ಅತ್ತೀಮನಿಗೆ ಸೊಸಿ ಬಂದಳ
ಬಾಳಪ್ರೀತೀಲಿ ಬಾಳೆವ ಮಾಡ್ವದಕೆ           ||೧||

ಅತ್ತಿಕೊಲ್ಲಲಿಕೆ ಬೇತ ಮಾಡತಳ
ಮನ್ಯಾನ ವೈವಟ ನೋಡಾಕೆ                 ||೨||

ಮುಪ್ಪಾನ ಮುದಕೀ ಮುಂಜಾಲೆಯೆದ್ದು
ನೂಲಕ ಕುಂತಳ ಕೋಣ್ಯಾಗೆ                 ||೩||

ಸೊಸೆ ಹರಕೀಗೂಡಿತು ಎಂದೂ |
ಬಂದಾಳತ್ತಿಯ ಹಂತ್ಯಾಕೇ          ||೪||

ಗಂಡ ಹೊಲಕ ಹೂಡಾಕ ಹೋಗಿದ್ದ |
ಮನ್ಯಾಗ್ಯಾರಿಲ್ಲ ಯಾಳ್ಯಾಕೇ                  ||೫||

ಬಡಬಡ ಬಂದೂ ಅಂಗಾತ ಕೆಡವೀ |
ಯೆದಿ ಮೇಲೆ ಕುಂತಾಳ ಕ್ಷಣಕ                ||೬||

ಅತ್ತಿ ಅನ್ನತಾಳ ಹೀಂಗ್ಯಾಕ |
ಬಂದಿದಿ ಜೀವಾ ಕೊಲ್ಲಾಕೇ          ||೭||

ಕೊಲ್ಲಬ್ಯಾಡ ನಿನ್ನ ಕಾಲ ಬೀಳತೀನೀ ||
ಜಿಂದಗೆನ ಕೊಡತಿನಿ ವೈವಟಕೇ              ||೮||

ಅಷ್ಟ ಹೇಳಿದ್ರ ಬರಲಿಲ್ಲ ಕರಣಾ |
ಕುಂತಳ ಕುತಗೀ ಮುರಿಯಾಕ                ||೯||

ಬಾಯಿ ಮಾಡಾಳಂತ ಬಾಯ್ತುಂಬ ಅಳ್ಳಿಯ |
ತುರ್ಕುತಾಳ ಗಂಟಲ ತನಕಾ                 ||೧೦||

ಗಂಡ ಬಂದ ಸುದ್ದೀ ಕೇಳ್ಯಾಳ |
ಮನಿಮಾರ ಮಾರಟ ಮಾಡ್ತಾಳ್ರೀ            ||೧೧||

ಈಗ ಸದ್ಯಕ್ ತಿಂತಾಳ ಕೋಣ್ಯಾಗ |
ಕರದೆ ಎದ್ದು ತೋರ‍್ಯಾಳ ಗಂಡಾಗ           ||೧೨||

ಮಗ್ಗಕಂಡಿ ತಾಯಿ ಸೊನ್ನಿ ಮಾಡತಳ |
ಬಾಯಾನಳ್ಳೀ ತಗಿಯಾಕ           ||೧೩||

ತಾಯಿ ಮಾಡಿದ್ ಸೊನ್ನಿ ಮಗ್ಗ ತಿಳೀಲಿಲ್ಲ |
ಹೆಂಡ್ತಿಗೆ ಕೇಳ್ತಾನಾವಾಗ             ||೧೪||

ಹೆಣ್ತಿ ಅನ್ನತಳ ಇನ್ನಷ್ಟ ಅಳ್ಳೀ |
