ಭಾರತೀಯರ ಬದುಕನ್ನು ಅತ್ಯಂತ ಗಾಢವಾಗಿ ವ್ಯಾಪಿಸಿಕೊಂಡಿರುವ ದಿವ್ಯಮಾನುಷ ಸತ್ವಗಳೆಂದರೆ ರಾಮ, ಕೃಷ್ಣ ಮತ್ತು ಶಿವ. ಈ ಮೂವರಲ್ಲಿ ಅತ್ಯಂತ ಚಿತ್ತಾಕರ್ಷಕವೂ, ಸಮಗ್ರವೂ ಆದ ವ್ಯಕ್ತಿತ್ವ ಶ್ರೀ ಕೃಷ್ಣನದು. ಬಾಲ್ಯದಿಂದ ಮೊದಲ್ಗೊಂಡು ಕೊನೆಯ ತನಕವೂ ಶ್ರೀ ಕೃಷ್ಣನ ಬದುಕಿಗೆ ಇರುವ ಅದ್ಭುತ ರಮ್ಯತೆ ಬೇರೆ ಯಾರಿಗೂ ಇಲ್ಲ. ಇಂಥ ಶ್ರೀ ಕೃಷ್ಣನನ್ನು ಕುರಿತು ಕವಿ ಪು.ತಿ.ನ. ಅವರು ಬರೆದಿರುವ ಶ್ರೀ ಹರಿಚರಿತೆ ಮೂಲತಃ ಒಂದು ಮಹಾಕಾವ್ಯಖಂಡವಾಗಿದೆ. ಇದನ್ನು ‘ಮಹಾಕಾವ್ಯ’ ಎಂದು  ಕರೆಯದೆ, ಮಹಾಕಾವ್ಯ-ಖಂಡ ಎಂದು ಕರೆದಿದ್ದರ ಕಾರಣವೇನೆಂದರೆ, ಪು.ತಿ.ನ. ಅವರು ಬಹು ಹಿಂದೆಯೇ ಬರೆಯಲು ಉದ್ದೇಶಿಸಿದ ಶ್ರೀ ಕೃಷ್ಣನನ್ನು ಕುರಿತ ಮಹಾಕಾವ್ಯವೊಂದರ ಭಾಗವಾಗಿದೆ ಇದು. ಪು.ತಿ.ನ. ಅವರು ಮೊದಲಿನಿಂದಲೂ ಶ್ರೀಕೃಷ್ಣನ ವ್ಯಕ್ತಿತ್ವಕ್ಕೆ ಒಲಿದವರು. ಕೃಷ್ಣ ಅವರ ಹೃದಯಕ್ಕೆ ಬಲುಹತ್ತಿರದ ದೇವರು. ಅವರು ಉದ್ದಕ್ಕೂ ತಮ್ಮ ಕಾವ್ಯದ ಸಂದರ್ಭದಲ್ಲಿ ಆಗಾಗ ಬರೆದ ‘ಮಳೆಯ ನಾಡ ತೊಯ್ಯುತಿರೆ’ ಎಂಬ ಕವಿತೆ, ‘ದೀಪಲಕ್ಷ್ಮಿ’ ಎಂಬ ಗೇಯರೂಪ, ಮತ್ತು ‘ಗೋಕುಲ ನಿಗರ್ಮನ’ವೆಂಬ ಅಪೂರ್ವ ಗೀತ ರೂಪಕ ಇವುಗಳು ಕೃಷ್ಣಪರವಾದ ಅವರ ಒಲವಿಗೆ ಸಾಕ್ಷಿಯಾಗಿವೆ.

