‘ಮಹಾಕಾವ್ಯಗಳ ಕಾಲ ಎಂದೋ ಮುಗಿದು ಹೋಗಿದೆ; ಈ ಹೊತ್ತಿಗೆ ಅವು ಪ್ರಸ್ತುತವಲ್ಲ’ ಎಂದು ಪಾಶ್ಚಾತ್ಯ ಸಾಹಿತ್ಯ ವಿಮರ್ಶೆ ಈ ಶತಮಾನದ ಪ್ರಾರಂಭದಲ್ಲಿ ಘೋಷಿಸಿದರೂ, ರವೀಂದ್ರನಾಥ ಟ್ಯಾಗೂರರಂಥ ಭಾರತೀಯ ಮಹಾಲೇಖಕರೂ ‘ಇದು ಮಹಾಕಾವ್ಯಗಳ ಕಾಲವಲ್ಲ; ಇದೇನಿದ್ದರೂ ಬಿಡಿ ಬಿಡಿಯಾದ ಭಾವಗೀತಗಳ ಅಭಿವ್ಯಕ್ತಿಗೆ ಹೇಳಿ ಮಾಡಿಸಿದ ಕಾಲ’-ಎಂದು ಅಭಿಪ್ರಾಯಪಟ್ಟರೂ, ಭಾರತೀಯ ನವೋದಯ ಸಂದರ್ಭದಿಂದ ಹಿಡಿದು ಈ ಹೊತ್ತಿನವರೆಗೂ ಭಾರತೀಯ ಭಾಷಾ-ಸಾಹಿತ್ಯಗಳಲ್ಲಿ ಮಹಾಕಾವ್ಯಗಳ ಪರಂಪರೆ ಮುಂದುವರಿಯುತ್ತಲೇ ಇದೆ ಎನ್ನುವುದು ಸ್ವಾರಸ್ಯದ ಸಂಗತಿಯಾಗಿದೆ. ಕನ್ನಡ ಕಾವ್ಯ ಸಂದರ್ಭದಲ್ಲಂತೂ ಈವರೆಗಿನ ವಿವಿಧ ಸಾಹಿತ್ಯ ಚಳುವಳಿಗಳ ನಡುವೆಯೂ ಕುವೆಂಪು ಅವರ ‘ಶ್ರೀ ರಾಮಾಯಣ ದರ್ಶನಂ’, ಶ್ರೀನಿವಾಸರ ‘ಶ್ರೀರಾಮ ಪಟ್ಟಾಭಿಷೇಕ’, ಭೂಸನೂರಮಠ ಅವರ ‘ಭವ್ಯಮಾನವ’, ವಿನಾಯಕರ ‘ಭಾರತ ಸಿಂಧು ರಶ್ಮಿ’ ಮತ್ತು  ಪು.ತಿ.ನ. ಅವರ ‘ಶ್ರೀಹರಿ ಚರಿತೆ’-ಈ ಐದು ಗಮನಾರ್ಹವಾದ ಮಹಾಕಾವ್ಯಗಳು ಬಂದಿರುವುದನ್ನು  ನೋಡಿದರೆ, ‘ಮಹಾಕಾವ್ಯಗಳ ಕಾಲ ಮುಗಿದು ಹೋಯಿತು; ಇವೊತ್ತಿಗೆ ಅವು ಪ್ರಸ್ತುತವಲ್ಲ’ ಎಂಬ ಪಾಶ್ಚಾತ್ಯ ವಿಮರ್ಶನೋಕ್ತಿ ಎಷ್ಟೊಂದು ಹುಸಿಯಾಗಿದೆ ಎಂಬುದು ಮಾತ್ರವಲ್ಲ, ಕನ್ನಡದ ಸೃಜನಶೀಲತೆ ಈಗ ಉಲ್ಲೇಖಿಸಿದ ಮಹಾಕಾವ್ಯಗಳ ಮೂಲಕ ಮಹಾಕಾವ್ಯ ಪರಂಪರೆಯನ್ನು ಮುಂದುವರಿಸುತ್ತ ತನ್ನ ಮಹತ್ವಾಕಾಂಕ್ಷೆಯನ್ನು ಇಂದಿಗೂ ಉಳಿಸಿಕೊಂಡಿದೆ ಎಂಬುದನ್ನು ಯಾರಾದರೂ ಗುರುತಿಸಬಹುದು.

