡು ಅವರಿಗಿರುವ ಅಭಿಪ್ರಾಯಗಳು, ಮೂಲತಃ ಭಾರತೀಯ ಹಾಗೂ ಕನ್ನಡ ಮಾರ್ಗ ಸಂಪ್ರದಾಯ ಮತ್ತು ಕಾವ್ಯಮೀಮಾಂಸೆಗೆ ಸಮ್ಮತವಾದವುಗಳೆ ಹೊರತು, ಆಧುನಿಕ ಸಾಹಿತ್ಯ ಸಂದರ್ಭದ ನಿಲುವುಗಳಿಗೆ ಸಂಗತವಾದವುಗಳಲ್ಲ. ವಸ್ತುವಿನ ಮಹತ್ತಿನಿಂದ ಕೃತಿಯು ಮಹತ್ತಾಗುತ್ತದೆ ಎಂಬ ಪ್ರಾಚೀನ ಕವಿಗಳ ಶ್ರದ್ಧೆಯೋ, ಭ್ರಮೆಯೋ ಇಲ್ಲಿನ ಮಾತುಗಳಲ್ಲಿ ಪ್ರತಿಧ್ವನಿಸಿದೆ. ಅವರು ಬಳಸುವ ‘ತುಂಬೆ ಗಿಡ’ ‘ತೆಂಗಿನತೋಟ’ ‘ರತ್ನ’ ‘ಕಲ್ಲು’- ಈ ಪ್ರತೀಕಗಳೇ ಅದಕ್ಕೆ ಸಾಕ್ಷಿಯಾಗಿವೆ. ಹೀಗಾಗಿ ವಾಸ್ತವವಾದದ ಮೌಲಿಕತೆಯನ್ನಾಗಲೀ ಅದರ ಬಹುಮುಖತೆಯನ್ನಾಗಲೀ ತಮ್ಮ ಸಮಕಾಲೀನತೆಯಲ್ಲಿ ಅದು ಪಡೆದುಕೊಂಡ ಸಾಧನೆಯನ್ನಾಗಲಿ, ದೇವುಡು ಪರಿಗಣಿಸುವ ಗೊಡವೆಗೇ ಹೋಗಿಲ್ಲ.

ಆದರೆ ಅವರ ಸಮಕಾಲೀನರಾದ ಇತರ ಮುಖ್ಯ ಕಾದಂಬರಿಕಾರರ ನಿಲುವಿಗೂ ದೇವುಡು ಅವರ ನಿಲುವಿಗೂ, ಇದ್ದ ಒಂದು ಸಾಮ್ಯ ಎಂದರೆ : ವಾಸ್ತವವಾದೀ ಕಾದಂಬರಿ ಮೊಟ್ಟಮೊದಲಬಾರಿಗೆ ಸಾಮಾನ್ಯ ಮನುಷ್ಯನ ಘನತೆಯನ್ನು ಎತ್ತಿ ಹಿಡಿಯಿತು. ದೇವುಡು ಅವರ ಕಾದಂಬರಿಗಳು, ಸಾಮಾನ್ಯ ಮನುಷ್ಯನನ್ನು ಒಲ್ಲದೆ, ಒಟ್ಟಾರೆಯಾಗಿ ಮನುಷ್ಯನ ಹಾಗೂ ಮನುಷ್ಯತ್ವದ ಮಹತ್ತನ್ನು ಎತ್ತಿ ಹಿಡಿಯುತ್ತವೆ. ದೇವುಡು ಅವರ ಕಾದಂಬರಿಗಳ ನಾಯಕರೆಲ್ಲ ‘ಮಹಾಪುರುಷರು’. ಈ ಮಹಾಪುರುಷರು ತಮ್ಮ ಈ ಲೋಕ ಜೀವನಕ್ಕಷ್ಟೆ ಬದ್ಧವಾದವರಲ್ಲ. ನಾವು ಕಾಣುವುದಷ್ಟೆ ಜಗತ್ತಲ್ಲ, ಮತ್ತು ಕಂಡದ್ದಷ್ಟೆ ಜಗತ್ತಲ್ಲ. ಮನುಷ್ಯನು ಪ್ರವೇಶಿಸಲು ಹಾಗೂ ಗೆಲ್ಲಲು ಬಯಸುವ ಹೊರಜಗತ್ತಿನಂತೆಯೆ ಅದಕ್ಕಿಂತಲೂ ಅದ್ಭುತವಾದ ಒಳಜಗತ್ತೊಂದು ಇದೆ. ಲೋಕ ವಾಸ್ತವಗಳಂತೆಯೆ ಅಲೋಕ ವಾಸ್ತವಗಳೂ ಇವೆ. ಅವು ಸಾಹಸಿಯಾದ ಮನುಷ್ಯನನ್ನು ಸೆಳೆಯುತ್ತವೆ ಈ ಸೆಳೆತವನ್ನು, ಒಂದು ಸವಾಲಿನಂತೆ ಸ್ವೀಕರಿಸಿ, ಮಹಾಸತ್ವಶಾಲಿಗಳಾದವರು ಕೈ ಕೊಳ್ಳುವ ಲೌಕಿಕ ಪ್ರಯಾಣಗಳನ್ನು, ವಿವಿಧ ಯೌಗಿಕ ಹಂತಗಳಲ್ಲಿ ಅವರು ಪಡೆದುಕೊಳ್ಳುವ ಅನುಭವ ವಿಶೇಷಗಳನ್ನೂ ಚಿತ್ರಿಸುವ ದೇವುಡು ಅವರ ‘ಅನುಭಾವಿಕ ಪ್ರತಿಭೆ’ (mystic Imagination) ಕನ್ನಡ ಸಾಹಿತ್ಯದಲ್ಲಿಯೆ ವಿಶಿಷ್ಟವಾದದ್ದು ಎಂದು ತೋರುತ್ತದೆ. ಮತ್ತು ಈ ಅನುಭವಗಳು ಕೇವಲ ಕಲ್ಪನೆ  ಅಥವಾ ಭ್ರಮೆ ಎಂದು ಅನ್ನಿಸುವುದಿಲ್ಲ. ಈ ಅನುಭವಗಳ ಎದುರು ಲೋಕಾನುಭವಗಳೇ ಸುಳ್ಳೇನೊ ಅನ್ನಿಸುವಷ್ಟು ಇವು ನೈಜವಾಗಿವೆ. ಅವುಗಳು ಒಂದು ರೀತಿಯಲ್ಲಿ ಈ ಹೊತ್ತಿನ ತಂತ್ರಜ್ಞಾನ ಯುಗದ ಸೂಕ್ಷಾತಿ ಸೂಕ್ಷ್ಮ ಗಣಕ ಯಂತ್ರ ವಿದ್ಯೆಯ ಫಲಿತಗಳಿಗೆ ಸಂವಾದಿಯಾಗಿವೆ. ಒಂದೊಂದು ಮಂತ್ರವೂ ಅಧ್ಯಾತ್ಮದ ಕೀಲಿ ಕೈಗಳಂತೆ ಭಾಸವಾಗುತ್ತವೆ[1] ಈ ಅನುಭವದ ಪ್ರಪಂಚವನ್ನು ಪ್ರವೇಶಿಸುವ ವಿಶ್ವಾಮಿತ್ರ, ಯಾಜ್ಞವಲ್ಕ್ಯ, ನಹುಷ ಇವರೆಲ್ಲ ಮಹತ್ವದ ಸಾಧಕರು, ತಪಸ್ವಿಗಳು, ಜ್ಞಾನಿಗಳು, ಚೈತನ್ಯದ ಸಂಕೇತಗಳು, ‘ಮನುಷ್ಯರು ಹೀಗೆ ಸಾಹಸ ಪರರಾಗಿ ಇರುವುದೇ ನಮಗೆ ಬೇಕಾದದ್ದು. ಅಲ್ಲದೆ ಹುಟ್ಟಿದ್ದು ಹುಟ್ಟಿದ ಹಾಗೇ ಮರದ ತುಂಡಿನಂತೆ ಬಿದ್ದಿರುವುದು ಮನುಷ್ಯನ ಧರ್ಮವಲ್ಲ’ ಜಡಧರ್ಮ (-ಮಹಾಬ್ರಾಹ್ಮಣ.ಪು.೮೪) ಈ ಜಡವನ್ನು ಜಯಿಸಿ ಮನುಷ್ಯನ ಚೈತನ್ಯವು, ಸಾಹಸಯಾತ್ರೆಯನ್ನು ಕೈಕೊಂಡು ಲೋಕೋತ್ತರವಾದ ಸತ್ಯಗಳನ್ನು ಸಾಕ್ಷಾತ್ಕರಿಸಿಕೊಳ್ಳುವುದರಲ್ಲಿ ಅದರ ಸಾರ್ಥಕತೆಯಿದೆ- ಎಂದು ನಂಬಿದವರು ದೇವುಡು.