ಪು.ತಿ.ನ. ಅವರು ಹೊಸಗನ್ನಡ ಸಂದರ್ಭದಲ್ಲಿ ಭಾಗವತ ಪರಂಪರೆಯನ್ನು ಮುಂದುವರಿಸಿದವರು. ಈ ಪರಂಪರೆಯ ಮುಖ್ಯ ಲಕ್ಷಣ ಭಕ್ತಿ! ಈ ಅರ್ಥದಲ್ಲಿ ಅವರದು ಹರಿಹರ, ಕುಮಾರವ್ಯಾಸ, ಲಕ್ಷ್ಮೀಶ ಇವರ ಭಕ್ತಿಯ ಉತ್ಕಟತೆಗೆ ಸಮೀಪವಾದ ಮನೋಧರ್ಮ. ಅಂದರೆ ಅದೊಂದು ರೀತಿಯಲ್ಲಿ ದೈವೀಭಾವದ ಜಾಗರದಲ್ಲಿ ಮನಸ್ಸನ್ನು ನಿಲ್ಲಿಸಿಕೊಳ್ಳುವ ಒಂದು ಸ್ಥಿತಿ. ಶ್ರೀ ಹರಿಚರಿತೆಯಲ್ಲಿ ಈ ಒಂದು ಸ್ಥಿತಿಯನ್ನು ಉದ್ದಕ್ಕೂ ಉಳಿಸಿಕೊಳ್ಳುವ ಒಂದು ಪ್ರಯತ್ನವಿದೆ. ಆದರೆ, ಈಗ ಪ್ರಸ್ತಾಪಿಸಿದ ಹರಿಹರ, ಕುಮಾರವ್ಯಾಸ, ಲಕ್ಷ್ಮೀಶ ಅವರಲ್ಲಿರುವ ಭಕ್ತಿಯ ಉತ್ಕಟತೆ ಪು.ತಿ.ನ. ಅವರಲ್ಲಿ ಇಲ್ಲ; ಹಾಗೆಂದರೆ ಪು.ತಿ.ನ. ಅವರಲ್ಲಿ ಆ ಪರಿಯ ಉತ್ಕಟತೆಯೇ ಇಲ್ಲವೆಂದಲ್ಲ; ಅದು ಅಲ್ಲಲ್ಲಿ ಇದೆ.ಆದರೆ ಅಖಂಡವಾಗಿಲ್ಲ. ಕುಮಾರವ್ಯಾಸ ಹರಿಹರರಲ್ಲಿ ಅವರವರ ಇಷ್ಟದೈವದ ನೆನಹು, ಅವರ ವ್ಯಕ್ತಿತ್ವವನ್ನು ಅದರಲ್ಲಿ ಮುಳುಗಿಸುವಷ್ಟು, ಅವರು ಅದರಲ್ಲಿ ಕರಗಿ ಹೋಗುವಷ್ಟು ಉತ್ಕಟವಾಗಿದೆ. ಅದನ್ನು ಪು.ತಿ.ನ. ಅವರಲ್ಲಿ ನಾವು ನಿರೀಕ್ಷಿಸುವಂತಿಲ್ಲ. ಯಾಕೆಂದರೆ ಅವರು ಶ್ರೀಹರಿಚರಿತೆಯನ್ನು ಬರೆಯುತ್ತಿರುವುದು ಭಕ್ತಿಯುಗದ ಪುಣ್ಯ ಸಂಪಾದನಾರ್ಥಿಗಳಾದ ಶೋತೃಗಳ ಪಾರಾಯಣಕ್ಕೆಂದಲ್ಲ; ಅವರು ಬರೆಯುತ್ತಿರುವುದು ಆಧುನಿಕ ವೈಜ್ಞಾನಿಕ ಯುಗದ ಕಾವ್ಯಾಸಕ್ತ ಸಹೃದಯರಿಗೆ. ಅಲ್ಲದೆ ಅವರು ಮೂಲತಃ ಚಿಂತನ ಪ್ರತಿಭೆಯ ಕವಿ. ‘ಏನೇತಕೆ ಎಂಬುದೆ ಹವ್ಯಾಸ: ಇದನುಳಿದಾಗದು ಪದ ವಿನ್ಯಾಸ’ ಎನ್ನುವುದು ಅವರ ನಿಲುವು. ಇದರಿಂದಾಗಿ, ಅತ್ಯಂತ ಸಂಪ್ರದಾಯನಿಷ್ಠವಾದ ಮೇಲುಕೋಟೆಯಂಥ ಊರಿನ ದೇವಾಲಯದ ಪರಿಸರದಿಂದ ಬಂದ ಪು.ತಿ.ನ. ಅವರು, ಸಾಂಸ್ಥಿಕ ಧರ್ಮದ ಸಂಕೇತವಾದ ದೇವಸ್ಥಾನವೆಂಬ ಸಂಸ್ಥೆಯನ್ನೂ, ಅದರೊಂದಿಗೆ ಬೆಸೆದುಕೊಂಡ ಕಲ್ಪಾಗಮ ಉತ್ಸವಾದಿಗಳನ್ನೂ ತಮ್ಮ ಚಿಂತನೆಗೆ ಗುರಿಪಡಿಸಿನೋಡಿರುವ ಕ್ರಮ ಗಮನಿಸತಕ್ಕದ್ದಾಗಿದೆ. ಇವರ ಸಮಕಾಲೀನರಾದ ಕುವೆಂಪು ಅವರು ದೇವಾಲಯಗಳನ್ನೂ ಹಾಗೂ ಅದರೊಂದಿಗೆ ಹೆಣೆದುಕೊಂಡು ಬಂದ ಪುರೋಹಿತಷಾಹೀ ಶೋಷಕ ಪ್ರವೃತ್ತಿಗಳನ್ನೂ ಖಂಡಿಸಿ, ದೇವಸ್ಥಾನಗಳನ್ನೇ ನಿರಾಕರಿಸಿ, ಅದರ ಕಲ್ಪನೆಯನ್ನು ನಿಸರ್ಗ ಆರಾಧನೆಯ ನೆಲೆಗೆ ತರುತ್ತಾರೆ. ಮತ್ತೊಬ್ಬ ಮುಖ್ಯಕವಿ ಬೇಂದ್ರೆಯವರು ದೇವಸ್ಥಾನಗಳ ಬಗ್ಗೆ ಕುವೆಂಪು ಅವರಷ್ಟು ಉಗ್ರವಾದ ಪ್ರತಿಭಟನೆಯನ್ನು ತೋರದಿದ್ದರೂ, ಅವರು  ತಮ್ಮಅನುಭಾವಿಕ ನೆಲೆಗಳಲ್ಲಿ ದೇವಸ್ಥಾನವನ್ನು ಮೀರುತ್ತಾರೆ. ಆದರೆ ಪು.ತಿ.ನ. ಅವರು ದೇವಸ್ಥಾನಗಳನ್ನು ಒಪ್ಪಿಕೊಂಡು, ಅದರ ಕಲ್ಪಾಗಮಗಳನ್ನು ಕುರಿತು ವೈಚಾರಿಕವಾದ ಚರ್ಚೆಗೆ ಗುರಿಪಡಿಸಿ, ಅವುಗಳು ಮನುಷ್ಯನ ಸಂಸ್ಕೃತಿಗೆ ಎಷ್ಟೊಂದು ಅಗತ್ಯವಾದವುಗಳೆಂಬುದನ್ನು ತೋರಿಸಿಕೊಡುತ್ತಾರೆ.ಅವರ ಪ್ರಕಾರ ದೇವಸ್ಥಾನಗಳು ‘ವಿಷಯಲಗ್ನಾನಂದವಂ ಬೇರ್ಪಡಿಸಲಾದ ತಂತ್ರಾಲಯ’ಗಳು; ಮನಸ್ಸನ್ನು ದೈವೀಭಾವದ ಜಾಗರದಲ್ಲಿ ನಿಲ್ಲಿಸಿ, ಜೀವಕ್ಕೆ ಅಹಂನಿರಸನದ ವಿನಯವನ್ನು ಕಲಿಸುವ ಸಾಧನಗಳು. ಪು.ತಿ.ನ. ಅವರ ಪ್ರಕಾರ ನಿಜವಾದ ಧರ್ಮ ಹಾಗೂ ಕಲೆಯ ಉದ್ದೇಶ ಹಾಗೂ ಪರಿಣಾಮಗಳು ತತ್ವಶಃ ಸಮಾನವಾದವು. ಈ ದೃಷ್ಟಿಯಿಂದ ಪು.ತಿ.ನ. ಅವರದು ಒಂದು ರೀತಿಯಲ್ಲಿ ಸಂಪ್ರದಾಯದ ನಿರಾಕರಣೆ ಅಲ್ಲ, ಅದೊಂದು ಮರುಹೊಂದಾಣಿಕೆ. ಇದು ಅವರು ತಮ್ಮ ಕಾವ್ಯಕ್ಕೆ ಆರಿಸಿಕೊಳ್ಳುವ ವಸ್ತುಗಳ ಹಾಗೂ ಅವುಗಳ ನಿರ್ವಹಣೆಯಿಂದಲೂ ಸ್ಪಷ್ಟವಾಗುವ ನಿಲುವಾಗಿದೆ.ಈ ಅರ್ಥದಲ್ಲೂ ಅದು ಭಾಗವತ ಪರಂಪರೆಯ ಮುಂದುವರಿಕೆಯೇ. ಯಾಕೆಂದರೆ, ಶ್ರೀಹರಿಪರವಾದ ಅವತಾರಾದಿ ಕಲ್ಪನೆಗಳು, ಹಾಗೂ ಅದಕ್ಕೆ ಸಂಬಂಧಿಸಿದ ಪ್ರತೀಕಗಳು ಅವರ ಕವಿತೆಯಲ್ಲಿ ಸಮೃದ್ಧವಾಗಿ ಕಂಡು ಬರುತ್ತವೆ. ಹೀಗಾಗಿ ಈ ದೇಶದ ಇತಿಹಾಸ ಪುರಾಣಗಳು ಮತ್ತು ಅದಕ್ಕೆ ಸಂಬಂಧಿಸಿದ ಶ್ರದ್ಧಾಭಕ್ತಿಗಳೂ ಅವರ ಕಾವ್ಯದ ಮೂಲದ್ರವ್ಯಗಳಾಗಿವೆ. ಅವರ ಅನೇಕ ಗೀತರೂಪಕಗಳು ಈ ಬಗೆಯ ಪುರಾಣ ಪ್ರಸಂಗಗಳ ವ್ಯಕ್ತಿವಿಶಿಷ್ಟ ನಿರೂಪಣೆಗಳೂ, ಪುನರ್‌ನಿರ್ಮಿತಿಗಳೂ ವ್ಯಾಖ್ಯಾನಗಳೂ ಆಗಿವೆ. ಬದುಕನ್ನು ವ್ಯಾಖ್ಯಾನಿಸುವ ಚಿಂತನ ಪ್ರತಿಭೆಯ ನಿರ್ಮಿತಿಯಾಗಿವೆ ಮತ್ತು ಈ ಒಂದು ಕೃತಿಯ ನಿರ್ವಹಣೆಯಲ್ಲಿ ಅವರು, ಕೃಷ್ಣನನ್ನು ಹೇಗೆ ಕಾಣಿಸಬೇಕು? ದೇವನೆಂದೆ? ಮನುಷ್ಯನೆಂದೆ? ಈ ಪ್ರಶ್ನೆಯನ್ನೆತ್ತಿಕೊಂಡು-

ಮನುಜನೆನೆ ಮನವೊಲ್ಲದೈ
ಆ ಮಿತಿಗೆ ಈತನನಳವಡಿಸಿ ಭಾವಿಸಲು; ದೇವನೆನೆ
ಆಧುನಿಕ ಬುದ್ಧಿ ಪ್ರಚುರಮಾದೀಯುಗದ ನಡೆ ಕೆಡುವು
ದದ್ಭುತ ಚರಿತಂ

(ಪುಟ ೩-೫೫)

