ತಂದನ್ನೊ ತಾನೊ ತಂದನು ತಂದೆ ನಾನೊ | ಸೊಲ್ಲು |
ಏಕಚತ್ರ ಪುರದಲ್ಲಿ ಅವ್ರುರೈದು ಜನ ಪಾಂಡುವರು
ಕಾಲರ‍್ಣೆ ಮಾಡುವಾಗ ಒಂಜಿವ್ಸ ಧರ್ಮರಾಜ್ರು
ತಮ್ಮ ಭೀಮಾರ್ಜುನರ ಕರದು ಏನಂತ
ಅವುರೀಗೆ ಬುದ್ಧಿವಾದ ಹೇಳಿದರು ಅಂದಾರೆ
“”ಕುಂತು ನಿಂತು ನಾವು ಕಾಲವ ಕಳೆದರೆ
ನಮ್ಮ ಹೊಟ್ಟೆಗಾದಾರೆ ಅಧೀನ ಇಲ್ಲುವಪ್ಪ
ನಿಮ್ಮ ರೂಪು ಆಕಾರಗಳ ನೋಡೀದ ಯಾರೂ
ಕೂಲಿ ಕಂಬಳಗಳಿಗೆ ಕರೆಯುವುದಿಲ್ಲವಲ್ಲ
ನಾವಾಗೆ ಹೋಗಿ ಕೂಲಿ ಕೆಲ್ಸ ಕೇಳಬೇಕು”
ಅನ್ನುವ ಹೊತ್ತೀಗೆ ಸರಿಯಾಗಿ ಅಲ್ಲಿಗೆ
ಈ ಊರ ಘನಂದಾರಿ ಪಟೇಲ್ರು ಮುದ್ದೇಗೌಡ್ರು
ಗುಂಡಯ್ಯನವರ ಮನೆ ಬಾಕ್ಲಲ್ಲಿ ನಿಂತುಕೊಂಡು |

“”ಅಯ್ಯಾ ಗುಂಡಯ್ಯ
ನಿಮ್ಮ ಕಡೆಯಿಂದ ಯಾರಾದ್ರೂ ಕೂಲಿಗೆ ಬತ್ತರೇನಯ್ಯ
ಗೇಯ್ಮೆ ಗೊತ್ತಿದ್ದೋರು ಕೆಲಸಕೆ ಬರೋದಾದ್ರೆ
ಒಂದು ಕೊಳಗ ರಾಗಿ ಒಂದು ದುಡ್ ಕೊಡ್ತೀನ್ರಪ್ಪ” –

ಗೌಡರು ಆಡಿದ ಮಾತ ಕೇಳುಕೊಂಡು
ಭೀಮಣ್ಣ ನಾನು ಬತ್ತೀನಂತ ಒಪ್ಪುಕೊಂಡ |
ಭೀಮಣ್ಣನ ನೋಡಿ ಪಟೇಲ್ ಮುದ್ದೇಗೌಡ್ರು
“”ಅಯ್ಯಾ ನಿನ್ನ ನೋಡುದ್ರೆ ಅಡಾವುಡಿ ಮನುಸನಂಗೆ ಕಾಣಕಿಲ್ಲ
ಒಳ್ಳೆ ಕೆಲಸ್ಗಾರ ಅನ್ನುಸ್ತದೆ
ನೀನು ಯಾರಪ್ಪ ? ನಿನ್ನ ಊರು ಯಾವ್ದಪ್ಪ ?”
“”ಗೌಡ್ರೆ ಪಾಪಿ ಪರ‍್ದೇಶಿಗಳಿಗೆ ಊರು ಯಾವ್ದು ಕೇರಿ ಯಾವುದಪ್ಪ ?
ಹೊಟ್ಟೆಪಾಡ್ಗೆ ಊರಾಡ್ಕೊಂಡು ಬತ್ತಿದ್ದೊ
ಶರಣ ಗುಂಡಯ್ಯನವರು ತಮ್ಮ ಒಪ್ಪಾರದಲ್ಲಿ ಇರೋದ್ಕೆ
ಇಷ್ಟಗ್ಲ ತಾವ್ ಕೊಟ್ರು
ಯಾರಾರೂ ಕೂಲಿ ಕಂಬುಳಕ್ಕೆ ಕರುದ್ರೆ ಹೋಗನ ಅಂತ
ಕಾಯ್ತಾ ಇವಿ ಗೌಡ್ರೆ