ಶ್ರೀ ಕುವೆಂಪು ಅವರ ‘ರಾಮಾಯಣ ದರ್ಶನಂ’, ಆಧುನಿಕ ಕನ್ನಡದ  ಮೊದಲ ಮಹಾಕಾವ್ಯ ಮಾತ್ರವಲ್ಲ ಮೊದಲ ದರ್ಜೆಯ ಮಹಾಕಾವ್ಯವೂ ಆಗಿದೆ. ಕನ್ನಡಕ್ಕೆ ಮೊದಲ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿಯನ್ನೂ, ಮೊದಲ ಜ್ಞಾನಪೀಠ ಪ್ರಶಸ್ತಿಯನ್ನೂ ತಂದುಕೊಟ್ಟ ಈ ಕಾವ್ಯ, ಕುವೆಂಪು ಅವರ ಸಮಸ್ತ ಕಾವ್ಯ ನಿರ್ಮಿತಿಯ ಶಿಖರವೆಂದು ಹೇಳಬಹುದು. ಒಂಬತ್ತು ವರ್ಷಗಳ ಸುದೀರ್ಘ ಸಾಹಿತ್ಯಕ ಸಾಧನೆಯಿಂದ ಮೈದೋರಿದ ಕಾವ್ಯಗೊಮ್ಮಟ ಶಿಲ್ಪ ಇದು. ಈ ಮಹಾಕಾವ್ಯವನ್ನು ಬರೆಯುವ ವೇಳೆಗೆ ಸಾಹಿತ್ಯದ ವಿವಿಧ ಪ್ರಕಾರಗಳ ಪ್ರಯೋಗದಲ್ಲಿ ಒಂದು ನಿಶ್ಚಿತವಾದ ಎತ್ತರದ ಕೃತಿಗಳನ್ನು ನಿರ್ಮಿಸಿದ ಅವರ ಕಾವ್ಯಪ್ರತಿಭೆ, ಶ್ರೀರಾಮಾಯಣದರ್ಶನಂ ಮಹಾಕಾವ್ಯನಿರ್ಮಿತಿಯ ಮೂಲಕ ಪ್ರವೇಶಿಸಿದ ಹಾಗೂ ಗ್ರಹಿಸಿ ನಿರೂಪಿಸಿದ ಅನುಭವ ಪ್ರಪಂಚವೇ ಬೇರೆಯದು. ಈ ಕುರಿತು ಅವರೇ ಹೇಳಿಕೊಂಡಿದ್ದಾರೆ-

ನೀಡದೊಳ್ ಬಳೆದು ಕಾಡಿನಲಿ ಹಾರಾಡಿದಾ ಗರುಡ ಶಿಶು
ಗರಿಬಲಿತ ಮೇಲಲ್ಪದೇಶಂಗಳಂ ಚರಿಸಿ ತಣಿವುದೆ?
ವಿಯದ್ ವಿಸ್ತೀರ್ಣಮಂ ಬಯಸಿ ಕೈಕೊಳ್ವುದಾಕಾಶ
ಪರ್ಯಟನಮಂ. ಕಿರುಮೀನ್ಗೆ ಕೆರೆ ಕೊಳಂ
ಪೊಳೆ ಸಾಲ್ಗುಂ. ಆ ತಿಮಿಗೆ ವೇಳ್ಕುಂ ಜಲಕ್ರೀಡೆಗಾ
ರುಂದ್ರ ಸಾಗರ ಸಲಿಲ ವಿಸ್ತಾರ.

ಎಂದು. ಇಲ್ಲಿರುವುದು ಗರಿಬಲಿತ ಗರುಡನ ವಿಯದ್ ವಿಸ್ತೀರ್ಣ ಪರ್ಯಟನ; ಮಹಾ ತಿಮಿಂಗಿಲದ ರುಂದ್ರಸಾಗರ ವಿಸ್ತಾರದೊಳಗಿನ ಜಲಕ್ರೀಡೆ.

ಈ ಮಾತುಗಳು ನಮ್ಮಕನ್ನಡ ಕಾವ್ಯ ಪರಂಪರೆಯೊಳಗೆ ಉದ್ದಕ್ಕೂ ಕಂಡುಬರುವ ಸ್ವಪ್ರಶಂಸೆಯ ಹಾಗೂ ಅಗ್ಗಳಿಕೆಯ ಮಾತುಗಳ ಮುಂದುವರಿಕೆಯಷ್ಟೆ ಎಂದು ತಿಳಿಯಬಾರದು. ರಾಮಾಯಣದಂಥ ಮಹಾವಸ್ತುವನ್ನು ತಮ್ಮ ವ್ಯಕ್ತಿಪ್ರತಿಭೆಯ ಮೂಲಕ ಈ ಯುಗದ ವ್ಯಾಖ್ಯಾನವನ್ನಾಗಿ ಪ್ರತಿಮಾ ವಿಧಾನದಲ್ಲಿ ಕಡೆದು ನಿಲ್ಲಿಸಿದ ಕುವೆಂಪು ಅವರು, ಈ ಕೃತಿಯನ್ನು ಕೇವಲ ಕನ್ನಡದ ಹಾಗೂ ಭಾರತೀಯ ಪರಂಪರೆಯ ಪ್ರಜ್ಞೆಯಿಂದ ಮಾತ್ರ ಬರೆದಿಲ್ಲ; ಇಡೀ ಜಾಗತಿಕ ಮಹಾಕಾವ್ಯ ಪರಂಪರೆಯನ್ನು ಅರಗಿಸಿಕೊಂಡ ಪ್ರಜ್ಞೆಯಲ್ಲಿ ಇದನ್ನು ಬರೆದಿದ್ದಾರೆ. ಅವರು ಜಾಗತಿಕ ಮಹಾಕಾವ್ಯ ಪರಂಪರೆಯನ್ನು ಸ್ವೀಕರಿಸಿದ ಹಾಗೂ ಮೈಗೂಡಿಸಿಕೊಂಡ ಕ್ರಮವನ್ನು ತುಂಬ ವಿನಯದಿಂದ ಹೀಗೆ ಪ್ರಸ್ತಾಪಿಸುತ್ತಾರೆ:

