ಅನೇಕ ದೃಷ್ಟಿಗಳಿಂದ ಕರ್ನಾಟಕದ ಕೇಂದ್ರದಂತಿರುವ ದಾವಣಗೆರೆಯಲ್ಲಿ ಸಮಾವೇಶಗೊಂಡಿರುವ ಅಭಾವತ್ತೊಂದನೆಯ ಅಖಿಲ ಬಾರತ ಕನ್ನಡ ಸಾಹಿತ್ಯ ಸಮ್ಮೇಳನದ ಆಧ್ಯಕ್ಷತೆಯ ಗೌರವವನ್ನು ನನಗೆ ತಂದು ಕೊಟ್ಟಿರುವ ನನ್ನ ಪ್ರೀತಿಯ ಕನ್ನಡ ಬಂಧುಗಳೇ,

ಈ ಗೌರವಕ್ಕೆ ನನಗಿಂತಲೂ ಅರ್ಹರಾದವರೂ, ಹಿರಿಯರೂ ಇದ್ದರೂ, ಈ ಅಧ್ಯಕ್ಷಸ್ಥಾನಕ್ಕೆ ನನ್ನನ್ನು ಆಯ್ಕೆಮಾಡಿದ ಕನ್ನಡ ಸಾಹಿತ್ಯ ಪರಿಷತ್ತಿನ ಸನ್ಮಾನ್ಯ ಅಧ್ಯಕ್ಷರು ಹಾಗೂ ಕಾರ್ಯಕಾರಿ ಸಮಿತಿಯ ವಿಶ್ವಾಸವನ್ನು ಕೃತಜ್ಞತೆಯಿಂದ ನೆನೆಯುತ್ತ, ಈ ಸಂದರ್ಭದ ನನ್ನ ಪ್ರತಿಕ್ರಿಯೆಯನ್ನು ದೃಷ್ಟಾಂತವೊಂದರ ಮೂಲಕ ವರ್ಣಿಸಿದರೆ, ನನ್ನ ಭಾವನೆಗಳೇನು ಎಂಬುದು ಬಹುಶಃ ಸ್ಪಷ್ಟವಾಗಬಹುದು.

ನಾಟಕ ರಂಗಸ್ಥಲದ ಮೇಲೆ ಅದಕ್ಕೆ ಉಚಿತವಾದ ಬೆಳಕಿನಲ್ಲಿ ಹಲವು ಪಾತ್ರಗಳಿರುವಾಗ, ಒಂದೊಂದು ಸಂದರ್ಭದಲ್ಲಿ ನಿರ್ದಿಷ್ಟವಾದ ಪಾತ್ರವೊಂದರ ಮೇಲೆ ಝಗ್ಗನೆ ‘ಸ್ಪಾಟ್‌ಲೈಟ್’ ಬಿಡುವುದನ್ನು ನೀವು ಕಂಡಿರಬಹುದು. ಆಗ, ಆ ಬಿಡುದೀಪದ ಬೆಳಕಿನಲ್ಲಿ ಆ ಪಾತ್ರ ಸ್ವಲ್ಪ ಹೊತ್ತು ಇತರ ಪಾತ್ರಗಳಿಗಿಂತ ಪ್ರೇಕ್ಷಕರ ಗಮನವನ್ನು ವಿಶೇಷವಾಗಿ ಸೆಳೆಯುತ್ತದೆ. ಕನ್ನಡ ಸಾಹಿತ್ಯವೆಂಬ ವಿಸ್ತಾರದ ರಂಗಭೂಮಿಯ ಮೇಲೆ ಎಲ್ಲೋ ಒಂದು ಕಡೆ ಪಾತ್ರವನ್ನು ನಿರ್ವಹಿಸುತ್ತಿದ್ದ ನನ್ನ ಮೇಲೆ ಈಗ ಸಾಹಿತ್ಯ ಸಮ್ಮೇಳನದ ಅಧ್ಯಕ್ಷತೆಯ ‘ಸ್ಪಾಟ್‌ಲೈಟ್’ಅನ್ನು ಬಿಡಲಾಗಿದೆ. ಹೀಗಾಗಿ ನಿಮ್ಮೆಲ್ಲರ ಗಮನ ಈಗ ನನ್ನ ಮೇಲೆ ಕೇಂದ್ರೀಕೃತವಾಗಿದೆ. ಕಳೆದ ವರ್ಷ ಅದೇ ‘ಸ್ಪಾಟ್‌ಲೈಟ್’ ಕನ್ನಡದ ಒಲವಿನ ಕವಿ ಕೆ.ಎಸ್.ನ. ಅವರ ಮೇಲೆ ಬಿದ್ದಿತ್ತು; ಈಗ ನನ್ನ ಮೇಲೆ ಬಿದ್ದಿದೆ. ಮತ್ತೆ ಮುಂದಿನ ಸಾಹಿತ್ಯ ಸಮ್ಮೇಳನದ ಹೊತ್ತಿಗೆ ಇನ್ನೊಬ್ಬರ ಮೇಲೆ ಬೀಳುತ್ತದೆ. ಈ ಬಿಡುದೀಪದ ಬೆಳಕಿನಲ್ಲಿ ಅರುವತ್ತೊಂದನೆಯವನಾಗಿ ನಿಂತ, ಸಾಹಿತ್ಯ ಕ್ಷೇತ್ರದಲ್ಲಿ ಅಲ್ಪಸ್ವಲ್ಪ ಕೆಲಸ ಮಾಡಿರುವ ನನ್ನನ್ನು, ಕನ್ನಡ ಜನ ತುಂಬ ಪ್ರೀತಿಯಿಂದ ಕಂಡಿದೆ. ಬಾನ ಮೂಲೆಯೊಳಗೆಲ್ಲೋ ಮುದುರಿನಿಂತ ತುಂಡು ಮೋಡಕ್ಕೆ ವಿಶ್ವಾಸದ ಹೊಂಬೆಳಕು ಬಂಗಾರದ ಕಿರೀಟವನ್ನು ಇರಿಸಿದೆ. ಈ ಎಲ್ಲ ಗೌರವವೂ ದಾವಣಗೆರೆಯಲ್ಲಿ ಸಮಾವೇಶಗೊಂಡ ಈ ಸಮ್ಮೇಳನದಲ್ಲಿ ನನಗೆ ಸಂದದ್ದು ಒಂದು ಅಪೂರ್ವವಾದ ಯೋಗಾಯೋಗವೇ ಸರಿ. ಯಾಕೆಂದರೆ, ದಾವಣಗೆರೆ ನನ್ನ ಕಾವ್ಯ ಜೀವನದ ಮೊದಲ ಮೆಟ್ಟಿಲು. ನನ್ನ ಪ್ರೌಢಶಾಲೆಯ ಶಿಕ್ಷಣ ಪ್ರಾರಂಭವಾದದ್ದು ದಾವಣಗೆರೆಯಲ್ಲಿ; ನಾನು ಮೊಟ್ಟ ಮೊದಲ ಪದ್ಯವನ್ನು ಬರೆದದ್ದು, ದಾವಣಗೆರೆಯಲ್ಲಿ. ಆಗ ನನಗೆ ಹದಿನಾಲ್ಕು ವರ್ಷ. ನಾನಿದ್ದದ್ದು ಶ್ರೀ ಜಯದೇವ ವಿದ್ಯಾರ್ಥಿನಿಲಯದಲ್ಲಿ. ಮುಂದೆ ನಾನು ಕಾಲೇಜು ಅಧ್ಯಾಪಕನಾಗಿ  ನನ್ನ ವೃತ್ತಿ ಜೀವನವನ್ನು ಪ್ರಾರಂಭಿಸಿದ್ದು ದಾವಣಗೆರೆಯಲ್ಲಿ; ನನ್ನ ಮೊಟ್ಟಮೊದಲ ಕವನ ಸಂಗ್ರಹ ‘ಸಾಮಗಾನ’ ಪ್ರಕಟವಾದದ್ದು ನಾನು ದಾವಣಗೆರೆಯಲ್ಲಿ ನನ್ನ ವೃತ್ತಿಜೀವನವನ್ನು ಪ್ರಾರಂಭಿಸಿದ ಸಮಯದಲ್ಲಿ. ನನ್ನ ಬದುಕಿನೊಂದಿಗೆ ಬೆಸೆದುಕೊಂಡ ಸ್ನೇಹ ವಿಶ್ವಾಸಗಳು ದೊರತದ್ದು ದಾವಣಗೆರೆಯಯಲ್ಲಿ; ಈಗ ಈ ಸಾಹಿತ್ಯ ಸಮ್ಮೇಳನದ ಅಧ್ಯಕ್ಷತೆಯ ಗೌರವ ದೊರೆಕಿರುವುದೂ ದಾವಣಗೆರೆಯಲ್ಲಿ. ಆದುದರಿಂದಲೇ ನಾನು ಈ ಸಂದರ್ಭವನ್ನು ಒಂದು ಅಪೂರ್ವವಾದ ಯೋಗಾಯೋಗ ಎಂದು ಕರೆದಿರುವುದು.

‘ಹಿಂದಣ ಹೆಜ್ಜೆಯನರಿತಲ್ಲದೆ ನಿಂದ ಹೆಜ್ಜೆಯನರಿಯಬಾರದು’ ಎನ್ನುತ್ತಾರೆ ಮಹಾನುಭಾವಿ ಅಲ್ಲಮಪ್ರಭುಗಳು ತಮ್ಮದೊಂದು ವಚನದಲ್ಲಿ. ಅಂದರೆ, ನಾವು ನಿಂದ ಹೆಜ್ಜೆಯನ್ನು ಅಥವಾ ವರ್ತಮಾನವನ್ನು ಅರಿಯಬೇಕಾದರೆ, ಹಿಂದಣ ಹೆಜ್ಜೆಯನ್ನು, ಅಂದರೆ ಪರಂಪರೆಯನ್ನು ಚೆನ್ನಾಗಿ ಅರಿತವರಾಗಬೇಕು. ಆದಕಾರಣ ಹಿಂದಣ ಹೆಜ್ಜೆಯನ್ನು ಅಥವಾ ಪರಂಪರೆಯನ್ನು ಅರಿತಲ್ಲದೆ, ನಾವು ನಿಂದ ಹೆಜ್ಜೆಯನ್ನು ಅಥವಾ ವರ್ತಮಾನವನ್ನು ಅರಿಯಲು ಬರುವುದಿಲ್ಲ. ನಾನು, ಹಿಂದಿನ ಅರವತ್ತು ಸಮ್ಮೇಳನಗಳ ಆಧ್ಯಕ್ಷರು, ಈಗಾಗಗಲೇ ಇಂಥ ಸಮ್ಮೇಳನಗಳ ಸಂದರ್ಭದಲ್ಲಿ ಏನು ಹೇಳಿದ್ದಾರೆಂಬುದನ್ನು, ಕನ್ನಡ ಸಾಹಿತ್ಯ ಪರಿಷತ್ತು ಪ್ರಕಟಿಸಿರುವ ಸಮ್ಮೇಳನಾಧ್ಯಕ್ಷರುಗಳ ಭಾಷಣಗಳ ಸಂಪುಟಗಳನ್ನು ಓದಿನೋಡಿದ್ದೇನೆ. ಅವುಗಳನ್ನು ಓದಿದ ಮೇಲೆ ನಾನು ಹೊಸದಾಗಿ ಹೇಳತಕ್ಕದ್ದೇನೂ ಉಳಿದಿಲ್ಲವೆಂದೇ ನನಗನ್ನಿಸುತ್ತದೆ. ಅದರಲ್ಲಿಯೂ ಕನ್ನಡ ನಾಡು-ನುಡಿ-ಗಡಿ, ಇತ್ಯಾದಿಗಳಿಗೆ ಸಂಬಂಧಪಟ್ಟ ಎಲ್ಲ ಸಮಸ್ಯೆಗಳನ್ನೂ, ಹಿಂದಿನ ಅರುವತ್ತೂ ಸಮ್ಮೇಳನಾಧ್ಯಕ್ಷರು ಅತ್ಯಂತ ತಲಸ್ಪರ್ಶಿಯಾಗಿ ವಿವೇಚಿಸಿ, ಈ ಜನ, ಸರ್ಕಾರ ಹಾಗೂ ವಿವಿಧ ಸಾಂಸ್ಕೃತಿಕ ಸಂಸ್ಥೆಗಳು ಕನ್ನಡದ ಸರ್ವಾಂಗೀಣ ಪ್ರಗತಿಗೆ ಕೈಕೊಳ್ಳಬೇಕಾದ ಕರ್ತವ್ಯಗಳೂ, ಕಾರ್ಯಗಳೂ ಏನೆಂಬುದನ್ನು ನಿರ್ದೇಶಿಸಿದ್ದಾರೆ. ಆದರೆ, ಕನ್ನಡದ ಪರವಾಗಿ ‘ನಿರಂತರ ಜಪ’ದಂತೆ ಮಂಡಿತವಾದ ಎಷ್ಟೋ ನಿರ್ದೇಶನಗಳೂ, ಆಶೋತ್ತರಗಳೂ ಇನ್ನೂ ಸಮರ್ಪಕವಾಗಿ ಈಡೇರಿಲ್ಲ ಎನ್ನುವುದು ಒಂದು ವಿಪರ‍್ಯಾಸದ ಸಂಗತಿಯಾಗಿದೆ. ಪ್ರಸ್ತುತ ಸರ್ಕಾರವೇನೋ ಕನ್ನಡದ ಬಗ್ಗೆ ಅನೇಕ ಭರವಸೆಗಳ ಹಾಗೂ ಆಶ್ವಾಸನೆಗಳ ಮಳೆಯನ್ನೆ ಕರೆದಿದೆ. ‘ಸರೋಜಿನಿ ಮಹಿಷಿ ವರದಿ’ಯನ್ನು ಜಾರಿಗೆ ತರುವ ಆಶ್ವಾಸನೆ, ‘ಕನ್ನಡ ಅಭಿವೃದ್ಧಿ ಪ್ರಾಧಿಕಾರ’ದ ಸ್ಥಾಪನೆ ಹಾಗೂ ‘ಪುಸ್ತಕ ಪ್ರಾಧಿಕಾರ’ದ ಯೋಜನೆ, ಕನ್ನಡ ಮಾಧ್ಯಮದ ಮಾದರಿ ಶಾಲೆಗಳ ಕಲ್ಪನೆ, ಕನ್ನಡ ವಿಶ್ವವಿದ್ಯಾಲಯವು,ಈಗಾಗಲೇ ಕಾರ್ಯ ನಿರ್ವಹಿಸುತ್ತಿರುವ ವಿವಿಧ ವಿಶ್ವವಿದ್ಯಾಲಯಗಳ ಕನ್ನಡ ವಿಭಾಗಗಳಿಗೆ ಮಾರಕವಾಗದಂತೆ, ಮತ್ತು ಸರಿಯಾದ ಆರ್ಥಿಕ ನೆರವು ಒದಗಿ, ಅದೂ ಸೊರಗುವ ಸಂಸ್ಥೆಗಳ ಸರಣಿಗೆ ಸೇರದಂತೆ ಅರ್ಥಪೂರ್ಣವಾದ ಅಭಿವೃದ್ಧಿಯನ್ನು ಪಡೆಯುವುದೆಂಬ ಆಶ್ವಾಸನೆ-ಇತ್ಯಾದಿಗಳಿಂದ ಕನ್ನಡಿಗರಲ್ಲಿ ಹೊಸ ಆಸೆಗಳನ್ನು ಹುಟ್ಟಿಸಿರುವುದಾದರೂ, ಕನ್ನಡ ಪರವಾದ ಸರ್ಕಾರದ ನಿಲುವುಗಳೂ ಆಶಯಗಳೂ ಈವರೆಗೆ ಯಾವ ಸ್ಥಿತಿಯಲ್ಲಿ ಕ್ರಿಯಾಶೀಲವಾಗಿದೆ ಎಂಬ ಅನುಭವದ ಹಿನ್ನೆಲೆಯಲ್ಲಿ, ಈ ಎಲ್ಲ ಆಶ್ವಾಸನೆಗಳನ್ನೂ ಅದು ಕಾರ್ಯರೂಪಕ್ಕೆ ಇಳಿಸುವವರೆಗೂ ಕನ್ನಡಿಗರ ಪರವಾಗಿ ಅದಕ್ಕೆ ಸಲ್ಲಬೇಕಾದ ಅಭಿನಂದನೆಗಳನ್ನು ಕಾಯ್ದಿರಿಸುವುದು ಅನಿವಾರ್ಯವಾಗಿದೆ. ಆದರೆ ಕಾವೇರೀ ನದಿ ಜಲವಿವಾದದ ಹಿನ್ನೆಲೆಯಲ್ಲಿ ಕರ್ನಾಟಕ ಸರ್ಕಾರ ತಾಳಿರುವ ದಿಟ್ಟ ನಿಲುವುಗಳಿಗಾಗಿ ಮತ್ತು ಈ ಕುರಿತು ವಿವಿಧ ರಾಜಕೀಯ ಪಕ್ಷಗಳು ತಾವೆಲ್ಲ ಒಂದು ಎಂಬಂತೆ ಸರ್ಕಾರದೊಂದಿಗೆ ಹೊಂದಿಕೊಂಡದ್ದಕ್ಕಾಗಿ, ಸರ್ಕಾರವನ್ನೂ ಹಾಗೂ ವಿವಿಧ ರಾಜಕೀಯ ಪಕ್ಷಗಳನ್ನೂ ಕನ್ನಡಿಗರು ಹೃತ್ಪೂರ್ವಕವಾಗಿ ಅಭಿನಂದಿಸಬೇಕಾಗಿದೆ. ಮತ್ತು ಉದ್ದಕ್ಕೂ ಹಲವು ಪಂಚವಾರ್ಷಿಕ ಯೊಜನೆಗಳ ಸಂದರ್ಭದಲ್ಲಿ, ಕರ್ನಾಟಕ ವಿವಿಧ ಕ್ಷೇತ್ರದಲ್ಲಿ ಈವರೆಗೂ ಆಗಿರುವ ಅನ್ಯಾಯಗಳನ್ನು ಇನ್ನಾದರೂ ಸರಿಪಡಿಸುವಂತೆ ಮತ್ತು ಕರ್ನಾಟಕದ ಗಡಿವಿವಾದಗಳಿಗೆ ಸಂಬಂಧಿಸಿದ ಮಹಾಜನ್ ಆಯೋಗದ ಶಿಫಾರಸುಗಳನ್ನು ತಡಮಾಡದೆ ಕಾರ್ಯಗತಗೊಳಿಸುವಂತೆ, ಕೇಂದ್ರ ಸರ್ಕಾರವನ್ನು ಒತ್ತಾಯಪಡಿಸುವ ಕಾರ್ಯದಲ್ಲಿ ಇದೇ ರೀತಿಯ ಒಮ್ಮತವನ್ನು ಕರ್ನಾಟಕದ ಎಲ್ಲ ರಾಜಕೀಯ ಪಕ್ಷಗಳೂ ತಾಳಬೇಕಾಗಿದೆ. ಕನ್ನಡದ ಎಲ್ಲ ಸಮಸ್ಯೆಗಳೂ ಈವರೆಗೆ ಇತ್ಯರ್ಥವಾಗದಿರಲು, ದೃಢವಾದ ರಾಜಕೀಯ ಸಂಕಲ್ಪದ ಅಭಾವವೇ ಕಾರಣ ಎಂಬ ಮಾತನ್ನು ಈ ಸಂದರ್ಭದಲ್ಲಿ ಒತ್ತಿ ಹೇಳಬೇಕಾಗಿದೆ.