ಎಂಬ ತುಯ್ತಕ್ಕೆ ಸಿಕ್ಕುತ್ತಾರೆ. ಕುಮಾರವ್ಯಾಸನಿಗಾಗಲಿ, ಲಕ್ಷ್ಮೀಶನಿಗಾಗಲೀ ಈ ಬಗೆಯ ತೊಳಲಾಟಗಳಿಲ್ಲ. ಯಾಕೆಂದರೆ ಕೃಷ್ಣ ಅವರ ಪಾಲಿಗೆ ಸಾಕ್ಷಾತ್ ದೇವರೇ. ಪು.ತಿ.ನ. ಅವರೂ ‘ಶ್ರೀಕೃಷ್ಣ ನನ್ನ ಆತ್ಮಕ್ಕೆ ತುಂಬ ಹತ್ತಿರದ ದೇವರು’ (ಅರಿಕೆ ಪು. ೧) ಎಂದುಕೊಂಡರೂ, ಅದು ಅವರ ವೈಯಕ್ತಿಕ ಶ್ರದ್ಧೆಗೆ ಸಂಬಂಧಿಸಿದ ಮಾತಾಗುತ್ತದೆ. ಆದರೆ ಒಬ್ಬ ಕವಿಯಾಗಿ, ಹೊಸಕಾಲದ ಕವಿಯಾಗಿ ಬರೆಯುವಾಗ, ಅದನ್ನು ತಮ್ಮಕಾಲಕ್ಕೆ ಸಂಗತವಾಗುವ ರೀತಿಯಲ್ಲಿ ನಿರೂಪಿಸಬೇಕಾಗುತ್ತದೆ. ಯಾಕೆಂದರೆ-

‘ಅದ್ಯತನ ಚಿತ್ತ ವಾತಾವರಣದೊಳು ರಸಕಲ್ಪತರು
ವಿಜ್ಞಾನ ದೋಹಳವ ಬಯಪುದು’

(ಪುಟ ೩, ೬೧-೬೨)

ಕೃಷ್ಣ ಕಥಾವಸ್ತು ‘ರಸಕಲ್ಪತರು’ವೇನೋ ನಿಜ. ಆದರೆ ಅದು ಕಾಲದಿಂದ ಕಾಲಕ್ಕೆ ಕವಿಪ್ರತಿಭೆಯ ‘ದೋಹಳಕ್ರಿಯೆ’ಗೆ ಒಳಗಾಗುವುದರ ಮೂಲಕವೇ,ಅದು ನವೀನ ರಸೋತ್ಪಾದಕ ಸೃಷ್ಟಿಯೆನಿಸಿಕೊಂಡಿರುವುದು. ಅದು ‘ವಿಜ್ಞಾನ ದೋಹಳ’ಕ್ಕೆ ಅಥವಾ ಈ ಹೊತ್ತಿಗೆ ಅಗತ್ಯವಾದ ವೈಚಾರಿಕ ಚಿಕಿತ್ಸೆಗೆ ಒಳಗಾಗುವುದರ ಮೂಲಕವೇ ಸಮಕಾಲೀನದಲ್ಲಿ ತನ್ನ ಸಾರ್ವತ್ರಿಕತೆಯನ್ನು ಸಾಬೀತುಪಡಿಸಿಕೊಳ್ಳಬೇಕಾಗುತ್ತದೆ.ಈ ದೃಷ್ಟಿಯಿಂದ ಪು.ತಿ.ನ. ಅವರು ಹೇಗೆ ಅದನ್ನು ಈ ಯುಗದಲ್ಲಿ ಪುನರ್ ಸೃಷ್ಟಿಸಿದ್ದಾರೆ ಎನ್ನುವುದರ ಪರೀಶೀಲನೆ ತುಂಬ ಉಪಯುಕ್ತವಾದದ್ದು.

ಇಲ್ಲಿ ಕತೆ ಕೇವಲ ನಿಮಿತ್ತಮಾತ್ರ. ಶ್ರೀ ಹರಿಚರಿಕತೆಯ ಕಥಾವಸ್ತು, ಕೃಷ್ಣನ ಬಾಲ್ಯಕಾಲಕ್ಕೆ ಸಂಬಂಧಿಸಿದ್ದು. ಮಧುರೆಯಲ್ಲಿ ಹುಟ್ಟಿದ ಕೃಷ್ಣ, ಗೋಕುಲ ಬೃಂದಾವನಗಳಲ್ಲಿ ಬೆಳೆದು, ಗೊಲ್ಲರ ಗೋಪಿಯರ ಬದುಕಿನ ಒಂದು ಭಾಗವಾಗಿ, ತನ್ನ ಮಾನುಷ, ಹಾಗೂ ಅತಿಮಾನುಷ ವ್ಯಕ್ತಿತ್ವವನ್ನು ಪ್ರಕಟಿಸಿ, ವೇಣುವಿಸರ್ಜನ ಮಾಡಿ ಮಧುರೆಗೆ ಹಿಂತಿರುಗುವವರೆಗಿನ ಹಂತದವರೆಗಿನದು. ಒಟ್ಟು ಮೂವತ್ತು ಮೂರು ಆಶ್ವಾಸಗಳ ಈ ಹರಹಿನಲ್ಲಿ ಮೂಲ ಕತೆಯ ಎಲ್ಲವನ್ನೂ ಹೇಳಲೇಬೇಕೆಂಬ ಬದ್ಧತೆಗೆ ಒಳಗಾಗಿಲ್ಲ. ಕೆಲವನ್ನು ನಿರೂಪಿಸಿ, ಕೆಲವನ್ನು ಸೂಚಿಸಿ, ಕೆಲವನ್ನು ಹೊಸದಾಗಿ ಸೃಷ್ಟಿಸಿ, ಕೆಲವನ್ನು ವ್ಯಾಖ್ಯಾನಿಸಿ ಮುನ್ನಡೆದಿದ್ದಾರೆ. ಈ ಕತೆಯಲ್ಲಿ ನಿಜವಾಗಿಯೂ ಸೃಜನಶೀಲ ಕವಿಗೆ ಅದ್ಭುತ ಅವಕಾಶಗಳನ್ನೊದಗಿಸುವ ಹಲವು ಸಂದರ್ಭಗಳನ್ನು ಪು.ತಿ.ನ. ಅವರು ಕೇವಲ ಸೂಚಿಸಿ ಕೈಬಿಟ್ಟದ್ದೇಕೆ ಎನ್ನುವುದು ಆಶ್ಚರ್ಯದ ಸಂಗತಿಯಾಗಿದೆ. ಪೂತನಿಯ ಪ್ರಸಂಗವಾಗಲೀ, ಯಶೋದೆಗೆ ಬಾಲಕೃಷ್ಣ ತನ್ನ ಬಾಯಲ್ಲಿ ಬ್ರಹ್ಮಾಂಡವನ್ನೆ ತೋರಿಸಿದ ‘ಕಥಾ ಪ್ರತಿಮೆ’ಯಾಗಲೀ, ಯಾಕೆ ಒಂದೊಂದೆ ಪಂಕ್ತಿಯಲ್ಲಿ ಸೂಚಿತವಾಗಿವೆ? ವಸುದೇವ ಅಷ್ಟಮಿಯ ಇರುಳು, ದೇವ ಶಿಶುವನ್ನೆತ್ತಿಕೊಂಡು ಕಂಸನ ಸೆರೆಯಿಂದ  ಗೋಕುಲಕ್ಕೆ ಒಯ್ಯುವ ಸಂದರ್ಭದ ರಮ್ಯಾದ್ಭುತ ಪ್ರಸಂಗ ಕೂಡಾ, ಅಂಥ ರೋಮಾಂಚನವನ್ನು ಹುಟ್ಟಿಸುವಂತೆ ನಿರ್ವಹಣೆಗೊಂಡಿಲ್ಲವಲ್ಲ ಯಾಕೆ?-ಎಂಬ ಪ್ರಶ್ನೆ ನಮ್ಮನ್ನು ಕಾಡುತ್ತದೆ. ಪು.ತಿ.ನ. ಅವರಿಗೂ ಬಹುಶಃ ಇದು ಗೊತ್ತು. ಆದುದರಿಂದಲೇ ಏನೊ, ಈ ಕೃತಿಯ ಕೊನೆಕೊನೆಗೆ, ಒಂದು ನಡು ರಾತ್ರಿಯ ಜಾಗರದಲ್ಲಿ ಶ್ರೀಕೃಷ್ಣನೇ ಅವರಿಗೆ  ಕಾಣಿಸಿಕೊಂಡು ಅವನ ಕಥನದ ಇತಿಮಿತಿಗಳನ್ನು ಪ್ರಸ್ತಾಪಿಸಿದಂತೆ ಅವರು ಬರೆದುಕೊಂಡಿದ್ದಾರೆ. ಕೃಷ್ಣ ಹೇಳುತ್ತಾನೆ. ಕವಿಗೆ-