ಹೋಮರಗೆ ವರ್ಜಿಲಗೆ ಡಾಂಟೆ ಮೇಣ್ ಮಿಲ್ಟನಗೆ
ನಾರಣಪ್ಪಂಗೆ ಮೇಣ್ ಪಂಪನಿಗೆ, ಋಷಿವ್ಯಾಸ
ಭಾಸ ಭವಭೂತಿ ಮೇಣ್ ಕಾಳಿದಾಸಾದ್ಯರಿಗೆ,
ನರಹರಿ ತುಲಸಿದಾಸ ಮೇಣ್ ಕೃತ್ತಿವಾಸಾದಿ
ನನ್ನಯ್ಯ ಫಿರ್ದೂಸಿ ಕಂಬಾರವಿಂದರಿಗೆ
ಹಳಬರಿಗೆ ಹೊಸಬರಿಗೆ ಹಿರಿಯರಿಗೆ ಕಿರಿಯರಿಗೆ
ಕಾಲದೇಶದ ನುಡಿಯ ಜಾತಿಯ ವಿಭೇದಮಂ
ಲೆಕ್ಕಿಸದೆ ಜಗತೀ ಕಲಾಚಾರ್ಯರೆಲ್ಲರ್ಗೆ
ಜ್ಯೋತಿಯಿರ್ಪೆಡೆಯಲ್ಲಿ ಭಗವದ್ ವಿಭೂತಿಯಂ
ದರ್ಶಿಸುತೆ ಮುಡಿಬಾಗಿ ಮಣಿದು ಕೈಜೋಡಿಸುವೆನಾಂ.

ಎಂಬ ಈ ವಿನಯೋದ್ಘೋಷದಲ್ಲಿ ‘ರಾಮಾಯಣ ದರ್ಶನಂ’ ಮಹಾಕಾವ್ಯ ಯಾವ ಪರಂಪರೆಯ ಹಿನ್ನೆಲೆಯಲ್ಲಿ ನಿರ್ಮಿತಿಗೊಂಡಿದೆ ಎಂಬುದನ್ನು ಕವಿ ಸೂಚಿಸಿದ್ದಾರೆ.

ಕನ್ನಡದ ಪ್ರತಿಭೆಯ ಒಂದು ವಿಶೇಷವೆಂದರೆ, ಅದು ಮಹತ್ ಪರಂಪರೆಯ ವಸ್ತುಗಳನ್ನೆ ತನ್ನ ಕಾವ್ಯನಿರ್ಮಿತಿಗೆ ಬಳಸಿಕೊಂಡರೂ, ಎಂದೂ ಅವುಗಳನ್ನು ಯಥಾವತ್ತಾಗಿ ಅನುಸರಿಸುವ ಗೊಡವೆಗೆ ಹೋಗದೆ,  ಅವುಗಳನ್ನು ತಮ್ಮ ತಮ್ಮ ಕಾಲದೇಶಾನುಸಾರಿಯಾದ ಯುಗಧರ್ಮದ ವ್ಯಾಖ್ಯಾನ ಕೃತಿಗಳನ್ನಾಗಿ ಮಾಡುತ್ತ ಒಂದು ಬಗೆಯ ಪುನರ್ ಸೃಷ್ಟಿಗಳನ್ನು ನಿರ್ಮಿಸಿದೆ ಎನ್ನುವುದು. ಮೂಲ ವ್ಯಾಸಭಾರತದ ವಸ್ತುವನ್ನು ಪಂಪ-ರನ್ನರು ನಿರ್ವಹಿಸಿದ್ದು ಹೀಗೆ, ಕುಮಾರವ್ಯಾಸ ನಿರ್ವಹಿಸಿದ್ದು ಹೀಗೆ; ವಾಲ್ಮೀಕಿ ರಾಮಾಯಣದ ಕತೆಯನ್ನು, ನಾಗಚಂದ್ರ ಮತ್ತು ಕುವೆಂಪು ನಿರ್ವಹಿಸಿದ್ದು ಹೀಗೆ. ಈ ದೃಷ್ಟಿಯಿಂದ ಕುವೆಂಪು ಅವರ ರಾಮಾಯಣ ದರ್ಶನಂ, ಮೂಲ ರಾಮಾಯಣವು ಇಪ್ಪತ್ತನೆಯ ಶತಮಾನದ ಸಂವೇದನೆಯೊಳಗೆ ಸಂಭವಿಸಿದ ಒಂದು ಪುನರ್ಭವ ಕೃತಿಯಾಗಿದೆ. ಈ ಕುರಿತು ಕುವೆಂಪು ಅವರ

ಪಿಂತೆ
ವಾಲ್ಮೀಕಿಯುಲಿದ ಕತೆಯಾದೊಡಂ ಕನ್ನಡದಿ

ಬೇರೆ ಕತೆಯೆಂಬಂತೆ, ಬೇರೆ ಮೆಯ್ಯಾಂತಂತೆ
ಮರುವುಟ್ಟುವಡೆದಂತೆ ಮೂಡಿದೀ ಕಾವ್ಯಮಂ
ವಿಶ್ವವಾಣಿಗೆ ಮುಡಿಯ ಮಣಿ ಮಾಡಿಹೆನ್
ಎಂದು ಹೇಳಿಕೊಂಡಿದ್ದಾರೆ. ಅಷ್ಟೇ ಅಲ್ಲ ಇದು ಅವರ ಪಾಲಿಗೆ-
‘ಇತಿಹಾಸಮಲ್ತು, ಬರಿ ಕತೆಯಲ್ತು
ಕತೆ ತಾಂ ನಿಮಿತ್ತಮಾತ್ರಂ ಆತ್ಮಕೆ ಶರೀರದೋ-
ಲಂತೆ’.

