ಸವದತ್ತಿ ದಾರಿಲೆ ಶರಣೀಯ ಕಂಡಿರೆ
ಸರಮುತ್ತ ಆಕಿ ಕೊರಳಾಗ | ಕರಿಯಲ್ಲ
ಶರಣಿಯ ಕಂಡಿರೆ ಗಿರಿಯಾಗ        ೧

ಗಿರಿಯೊಂದು ಹತ್ತ್ಯಾಳ ತಿರುಗೊಮ್ಮೆ ನೋಡ್ಯಾಳ
ಹಿರಿಯ ಮೈಲಾರ ಗಿರಿದೂರ | ಉಗರಗೊಳ್ಳ
ಹರನೊಳ್ಳೆವೆಂದು ನೆನೆದಾಳ        ೨

ಎಲ್ಲವ್ವ ಅನ್ನುವಾಕಿ ದಲ್ಲಾಳಗಿತ್ತೆವ್ವ
ಎಲ್ಲರಿಗೆ ಬೇವ ಉಡಿಸ್ಯಾಳ | ಗಂಡಸರಿಗೆ
ಸಾಗಿ ಗುಡ್ಡಕ ನಡಿಸ್ಯಾಳ   ೩

ವಾಸುಳ್ಳ ಹುಡುಗನ್ನ ಮೀಸಿಯ ತೆಗಿಸ್ಯಾಳ
ಕಾಶಿ ನಡಕಟ್ಟ ಬಿಡಿಸ್ಯಾಳ | ಕರಿಯಲ್ಲ
ರೇಶಿಮೆ ಸೀರಿ ಉಡಸ್ಯಾಳ ೪

ತೋಳಿಗೆ ಕುಬ್ಬಸ ತೊಡಿಸ್ಯಾಳ ಕರಿಯಲ್ಲ
ಕೈಯಿಗೆ ಬಳಿಯ ಇಡಸ್ಯಾಳ | ಹಡದವ್ವ
ಕಾಲಿಗೆ ಗೆಜ್ಜಿ ಕಟ್ಟಿಸ್ಯಾಳ    ೫

ನಡವಿಗೆ ಒಡ್ಯಾಣ ಇಡಸ್ಯಾಳ ಜಗದಂಬ
ಕೊರಳಿಗೆ ಕವಡಿ ಹಾಕಿಸ್ಯಾಳ | ಕರಿಯೆಲ್ಲ
ಮೂಗಿಗೆ ನೆತ್ತ ಇಡಸ್ಯಾಳ   ೬

ಹಣಿಗೆ ಭಂಡಾರ ಧರಿಸ್ಯಾಳ ರೇಣುಕಾ
ಕುಂಕುಮ ಬಟ್ಟ ಇಡಸ್ಯಾಳ | ಎಲ್ಲಮ್ಮ
ಚಂದುಳ್ಳ ಕೊಡವ ಹೊರಸ್ಯಾಳ     ೭

ದೇಶದ ಮೇಲೆ ಮೆರಿಸ್ಯಾಳ ಕರಿಯೆಲ್ಲ
ಗಂಡ ಹೆಂಡರನ ಬಿಡಿಸ್ಯಾಳ | ಭಂಡಾಟ
ತಂಟೆಯನೆಲ್ಲ ಹರಿಸ್ಯಾಳ  ೮