ನಾವು ಸಂದೆಗಂಟ ಗೇದ್ರೆ ಏನ್ ಕೊಡ್ತೀರಿ ಗೌಡ್ರೆ ?”
“”ಅಯ್ಯಾ ನಾನು ಎರಡು ನಾಲಗೆಯವನಲ್ಲ
ನಿನ್ನ ಆಕಾರ ರೂಪು ಮಾತು ಕತೆಗಳು ನನ್ನ ಮನುಸ್ಗೆ ಹಿಡಿಸುದ್ವು,
ನಾನು ಕೊಂಕಣ ಸುತ್ತಿ ಮೈಲಾರಕ್ಕೆ ಬರೋನಲ್ಲ
ಕಡ್ಡಿ ತುಂಡಾದಂಗೆ ಒಂದೇ ಒಂದು ಮಾತಲ್ಲಿ ಹೇಳ್ತೀನಿ
ಒಂದಾಳ್ಗೆ ಒಂಜಿನುಕ್ಕೆ
ಒಂದ್ ಕೊಳಗ ರಾಗಿ ಒಂದ್ ದುಡ್ ಕೊಡ್ತೀನಪ್ಪ
ಮುಕ ತಿರುಗುಸ್ಕೋ ಬ್ಯಾಡ
ಒಪ್ಕೆ ಆಗಿದ್ದ ಪಕ್ಷುದಲ್ಲಿ ನಿಂತ ನಿಲೂನಲ್ಲೆ ಹೊಂಟು ಬಾಪ್ಪ”
“”ನನ್ಗೆ ಒಪ್ಪಿಗೆ ಆಗ್ನಿಲ್ಲ ಗೌಡ್ರೆ”
“”ಯಾತುಕ್ಕಯ್ಯಾ ?”
“”ನಿಮ್ಗೆ ಎಷ್ಟಾಳಾಗ್ಬೇಕು ಅಂತ ಮೊದಲು ಹೇಳಿ”
“”ನನ್ಗೆ ನೂರಾಳಾಗ್ಬೇಕು ಕನಪ್ಪ ?”
“”ಏನ್ ಕೆಲ್ಸ ಹೇಳಿ”

“”ಒಂದಷ್ಟು ದರಕಾಸ್ ಭೂಮಿ ಅದೆ ಕನಪ್ಪ
ಅದ ಸಾಗುವಳಿಗೆ ನೇರುಪ್ ಮಾಡ್ಬೇಕು
ಮರಗಿಡ ನಾರುಬೇರು ಕಲ್ಲುಮುಳ್ನೆಲ್ಲ ತಗ್ದು
ಹದ ಮಾಡ್ಬೇಕು ಕನಪ್ಪ”
“”ಗೌಡ್ರೆ ಆ ಕೆಲ್ಸನೆಲ್ಲ
ನಾನೊಬ್ನೆ ಚಿಟ್ಕಿ ಹೊಡೆಯೋದ್ರಲ್ ಮಾಡ್ಕೊಡ್ತಿನಿ
ಆದ್ರೆ ಒಂದ್ ಮಾತು”
“”ಏನು ಹೇಳಪ್ಪ”
“”ಗೌಡ್ರೆ ನೂರಾಳು ಮಾಡೊ ಕೆಲುಸ್ವ
ನಾನೊಬ್ಬನೇ ಮಾಡಿ ಮುಗುಸ್ತೀನಿ
ಇದುಕ್ಕೆ ನೀವು ದೊಡ್‌ಮನಸ್ ಮಾಡಿ
ನಾನು ಹೊರುವಷ್ಟು ರಾಗಿ ಕೊಡ್ಬೇಕು” –