ರಾಮಾಯಣದ ಕಥಾವಸ್ತು ಪರಂಪರಾಗತವಾಗಿ ಬಂದದ್ದಾದರೂ, ಅವರಿಗೆ ಅದರ ‘ಕೇವಲ ಕತೆ’ಯಾಗಲಿ, ಆ ಕಥೆಗೆ ಹಿನ್ನೆಲೆಯಾದ ಇತಿಹಾಸವಾಗಲಿ ಮುಖ್ಯವಲ್ಲ. ಅದನ್ನು ಕನ್ನಡದಲ್ಲಿ ‘ಬೇರೆ ಕತೆಯೆಂಬಂತೆ’ ‘ಬೇರೆ ಮೈಯಾಂತಂತೆ’, ‘ಮರುವುಟ್ಟು ವಡೆದಂತೆ’ ನಿರ್ವಹಿಸುವುದರಲ್ಲಿಯೇ ಆಸಕ್ತಿ. ಆದುದರಿಂದಲೇ ವಸ್ತು ಸಂವಿಧಾನ, ಭಾಷಾಪ್ರಯೋಗ, ವೈಚಾರಿಕತೆ ಹಾಗೂ ದರ್ಶನದ ದೃಷ್ಟಿಯಿಂದ, ಇದು ಕನ್ನಡ ಮಹಾಕಾವ್ಯ ಪರಂಪರೆಯೊಳಗೇ ಒಂದು ಅನನ್ಯವಾದ ಕೃತಿಯಾಗಿದೆ.

ಕುವೆಂಪು ಅವರ ಪ್ರತಿಭೆಯ ಮುಖ್ಯ ಲಕ್ಷಣಗಳೆಂದರೆ, ಅದಮ್ಯವಾದ ಹಾಗೂ ಗಾಢವಾದ ಪ್ರಕೃತಿ ಪ್ರೇಮ; ವೈಚಾರಿಕತೆ ಮತ್ತು ಅಧ್ಯಾತ್ಮ. ಶ್ರೀರಾಮಾಯಣ ದರ್ಶನಂ ದಲ್ಲಿ ಈ ಮೂರೂ ಮುಪ್ಪುರಿಗೊಂಡಿವೆ. ಮೂಲತಃ ಕಾಡಿನ ಕವಿಯಾದ ಕುವೆಂಪು ಅವರ ರಮ್ಯಾದ್ಭುತ ಅರಣ್ಯಾನುಭವಗಳು ರಾಮಾಯಣ ದರ್ಶನಂ ಕಾವ್ಯದ ತುಂಬ ಕಿಕ್ಕಿರಿದಿವೆ. ಶ್ರೀರಾಮನ ಬದುಕಿನ ಬಹುಭಾಗ ವನವಾಸದಲ್ಲಿ ಕಳೆದ ಕಾರಣದಿಂದ ಕುವೆಂಪು ಅವರಿಗೆ ತಮ್ಮ ಮಲೆನಾಡಿನ ಕಾಡಿನ ದಟ್ಟವಾದ ಅನುಭವಗಳನ್ನು ಅತ್ಯಂತ ವೈವಿಧ್ಯಮಯವಾಗಿ ಅಭಿವ್ಯಕ್ತಿಸಲು ಆ ಕಥಾವಸ್ತು ಸಮೃದ್ಧವಾದ ಅವಕಾಶಗಳನ್ನು ಕಲ್ಪಿಸಿಕೊಟ್ಟಿದೆ. ಹೀಗಾಗಿ ಇಲ್ಲಿನ ಶ್ರೀರಾಮನೂ ಗಿರಿವನ ಪ್ರಿಯ ರಾಮನಾಗಿದ್ದಾನೆ. ಅವನಿಗೆ ‘ದಾರಿದ್ರ್ಯಮಲ್ತೆ ಆ ನಾಗರಿಕ ಜೀವನಂ ಈ ವನ್ಯ ಸಂಸ್ಕೃತಿಯ ಮುಂದೆ’ ಎಂದು ಅನ್ನಿಸುತ್ತದೆ. ಅಷ್ಟೇ ಅಲ್ಲ, ಈ ವನ್ಯ ಸಂಸ್ಕೃತಿಯ ಚೈತನ್ಯಾನುಭವಗಳಿಂದಲೆ ಅವನ ವ್ಯಕ್ತಿತ್ವ ರಸ ಸಂಪುಷ್ಟವೂ, ತತ್ವದರ್ಶಿಯೂ ಆಗಿ ವಿಕಾಸಗೊಳ್ಳುತ್ತದೆ. ತನ್ನ ಬದುಕಿನ ಯಾವ ಹಾಗು ಎಂಥ ಸಂದರ್ಭದಲ್ಲಿಯೂ ಈ ಕಾವ್ಯದ ಶ್ರೀರಾಮ, ರಮ್ಯತೆಯಿಂದ ಮೊದಲ್ಗೊಂಡು ಭವ್ಯಾನುಭೂತಿ ಪ್ರಚೋದಕವಾದ ನಿಸರ್ಗ ಸೌಂದರ್ಯಾನುಭವಗಳಿಗೆ ವಿಮುಖನಾಗುವುದಿಲ್ಲ.

