ಗಂಗಾಧರ ಲಿಂಗ ಜಯತೊ – ಗೌರಿಯನು
ಅಂಗದಲ್ಲುಳ್ಳ ಜಯತೊ
ತುಂಗ ಚುಂಚನಗಿರಿಯ ಮಂಗಳಾತ್ಮಕ ಜಯತೊ
ಲಿಂಗಭೈರವನೆ ಜಯತೊ | ಸೊಲ್ಲು |

ಜೋಗೀಯ ಬಿರುದುಗಳನು – ಅರ್ಜುನನು
ಹಾಗೆಯೆ ಹಿಡಿದುಕೊಂಡು
ಅಕ್ಕರೆಯಲಿ ಹೊಕ್ಕು ಒಕ್ಕಲಿಗರ ಕೇರಿಗೆ
ಚೊಕ್ಕ ಮನಸಲ್ಲಿ ಬಂದ – ಅರ್ಜುನನು
ಚೊಕ್ಕ ಮನಸಲ್ಲಿ ಬಂದ |

ಮುದ್ದೇಗೌಡರ ಮನೆಯ – ಮುಂದುಗಡೆ
ಸಿದ್ಧಶಿವಯೋಗಿ ಪಾರ್ಥ
ಮುದ್ದೇಗೌಡರ ಮಡದಿ ಮುದ್ದಮ್ಮನ ಸೈತಾಗಿ
ದೇವಾಜಮ್ಮಾನ ಕರೆದ – ಅವರ ಸೊಸೆ
ದೇವಾಜಮ್ಮಾನ ಕರದ |
ಅರ್ಜುನಸ್ವಾಮಿ ಕರುದ್ರು ಅಂತ್ಹೇಳಿ
ಗಂಡ್ಮಕ್ಕ ಸೊಸೆಯರು ಆದಿಯಾಗಿ ಎಲ್ರೂ ಬಂದಿದ್ದಾರೆ
ಅರ್ಜುನಸ್ವಾಮಿ ಭೈರವಸ್ವಾಮಿಯ
ಬಿರುದುಭಿಕ್ಷಗಳನೆಲ್ಲ ಒಂದು ಪೊಟ್ಟಣೆ ಕಟ್ಟಿ ತಂದಿದ್ದಾರೆ
“”ಅಯ್ಯಾ ಮುದ್ದೇಗೌಡ
ಇಂದುನಿಂದ ನೀವು ಚುಂಚನಗಿರಿ ಭೈರವನ ಒಕ್ಲಪ್ಪ
ನಿನ್ನ ಸೊಸೆ ದೇವಾಜಮ್ಮನಿಂದ
ನಿನ್ನ ಮೊಮ್ಮಗ ಒಕ್ಕಾಲಿಗ ಆದ
ಆ ಒಕ್ಕಾಲಿಗ ಅನ್ನೋದು ನಿಮ್ಮ ಜಾತಿ ಹೆಸ್ರಾಗ್ಲಪ್ಪ
ಆ ಮಗೂಗೆ ಭೈರವೇಗೌಡ ಅಂತ ಹೆಸ್ರಾಗ್ಲಪ್ಪ
ನಿಮ್ಮ ಕುಲದಲ್ಲಿ ಹುಟ್ಟಿದ ಮೊದಲ ಮಗೂಗೆ
ಜೋಗೀದೀಕ್ಷ್ಯವನ್ನು ಕೊಡ್ಸಿ
ಕಾಮಾಕ್ಷಿ ಕಾಮಾಂಡ್ಲು ಸಿಂಗುನಾಥಗಳ ಧರ‍್ಸಿ
ವರ್ಷಕೊಂದ್ಸಲ ಗಿರಿಗ್ಹೋಗಿ ಸೇವೆ ಮಾಡಬೇಕಪ್ಪ
ನಿಮ್ಮ ಕುಲದೋರೆಲ್ಲ ಬೈರವನೆಸ್ರಲ್ಲಿ ಹುಟ್ಟಿದ ಮಕ್ಳುಗೆ
ಭೈರೇಗೌಡ ಬೋರೇಗೌಡ ಬೋರಮ್ಮ ಬೋರಪ್ಪ
ಬೋರಣ್ಣ ಬೋರಯ್ಯ ಭೈರವ ಅಂತ ಹೆಸ್ರು ಕಟ್ರಪ್ಪ
ಬೈರವನ ಒಕ್ಲು ಹಾಲುಸಾಗ್ರವಾಗಿ ಬಾಳ್ಳಪ್ಪ
ಅನ್ನದಾನಕ್ಕೆ ಹೆಸರಾದ ನೀವು ಅನ್ನದಾನಿ ಅಂತ
ನಾಮಾಂಕ್ತವಾಗ್ಲಪ್ಪ” ಅಂತ್ಹೇಳಿ
ಅರ್ಜುನನೆ ಪುರುಷಕಾರಿಯಾಗಿ
ದೇವಾಜಮ್ಮನ ಮೊಗ ಭೈರವೇಗೌಡುನ್ಗೆ
ಜೋಗೀದೀಕ್ಷ್ಯವನ್ನು ಕೊಟ್ಟು
“”ಆದಿ ಭೈರವಸ್ವಾಮಿಗೆ ಜೈ
ಅನ್ನದಾನಿ ಭೈರವಸ್ವಾಮಿಗೆ ಜೈ
ಗಳಗ್ಗಲ್ಲು ಗವಿಸಿದ್ದುಗೆ ಜೈ
ಕತ್ತಲೆ ಬೈರುವನಿಗೆ ಜೈ
ಚೋಳರ ಕಂಬದಯ್ಯನಿಗೆ ಜೈ
ಓಂ ನಮಃ ಶಿವಾಯ ಓಂ ನಮಃ ಶಿವಾಯ”
ಅಂತ ಮಂತ್ರಿಸಿ ಕಾಮಾಕ್ಷಿ ಇಕ್ಕಿ ಸಿಂಗನಾಥ ಕೊಟ್ಟ
ಜೋಳಿಗೆಯನ್ನು ಎಡಗೈಗಾಧಾರ ಮಾಡಿ
ಈಬುತ್ತಿ ಕೂಕುಮಗಳನ್ನು ಧರಿಸಿ
“”ನಿಮ್ಮೊಕ್ಲು ಹೊನ್ನುಕ್ಲಾಗ್ಲಪ್ಪ
ಹಾಲುಸಾಗ್ರವಾಗಿ ಬಾಳಪ್ಪ”
ಅಂತ ಆಸುರ‍್ವಾದ ಮಾಡಿ ಅರ್ಜುನಸ್ವಾಮಿ
ಚುಂಚನಗಿರಿಗೆ ಬಂದು
ಭೈರುವಸ್ವಾಮಿ ಪಾದಗಳಿಗೆ ಬಿದ್ದು –