ಕನ್ನಡ ನಾಡು-ನುಡಿಗೆ ಒದಗಿರುವ ವಿಪತ್ತನ್ನೂ, ಅದಕ್ಕಾಗಿ ಕನ್ನಡಜನ ನಡೆಯಿಸಬೇಕಾದ ಹೋರಾಟದ ಸ್ವರೂಪವನ್ನು ಕುರಿತು ಕನ್ನಡ ಸಾಹಿತ್ಯ ಪರಿಷತ್ತು ಸ್ಥಾಪನೆಯಾದಾಗಿನಿಂದಲೂ ನಮ್ಮ ಪ್ರಮುಖ ಸಾಹಿತಿಗಳೂ, ವಿಚಾರವಂತರೂ ಪ್ರಸ್ತಾಪಿಸುತ್ತಲೇ ಬಂದಿದ್ದಾರೆ. ಈ ಹಿನ್ನೆಲೆಯಲ್ಲಿ ಕೆಲವು ವರ್ಷಗಳ ಹಿಂದೆ ನಡೆದ ಗೋಕಾಕ್ ಚಳುವಳಿಯಂಥ ಮಹತ್ವದ ಆಂದೋಲನದ ನಂತರ ಜನಮನದಲ್ಲಿ ಮೊದಲಿಗಿಂತ ಹೆಚ್ಚು ವ್ಯಾಪಕವಾದ ರೀತಿಯಲ್ಲಿ ಕನ್ನಡದ ಸಮಸ್ಯೆಗಳನ್ನು ಕುರಿತು ಎಚ್ಚರವೊಂದು ಹುಟ್ಟಿಕೊಂಡದ್ದು ನಿಜವಾದರೂ ಮತ್ತು ಈ ಆಂದೋಲನದ ನಂತರ ರೂಪುಗೊಂಡ ವಿವಿಧ ಕನ್ನಡ ಪರ ಸಂಘಟನೆಗಳೂ, ಅದರಲ್ಲಿಯೂ ಕನ್ನಡ ಪರ ಹೋರಾಟಕ್ಕೆ ಹೊಸ ಆಯಾಮಗಳನ್ನು ತಂದುಕೊಟ್ಟ ‘ಕನ್ನಡ ಶಕ್ತಿ ಕೇಂದ್ರ’ದ ಚಟುವಟಿಕೆಗಳೂ, ಜನತೆಯಲ್ಲೂ ಸರ್ಕಾರದಲ್ಲೂ ಈ ಕುರಿತ ಕಾಳಜಿಗಳನ್ನು ಹುಟ್ಟಿಸುವುದರಲ್ಲಿ ಕ್ರಿಯಾಶೀಲವಾದರೂ, ದೃಢವಾದ ಹಾಗೂ ಪ್ರಾಮಾಣಿಕವಾದ ರಾಜಕೀಯ ಸಂಕಲ್ಪವೆ ಕನ್ನಡದ ಸಮಸ್ಯೆಗಳ ಪರಿಹಾರಕ್ಕೆ ಇರುವ ಪ್ರಬಲವಾದ ಸಾಧನೆ ಎಂಬುದು ನನ್ನ ತಿಳಿವಳಿಕೆಯಾಗಿದೆ. ಇತ್ತೀಚಿನ ಬೆಳವಣಿಗೆಗಳ ಮೂಲಮಾನದಿಂದ ಹೇಳುವುದಾದರೆ, ಅಂಥ ಸಂಕಲ್ಪವೊಂದು ಕ್ರಮೇಣ ರೂಪುಗೊಳ್ಳುವ ಲಕ್ಷಣಗಳು ಕಾಣುತ್ತಿವೆ. ತಮ್ಮ ತಮ್ಮ ನಾಡು-ನುಡಿಗಳ ಪ್ರಶ್ನೆ ಬಂದಾಗ, ಇತರ ರಾಜ್ಯಗಳಲ್ಲಿ ವಿವಿಧ ರಾಜಕೀಯ ಪಕ್ಷಗಳು, ತಮ್ಮ ಪಕ್ಷಭೇದಗಳನ್ನು ಮರೆತು ಹೇಗೆ ಒಂದಾಗಿ ನಿಲ್ಲುತ್ತವೆಯೋ, ಹಾಗೆ ಕರ್ನಾಟಕದ ಹಿತರಕ್ಷಣೆಗಾಗಿ ನಮ್ಮ ಎಲ್ಲ  ರಾಜಕೀಯ ಪಕ್ಷಗಳೂ ಒಂದಾಗಿ ನಿಲ್ಲುವ ಕಾಲ ದೂರವಿರಲಾರದೆಂದು ಆಶಿಸೋಣ. ಆದರೆ, ಎಲ್ಲಿಯವರೆಗೆ ಕನ್ನಡದ ಬಗ್ಗೆ ನಿಜವಾದ ಹಾಗೂ ಗಾಢವಾದ ಕಾಳಜಿಗಳು ನಮ್ಮ ಜನಸಮುದಾಯದ ಅಂತರಾಳದಿಂದಲೆ ಹುಟ್ಟಿಕೊಂಡು, ಒಂದು ಎಚ್ಚರದಂತೆ ಅವರನ್ನು ಆವರಿಸಿಕೊಳ್ಳುವುದಿಲ್ಲವೋ ಅಲ್ಲಿಯವರೆಗೆ ಕನ್ನಡ ಪರವಾದ ಯಾವ ಹೋರಾಟವೂ ನಿರೀಕ್ಷಿತ ಫಲವನ್ನು ನೀಡಲಾರವು.

ಇಂಥ ಒಂದು ಬೆಳವಣಿಗೆಯ ಹಿನ್ನೆಲೆಯಲ್ಲಿ ನಡೆಯುತ್ತಿರುವ ದಾವಣಗೆರೆಯ ಈ ಸಮ್ಮೇಳನದಲ್ಲಿ ನಾನು ದಾವಣಗೆರೆಯ ಇತಿಹಾಸವನ್ನಾಗಲೀ, ಪುರಾಣವನ್ನಾಗಲೀ ಪ್ರಸ್ತಾಪಿಸಲು ಹೋಗುವುದಿಲ್ಲ. ಆದರೆ ಭೌಗೋಳಿಕವಾಗಿ ಕರ್ನಾಟಕದ ಕೇಂದ್ರದಲ್ಲಿರುವ ಈ ಮಹಾನಗರ, ಒಂದು ವೇಳೆ ಕರ್ನಾಟಕದ ರಾಜಧಾನಿಯಾಗಿದ್ದ ಪಕ್ಷದಲ್ಲಿ, ಈ ಹೊತ್ತು ಕರ್ನಾಟಕದಲ್ಲಿ ಕಾಡುತ್ತಿರುವ ಎಷ್ಟೋ ಸಮಸ್ಯೆಗಳು ಇರುತ್ತಿರಲಿಲ್ಲವೆಂಬುದು ನಿಜವಾದ ಸಂಗತಿಯಾಗಿದೆ. ನನಗೆ ದಾವಣಗೆರೆ ಮುಖ್ಯವಾಗುವುದು, ನಾನು ಈಗಾಗಲೇ ಪ್ರಸ್ತಾಪಿಸಿದ ಅದರೊಂದಿಗಿನ ವೈಯಕ್ತಿಕ ಸಂಬಂಧಗಳ ಆಚೆಗೆ, ಇನ್ನೂ ಎರಡು ಕಾರಣಗಳಿಂದಾಗಿ. ಅವೇನೆಂದರೆ, ‘ಸುಲಿದ ಬಾಳೆಯ ಹಣ್ಣಿನಂದದಿ| ಕಳೆದ ಸಿಗುರಿನ ಕಬ್ಬಿನಂದದಿ| ಇಳಿಸಿದುಷ್ಣದ ಹಾಲಿನಂದದಿ ಸುಲಭವಾಗಿರ್ಪ| ಲಲಿತವಹ ಕನ್ನಡದ ನುಡಿಯಲಿ| ತಿಳಿದು ತನ್ನೊಳು ತನ್ನ ಮೋಕ್ಷವ| ಗಳಿಸಿಕೊಂಡರೆ ಸಾಲದೇ, ಸಂಸ್ಕೃತದೊಳಿನ್ನೇನು?’ ಎಂದು ಕನ್ನಡ ಪರವಾದ ದನಿಯೆತ್ತಿದ ಮಹಾಲಿಂಗ ರಂಗ ಕವಿಯ ಸಮಾಧಿ ಈ ದಾವಣಗೆರೆಯಲ್ಲಿದೆ, ಎಂಬ ಕಾರಣಕ್ಕಾಗಿ ದಾವಣಗೆರೆ ನನಗೆ ತುಂಬ ಮುಖ್ಯ ಎಂದು ಅನ್ನಿಸುತ್ತದೆ.

‘ಅನುಭವಾಮೃತ’ ಎಂಬ ಕಾವ್ಯವನ್ನು ಬರೆದ ಮಹಲಿಂಗರಂಗ, ಹದಿನೇಳನೆಯ ಶತಮಾನಕ್ಕೆ ಸೇರಿದವನು. ಅವನ ‘ಅನುಭವಾಮೃತ’ ಕನ್ನಡದಲ್ಲಿ ಅದ್ವೈತ ಸಿದ್ಧಾಂತವನ್ನು ಕುರಿತು ರಚಿತವಾದ ಮೊಟ್ಟಮೊದಲನೆ ಕಾವ್ಯವಾಗಿದೆ. ಶ್ರೀಶೈಲದ ಮಲ್ಲಿಕಾರ್ಜುನನನ್ನು ಇಷ್ಟದೈವವನ್ನಾಗಿ ಮಾಡಿಕೊಂಡ ಈ ಕವಿಯು ಹರಪನಹಳ್ಳಿ ತಾಲ್ಲೂಕಿನ ಉಚ್ಚಂಗಿ ದುರ್ಗದಲ್ಲಿ ಇದ್ದಿರಬಹುದೆಂದು ವಿದ್ವಾಂಸರು ತರ್ಕಿಸುತ್ತಾರೆ. ಅದ್ವೈತವನ್ನು ಬೋಧಿಸುವ ಹಾಗೂ ಮುಮುಕ್ಷುಗಳಿಗೆ ಮೋಕ್ಷಸಾಧಕವಾದ ಕಾವ್ಯ ಗ್ರಂಥವೊಂದೂ ಕನ್ನಡದಲ್ಲಿ ಇರದಿದ್ದ ಕಾಲದಲ್ಲಿ, ಮತ್ತು ಈ ಬಗೆಯಾದ ಬೋಧೆಗೆ ಸಂಸ್ಕೃತ ಗ್ರಂಥಗಳನ್ನೆ ಅವಲಂಬಿಸಬೇಕಾಗಿದ್ದ ಪರಿಸ್ಥಿತಿಯಲ್ಲಿ, ಮೊಟ್ಟಮೊದಲಿಗೆ ಅತ್ಯಂತ ಜನಪ್ರಿಯ ಶೈಲಿಯ ಕನ್ನಡದಲ್ಲಿ ಮಹಲಿಂಗನು ಬರೆದ ‘ಅನುಭವಾಮೃತ’ವು ಕನ್ನಡನಾಡಿನ ಹಳ್ಳಿಹಳ್ಳಿಗಳಲ್ಲಿ ಪಾರಾಯಣದ ಗ್ರಂಥವಾಗಿ ಉಳಿದು ಬಂದಿದೆ. ಮೋಕ್ಷ ಸಾಧನವಾದ ವೇದಾಂತವನ್ನು ತಿಳಿದುಕೊಳ್ಳಬೇಕಾದರೆ ಸಂಸ್ಕೃತವನ್ನೆ ಅವಲಂಬಿಸಬೇಕಾಗಿಲ್ಲ. ಅದನ್ನು ‘ಲಲಿತವಹ ಕನ್ನಡದ ನುಡಿಯಲಿ ತಿಳಿದು’, ತನ್ನ ಮೋಕ್ಷವನ್ನು ಗಳಿಸಿಕೊಳ್ಳಬಹುದು ಎಂಬ ಧೈರ್ಯವನ್ನು ಬಿತ್ತುತ್ತ, ‘ಸಂಸ್ಕೃತದೊಳಿನ್ನೇನು’ ಎಂಬ ದಿಟ್ಟತನದ ನಿಲುವಿನಿಂದ, ಸಂಸ್ಕೃತದ ಅವಲಂಬನೆಯನ್ನು ನಿರಾಕರಿಸುತ್ತ, ಕನ್ನಡನುಡಿ, ಸುಲಿದ ಬಾಳೆಯ ಹಣ್ಣಿನಂತೆ, ಕಳಿದ ಸಿಗುರಿನ ಕಬ್ಬಿನಂತೆ, ಸುಖೋಷ್ಣಸ್ಥಿತಿಯಲ್ಲಿರುವ ಹಾಲಿನಂತೆ-ಎಂದು ಪ್ರಶಂಸಿಸಿರುವ ಮಹಲಿಂಗ ರಂಗನ ಕನ್ನಡ ಪ್ರೇಮದಿಂದ ಈ ಹೊತ್ತಿನ ಕನ್ನಡಿಗರು ಕಲಿಯಬೇಕಾದದ್ದು ಸಾಕಷ್ಟಿದೆ. ಅಷ್ಟೇ ಅಲ್ಲ ಇದು ಕನ್ನಡದಿಂದ ಸಂಸ್ಕೃತಭಾಷೆಗೆ ಅನುವಾದಗೊಂಡಿದೆ ಎನ್ನುವ ಸಂಗತಿ ಈ ಕಾವ್ಯದ ಸೊಗಸು ಹಾಗೂ ಮಹತ್ವಗಳಿಗೆ ಸಾಕ್ಷಿಯಾಗಿದೆ.  ಸಾಮಾನ್ಯವಾಗಿ ವೇದಾಂತ ಗ್ರಂಥಗಳು ಸಂಸ್ಕೃತದಿಂದ ಕನ್ನಡಕ್ಕೆ ಅನುವಾದಗೊಂಡಿವೆ ಎನ್ನುವುದು ಸಹಜವೂ ಹಾಗೂ ಪರಿಚಿತವೂ ಆದ ವಿಷಯವಾಗಿದೆ; ಆದರೆ ಮಹಲಿಂಗನ ರಂಗನ ಕನ್ನಡ ‘ಅನುಭವಾಮೃತ’ವು ಅದೇ ಹೆಸರಿನಿಂದ, ಶ್ರೀಮತ್ ಪರಮಹಂಸ ಬಾಲಕೃಷ್ಣ ಬ್ರಹ್ಮಾನಂದ ಯೋಗಿಗಳಿಂದ ಕ್ರಿ.ಶ. ೧೮೧೩ರಲ್ಲಿ ಸಂಸ್ಕೃತ ಭಾಷೆಗೆ ಅನುವಾದಗೊಂಡಿದೆ ಎನ್ನುವುದು ತೀರಾ ವಿಶೇಷದ ಸಂಗತಿಯಾಗಿದೆ. ಕನ್ನಡ ಭಾಷೆ ಹಾಗೂ ಸಾಹಿತ್ಯ ಬೆಳೆಯಬೇಕಾದದ್ದು ಹಾಗೂ ಉಳಿಯಬೇಕಾದದ್ದು ಈ ಬಗೆಯ ಸವಾಲುಗಳನ್ನೆದುರಿಸುವುದರಿಂದ ಹಾಗೂ  ಆಂತರಿಕ ಸತ್ವಗಳಿಂದ ಎಂಬುದನ್ನು ‘ಅನುಭವಾಮೃತ’ ಕಾವ್ಯನಿರ್ಮಿತಿಯ ಮೂಲಕ ತೋರಿಸಿಕೊಟ್ಟ ಮಹಲಿಂಗ ರಂಗ ಕವಿಯ ಸಮಾಧಿ ಕನ್ನಡದ ಗಂಡುಮೆಟ್ಟಿನ ನೆಲವಾದ ದಾವಣಗೆರೆಯಲ್ಲಿದೆ ಎನ್ನುವುದು ಅತ್ಯಂತ ಅರ್ಥಪೂರ್ಣವಾದ ಸಂಗತಿಯಾಗಿದೆ.