ಇಪ್ಪತ್ತನೆಯ ಶತಮಾನದ ವೈಜ್ಞಾನಿಕ ಯುಗದ ಆಧುನಿಕ ಶಿಕ್ಷಣ ಹಾಗೂ ವಿಪುಲವಾದ ಅಧ್ಯಯನದಿಂದ ಒದಗಿದ ವ್ಯುತ್ಪತ್ತಿಯ ಹಿನ್ನೆಲೆಯಿಂದ, ರಾಮಾಯಣದ ಕತೆಯನ್ನು ಈ ಕಾಲದ ಓದುಗರಿಗೆ ಪುನರ್ ವ್ಯಾಖ್ಯಾನಿಸುವಲ್ಲಿ ಕಂಡು ಬರುವ ವೈಚಾರಿಕತೆ ಈ ಮಹಾಕಾವ್ಯದ ಮತ್ತೊಂದು ವಿಶೇಷತೆಯಾಗಿದೆ. ರಾಮಾಯಣ ನರೋತ್ತಮನಾದ ಶ್ರೀರಾಮನ ಚರಿತೆಯಾದರೂ, ಆತ ಧರ್ಮಸಂಸ್ಥಾಪನೆಗಾಗಿ ಸಂಭವಿಸಿದ ಮಹಾವಿಷ್ಣುವಿನ ಒಂದು ಅವತಾರ ಎಂಬ ಕಲ್ಪನೆ, ಜನಮನದಲ್ಲಿ ಬೆಳೆದು ಬಂದಿದೆ. ಕುವೆಂಪು ಅವರು ಶ್ರೀರಾಮನನ್ನು ಅಸಾಮಾನ್ಯನೆಂಬಂತೆ ಚಿತ್ರಿಸಿದರೂ, ಆತನು ಒಬ್ಬ ಅವತಾರ ಪುರುಷನೆಂಬ ಕಲ್ಪನೆಯನ್ನು ವಿಮರ್ಶಿಸುತ್ತ-

ಜನಮನಮೆ
ಯುಗ ಶಕ್ತಿಯಲ್ತೆ? ತಾನಾ ಶಕ್ತಿ ಮೂರ್ತಿಗೊಳೆ
ನಾಮದನ್ನವತಾರಮೆಂದು ಪೂಜಿಪೆವಲ್ತೆ ಪೇಳ್
ವ್ಯಷ್ಟಿ ರೂಪದಿನ್ ಇಳಿವ ಸೃಷ್ಟಿಯ ಸಮಷ್ಟಿಯಂ?

ಎಂದು ‘ಅವತಾರ’ದ ಕಲ್ಪನೆಯನ್ನು ಮನಸ್‌ಶಾಸ್ತ್ರೀಯವಾಗಿ ವ್ಯಾಖ್ಯಾನಿಸುತ್ತಾರೆ. ಒಂದೊಂದು ಕಾಲದ ಜನಸಮಷ್ಟಿಯ ಆಶೋತ್ತರಗಳೇ ಯುಗಶಕ್ತಿಯಾಗಿ, ಮಹಾವ್ಯಕ್ತಿಗಳ ಹುಟ್ಟಿಗೆ ಕಾರಣವಾಗುತ್ತದೆ. ಹೀಗೆ ಸಮಷ್ಟಿಯ  ಪ್ರತಿನಿಧಿಯಾಗಿ ಕಾಣಿಸಿಕೊಳ್ಳುವ ಮಹಾವ್ಯಕ್ತಿಗಳನ್ನೆ ನಾವು ‘ಅವತಾರ’ ಎನ್ನುತ್ತೇವೆ. ಈ ಅರ್ಥದಲ್ಲಿ ಶ್ರೀರಾಮನು ತ್ರೇತಾಯುಗದ ಜನಮನಸ್ಸಿನ ಅಭೀಪ್ಸೆಯ ಪರಿಣಾಮವಾಗಿದ್ದಾನೆ- ಎಂದು ಕುವೆಂಪು ವ್ಯಾಖ್ಯಾನಿಸುವ ಕ್ರಮ ವಿಶಿಷ್ಟವಾಗಿದೆ. ಹಾಗೆಯೇ ಶ್ರೀರಾಮನ ಮಹತ್ತು ಇರುವುದು ಬಹುಮಂದಿ ಭಾವಿಸಿರುವಂತೆ, ಆತ ಲೋಕಕಂಟಕನಾದ ರಾವಣನನ್ನು ವಧಿಸಿದ ಕಾರಣದಲ್ಲಿ ಅಲ್ಲ,-ಎನ್ನುತ್ತಾರೆ. ಕುವೆಂಪು. ಅವರು ಹೇಳುತ್ತಾರೆ-

‘…….ಕೊಂದ ಕತದಿಂ ಪೆರ್ಮನಾದನೆ
ರಾಮ?’(ಕೇವಲ ರಾಣಣನನ್ನು ಕೊಂದನೆಂಬ ಕಾರಣದಿಂದ ದೊಡ್ಡವನಾದರೆ ರಾಮ?-ಅಲ್ಲ.)

ಆ ಮಾತನುಳಿ, ಪಗೆಯೆ? ತೆಗೆ ತೆಗೆ.
ಪೆರ‍್ಮೆಗೊಲ್ಮೆಯೆ ಚಿನ್ಹೆ. ಮಹತ್ತಿಗೇಂ  ಬೆಲೆಯೆ
ಕೊಲೆ? ದೈತ್ಯನ ಗೆಲಿದ ಕಾರಣಕಲ್ತು
ತನ್ನ ದಯಿತೆಯನೊಲಿದ ಕಾರಣಕೆ ಗುರುಕಣಾ
ರಾಮಚಂದ್ರಂ.

