ಹೊತ್ತರಾ ಮುಂಚೇ ಎದ್ದೀತ್ ಹಕ್ಕಿ ಹಲ್ಸೀನಾ ಹಕ್ಕೀ ನಾರೀನಾರಾಯ್ಣ
ಮೂಡುಮುಖ ಹೋಯಿತ್ ಹಕ್ಕಿ ಹಲ್ಸೀನಾ ಹಕ್ಕೀ ನಾರೀನಾರಾಯ್ಣ**
ಮೂರೇ ಚೆಪ್ಪು ತಂದೀತ್
ಅಡ್ಡಾದಿಡ್ಡೀ ಬೆಚ್ಚೀತ್
ಗೂಡನಾರೂ ಕಟ್ಟೀತ್
ಒಂದೇ ದಿವ್ಸ ಬಿಟ್ಟೀತ್
ಒಂದೇ ಮೊಟ್ಟೇ ಇಟ್ಟೀತ್
ಮತ್ತೊಂದೇ ದಿವ್ಸ ಬಿಟ್ಟೀತ್
ಮತ್ತೋಂದೇ ಮೊಟ್ಟೆ ಇಟ್ಟೀತ್
ಮತ್ತೊಂದೇ ದಿವ್ಸ ಬಿಟ್ಟೀತ್
ಮತ್ತೊಂದೇ ಮೊಟ್ಟೆ ಇಟ್ಟೀತ್
ಮೂರೇ ಮೊಟ್ಟೆ ಆಯಿತೀಗ
ಮತ್ತೆಂಟೇ ದಿವ್ಸ ಬಿಟ್ಟೀತ್
ಕಾವಿಗಾರೂ ಕೂತೀತೀಗ
ಮರೀನಾರೂ ಒಡ್ಯಿತ್
ಮರೀಗೆ ಮೇವ್ ತಂದ್ ಕೊಡ್ತ್
ಅತ್ತೆ ಇತ್ತೆ ಆಡುತ್ತಿದ್ದೊ
ಅತ್ತೆ ಇತ್ತೆ ಹಾರೂತ್ತಿದ್ದೊ
ಮರನಾ ಒಳಗೇ ಬಿದ್ದೇ ಹೋದೋ
ಮೇವು ಆರೂ ತಂದೀತ್
ಅರಿಸೀ ಆರೂ ನೋಡೀತ್
ಒಂದೂ ಮರಿಯೂ ಇಲ್ಯಾಲಂತ್
ಆಚಾರೀ ಮನೇ ನಡೀತ್
“ಆಚಾರೀ ಹುಡ್ಗಾ ಆಚಾರೀ ಹುಡ್ಗಾ
ಮರಾ ಒಂದೇ ಕಡ್ದೇ ಕೊಡ್ತ್ಯಾ’

“ದೊಡ್ಡೋರ್ ಬೆಟ್ಟೀನ್ ಮರಾ ಆದ್
ನನ್ನಿಂದಾರೇ ಸಾಗಾದಪ್ಪ”
ಅಷ್ಟು ಮಾತೂ ಕೇಂಡೀತ್
ಅಲ್ಲಿಂದಾರೂ ಎದ್ದೀತ್
ನಾಯಿ ಬುಡಕ್ಕೆ ಓಡಿತ್
“ನಾಯೇ ನಾಯೇ
ಆಚಾರೀ ಕಾಲು ಕಚ್ಚಿಕೊಡು”
“ನನ್ನಿಂದಾರೂ ಸಾಗಾದಪ್ಪ
ದೊಡ್ಡೋರ್ ಬೆಟ್ಟೀನ್ ಆಚಾರೀ ಆವ್ನ್’
ಅಷ್ಟೇ ಮಾತು ಕೆಂಡೀತೀಗ
ಅಲ್ಲಿಂದಾರೂ ಎದ್ದೀತೀಗ
ಕೋಲು ಬುಡಕ್ಕೆ ಓಡೀತ್
“ಕೋಲೇ ಕೋಲೇ
ನಾಯಿ ಕಾಲು ಮುರ‍್ದೆಕೊಡು”
“ನನ್ನಿಂದಾರೂ ಸಾಗಾದಪ್ಪ
ದೊಡ್ಡೋರ್ ಬೆಟ್ಟೀನ್ ನಾಯಿ ಅದು”
ಅಷ್ಟು ಮಾತು ಕೇಂಡೀತ್

ಅಲ್ಲಿಂದಾರೂ ಎದ್ದೀತ್
ಬೆಂಕೀ ಬುಡಕ್ಕೆ ಓಡೀತ್
“ಬೆಂಕಿಯೇ ಬೆಂಕಿಯೇ
ಕೋಲಾನಾರೂ ಸುಟ್ಟೀಕೊಡು’
“ನನ್ನಿಂದಾರೂ ಸಾಗಾದಪ್ಪ
ದೊಡ್ಡೋರು ಬೆಟ್ಟನಾ ಕೋಲು ಅದು’
ಅಷ್ಟೇ ಮಾತು ಕೇಂಡೀತ್
ಅಲ್ಲಿಂದಾರೂ ಎದ್ದೀತ್
ನೀರ್ ಬುಡಕ್ಕೆ ಓಡೀತ್
“ನೀರೇ ನೀರೇ
ಬೆಂಕಿನಾರೂ ನಂಗ್ಸಿಕೊಡು”
“ನನ್ನಿಂದಾರೂ ಸಾಗಾದಪ್ಪ
ದೊಡ್ಡೋರ್ ಬೆಟ್ಟೀನ್ ಬೆಂಕ್ಯಾಲ್ದಾ’