ದಾವಣಗೆರೆ ನನಗೆ ಮುಖ್ಯವಾಗಲು ಮತ್ತೊಂದು ಕಾರಣ, ಸರಸ್ವತಿಯನ್ನು ಕುರಿತ ಭವ್ಯವಾದ ಕಲ್ಪನೆಯನ್ನು ಕಟ್ಟಿಕೊಡುವ ಶಾಸನವೊಂದು ಇಲ್ಲಿದೆ ಎನ್ನುವುದು. ದಾವಣಗೆರೆಯ ಪರಿಸರದಲ್ಲಿ ಅನೇಕ ಶಾಸನಗಳು ದೊರೆಯುತ್ತವೆ. ಕಳಚೂರಿ, ಪಾಂಡ್ಯ, ಸೇವುಣ, ಕದಂಬ, ಹೊಯ್ಸಳ, ವಿಜಯನಗರ ಇತ್ಯಾದಿ ರಾಜವಂಶಗಳ ಕಾಲದ ಶಾಸನಗಳು, ಈ ಪರಿಸರ ವಿವಿಧ, ಕಾಲಮಾನಗಳಲ್ಲಿ ಯಾವ ಯಾವ ಪ್ರಭುತ್ವಕ್ಕೆ ಒಳಪಟ್ಟಿತ್ತೆಂಬುದನ್ನು ಸೂಚಿಸುತ್ತವೆ. ಈ ಶಾಸನಗಳ ನಡುವೆ, ಸೇವುಣ ರಾಜರ ಆಳ್ವಿಕೆಯ ಕಾಲದಲ್ಲಿ ಲಿಖಿತವಾದ, ಸರಸ್ವತಿಯ ವರ್ಣನೆಯನ್ನು ಕುರಿತ ಶಾಸನ ಪದ್ಯವೊಂದು (ಕ್ರಿ.ಶ. ೧೨೮೦) ಅತ್ಯಂತ ವಿಶಿಷ್ಟವಾದುದಾಗಿದೆ. ಸಾಮಾನ್ಯವಾಗಿ ಸರಸ್ವತಿಯ ಕಲ್ಪನೆಯನ್ನು ಕಟ್ಟಿಕೊಡುವಲ್ಲಿ, ಆಕೆ ವೀಣಾಪಾಣಿ, ಪುಸ್ತಕ ಹಸ್ತೆ, ಹಂಸ ಅಥವಾ ಮಯೂರವಾಹನೆ-ಇತ್ಯಾದಿ ವಿವರಗಳು ಕಾಣಿಸಿಕೊಳ್ಳುತ್ತವೆ. ಆದರೆ ಪ್ರಸ್ತುತ ಶಾಸನದಲ್ಲಿ ಸಾಂಪ್ರದಾಯಿಕವಾಗಿ ಸರಸ್ವತಿಯ ವರ್ಣನೆಯೊಂದಿಗೆ ಸಂಗಡಿಸಿಕೊಂಡು ಬರುವ ಈ ಸಂಗತಿಗಳಿಲ್ಲ. ಇಲ್ಲಿ ವರ್ಣಿತವಾಗಿರುವ ಸರಸ್ವತಿ ಧ್ಯಾನದಲ್ಲಿ ತೊಡಗಿರುವ ಒಬ್ಬ ಯೋಗಿಯಂತೆ ತೋರುತ್ತಾಳೆ. ಆಕೆಯ ಕೈಯಲ್ಲಿ ಒಂದು ಜಪಮಾಲೆಯಿದೆ. ಆಕೆ ಈ ಜಪಮಾಲೆಯನ್ನು ಹಿಡಿದು ಜಗತ್ತಿನ ಶ್ರೇಯಸ್ಸಿಗಾಗಿ ಧ್ಯಾನದಲ್ಲಿ ತೊಡಗಿರುವ ಮಹಾತಪಸ್ವಿನಿಯಾಗಿದ್ದಾಳೆ. ಆ ಶಾಸನ ಹೀಗಿದೆ:

ನೀರಜ ಜಾತ ವಿಸ್ತರಿಸಿದಂಡಮುಮಂ ಮಣಿಮಾಲೆಯಾಗಿ ಬಿ-
ಸ್ತಾರಿಸಿ ಹಸ್ತದಿಂ ಪಿಡಿದು ತನ್ನ ಸರಣ್ಬುಗುವರ್ಗೆ ಲೇಸುಮಂ
ಪ್ರೇರಿಸಲೋಸುಗಂ ಜಪಿಸುತಿರ್ಪಳಿರುಳ್ ಪಗಲಾವಳೊರ್ವಳಾ
ಭಾರತಿ ನಮ್ಮ ಜಿಹ್ವೆಯೊಳನಾವಿಳದಿಂದಿರುತಿರ್ಕೆ ಸಂತತಂ.

ಎಂದರೆ ಬ್ರಹ್ಮನು ನಿರ್ಮಿಸಿರುವ ಸಮಸ್ತ ಬ್ರಹ್ಮಾಂಡಗಳನ್ನೆ ಮಣಿಮಾಲೆಯಾಗಿ ಅಥವಾ ಜಪಸರವನ್ನಾಗಿ ಮಾಡಿ ತನ್ನ ಕೈಯಲ್ಲಿ ಹಿಡಿದು, ತನ್ನನ್ನು ಶರಣು ಹೋಗುವವರಲ್ಲಿ ಲೇಸನ್ನು ಅಥವಾ ಶ್ರೇಯಸ್ಸನ್ನು ಪ್ರೇರಿಸುವ ಸಲುವಾಗಿ, ಯಾವ ಒಬ್ಬಳು ಹಗಲೂ ಇರುಳು ಜಪಿಸುತ್ತಿದ್ದಾಳೆಯೋ, ಆ ಭಾರತಿ ನಮ್ಮ ನಾಲಗೆಯಲ್ಲಿ ನಿರ್ಮಲವಾಗಿ ಹಾಗೂ ಸಂತೋಷದಿಂದ ನೆಲಸಲಿ-ಎಂಬುದು ಈ ಪದ್ಯದ ಸಾರಾಂಶವಾಗಿದೆ.

ಸಮಸ್ತ ಬ್ರಹ್ಮಾಂಡಗಳನ್ನೆ ಮಣಿಮಾಲೆಯಾಗಿ ಮಾಡಿಕೊಂಡು, ಜಗತ್ತಿನ ಜನರ ಹೃದಯದಲ್ಲಿ ಶ್ರೇಯಸ್ಸನ್ನು ಪ್ರೇರಿಸಲು ಹಗಲೂ ಇರುಳೂ ಜಪಿಸುವ ಈ ಸರಸ್ವತಿಯ ಕಲ್ಪನೆ ನಿಜವಾಗಿಯೂ ಮಹೋನ್ನತವಾಗಿದೆ. ಒಡೆದು ಛಿದ್ರವಾಗುತ್ತಿರುವ ನಮ್ಮ ಈ ಹೊತ್ತಿನ ಜಗತ್ತಿನ ಜನದ ಮಮನಸ್ಸಿನಲ್ಲಿ ಲೇಸನ್ನು ಅಥವಾ ಸದ್ಭಾವನೆಗಳನ್ನು ಪ್ರೇರಿಸುವ ಮಹಾಚೈತನ್ಯದ ಅಗತ್ಯತೆಯ ಹಿನ್ನೆಲೆಯಲ್ಲಿ, ಯೋಗಿನಿಯೂ, ಸಮಸ್ತ ಜೀವಜಾತಪ್ರೇಮಿಯೂ ಆಗಿ ತೋರುವ, ಈ ಸರಸ್ವತಿಯ ಕಲ್ಪನೆ ಅತ್ಯಂತ ಪ್ರಸ್ತುತವಾಗಿದೆ.

ನಾವು, ನಮ್ಮ ಬದುಕು, ನಮ್ಮ ಸಾಹಿತ್ಯ, ಕಲೆ, ಸಂಸ್ಕೃತಿ ಇತ್ಯಾದಿಗಳು, ಈ ದೇಶ, ಈ ದೇಶವನ್ನು ಒಳಗೊಂಡ ಜಗತ್ತು ಅತ್ಯಂತ ತಲ್ಲಣಗೊಳಿಸುವ ಪಲ್ಲಟಗಳಿಗೆ ಒಳಗಾಗುತ್ತಿದೆ. ಒಂದು ಕಡೆ ಯಂತ್ರವಿಜ್ಞಾನ ಅನೂಹ್ಯ ವೇಗದಲ್ಲಿ ಧಾವಿಸುತ್ತಿದ್ದರೂ, ಅದಕ್ಕೆ ಸಮಾನಾಂತರವಾಗಿರುವ ಬದುಕು ಇನ್ನೂ ದಾರಿದ್ರ್ಯ, ಅನಕ್ಷರತೆ ಹಾಗೂ ಅವಿಚಾರಿಕತೆ ನಂಬಿಕೆ ನಡವಳಿಕೆಗಳಲ್ಲಿ ಕಟ್ಟುಗೊಂಡಿದೆ. ರಷ್ಯಾ ಹಾಗೂ ಯುರೋಪು ದೇಶಗಳಲ್ಲಿ ನಡೆದಿರುವ ರಾಜಕೀಯ ಸ್ಥಿತ್ಯಂತರಗಳು, ಪರಸ್ಪರ ಆಕ್ರಮಣಗಳು, ಅಂತರ್ಯುದ್ಧಗಳು, ಬಹುಕಾಲದಿಂದ ನಂಬಿಕೊಂಡು ಬಂದಿರುವ ಸಿದ್ಧಾಂತದ ಬೇರುಗಳನ್ನು ಅಲ್ಲಾಡಿಸಿವೆ; ಬೃಹತ್ ಒಕ್ಕೂಟಗಳು ವಿಘಟನೆಗೊಂಡಿವೆ. ಎಡಪಂಥೀಯ ಧೋರಣೆಗಳ ಹಾಗೂ ಜಾಗತಿಕ ರಾಜಕಾರಣದ ಮೇಲೆ ಈ ಬೆಳವಣಿಗೆಗಳ ಪರಿಣಾಮವನ್ನು, ಕಮ್ಯೂನಿಸಂನ ವೈಫಲ್ಯವೆಂದು ವಿವರಿಸಬೇಕೋ ಅಥವಾ ವ್ಯಕ್ತಿಸ್ವಾತಂತ್ರ್ಯ ಮೂಲವಾದ ಪ್ರಜಾಪ್ರಭುತ್ವವಾದೀ ತುಡಿತಗಳೆಂದು ಭಾವಿಸಬೇಕೋ ಅಥವಾ ಬಂಡವಾಳಷಾಹೀ ಸಂಸ್ಕೃತಿಯ ಇಡೀ ಜಗತ್ತನ್ನು ಆವರಿಸಬಹುದಾದ ಆಪತ್ತಿನ  ಸೂಚನೆ ಎಂದು ತಿಳಿಯಬೇಕೋ-ಎನ್ನುವ ಗೊಂದಲದಲ್ಲಿ ನಾವೆಲ್ಲರೂ ಬಿದ್ದಿದ್ದೇವೆ. ಪ್ರಜಾಪ್ರಭುತ್ವ ಹಾಗೂ ವ್ಯಕ್ತಿ ಸ್ವಾತಂತ್ರ್ಯ ಇತ್ಯಾದಿಗಳ ಬಗೆಗೆ ಭ್ರಮನಿರಸನ ಹೊಂದಿ, ದಿನ ಬೆಳಗಾದರೆ ವಿಘಟನೆಯ ಆತಂಕದಲ್ಲಿ ಬದುಕುವ ನಮ್ಮ ದೇಶದ ಮೇಲೆ ಈ ಎಲ್ಲ ಜಾಗತಿಕ ಘಟನೆಗಳ ಪರಿಣಾಮವು ನಿರ್ಲಕ್ಷಿಸುವಂಥದೇನೂ ಅಲ್ಲ. ನಾಲ್ಕು ದಶಕಗಳ ನಂತರವೂ ಈ ಪ್ರಜಾಪ್ರಭುತ್ವ ಶ್ರೀಸಾಮಾನ್ಯನಿಗೆ ತಂದದ್ದೇನು ಎಂಬ ಪ್ರಶ್ನೆಗೆ ಉತ್ತರ ಕೊಡುವವರು ಯಾರು? ಪ್ರಜಾಪ್ರಭುತ್ವದ ಹೆಸರಿನಲ್ಲಿ ಇಷ್ಟು ವರ್ಷಗಳಲ್ಲಿ ಬೊಜ್ಜು ಬೆಳೆಯಿಸಿಕೊಂಡ ಶೋಷಕವರ್ಗ ಯಾವುದು ಎಂಬುದನ್ನು ಕಣ್ಣಿಲ್ಲದ ಕುರುಡನೂ ಗುರುತಿಸಲು ಸಾಧ್ಯವಾಗಿದೆ ಎಂದಮೇಲೆ, ಕಣ್ಣಿದ್ದವರು ಕಾಣುವ ವಾಸ್ತವ ಸತ್ಯದ ಭಯಾನಕ ಸ್ವರೂಪಕ್ಕೆ ಬೇರೆಯ ವ್ಯಾಖ್ಯಾನಬೇಕೆ? ರಾಜಕೀಯ ಸಿದ್ಧಾಂತಗಳು ಯಾವುದೇ ಆಗಲಿ, ಅವುಗಳನ್ನಾಧರಿಸಿದ ಆಡಳಿತ ವ್ಯವಸ್ಥೆ ಯಾವುದೇ ಆಗಲಿ, ಮನುಷ್ಯನ ಮೂಲಭೂತ ಅಗತ್ಯಗಳನ್ನು ಪೂರೈಸಲು ಅವು ಅಶಕ್ಯವಾಗುವುದಾದರೆ, ಅವುಗಳಿಂದೇನು ಪ್ರಯೋಜನ ಎಂದು ಕೇಳಬೇಕಾಗಿದೆ. ಜಾಗತಿಕ ಸ್ತರದಲ್ಲಿ ಸಮಾನಾಂತರವಾಗಿ ಸಂಭವಿಸುತ್ತಿರುವ ಘಟನೆ-ವಿಘಟನೆಗಳ ಹಿನ್ನೆಲೆಯಲ್ಲಿ, ಪ್ರಗತಿಪರ ಧೋರಣೆಗಳನ್ನು ಹೊಂದಿರುವವರ ದಿಗ್ಭ್ರಮೆ ಹಾಗೂ ನಿರಾಸೆಗಳ ನಡುವೆ, ಎಲ್ಲಕ್ಕಿಂತ ಮುಖ್ಯವಾದದ್ದು ಹಾಗೂ ನಮ್ಮನ್ನು ಒಡೆಯದಂತೆ ಹಿಡಿದು ಕೂಡಿಸಬಹುದಾದದ್ದು ಮಾನವತಾವಾದವೊಂದೇ-ಎಂದು ತೋರುತ್ತದೆ.

ಒಂದು ದೇಶದ ನಿಜವಾದ ಸಂಪತ್ತು ಎಂದರೆ ಯಾವುದು ಎಂಬ ಪ್ರಶ್ನೆಗೆ ಸುಪ್ತಸಿದ್ಧ ಇಂಗ್ಲಿಷ್ ಲೇಖಕನಾದ ಜಾನ್ ರಸ್ಕಿನ್ ಹೇಳುತ್ತಾನೆ: ‘ಒಂದು ದೇಶದ ಸಂಪತ್ತು ಎಂಬುದು ಅದು ಸಂಚಯಿಸಿಕೊಂಡ ಚಿನ್ನ-ಬೆಳ್ಳಿಗಳಲ್ಲಿ ಇಲ್ಲ; ಅದು ಎಂಥ ವಜ್ರ ಸದೃಶ ವ್ಯಕ್ತಿತ್ವಗಳನ್ನು ಹೊಂದಿದೆ ಎನ್ನುವುದರಲ್ಲಿದೆ’. ಆದರೆ ಇದೇ ಪ್ರಶ್ನೆಗೆ ಕನ್ನಡಸಾಹಿತ್ಯ ಪರಂಪರೆಯ ಮೊಟ್ಟಮೊದಲ ಲಕ್ಷಣಗ್ರಂಥವಾದ ‘ಕವಿರಾಜಮಾರ್ಗ’ದಲ್ಲಿ ದೊರೆಯುವ ಉತ್ತರ, ಇದಕ್ಕಿಂತ ಗಮನಾರ್ಹವೂ  ವಿಶಿಷ್ಟವೂ ಆದುದಾಗಿದೆ. ಒಂಬತ್ತನೆಯ ಶತಮಾನದಷ್ಟು ಹಿಂದೆ, ಕನ್ನಡದ ಮೊಟ್ಟಮೊದಲ ಈ ಕೃತಿಯಲ್ಲಿ ಕವಿರಾಜಮಾರ್ಗಕಾರ ಹೇಳುತ್ತಾನೆ: ‘ಕಸವರಮೆಂಬುದು, ನೆರೆ ಸೈರಿಸಲಾರ್ಪೊಡೆ ಪರವಿಚಾರಮುಮಂ, ಪರಧರ್ಮಮುಮಂ’ ಎಂದು. ಹಳಗನ್ನಡದಲ್ಲಿ ‘ಕಸವರ’ ಎಂದರೆ ಚಿನ್ನ ಎಂದು ಅರ್ಥ. ‘ಕಸವರಮೆಂಬುದು ಎಂದರೆ, ಒಂದು ದೇಶದ ಚಿನ್ನ ಅಥವಾ ಸಂಪತ್ತೆಂಬುದು ಯಾವುದೆಂದರೆ, ಪರವಿಚಾರಗಳನ್ನೂ ಪರಧರ್ಮಗಳನ್ನೂ ಸಹಿಸುವ ಮನಸ್ಸಿನ ಗುಣವೇ-ಎನ್ನುತ್ತಾನೆ ಕವಿರಾಜಮಾರ್ಗಕಾರ. ಕನ್ನಡದ ಮೊಟ್ಟಮೊದಲ ಕೃತಿಯಲ್ಲಿ ಬರುವ ಈ ಮಾತು ನಿಜವಾಗಿಯೂ ಚಿನ್ನದಂತಹ ಮಾತು. ನಿಜವಾದ ಮಾನವೀಯತೆಯನ್ನು ವ್ಯಾಖ್ಯಾನಿಸುವ ಅಪರೂಪದ ಮಾತು ಭಾರತದ ರಾಜ್ಯಾಂಗದಲ್ಲಿ, ಯಾವ ಧಾರ್ಮಿಕ ನಿಲುವನ್ನು ‘ಸೆಕ್ಯುಲರಿಸಂ’ ಎಂದು ಘೋಷಿಸಲಾಗಿದೆಯೋ ಅದಕ್ಕೆ ಅತ್ಯಂತ ಸಂವಾದಿಯಾದ ಮಾತು. ಅನ್ಯ ವಿಚಾರಗಳನ್ನೂ, ಅನ್ಯಧರ್ಮಗಳನ್ನೂ ಒಪ್ಪಿಕೊಳ್ಳಬೇಕೆಂದಾಗಲೀ, ನಿರಾಕರಿಸಬೇಕೆಂದಾಗಲೀ ಈ ಮಾತಿನ ಅರ್ಥವಲ್ಲ; ಆದರೆ ಅವುಗಳನ್ನು ಸಹಿಸಿಕೊಳ್ಳುವ ಗುಣವನ್ನುಗಳಿಸಿಕೊಳ್ಳಬೇಕೆಂಬುದು ಈ ಮಾತಿನ ಅರ್ಥ. ಆದರೆ ಈ ಹೊತ್ತು ನಮ್ಮ ದೇಶದ ಪರಿಸ್ಥಿತಿ ಏನಾಗಿದೆ? ಇದಕ್ಕೆ ತದ್ವಿರುದ್ಧವಾಗಿದೆ. ಜಾತಿ ರಾಜಕಾರಣವನ್ನು ತಮ್ಮ ಸ್ವಾರ್ಥಕ್ಕಾಗಿ ಬೆಳೆಯಿಸುವ ಪಟ್ಟಭದ್ರ ಹಿತಾಸಕ್ತಿಗಳು,  ಜನರ ಧಾರ್ಮಿಕ ಭಾವನೆಗಳನ್ನು ತಮ್ಮ ರಾಜಕೀಯ ಲಾಭಕ್ಕಾಗಿ ಬಳಸುವ ಪ್ರವೃತ್ತಿಗಳು ಇತ್ಯಾದಿಗಳಿಂದ ನಮ್ಮ ದೇಶದ ರಾಜಕೀಯದಲ್ಲಿ ಧಾರ್ಮಿಕ ಮೂಲಭೂತವಾದಿಗಳು ಪಡೆದುಕೊಳ್ಳುತ್ತಿರುವ ಮೇಲುಗೈಯಿಂದ ಹುಟ್ಟಿಕೊಳ್ಳುವ ಮತೀಯಸಂಘರ್ಷ ಇತ್ಯಾದಿಗಳು, ದೇಶದ ಏಕತೆಗೆ ಹಾಗೂ ಸಮಗ್ರತೆಗೆ ಧಕ್ಕೆಯನ್ನುಂಟು ಮಾಡುತ್ತಿರುವುದಲ್ಲದೆ, ಸಾಮಾಜಿಕ ಬದುಕನ್ನು ಒಡೆದು ಮಾನವೀಯ ಸಂಬಂಧಗಳನ್ನೇ ವಿನಾಶದ ಅಂಚಿಗೆ ತಂದು ನಿಲ್ಲಿಸಿವೆ. ಶುದ್ಧ ಧಾರ್ಮಿಕ ವಿಷಯಗಳ ಮಾತು ಹಾಗಿರಲಿ, ಮತ-ಧರ್ಮ ಸಂಬಂಧಿಯಾದ ವಸ್ತುಗಳನ್ನು ಕುರಿತ ಸಾಹಿತ್ಯ ನಿರ್ಮಿತಿಯನ್ನಾಗಲೀ, ಚರ್ಚೆಯನ್ನಾಗಲೀ, ವಿಮರ್ಶೆಯನ್ನಾಗಲೀ, ಸಂಶೋಧನೆಯನ್ನಾಗಲೀ, ನಿರಾತಂಕವಾಗಿ ನಡೆಯಿಸುವುದು ನಿಜವಾಗಿಯೂ ಕಷ್ಟವೆಂಬಂತಹ ಅನಾರೋಗ್ಯಕರ ಪರಿಸರ ನಿರ್ಮಾಣವಾಗಿರುವಾಗ, ಸಾಹಿತ್ಯವು ತನ್ನ ಜಾತ್ಯತೀತ, ಮಾನವಪರ ಧೋರಣೆಗಳನ್ನು ಉಳಿಸಿಕೊಳ್ಳುವುದು ಹೇಗೆ ಎನ್ನುವುದು ನಮ್ಮನ್ನು ಕಾಡುವ ಪ್ರಶ್ನೆಯಾಗಿದೆ. ಆದರೂ ನಮ್ಮ ಸಾಹಿತಿಗಳು, ಕಲಾವಿದರು ಮತ್ತು ಪ್ರಜ್ಞಾವಂತರು,ಈ ವಿಭಜಕ ಶಕ್ತಿಗಳನ್ನು ದಿಟ್ಟತನದಿಂದ ಎದುರಿಸುವಂತಹ, ವಿವೇಕ ಮತ್ತು ಔಚಿತ್ಯಪ್ರಜ್ಞೆಯನ್ನು ಜನಮನದಲ್ಲಿ ಜಾಗ್ರತಗೊಳಿಸುವ ಹಾಗೂ ಅದಕ್ಕೆ ತಕ್ಕ ವೈಚಾರಿಕ ವಾತಾವರಣವನ್ನು ನಿರ್ಮಿಸುವ ಕಾರ್ಯದಲ್ಲಿ ತೊಡಗಬೇಕಾಗಿದೆ.