ಭೀಮನ ಮಾತನು ಕೇಳಿದ ಗೌಡರು
ನೂರಾಳ ಕೆಲುಸ್ವ ಇವುನೊಬ್ನೆ ಮಾಡ್ತನ ?
ಬಬ್ರುಗೊಂದ್ ಕೊಳ್ಗ ಅಂದ್ರೆ ನೂರ್‌ಕೊಳ್ಗ ಆಯ್ತು
ನೂರ್‌ಕೊಳ್ಗ ಅಂದ್ರೆ ಐದ್ ಪಲ್ಲ ಆಯ್ತು
ಹಾಗೆ ಆಗಲಿ ಅಂತ ಒಪ್ಪಿಕೊಂಡು ಗೌಡರು
ಭೀಮಣ್ಣನ ಕೂಲಿಗೆ ಕರುಕೊಂಡು ಹೋದರು |
“”ಹೇಳಿ ಗೌಡ್ರೆ, ಅದ್ಯಾವ್ದು ದರಕಾಸ್ ಭೂಮಿ”
“”ಇದೇ ಕನಪ್ಪ
ಈ ಮರ‍್ಗಳ್ನೆಲ್ಲ ಕಡ್ದು ಬೇರ‍್ಗಳ್ನೆಲ್ಲ ತಗ್ದು
ಕಲ್ಲುಮುಳ್ನೆಲ್ಲ ಆಯ್ದು ಆಬದ್ ಮಾಡ್ಬೇಕು
ನೀನು ಹೊರುವಷ್ಟು ರಾಗೀಯ
ಒಲವರವಿಲ್ದೆ ನಾನು ಕೊಡ್ತಿನಿ ಕನಪ್ಪ” –

ಕೊಡ್ಲಿ ಗುದ್ಲಿ ಮಚ್ಚು ಪಿಕಾಸಿ ಹಾರೆಗಳ
ತಂದು ಭೀಮಣ್ಣನ ಮುಂದೆ ಮಡಗಿದರು
ಆಗ ಭೀಮಣ್ಣ ಕ್ರಿಷ್ಣಪರಮಾತ್ಮನ ನೆನೆದು
ಕೊಡ್ಲಿ ಗುದ್ಲಿ ಮಚ್ಚು ಪಿಕಾಸಿ ಹಾರೆಗಳ
ಒಬ್ಬಾಲ್ಕೆ ಮಡುಗ್ಬುಟ್ಟು ಪಂಚೆ ಬಿಗಿದು ಕಟ್ಟಿ
ಸಂಬಾರ ಸೊಪ್ಪಿನ ಗಿಡಗಳ ಕೀಳೋ ಹಂಗೆ