ಎನ್ನುತ್ತಾರೆ ಕುವೆಂಪು. ಮೂಲತಃ ರಾಮಾಯಣ ಅನನ್ಯವಾದ ಪ್ರೇಮದ ಕತೆ. ರಾಮನ ಮಹತ್ತು ವ್ಯಕ್ತವಾಗುವುದು, ಆತ ರಾವಣನನ್ನು ಕೊಂದನೆಂಬ ಕಾರಣದಲ್ಲಿ ಇಲ್ಲ; ಅದು ಇರುವುದು ತನ್ನ ಸತಿಯಾದ ಸೀತೆಯ ಬಗ್ಗೆ ಅವನು ಇರಿಸಿಕೊಂಡ ಆದಮ್ಯವಾದ ಒಲವಿನಲ್ಲಿ. ಸೀತೆಯ ವಿಚಾರದಲ್ಲಿ ಮಾತ್ರವಲ್ಲ, ಯಾರ ನಡವಳಿಕೆಯ ವಿಚಾರದಲ್ಲಿಯೂ ಶ್ರೀರಾಮ ಅಪ್ರಿಯವಾಗಿ ವರ್ತಿಸುವುದಿಲ್ಲ. ತಾನು ರಾಜ್ಯ ತ್ಯಾಗ ಮಾಡಿ ವನವಾಸಕ್ಕೆ ತೆರಳಲು ಕಾರಣಳಾದ ಮಂಥರೆಯಿಂದ ಹಿಡಿದು, ತನ್ನ ಮಡದಿಯನ್ನು ಕದ್ದೊಯ್ದ ರಾವಣನನ್ನೂ ಒಳಗೊಂಡಂತೆ, ಎಲ್ಲರ ವಿಚಾರದಲ್ಲೂ  ಕರುಣೆ-ಅನುಕಂಪಗಳನ್ನು ವರ್ಷಿಸುವಷ್ಟು ಉದಾರವಾಗಿದೆ ರಾಮನ ಹೃದಯ. ಪೆರ‍್ಮೆಗೆ ಅಥವಾ ದೊಡ್ಡತನಕ್ಕೆ ಒಲ್ಮೆಯೇ ಚಿನ್ಹೆ ಎಂಬುದನ್ನು ಆತ ತನ್ನ ನಡವಳಿಕೆಯಲ್ಲಿ ಆಚರಿಸಿ ತೋರಿಸುತ್ತಾನೆ.

ಕುವೆಂಪು ತಮ್ಮ‘ರಾಮಾಯಣ ದರ್ಶನಂ’ದಲ್ಲಿ ಚಿತ್ರಿಸಿರುವ ಸೀತೆಯ ಅಗ್ನಿಪ್ರವೇಶದ ಸಂದರ್ಭ, ಈ ಶತಮಾನದ ವೈಚಾರಿಕತೆಗೆ ಒಡ್ಡಿದ ಸಮರ್ಥವಾದ ಪ್ರತೀಕವಾಗಿದೆ. ಸೀತೆಯ ಅಗ್ನಿಪ್ರವೇಶದ ಸಂದರ್ಭ, ಅತ್ಯಂತ ಸೂಕ್ಷ್ಮವೂ ವಿವಾದಗ್ರಸ್ಥವೂ ಆಗಿದೆ. ರಾವಣನಿಂದ ಅಪಹೃತಳಾಗಿ ಅಶೋಕವನದಲ್ಲಿದ್ದ ಸೀತೆಯ ಶೀಲವನ್ನು, ರಾವಣವಧೆಯ ನಂತರ ಶಂಕಿಸಿದ ಶ್ರೀರಾಮನ ನಡವಳಿಕೆ, ಪ್ರಶ್ನಾರ್ಹವಾಗಿರುವುದು ಮಾತ್ರವಲ್ಲ, ಪುರುಷಪ್ರಧಾನ ಸಾಮಾಜದ ಈ ದೇಶದ ಗಂಡು, ಹೆಣ್ಣನ್ನು ನಡೆಯಿಸಿಕೊಳ್ಳುವ ಅಮಾನವೀಯವಾದ ನಿಲುವಿಗೆ ಒಂದು ಸಾಕ್ಷಿಯಾಗಿದೆ. ಕುವೆಂಪು ಈ ಸಂದರ್ಭವನ್ನು ನಿರ್ವಹಿಸುವಲ್ಲಿ, ಎಲ್ಲ ವಿವರಗಳೂ ಮೂಲ ರಾಮಾಯಣದ ಕತೆಯೊಳಗಿದ್ದಂತೆಯೆ ಇರಿಸಿಕೊಂಡೂ, ಅತ್ಯಂತ ಮಹತ್ವದ ಬದಲಾವಣೆಯೊಂದನ್ನು  ಮಾಡಿಕೊಳ್ಳುವುದರ ಮೂಲಕ, ಇಡೀ ಸನ್ನಿವೇಶದ ಸತ್ವವನ್ನೇ-ಮಾರ್ಪಾಡು ಮಾಡಿದ್ದಾರೆ. ಅದೇನೆಂದರೆ, ಸೀತೆ ಅಗ್ನಿಪ್ರವೇಶವನ್ನು ಮಾಡುತ್ತಿದ್ದ ಹಾಗೆಯೆ ಶ್ರೀರಾಮನು ತಾನೂ ಅಗ್ನಿಯನ್ನು ಅವಳ ಜತೆಗೇ ಪ್ರವೇಶಿಸಿ, ಸೀತೆಯೊಂದಿಗೆ ತನ್ನನ್ನೂ ಒಳಗುಪಡಿಸಿಕೊಂಡು, ಸೀತೆಯ ಜತೆಗೆ ಕೈ ಹಿಡಿದುಕೊಂಡು ಹೊರಕ್ಕೆ ಬರುತ್ತಾನೆ. ಎಂದರೆ ಶೀಲದ ಪರೀಕ್ಷೆಗೆ ಒಳಗಾಗುವ ಸಂದರ್ಭ ಬಂದಾಗ, ಹೆಣ್ಣಿನ ಹಾಗೆಯೇ ಗಂಡೂ ಆ ಪರೀಕ್ಷೆಗೆ ಒಳಗಾಗತಕ್ಕದ್ದು, ಸಾಮಾಜಿಕ ನ್ಯಾಯದ ದೃಷ್ಟಿಯಿಂದ ಶ್ರೇಷ್ಠವಾದದ್ದು. ಗಂಡಾದವನು ಹೆಣ್ಣನ್ನು ಶಂಕಿಸಲು ಅಧಿಕಾರವಿರುವುದಾದರೆ, ಹೆಣ್ಣಿಗೂ ಗಂಡನ್ನು ಶಂಕಿಸಲು ಅಧಿಕಾರವಿರಬೇಕು. ಹಾಗಿದ್ದರೇ ಅದು ದಾಂಪತ್ಯ; ಅದು ಸಮಾನತೆ; ಅದು ನಿಜವಾದ ಪ್ರೇಮ. ಇಷ್ಟೂ ಸಂಗತಿಗಳನ್ನೂ ಸೀತೆಯ ಅಗ್ನಿಪ್ರವೇಶದ ಸಂದರ್ಭವನ್ನು ಕುವೆಂಪು ಅವರು ಚಿತ್ರಿಸಿರುವ ಕ್ರಮ ಒಳಗೊಳ್ಳುತ್ತದೆ.