“……ನಿನಗೆಡರಲ್ಲ ಕೃಪೆ ಕೊರತೆ. ನೀನೆಡರು” (ನನ್ನ ಕೃಪೆಯ ಕೊರತೆ ನಿನಗೆ ತೊಂದರೆಯಲ್ಲ.ಆದರೆ ನೀನೇ, ನಿನ್ನ ದೈಹಿಕ ಮಾನಸಿಕ ಮಿತಿಗಳೇ ಎಡರು).   ಅವು ಯಾವುವೆಂದರೆ-

ನಿನ್ನಾಲಸ್ಯ, ಸಂಕಲ್ಪ ದೌರ್ಬಲ್ಯ, ಅನುತ್ಪನ್ನತೆಗಳ್
ಇವುಗಳ ಜತೆಗೆ ಆತುರತೆ ವಿಸ್ಮರಣವೀಕಥನದೊಳು

(ಪು. ೧೬೫, ೪೦-೪೨)

ಆದಕಾರಣ ನನ್ನ ಕಥೆಯ ಎಷ್ಟೋ ಸಂಗತಿಗಳನ್ನು ನೀನು ಕೈಬಿಟಿದ್ದಿಯ ಎಂದು ಕಥಾನಾಯಕನೇ ಆರೋಪಿಸುತ್ತಾನೆ, ಬಹುಶಃ ಓದುಗರ ಪರವಾಗಿಯೂ.

ಆದರೆ ಪು.ತಿ.ನ. ಅವರು, ಕೃಷ್ಣನ ಬದುಕಿನ ಒಂದು ಘಟ್ಟವನ್ನು ಕುರಿತ ಈ ಕೃತಿಯಲ್ಲಿ ಮೂಲದ ಕತೆಯನ್ನು ನಿರೂಪಿಸಿಕೊಂಡು ಹೋಗುವ ಈ ಹರಹಿನ ನಡುವೆ, ‘ಭಾಂಡೀರದರ್ಶನ’, ‘ವರ್ಷಾವಗಾಹಂ’, ‘ರಾಧಾಕೃಷ್ಣ ಸಂಗತಿ’ ‘ವೇಣು ಗಾನಾವತರಣಂ’ ಮತ್ತು ‘ರಾಸಲೀಲೆ’ ಇವುಗಳು ರಸದ ಮಡುಗಳು; ಮತ್ತೆ ಉದ್ದಕ್ಕೂ  ಅಲ್ಲಲ್ಲಿ ಸಾಕಷ್ಟು ಚಿಂತನೆಯ ಚಿನ್ನದ ಗಣಿಗಳೂ ಇವೆ. ‘ಭಾಂಡೀರದರ್ಶನ’ ಮತ್ತು ‘ರಾಧಾಕೃಷ್ಣ ಸಂಗತಿ’-ಈ ಎರಡೂ ಬಹುಶಃ ಮೂಲದಲ್ಲಿ ಇಲ್ಲದ, ಹಾಗೂ ಕನ್ನಡದಲ್ಲಿ ಕೃಷ್ಣ ಕತೆಯೊಳಗೆ ಮೊಟ್ಟ ಮೊದಲ ಬಾರಿಗೆ ಸೇರಿಕೊಂಡ ವಸ್ತುಗಳೆಂದು ತೋರುತ್ತದೆ. ಪು.ತಿ.ನ. ಅವರ ಕೃತಿಯಲ್ಲಿ ವರ್ಣಿತವಾಗಿರುವ ಭಾಂಡೀರವೆಂಬ ಮಹಾವಟವೃಕ್ಷ ಬೃಂದಾವನದಲ್ಲಿರುವ ಒಂದು ‘ತರುಗಳ ರಾಜ’. ನೆಲ ಮುಗಿಲುಗಳೆರಡನ್ನೂ ಹೀರಿಕೊಂಡು ಅಪ್ರತಿಮ ಜೀವೇಚ್ಛೆಯನ್ನು ಮೂರ್ತೀಕರಿಸುವಂತೆ ನಿಂತ ಈ ಮಹಾವೃಕ್ಷ ಮತ್ತು ಅದರ ಕೆಳಗೆ ಹಾಗೂ ಅದರ ಕೇಂದ್ರದಲ್ಲಿ ಬೆಳೆಯುವ ಗೋಪಾಲರ ಬದುಕು, ಶ್ರೀಕೃಷ್ಣನ ವ್ಯಕ್ತಿತ್ವಕ್ಕೆ ಒಂದು ಪ್ರತೀಕವಾಗಿದೆ. ಈ ಮಹಾವೃಕ್ಷವನ್ನು ಕಂಡು, ಅದನ್ನು ತನ್ನವರಿಗೆ ಪರಿಚಯಿಸಿ, ಅವರು ಅದನ್ನು ಪ್ರೀತಿಸುವಂತೆ, ಆರಾಧಿಸುವಂತೆ ಮಾಡಿದವನು ಕೃಷ್ಣ. ಆ ಮಹಾ ವೃಕ್ಷದ ಏಕಾಂತತೆಯಲ್ಲಿ, ತನ್ನ ಸುಮಧುರ ವೇಣುವನ್ನು ಬಾರಿಸಿ ತನ್ನ ಆತ್ಮವನ್ನು ಇಡೀ ಬೃಂದಾವನದ ಮೇಲೆ ಹಾಯಿಸಿದವನು ಕೃಷ್ಣ. ಹೀಗೆ ಈ ಮಹಾವೃಕ್ಷ ಒಂದು ಮರೆಯಲಾರದ ಪ್ರತೀಕವಾಗಿದೆ-ಪರಿಸರ ಪ್ರೀತಿಗೆ; ಹಾಗೂ ಕೃಷ್ಣನ ಕೊಳಲದನಿಯಲ್ಲಿ ಬೆಳೆದ ಗೋಪ-ಗೋಪಿಯರ ಬದುಕಿಗೆ. ‘ವರ್ಷಾವಗಾಹಂ’   ಮುಂಗಾರಿನ ಮಳೆಯ ಮೀಹದಲ್ಲಿ ಕೃಷ್ಣ ಬಲರಾಮರು ಪಟ್ಟ ಅನುಭೂತಿಯನ್ನು ಕುರಿತದ್ದು. ಕೃಷ್ಣನ ಬದುಕು ಈ ನೆಲ ಮುಗಿಲಿನ ಅನುಭವಗಳಿಗೆ ಸ್ಪಂದಿಸಿದ ಪರಿಯನ್ನು ಈಗ ಉಲ್ಲೇಖಿಸಿದ ಎರಡೂ ಸಂದರ್ಭಗಳು  ಸೂಚಿಸುತ್ತವೆ. ಇನ್ನು ಕೃಷ್ಣನ ವೇಣುಗಾನದ ವರ್ಣನೆಯಂತೂ ಇಡೀ ಕಾವ್ಯದ ತುಂಬ ಹೊಳಲಿಡುತ್ತದೆ. ಅದು ಕೃಷ್ಣನಿಗೆ ‘ತನ್ನಾದಿವ್ಯ ಮೂಲಸ್ಥಾನದರಿವನು ಕೊಡುವ’ ತನ್ನ ‘ಪುರುಷೋತ್ತಮ ಸ್ತರದ ತಿಳಿವನು ತನಗೆ ಮೊಗೆದೀವ’ ಒಂದು ಸಾಧನವಾಗಿದೆ. ಪು.ತಿ.ನ. ಅವರ ಕಲಾತತ್ತ್ವವನ್ನು ಕುರಿತ ಚಿಂತನೆಗಳೆಲ್ಲವೂ, ಕೃಷ್ಣನ ಕೊಳಲಿನ ಅನುಭವದ ವರ್ಣನೆಯ ಸಂಕೇತ ಪ್ರತೀಕಗಳ ಮೂಲಕ ಇಲ್ಲಿ ಅಭಿವ್ಯಕ್ತವಾಗಿವೆ. ವೇಣುವಾದನದ ವರ್ಣನೆಯ ಸಂದರ್ಭ ಮತ್ತು ರಾಸಲೀಲೆಯ ಸಮಯದಲ್ಲಿ ಗೋಪಿಯರಿಗಾದ ಅನುಭವದ ವರ್ಣನೆಗಳು, ಆಧ್ಯಾತ್ಮಿಕ ಸಾಧಕರು ಪಡುವ ‘ಮಹಾಭಾವ’ದ ಹೊಳಹುಗಳನ್ನು ಹಿಡಿದಿರಿಸಿದೆ. ಕೇವಲ ಅನುಭವೈಕ ವೇದ್ಯವಾದ ಈ ಸಂಗತಿಗಳು, ಮಾತಿನ ಆಚೆಯವು. ರಾಧಾಕೃಷ್ಣರ  ಸಂಗತಿ ತುಂಬ ಸೊಗಸಾಗಿ ಈ ಕೃತಿಯಲ್ಲಿ ನಿರೂಪಿತವಾಗಿದೆ. ವೇಣುವಿಸರ್ಜನದ  ನಂತರ ಕೃಷ್ಣನ ಕೊಳಲು ರಾಧೆಯ ಕೈಸೇರಿತೆಂಬುದು ಅತ್ಯಂತ ಅರ್ಥಪೂರ್ಣವಾಗಿದೆ. ಕೃಷ್ಣ ಬೃಂದಾವನವನ್ನು ಬಿಡುವಾಗ, ಅನಿವಾರ‍್ಯವಾದ ಆಗಲಿಕೆಯ ಹೊತ್ತಿನಲ್ಲಿ ರಾಧೆ ಓಡುತ್ತಾ ಬಂದು ತನ್ನ ಕೊರಳಿನ ಹವಳದ ಹಾರವನ್ನು ತೆಗೆದು ಶ್ರೀ ಹರಿಯ ವಕ್ಷಕ್ಕೆ ಎಸೆಯುತ್ತಾಳೆ, ಕೃಷ್ಣನೂ ತನ್ನ ಕೊರಳಿನ ಮುತ್ತಿನ ಏಕಾವಳಿಯನ್ನು, ವನಮಾಲೆಯ  ಸಹಿತ ರಾಧೆಯ ಕಡೆಗೆ  ಎಸೆಯುತ್ತಾನೆ. ಪು.ತಿ.ನ. ಅವರ ಶ್ರೀಹರಿಚರಿತೆಯ ಮುಕ್ತಾಯದ ಸೊಗಸು ಇದು.