ಮರಮರಗಳನೆಲ್ಲ ಕಿತ್ತು ಎಸೆದಾನು
ಕಲ್ಲು ಗುಂಡುಗಳಲ್ಲಿ ಚಂಡಾಟ ಆಡಿದನು
ಗಿಡಗೆಂಡೆಗಳನೆಲ್ಲ ಉಫ್ಪಂತ ಉರುಬಿ
ಹಳ್ಳ ತಿಟ್ಟನೆಲ್ಲ ಒಂದು ಸಮ ಮಾಡಿದನು
ಎಲ್ಲಾನು ಒಂದು ಕಡೆ ಲಾಟ ಹಾಕಿದನು
ಇನ್ನೂ ಗೌಡರು ಊಟ ತರ‍್ನಿಲ್ಲಾಂತ
ಅವ್ನು ಊರು ದಿಕ್ಕ ನೋಡುತ ಅವುನೆ
“”ನೂರಾಳ ಕೆಲ್ಸ ನಾನೊಬ್ನೆ ಮಾಡಿವ್ನಿ
ನೂರಾಳ ಊಟ ನನಗೊಬ್ಬುಂಗೆ ಸಿಕ್ಕುತೈತೆ”
ಅಂತ್ಹೇಳಿ ಊರುದಿಕ್ಕ ನೋಡುತಿರುವಾಗ
ಐಗ್ಳ ರಾಗಿ ಹಿಟ್ನಲ್ಲೆ ಮುದ್ದೆಗಳ ಮಾಡಿ
ಐಗ್ಳ ಅಕ್ಕಿ ಬೇಯಿಸಿ ಅನ್ನವ ಮಾಡಿಕೊಂಡು
ಬ್ಯಾಳೆ ಬದನೇಕಾಯಿ ಎಸರನ್ನು ಮಾಡಿಕೊಂಡು
ಎತ್ತಿನ ಬಂಡೀಯ ತುಂಬ ತುಂಬುಕೊಂಡು
ಗೌಡ್ರು – ಊಟದೊತ್ತಿಗೆ ತ್ವಾಟಕೆ ಬಂದರು |
ಆಳುನ ಕೈಲಿ ಗಾಡಿ ಹೊಡುಸ್ಕೊಂಡು
ಬಂದ ಗೌಡರು ಭೀಮ್ನ ಗೇಯ್ಮೆಯ ನೋಡಿ
ಗರ ಹೊಡುದಂಗೆ ಮಾತಿಲ್ಲದೆ ನಿಂತುಬುಟ್ರು |

“”ಪರಮಾತ್ಮ
ಮೂರು ತಿಂಗ ಮಾಡೋ ಕೆಲುಸ್ವ ಇವ ಒಂಜಿನುಕ್ಕೆ ಮುಗುಸವುನಲ್ಲ

ಇವ್ನು ನಿಜವಾಗ್ಲು ಮನುಸ್ನಲ್ಲ” ಅಂದ್ಕೊಂಡು
“”ಅಪ್ಪಾ ಸರಣ
ಊಟ ತಂದಿವ್ನಿ ಊಟ ಮಾಡೇಳು” ಅಂತ್ಹೇಳಿ –
ತಂದಿದ್ದ ನೂರೆಲೆಯ ಏಕುವಾಗಿ ಹಾಸಿ
ಕೈಗೆ ನೀರ ಕೊಟ್ಟು ಕುಂತ್ಕೊಳಕ್ಹೇಳಿ
ಗೌಡರು ತಮ್ಹೆಂಡ್ತಿ ನಿಂಗಮ್ಮನ ಕರುದು
ಊಟುಕಿಕ್ಕೆ ಅಂದಾಗ ಗೌಡರ ಹೆಣ್ತಿ
ಹೆದ್ರುಕೊಂಡು ದಂಡ್ಯಕೆ ಹೋಗದೆ ಹೋದ್ಲು
ಹೆಂಡ್ತಿ ಹೆದ್ರಿದ ಕಂಡು ಗೌಡರ ಗ್ವಾರಂದವೆ
ನಡುಗಿ ಹೋಯಿತು ಅವ್ರು ಆಳನ್ನು ಕರ‍್ದು
“”ಉಣ್ಣಕ್ಕಿಕ್ರುಲಾ” ಅಂತ ಆಗ್ನೀಯ ಮಾಡಿದರು |

ಅವ್ರು – ಗಾಡಿಯಿಂದ ಇಳ್ಕಿ ಇಳ್ಕಿ ತಪ್ಲೆ ತಪ್ಲೆಗಳ
ಭೀಮನ ಮುಂದೆ ಮಡುಗ್ಬುಟ್ಟು ಹೋದರು
ಕ್ಷಣದಲ್ಲಿ ರಾಗಿಮುದ್ದೆ ಕಾಣದಂಗಾದಾವು
ಅನ್ನವೆಲ್ಲ ಮೂರ್ ತುತ್ಗೆ ಮುಗಿಸಿಯೇ ಬುಟ್ಟ
ಕೈಯ ತೊಳ್ಕೊಂಡು ಬಾಯ ಒರುಸ್ಕೊಂಡು |