ದೇವುಡು ಅವರು ಸಮಕಾಲೀನ ಸಮಸ್ಯೆಗಳಿಗೆ ಪ್ರಾಚೀನ ಭಾರತೀಯ ಸಂಸ್ಕೃತಿಯಿಂದ, ಅಂದರೆ ಮುಖ್ಯವಾಗಿ ವೈದಿಕ ಪರಂಪರೆಯಿಂದ ಉತ್ತರಗಳನ್ನು ಕಂಡುಕೊಳ್ಳಲು ಬಯಸಿದವರು. ಭಾರತೀಯ ಸಂಸ್ಕೃತಿಯ ಮೌಲ್ಯಗಳ ಬೆಳಕಿನಲ್ಲಿ ಬದುಕನ್ನು ಅರ್ಥ ಮಾಡಿಕೊಳ್ಳಲು ಆಶಿಸಿದವರು. ಹೀಗೆ ಅವರದು ಒಂದು ರೀತಿಯಲ್ಲಿ ಸಂಸ್ಕೃತಿನಿಷ್ಠ ಬರವಣಿಗೆ. ಆದರೆ ದೇವುಡು ಅವರ ಪಾಲಿಗೆ ಸಂಸ್ಕೃತಿ ಎಂದರೆ,-ಕೇವಲ ವೇದೋಪನಿಷತ್ತು ಪುರಾಣ ಆಗಮಾದಿಗಳ ವಿಚಾರ ಹಾಗೂ ಮೌಲ್ಯಗಳಿಂದ ನಿರ್ದೇಶಿತವಾದ ಒಂದು ಜೀವನ ಕ್ರಮ-ಎಂದು ಮಾತ್ರ ಅರ್ಥ. ಈ ದೇಶದಲ್ಲಿ ಅವೈದಿಕವಾದ ಎಷ್ಟೋ ಸಂಸ್ಕೃತಿಗಳೂ, ಪ್ರಾದೇಶಿಕ ಸಾಂಸ್ಕೃತಿಕ ವೈಶಿಷ್ಟ್ಯಗಳೂ ಇವೆ ಅನ್ನುವುದನ್ನು ಅವರು ಲೆಕಕ್ಕೇ ತೆಗೆದುಕೊಳ್ಳುವುದಿಲ್ಲ. ೧೯೩೫ರಷ್ಟು ಹಿಂದೆಯೆ ಅವರು ಬರೆದ ‘ಕರ್ನಾಟಕ ಸಂಸ್ಕೃತಿ’ ಎಂಬ ಪುಸ್ತಕದಲ್ಲಿ ‘ಕರ್ನಾಟಕ ಸಂಸ್ಕೃತಿಯು ವೈದಿಕ ಸಂಸ್ಕೃತಿಯ ರೂಪಾಂತರ ಅಥವಾ ಪ್ರತಿಬಿಂಬ’ (ಪು.೩೩) ಎಂದು ದೇವುಡು ಅವರು ವ್ಯಾಖ್ಯಾನಿಸಿರುವುದನ್ನು ನೋಡಿದರೆ, ಈ ದೇಶದ ವಿಶಿಷ್ಟತೆ ಇರುವುದೇ ಅದರ ಸಂಸ್ಕೃತಿಯ ಬಹುಮುಖತ್ವದಲ್ಲಿ -ಎಂಬ ಸಂಗತಿಯನ್ನು ಅವರು ಈ ಪುಸ್ತಕವನ್ನು ಬರೆದ ಕಾಲದಲ್ಲಿ ಬಹುಶಃ ತಿಳಿದುಕೊಂಡಿರಲಾರರು ಎಂದು ಊಹಿಸಬೇಕಾಗುತ್ತದೆ. ಇದು ಹೇಗೇ ಇರಲಿ, ನಮ್ಮ ವರ್ತಮಾನದ ಸಮಸ್ಯೆಗಳಿಗೆ, ಬದಲಾದ ಈ ಕಾಲದ ಸಂದರ್ಭದಿಂದಲೆ ಉತ್ತರಗಳನ್ನು ಕಂಡುಕೊಳ್ಳಬಲ್ಲೆವು ಎನ್ನುವುದನ್ನು ನಾವು ತಿಳಿದುಕೊಳ್ಳಬೇಕಾಗಿದೆ.

ಯಾವುದೂ ಸಣ್ಣದಲ್ಲ : ೨೦೦೪


[1] ‘ಅಲ್ಲಲ್ಲಿ ಉಪನಿಷತ್ತುಗಳ ರಹಸ್ಯವಿದ್ಯೆಗಳೂ ಬಂದಿದೆ. ಈ ವಿದ್ಯಾ ಪ್ರತೀಕಗಳಲ್ಲಿ ಕೆಲವು ಸ್ವಾನುಭವ, ಕೆಲವು ಪರಾನುಭವ, ಕೆಲವು ಬರೆಯುತ್ತಿದ್ದಾಗ ತಾನೇ ಬಂದವು’ (ಮಹಾ ಬ್ರಾಹ್ಮಣ : ಮುನ್ನುಡಿ)