ಕುವೆಂಪು ತಮ್ಮ ಈ ಮಹಾಕಾವ್ಯಕ್ಕೆ ‘ಶ್ರೀ ರಾಮಾಯಣ ದರ್ಶನಂ’ ಎಂದು ಕರೆದಿದ್ದಾರೆ. ಎಂದರೆ ರಾಮಾಯಣದ ಮೂಲಕ ಕುವೆಂಪು ತಾವು ಕಂಡ ‘ದರ್ಶನ’ವೊಂದನ್ನು ಚಿತ್ರಿಸಿದ್ದಾರೆ. ಈ ಜಗತ್ತು ವ್ಯಕ್ತಿಯ ಆತ್ಮವಿಕಾಸಯಾತ್ರೆಯ ಒಂದು ಪಥ. ಈ ದೃಷ್ಟಿಯಿಂದ ಕುವೆಂಪು ರಾಮಾಯಣದ ಪ್ರತಿಯೊಂದು ಪಾತ್ರವೂ ತಮ್ಮ ಜನ್ಮೋದ್ದೇಶ ಸಾಧನೆಯ ಪಾರಿಣಾಮಕ ಪಥದೊಳಗಿನ ಸಾಧಕರೇ. ಅಹಲ್ಯೆ, ಮಂಥರೆ, ಶಬರಿ, ಕೈಕೆ, ಸಂಪಾತಿ, ರಾವಣ, ಅಷ್ಟೆ ಅಲ್ಲ, ಸೀತೆ ಹಾಗೂ ಶ್ರೀರಾಮ-ಈ ಎಲ್ಲರೂ ಸಾಧಕರೇ. ಶ್ರೀರಾಮನ ವನವಾಸ ಪ್ರಯಾಣವೇ ಅನೇಕ ಸಾಧಕರ ತಪಸ್ಸಿದ್ಧಿಗೆ ಕಾರಣವಾಗಿದೆ; ಹಾಗೆಯೆ ಶ್ರೀರಾಮನೇ ತನ್ನ ಸ್ವಸ್ವರೂಪವನ್ನು ಸಾಕ್ಷಾತ್ಕರಿಸಿಕೊಳ್ಳುವ ಒಂದು ವಿಧಾನವೂ ಆಗಿದೆ. ಮಂಥರೆಯ ನೆಪದಿಂದ, ಸಂಭವಿಸಿದ, ಮೇಲು ನೋಟಕ್ಕೆ ಒಂದು ‘ದುರ್ಘಟನೆ’ಯೆಂಬಂತೆ ತೋರುವ, ರಾಮನ ರಾಜ್ಯ ಪರಿತ್ಯಾಗ ಹಾಗೂ   ಮುಂದಿನ ವನವಾಸಕ್ಲೇಶಗಳಿಗೆ ಕಾರಣವಾದ ಒಂದು ಅಚಾತುರ್ಯ, ಅನೇಕರ ಅಭ್ಯುದಯಕ್ಕೆ ಮತ್ತು ಕರ‍್ಮಕ್ಷಯಕ್ಕೆ ಕಾರಣವಾಯಿತು ಎಂಬ ‘ಹೊಸ ನೋಟ’ವೊಂದು ಸೀತೆಯ ಮಾತಿನ ಮೂಲಕ ಅಭಿವ್ಯಕ್ತವಾಗಿದೆ. ರಾಮ-ರಾವಣರ ಮಹಾಸಂಗ್ರಾಮ ಅತ್ತ ನಡೆಯುತ್ತಿರುವ ಸಂದರ್ಭದಲ್ಲಿ, ಅಶೋಕವನದೊಳಗಿದ್ದ ಸೀತೆ, ತ್ರಿಜಟೆಯನ್ನು ಕುರಿತು ಹೀಗೆ ಹೇಳುತ್ತಾಳೆ:

