ತಾಲಲಲೇ ಮಾಯೀ ತಾಲಲಲೇ             ||ಪಲ್ಲವಿ**||
ಕೊಲ್ಲಂಪುರದ ಪಟ್ಟಣದೊಳಗೆ
ಇಡ್ಲಿ ಮಾದಮ್ಮ ಇದ್ದಳಣ್ಣ
ಅವಳು ಇಡ್ಲಿನಾದರು ಮಾಡ್ತಾಳೆ
ಕಾಫಿನಾದರು ಕಾಯಿಸ್ತಾಳೆ
ಇಡ್ಲಿ ಮಾದಮ್ಮನ ಜಾತ್ಯವನು
ಮಾತುಗಾರ ಮಲ್ಲಣ್ಣನಣ್ಣ
ಇಡ್ಲಿ ಮಾರುವ ಮಾದಮ್ಮನಿಗೆ
ಕರೀಂ ಸಾಬರು ಸ್ನೇಹಿತರಣ್ಣ

ಕೊಲ್ಲಂಪುರದ ಇಡ್ಲಿ ಮಾದಮ್ಮನವರು ಮುಸುರೆ ವ್ಯಾಪಾರ. ಅದೇ ಊರಿನ ಮಲ್ಲಣ್ಣನದು ಎತ್ತು ಎಮ್ಮೆ ದಳ್ಳಾಳಿ ವ್ಯಾಪಾರ. ಕರೀಂ ಸಾಬರದು ಫುಟ್‌ಪಾತ್ ವ್ಯಾಪಾರ. ಇಡ್ಲಿ ಮಾದಮ್ಮನೂ ಕರೀಂ ಸಾಬರೂ ಚಿಕ್ಕಂದಿನಿಂದಲೂ ಸ್ನೇಹಿತಗಾರರು ಮಾದಮ್ಮನ ಜಾತಿಯವ ಮಲ್ಲಣ್ಣ. ಎಲ್ಲರನ್ನೂ ಬಿಟ್ಟು ಸಾಬರ ಜೊತೆ ಹಾಕ್ಕಂಡವಳೆ ಅಂತ ಅವನಿಗೆ ಹೊಟ್ಟೆ ಉರಿ. ಒಂದಿನ ಮಲ್ಲಣ್ಣನೂ ಕರೀಂ ಸಾಬರೂ ಮರಳ್ಳಿ ಸಂತೆಗೆ ವ್ಯಾಪಾರಕ್ಕೆ ಹೋದರು. ದೊಡ್ಡ ಸಂತೆ, ಜೋರಾಗಿತ್ತು ವ್ಯಾಪಾರ. ಮಲ್ಲಣ್ಣನ ದಳ್ಳಾಳಿ ವ್ಯಾಪಾರ ಬೇಗ ಮುಗಿತು. ಊರಿಗೆ ಬಂದ, ದಳ್ಳಾಳಿ ಆಸೇಲಿ ಹೋಟಲಿಗೆ ಹೋಗಿ ನಾಷ್ಟ ಮಾಡೋದೂ ಮರೆತೋಯ್ತು. ಇಡ್ಲಿ ಮಾದಮ್ಮನ ನೆನಸಿಕೊಂಡು ಬಂದು ಕೇಳಿದ :

ಸಾಬರ ಮೆಟರೆ ಹಿಡಿದುಕಂಡು
ಹಿಸುಕಿ ಹಿಸುಕಿ ಬಿಟ್ಟನಣ್ಣ |

ಹಿಂದಕ್ಕೆ ಮುಂದಕ್ಕೆ ಸೂಲು ಬರದ ಕರೀಂ ಸಾಬರಿಗೆ ಪ್ರಾಣ ಹೋಗಿಬಿಟ್ಟಿತು. ಕುರ್ಚಿಯಿಂದ ಕೆಳಕ್ಕೆ ಬಿದ್ದುಕೊಂಡರು. ಮಾದಮ್ಮ ಸ್ನೇಹಿತನಿಗೆ ಹಾಲು ಕಾಯಿಸಿಕೊಂಡು ಬಂದು ನೋಡಿದಳು.

ಹಾಲ್ ಕಾಯಿಸ್ಕಂಡ್ ನಾ ಬಂದಿ
ಹಲ್ ಕಿರಿಕಂಡು ನೀ ಬಿದ್ದೀ

ಅಲುಗಾಡಿಸಿದಳು. ಏಳಲಿಲ್ಲ. ಸತ್ತಿದ್ದಾನೆ ಅಂತ ಗೊತ್ತಾಯಿತು.

ಇವರಪ್ಪನ ತಿನ್ನ ಕರೀಂಸಾಬರು
ಇಲ್ಲೆ ಬಂದು ಸಾಯಲು ಬೇಕಾ ?