“”ಗೌಡ್ರೆ ಮೂರ್ ತಿಂಗ್ಳುಗಾಗೊ ಕೆಲಸ್ವ
ಒಂಜಿನುಕ್ಕೇ ಮುಗಿಸಿ ಕೊಟ್ಟಿವ್ನಿ
ಈಗ ನನ್ಗೆ ಕೂಲಿ ಕೊಡಿ” –

ನೂರಾಳಿಯ ಕಂಬ್ಳವ ಗೌಡ್ರು ಕೊಡುತಾರೆ
ಗೌಡ್ರು ಮಲ್ಲಿ ಹನ್ನೆರಡು ಪಲ್ಲ ಹಿಡಿವಂತ
ದೊಡ್ಡದಾದ ಒಂದು ಗಳಗೆಯು ಇತ್ತು
ಆ ಗಳುಗ್ಗೆ ತುಂಬ್ಕೊಂಡು ರಾಗಿಯ ತಕ್ಕೊಂಡು
ಭೀಮಣ್ಣನು ಬಿರುಬಿರನೆ ಮನೆಗೆ ಬಂದಾನು |

“”ಅಮ್ಮಾ ಅಮ್ಮಾ”
“”ಏನಪ್ಪಾ ಭೀಮಣ್ಣ”
“”ರಾಗಿ ತಂದಿವ್ನಿ ಕಣಮ್ಮ”
“”ಅಪ್ಪಾ ಇಷ್ಟೊಂದು ರಾಗಿಯ ಎಲ್ಲಿಂದ ತಂದ್ಯಪ್ಪ ?”
“”ಗೌಡ್ರು ಮನೆ ಕಂಬ್ಳಕ್ಕೆ ಕೊಟ್ಟಿರೊ ರಾಗಿ ಕಣಮ್ಮ” –
ತಮ್ಮನು ಆಡಿದ ಮಾತ ಕೇಳುಕೊಂಡು
ಧರ್ಮರಾಯರು ಎದ್ದು ಬಂದು ನೋಡಿದರು

“”ಬ್ಯಾಡ ಬ್ಯಾಡಪ್ಪ ನಮಗಿದು ಸರಿಯಲ್ಲ
ಒಂದು ದಿನ್ದ ಕೂಲಿಗೆ ಒಕ್ಳ ರಾಗಿ ಸಾಕು
ಒಕ್ಳ ರಾಗಿ ಜೊತೆಗೆ ಒಂದು ದುಡ್ಡು ಸಾಕು
ಇದು ಧರ್ಮಶಾಸ್ತ್ರವು ಕೇಳಪ್ಪ ಭೀಮಣ್ಣ
ಉಳಿದ ರಾಗೀನೂ ದುಡ್ಡನು ನಾವುಗಳು
ಮಡಿಕೊಂಡರೆ ಕರ್ಮ ತಪ್ಪುವುದಿಲ್ಲಪ್ಪ
ಈ – ರಾಗೀನು ಹಣುವನ್ನು ಈಗಲೆ ಕುಂಡೋಗಿ
ಗೌಡರಿಗೆ ಕೊಟ್ಟು ಬರೋಗು ತಮ್ಮಯ್ಯ
ಇದು ಧರ್ಮದ ಅನ್ನವಲ್ಲ ಅನ್ನಾಯ್ದ ಅನ್ನ
ಒಂದು ದಿನದ ಕೂಲಿಗೆ ಒಂದು ಕೊಳ್ಗ ರಾಗಿ ಮಾತ್ರ
ಧರ್ಮದ ಅನ್ನವಪ್ಪ ಕೇಳಪ್ಪ ಭೀಮಣ್ಣ”
ಅಣ್ಣನ ಮಾತೀಗೆ ತಲೆತೂಗಿ ಭೀಮಣ್ಣ
ತಂದ ರಾಗಿಯ ಹಿಂದಕೆ ಕುಂಡೋದ |

“”ಸ್ವಾಮಿ ಗೌಡ್ರೆ ಬಾಕ್ಲು ತಗೀರಿ”
“”ಯಾರಪ್ಪ ಅದು ?”