ಶ್ರೀಹರಿಚರಿತೆಯ ಕಥನ ಕ್ರಮದ ಉದ್ದಕ್ಕೂ ‘ಅದ್ಯತನ ಚಿತ್ತ ವಾತಾವರಣ’ದಲ್ಲಿ ‘ಆಧುನಿಕ ಬುದ್ಧಿ ಪ್ರಚುರ’ವಾದ ಸಹೃದಯರಿಗಾಗಿ ಪು.ತಿ.ನ. ಅವರು ಎತ್ತುವ ಪ್ರಶ್ನೆಗಳೂ, ಪರಿಹಾರ ರೂಪವಾಗಿ ನೀಡುವ ವ್ಯಾಖ್ಯಾನಗಳೂ ಮತ್ತು ಆ ಮೂಲಕ ಅಭಿವ್ಯಕ್ತವಾಗುವ ಚಿಂತನೆಗಳು ಸ್ವಾರಸ್ಯವಾಗಿವೆ. ಇವು ಎರಡು ತೆರನಾಗಿವೆ. ಒಂದು, ಸಮಯ ಸಂದರ್ಭಾನುಸಾರವಾಗಿ ಅವರು ನೇರವಾಗಿ ಮಂಡಿಸುವ ಆಲೋಚನೆಗಳು; ಎರಡು, ಕೆಲವು ಪ್ರಸಂಗಗಳನ್ನು ಕುರಿತು ಮಾಡುವ ವ್ಯಾಖ್ಯಾನಗಳು. ಕೃಷ್ಣನ ಬಾಲ್ಯವನ್ನು ಕುರಿತ ವರ್ಣನೆಯ ಸಂದರ್ಭದಲ್ಲಿ, ಒಂದು ಸಂಸಾರದ ಮೇಲೆ, ಮನುಷ್ಯರ ಮನಸ್ಸಿನ ಮೇಲೆ ಮಾಡುವ ಪರಿಣಾಮಗಳನ್ನು ಕುರಿತು; ಕೃಷ್ಣನ ವೇಣುಗಾನದ ವರ್ಣನೆಯ ನೆಪದಲ್ಲಿ ಕಲೆ ಹಾಗೂ ಕಲಾ ತತ್ತ್ವಗಳನ್ನು ಕುರಿತು; ಗೋವರ್ಧನೋದ್ಧರಣದ ಸಂದರ್ಭದ ಚಿತ್ರಣಕ್ಕೆ ಹಿನ್ನೆಲೆಯಾಗಿ ಪವಾಡಗಳನ್ನು ಕುರಿತು; ದೈವೀಶ್ರದ್ಧೆ ಹಾಗೂ ಗೋವಿಂದ ನಾಮಸ್ಮರಣೆಯ ಮಹತ್ತನ್ನು ಕುರಿತು-ತಮ್ಮ ಆಲೋಚನೆಗಳನ್ನು ಮಂಡಿಸುತ್ತಾರೆ.ಇನ್ನು ಅವರು ಈ ಕತೆಯ ಹಲವು ಸಂದರ್ಭಗಳನ್ನು ಕುರಿತು ಮಾಡುವ ವ್ಯಾಖ್ಯಾನ ಬೇರೆ ರೀತಿಯದು. ಅವು ಹಲವು ವೇಳೆ ಓದುಗರ ಮನಸ್ಸಿನಲ್ಲಿ ಏಳುವ ಸಂದೇಹಗಳಿಗೆ ಉತ್ತರಗಳೂ ಹೌದು. ಕೃಷ್ಣ ಗೋಪಿಯರ ವಸ್ತ್ರಾಪಹರಣ ಮಾಡಿದ ಸಂದರ್ಭವನ್ನು ತಮ್ಮ ಕಥನದೊಳಗೆ ತರುವ ಪು.ತಿ.ನ. ಈ ಸಂಬಂಧದಲ್ಲಿ ಬಹುಕಾಲದಿಂದ ಜನಮನದಲ್ಲಿ ಏಳುವ ಸಂದೇಹಗಳನ್ನು ಕುರಿತು ವಿವರಣೆ ನೀಡುತ್ತಾರೆ. ಕೃಷ್ಣನಿಗೂ ಗೋಪಿಯರಿಗೂ ಇದ್ದ ಸಂಬಂಧವೆಂಥದು? ಅದನ್ನು ಜಾರತನವೆನ್ನಬಹುದೆ ಎಂಬ ಪ್ರಶ್ನೆಯನ್ನೆತ್ತಿಕೊಂಡು, ‘ಮೀಸೆಯೆ ಮೊಳೆಯದೆಳೆಯನಿಗೆಂತು ಗೋಪಾಂಗನಾ ಜಾರತನಂ’ (ಪು ೭೨) ಎಂಬ ಮರು ಪ್ರಶ್ನೆಯನ್ನು ಮಂಡಿಸುತ್ತಾರೆ. ಹಾಗೆಯೇ ಕೃಷ್ಣ   ಗೋಪಿಯರ ವಸ್ತ್ರಗಳನ್ನು ಅಪಹರಿಸಿದ ಪ್ರಸಂಗವನ್ನು ವರ್ಣಿಸುವ ಮೊದಲು-