ಸಾಬರು ಸತ್ತಿದ್ದಾರೆ. ಏನು ಮಾಡುವುದು ? ಸಾಬರವನ ಇಟ್ಕೊಂಡವಳೆ ಅಂತ ಮೊದಲೇ ಊರಿಗೆಲ್ಲ ಹಗೆ. ಮನೆ ಜಗಲಿಯಲ್ಲಿ ಮಲ್ಲಣ್ಣ ಮಲಗಿದ್ದುದು ಜ್ಞಾಪಕಕ್ಕೆ ಬಂತು. ಬಂದು ಅವನನ್ನು ಎಬ್ಬಿಸಿದಳು :

“ಮಲ್ಲಣ್ಣ ಮಲ್ಲಣ್ಣಾ, ಸಂದೆಲ್ಲ ಬಂದು ನೀನು ಇಡ್ಲಿ ಕೊಡು ಅಂದೆ, ಇರ‍್ನಿಲ್ಲ ಕೊಡ್ನಿಲ್ಲ. ಜಾತಿಯವನು. ಹಸ್ಕಂದು ಮನ್ಗವನಲ್ಲಾಂತ ಈಗ ಮಾಡಿವ್ನಿ, ಬಾ ತಿನ್ನು”.

ಮಲ್ಲಣ್ಣ ಏನೂ ಮಾತಾಡಲಿಲ್ಲ. ಹೋಗಿ ಕುರ್ಚಿ ಮೇಲೆ ಕುಳಿತ, ಪ್ರೀತಿಯಿಂದ ಮಾದಮ್ಮ ಇಡ್ಲಿ ಕೊಟ್ಟಳು, ತಿಂದ ಎದ್ದು ಬರುವಾಗ ಎಡವಿಬಿದ್ದು, “ಇದೇನ್ ಇದು ? ಬಿದ್ದಿರುದು ?” ಅಂದ.

“ಮಲ್ಲಣ್ಣ ಮಲ್ಲಣ್ಣ, ನಿನ್ನ ದಮ್ಮಯ್ಯ ಅಂತಿನಿ, ಕೂಗ್ಕ ಬ್ಯಾಡ, ಹಾಳಾದವ್ನು ಕರೀಂ ಸಾಬರು ಇಲ್‌ಬಂದು ಸತ್ತೋಗವರೆ. ಯಾರ‍್ಗೂ ತೂಕ್ಕಿಲ್ಲ ದಂಗೆ ಇವರ ಹೆಣ ಸಾಗಿಸ್‌ಬುಡು”.

“ಹೋಗಮ್ಮಾಮೋ, ನಾನೇನ್ ಹೆಣ ಹೊರವ್ನು ಅಂತ ತಿಳ್ಕಂಡ್ಯಾ, ದಳ್ಳಾಳಿ ಮಾಡ್ಕ ಬಂದಿವ್ನಿ, ಆಯಾಸ ಆಗೈತಿ, ಮನಿಕಬೇಕು”

“ದಮ್ಮಯ್ಯ ಮಲ್ಲಣ್ಣಾ, ನೀನೇನು ಹಂಗೆ ಮಾಡ್‌ಬ್ಯಾಡ, ನೂರು ರೂಪಾಯಿ ಕೊಡ್ತೀನಿ, ಯಾರ‍್ಗೂ ಕಾಣ್ದಂಗ ಮಣ್ ಮಾಡ್‌ಬುಡು”

“ಇಡ್ಲಿ ಮಾದಮ್ಮ ಬೋ ಹಸ್ವಾಗದೆ. ಒಂದು ದುಡ್ಡಿಗೆ ಇಡ್ಲಿಕೊಡು”.

“ಅಲ್ಲಕನ ಮಲ್ಲಣ್ಣಾ. ಸಂಜೆ ಆರ್‌ಗಂಟೆ ಆಗದೆ. ಈಗ ಬಂದು ಇಡ್ಲಿ ಕೇಳ್ತಿದ್ದಿಯಲ್ಲಾ ? ಎಲ್ಬಂತು ಇಲ್ಲ”.

ಮಾದಮ್ಮ ಸುಳ್ಳು ಹೇಳ್ತಾ ಅವಳೆ ಅನ್ನಿಸಿತು. ಕರೀಂ ಸಾಬಿ ಬಂದು ಕೇಳಿದ್ದರೆ ಕೊಡದೆ ಇರ್ತಿದ್ದಳಾ, ನೋಡುವಾ ಅಂತ, “ಇಡ್ಲಿ ಕೊಡ್ದಿದ್ರೆ ಹೋಕ್ಕಳ್ಳಿ, ಹೆಂಗೂ ಸಂಜೆ ಆಗದೆ. ಇಲ್ಲೆ ಮನಿಕತ್ತಿನಿ ವಸಿ ಜಾಗ ಕೊಡ” ಅಂದ.

“ಜಾತುಳ್ಳ ಜಾತ್ಯವನು, ನಿಂಗಿಲ್ಲ ಅನ್ನುಕಾದದ ? ಮನಿಕ್ಕೊ “ಅಂದಳು ಮಲ್ಲಣ್ಣ ಇಡ್ಲಿ ಮಾದಮ್ಮನ ಹಟ್ಟಿ ಜಗಲಿ ಮೇಲೆ ಮಲಿಕಂಡ.