ನಿನಗೊಂದನೊರೆದಪೆನು ಎನಗೊದಗಿದೊಂದು
ನವ್ಯ ಸಾಕ್ಷಾತ್ಕಾರಮಂ, ಆವುದಾಗಲಿ ನೆಪಂ
ಫಲದಾಯಕಂ ತಪಂ. ನನಗೆ, ರಘುನಾಥಂಗೆ
ಮೇಣ್ ರಾಕ್ಷಸೇಂದ್ರನಿಗೆ, ಮೂವರ‍್ಗಂ ಅವರವರ
ಕರ‍್ಮಾನುಸಾರಿ ಜನ್ಮೋದ್ದೇಶ ಸಾಧನೆಗೆ
ಮೇಣಾತ್ಮ ವಿಕಸನದ ಪರಿಣಾಮ ಸಿದ್ಧಿಗೆ
ಸಹಾಯಮಾದುದು ಮಂಥರೆಯ ಮೂಲದೀ ಬೃಹದ್
ದುರ್ಘಟನೆ. ಇನ್ನೆನಿತು ಜೀವರಿಗೆ ತಂತಮ್ಮ
ಕರ‍್ಮಕ್ಷಯಕೆ ಮತ್ತೆ ಧರ‍್ಮಾಭ್ಯುದಕಿದು
ನಿಮ್ಮಿತ್ತಮಾದಪುದೊ ಪೇಳ್ವರಾರ್?

ಎಂದು. ಇದು ರಾಮಾಯಣ ದರ್ಶನದ ಕಾಣ್ಕೆ. ಜಗತ್ತನ್ನು ನಿಯಂತ್ರಿಸುವ ವಿರಾಟ್ ಮನದ ಸಂಕಲ್ಪ, ಅನೇಕರ ಆತ್ಮೋದ್ಧಾರಕ್ಕೆ ತನ್ನದೇ ಆದ ತಂತ್ರವನ್ನು ರೂಪಿಸುತ್ತದೆ. ಈ ಆತ್ಮೋದ್ಧಾರ ವ್ಯಕ್ತಿಯ, ಮೂಲಸ್ವಭಾವದ ಕ್ರಮಬದ್ಧವಾದ ಪರಿವರ್ತನೆಯ ಮೂಲಕ ಸ್ಫುಟವಾಗುತ್ತದೆ. ತನ್ನ ಸ್ವಭಾವದೊಳಗಿನ ದೌರ್ಬಲ್ಯಕ್ಕೆ ವಶನಾಗಿ, ಸೀತೆಯನ್ನು ಕದ್ದು ತಂದ ರಾವಣನು, ಸೀತೆಯ ಹೆಣ್ತನದ ಘನತೆಯ, ಪಾವಿತ್ರ್ಯದ ಹಾಗೂ ಪಾತಿವ್ರತ್ಯದ ಮಹಿಮೆಯಿಂದ, ತನ್ನ ಸ್ವಭಾವದಲ್ಲಿ ಮಾರ್ಪಾಡುಹೊಂದಿ, ಸೀತೆಯ ಬಗೆಗಿದ್ದ ಅವನ ‘ಕಾಮ’ ಭಾವನೆಯು ಕ್ರಮೇಣ ಪವಿತ್ರವಾದ ‘ಪ್ರೇಮ’ವಾಗಿ ಪರಿವರ್ತಿತವಾಗುವ ಅದ್ಭುತವನ್ನು ಕುವೆಂಪು ಈ ಕೃತಿಯಲ್ಲಿ ಚಿತ್ರಿಸಿ ರಾವಣನ ಪಾತ್ರವನ್ನು ಉದಾತ್ತವನ್ನಾಗಿ ಮಾಡಿದ್ದಾರೆ; ಹಾಗೆಯೆ ರಾವಣನನ್ನು ರಾಮನ ಘನತೆಗೆ ತಕ್ಕ ಪ್ರತಿನಾಯಕನನ್ನಾಗಿ ಚಿತ್ರಿಸಿದ್ದಾರೆ.

ಜಾಗತಿಕ ಮಹಾಕಾವ್ಯ ಪರಂಪರೆಯ ಪ್ರಜ್ಞೆಯಿಂದ ಕನ್ನಡದ ಆಧುನಿಕ ಮಹಾಕಾವ್ಯ ಪರಂಪರೆಯೊಂದನ್ನು ಪ್ರಾರಂಭಿಸಿದ, ಶ್ರೀರಾಮಾಯಣ ದರ್ಶನಂ, ಸೃಷ್ಟಿಯಾಗಿ ಆಗಲೇ ನಾಲ್ಕು ದಶಕಗಳು ಉರುಳಿವೆ. ಆದರೆ ಈ ಮಹಾ ಕೃತಿಯ ಸಮಗ್ರವಾದ ಆಧ್ಯಯನ ಹಾಗೂ ವಿಮರ್ಶೆ ಇನ್ನೂ ನಡೆಯಬೇಕಾದ ಕಾರ್ಯವಾಗಿದೆ.

– ೧೯೯೨