ಭಾರತಕ್ಕೆ ಬಹುದೊಡ್ಡ ಪರಂಪರೆ ಇದೆ. ಸಾವಿರಾರು ವರ್ಷಗಳ ಆಧ್ಯಾತ್ಮಿಕ ಹಿನ್ನೆಲೆ ಇದೆ. ಅನೇಕ ಋಷಿಮುನಿಗಳು, ತತ್ವವೇತ್ತರು ಅಮೋಘವಾದ ವಿಚಾರಗಳನ್ನು ಪ್ರತಿಪಾದಿಸಿದ್ದು ಇಲ್ಲಿ; ಪರಮಾತ್ಮನು ಅವತಾರಗಳ ಮೇಲೆ ಅವತಾರಗಳನ್ನು ಎತ್ತಿ ಯುಗಯುಗದಲ್ಲೂ ಸಂಭವಿಸಿದ್ದು ಇಲ್ಲಿ; ಪವಿತ್ರವಾದ ನದಿಗಳೂ, ಪುಣ್ಯಕ್ಷೇತ್ರಗಳೂ, ಸಾಧುಸಂತರೂ ಬಹುಸಂಖ್ಯೆಯಲ್ಲಿ ಇರುವುದು ಇಲ್ಲಿ-ಎಂದು ನಾವು ಹೆಮ್ಮೆಯಿಂದ ಹೇಳಿಕೊಳ್ಳುತ್ತೇವೆ. ಆದರೆ ಇಂಥ ಒಂದು ಹಿನ್ನೆಲೆ ಇರುವ ಈ ದೇಶದ ಜನಜೀವನ ಮಾತ್ರ, ಆ ಯಾವ ತತ್ವಗಳಿಗೂ ತನಗೂ ಏನೇನೂ ಸಂಬಂಧವಿಲ್ಲದಂತೆ ಬದುಕುತ್ತಿದೆಯಲ್ಲ ಯಾಕೆ? ಪರಂಪರಾಗತವಾದ ಹಾಗೂ ಘೋಷಿತವಾದ ವಿಚಾರ ಮತ್ತು ಆದರ್ಶಗಳಿಗೂ, ಪ್ರಸ್ತುತ ಜೀವನ ಕ್ರಮಕ್ಕೂ ಇರುವ ಈ ಕಂದರವು ದಿಗಿಲುಗೊಳಿಸುವಂಥದಾಗಿದೆ. ಹೀಗಾಗಿ ಹೃದಯದಾರಿದ್ರ್ಯ, ಅವೈಚಾರಿಕತೆ, ಅನಕ್ಷರತೆ, ಅಪ್ರಾಮಾಣಿಕತೆ ಹಾಗೂ ಭ್ರಷ್ಟಾಚಾರಗಳು, ನಮ್ಮ ಬದುಕನ್ನು ಗುತ್ತಿಗೆ ಹಿಡಿದುಕೊಂಡಿವೆ. ಯಾವುದೇ ಮಹಾಕ್ರಾಂತಿಯ ನಂತರ, ಅಭಿವೃದ್ಧಿಯ ಹಾದಿಗೆ ಬರಬೇಕೆಂದು ಯೋಚಿಸುವ ಯಾವುದೇ ರಾಷ್ಟ್ರ ಮೊದಲು ಮಾಡಬೇಕಾದ ಕೆಲಸವೆಂದರೆ, ತನ್ನ ಜನರನ್ನು ಅಕ್ಷರಸ್ಥರನ್ನಾಗಿ ಮಾಡುವುದು ಮತ್ತು ಶ್ರೀಸಾಮಾನ್ಯನ ವಾಸ್ತವದ ಬದುಕನ್ನು ಸುಧಾರಿಸುವುದು. ಎರಡನೆಯ ಮಹಾಯುದ್ಧದ ನಂತರ, ಅತ್ಯಂತ ಹೀನಾಯ ಸ್ಥಿತಿಗೆ ತಲುಪಿದ ಜಪಾನ್ ಮಾಡಿದ ಕೆಲಸ, ರಷ್ಯಾದ ಮಹಾಕ್ರಾಂತಿಯ ನಂತರ, ಆ ರಾಷ್ಟ್ರ ಮೊದಲು ಮಾಡಿದ ಕೆಲಸ ಈ ಸ್ವರೂಪದ್ದು. ಆದರೆ ಭಾರತವು ಸ್ವತಂತ್ರವಾದ ಕೂಡಲೇ ನಮ್ಮ ಸರ್ಕಾರ ಅಂದೇ ಸಾಕ್ಷರತಾ ಆಂದೋಲನವನ್ನು ಪ್ರಾರಂಭಿಸಿದ್ದರೆ, ನಮ್ಮ ಈ ಹೊತ್ತಿನ ಪರಿಸ್ಥಿತಿಯೇ ಬೇರೆಯಾಗಬಹುದಾಗಿತ್ತು. ಸಾಕ್ಷರತಾ ಪ್ರಚಾರ ಹಾಗೂ ವಯಸ್ಕರ ಶಿಕ್ಷಣ ನಮಗೆ ಮೊದಲ ಆದ್ಯತೆಗೆ ಒಳಗಾಗಬೇಕಾದ ವಿಷಯ ಎಂದು ತೋರಲೇ ಇಲ್ಲ. ಮತ್ತು ಜನರ ಮೂಲಭೂತ ಅಗತ್ಯಗಳ ಪೂರೈಕೆಗೆ ನೆರವಾಗಬಹುದಾದ ತಂತ್ರಜ್ಞಾನ ನಮ್ಮದಾಗಬೇಕು ಎಂಬ ಕಡೆಗೂ ಅಷ್ಟಾಗಿ ನಾವು ಗಮನಕೊಡಲಿಲ್ಲ. ಅದರ ಬದಲು, ತುಂಬ ಮುಂದುವರಿದ ದೇಶಗಳು ಮಾತ್ರ ಹೊರಬಹುದಾದಂತಹ ಯಂತ್ರಗಳನ್ನೂ, ತಂತ್ರಜ್ಞಾನವನ್ನೂ ಆಮದು ಮಾಡಿಕೊಂಡೆವು. ಮಹಾಮಹಾ ಕಾರ್ಖಾನೆ ಹಾಗೂ ಕೈಗಾರಿಕೆಗಳನ್ನು ಸ್ಥಾಪಿಸುವುದರ ಮೂಲಕ, ಅಂತರ್‌ರಾಷ್ಟ್ರೀಯವಾದ ಸ್ಪರ್ಧೆಯಲ್ಲಿ ತೊಡಗಿದೆವು. ಕೋಟ್ಯಂತರ ರೂಪಾಯಿಗಳನ್ನು ಖರ್ಚುಮಾಡಿ ಬಾಹ್ಯಾಕಾಶದಲ್ಲಿ ಉಪಗ್ರಹಗಳನ್ನು ಉಡಾಯಿಸಿದೆವು. ಆದರೆ, ಅನರಕ್ಷತೆ ಹಾಗೂ ಬಡತನಗಳು ಮಾತ್ರ ಕಡಿಮೆಯಾಗಲಿಲ್ಲ. ನಮ್ಮ ಮಹತ್ತಾದ ವೈಜ್ಞಾನಿಕ ಸಂಶೋಧನೆಗಳು, ಜನಸಾಮಾನ್ಯರ ದೈನಂದಿನ ಆಗತ್ಯವನ್ನೇನೂ ಪೂರೈಸಲು ನೆರವಾಗಲಿಲ್ಲ. ನಮ್ಮ ರೈತನ ನೇಗಿಲು, ಅವನು ಬಳಸುವ ಬಂಡಿ, ಶತಮಾನಗಳ ಹಿಂದೆ ಹೇಗಿದ್ದವೋ ಇಂದಿಗೂ ಹಾಗೆಯೇ ಇವೆ. ಅತ್ಯಂತ ಕಡಿಮೆ ಖರ್ಚಿನಲ್ಲಿ ಮನೆಗಳನ್ನು ಕಟ್ಟುವುದು ಹೇಗೆ ಎಂಬುದನ್ನು, ತಲೆಯಿಡಲು ಸರಿಯಾದ ನೆಲೆಯಿಲ್ಲದ ಅಸಂಖ್ಯಾತರ ಈ ದೇಶದಲ್ಲಿ, ಯಾರೂ ತೋರಿಸಿಕೊಡಲಿಲ್ಲ. ಆದರೆ ಈ ಎಲ್ಲ ಯಂತ್ರನಾಗರಿಕತೆಯ ಕಾರಣದಿಂದ ನಮ್ಮ ಜೀವನದಿಗಳ ನೀರೆಲ್ಲ ಕಲುಷಿತವಾಗಿದೆ; ಬೆಟ್ಟಗುಡ್ಡಗಳ ಹಾಗೂ ಅರಣ್ಯದ ಹಸುರೆಲ್ಲ ನಾಶವಾಗುತ್ತಿದೆ; ಗ್ರಾಮೀಣ ಪರಿಸರದ ಕೈಗಾರಿಕೆಗಳೂ ಕುಶಲಕಲೆಗಳೂ ಹೇಳಹೆಸರಿಲ್ಲದಾಗಿವೆ. ಇಂಥ ಪರಿಸರ ನಾಶದಿಂದ ನಮ್ಮ ನಾಳಿನ ಮಕ್ಕಳ ಭವಿಷ್ಯದ ಬಗ್ಗೆ ಸೂಕ್ಷ್ಮ ಸಂವೇದನೆಯುಳ್ಳವರು ತಲ್ಲಣಿಸುವಂತಾಗಿದೆ. ಗಾಂಧೀಜಿಯ ಗ್ರಾಮ ಸ್ವರಾಜ್ಯದ ಕಲ್ಪನೆಗಳನ್ನೂ ವಿಚಾರಗಳನ್ನೂ ನಿಕಾಕರಿಸಿದ ಪರಿಣಾಮದಿಂದ ಈ ದೇಶ ತೆರಬೇಕಾದ ಬೆಲೆ ಅಪಾರವಾಗಿದೆ. ಸಮುದಾಯದ ಹಿತಾಸಕ್ತಿಗೆ ಅಗತ್ಯವಾದ ಆಧುನಿಕ ಪ್ರಗತಿಯನ್ನೂ, ಪರಿಸರ ಸಂರಕ್ಷಣೆಯ ಕಾರ್ಯವನ್ನೂ, ಪರಸ್ಪರ ವಿರೋಧವಿಲ್ಲದೆ ನಿರ್ವಹಿಸುವುದು ಹೇಗೆ ಎಂಬ ಸಮಸ್ಯೆಗಳು, ಮಾನವತಾವಾದಿಗಳು ಈ ದಿನ ಎದುರಿಸಬೇಕಾದ ಸವಾಲುಗಳಾಗಿವೆ.

ಜಗತ್ತಿನಲ್ಲಿ ಎಲ್ಲ ದೇಶಗಳಲ್ಲೂ ಎಲ್ಲ ಕಾಲಗಳಲ್ಲೂ ಆಗಿರುವ ಬದಲಾವಣೆಗಳ ಹಿಂದೆ ಯುವಶಕ್ತಿ  ಪ್ರಮುಖವಾದ ಪಾತ್ರವನ್ನು ವಹಿಸಿದೆ. ಉತ್ಸಾಹ, ಕಲ್ಪನಾಶಕ್ತಿ ಹಾಗೂ ಕ್ರಿಯಾಶೀಲತೆ ಇವುಗಳು ಯೌವನದ ಮುಖ್ಯ ಲಕ್ಷಣಗಳೆಂದು ಹೇಳುವುದಾದರೆ, ಯಾಕೆ ನಮ್ಮ ದೇಶದ ಯುವಕರು ಇಷ್ಟೊಂದು ಅಸ್ವಸ್ಥರಾಗಿರುವಂತೆ ಕಂಡುಬರುತ್ತಾರೆ? ಬಹುಶಃ ಸ್ವಾತಂತ್ರ್ಯಪೂರ್ವದಲ್ಲಿ ನಮ್ಮ ಯುವಶಕ್ತಿಗೆ ದೊರೆತಂಥ ಮಾರ್ಗದರ್ಶಕ ಸತ್ವಗಳಾಗಲೀ, ನಿರ್ದಿಷ್ಟವಾದ ಹಾಗೂ ದೊಡ್ಡ ಗುರಿಯಾಗಲೀ, ನಿಜವಾದ ಮೌಲ್ಯಪ್ರಜ್ಞೆಯಿಂದ ಗಟ್ಟಿಗೊಳ್ಳಬಹುದಾದ ವ್ಯಕ್ತಿತ್ವವಾಗಲೀ ಈ ದಿನ ಇಲ್ಲದಿರುವುದು ಅವರ  ಇಂದಿನ ಅಸ್ವಸ್ಥತೆಗೆ ಕಾರಣವೆಂದು ತೋರುತ್ತದೆ. ಹೀಗಾಗಿ ಈ ಶಕ್ತಿ ಹಲವು ಪಟ್ಟಭದ್ರ ಹಿತಾಸಕ್ತಿಗಳ ಕೈಯೊಳಗಿನ ಸ್ಫೋಟಕ ಸಾಮಗ್ರಿಯಂತೆ ಆಗಾಗ ಬಳಕೆಯಾಗುತ್ತಿರುವುದು ದುರದೃಷ್ಟದ ಸಂಗತಿಯಾಗಿದೆ.