ಮರಳ್ಳಿ ಸಂತೆಯ ಬಿಟ್ಟನಣ್ಣ
ಹೆರಕು ಚಡಾವ ಮೆಟ್ಟನಣ್ಣ
ಸರಕ ಪುರಕನೆ ಬಂದನಣ್ಣ
ಕೊಲ್ಲಂಪುರಕೆ ಬಂದನಣ್ಣ

ವ್ಯಾಪಾರ ಮುಗಿಸಿಕಂಡು ಕರೀಂ ಸಾಬರು ಊರಿಗೆ ಬರೋ ಹೊತ್ತಿಗೆ ರಾತ್ರಿ ಮೀರಿತ್ತು. ಸ್ನೇಹಿತಗಾತಿ ಮನೆಗೆ ಬಂದು ಕದ ಬಡಿದ. ಬಂದವರು ಯಾರು ಅಂತ ಗೊತ್ತಾಯಿತು. ಮಾದಮ್ಮ ಕದ ತಗಿದಳು. ಕರೀಂಸಾಬರು ಕುರ್ಚಿ ಮೇಲೆ ಹೋಗಿ ಕುಳಿತರು. ಸ್ನೇಹಿತನಿಗಾಗಿ ಒಂದು ಬುಟ್ಟಿ ಇಡ್ಲಿ ತುಂಬಿ ಅಟ್ಟದ ಮೇಲೆ ಮಡಗಿದ್ದಳು.

ಇಡ್ಲಿನಾದರು ತಗದಳಣ್ಣ
ಸಾಬರ ಮುಂದೆ ಇಟ್ಟಳಣ್ಣ

“ಇಡ್ಲಿ ತಿನ್ತಾ ಇರು. ಹಾಲ್ ತಕ್ಕಬತ್ತಿನಿ” ಅಂತ ಮಾದಮ್ಮ ಒಳಕ್ಕೆ ಹೋದಳು. ಕರೀಂ ಸಾಬರು ಕುಳಿತಿದ್ದ ಕಡೆ ಗಾಳಿ ಹವಕ್ಕೆ ಒಂದು ಕಿಟಕಿ ಇತ್ತು. ಎಚ್ಚರವಾಗಿಯೇ ಇದ್ದ ಮಲ್ಲಣ ಎದ್ದು ನೋಡಿದ, ಕುರ್ಚಿ ಮೇಲೆ ಸಾಬರು. ಮುಂದೆ ಒಂದು ಬುಟ್ಟಿ ತುಂಬಾ ಇಡ್ಲಿ. ಇಂದು ಇಡ್ಲಿ ಮುರಿದು ಸಾಬಿ ಬಾಯಿಗೆ ಹಾಕ್ಕಂಡನೋ ಇಲ್ಲವೋ ಮಲ್ಲಣ್ಣ –

ಕಿಟಕಿ ಒಳಗೆ ಕೈಯ ಹಾಕಿ
ಸಾಬರ ಮೆಟರೆ ಹಿಡಿದನಣ್ಣ

“ನೂರು ರೂಪಾಯ್ಗೆ ನನ್ಕೈಲಿ ಆಗಲ್ಲಕಪ್ಪಾ, ಯಾರ‍್ಗಾನ ಕಂಡ್ರೆ ಏನ್‌ಗತಿ ? ಊರವರ್ರು ಸುಮ್ಗೆ ಬುಟ್ಟರಾ ?……….

“ಇನ್ನೂರ್ ರೂಪಾಯಿ ಕೊಡ್ತೀನಿ, ಮಲ್ಲಣ್ಣಾ ಯಾರ‍್ಗೂ ಹೇಳ್ ಬ್ಯಾಡ, ತಕ್ಕಂದೋಗಿ ಮಣ್ ಮಾಡ್‌ಬುಡು………..

ಕರೀಂ ಸಾಬರ ಹೊತ್ತಿಕಂಡ
ಪಟೇಲರ ಮನೆಗೆ ಬಂದನಣ್ಣ
ಪಟೇಲರ ಮನೆಗೆ ಬಂದೀಗ
ಖಜಾನೆ ಬೀಗ ಹಿಡಿಸಿದನಣ್ಣ

ಎಲ್ಲರನ್ನೂ ಬಿಟ್ಟು ಸಾಬರ ಸಂಗ ಮಾಡಿದ್ದಳು. ಮಾದಮ್ಮನಿಗೆ ಬುದ್ಧಿ ಕಲಿಸ್ತೀನಿ ಅಂತ ಮಲ್ಲಣ್ಣ ಕರೀಂ ಸಾಬರ ಹೆಣ ಹೊತ್ತುಕಂಡು ಊರ ಪಟೇಲರ ಮನೆಗೆ ಬಂದು ಹಣದ ಪೆಟ್ಟಿಗೆ ಹತ್ತಿರ ನಿಲ್ಲಿಸಿ, ಪುನಃ ಬಂದು ಮಾದಮ್ಮನ ಜಗಲಿಯ ಮೇಲೆ ಮಲಗಿಕೊಂಡ.

ಪಟೇಲರ ಮನೆಯನ್ನು ಇಬ್ಬರು ಆಳು ಕಾವಲು ಕಾಯುತ್ತಿದ್ದರು. ರಾತ್ರಿ ಹೊತ್ತು. ಯಾರೋ ಬಿಳಿಬಟ್ಟೆ ಉಟ್ಟುಕೊಂಡು, ಖಜಾನೆಗೆ ಕೈಹಾಕಿದ್ದುದು ಕಾಣಿಸಿತು.

