ಮೂಡು ಮುಂದಾಗಿ ಹೂಡ್ಯಾವೆ ಹೊನ್ನಾರು
ಹೂಡುತಲೆ ಕಂಡೆವಿದ ನಾವು
ಬಡಗು ಮುಂದಾಗಿ ನಡೆದಾವೆ ಹೊನ್ನಾರು
ನಡಿಯುತಲೆ ಕಂಡೆವಿದ ನಾವು

ದ್ಯಾವಮ್ಮನ ಬೆಡಗಿನ ಮಲ್ಲಿಗೆ ರವಿಕೆಯ
ಅಕ್ಕಿ ಕುರುಗಾಡ ಬತ್ತ ಕುರುಗಾಡ
ಹೊಕ್ಕೋಳು ಹೊನ್ನಿನ ಕುರುಗಾಡ ದ್ಯಾವಮ್ನ
ಚೊಚ್ಚಲು ಮಗನ ಮದವಿಗೆ

ಬೇಳೆ ಕುರುಗಾಡ ಬೆಲ್ಲ ಕುರುಗಾಡ
ನಾಗೋಳು ಹೊನ್ನಿನ ಕುರುಗಾಡ ದ್ಯಾವಮ್ನ
ಮಹದಾ ಮಗನ ಮದುವಿಗೆ

ಪಾರ್ವತಿ ದ್ಯಾವಮ್ನ ಧಾರೆಗಡಗವನಿಕ್ಕಿ
ಹೋಗಿ ಕೂರಿಗೆ ಹೊಡೆದಾರೆ ಈ ಊರು
ಎಪ್ಪತ್ತು ಬೆಳೆವ ಬಯಲಾಗೆ

ಪಾರ್ವತಿ ದ್ಯಾವಮ್ನ ಓಲೆಯ ಕಿವಿ ಮೇಲೆ
ಗಾಲಿಯ ಹೂಡಿದಾನೆ ಎಳೆವಾಗ ದ್ಯಾವಮ್ನ
ಓಲೆಯ ಕಿವಿಗೆ ಬಿಸಲೊಂದು

ನೀರೆ ದ್ಯಾವಮ್ನ ಕೊಪ್ಪಿನ ಕಿವಿ ಮೇಲೆ
ತೆಕ್ಕೆಯ ಹೂಡಿದಾನೆ ಎಳೆನಾಗ ದ್ಯಾವಮ್ನ
ಕೊಪ್ಪಿನ ಕಿವಿಗೆ ಬಿಸಲೊಂದು

ಪಾರ್ವತಿ ದ್ಯಾವಮ್ನ ಪಟ್ಟಿಯ ಒಗೆವರೆ
ನೀರಿಲ್ಲವೆಂದ ಮಡಿವಾಳ ಈ ಊರು
ಕಟ್ಟೆಯ ಕೆಳಗೆ ಶಿವಗಂಗೆ

ನೀರೆ ದ್ಯಾವಮ್ನ ಪಟ್ಟೆಯ ಒಗೆವರೆ
ತುಪ್ಪಿಲ್ಲವೆಂದ ಮಡಿವಾಳ ಈ ಊರ
ಕಟ್ಟೆಯ ಕೆಳಗೆ ಶಿವಗಂಗೆ

ಬಾವೀಲಿ ಒಂದು ಬಟ್ಟನೆ ಕಲ್ಲಲ್ಲಿ
ಚುಟ್ಟನು ಕೂವರೆ ಬಿಸಿಲಲ್ಲಿ ದ್ಯಾವಮ್ನ
ಜಲ್ಲಿ ದ್ಯಾವಂಗ ಒಗೆವರೆ

ಹಳ್ಳದಲ್ಲೊಂದು ತೆಳ್ಳನೆ ಕಲ್ಲಲ್ಲಿ
ಚುಳ್ಳನು ಕಾವರೆ ಬಿಸಿಲಲ್ಲಿ ದ್ಯಾವಮ್ನ
ಜಲ್ಲಿ ದ್ಯಾವಂಗ ಒಗೆವರೆ

ಬೆಟ್ಟೆ ಮೇಲೊಂದು ಇಟ್ಟಂಗಿ ಗಿಡ ಹುಟ್ಟಿ
ಹುಟ್ಟು ತಲೆ ಕಾಯಿ ಫಲವಾದ್ವು ಈ ಊರ
ಹುಟ್ಟಿದ ಮಕ್ಳಿಗೆ ಕಲಿಕಾಲ

ಕಲ್ಲರೆ ಮೇಲೊಂದು ಮರನಲ್ಲಿ ಗಿಡಹುಟ್ಟಿ
ಹುಟ್ಟುತಲೆ ಕಾಯಿ ಫಲವಾದ್ದು ಈ ಊರ
ಹುಟ್ಟಿದ ಮಕ್ಳಿಗೆ ಕಲಿಕಾಲ

ಹೆತ್ತೂರು ದ್ಯಾವಮ್ಮ ಸತ್ಯವಂತೆ ಕಾಣೆ
ಸತ್ತಿಗೆ ಬಂದಲ್ಲದೆ ಹೊರಡಳು ಬೇಲೂರ
ವೀಳ್ಯ ಬಂದಲ್ಲದೆ ಎಲೆ ಮೆಲ್ಲರು

ಸತ್ತಿಗೆ ಸಾವಿರ ಮುತ್ತಿನ ಕೊಡೆ ಮುನ್ನೂರು
ಮತ್ತು ದ್ಯಾವಮ್ಮಗೆ ಬಿಸಲೆಂದು
ಮುತ್ತು ಚೆಲ್ವರೆ ಮುಗಿಲಿಗೆ