ತುಂಬಂತಾಳ ಬಾಯಾಗ           ||೧೫||

ಕಳ್ಳ ನನ್ನ ಸಂವ್ತಿ ಹಾಳ ಮಾಡತಾಳು |
ಹೊತಗೊಂಡ ಹೋಗ ಚಲ್‌ಬಾವ್ಯಾಗ                  ||೧೬||

ಆಗ ಹೆಂಡ್ತಿಯಾ ಮಾತ ಕೇಳಿ |
ತಾಯಿಗೆ ಕಟ್ಯನ ಕಂಬಳ್ಯಾಗ                 ||೧೭||

ತಡಾಯಿಲ್ಲದೇ ಬಡಬಡ ಬಂದವ |
ತಾಯಿಗೆ ವಗದನು ಬಾವ್ಯಾಗ                 ||೧೮||

ತಾಯಿ ಮಾಡ್ದಪುಣ್ಯಾವದಗಿ ಬಂದೈತಿ |
ಮಾದೇವ್ರು ಇಳ್ದಾರು ಬಾವ್ಯಾಗ               ||೧೯||

ಬಾವ್ಯಾದ ಹೆಣಾ ಕಡೀಗ ತೆಗದ |
ಮುದ್ಕ್ಯನ ಕೇಳ್ತಾರಾವಾಗ           ||೨೦||

ನಿನ್ನ ಹೊಟ್ಟೆಮಗ ನಿನ್ಗ ಮುನದನಾ |
ಯಿನ್ನ ಹೋಗಬೇಡಾ ನಿಮ್ಮನಿಗ              ||೨೧||

ಕೊಡ್ವಾನ ರುಪಾಯ ಕೊಡ್ತೆನಿ ಮಗಳಾ |
ಬೇಕಾದ್ದ ಕೊಂಡುಣ್ಣಡವ್ಯಾಗ                  ||೨೨||

ಶಿವಕೊಟ್ಟ ಹೋದ ಕೈಲಾಸ್ಗೆ |
ಮುದ್ಕಿ ಅಕಲ ಹಾಕತಾಳ ಹ್ಯಾಂಗ            ||೨೩||

ವಯ್ದ ಕೊಡ್ಬೇಕು ನನ್ನ ಮಗನೀಗೆ |
ಡೌಲನ್ನ ಆಗ್ಲಿ ಊರಾಗ              ||೨೪||

ಹೊತ್ಕೊಂಡು ಬಂದ್ಲು ಆವಾಗ |
ಸೊಸಿ ನೋಡಿ ಹೇಳ್ತಾಳ ಗಂಡಂಗೆ           ||೨೫||

ಮತ್ತೆ ದಿಮ್ಯಾಗೆ ಬರತಾಳ ನಮಗ |
ಹೊಡಿ ಕತ್ತರ‍್ಸಿ ಬೀಳುವ ಹಾಂಗ               ||೨೬||

ಆಗೆ ಹೆಂಡ್ತಿಯಾ ಮಾತ ಕೇಳೀ |
ತಾಯಿಗೆ ಹೊಡೆದನು ಬಲ್ಲಾಂಗ               ||೨೭||

ಹೊಡಿಬ್ಯಾಡ ಮಗನೇ ಕಾಲಬೀಳ್ತೀನೇ |
ಗಂಡ ಹೊಡ್ಯದೂ ಸೊಸಿ ಬಿಡ್ಸಿಕಂಡು
ಅತ್ಯವ್ಳ ಕೇಳ್ತಾಳಾವಾಗ             ||೨೮||