ಬೀಡದೊಣ್ಣೆ ತೆಗೆದರಣ್ಣ
ಬುರುಡೆ ನೋಡಿ ಬಿಟ್ಟರಣ್ಣ
ಬುರುಡೆ ನೋಡಿ ಬಿಟ್ಟರೀಗ
ದುಬ್ಬನೆ ಕೆಳಗೆ ಬಿದ್ದಿತಣ್ಣ

ನಿಂತಿದ್ದವನು ಕೆಳಗೆ ಬಿದ್ದ ಮೇಲೆ ಬ್ಯಾಟರಿ ಹಾಕಿ ನೋಡಿದರು. ಕರೀಂ ಸಾಬರು. ಉಸಿರೇ ಇಲ್ಲ ! ಏನ್ ಮಾಡುದು ? ನಾವೇ ಕೊಂದವರು ಅಂತ ಗೊತ್ತಾದರೆ ಊರವರು ಸುಮ್ಮನೆ ಬಿಟ್ಟಾರ ? ಪಟೇಲರೂ “ಯಾಕರ‍್ಲಾ ಸಾಯಿಸಿದ್ರಿ, ಹಂಗೇ ಹಿಡ್ಕಂಬರ‍್ಬೇಕಿತ್ತು. ಮನೆ ಕಾಯಿರಿ ಅಂದ್ರೆ ಜನ ಸಾಯಿಸಿದ್ದೀರಿ” ಅಂತ ತಪ್ಪು ಹೊರಿಸುತ್ತಾರೆ. ಅವರಲ್ಲಿ ಒಬ್ಬನಿಗೆ ತಲೆ ಓಡಿತು. “ನೋಡ್ಲಾ, ಹೆಂಗೂ ಕರೀಂ ಸಾಬರ‍್ಗೂ ಇಡ್ಲಿ ಮಾದಮ್ಮನ್ಗೂ ಸೋಜನ್ಕೆ ಅದೆ. ಅಲ್ಗೆ ತಕ್ಕಂದೋಗಿ ಮನಿಗಿಸ್ಬಿಡ್ಮಾ. ತಪ್ಪು ನಮ್ಮೇಲೆ ಬರಾಕಿಲ್ಲ” ಅಂದ. ಅದೇ ಸರಿ ಅನ್ನಿಸಿತು :

ಕರೀಂ ಸಾಬರ ಹೊತ್ತರಣ್ಣ
ಇಡ್ಲಿ ಮಾದಮ್ಮನ ಮನೆತಾಕೆ

ಸದ್ದಾಗದಂತೆ ಮಾದಮ್ಮನ ಜಗಲಿ ಮೇಲೆ ಸಾಬರ ಹೆಣವನ್ನು ಮಲಗಿಸಿಬಿಟ್ಟರು. ನಾಳೆಗೆ ಇಡ್ಲಿ ವ್ಯಾಪಾರ ನಿಲ್ಲಿಸಿಬಿಟ್ಟರೆ ಊರಿನ ಜನರಿಗೆ ಗುಮಾನಿ ಬರುತ್ತೆ ಅಂತ ಹೊತ್ತು ನೋಡುಕೆ ಹೊರಕ್ಕೆ ಬಂದಳು ಮಾದಮ್ಮ :

ಹಟ್ಟಿಯ ಕದವ ತಗದಳಣ್ಣ
ಸಾಬರ ಬುರುಡೆ ಕಂಡಳಣ್ಣ
ಸಾಬರ ಸಂಗ ಅಭಿಮಾನ ಭಂಗ
ಸಾವಿರ ಕೊಟ್ಟರೂ ಬ್ಯಾಡಕಣೋ

ಮಲ್ಲಣ್ಣನನ್ನು ಕೂಗಿ ಎಬ್ಬಿಸಿದಳು : “ಮಲ್ಲಣ್ಣ, ಮಲ್ಲಣ್ಣಾ ಇನ್ನೂರ್ ರೂಪಾಯಿ ಕೊಟ್ಟೆ. ಸಾಬರ ಮಣ್ ಮಾಡು ಅಂತ. ಇಲ್ಲೆ ಬಂದದೆ ನೋಡು ಹೆಣ’.

“ಮೂರು ಮೈಲಿ ತಕ್ಕಂದೋಗಿ, ಮೂರಾಳುದ್ದ ಗುಂಡಿ ಕಿತ್ತು, ಮೂರು ಗಾಡಿ ಮಣ್ ಅಗ್ತು ಬಂದಿ. ಹಾಲ್ಕಾಯ್ಸಿ ಸಕ್ರೆ ಜಾಸ್ತಿ ಹಾಕಿ ರುಚಿ ತೋರಿಸ್ದಿ, ನಿನ್‌ಮ್ಯಾಲೆ ಪಿರುತಿ ಜಾಸ್ತಿ ಅದ್ಕೆ ಬಂದದೆ’.

“ಅಣ್ಣಾ ಮಲ್ಲಣ್ಣಾ, ಊರವರ‍್ಗೆ ಗೊತ್ತಾದ್ರೆ ನನ್ನ ಬುಡುಕಿಲ್ಲ. ಇನ್ನೊಂದಪ ತಕ್ಕಂದೋಗಿ ಹೊತ್ಬುಟ್ಟು ಬಾ’.

“ಹೋಗಮ್ಮಮೋ ನಾ ನಿದ್ದೆ ಮಾಡ್ಬೇಕು. ಸತ್ತೆಣ ಹೊರುಕೆ ನನ್ಕೈಲಿ ಆಗಾಕಿಲ್ಲ. ಸತ್ತೋದ್ರೂ, ಅವನ್ನ ಬುಟ್ಟು ನೀನಿರೆ, ನಿನ್‌ಬುಟ್ಟು ಅವನಿರ, ನಾನೇನ್ ಮಾಡ್ಲೀ’.