ಕದ್ದೊಯ್ದನವ
ನಿನ್ನ ಮುಚ್ಚುಮರೆಯೆಲ್ಲವನು. ಮರಳಿನೀಡುವನು ನೀನೆರೆಯೆ.
ನಾಚಿಕೆಯುಳಿದು, ಬೆತ್ತಲೆ ನಿಂದು, ಕರಗಳ ಶಿರದಿ ಜೋಡಿಸುತ,
ಈ ತೆರ ಮರಳಿ ಪಡೆ ನೀ ನಿನ್ನಹಂಕಾರದಾಚ್ಛಾದವ

(ಪು. ೭೨.೨೫-೨೮)

ಎಂದು ಕವಿ ತಮ್ಮನ್ನೆ ಗೋಪೀಭಾವದಲ್ಲಿ ನಿಲ್ಲಿಸಿಕೊಂಡು, ಕೊಟ್ಟುಕೊಳ್ಳುವ ವಿವರಣೆ ಇಡೀ ಪ್ರಸಂಗವನ್ನೆ ಕುರಿತ ವ್ಯಾಖ್ಯಾನವಾಗಿದೆ. ಅಂದರೆ, ಗೋಪಿಯರ ವಸ್ತ್ರಾಪಹರಣ ಎಂಬುದು, ಭಗವಂತ ಭಕ್ತರ ಮುಚ್ಚುಮರೆಗಳನ್ನು, ಅಹಂಕಾರಗಳೆಂಬ ವಸ್ತ್ರಗಳನ್ನು ಸೆಳೆದುಕೊಳ್ಳುತ್ತಾನೆ ಎಂಬುದಕ್ಕೆ ಒಂದು ಸಂಕೇತ. ಪು.ತಿ.ನ. ವಸ್ತ್ರಾಪಹರಣ ಪ್ರಸಂಗವನ್ನು ಓದುವ ಸಹೃದಯರ ಮನಸ್ಸನ್ನು ಸಜ್ಜುಗೊಳಿಸುವ ಒಂದು ವಿಧಾನ ಇದು. ಈ ವ್ಯಾಖ್ಯಾನವಿಲ್ಲದೆಯೆ ಆ ಪ್ರಸಂಗ ತನ್ನನ್ನು ತಾನೇ ಸಮರ್ಥಿಸಿಕೊಳ್ಳುವಷ್ಟು ಗಂಭೀರವಾಗಿ ‘ಶ್ರೀಹರಿಚರಿತೆ’ಯಲ್ಲಿ ನಿರ್ವಹಣಗೊಂಡಿದೆ ಎಂಬುದು ಬೇರೆಯ ಮಾತು. ಆದರೂ ಈ ಕುರಿತು, ಪು.ತಿ.ನ. ತಮ್ಮ ವ್ಯಾಖ್ಯಾನವನ್ನು ಮಂಡಿಸುತ್ತಾರೆ. ಕಾಳಿಂಗಮರ್ದನದ ಪ್ರಸಂಗವನ್ನು ಕುರಿತು ಯಾರು ಈ ಕಾಳೀಯ? ‘ಜಲಚರ ಪೆಡಂಭೂತವೋ, ಕಿರುಕುಳದ ನಾಯಕನೋ’ ಎಂಬ ಪ್ರಶ್ನೆಗಳನ್ನು ಮುಂದೆ ಮಾಡಿಕೊಂಡು-

ಕೇಡ ಮೂರ್ತೀಕರಿಸೆ ಬಲುಹೆಡೆಯ
ಘೋರ ಸರ್ಪಾಕೃತಿಗು ಮಿಗಿಲಾವುದೈ? ಸಮುಚಿತಮಲ್ತೆ
ಸಂಪ್ರದಾಯಾನುಸರಣಂ ಕತೆ ಮುಂಬರಿಯಲೀಯೆಡೆಯೊಳ್?

(ಪುಟ ೭-೯೮, ೩೯-೪೧)

ಎಂದು, ಕೇಡಿನ ಪ್ರತೀಕವಾದ ಕಾಳಿಂಗನನ್ನು, ಬಹು ಹೆಡೆಗಳುಳ್ಳ ಸರ್ಪವೆಂದೇ ಭಾವಿಸಿ, ಕೃಷ್ಣ ಕಾಳಿಂಗನೆಂಬ ಘೋರ ಸರ್ಪವನ್ನು ಮರ್ದಿಸಿದನೆಂಬಂತೆ ಸಂಪ್ರದಾಯಾನುಸಾರವಾಗಿ ಕತೆಯನ್ನು ಮುಂದುವರಿಸುವುದೇ ಸರಿ ಎಂದುಕೊಳ್ಳುತ್ತಾರೆ. ಈ ವಿವರಣೆ, ಕವಿ ತನಗೆ ಕೊಟ್ಟುಕೊಂಡ ಒಂದು ಸೂಚನೆಯಾಗಿದ್ದರೆ, ಅನುಚಿತವೇನೂ ಅಲ್ಲ. ಆದರೆ-

‘ದೇಹಪಾತ್ರದಿ ಜೀವವಿದು ಹರಿಯುತಿದೆ, ಮನವದರ ಮಡು
ಯೋಗಕ್ಷೇಮದಹಮಿಕೆಯೆ ಕಾಳಿಂಗನರಿವರ್ಗವೇ
ಫಣಾಮಂಡಲಂ’

(ಪು. ೧೦೨, ೧೭೪-೧೭೬)

ಎಂದು ಸಹೃದಯರಿಗಾಗಿ ನೀಡುವ ಈ ವಾಚ್ಯ ವಿವರಣೆ, ತನಗೆ ತಾನೇ ಸ್ವಾರಸ್ಯವಾಗಿದ್ದರೂ, ನಿಜವಾಗಿಯೂ ಇಲ್ಲಿ ಉಚಿತವಾಗಿದೆಯೇ ಎಂಬ ಪ್ರಶ್ನೆ ನಮ್ಮನ್ನು ಕಾಡುತ್ತದೆ.

‘ಗೋವರ್ಧನೋದ್ಧರಣ’ ಸಂದರ್ಭವನ್ನು ಕುರಿತು ಬರೆಯುವ ಮುನ್ನವೂ ಕವಿ ಆ ಘಟನೆಯ ಸಂಭಾವ್ಯತೆಯನ್ನು ಕುರಿತು, ಓದುಗರಲ್ಲಿ ಏಳಬಹುದಾದ ‘ಅಪನಂಬಿಕೆ’ಯನ್ನು ಕಳೆಯುವಂತೆ,-

ಮಾನ್ಯಮೇ
ಕಾರಣಬದ್ಧಕಾರ್ಯ ಮಹಿಮರೊಳು? ಪವಾಡಮೆ ಸೂಕ್ತ
ಅಂಥವರೂರ್ಜೆಯಂ ಬಣ್ಣಿಸಲು ನಿಲುಕದೂಹೆಯೆಸಕ.
ಒಂದಿನಿತು ದೂರಂ ನಡೆವುದು ತರ್ಕ ಯುಕ್ತಿ ಜಿಜ್ಞಾಸೆ
ಬಳಿಕುನ್ಮಾದಮೂಹಾತೀತಮಸಂಭವ ಸಂಭವಂ
ಮಹಾಪುರುಷ ಚರಿತದೊಳು ಕಾಣಲಕ್ಕುಂ

(ಪು. ೧೧೩,೪-೩)