ಅಷ್ಟೇ ಮಾತು ಕೇಂಡಿತ್
ಅಲ್ಲಿಂದಾರೂ ಎದ್ದೀತ್
ಬಸವನ ಬುಡಕ್ಕೆ ಓಡಿತ್
“ಬಸವಣ್ಣ ಬಸವಣ್ಣ
ನೀರಾರೂ ಕುಡ್ದೆಕೊಡು’
“ನನ್ನಿಂದಾರೂ ಸಾಗಾದಪ್ಪ
ದೊಡ್ಡೋರ ಬೆಟ್ಟೀನ್ ನೀರ್ ಅಲ್ದಾ”
ಅಷ್ಟೇ ಮಾತು ಕೇಂಡೀತ್
ಅಲ್ಲಿಂದಾರೂ ಎದ್ದೀತ್
ಬಳ್ಳೀ ಬುಡಕ್ಕೆ ಓಡಿತ್ ಹಕ್ಕಿ
“ಬಳ್ಳೀಯೇ ಬಳ್ಳೀಯೇ
ಬಸವನಾರೂ ಕಟ್ಟಿಕೊಡು’
“ನನ್ನಿಂದಾರೂ ಸಾಗಾದಪ್ಪ
ದೊಡ್ಡೋರ್ ಬೆಟ್ಟೀನ್ ಬಸವಾ ಅಲ್ದಾ’
ಅಷ್ಟೇ ಮಾತು ಕೇಂಡೀತ್ ಹಕ್ಕಿ
ಅಲ್ಲಿಂದಾರೂ ಎದ್ದೀತ್
ಹೆಗ್ಗುಳನ ಬುಡಕ್ಕೆ ಓಡೀತ್
“ಹೆಗ್ಗುಳಣ್ಣೂ ಹೆಗ್ಗಳಣ್ಣೂ
ಬಳ್ಳೀ ಒಂದೇ ಕತ್ತರಿಸಿಕೊಡು’
“ನನ್ನಿಂದಾರೂ ಸಾಗಾದಪ್ಪಾ
ದೊಡ್ಡೋರ್ ಬೆಟ್ಟೀನ್ ಹೆಗ್ಗೂಳಾದ’
ಅಷ್ಟೇ ಮಾತೂ ಕೇಂಡೀಂತ್ ಹಕ್ಕಿ
ಅಲ್ಲಿಂದಾರೂ ಎದ್ದೀತ್
ಬೆಕ್ಕೀನ ಬುಡಕ್ಕೆ ಓಡಿತ್
“ಬೆಕ್ಕೇ ಬೆಕ್ಕೇ
ಹೆಗ್ಗುಳನಾ ಹಿಡ್ದೇ ಕೊಡ್ತ್ಯಾ’
“ನನ್ನಿಂದಾರೂ ಸಾಗಾದಪ್ಪ
ದೊಡ್ಡೋರ್ ಬೆಟ್ಟೀನ ಬೆಕ್ಕ್ ಅಲ್ದಾ”
ಅಷ್ಟೇ ಮಾತು ಕೇಂಡೀತ್
ಅಲ್ಲಿಂದಾರೂ ಎದ್ದೀತ್
ಬಾಳಾ ಸಿಟ್ಟ್ ಬಂದೀತ್
ಹೆಗ್ಡೇರ್ ಬುಡಕ್ಕೆ ಹೋಯಿತ್
ದೂರನಾರೂ ಕೊಟ್ಟೀತ್
ಹೆಗ್ಡೇರ‍್ಗ್ ಸಿಟ್ಟ್ ಬಂದ್ಹೋಯ್ತು
ಹೆಗ್ಗಡ್ತೇರಿಗೆರಡು ಗಾಂಡ್ ಬಿತ್ತ್
ಹೆಗ್ಗಡ್ತೇರಿಗಾರೂ ಸಿಟ್ಟೇ ಬಂತ್
ಬೆಂಕೀಗೆರಡು ಗಾಂಡಿಗೇ ಬಿತ್ತ್
ಬೆಕ್ಕೇ ಹೋಯಿ ಹೆಗ್ಗಳಾ ಹಿಡೀತ್
ಹೆಗ್ಗಳಾ ಹೋಯಿ ಬಳ್ಳಿಯೇ ಕತ್ತರ‍್ಸ್ತ್
ಬಸವಾ ಹೋಯಿ ನೀರೇ ಕುಡೀತ್
ಬೆಂಕಿ ಹೋಯಿ ಕೋಲೇ ಸುಡ್ತ್
ನಾಯಿ ಹೋಯಿ ಕಾಲೂ ಕಚ್ತ್
ಆಚಾರೀ ಹೋಗಿ ಮರಾ ಕಡ್ದಾ
ಹಕ್ಕೀ ಮರಿ ತೆಗ್ದ್ ಕೊಟ್ಟ**      ಪ್ರತಿಪಾದಾಂತ್ಯದಲ್ಲೂ “ಹಲ್ಸೀನಾ ಹಕ್ಕೀ ನಾರೀನಾರಾಯ್ಣ” ಎಂದು ಸೇರಿಸಿಕೊಳ್ಳಬೇಕು.*      ಹಲಸಿನ ಹಕ್ಕಿ, ಕೆದ್ನಾಯ ಕುಂಜಿಬೆಟ್ಟು ಸುಬ್ರಹ್ಮಣ್ಯ, ಹಾಡಿಗೆ ಹನ್ನೆರಡು ಕಬರು, ಕನ್ನಡ ಅಧ್ಯಯನ ಸಂಸ್ಥೆ, ಮೈಸೂರು ವಿಶ್ವವಿದ್ಯಾಲಯ, ಮೈಸೂರು – ೧೯೭೩ ಪು.ಸಂ. ೧೪೯,೧೫೧