“ಹಂಗನ್‌ಬ್ಯಾಡಕಣ್ಣಾ, ಇನ್ನೊಂದ್ ನೂರ್ ಕೊಡ್ತೀನಿ, ತಕ್ಕಂದೋಗಿ ಮಣ್ ಮಾಡ್‌ಬುಡು;.

ಕರೀಂ ಸಾಬರ ಹೊತ್ತನಣ್ಣ

ಶಾನುಬೋಗರ ಮೆಣಸಿನ ತೋಟ್ಕೆ

ಹೆಣ ಹೊತ್ತುಕೊಂಡು ಊರ ಶ್ಯಾನುಭೋಗರ ಮೆಣಸಿನ ತೋಟಕ್ಕೆ ಬಂದ, ದೀಪಾವಳಿ ತಿಂಗಳು, ಮೆಣಸಿ ಚೆನ್ನಾಗಿ ಬೆಳೆದಿತ್ತು. ಮೆಣಸಿ ಹಣ್ಣು ತೂಗಿ ಬಾಗಿತ್ತು. ಇದೂ ಒಂದು ತಮಾಷೆ ನೋಡೋಣ ಅಂದುಕೊಂಡು, ಹೆಣದ ಕತ್ತಿಗೆ ಕವಡು ಕೋಲು ಕೊಟ್ಟು ಮೆಣಸಿ ಗಿಡದ ಪಕ್ಕದಲ್ಲಿ ಕೂರಿಸಿದ. ಎಂದಿನಂತೆ ಬಂದು ಮಾದಮ್ಮನ ಜಗಲಿಯ ಮೇಲೆ ಮಲಗಿಕೊಂಡ.

ರಾತ್ರಿ ಗಂಗಮ್ಮ ಹರಿಯೋದನ್ನು ನಿಲ್ಲಿಸುವ ಹೊತ್ತು. ಶ್ಯಾನುಭೋಗರ ಆಳುಗಳು

ತೋಟ ಕಾಯುವುದಕ್ಕೆ ಬಂದರು. ಬಿಳಿ ಮಲ್ ಜುಬ್ಬ ಹಿಕ್ಕಂಡು ಯಾರೋ ಮೆಣಸಿನ ಹಣ್ಣು ಕೀಳುತ್ತಿದ್ದಾರೆ !

ಹಿತ್ತಲ ಬೇಲಿ ನೆಗೆದರಣ್ಣ
ರಡ್ದೆ ದೊಣ್ಣೆ ತಗದರಣ್ಣ
ಬುರುಡೆ ನೋಡಿ ಬಿಟ್ಟರಣ್ಣ
ದುಬ್ಬನೆ ಸಾಬಿ ಬಿದ್ದನಣ್ಣ

ಕೆಳಗೆ ಬಿದ್ದವನನ್ನು ನೋಡಿದರು. ಕರೀಂಸಾಬಿ ಸತ್ತೇ ಹೋಗಿದ್ದಾನೆ. ಕೊಂದವರು ಯಾರು ಅಂತ ಗೊತ್ತಾಗಿಬಿಟ್ಟರೆ ಊರಿನವರು ಬಿಡ್ತಾರಾ ? ಆಳು ಮಾತಾಡಿಕೊಂಡರು : “ಕರೀಂ ಸಾಬರ‍್ಗೂ ಇಡ್ಲಿ ಮಾದಮನ್ಗೂ ದೋಸ್ತಿ. ಇಡ್ಲಿ ಚಟ್ನಿಗೆ ಮೆಣ್ಸಿಕಾಯಿ ತತ್ತಾ ಅಂದಿರಬೈದು. ಅದ್ಕೆ ಸಾಬ್ರು ಬಂದು ಕುಯ್ತಿದ್ರು. ಮಾದಮ್ನ ಮನೆತಾಕೇ ಹೆಣ ಸಾಗಿಸ್ಬುಡ್ಮಾ, ನಮ್ಮೇಲೆ ತಪ್ಪು ಬರಾಕಿಲ್ಲ”.

ಕರೀಂ ಸಾಬರ ಹೊತ್ತರಣ್ಣ
ಇಡ್ಲಿ ಮಾದಮ್ನ ಮನೆತಾಕೆ

ಕೋಳಿ ಕೂಗು ಹೊತ್ತಾಗಿತ್ತು. ಇಡ್ಲಿ ಮಾಡದಿದ್ದರೆ ಊರಿನವರಿಗೆ ಸಂಶಯ ಬರುತ್ತದೆ ಎಂದುಕೊಂಡ ಮಾದಮ್ಮ ಸೌದೆ ತೆಗೆದುಕೊಳ್ಳುವುದಕ್ಕೆ ಮನೆಯಿಂದ ಹೊರಗಡೆಗೆ ಬಂದಳು.

ಬಾಗಿಲನಾದರು ತಗದಳಣ್ಣ
ಸಾಬರ ಬುರುಡೆ ಕಂಡಳಣ್ಣ
ಇವರಪ್ಪನ ತಿನ್ನ ಕರೀಂಸಾಬರು
ಇಲ್ಲೇ ಬಂದು ಮಲಗವನಲ್ಲ !

ಗಾಬರಿಯಿಂದ ಮಲ್ಲಣ್ಣನನ್ನು ಎಬ್ಬಿಸಿದಳು. “ಬೆಳಗಾನ ನಿದ್ದೆ ಮಾಡುಕೆ ಬುಡಲ್ಲಮ್ಮಾ” ಅನ್ನುತ್ತಲೇ ಎದ್ದ ಅವನು.