ಎಂದು, ತಾವು ಇದನ್ನು ಒಂದು ಪವಾಡವೆಂಬಂತೆ ಚಿತ್ರಿಸುವ ಪರಿಯನ್ನು ಸಮರ್ಥಿಸುತ್ತಾರೆ. ಹೀಗೆ ಆಧುನಿಕ ಬುದ್ಧಿಗೆ ಸಮ್ಮತವಾಗುವ ವಿವರಣೆಗಳೂ, ಸಮರ್ಥನೆಗಳೂ, ವ್ಯಾಖ್ಯಾನಗಳೂ-ಈ ಕಥನಕ್ರಮದ ಉದ್ದಕ್ಕೂ ಬರುತ್ತವೆ. ಈ ಪ್ರತ್ಯೇಕ ವಿವರಣೆ, ಚಿಂತನೆ, ವ್ಯಾಖ್ಯಾನಗಳಿಲ್ಲದೆಯೂ, ಪು.ತಿ.ನ. ಅವರು ಚಿತ್ರಿಸಿರುವ ಪ್ರಸಂಗಗಳು, ತಮಗೆ ತಾವೇ ಸ್ವಯಂ ಸಮರ್ಥನೀಯವಾಗಲಾರವೇ ಮತ್ತು ಆಗಿಲ್ಲವೇ? ಹಾಗೆ ಕವಿ ಚಿತ್ರಿಸಿರುವ ಪ್ರಸಂಗಗಳು ತಮಗೆ ತಾವೇ ಸ್ವಯಂ ಸಮರ್ಥನೀಯವಾಗಿರುವುದೇ ನಿಜವಾದ ಕಲೆಗಾರಿಕೆಯ ಲಕ್ಷಣವಲ್ಲವೆ? ಇದು ಯೋಚಿಸಬೇಕಾದ ವಿಷಯ.

ಶ್ರೀ ಪು.ತಿ.ನ. ಅವರು ‘ಶ್ರೀಹರಿಚರಿತೆ’ಯ ತಮ್ಮ ‘ಅರಿಕೆ’ಯಲ್ಲಿ “ಶ್ರೀಕೃಷ್ಣಬಲರಾಮರು ತಮ್ಮ ಎಳೆತನವನ್ನು ಗೋಕುಲದ ಹಳ್ಳಿಗರ ನಡುವೆ ಬೆಳೆದು ಕಳೆದುದು ಅವರ ಬಾಳಿನಲ್ಲೆ ಅಲ್ಲದೆ, ನಮ್ಮೀ ಭಾರತದಲ್ಲೇ ಸಂಭವಿಸಿದ ಮಹತ್ತರವಾದ ಘಟನೆ ಎಂದು ನನ್ನ ಭಾವನೆ” (ಪು. viii) ಎನ್ನುತ್ತಾರೆ. ವಾಸ್ತವದಲ್ಲಿ ನೋಡಿದರೆ ಶ್ರೀಹರಿಚರಿತೆಯ ಕಥಾವಸ್ತುವೇ ಇದು. ಕೃಷ್ಣ ಹಳ್ಳಿಯ ಹಾಗೂ ಹಳ್ಳಿಗರ ನಡುವೆ ತನ್ನ ವ್ಯಕ್ತಿತ್ವವನ್ನು ಕಂಡುಕೊಂಡ ಹಾಗೂ ರೂಪಿಸಿಕೊಂಡ ನಾಯಕ. ಅವನ ಮಹಿಮಾತಿಶಯಗಳನ್ನು ಅವನೆಸಗಿದ ಅಘಟಿತ ಘಟನೆಗಳನ್ನು ಬದಿಗಿರಿಸಿ ನೋಡಿದರೂ, ಒಬ್ಬ ಅದಮ್ಯವಾದ ಜೀವನಪ್ರೀತಿಯನ್ನುಳ್ಳ ಹುಡುಗ, ಗ್ರಾಮೀಣ ಪರಿಸರದ ಜನರ ಜತೆ ಒಂದಾಗಿ, ಅವರ ಕಷ್ಟಸುಖಗಳಲ್ಲಿ ಭಾಗಿಯಾಗಿ, ಕಾಡುಮೇಡುಗಳನ್ನು, ಬೆಟ್ಟ ಹೊಳೆಗಳನ್ನು ಪ್ರೀತಿಸುವುದನ್ನು ಕಲಿಸಿ, ತನ್ನ ಕೊಳಲುಲಿಯ ಕಲಾವಂತಿಕೆಯಿಂದ ಎಲ್ಲರ ಮನಸ್ಸನ್ನೂ ಸೂರೆಗೊಂಡು, ಅವರಿಗೆ ಆಗಾಗ ಒದಗಿದ ವಿಪತ್ತುಗಳನ್ನು ತನ್ನ ಅಸಾಧಾರಣ ಸಾಮರ್ಥ್ಯದಿಂದ ಪರಿಹರಿಸಿ, ಅವರ ವೈಚಾರಿಕತೆಯನ್ನು ಎಚ್ಚರಿಸಿ, ಅವರಿಗೆ ಆತ್ಮಪ್ರತ್ಯಯವನ್ನು ತುಂಬಿ, ತಾನು ಅವರೆಲ್ಲರ ನಾಯಕನಾಗಿ ರೂಪುಗೊಂಡ ಪರಿಯನ್ನು ಹರಿಚರಿತದಲ್ಲಿ ಕಾಣಬಹುದು.ನಿಜವಾದ ನಾಯಕ ತನ್ನ ಜನವನ್ನು ಹೇಗೆ ಮುನ್ನಡೆಸಬಲ್ಲ ಎನ್ನುವುದಕ್ಕೆ ಅವನು ತನ್ನ ಜನದಲ್ಲಿ  ಮೂಡಿಸುವ ಹೊಸ ಎಚ್ಚರವೇ ಸಾಕ್ಷಿ. ಇದು ಪರಂಪರಾಗತವಾಗಿ ಬಂದ ‘ಇಂದ್ರಪೂಜೆ’ಯನ್ನು ನಿರಾಕರಿಸಿ ‘ಗೋವರ್ಧನಗಿರಿ’ಯನ್ನು ಪೂಜಿಸುವಂತೆ ತನ್ನ ಜನವನ್ನು ಮನವೊಲಿಸಿದ ಕೃಷ್ಣನ ನಿರ್ದೇಶನದಲ್ಲಿ ಕಾಣುತ್ತದೆ. ಬೃಂದಾವನದ ಜನ ಇಂದ್ರನ ಪೂಜೆಯನ್ನು ಮಾಡಿಕೊಂಡು ಬರುವುದು ಬಹುಕಾಲದ ರೂಢಿ. ಇಂದ್ರನಿಂದ ಮಳೆ, ಬೆಳೆ, ಕ್ಷೇಮ ಎಂಬ ನಂಬಿಕೆ ಅವರದು. ಆದರೆ ಕೃಷ್ಣ-

ಇದಿರೊಳಿರೆ ಪ್ರತ್ಯಕ್ಷದೈವಂ
ನಮ್ಮ ಗೋವರ್ಧನಂ, ಹುಂಬತನ
ಬೇರೆಯ ದೈವವಂ
ಪೂಜಿಪುದಾವು?