ನಮ್ಮದೇಶದ ಯುವಕರು ನಿಶ್ಚಿತವಾದ ಪ್ರಜ್ಞೆಯೊಂದರಲ್ಲಿ ಬೇರೂರದೆ, ಹಲವು ಹತ್ತು ಪ್ರಭಾವಗಳಿಗೆ, ಸುತ್ತಿಕೊಳ್ಳುವ ಬಂದಳಿಕೆಗಳಂತೆ ವರ್ತಿಸಲು, ಅವರು ಈ ದೇಶದ ಪರಂಪರೆಗೆ, ಚರಿತ್ರೆಗೆ, ಸಾಹಿತ್ಯ ಮತ್ತು ಕಲೆಗಳಿಗೆ, ಹಾಗೂ ವರ್ತಮಾನದ ನಿಜವಾದ ವಾಸ್ತವಗಳಿಗೆ ನೇರವಾಗಿ ಸಂಬಂಧಿಸಿಕೊಳ್ಳದಂತಹ ಪರಕೀಯ ಸ್ಥಿತಿಯಲ್ಲಿರುವುದೇ ಕಾರಣವಾಗಿದೆ. ನಮ್ಮ ಪ್ರಸ್ತುತ ಶಿಕ್ಷಣ ಕ್ರಮ ಈ ಬಗೆಯ ಪ್ರಜ್ಞೆಯನ್ನು ಸಮರ್ಥವಾಗಿ ಉಂಟುಮಾಡುವಷ್ಟು ನವೀಕರಣಗೊಂಡಿಲ್ಲ. ಕೇವಲ ವಿಷಯ ಜ್ಞಾನವನ್ನು ತಲೆಗೆ ತುರುಕುವುದಷ್ಟೆ ಅದರ ಕೆಲಸವಾಗಿದೆ. ಮತ್ತು ನಿಜವಾದ ವೈಜ್ಞಾನಿಕ ವಿಚಾರ ಬುದ್ಧಿಯನ್ನಾಗಲೀ, ಮೌಲ್ಯನಿಷ್ಠೆಯನ್ನಾಗಲೀ ಪ್ರಚೋದಿಸುವ  ದಿಕ್ಕಿನಲ್ಲಿ ಅದು ದುರ್ಬಲವಾಗಿದೆ. ಈ ಕಾರಣದಿಂದಲೇ, ಲಕ್ಷಾಂತರ ಹಳ್ಳಿಗಳ ಗ್ರಾಮೀಣ ಪರಿಸರದಿಂದ ಬಂದು, ಆ ಹಳ್ಳಿಯ ಜನರ ದುಡಿಮೆಯ ಫಲದಿಂದಲೆ ರೂಪುಗೊಂಡ ಶಿಕ್ಷಣ ಸಂಸ್ಥೆಗಳಲ್ಲಿ ವಿದ್ಯಾಭ್ಯಾಸವನ್ನು ಪಡೆದ ನಮ್ಮ ಯುವಕರು, ಆನಂತರ ತಾವು ಹುಟ್ಟಿ ಬೆಳೆದ ಗ್ರಾಮಾಂತರ ಪರಿಸರಕ್ಕೆ ತಮ್ಮಿಂದ ಸಲ್ಲಬೇಕಾದ ಋಣ ಏನಾದರೂ ಉಂಟೆ ಎನ್ನುವ ಬಗ್ಗೆ ಅತ್ಯಂತ ತಟಸ್ಥವಾಗಿ ವರ್ತಿಸುತ್ತಾರೆ. ಯಾವುದು ಸಾಮಾಜಿಕ ಪ್ರಜ್ಞೆಯನ್ನು, ವೈಚಾರಿಕತೆಯನ್ನು, ಸೇವಾ ಮನೋಭಾವವನ್ನು ಎಚ್ಚರಿಸುವುದರ ಮೂಲಕ ಅವರನ್ನು ನಿಜವಾದ ಹೃದಯವಂತ ಮನುಷ್ಯರನ್ನಾಗಿ ಮಾಡುವುದಿಲ್ಲವೋ ಅಂತಹ ಶಿಕ್ಷಣದಿಂದ ಏನು ಪ್ರಯೋಜನ? ತಮ್ಮ ಬದುಕಿನ ಹಾಗೂ ಸಮಯದ ಒಂದಷ್ಟು ಭಾಗವನ್ನು ನಮ್ಮ ಯುವಕರು, ಅವರವರು ಹುಟ್ಟಿ-ಬೆಳೆದುಂಬಂದ ಗ್ರಾಮಗಳ, ನಿರಕ್ಷರರೂ, ದರಿದ್ರರೂ, ಅನೇಕ ಬಗೆಯ ಅವೈಚಾರಿಕ ಸಂಗತಿಗಳಿಗೆ ಹಾಗೂ ನಂಬಿಕೆಗಳಿಗೆ ಜೋತುಬಿದ್ದವರೂ ಆದ ತಮ್ಮ ಜನದ ಒಳಿತಿಗೆ ಮೀಸಲಿರಿಸುವುದಾದರೆ ಅದಕ್ಕಿಂತ ಮಹತ್ತಾದ ಸಾಧನೆ ಬೇರೊಂದಿರಲಾರದು.