“ಏನ್ ಮಲ್ಲಣ್ಣಾ ? ಕರೀಂ ಸಾಬ್ರು ಇಲ್ಲೇ ಬಂದು ಮಲ್ಗವರ್ರೆ ?”

“ನಾನೇನ್ಮಾಡ್ಲಮ್ಮ ? ನಿನ್ಮೇಲೆ ಪಿರುತಿ ಜಾಸ್ತಿ ಅದ್ಕೇ ಬಂದವ್ನೆ ?”

“ಮಲ್ಲಣ್ಣಾ, ಬೆಳ್ಕರಿ ಹೊತ್ತಾಯ್ತು, ಯಾರ‍್ಗಾನ ಗೊತ್ತಾದ್ರೆ ನಾನ್ ಉಳಿವಂಗಿಲ್ಲ”

“ಹೆಂಗಾರ ಮಾಡ್ಕೋ, ನಾನ್ ಮಾತ್ರ ಪುನಃ ಹೊತ್ಕಂಡು ಹೋಗಾಕಿಲ್ಲ. ನಾನು ಮನಿಕಬೇಕು”.

“ನೋಡ್ ಮಲ್ಲಣ್ಣ, ಇನ್ನ ನೂರ್ ಕೊಡ್ತೀನಿ. ಎಲ್ಲಾರ ಹಾಳ್ ಹೆಣದ ಮರೆ ಮಾಡ್‌ಬುಡು”

“ಇದೊಂದ್‌ದಪ ಹೊತ್ಕಂಡೋಯ್ತೀನಿ. ಒಂದು ಪಲ್ಲದ ಚೀಲಕೊಡು’.

ಮಾದಮ್ಮ ಚೀಲ ಕೊಟ್ಟಳು
ಕರೀಂ ಸಾಬರ ತಗದನಣ್ಣ
ಕುಮ್ಟಿನಾದರು ಕಟ್ಟಿದನಣ್ಣ
ಕರೀಂ ಸಾಬರ ಹೊತ್ತನಣ್ಣ
ಕೆಂಪಾಂಬುಧಿ ಕರೆತಾಕೆ

ಹೆಣ ಭಾರವಾಗಿತ್ತು. ಕೆರೆ ಏರಿ ಮೇಲೆ ಮೂಟೆ ಮಡಗಿ ಕುಳಿತುಕೊಂಡ, ಆ ಕಡೆಯಿಂದ ಒಬ್ಬ ಈರುಳ್ಳಿ ಮೂಟೆ ಹೊತ್ತುಕೊಂಡು ವ್ಯಾಪಾರಕ್ಕಾಗಿ ಬರುತ್ತಿದ್ದ. ಇಬ್ಬರೂ ಪರಿಚಯ ಮಾಡಿಕೊಂಡರು :

“ನಿನ್ದು ಯಾಪಾರ ಏನು ?
“ನಂದು ಈರುಳ್ಳಿ ಯಾಪಾರ. ನಿಂದು ?’
“ನಂ….ನಂದು ತೆವಟ್ಗೆ ಗೆಣಸಿನ ಯಾಪಾರ !’
“ಹಂಗಾರೆ ನಿಂದು ಹೊಸ ಯಾಪಾರ’
“ಹೂ’

ಹೊತ್ತು ಹುಟ್ಟುವ ಸಮಯ, ಮಾತಾಡುತ್ತಾ ಇಬ್ಬರೂ ತಮ್ಮ ಮೂಟೆಗಳನ್ನು ಒಂದು ಕಡೆ ಇಟ್ಟು ಮುಖ ತೊಳೆಯುವುದಕ್ಕೆ ಕೆರೆಗೆ ಇಳಿದರು. ಮಲ್ಲಣ್ಣ ಮುಖ ತೊಳೆದ ಹಾಗೆ ಮಾಡಿ, ಬೇಗ ಮೇಲಕ್ಕೆ ಬಂದು ತನ್ನ ಮೂಟೆ ಬಿಟ್ಟು ಈರುಳ್ಳಿ ಮೂಟೆ ಹೊತ್ತುಕೊಂಡು ಹೊರಟು ಹೋದ. ಈರುಳ್ಳಿ ವ್ಯಾಪಾರಿ ಬಂದು ನೋಡಿದ, ತನ್ನ ಮೂಟೆ ಇಲ್ಲ “ಮುಂಡೆ ಮಗ ಮೂಟೇನ ಅದ್ಲಿ ಬದ್ಲಿ ಮಾಡವನೆ. ಈರುಳ್ಳಿಲಿ ಎಷ್ಟ್ ಸಿಕ್ಕದು ? ಹೆಂಗೂ ತವಟ್ಗೆ ಗೆಣ್ಸು ಹೊಸ ಯಾಪಾರ. ಇದ್ನೇ ಮಾರ‍್ಮಾ” ಅಂತ ಮೂಟೆ ಹೊತ್ತುಕೊಂಡ.