ಆಲದ ಎಲೆಯ ಮೇಲೆ – ಭೈರವಸ್ವಾಮಿ
ಲೀಲೆಯನಾಡಿ ಬನ್ನಿ
ಆರೇಳು ಲೋಕಗಳ ಮೆರೆಯುವ ಭೈರುವನ
ಪಾದಕ್ಕೆ ಮಂಗಳವೋ – ನನಸ್ವಾಮಿ
ಪಾದಕ್ಕೆ ಮಂಗಳವೊ |
ಅತ್ತೀಯ ಎಲೆಯ ಮೇಲೆ – ಭೈರವಸ್ವಾಮಿ
ಮುತ್ತಿನಂತಾಡಿ ಬನ್ನಿ
ಹತ್ತೇಳು ಲೋಕಾವ ಸುತ್ತಿ ಮೆರೆದು ಬರುವ
ಭೈರವಗೆ ಮಂಗಳವೊ – ನನಸ್ವಾಮಿ
ಭೈರವಗೆ ಮಂಗಳವೊ |

ಸ್ವಾಮಿ ನಾನು ತಮ್ಮ ಪಾದದಲ್ಲಿ ಅರಿಕೆ ಮಾಡಿದ್ದ ರೀತೀಲಿ
ನಿಮಗೆ ಘನವಾದ ಒಂದು ಒಕ್ಲು ಮಾಡಿದ್ದೀನಿ ಗುರುವೆ
ಕಾಣಿಕೆಯ ಕೊಟ್ಟು ಕಾಲಿಗೆ ಬಿದ್ದು –

ವಂದನೆಯ ಮಾಡುತಾರೆ – ಅರ್ಜುನ
ಆಸುರ‍್ವಾದ ಬೇಡುತಾರೆ

“”ಅರ್ಜುನ ನಿನ್ನ ಜೋಗಿ ವೇಷದ ಪಾಪ
ಇಲ್ಲಿಗೆ ಪರಿಯಾರ ಆಯ್ತಪ್ಪ
ಇನ್ನು ನಿನ್ನ ತಾಯಿ ಅಣ್ಣತಮ್ದೀರ ಸೇರಿ
ಸುಖವಾಗಿ ಬಾಳಪ್ಪ” ಅಂತ್ಹೇಳಿ –

ಪಾರ್ಥನನು ಹರಸಿದರು – ಭೈರವಸ್ವಾಮಿ
ಪಾರ್ಥನ ಕಳಿಸಿಕೊಟ್ಟರು
ಚುಂಚನಗಿರಿಯನು ಬಿಟ್ಟು ಅರ್ಜುನದೇವ
ಇಂದ್ರಪ್ರಸ್ಥಕೆ ಬಂದನು |

ಇಂದ್ರಪ್ರಸ್ಥಕೆ ಬಂದ – ಅರ್ಜುನನು
ಸಂತೋಸ ಕಳೆಯದಿಂದ
ಅಣ್ಣತಮ್ಮದೀರು ತಾಯಿ ಮಡದೀಯರ
ಜೊತೆಯಲ್ಲಿ ಇರುವನಾಗ – ಅರ್ಜುನನು
ಸುಖದಲ್ಲಿ ಇರುವನಾಗ |