ನಮಗೆ ಹಿನ್ನೆಲೆಯಾದ ಈ ಜಗತ್ತು ಮತ್ತು ಈ ದೇಶ, ಈ ದೇಶದ ಸೃಜನಶೀಲತೆ, ವೈಚಾರಿಕತೆ ಹಾಗೂ ಮಾನವತಾವಾದವು ಎದುರಿಸುತ್ತಿರುವ ಈ ಬಿಕ್ಕಟ್ಟುಗಳ ನಡುವೆಯೂ ನಮ್ಮ ಪ್ರಸ್ತುತ ಕನ್ನಡ ಸಾಹಿತ್ಯದ ಪರಿಸ್ಥಿತಿ ನಿಜವಾಗಿಯೂ ನಿರಾಶಾದಾಯಕವಾಗಿಲ್ಲ. ಸುಮಾರು ಒಂದೂವರೆ ಶತಮಾನಗಳ ಕಾಲಮಾನದಲ್ಲಿ ಬೆಳೆದು ಬಂದ, ಕಳೆದ ಆರೇಳು ದಶಕಗಳಲ್ಲಿ ಹಲವು ಸಾಹಿತ್ಯ   ಚಳುವಳಿಗಳ ಮೂಲಕ ತನ್ನ ನಿರಂತರತೆಯನ್ನು ಕಾಯ್ದುಕೊಂಡು ಬಂದಿರುವ ಆಧುನಿಕ ಕನ್ನಡ ಸಾಹಿತ್ಯ ಸಂದರ್ಭವು ಕನ್ನಡ ಸಾಹಿತ್ಯ ಚರಿತ್ರೆಯಲ್ಲಿಯೇ ಒಂದು ಅನನ್ಯವಾದ ಕಾಲವಾಗಿದೆ. ಯಾಕೆಂದರೆ ಕನ್ನಡ ಸಾಹಿತ್ಯ ಚರಿತ್ರೆಯ ಯಾವ ಕಾಲಘಟ್ಟದಲ್ಲಿಯೂ, ಹೀಗೆ ಏಕಕಾಲಕ್ಕೆ ಈ ಎತ್ತರದ ಇಷ್ಟೊಂದು ಸಾಹಿತಿಗಳು ಇದ್ದುದಾಗಲಿ, ಇಷ್ಟೊಂದು ವೈವಿಧ್ಯಮಯವಾದ ಸಾಹಿತ್ಯ ನಿರ್ಮಿತಿಯಲ್ಲಿ ತೊಡಗಿ ಸಾಹಿತ್ಯವನ್ನು ಬಹುಮುಖವಾಗಿ ಶ್ರೀಮಂತಗೊಳಿಸಿದ್ದಾಗಲೀ ಕಂಡುಬರುವುದಿಲ್ಲ. ಕನ್ನಡ ಸಾಹಿತ್ಯದ ಒಂದು ವಿಶೇಷ ಲಕ್ಷಣವೆಂದರೆ, ಅದು ಉದ್ದಕ್ಕೂ ಅನ್ಯ ಸಾಹಿತ್ಯಕ ಪ್ರೇರಣೆ ಪ್ರಭಾವಗಳ ಆಕರ್ಷಣೆ ಹಾಗೂ ಸವಾಲುಗಳ ಹಿನ್ನೆಲೆಯಲ್ಲಿ, ತನ್ನ ಅಭಿವ್ಯಕ್ತಿಯನ್ನು ರೂಪಿಸಿಕೊಂಡರೂ, ಅದು ಎಂದೂ ಅನ್ಯಸಾಹಿತ್ಯ ಪರಂಪರೆಯನ್ನು ಯಥಾವತ್ತಾಗಿ ಅನುಸರಿಸದೆ, ಅನುಕರಿಸದೆ, ಅಂಥ ಪ್ರೇರಣೆ-ಪ್ರಭಾವಗಳನ್ನು ಅರಗಿಸಿಕೊಂಡು ತನ್ನದೇ ಆದ ಪ್ರಾದೇಶಿಕ ವ್ಯಕ್ತಿವಿಶಿಷ್ಟ ಪ್ರಜ್ಞೆಯಲ್ಲಿ ಒಂದು ಬಗೆಯ ಪುನರ್ಭವಗಳನ್ನು ಪಡೆದುಕೊಂಡಿದೆ. ಈ ಮಾತು ಹಳಗನ್ನಡ ಸಾಹಿತ್ಯ ಸಂದರ್ಭದಲ್ಲಿಯೂ ನಿಜ; ಹೊಸಗನ್ನಡ ಸಾಹಿತ್ಯ ಸಂದರ್ಭದಲ್ಲಿಯೂ ನಿಜ. ಆಚಾರ್ಯ ಬಿ.ಎಂ.ಶ್ರೀಕಂಠಯ್ಯನವರು, ಹೊಸಗನ್ನಡ ಸಾಹಿತ್ಯದ ಮೊದಲ ಕಾಲದಲ್ಲಿ ‘ಪುನರುಜ್ಜೀವನ’ವನ್ನು ಕುರಿತು ಮಾಡಿದ ವ್ಯಾಖ್ಯಾನ ಈ ಹೊತ್ತಿಗೆ ಪ್ರಸ್ತುತವಾಗಿದೆ. ಅವರು ಹೇಳುತ್ತಾರೆ: ‘ಪುನರುಜ್ಜೀವನ ಎಂದರೆ ಅನುಸರಣವಲ್ಲ, ಅನುಕರಣವಲ್ಲ….ಹೊಸ ನಿರ್ಮಾಣ, ಮರುಹುಟ್ಟು, ಆಳವಾದ ಸಮನ್ವಯ’ ಎಂದು. ಈ ಮಾತು ಭಾರತೀಯ ಪುನರುಜ್ಜೀವನ ಸಂದರ್ಭದಲ್ಲಿ ರೂಪುಗೊಳ್ಳಬೇಕಾದ ನವೋದಯ ಸಾಹಿತ್ಯವನ್ನು ಕುರಿತು ಅವರು ಹೇಳಿದ್ದಾದರೂ, ಇದು ಕೇವಲ ನವೋದಯ ವ್ಯಾಖ್ಯಾನ ಮಾತ್ರವಾಗಿ ನಿಲ್ಲುವುದಿಲ್ಲ; ಕನ್ನಡದ ಎಲ್ಲ ಸಾಹಿತ್ಯ ಚಳುವಳಿಗಳ ವಿಷಯಕ್ಕೂ ಅನ್ವಯಿಸುವ ಮಾತಾಗಿದೆ. ಯಾಕೆಂದರೆ ಪ್ರತಿಯೊಂದು ಸಾಹಿತ್ಯ ಚಳುವಳಿಯ ಉದ್ದೇಶವೂ ಸಾಹಿತ್ಯಕ್ಕೆ ಒಂದು ಪುನರುಜ್ಜೀವನವನ್ನು ತಂದುಕೊಡುವುದೇ ಆಗಿದೆ. ಈ ಬಗೆಯ ಪುನರುಜ್ಜೀವನವು, ತನಗಿಂತ ಹಿಂದಿನ ತನ್ನದೇ ಆದ ಸಾಹಿತ್ಯ ಪರಂಪರೆಯ ಅಥವಾ ಅನ್ಯ ಸಾಹಿತ್ಯ ಪರಂಪರೆಗಳ ಅನುಕರಣದಿಂದಾಗಲಿ ಅನುಸರಣದಿಂದಾಗಲೀ ಸಂಭವಿಸುವಂಥವಲ್ಲ. ಅದರ ಬದಲು ಹೊರಗಿನ ಪ್ರೇರಣೆ-ಪ್ರಭಾವಗಳನ್ನು, ತನ್ನ ‘ಆಳ’ದಲ್ಲಿ, ವಿವೇಚನೆಗೆ ಒಳಗುಪಡಿಸಿ, ತಾನು ಎಷ್ಟನ್ನು ಪಡೆದುಕೊಳ್ಳಬೇಕು ಮತ್ತು ಎಷ್ಟನ್ನು ನಿರಾಕರಿಸಬೇಕು ಎಂದು ‘ಸಮನ್ವಯ’ ಅಥವಾ ಹೊಂದಾಣಿಕೆಗೆ ಒಳಗುಪಡಿಸಿಕೊಳ್ಳುವುದರ ಮೂಲಕ ಪಡೆಯಬಹುದಾದ ‘ಮರುಹುಟ್ಟು’, ಈ  ‘ಪುನರುಜ್ಜೀವನ’ದ ಲಕ್ಷಣವಾಗಿದೆ. ಈ ದೃಷ್ಟಿಯಿಂದ ಪ್ರತಿಯೊಂದು ಸಾಹಿತ್ಯ ಚಳುವಳಿಯೂ ಅಂದಂದಿನ ಕಾಲಮಾನದ ಅಗತ್ಯವಾಗಿದ್ದು, ಒಂದು ಬರೆಹದ ಸಂಪ್ರದಾಯವು, ಮತ್ತೊಂದು ಬರೆಹದ ಸಂಪ್ರದಾಯಕ್ಕೆ ತೋರುವ ಸೃಜನಾತ್ಮಕ ಪ್ರತಿಕ್ರಿಯೆಯ ಮೂಲಕ ಪಡೆದುಕೊಳ್ಳುವ ‘ಪುನರುಜ್ಜೀವನ’ದ ಪ್ರತಿನಿಧಿಯಾಗಿದೆ. ಮತ್ತು ಈ ಸಾಹಿತ್ಯ ಚಳುವಳಿಗಳು ಸಾಹಿತ್ಯದ ಚಲನಶೀಲತೆಯನ್ನೂ ಹಾಗೂ ನಿರಂತರತೆಯನ್ನೂ ನಿಯಂತ್ರಿಸುವ ವೇಗ ವರ್ಧಕಗಳಂತೆ ಕೆಲಸ ಮಾಡಿವೆ. ಈ ದೃಷ್ಟಿಯಿಂದ, ಆಯಾ ಸಾಹಿತ್ಯ ಚಳುವಳಿಗಳ ಕಾಲದ ಕೋಲಾಹಲಗಳೇನೇ ಇರಲಿ, ಒಂದು ಸಾಹಿತ್ಯ ಚಳುವಳಿ ಮತ್ತೊಂದು ಸಾಹಿತ್ಯ ಚಳುವಳಿಯ ನಿರಾಕರಣವಾಗದೆ, ಅದಕ್ಕೆ ತೋರಿದ ಸೃಜನಾತ್ಮಕ ಹಾಗೂ ವಿಮರ್ಶಾತ್ಮಕ ಪ್ರತಿಕ್ರಿಯೆಯಾಗಿ ಮತ್ತು ಪೂರಕವೆಂಬಂತೆ ವರ್ತಿಸುತ್ತ, ಅಂದಂದು ಆಗಬೇಕಾದ ಬರಣಿಗೆಯ ಬದಲಾವಣೆಗಳಿಗೆ ಕಾರಣವಾಗಿದೆ. ಈ ದೃಷ್ಟಿಯಿಂದ ಹೊಸಗನ್ನಡ ಸಾಹಿತ್ಯ ಚಳುವಳಿಗಳು ತಂದ ಸಾಹಿತ್ಯದ ಹೊಸ ಹುಟ್ಟು ಹಾಗೂ ವೈವಿಧ್ಯತೆಗಳು ಬೆರಗು ಹುಟ್ಟಿಸುವಂತಿವೆ. ಪ್ರತಿಯೊಂದು ಸಾಹಿತ್ಯ ಚಳುವಳಿಯೂ ಕೊನೇ ಪಕ್ಷ, ತೀರಾ ಗಟ್ಟಿಮುಟ್ಟಾದ ಹಲವು ಸಾಹಿತಿಗಳನ್ನು ನಮಗೆ ಕಾಣಿಸಿದೆ; ಹಾಗೆಂದರೆ, ಸಾಹಿತ್ಯ ಚಳುವಳಿಗಳು ಇಂಥ ಸಾಹಿತಿಗಳನ್ನು ಹುಟ್ಟಿಸಿವೆ ಎಂದು ಅರ್ಥವಲ್ಲ; ಒಂದೊಂದು ಸಾಹಿತ್ಯ ಚಳುವಳಿಯ ಸಂದರ್ಭದಲ್ಲಿಯೂ, ಅದರ ಕೇಂದ್ರವಾಗುತ್ತ, ಅದನ್ನು ನಿಯಂತ್ರಿಸುತ್ತ ಗಟ್ಟಿಮುಟ್ಟಾದ ಸಾಹಿತಿಗಳಿದ್ದಾರೆ  ಎಂದು ಅರ್ಥ. ಮತ್ತು ಆಯಾ ಸಾಹಿತ್ಯ ಚಳುವಳಿಗಳ ಸಂದರ್ಭದಲ್ಲಿ ಅದಕ್ಕೆ ‘ಬದ್ಧ’ರಾದ ಲೇಖಕರು ಇರುವಂತೆಯೇ, ಆಯಾ ಚಳುವಳಿಗಳೊಂದಿಗೆ ತಮ್ಮನ್ನು ಸಂಗಡಿಸಿಕೊಳ್ಳದೆ, ಬೇರೆಯ ನಿಲುವಿನಲ್ಲಿ ನಿಂತ ಬರೆಹಗಾರರೂ ಇದ್ದರೆಂಬುದನ್ನು ನಾವು ಗುರುತಿಸಿಕೊಳ್ಳಬೇಕಾಗುತ್ತದೆ. ಮತ್ತು ಇಂಥವರು ಅಂದಂದಿನ ಚಳುವಳಿಗಳ ಪ್ರಭಾವಗಳಿಗೆ ತಟಸ್ಥರಾಗಿದ್ದರೆಂದಾಗಲೀ, ಅನುದಾರರಾಗಿದ್ದರೆಂದಾಗಲೀ ಅರ್ಥವಲ್ಲ;  ಅದರ ಬದಲು ಅಂದಂದಿನ ಚಳುವಳಿಗಳಿಗೆ ತಮ್ಮನ್ನು ನೋಂದಾಯಿಸಿಕೊಳ್ಳದೆ ಹೋದರೂ, ಅಂದಂದಿನ ಚಳುವಳಿಗಳಿಂದಲೂ ತಾವು ಪಡೆಯಬಹುದಾದುದೆಷ್ಟು ಎಂಬ ವಿವೇಚನೆಗೆ ಹೊರತಾಗಿದ್ದರೆಂದು ಹೇಳಲುಬಾರದು. ಯಾಕೆಂದರೆ, ಯಾವುದೇ ಮೌಲಿಕವಾದ ಸಿದ್ಧಾಂತಗಳಿಗೆ ಹಾಗೂ ಬದಲಾವಣೆಗಳಿಗೆ, ಸ್ಪಂದಿಸದೆ ಇರುವ ಬರೆಹಗಾರ ಎಂದೂ ಬೆಳೆಯಲಾರ. ಮತ್ತು ಯಾವುದೇ ಒಂದು ಚಳುವಳಿಯ ಧೋರಣೆಗಳಿಗೆ ಸಂಪೂರ್ಣವಾಗಿ ತನ್ನನ್ನು ಬದ್ಧವಾಗಿಸಿಕೊಂಡ ಬರೆಹಗಾರನೂ ಬೆಳೆಯಲಾರ. ನಿಜವಾದ ಸಾಹಿತ್ಯ ನಿರ್ಮಿತಿ ಯಾವುದೇ ಚಳುವಳಿ ಅಥವಾ ಸಿದ್ಧಾಂತಗಳನ್ನು ಮೀರಿದಾಗಲೇ ಹೆಚ್ಚು ಅರ್ಥಪೂರ್ಣವಾಗುವುದೆಂಬುದು ನನ್ನ ತಿಳಿವಳಿಕೆ. ಮತ್ತು ಕೆಲವು ಲೇಖಕರು ತಾವು ಒಲಿದು ಸಂಗಡಿಸಿಕೊಂಡಿದ್ದ ಚಳುವಳಿಗಳ ಸಂದರ್ಭದಲ್ಲಿ ಬರೆದ ಕೃತಿಗಳಿಗಿಂತ, ಹೆಚ್ಚು ಅರ್ಥಪೂರ್ಣವಾದ ಕೃತಿಗಳನ್ನು, ಅದರಾಚೆಯ ಕಾಲಮಾನಗಳಲ್ಲಿ ಬರೆದಿದ್ದಾರೆ ಎಂಬ ಸಂಗತಿಯನ್ನೂ ನೆನಪಿರಿಸಿಕೊಳ್ಳುವುದು ಒಳ್ಳೆಯದು. ಒಂದರ್ಥದಲ್ಲಿ ಈಗ ಎಲ್ಲ ಸಾಹಿತ್ಯ ಚಳುವಳಿಗಳೂ ನಿಲುಗಡೆಗೆ ಬಂದಿವೆ. ಈ ಸಂದರ್ಭದಲ್ಲಿ, ಇದುವರೆಗಿನ ಸಾಹಿತ್ಯ ಚಳುವಳಿಗಳನ್ನು, ಸಾಹಿತ್ಯದ ನಿರಂತರತೆಯ ಹಲವು ಹಂತಗಳೆಂದು ಮಾತ್ರ ಗುರುತಿಸಬೇಕಾಗಿದೆ. ಹಾಗೂ, ನವೋದಯ, ಪ್ರಗತಿಶೀಲ, ನವ್ಯ, ದಲಿತ-ಬಂಡಾಯ ಇತ್ಯಾದಿಗಳು, ಸಾಹಿತ್ಯದ ಅಧ್ಯಯನದ ಅನುಕೂಲಕ್ಕಾಗಿ ಮಾಡಿಕೊಂಡ ಚಾರಿತ್ರಿಕ ವಿಭಾಗ ಕ್ರಮಗಳೆಂದು ಪರಿಗಣಿತವಾಗಬೇಕಾಗಿದೆ. ಇನ್ನೂ ಸ್ವಲ್ಪಕಾಲ ಕಳೆದ ನಂತರ, ಯಾವುದೇ ಬರೆಹಗಾರ, ಆತ ಈ ಯಾವ ಚಳುವಳಿಗಳ ಸಂದರ್ಭದಲ್ಲಿ ಬರೆದ ಅನ್ನುವುದು ಅಷ್ಟು ಮುಖ್ಯವಾಗದೆ, ಒಟ್ಟಾರೆಯಾಗಿ ಕನ್ನಡ ಸಾಹಿತ್ಯ ಸಂದರ್ಭದಲ್ಲಿ ಅವನ ಕೊಡುಗೆಯೇನು ಹಾಗೂ ಪ್ರಸ್ತುತತೆಯೇನು ಎನ್ನುವುದೆ ಮುಖ್ಯವಾಗುತ್ತದೆ. ಈಗಂತೂ ನಾವು ಎಲ್ಲ ಚಳುವಳಿಗಳೂ ನಿಲುಗಡೆಗೆ ಬಂದ ಒಂದು ‘ಬಿಡುವಿನ’ ಸ್ಥಿತಿಯಲ್ಲಿದ್ದೇವೆ. ಕಳೆದ ಒಂದು ದಶಕದಲ್ಲಿ ಪ್ರಕರ್ಷಗೊಂಡ ದಲಿತ-ಬಂಡಾಯ ಕೂಡಾ, ತನ್ನ ಮುನ್ನಿನ ರಭಸವನ್ನು ತಗ್ಗಿಸಿಕೊಂಡು ಒಂದು ಬಗೆಯ ಪರಿಭಾವನೆಯ ಹದಕ್ಕೆ ಬಂದಿದೆ. ಹೀಗಾಗಿ, ಹೊಸಗನ್ನಡದ ಎಲ್ಲ ಚಳುವಳಿಗಳ ನಿಲುಗಡೆಯ ಈ ಸಂದರ್ಭ ಸಾಹಿತ್ಯದ ಪುನರವಲೋಕನ ಹಾಗೂ ಮರುವಿಮರ್ಶೆಗೆ ಮತ್ತು ಅಂತರ್ನಿರೀಕ್ಷಣೆಗಳಿಗೆ ಸರಿಯಾದ ಕಾಲವಾಗಿದೆ. ಇದುವರೆಗಿನ ಎಲ್ಲ ಸಾಹಿತ್ಯ ಚಳುವಳಿಗಳನ್ನೂ ಅವುಗಳ ಕೊಡುಗೆಗಳನ್ನೂ ಒಂದು ಬಗೆಯ ಸಮಾಧಾನಚಿತ್ತದಿಂದ ಸಮಗ್ರವಾದ ಪುನರ್‌ವಿಮರ್ಶೆಗೆ ಗುರಿಪಡಿಸುವುದು ಇಂದಿನ ಅಗತ್ಯವಾಗಿದೆ. ಕನ್ನಡ ಸಾಹಿತ್ಯದ ಪ್ರಸ್ತುತ ಸಂದರ್ಭವು, ಕಳೆದ ಒಂದು ದಶಕದಲ್ಲಿ ಮುಖ್ಯಧ್ವನಿಯಾದ ದಲಿತ-ಬಂಡಾಯ ಚಳುವಳಿಯ ಮುಂದುವರಿದ ರೂಪವಾಗಿದೆ. ಈ ಹಂತದಲ್ಲಿ ಕನ್ನಡದ ಹಿಂದಿನ ಹಲವು ಚಳುವಳಿಗಳ ಮೂಲಕ ಹಾದು ಬಂದವರೂ, ತಮ್ಮ ಚಳುವಳಿಗಳ ಗಡಿಗಳನ್ನು ದಾಟಿ ನಿಂತು ಹೊಸ ಪೀಳಿಗೆಯ ಲೇಖಕರ ಜತೆಜತೆಗೆ ಸಾಹಿತ್ಯ ನಿರ್ಮಿತಿಯನ್ನು ಮುಂದುವರಿಸುತ್ತಿದ್ದಾರೆ. ಕಾವ್ಯದ ಮೂಲಮಾನದಲ್ಲಿ ಈ ಸಂದರ್ಭದ ಸಾಹಿತ್ಯ ನಿರ್ಮಿತಿಯ ಲಕ್ಷಣಗಳನ್ನು ಗುರುತಿಸುವುದಾದರೆ, ಇವತ್ತಿನ ಕಾವ್ಯ ಹಿಂದಿನ ಸಾಹಿತ್ಯ ಚಳುವಳಿಗಳ ಸಂದರ್ಭದಲ್ಲಿಯಂತೆ, ಅನ್ಯದೇಶೀಯ ಪ್ರೇರಣೆ ಹಾಗೂ ಮಾದರಿಗಳನ್ನು ಅಷ್ಟಾಗಿ ಅವಲಂಬಿಸದೆ, ತಾನು ನಿಂತ ನೆಲದ ಚರಿತ್ರೆ, ಪುರಾಣ ಹಾಗೂ ವಾಸ್ತವಗಳೊಳಗೆ ಬೇರು ಚಾಚುತ್ತ ತನ್ನ ಪರಿಸರದಿಂದಲೇ ತನ್ನ ಸತ್ವವನ್ನು  ಪಡೆದುಕೊಂಡು ಅರಳುವ  ಪ್ರತಿಕ್ರಿಯೆಯಲ್ಲಿ ತೊಡಗಿದೆ. ಬದುಕಿನ ಸರಳ ಸಾಧಾರಣ ಸಂಗತಿಗಳಿಂದ ಸ್ಫುರಿಸುವ ಹೊಸ ಅರ್ಥವಂತಿಕೆಯ ಆಯಾಮಗಳನ್ನು ಕವಿಯ ಕಣ್ಣು ಗುರುತಿಸುತ್ತಿದೆ. ಚರಿತ್ರೆಯ ಅರಿವಿನಿಂದ ಹುಟ್ಟುವ ವಿವೇಕ, ಚರಿತ್ರೆ ಹಾಗೂ ಪುರಾಣಗಳ ಮೂಲಕ ವರ್ತಮಾನವನ್ನು ವ್ಯಾಖ್ಯಾನಿಸುವ ಪ್ರಯತ್ನಗಳು ಹಾಗೂ ಅನುಭಾವಿಕ ಅನ್ವೇಷಕ ಪ್ರವೃತ್ತಿಗಳು ಈ ಹೊತ್ತಿನ ಕಾವ್ಯದ ಪ್ರಧಾನ ಲಕ್ಷಣಗಳಾಗಿವೆ. ಜತೆಗೆ ದಲಿತ-ಬಂಡಾಯ ಸಾಹಿತ್ಯ ಚಳುವಳಿಯ ಸಂದರ್ಭದಲ್ಲಿ ಕಟ್ಟಿಕೊಂಡ ಸಾಮಾಜಿಕ-ಸಾಂಸ್ಕೃತಿಕ ಕಾಳಜಿಗಳು ಸಾಹಿತ್ಯದ ಮರುವ್ಯಾಖ್ಯಾನಕ್ಕೆ ಬೇರೊಂದು ನೆಲೆಯನ್ನು ಒದಗಿಸಿವೆ. ವ್ಯಕ್ತಿ ಕೇಂದ್ರಿತ ಪ್ರಜ್ಞೆಯ ಮೂಲಕ ಮೂಡಿ ಬರುತ್ತಿದ್ದ ಸಾಹಿತ್ಯ ಕೃತಿಗಳ ಸ್ಥಾನವನ್ನು, ಒಟ್ಟು ಸಮುದಾಯದ ಅನುಭವಗಳನ್ನು ತಮ್ಮ ಕೇಂದ್ರದಲ್ಲಿ ಒಳಕೊಳ್ಳುವಂಥ ಕೃತಿಗಳು ಪಡೆದುಕೊಳ್ಳುತ್ತಿವೆ. ಇವೆಲ್ಲಕ್ಕಿಂತ ಮುಖ್ಯವಾಗಿ ಗ್ರಾಮೀಣ ಭಾರತದ ವಿವಿಧ ಸ್ತರಗಳ ಸಮೃದ್ಧ ಅನುಭವವು ಸಾಹಿತ್ಯವನ್ನು ಪ್ರವೇಶಿಸಿ ತನ್ನನ್ನು ಅಭಿವ್ಯಕ್ತಿಸಿಕೊಂಡ ಕ್ರಮವು ವಿಶೇಷ ರೀತಿಯಾದಾಗಿದೆ. ಮತ್ತು ಶೋಷಕ ಶಕ್ತಿಗಳನ್ನು ನಿಚ್ಚಳವಾಗಿ ಗುರುತಿಸಿ, ಪ್ರತಿಭಟನೆಯನ್ನೆ ಒಂದು ಮೌಲ್ಯವನ್ನಾಗಿ ಮಾಡಿಕೊಂಡು ವಾಸ್ತವತೆಗಳನ್ನು ಲೇಖಕನು ಎದುರಿಸುವ ರೀತಿಯು ಗಮನಿಸತಕ್ಕದ್ದಾಗಿದೆ. ಅಭಿವ್ಯಕ್ತಿಯೊಳಗಣ ಸಂಕೀರ್ಣತೆ, ಅಸ್ಪಷ್ಟತೆಗಳು ಹಿಂದೆ ಬಿದ್ದು, ಸಾಹಿತ್ಯವು ಸಂವಹನಶೀಲತೆಯ ಕಡೆ ಹೆಚ್ಚು ಒತ್ತನ್ನು ಕೊಡತೊಡಗಿದೆ. ನವೋದಯ ಕಾವ್ಯ ಮತ್ತು ವಾಸ್ತವತಾವಾದೀ ಕಥಾಸಾಹಿತ್ಯದಿಂದ ಈ ಮೊದಲೇ ಪ್ರತಿಪಾದಿತವಾದ ಹಲವು ಪ್ರವೃತ್ತಿಗಳು ಮತ್ತೆ ಪ್ರಧಾನವಾಗಿ ಕಾಣಿಸಿಕೊಳ್ಳುತ್ತಿವೆ. ಇತ್ತೀಚಿನ ಸಾಹಿತ್ಯದ ಮತ್ತೊಂದು ವಿಶೇಷವೆಂದರೆ, ಬಹುಸಂಖ್ಯೆಯ ಮಹಿಳೆಯರು ಮೊದಲಿಗಿಂತ ಬೇರೆಯ  ರೀತಿಯಲ್ಲಿ ಬರೆಯತೊಡಗಿದ್ದು ಮತ್ತು ಕರ್ನಾಟಕದ ಉಪಸಂಸ್ಕೃತಿಯಾದ ಮುಸ್ಲಿಂ ಜನಾಂಗದ ಸಂವೇದನೆಗಳು, ಸಾಹಿತ್ಯವಾಗಿ ವಿಶಿಷ್ಟಾಭಿವ್ಯಕ್ತಿ ಪಡೆದುಕೊಂಡದ್ದು. ಕಳೆದ ಒಂದೂವರೆ ದಶಕದ ಕಾಲಮಾನದಲ್ಲಿ ಇಪ್ಪತ್ತಕ್ಕೂ ಹೆಚ್ಚು ಸಂಖ್ಯೆಯ ಕವಯಿತ್ರಿಯರು ಕಾಣಿಸಿಕೊಂಡಿದ್ದಾರೆ ಎನ್ನುವುದು ಸಾಮಾನ್ಯವಾದ ಸಂಗತಿಯೇನಲ್ಲ, ಮತ್ತು ಅವರಲ್ಲಿ ಕೆಲವರು ಈಗಾಗಲೆ ಮೌಲಿಕವಾದ ಕವಿತೆಗಳನ್ನು ಬರೆದಿದ್ದಾರೆ ಎನ್ನುವುದು ಸಂತೋಷದ ವಿಷಯವಾಗಿದೆ. ಜತೆಗೆ ಮುಸ್ಲಿಂ ಬರೆಹಗಾರರು, ಭಾರತೀಯ ಸಾಮಾಜಿಕ ಸಂದರ್ಭದಲ್ಲಿ ತಾವು ಎದುರಿಸಿ ಸಾಂಸ್ಕೃತಿಕ ಸಂಘರ್ಷಗಳನ್ನೂ, ತಮ್ಮ ಸಾಮಾಜಿಕ-ಧಾರ್ಮಿಕ ಕಟ್ಟುಪಾಡುಗಳ ನಡುವಣ ಅವರದೇ ಆದ ವಾಸ್ತವಗಳನ್ನೂ ಮೊಟ್ಟಮೊದಲಿಗೆ ತುಂಬ ಧೈರ್ಯದಿಂದ ಅಭಿವ್ಯಕ್ತಿಸಿರುವ ಕ್ರಮ ಕನ್ನಡಕ್ಕೆ ಹೊಸದಾಗಿದೆ. ಈ ಕುರಿತು ಕೆಲವು ಕತೆ ಕಾದಂಬರಿಗಳು, ಇದುವರೆಗೆ ನಾವು ಕಾಣದ ಹಲವು ವಾಸ್ತವಗಳನ್ನು ಪರಿಚಯಮಾಡಿಕೊಡುತ್ತವೆ ಎಂಬುದು ಮಾತ್ರವಲ್ಲ, ಅವು ಅವರ ಬದುಕಿನ ವಿಮರ್ಶೆಯೂ ಆಗಿವೆ. ಕವಿಗಳಿಗಿಂತ ಕಥಾ ಸಾಹಿತ್ಯದಲ್ಲಿ ಮುಸ್ಲಿಂ ಅನುಭವ ಜಗತ್ತು ತುಂಬ ದಟ್ಟವಾದ ವಿವರಗಳೊಂದಿಗೆ ಕಾಣಿಸಿಕೊಂಡಿದೆ. ಅದರಲ್ಲಿಯೂ ಮಹಿಳೆಯರ ಬರೆಹ ಪುರುಷರ ಬರೆಹಕ್ಕಿಂತ ಹೆಚ್ಚು ತೀವ್ರ ಸಂವೇದನೆಗಳಿಗೆ ಅಭಿವ್ಯಕ್ತಿಯಾಗಿದೆ. ಈ ಎಲ್ಲವನ್ನೂ ಯಾಕೆ ಪ್ರಸ್ತಾಪಿಸಿದೆನೆಂದರೆ, ಅಪರಿಚಿತವಾದ ಅನೇಕ ಅನುಭವ ಪ್ರಪಂಚಗಳ ಅನಾವರಣದಿಂದ ಸಾಹಿತ್ಯದ ಸೀಮಾರೇಖೆಗಳು ಹೇಗೆ ವಿಸ್ತರಿಸುತ್ತಿವೆ ಎಂಬುದನ್ನು ಗುರುತಿಸುವುದರ ಜತೆಗೆ, ಸಂಸ್ಕೃತಿಯ ಬಹುಮುಖತೆಯನ್ನು ನಾವು ಒಪ್ಪಿಕೊಳ್ಳಬೇಕಾಗಿದೆ, ಎನ್ನುವುದನ್ನು ಸೂಚಿಸುವುದಕ್ಕೆ. ಸಾಹಿತ್ಯವು ನಿಜವಾಗಿಯೂ ಸಮೃದ್ಧವಾಗುವುದು, ಸಮಾಜದ ವಿವಿಧ ಸ್ತರದ ಅನುಭವಗಳನ್ನು ಆಯಾ ಸ್ತರಗಳಿಂದ ಬಂದ ಸೃಜನಶೀಲ ಲೇಖಕರು ಅಭಿವ್ಯಕ್ತಪಡಿಸಿದಾಗ ಮಾತ್ರವೇ. ಅಂಥ ಘಟನೆಗಳು ಪ್ರಸ್ತುತ ಸಾಹಿತ್ಯ ಸಂದರ್ಭದಲ್ಲಿ ಸಂಭವಿಸುತ್ತಿವೆ.