ಕೊಡಪಾನ ಹೊನ್ನೂ ಯಾವಲಿತಂದ್ರೀ ? |
ವತಾರ ಮಾಡಿ ಹೇಳವ್ರ ನನಗೆ               ||೨೯||

ಅಯ್ಯ ನನ್ನ ಸೊಸಿಯೇ ನಾ ಬಿದ್ದ ಬಾವ್ಯಾಗ |
ಕೊಡ್ದಾನೈದವು ಬಲ್ಲಾಂಗ           ||೩೦||

ಅಯ್ಯ ನನ್ನ ಗಂಡಾ, ನನಗೂ ವಗ್ಯನಡಿ |
ಅತ್ತಿಯ ವಗಿದ ಬಾವ್ಯಾಗ            ||೩೧||

ಹಂಡಿವ ರುಪಾಯ ಬಡಕೊಂಡು ಬರತಿನಿ |
ದೌಲೋ ರಾಗುವನು ಊರಾಗ               ||೩೨||

ಆಗ ಹೆಂಡ್ತಿಯಾ ಮಾತಾ ಕೇಳಿ |
ಹೆಂಡ್ತಿಗೆ ಕಟ್ಯಾನ್ ಕಂಬ್ಳ್ಯಾಗ್                 ||೩೩||

ತಡಾಯಿಲ್ಲದೇ ಬಡಬಡ ಬಂದೂ |
ಯೆತ್ತಿ ಹಾಕ್ಯನೂ ಬಾವ್ಯಾಗ                   ||೩೪||

ಹುಡ್ಗವಗದ ನಿಂತ ಭಾದೂರಾ |
ವಗ್ದ ಹುರುಪಿಗೆ ಕುಡ್ದಾಳ ನೀರಾ               ||೩೫||

ಮುಣಮುಣ್ಗೆ ಮಾಡ್ತಾಳವಸರಾ |
ಗಂಡಾಗ ತಿಳಿತ ಮಜಕೂರ                   ||೩೬||

ಅಷ್ಟ್ಯಾಕ ಬಿಡವಿದೀ ಬೋರಾ |
ಸಣದೊಂದು ತಕಂಡ ಬರ ಹಗರಾ           ||೩೭||

ಮುಣ್ಗಿದ ನಾರೀ ಮ್ಯಾಲಕೇಳಲಿಲ್ಲಾ |
ತಾಯಿಗೆ ಕೇಳ್ತಾನಾವಾಗ            ||೩೮||

ತಾಯಿ ಯನ್ನತಾಳ “ಹೊನ್ನ ಬಳೀತಾಳೋ |
ಗುರಳಿಯ ಬಿಡತಳ ನೀರಾಗ                  ||೩೯||

ಬಿದ್ದ ಮೂರ ದಿನ್ಕ ಬರತಾಳೊ ಮಗನೇ |
ಕರಕೊಂಡ್ ಹೋಗ್ಬೇಕು ನಮ್ಮನಾ           ||೪೦||

ಅತ್ತಿಮ್ಯಾಗ ಸೊಸಿ ತಿರಗಿ ಬಿದ್ದರೇ |
ಮೋಕ್ಷದಾರಿ ಅವರೀಗಿಲ್ಲಾ           ||೪೧||

ಮಾಡಿದಕಿ ಉಣತಾಳ ಮಣಿಯಂತ ಕಡಬೂ |
ಇದೆಯೇನ ಮಾತೇನ ಸುಳ್ಳಲ್ಲಾ              ||೪೨||

ಬಂಗಾರ ಊರು ರಂಗಲಾಲಾ |
ಸಣ್ಣ ಹುಡಗ ತುಕಾರಾಮ ಬಾಲ              ||೪೩||

ಅವ ತಗಿದನು ಹಾಡೀನ ಕಲಾ |
ಬಲಭೀಮನ ದಯಾದ ಮ್ಯಾಲ               ||೪೪||

ಪಾಠಾಂತರಗಳು ಮತ್ತು ಸಮಾನ ಆಶಯದ ಪಠ್ಯಗಳು :

೧. ಅತ್ತೆ ಸೊಸೆ; ಲಿಂಗಯ್ಯ ಡಿ. ಕರ್ನಾಟಕ ಜನಪದ ಕಾವ್ಯಗಳು, ದಿನಕರ ಪ್ರಕಾಶನ ಬೆಂಗಳೂರು – ೧೮೭೬ ಪು.ಸಂ.

೨. ಸತ್ಯವಂತೆ ಹಡೆದವ್ವ; ಜಯಲಕ್ಷ್ಮಿ ಸೀತಾಪುರ, ನಮ್ಮ ಸುತ್ತಿನ ಜನಪದ ಕಥನಗೀತೆಗಳು, ಕರ್ನಾಟಕ ಜಾನಪದ ಮತ್ತು ಯಕ್ಷಗಾನ ಅಕಾಡೆಮಿ, ಬೆಂಗಳೂರು – ೧೯೯೪ ಪು.ಸಂ. ೬೯-೭೧.*      ಮಾಡಿದಾಕಿ ಉಣತಾಳ ಮಣಿಯಂತ ಕಡಬೂ; ಹೆಗಡೆ ಎಲ್.ಆರ್. ಲೋಕಗೀತ ಮಂಜರಿ ಪ್ರಾದೇಶಿಕ ರಂಗಕಲೆಗಳ ಕೇಂದ್ರ ಉಡುಪಿ ೨೦೦೨, ಪು.ಸಂ. ೩೪-೩೬.