(ಪು, ೧೦೬, ಪು.೯೩-೯೪)

ಎಂಬ ವಿಚಾರವನ್ನು ಮಂಡಿಸುತ್ತಾನೆ. ಕಾಣದಿರುವ, ರೂಢಿಯಿಂದ ನಂಬಿಕೊಂಡು ಬಂದ ದೈವಕ್ಕಿಂತ, ಕಣ್ಣಿಗೆ ಕಾಣುವ ಗೋವರ್ಧನ ಪರ್ವತವೇ ನಿಜವಾದ   ದೇವರು ಎಂಬ ತಿಳುವಳಿಕೆಯನ್ನುಂಟು ಮಾಡುತ್ತಾನೆ. ‘ದೇವನಪ್ಪೊಡೆ ಮುಗಿಲೊಡೆಯ, ಮಲೆಯೇಕೆ ದೇವನಾಗಂ?’ ಎಂಬ ವಿಚಾರವನ್ನು ಗೋವರು ಒಪ್ಪಿಕೊಂಡು,  ಹಳೆಯಸಂಪ್ರದಾಯವನ್ನು ತಿರಸ್ಕರಿಸಲು ಸಿದ್ಧರಾಗುತ್ತಾರೆ. ಹಾಗೆಯೇ ‘ಗೋವರ್ಧನ ಪರ್ವತ’ದ ಪ್ರತೀಕವೊಂದು ಅವರ ಉತ್ಸವದ ಆರಾಧನೆಯ ವಸ್ತುವಾಗುತ್ತದೆ (ಈ ಸಂದರ್ಭದಲ್ಲಿ ಪು.ತಿ.ನ. ಅವರು ವರ್ಣಿಸುವ ಹೋಮಾದಿ ಕರ್ಮಗಳೂ ಮತ್ತು ಅವುಗಳನ್ನು ಸಮರ್ಥಿಸುವ ಮಾತುಗಳೂ-ಇಲ್ಲಿಗೆ ಖಂಡಿತ ಅಸಂಗತವಾಗುತ್ತವೆ) ಹೀಗೆ ಒಂದು ಜನ ರೂಢಿಗತ ಆಚಾರ ವಿಚಾರಗಳನ್ನು ನಿರಾಕರಿಸುವಂತೆ ಮಾಡಿದ್ದು ಸಾಮಾನ್ಯವಾದ ಸಂಗತಿಯೇನಲ್ಲ. ಆದರೆ ಹಳೆಯ ಸಂಪ್ರದಾಯ ಅಷ್ಟು ಸುಲಭವಾಗಿ ಹೊಸ ಪರಿರ್ವತನೆಗಳಿಗೆ ಅವಕಾಶ ಕೊಡುವುದಿಲ್ಲ. ಆಗ ಅಂಥ ಪ್ರತಿರೋಧವನ್ನು ಎದುರಿಸಲು ಮಹಾಸತ್ವಶಾಲಿಗೆ ಮಾತ್ರ ಸಾಧ್ಯ. ಇಂದ್ರಪೂಜೆಯನ್ನು ನಿರಾಕರಿಸಿ, ಗೋವರ್ಧನಗಿರಿಯ ಪೂಜೆಗೆ ತೊಡಗಿದ್ದ ಗೋವಳರು ಎದುರಿಸಬೇಕಾಗಿ ಬಂದದ್ದು, ಹಳೆಯ ಸಂಪ್ರದಾಯದ ಪ್ರತಿನಿಧಿಯಾದ ಇಂದ್ರನ ಕೋಪದ ಬಿರುಬನ್ನು. ಇಂದ್ರ ಕೋಪಕ್ಕೆ ಎದುರಾದ ತನ್ನ ಜನವನ್ನು ರಕ್ಷಿಸಲು ಸತ್ವಶಾಲಿಯಾದ ಶ್ರೀಕೃಷ್ಣನು ಗೋವರ್ಧನಗಿರಿಯನ್ನೇ ಎತ್ತಿಹಿಡಿದು ತನ್ನ ಮಹಿಮೆಯನ್ನು ಪ್ರಕಟಿಸುತ್ತಾನೆ. ಅಷ್ಟೇ ಅಲ್ಲ, ಇಂದ್ರನ ಕೋಪದಿಂದ ಹಾಳಾದ ಬೃಂದಾವನದ ಗೊಲ್ಲರ ಕೇರಿಯನ್ನು ಮತ್ತೆ ಹೊಸದಾಗಿ ಕಟ್ಟಲು ಅಗತ್ಯವಾದ ಉತ್ಸಾಹವನ್ನು ತನ್ನ ಜನದಲ್ಲಿ ತುಂಬುತ್ತಾನೆ. ಶ್ರೀಕೃಷ್ಣ ಒಂದು ಜನಸಮಷ್ಟಿಯ ನಾಯಕನಾಗಿ ರೂಪುಗೊಂಡದ್ದು ಹೀಗೆ.

ಕವಿ ಪು.ತಿ.ನ. ಅವರು ೧೯೪೫ರಷ್ಟು ಹಿಂದೆಯೇ ಬರೆದ ‘ಗೋಕುಲ ನಿರ್ಗಮನ’ವೆಂಬ ಅಪೂರ್ವ ಗೀತರೂಪಕ, ‘ಶ್ರೀ ಹರಿಚರಿತ’ವೆಂಬ ಮಹಾಕಾವ್ಯಖಂಡದಲ್ಲಿ ಚಿತ್ರಿತವಾಗಿರುವ ಕೊಟ್ಟ ಕೊನೆಯ ಘಟನೆಯನ್ನು ಕುರಿತದ್ದಾಗಿದೆ. ‘ಗೋಕುಲ ನಿರ್ಗಮನ’ ಗೀತರೂಪಕದ ಎಷ್ಟೋ ಪಂಕ್ತಿಗಳೂ, ಚಿಂತನೆಗಳೂ, ಕಲ್ಪನೆಗಳೂ ಶ್ರೀಹರಿಚರಿತೆಯ ಒಡಲಲ್ಲಿ ಅಲ್ಲಲ್ಲಿ ಮಿನುಗುತ್ತವೆ. ಅವರು ‘ಗೋಕುಲ ನಿರ್ಗಮನ’ವನ್ನು ಬರೆದ ಕಾಲದಲ್ಲಿಯೇ ‘ಶ್ರೀಹರಿಚರಿತೆ’ಯ ನಿರ್ಮಿತಿಗೂ ತೊಡಗಿದಂತೆ ತೋರುತ್ತದೆ. ಆದರೆ ಆಗ ರಚಿತವಾದ ‘ಗೋಕುಲ ನಿರ್ಗಮನ’, ಅವರು ಆನಂತರ ಪ್ರಾರಂಭಿಸಿ, ಇತ್ತೀಚೆಗೆ ಪೂರ್ಣಗೊಳಿಸಿದ ‘ಶ್ರೀಹರಿಚರಿತೆ’ಯ, ಗೋಪುರದಂತೆ ನಮಗೆ ಭಾಸವಾಗುತ್ತದೆ. ಆದರೆ ಇಷ್ಟು ಮಾತ್ರ ನಿಜ: ‘ಗೋಕುಲ ನಿರ್ಗಮನ’ದ ಶಿಲ್ಪ, ಅದರ ಅದ್ಭುತ ನಾಟ್ಯಮಯತೆ, ಗೇಯತೆ, ಕೃಷ್ಣನ ಕೊಳಲಿನ ಮಾಧುರ್ಯದ ಮೋಡಿ, ಕೊಳಲಗಾನದಲ್ಲಿ ಪ್ರತಿಯೊಬ್ಬರಿಗೂ ಒದಗುವ ಬಿಡುಗಡೆಯ ನಲವು, ಕೊನೆಗೆ ಅದು ಉಳಿಸುವ ವಿಷಾದ ಮೂಲವಾದ ವಿರಹಭಾವ, ಈ ಎಲ್ಲವನ್ನೂ ‘ಶ್ರೀಹರಿಚರಿತೆ’ ನಮ್ಮ ಮೇಲೆ ಉಂಟು ಮಾಡುವ ಪರಿಣಾಮದೊಂದಿಗೆ ಹೋಲಿಸಿ ನೋಡಿದರೆ, ‘ಗೋಕುಲ ನಿರ್ಗಮನ’ವೇ ಮನಸ್ಸನ್ನು ಹೆಚ್ಚು ಸೂರೆಗೊಳ್ಳುವ ಕೃತಿಯಂತೆ ತೋರುತ್ತದೆ. ಆದರೆ ಇಷ್ಟು ಮಾತ್ರ ನಿಜ: ‘ಗೋಕುಲ ನಿರ್ಗಮನ’ ಅತ್ಯಂತ ಉತ್ಕಟವಾದ ಅನುಭವವೊಂದು ಮಡುಗೊಂಡ ರೂಪಕವಾದರೆ, ‘ಶ್ರೀಹರಿಚರಿತೆ’ ಪು.ತಿ.ನ. ಅವರ ಚಿಂತನ ಪ್ರತಿಭೆಯ ಹೊನಲಾಗಿದೆ.

-೧೯೯೧