ಇಷ್ಟು ಸಮೃದ್ಧವೂ ವೈವಿಧ್ಯಮಯವೂ ಆಗಿ ರೂಪುಗೊಂಡಿರುವ ನಮ್ಮ ಸಾಹಿತ್ಯಕ್ಕೆ, ಇತ್ತೀಚಿನ ಕೆಲವು ದಶಕಗಳು, ಪ್ರಶಸ್ತಿಗಳ ಸುಗ್ಗಿಯ ಕಾಲ. ಈ ಪ್ರಶಸ್ತಿಗಳು ಕೇವಲ ಸಾಹಿತ್ಯಕ್ಕಷ್ಟೇ ಸೀಮಿತವಾಗಿಲ್ಲ. ಐದು ಜ್ಞಾನಪೀಠ ಪ್ರಶಸ್ತಿಗಳು, ಒಂದು ಕಬೀರ್ ಸನ್ಮಾನ, ಭಿಲ್ವಾರ ಪ್ರಶಸ್ತಿ, ಮೂರ್ತಿದೇವಿ ಪ್ರಶಸ್ತಿ, ತುಳಸೀ ಸಮ್ಮಾನ, ತಾನ್‌ಸೇನ್ ಪ್ರಶಸ್ತಿ ಮತ್ತು ಅಂತರ್‌ರಾಷ್ಟ್ರೀಯ ಮಟ್ಟದ ಮ್ಯಾಗ್‌ಸೆಸೆ ಪ್ರಶಸ್ತಿ, ಹೀಗೆ ಇನ್ನೂ ಹಲವು ಪ್ರಶಸ್ತಿಗಳು ಕನ್ನಡಕ್ಕೆ ಬಂದಿವೆ. ಸಾಹಿತ್ಯಕ್ಕೆ ಸಂಬಂಧಪಟ್ಟಂತೆ ಕನ್ನಡಕ್ಕೆ ಬಂದಿರುವಷ್ಟು ಮಹತ್ವದ ರಾಷ್ಟ್ರೀಯ ಪ್ರಶಸ್ತಿಗಳು ಮತ್ತೆ ಭಾರತದ ಯಾವ ಭಾಷಾ ಸಾಹಿತ್ಯಕ್ಕೂ ಬಂದಿಲ್ಲ. ಈ ಕಾರಣದಿಂದ ಇಡೀ ಭಾರತದ ಗಮನ ಮೊಟ್ಟಮೊದಲಿಗೆ ಕನ್ನಡದ ಕಡೆ ತಿರುಗಿದೆ.ಕಳೆದ ನಾಲ್ಕು ದಶಕಗಳ ಕಾಲಮಾನದಲ್ಲಿ ಐದು ಮಹಾಕಾವ್ಯಗಳು ನಿರ್ಮಿತಿಯಾಗಿ ಕನ್ನಡದ ಸೃಜನಶೀಲ ಮಹತ್ವಾಕಾಂಕ್ಷೆಗೆ ಸಾಕ್ಷಿಯಾಗಿವೆ. ಕನ್ನಡ ಸಾಹಿತ್ಯ, ಇಡೀ ಭಾರತೀಯ ಸಾಹಿತ್ಯ ಸಂದರ್ಭದಲ್ಲಿ, ಹಲವು ವಿಚಾರಗಳಲ್ಲಿ ಮುಂಚೂಣಿಯಲ್ಲಿದೆ. ಜಗತ್ತಿನ ಅತ್ಯುನ್ನತ ಸಾಹಿತ್ಯ ಪ್ರಶಸ್ತಿಗೆ ಅರ್ಹರಾದ ಹಲವು ಎತ್ತರ ಸಾಹಿತಿಗಳು ನಮ್ಮಲ್ಲಿದ್ದಾರೆ. ಇದು ಕನ್ನಡವು ಹೆಮ್ಮೆಪಟ್ಟುಕೊಳ್ಳಬಹುದಾದ ಸಂಗತಿಯೇ.

ಆದರೆ, ಈ ನಮ್ಮ ಸಾಹಿತ್ಯ ನಿಜವಾಗಿಯೂ ನಮ್ಮ ಜನಕ್ಕೆ ತಲುಪಿದೆಯೆ? ಕೇವಲ ಪ್ರಶಸ್ತಿಗಳು ಬಂದುವೆಂಬ ಕಾರಣಕ್ಕೆ ಸಂಭ್ರಮಗೊಳ್ಳುವ ಉತ್ಸಾಹ,ಈ ಸಾಹಿತ್ಯ ನಿರ್ಮಿತಿಯೊಂದಿಗೆ ಅರ್ಥಪೂರ್ಣವಾದ ಸಂವಾದವನ್ನು ಸ್ಥಾಪಿಸಿಕೊಳ್ಳುವ ಸಹೃದಯಾಸಕ್ತಿಯಾಗಿ ಪ್ರಕಟವಾಗುತ್ತಿದೆಯೆ? ಹಾಗಾಗದಿದ್ದರೆ ಅದಕ್ಕೆ ಕಾರಣಗಳೇನು ಎಂಬುದನ್ನು ಕುರಿತು ಯೋಚನೆ ಮಾಡಬೇಕಾಗಿದೆ.

ಮೂಲತಃ ನಮ್ಮದು ಅನಕ್ಷರಸ್ಥರ ದೇಶ. ನಮ್ಮ ದೇಶ ಸ್ವತಂತ್ರವಾದಾಗ ಶೇಕಡಾ ಹನ್ನೆರಡರಷ್ಟಿದ್ದ ಸಾಕ್ಷರತೆಯ ಪ್ರಮಾಣವು, ನಾಲ್ಕು ದಶಕಗಳ ನಂತರ ಈಗ ಶೇಕಡಾ ಐವತ್ತನ್ನೂ ದಾಟಿರಲಾರದು. ಇದು ನಮ್ಮ ದೇಶದ ಸಾಕ್ಷರತೆಯ ಪ್ರಗತಿ! ೧೯೭೮ರಷ್ಟು ಹಿಂದೆಯೆ ಪ್ರಾರಂಭವಾದ ರಾಷ್ಟ್ರೀಯ ಸಾಕ್ಷರತಾ ಆಂದೋಲನ ಇಷ್ಟು ವರ್ಷಗಳ ಕಾಲ ಕುಂಟುತ್ತ ಸಾಗಿದ್ದು, ಈಗ ಹೊಸಚಾಲನೆಯನ್ನು ಪಡೆದುಕೊಂಡಿದೆ. ಸಾಕ್ಷರರಾದವರು, ಕೇವಲ ಹೆಬ್ಬೆಟ್ಟು ಒತ್ತುವ ಸ್ಥಿತಿಯಿಂದ ರುಜುಮಾಡುವ  ಹಂತಕ್ಕೆ ತಲುಪುವುದಷ್ಟೆ ಈ ಸಾಕ್ಷರತಾ ಆಂದೋಲನದ ಪರಮ ಪ್ರಯೋಜನವೆಂಬಂತೆ ಇದು ಮುಕ್ತಾಯವಾಗುವುದಾದರೆ ಏನು ಪ್ರಯೋಜನ? ಇನ್ನು ಐದು ವರ್ಷಗಳಲ್ಲಿ ನಮ್ಮ ದೇಶದ ನೂರಕ್ಕೆ ತೊಂಬತ್ತರಷ್ಟು ಸಾಕ್ಷರರನ್ನು ಹೊಂದುವ ನಿರೀಕ್ಷೆ ಇದೆ ಎಂದು ಸರ್ಕಾರದ ಮೂಲಗಳು ಹೇಳುತ್ತಿವೆ. ಆದರೆ, ಹೀಗೆ ಅಕ್ಷರ ಕಲಿತವರು, ಅದರಿಂದ ಹುಟ್ಟಿದ ಹೊಸ ಆಸಕ್ತಿಗಳನ್ನು ಮುಂದುವರಿಸಿಕೊಂಡು ಹೋಗುವಂಥ, ಹಾಗೂ ಅವರನ್ನು ವಿದ್ಯಾವಂತರನ್ನಾಗಿ ಮಾಡುವಂತಹ ಕ್ರಮಗಳನ್ನು ಈ ಯೋಜನೆ ಒಳಕೊಂಡಿದೆಯೆ? ನಮ್ಮ ಜನ ನಿಜವಾದ ಅರ್ಥದಲ್ಲಿ ಅಕ್ಷರಸ್ಥರೂ ವಿದ್ಯಾವಂತರೂ ಆಗುವವರೆಗೆ, ಅವರಿಗೆ ನಮ್ಮ ಸಾಹಿತ್ಯದಿಂದ ಆಗಬೇಕಾದುದೇನಿದೆ? ಅವರ ಪಾಲಿಗೆ ಈ ಸಾಹಿತ್ಯ ಇದ್ದೂ ಇಲ್ಲದಂತೆಯೆ ಸರಿ.

ಇನ್ನು ಅಕ್ಷರ ಶಿಕ್ಷಣದ ಇನ್ನೊಂದು ಮಜಲಾದ ಪ್ರಾಥಮಿಕ ಶಾಲಾ ಶಿಕ್ಷಣದ ಅವಸ್ಥೆಯಂತೂ ಹೇಳತೀರದು. ಕಾನ್ವೆಂಟ್ ಸಂಸ್ಕೃತಿಯ ಕೆಲವು ದೊಡ್ಡ ಊರುಗಳನ್ನು ಹೊರತುಪಡಿಸಿದರೆ, ಬಹು ಸಂಖ್ಯೆಯ ಕನ್ನಡ ಪ್ರಾಥಮಿಕ ಶಾಲೆಗಳಿರುವುದು ಗ್ರಾಮಾಂತರ ಪರಿಸರದಲ್ಲಿ. ಅಲ್ಲಿರುವ ಬಹುಸಂಖ್ಯಾತ ಬಡಜನರಿಗೆ, ಎಷ್ಟೋ ವೇಳೆ ತಮ್ಮ ಮಕ್ಕಳನ್ನು ಶಾಲೆಗೆ ಕಳುಹಿಸುವುದಕ್ಕಿಂತ ತಮ್ಮ ಜತೆ ದುಡಿಮೆಗೆ ತೊಡಗಿಸುವುದರಲ್ಲಿಯೆ ಹೆಚ್ಚು ಆಸಕ್ತಿ. ಒಂದು ವೇಳೆ, ನಿಯಮಕ್ಕೆ ಕಟ್ಟುಬಿದ್ದು ತಂದೆ ತಾಯಂದಿರು ಅವುಗಳನ್ನು ಶಾಲೆಗೆ ಕಳುಹಿಸಿದರೂ, ಗ್ರಾಮಾಂತರ ಪರಿಸರಗಳಲ್ಲಿ ಒಳ್ಳೆಯ ಶಾಲೆಗಳಿಲ್ಲ; ಶಾಲೆಗಳಿಗೆ ಸರಿಯಾದ ಕಟ್ಟಡ ಮತ್ತಿತರ ಅನುಕೂಲಗಳಿಲ್ಲ; ಅನುಕೂಲಗಳಿದ್ದರೂ ಅಧ್ಯಾಪಕರುಗಳಿಲ್ಲ. ಹೀಗಿದೆ, ಕನ್ನಡದ ಪ್ರಾಥಮಿಕ ಶಾಲೆಗಳ ಸ್ಥಿತಿ. ಇನ್ನು ಇತ್ತೀಚೆಗಂತೂ ಸರ್ಕಾರದ  ಅದೂರದೃಷ್ಟಿಯ ಪರಿಣಾಮದಿಂದ ಹಳ್ಳಿಹಳ್ಳಿಗಳಲ್ಲಿ ಇಂಗ್ಲಿಷ್ ಮಾಧ್ಯಮದ ಶಾಲೆಗಳನ್ನು ತೆರೆಯುವ ಅವಕಾಶಗಳನ್ನು ವಾಪಾರೀಮನೋಧರ್ಮದ ಖಾಸಗಿ ಸಂಸ್ಥೆಯವರಿಗೆ ವಹಿಸಿಕೊಟ್ಟು, ಬಹುಸಂಖ್ಯಾತ ಮಕ್ಕಳು ಕಲಿಯುತ್ತಿದ್ದ ಕನ್ನಡಕ್ಕೆ ದೊಡ್ಡ ವಿಪತ್ತು ಪ್ರಾಪ್ತವಾಗಿದೆ. ಇಂಗ್ಲಿಷ್ ಮಾಧ್ಯಮದ ಶಾಲೆಗಳಿಗೆ ಅನುಮತಿ ಕೊಡಬೇಕೆ ಬೇಡವೆ, ಎಂಬ ವಿಚಾರದಲ್ಲಿ ನಿರ್ಧಾರ ತೆಗೆದುಕೊಳ್ಳದ ಸರ್ಕಾರ, ಅದಕ್ಕೊಂದು ಸಮಿತಿಯನ್ನು ರಚಿಸಿ, ಅದರ ಶಿಫಾರಸುಗಳನ್ನು ಜಾರಿಗೆ ತರುವುದರಲ್ಲಿ ವಿಳಂಬ ಮಾಡುತ್ತಿರುವುದು ಆಶ್ಚರ್ಯದ ಹಾಗೂ ವಿಷಾದದ ಸಂಗತಿಯಾಗಿದೆ. ನಮಗೆ ಬೇಕಾದುದು ಸಮಾನ ಸೌಲಭ್ಯವುಳ್ಳ ಶಾಲೆಗಳ, ಏಕರೂಪದ ಶಿಕ್ಷಣ. ಅದರ ಬದಲು ಇಂಗ್ಲಿಷ್ ಮಾಧ್ಯಮದ ಶಾಲೆಗಳು, ಕನ್ನಡ ಮಾಧ್ಯಮದ ಶಾಲೆಗಳು ಎಂದು ಎರಡನ್ನೂ ಇರಿಸಿಕೊಂಡು ಸಮಾಜವನ್ನು ಶಿಕ್ಷಣಮಾಧ್ಯಮದ ಮೂಲಕ ವಿಭಜಿಸುವುದು ಉಚಿತವಾದ ಕ್ರಮವಲ್ಲ. ಭಾಷೆ ಕೂಡಾ ಜಾತಿಗಳ ಹಾಗೆ ವರ್ಗಭೇದಗಳನ್ನು ಉಳಿಸಿಕೊಳ್ಳುವ ತಂತ್ರವಾಗುತ್ತಿರುವುದು ನಮ್ಮ ಶಿಕ್ಷಣ ಕ್ರಮದೊಳಗಿನ ಅಪಾಯಗಳಲ್ಲಿ ಒಂದಾಗಿದೆ.

ಇನ್ನು ನಮ್ಮ ಮಕ್ಕಳನ್ನು ನೋಡಿ. ಅವೇನು ಶಾಲೆಗೆ ಹೋಗುತ್ತಿದ್ದಾವೋ, ಪರ್ವತಾರೋಹಣಕ್ಕೆ ಹೊರಟಿವೆಯೋ? ಬೆನ್ನ ಮೇಲೆ ಹೊರಲಾಗದ ಹೊರೆಹೊತ್ತು ಸುಸ್ತಾಗುವ ಈ ಮಕ್ಕಳನ್ನು ನೋಡಿದರೆ ಯಾರಿಗಾದರೂ ಅಯ್ಯೋ ಅನ್ನಿಸೀತು. ಜಗತ್ತಿನಲ್ಲಿರುವ ಸಮಸ್ತಜ್ಞಾನವನ್ನು ಈ ಮಕ್ಕಳಿಗೆ ಅರೆದು ಕುಡಿಸಲೇಬೇಕೆಂಬ ಈ ಮಹತ್ವಾಕಾಂಕ್ಷೆಗೆ ಏನು ಹೇಳೋಣ? ಹಿಂದಿಗಿಂತ ಜಗತ್ತು ಬಹಳ ಮುಂದುವರಿದಿದೆ. ಇವತ್ತಿನ ಶಿಕ್ಷಣದ ಅಗತ್ಯಗಳೇ ಬೇರೆ ಎಂದು ಯಾರಾದರೂ ವಾದಿಸಬಹುದು. ದಿನವೆಲ್ಲ ಪುಸ್ತಕದ ಹೊರೆಹೊತ್ತು, ಸಂಜೆಗೆ ಮರುದಿನದ ಹೋಂವರ್ಕಿನ ಚಿಂತೆಯನ್ನು ತಲೆಗೆ ತುಂಬಿಕೊಂಡ ಈ ಮಗುವಿಗೆ ಒಂದಿಷ್ಟಾದರೂ ವಿರಾಮ ಬೇಡವೇ? ನಮ್ಮ ಮಕ್ಕಳು ಆಕಾಶವನ್ನು ನೋಡುವುದು ಯಾವಾಗ? ಅರಳಿದ ಹೂವುಗಳನ್ನು ನೋಡುವುದು ಯಾವಾಗ? ಹರಿಯುವ ನೀರನ್ನು ನೋಡುವುದು ಯಾವಾಗ? ‘Less Luggage more comfort’ ಎನ್ನುವ ಪ್ರಯಾಣದ ಸೂತ್ರ ಇಲ್ಲಿಗೇಕೆ ಅನ್ವಯವಾಗುವುದಿಲ್ಲ?