ಕರೀಂ ಸಾಬರ ಹೊತ್ತನಣ್ಣ
ಕೊಲ್ಲಂಪುರಕೆ ಬಂದನಣ್ಣ

ಒಳಗೆ ಇರುವುದು ಹೆಣ ಅಂತ ಗೊತ್ತಾಗಲಿಲ್ಲ. “ತೆವಟ್ಗೆ ಗೆಣ್ಸು, ತೆವಟ್ಗೆ ಗೆಣ್ಸು’ ಅಂತ ಸಾರಿದ. ಹೊಸ ಪದಾರ್ಥ ಅಂತ ಊರಿನವರೆಲ್ಲ ಮುತ್ತಿಕೊಂಡರು. ಎಲ್ಲರಿಗೂ ಹೇಗೆ ಮಾರುವುದು ಎಂದೇ ಗೊತ್ತಾಗಲಿಲ್ಲ. ಇಡ್ಲೀ ಮಾದಮ್ಮನ ವಿಷಯ ಅವನಿಗೂ ಗೊತ್ತಿತ್ತು. ಅವಳೂ ವ್ಯಾಪಾರದವಳು. ತಾನು ನಾಷ್ಟ ಮಾಡುತ್ತಾ ಮಾದಮ್ಮನ ಕೈಲೇ ಮಾರಿಸೋಣ ಅಂತ ಜನರನ್ನೂ ಕರೆದುಕೊಂಡು ಮಾದಮ್ಮನ ಹತ್ತಿರಕ್ಕೆ ಬಂದ.

“ಅಮ್ಮ ಅಮ್ಮ ಮಾದಮ್ಮ, ನನಗಿದು ಹೊಸ ಯಾಪಾರ. ತೆವಟ್ಗೆ ಗೆಣ್ಸು ಬೇಕೂಂತ ಊರವರೆಲ್ಲ ಬಂದವರೆ. ಹೆಂಗೂ ನಿಮ್ಮೂರವರು. ನೀನೇ ಮಾರು ನಂಗೆ ಐವತ್ ಕೊಟ್‌ಬಿಡು. ಉಳಿದ್ನೆಲ್ಲ ನೀನೇ ಇಟ್ಕೊ’.

ತೆವಟಿಗೆ ಗೆಣಸು ಅನ್ನುತ್ತಲೇ ಮಾದಮ್ಮನಿಗೂ ಆಸೆಯಾಯಿತು. “ಹೆಂಗೂ ರಾತ್ರಿ ಮುನ್ನೂರ್ ಕಳ್ಕಂಡಿವ್ನಿ, ಇದರಿಂದ್ಲಾರ ನಾಕ್ ಕಾಸ್ ಬರ‍್ಲಿ’ ಅಂತ, ಗೆಣಸು ಮಾರುವುದಕ್ಕೆ ಒಪ್ಪಿಕೊಂಡಳು.

ಕುಮ್ಟೆನಾದರು ಬಿಚ್ಚಿದಳಣ್ಣ
ಸಾಬರ ಬುರುಡೆ ಕಂಡಳಣ್ಣ
ಸಾಬರ ಬುರುಡೆ ಕಂಡಾಗ
ಬಾಯಿ ಬಾಯಿ ಬಡಿದಳಣ್ಣ

ಊರು ಕೇರಿಯೆಲ್ಲ ಒಂದಾಯಿತು. ನೋಡಿದರೆ ಕರೀಂಸಾಬರ ಹೆಣ. ಕರೀಂ ಸಾಬರನ್ನು ಕೊಂದು ಗೆಣಸು ಅಂತ ತಂದವನೆ ವ್ಯಾಪಾರಿ ಅಂತ ಅವನನ್ನು ಕಟ್ಟಿ ಹಾಕಿದರು. ಹೆಣವನ್ನು ಗೆಣಸು ಅಂತ ಮಾರುವುದಕ್ಕೆ ಬಂದಳು ಅಂತ ಮಾದಮ್ಮನನ್ನು ಕಟ್ಟಿ ಹಾಕಿದರು. ವಿಚಾರಣೆಗೆ ಸೇರಿದರು ಗೌಡರು. ಅಷ್ಟರಲ್ಲಿ “ಬಡಪಾಯಿ ಈರುಳ್ಳಿ ಯಾಪಾರ‍್ಗೆ ಏನಾಯ್ತೋ ಅಂತ’ ಮಲ್ಲಣ್ಣ ಇನ್ನೊಂದು ಬೀದಿಯಲ್ಲಿ “ಈರುಳ್ಳಿ ಬೇಕಮ್ಮೋ ಈರುಳ್ಳಿ’ ಅಂತ ಸಾರಿದ. ಅವನ ದನಿ ಕೇಳಿ ಕಟ್ಟಿ ಹಾಕಿದ್ದ ವ್ಯಾಪಾರಿ “ಸ್ವಾಮಿ ಸ್ವಾಮಿ ಆ ಈರುಳ್ಳಿ ಯಾಪಾರಿ ಕೂಗ್ರಿ, ನನ್ದು ತಪ್ಪಿಲ್ಲ. ಅವನ್ನೇ ಬೇಕಾರೆ ಕೇಳುರಿ’ ಎಂದು ಗೋಗರಿದ. ಬಿಡಿ ಎಲ್ಲನೂ ಹೇಳ್ತೀನಿ” ಅಂದ. ಜನ ಹಾಗೇ ಮಾಡಿದರು. ಊರ ಪಟೇಲರು ಕೇಳಿದರು:

“ಕರೀಂ ಸಾಬ್ರಯಾರ್ ಕೊಂದರು ?’

