ಅನಂತ ಮೂರ್ತಿಗ್ಯಾವ ನೀರ
ಈಶ್ವರಮೂರ್ತಿಗ್ಯಾವ ನೀರ
ತಾಯಿ ಎಲ್ಲಮ್ಮಗ ಯಾವ ನೀರ     ೧

ಅನಂತ ಮೂರ್ತಿಗೆ ಹಳ್ಳದ ನೀರ
ಈಶ್ವರಮೂರ್ತಿಗೆ ಬಾವಿ ನೀರ
ತಾಯಿ ಎಲ್ಲಮ್ಮಗ ಹೊಂಡದನೀರ  ೨

ಅನಂತಮೂರ್ತಿಗೆ ಯಾವ ಹೂವ
ಈಶ್ವರಮೂರ್ತಿಗೆ ಯಾವ ಹೂವ
ತಾಯಿ ಎಲ್ಲಮ್ಮಗ ಯಾವ ಹೂವ    ೩

ಅನಂತಮೂರ್ತಿಗೆ ಮಲ್ಲಿಗೆ ಹೂವ
ಈಶ್ವರಮೂರ್ತಿಗೆ ಬಿಚಮಲ್ಲಿಗೆ ಹೂವ
ತಾಯಿ ಎಲ್ಲಮ್ಮಗ ಕ್ಯಾದಿಗಿಯ ಹೂವ         ೪

ಅನಂತಮೂರ್ತಿಗೆ ಯಾವ ಹೊಗಿಯ
ಈಶ್ವರಮೂರ್ತಿಗೆ ಯಾವ ಹೊಗಿಯ
ತಾಯಿ ಎಲ್ಲಮ್ಮಗ ಯಾವ ಹೊಗಿಯ                    ೫

ಅನಂತಮೂರ್ತಿಗೆ ಗುಗ್ಗಳ ಹೊಗಿಯ
ಈಶ್ವರಮೂರ್ತಿಗೆ ಲೋಬಾನದ ಹೊಗಿಯ
ತಾಯಿ ಎಲ್ಲಮ್ಮಗ ಕರ್ಪುರದ್ಹೊಗಿಯ                   ೬

ಅನಂತಮೂರ್ತಿಗೆ ಯಾವ ಬಟ್ಟ
ಈಶ್ವರಮೂರ್ತಿಗೆ ಯಾವ ಬಟ್ಟ
ತಾಯಿ ಎಲ್ಲಮ್ಮಗ ಯಾವ ಬಟ್ಟ     ೭

ಅನಂತಮೂರ್ತಿಗೆ ಗಂಧದ ಬಟ್ಟ
ಈಶ್ವರಮೂರ್ತಿಗೆ ಕುಂಕುಮ ಬಟ್ಟ
ತಾಯಿ ಎಲ್ಲಮ್ಮಗ ಬಂಡಾರ ಬಟ್ಟ   ೮

ಅನಂತಮೂರ್ತಿಗೆ ಯಾವ ಎಡಿಯ
ಈಶ್ವರಮೂರ್ತಿಗೆ ಯಾವ ಎಡಿಯ
ತಾಯಿ ಎಲ್ಲಮ್ಮಗ ಯಾವ ಎಡಿಯ ೯

ಅನಂತಮೂರ್ತಿಗೆ ಸಜ್ಜಕ ಎಡಿಯ
ಈಶ್ವರಮೂರ್ತಿಗೆ ಹೋಳಿಗಿ ಎಡಿಯ
ತಾಯಿ ಎಲ್ಲಮ್ಮಗ ಕಡಬಿನ ಎಡಿಯ ೧೦