ಗೌಡರು ಬಾಕಲ ತಗುದು ನೋಡಿದರು
ರಾಗಿ ಸುರ‍್ಕೊಂಡು ಬರಿ ಗಳಗೆ ತಂದವುನೆ
ಅಂದ್ಬುಟ್ಟು “”ಮಡುಗ್ಬುಟ್ಟು ಹೋಗಪ್ಪ” ಅಂದರು |

“”ಸ್ವಾಮಿ ಗೌಡ್ರೆ
ನಿಮ್ಮ ರಾಗಿಯು ಬ್ಯಾಡ ನಿಮ್ಮ ದುಡ್ಡು ಬ್ಯಾಡ
ನಿಮ್ಮ ಕೂಲಿಯು ಬ್ಯಾಡ ನಿಮ್ಮ ಕಂಬುಳ್ವೂ, ಬ್ಯಾಡ
ತಕ್ಕೊಳ್ಳಿ ನೀವೇ ಮಡಿಕೊಳ್ಳಿ”
ಯಾಕಪ್ಪ ಹಿಂಗಂತಿ ?
ನೀನು ಬೆಳುಗಿನಿಂದ ಸಂದೆವರ‍್ಗೂ ದುಡ್ಡಿದ್ದಿ
ಮಡ್ದೋರ‍್ಗೆ ಕೂಲಿ ಕೊಡದೇ ಹೋದ್ರೆ ಶಿವ ಒಪ್ತನ ?
ನಿನ್ನ ಕೂಲಿ ನೀನು ತಕ್ಕೊಂಡೇ ಹೋಗ್ಬೇಕಪ್ಪ”
ಗೌಡ್ರೆ ಕೊಡ್ಲೇಬೇಕು ಅನ್ನೋದಾದ್ರೆ

ಒಂದು ದಿನದ ಕೂಲಿ ಅಂದ್ರೆ ಒಂದು ಕೊಳಗ ರಾಗಿ
ಒಂದು ದುಡ್ಡು ತಾನೆ ?
ಆದಷ್ಟು ಕೊಡಿ” –
ಅಂತ್ಹೇಳಿ ಒಂದು ಕೊಳಗ ರಾಗಿ ಒಂದುಡ್ಡು
ಇಸುಕೊಂಡು ಭೀಮಸೇನ ಮನೆಗೆ ಬಂದಾನು
ಒಂದು ಕೊಳಗ ರಾಗೀಯ ಬೀಸಿ ಹಸಿಟ್ಟಿನಿಂದ
ತಾಯಿ ಕೊಂತಮ್ಮ ಅಂಬಲಿಯ ಮಾಡಿ
ಒಂದುಡ್ಡಿನಲ್ಲಿ ಉಪ್ಪು ಉಪ್ಪಿನಕಾಯ
ತರಿಸಿ ಮಕ್ಕಳಿಗೆ ಉಣ್ಣಕ್ಕೆ ಇಕ್ಕಿ
ತಾಯಿ ಕೊಂತಮ್ಮ ತಾನು ಉಂಡಳು
ಹಿಂಗೆ – ಪಾಂಡುವರ ಏಕಚತ್ರಪುರದಲ್ಲಿ
ಬಡತನದಲ್ಲಿ ಕಾಲರಣೆ ಮಾಡುತ್ತಿದ್ದರು |