ಮಲ್ಲಣ್ಣ ಎಲ್ಲವನ್ನೂ ಹೇಳಿ, “ಮಾದಮ್ಮ ಸಾಬರಿಗೆ ಇಡ್ಲಿ ಕೊಟ್ಟಳು, ಕುಡಿಯುವುದಕ್ಕೆ ನೀರು ಕೊಡಲಿಲ್ಲ. ಮಾದಮ್ಮ ಕೊಟ್ಟ ಇಡ್ಲಿ ತಿನ್ನುತ್ತಾ ತಿನ್ನುತ್ತಾ ಕರೀಂ ಸಾಬರು ಸತ್ತುಹೋದರು’ ಎಂದು ಸುಳ್ಳು ಹೇಳಿದ. ಇಡ್ಲಿ ಮಾದಮ್ಮ ಲಬೋ ಲಬೋ ಅಂತ ಬಾಯಿ ಬಾಯಿ ಬಡಿದುಕೊಂಡಳು.

ನನ್ನ ಮಾತು ಸುಳ್ಳಾದರೆ
ಪಟೇಲರ ಮನೆ ಆಳ ಕೇಳಿ

ಪಟೇಲರಿಗೆ ದಿಗಿಲಾಯಿತು. ಅವನ ಆಳುಗಳು ನಡೆದ ಸಂಗತಿ ತಿಳಿಸಿದರು. ಸಾಬರನ್ನು ಕೊಂದ ತಪ್ಪು ತನ್ನ ತಲೆಗೂ ಬಂತಲ್ಲಾ ಎಂದು ಪಟೇಲರು ಸಭೆ ಬಿಟ್ಟಿದ್ದರು :

ಉಟ್ಟಿರು ಪಂಚೆ ಕಳೆದುಕಂಡು
ಬಿದ್ದುಕಡ್ದು ಓಡಿದರಣ್ಣ.

ಪಟೇಲರು ಓಡಿಹೋದ ಮೇಲೆ ಶ್ಯಾನುಭೋಗರು “ಮುಂದೇನಾಯ್ತು ಹೇಳು” ಅಂದರು. ಮುಂದಿನ ಕತೆ ಹೇಳಿ ಮಲ್ಲಣ್ಣ :

ನಾನ್ ಮಾತು ಸುಳ್ಳಾದರೆ
ಶ್ಯಾನುಬೋಗರ ಆಳು ಕೇಳಿ !

ಶ್ಯಾನುಭೋಗರಿಗೂ ದಿಗಿಲಾಯಿತು. ಅವನ ಆಳುಗಳು ನಡೆದ ಸಂಗತಿ ತಿಳಿಸಿದರು. ಕರೀಂಸಾಬರನ್ನು ಕೊಂದ ತಪ್ಪು ತನ್ನ ತಲೆಗೂ ಬಂತಲ್ಲಾ ಎಂದುಕೊಂಡು ಶ್ಯಾನುಭೋಗರು ಸಭೆ ಬಿಟ್ಟಿದ್ದರು :

ಗಡಗಡನೆ ಒದರಿದರಣ್ಣ
ಗಂಜಳನಾದರೆ ಊದರಣ್ಣ
ಗಂಜಳನಾದರೆ ಊದುಕಂಡು
ಬಿದ್ದು ಕೆಡ್ದು ಓಡಿದರಣ್ಣ !

ಶ್ಯಾನುಭೊಗರು ಓಡಿಹೋದ ಮೇಲೆ ಊರಿನ ಮಧ್ಯಸ್ತರು “ಮುಂದ್ಕೇನಾಯ್ತು” ಅಂತ ಕೇಳಿದರು ಮಲ್ಲಣ್ಣ ಮುಂದಿನ ಕತೆಯನ್ನೆಲ್ಲ ಹೇಳಿದ.

ಕರೀಂ ಸಾಬರನ್ನು ಕೊಂದ ಇಡ್ಲಿ ಮಾದಮ್ಮನಿಗೆ “ಊರಿನವರು ಮುನ್ನೂರು ರೂಪಾಯಿ ಜುಲ್ಮಾನೆ ಹಾಕಿದರು. ಮೂರು ತಿಂಗಳ ಸಜಾ ವಿಧಿಸಿದರು. ಈರುಳ್ಳಿ ವ್ಯಾಪಾರಿಯನ್ನು ಬಿಟ್ಟುಬಿಟ್ಟರು.

ಕರೀಂ ಸಾಬರ ಹೆಣ ಹೊತ್ತು ಇಡ್ಲಿ ಮಾದಮ್ಮನಿಂದ ಮೂನ್ನರು ರೂಪಾಯಿ ಸಂಪಾದಿಸಿದ ಮಲ್ಲಣ್ಣ ಸುಖವಾಗಿದ್ದ.**      ಮುಂದಿನ ಪದ್ಯ ಭಾಗದಲ್ಲಿ ಎರಡು ಸಾಲುಗಳಿಗೊಮ್ಮೆ ಪಲ್ಲವಿಯನ್ನು ಹಾಡಿಕೊಳ್ಳಬೇಕು.

 

*      ಇಡ್ಲಿ ಮಾದಮ್ಮ, ಲಿಂಗಯ್ಯ ಡಿ. ಕರ್ನಾಟಕ ಜನಪದ ಕಾವ್ಯಗಳು. ದಿನಕರ ಪ್ರಕಾಶನ ಬೆಂಗಳೂರು ೧೯೭೬ ಪು.ಸಂ.