ಇನ್ನು ನಮ್ಮ ಶಾಲೆಯ ಪಠ್ಯಪುಸ್ತಕಗಳನ್ನು ನೋಡಿದರೆ ಇನ್ನೂ ನಿರಾಸೆ ಕವಿಯುತ್ತದೆ. ಒಂದು ಸಲ ಗೊತ್ತುಮಾಡಿದ ಪುಸ್ತಕಗಳು ಅನೇಕ ವರ್ಷಗಳ ಕಾಲ ಬದಲಾಗುವುದಿಲ್ಲ; ನವೀಕರಣಗೊಳ್ಳುವುದಿಲ್ಲ. ನನ್ನ ಗಮನಕ್ಕೆ ಬಂದಂತೆ ಪ್ರಸ್ತುತ ಪ್ರಾಥಮಿಕ ಹಾಗೂ ಪ್ರೌಢಶಾಲೆಯ ಹಂತಗಳ ಪಠ್ಯಗಳು ಬದಲಾಗದೆ ಬಹುಶಃ ಹತ್ತು ವರ್ಷಕ್ಕೂ ಹೆಚ್ಚು ಕಾಲವಾಗಿರಬೇಕು. ಅವುಗಳಲ್ಲಿರುವ ಕನ್ನಡ ಭಾಷೆ-ಸಾಹಿತ್ಯಕ್ಕೆ ಸಂಬಂಧಪಟ್ಟ ಪಾಠಗಳಂತೂ ನಿಜವಾಗಿಯೂ ಕನ್ನಡದ ಬಗ್ಗೆ ಪ್ರೀತಿ ಹುಟ್ಟಿಸುವಂತಿವೆ ಎಂದೇನೂ ನನಗೆ ತೋರುವುದಿಲ್ಲ. ಇಂಥ ಕಳಪೆ ಪಠ್ಯವಿಷಯಗಳಿಂದ, ಸಾಹಿತ್ಯದ ಬಗೆಗಾಗಲೀ, ಸಂಸ್ಕೃತಿಯ ಬಗೆಗಾಗಲೀ ಅಭಿಮಾನ ಹುಟ್ಟೀತು ಹೇಗೆ? ಪ್ರಾಥಮಿಕ ಶಾಲೆಗಳಿಂದ ಹಿಡಿದು ಸ್ನಾತಕೋತ್ತರ ಹಂತದವರೆಗೆ ಕನ್ನಡ ಪಠ್ಯಕ್ರಮ ಮತ್ತು ವಿಧಾನಗಳ ಮರುಪರಿಶೀಲನೆ, ಹಾಗೂ ಹೊಸಸೃಷ್ಟಿಯ ಪಠ್ಯಗಳ ರಚನೆಗೆ, ಹೊಸದಾಗಿ ಪ್ರಾರಂಭವಾಗಿರುವ ಕನ್ನಡ ವಿಶ್ವವಿದ್ಯಾಲಯವು ಯೋಜನೆಯೊಂದನ್ನು ಹಾಕಿಕೊಳ್ಳುವುದು ಅಗತ್ಯವಾಗಿದೆ.

ಅನಕ್ಷರಸ್ಥರೇ ಅಧಿಕಸಂಖ್ಯೆಯಲ್ಲಿರುವ ನಮ್ಮ ಪರಿಸರದಲ್ಲಿ, ಓದು-ಬರೆಹ ಬಲ್ಲವರು ತೀರಾ ಕಡಿಮೆ. ಅವರಲ್ಲಿಯೂ ಓದುವುದನ್ನು ಒಂದು ಅಭ್ಯಾಸವನ್ನಾಗಿ ಮಾಡಿಕೊಂಡವರು ಇನ್ನೂ ಕಡಿಮೆ. ಇಂಥವರು ಓದುತ್ತೇವೆ ಎಂದರೂ, ಅವರಿಗೆ ಸುಲಭವಾಗಿ ದೊರೆಯುವ ಸಾಮಗ್ರಿಯಾದರೂ ಎಂಥದು? ನಮ್ಮ ಜನಪ್ರಿಯ ಸಾಹಿತ್ಯ ಪುಸ್ತಕಗಳು ಹಾಗೂ ಅಂದಂದಿನುಚಿತಕ್ಕೆ ತಕ್ಕ ರೋಚಕ ಬರೆಹಗಳನ್ನು ಒದಗಿಸುವ  ನಿಯತಕಾಲಿಕೆಗಳು ಇವುಗಳಿಂದ ಯಾವ ಬಗೆಯ ಅಭಿರುಚಿ ನಿರ್ಮಾಣವಾದೀತು? ಹಿಂದಿನ ಅಭಿಜಾತ ಕಾವ್ಯಗಳು ಅನಕ್ಷರಸ್ಥ ಬಹುಜನ ಸಮುದಾಯಕ್ಕೆ ವಾಚನ ಅಥವಾ ಗಮಕ ವಿಧಾನದ ಮೂಲಕ, ಸಂವಹನಗೊಂಡು, ಉಂಟುಮಾಡುತ್ತಿದ್ದ ಗಾಢವಾದ ಸಂಸ್ಕಾರಕ್ಕೆ ಹೋಲಿಸಿದರೆ, ಇವತ್ತು ಹೊಸದಾಗಿ ಓದುವ ರುಚಿಯನ್ನು ಮೊದಲಬಾರಿಗೆ ಕಂಡುಕೊಂಡ ಬಹುಸಂಖ್ಯಾತ ಸಾಹಿತ್ಯಾಸಕ್ತರಿಗೆ ಜನಪ್ರಿಯ ಬರೆಹಗಾರರೂ ಹಾಗೂ ಪತ್ರಿಕೆಗಳು ಒದಗಿಸುತ್ತಿರುವ ಸಾಹಿತ್ಯದ ಗುಣಮಟ್ಟವೂ ನಿಜಕ್ಕೂ ಗಾಬರಿ ಹುಟ್ಟಿಸುವಂತಿದೆ. ಸಾಹಿತ್ಯವು ಒಂದು ಲಾಭದಾಯಕ ಉದ್ಯಮವೆಂಬುದನ್ನು ಕಂಡುಕೊಂಡ ಈ ವ್ಯಾಪಾರೀ ಮನೋಧರ್ಮದ ದುಷ್ಪರಿಣಾಮಗಳನ್ನು ತಡೆಗಟ್ಟುವುದು ಹೇಗೆ ಎನ್ನುವುದು ಇವತ್ತಿನ ಗಂಭೀರ ಸಾಹಿತ್ಯಾಸಕ್ತರೆಲ್ಲರ ಸಮಸ್ಯೆಯಾಗಿದೆ.

ಇನ್ನು ಕನ್ನಡದಲ್ಲಿ ಪ್ರಕಟವಾಗುತ್ತಿರುವ ಒಳ್ಳೆಯ ಪುಸ್ತಕಗಳ ಸಂಖ್ಯೆ ಕಡಿಮೆಯೇನಿಲ್ಲ. ಕರ್ನಾಟಕದ ವಿವಿಧ ವಿಶ್ವವಿದ್ಯಾನಿಲಯದ ಕನ್ನಡ ವಿಭಾಗಗಳು ಹಾಗೂ ಪ್ರಸಾರಾಂಗಗಳು, ಸಾಹಿತ್ಯ ಅಕಾಡೆಮಿ, ಸಾಹಿತ್ಯ ಪರಿಷತ್ತು, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ಇನ್ನಿತರ ಪ್ರತಿಷ್ಠಿತ ಪ್ರಕಾಶನ ಸಂಸ್ಥೆಗಳು ಪ್ರಕಟಿಸುವ ಪುಸ್ತಕಗಳು ಓದಬಲ್ಲವರನ್ನು ತಲುಪುವ ವ್ಯವಸ್ಥೆ ಕ್ರಮಬದ್ಧವಾಗಿ ಹಾಗೂ ಪರಿಣಾಮಕಾರಿಯಾಗಿ ಕೆಲಸ ಮಾಡುತ್ತಿಲ್ಲ. ಬೆಂಗಳೂರು ಮೈಸೂರಿನಂತಹ ಒಂದೆರಡು ನಗರಗಳನ್ನು ಹೊರತುಪಡಿಸಿದರೆ, ಸರಿಯಾದ ಪುಸ್ತಕದ ಅಂಗಡಿಗಳು ಬೇರೆಯ ಕಡೆ ಇಲ್ಲ. ರಾಷ್ಟ್ರೀಯ ಗ್ರಂಥಾಲಯಗಳು ಅನೇಕ ಊರುಗಳಲ್ಲಿ ಇದ್ದರೂ, ಅದರೊಳಗೆ ಕೆಲಸಮಾಡುವವರ ಅಭಿರುಚಿ ಹಾಗೂ ಆಯ್ಕೆಗೆ ಅನುಗುಣವಾದ ಪುಸ್ತಕಗಳು ಹೆಚ್ಚಿನ ಸಂಖ್ಯೆಯಲ್ಲಿರಬಹುದೇ ಹೊರತು, ಬೇರೆಯ ಒಳ್ಳೆಯ ಪುಸ್ತಕಗಳು ವಿರಳವೆಂದೇ ಹೇಳಬೇಕು. ನಿಜಕ್ಕೂ ಒಳ್ಳೆಯ ಪುಸ್ತಕಗಳನ್ನು ಕೊಂಡುಕೊಳ್ಳಬಲ್ಲ ಓದುಗರ ಹತ್ತಿರಕ್ಕೆ ತೆಗೆದುಕೊಂಡು ಹೋಗುವ ವ್ಯವಸ್ಥೆಗಳು ರೂಪುಗೊಳ್ಳಬೇಕು; ರೈಲು ನಿಲ್ದಾಣಗಳಲ್ಲಿ ಬಸ್ ನಿಲ್ದಾಣಗಳಲ್ಲಿ ಇರುವ ಪುಸ್ತಕದ ಅಂಗಡಿಗಳಲ್ಲಿ, ಜನಕ್ಕೆ ಉತ್ತಮ ಅಭಿರುಚಿ ನಿರ್ಮಾಣ ಮಾಡುವಂಥ ಕನ್ನಡ ಪುಸ್ತಕಗಳು ಕಣ್ಣಿಗೆ ಬೀಳುವಂತಾಗಬೇಕು. ಕರ್ನಾಟಕದ ವಿವಿಧ ಭಾಗಗಳಲ್ಲಿ ಪುಸ್ತಕಮೇಳಗಳು ಏರ್ಪಾಡಾಗಬೇಕು. ಜನಕ್ಕೆ ಭಾರವಾಗದ ಬೆಲೆಯಲ್ಲಿ ಒಳ್ಳೆಯ ಪುಸ್ತಕಗಳು ದೊರೆಯುವಂತಾಗಬೇಕು. ಈ ದಿಕ್ಕಿನಲ್ಲಿ ಕನ್ನಡ-ಸಂಸ್ಕೃತಿ ನಿರ್ದೇಶನಾಲಯವು ಪ್ರಾರಂಭಿಸಿರುವ ‘ಜನಪ್ರಿಯ ಪುಸ್ತಕ ಮಾಲೆ’ಯ ಯೋಜನೆ ಅತ್ಯಂತ ಸ್ವಾಗತಾರ್ಹವಾದದ್ದು. ಇನ್ನು ಸರ್ಕಾರವು ಪ್ರಾರಂಭಿಸಲು ಉದ್ದೇಶಿಸಿರುವ ‘ಪುಸ್ತಕ ಪ್ರಾಧಿಕಾರ’ವು, ನಾಳಿನ ಪುಸ್ತಕೋದ್ಯಮಕ್ಕೆ ಹೊಸ ಆಯಾಮಗಳನ್ನು ಕೊಡಬಹುದು. ಎಲ್ಲದಕ್ಕಿಂತ ಮುಖ್ಯವಾಗಿ ಗ್ರಾಮಾಂತರ ಪರಿಸರಗಳಲ್ಲಿ  ವಾಚನಾಲಯಗಳು, ಗ್ರಂಥಾಲಯಗಳು ಹೆಚ್ಚಾಗಬೇಕು. ದೇವಸ್ಥಾನಗಳನ್ನೂ ಕಲ್ಯಾಣಮಂಟಪಗಳನ್ನೂ ಕಟ್ಟಿಸುವುದರಲ್ಲಿ ನಮ್ಮಜನಕ್ಕೆ ಇರುವ ಉತ್ಸಾಹ ಗ್ರಂಥಾಲಯಗಳನ್ನು ನಿರ್ಮಿಸುವುದರಲ್ಲಿ ಇಲ್ಲ. ಗ್ರಂಥಾಲಯಗಳನ್ನು ಸ್ಥಾಪಿಸುವುದು ನಿಜವಾಗಿಯೂ ಪುಣ್ಯದ ಕೆಲಸ ಎಂಬುದನ್ನು ಯಾಕೆ ನಮ್ಮ ಜನ ಅರ್ಥಮಾಡಿಕೊಳ್ಳುವುದಿಲ್ಲ? ದೇವಸ್ಥಾನಗಳಿಗಿಂತ ಗ್ರಂಥಾಲಯಗಳು ಮಹತ್ವದವೆಂದು ನಮ್ಮ ಜನಕ್ಕೆ ಅನ್ನಿಸುವುದು ಯಾವಾಗ?

ಸಾಹಿತ್ಯವನ್ನು ಜನತೆಯ ಹತ್ತಿರಕ್ಕೆ ತೆಗೆದುಕೊಂಡು ಹೋಗುವ ಕಾರ್ಯದಲ್ಲಿ, ನಮ್ಮ ಸಮೂಹ ಮಾಧ್ಯಮಗಳು, ಅದರಲ್ಲಿಯೂ ಶ್ರವ್ಯ ಮತ್ತು ದೃಶ್ಯಮಾಧ್ಯಮಗಳು ವಹಿಸುವ ಪಾತ್ರ ತುಂಬ ಮುಖ್ಯವಾದದ್ದು. ಕರ್ನಾಟಕದ ಆಕಾಶವಾಣಿ ಮತ್ತು ದೂರದರ್ಶನಗಳ ಮಟ್ಟಿಗೆ ಹೇಳುವುದಾದರೆ, ಬಹುಕಾಲದಿಂದಲೂ ಆಕಾಶವಾಣಿ ನಿರ್ವಹಿಸುತ್ತ ಬಂದಿರುವ ಕಾರ್ಯಗಳ ಗುಣಮಟ್ಟಕ್ಕೆ ಹೋಲಿಸಿದರೆ, ಆಕಾಶವಾಣಿಗಿಂತ ಹೆಚ್ಚು ಆಕರ್ಷವೂ ಪ್ರಬಲವೂ ಆಗಿರುವ ಮಾಧ್ಯಮವಾದ ಬೆಂಗಳೂರು ದೂರದರ್ಶನ ಕೇಂದ್ರ ಪ್ರಸಾರ ಮಾಡುತ್ತಿರುವ ಕಾರ್ಯಕ್ರಮಗಳು ಸಾಹಿತ್ಯಕವಾಗಿಯಾಗಲಿ, ಸಂಸ್ಕೃತಿಕವಾಗಿಯಾಗಲೀ ತೀರಾ  ಅತೃಪ್ತಿಕರವಾಗಿವೆಯೆಂದೇ ಹೇಳಬೇಕಾಗಿದೆ. ಇನ್ನು ದೆಹಲಿಯ ದೂರದರ್ಶನವಂತೂ ಅಖಿಲಭಾರತೀಯ ಮಟ್ಟದಲ್ಲಿ ಕನ್ನಡವನ್ನು ಪ್ರತಿನಿಧಿಸುವ ಕ್ರಮ ಅತ್ಯಂತ ನಿರಾಶಾದಾಯವಾಗಿದೆ. ಕನ್ನಡದ ಪ್ರಮುಖ ಸಾಹಿತಿಗಳನ್ನು ಕುರಿತ, ಕರ್ನಾಟಕದ ಶ್ರೇಷ್ಠ ಸಂತರನ್ನು ಕುರಿತ ಯಾವ ಒಂದು ಹೇಳಿಕೊಳ್ಳಬಹುದಾದ ಕಾರ‍್ಯಕ್ರಮವೂ ಪ್ರಸಾರವಾದದ್ದು ನನಗೆ ನೆನಪಿಲ್ಲ. ಒಟ್ಟಿನಲ್ಲಿ ದೆಹಲಿಯ ದೂರದರ್ಶನದ ಕಾರ್ಯಕ್ರಮಗಳು ಹಿಂದಿಯೇತರ ಭಾಷಿಕರ ಮೇಲೆ, ಉಪಾಯವಾಗಿ ಹಿಂದಿಯನ್ನು ಹೇರುವ ಪ್ರಚ್ಛನ್ನ ಸನ್ನಾಹಗಳಂತೆ ತೋರುತ್ತವೆ ಎಂದು ಭಾವಿಸುವುದು ಅನಿವಾರ್ಯವಾಗಿದೆ.

ಕಾವ್ಯಸಂವಹನದ ಸಂದರ್ಭದಲ್ಲಿ, ಕಳೆದ ಒಂದೂವರೆ ದಶಕದ ಕಾಲಮಾನದಲ್ಲಿ ಸಂಭವಿಸಿದ ಕ್ಯಾಸೆಟ್ ಕ್ರಾಂತಿಯ ಪರಿಣಾಮವು ಮಿಶ್ರಸ್ವರೂಪದ್ದಾಗಿದೆ. ಸುಗಮ ಸಂಗೀತಕ್ಕೆ ಒಂದು ಘನತೆಯನ್ನು ತಂದುಕೊಟ್ಟು ಅದಕ್ಕೊಂದು ಸುಭದ್ರವಾದ ಪರಂಪರೆಯನ್ನು ನಿರ್ಮಿಸಿದ ಹಲವು ಶ್ರೇಷ್ಠಗಾಯಕರು ಹಾಗೂ ನಿರ್ದೇಶಕರು, ಅನೇಕ ಕವಿಗಳ ಕವಿತೆಗಳನ್ನು ಜನಸಮುದಾಯದ ಹತ್ತಿರಕ್ಕೆ ತೆಗೆದುಕೊಂಡುಹೋಗುವುದರಲ್ಲಿ ಯಶಸ್ವಿಯಾಗಿದ್ದಾರೆ. ಕಾವ್ಯವನ್ನು ಸಂವಹನಗೊಳಿಸುವ ಹಲವು ವಿಧಾನಗಳಲ್ಲಿ ಸುಗಮ ಸಂಗೀತವೂ ಒಂದು ಎನ್ನುವ ಸಂಗತಿಯನ್ನು ಚರ್ಚೆಯ ವಿಷಯವನ್ನಾಗಿ ಮಾಡುವುದು ಅಪ್ರಸ್ತುತ. ಅದರಲ್ಲಿಯೂ ಅನಕ್ಷರಸ್ಥರೆ ಬಹುಸಂಖ್ಯೆಯಲ್ಲಿರುವ ನಮ್ಮ ಸಾಮಾಜಿಕ ಸಂದರ್ಭದಲ್ಲಿ, ಆ ಜನತೆಯ ಒಂದು ಭಾಗವಾಗಿರುವ ಕವಿಗಳು ಬರೆದ ಕಾವ್ಯದ ಒಂದಷ್ಟುಭಾಗ, ಹಾಡುಗಾರಿಕೆಯ ಮೂಲಕ ಆ ಜನವನ್ನು ತಲುಪುವುದು ಅಪೇಕ್ಷಣೀಯವಾದ ಸಂಗತಿ ಎಂಬುದನ್ನು ಯಾರೂ ಅಲ್ಲಗಳೆಯಲಾರರು. ಯಾಕೆಂದರೆ ಕವಿ ಬರೆದ ಕಾವ್ಯಕ್ಕೆ, ಒಂದು ಸಮಾಜದ ಕಾವ್ಯಸಕ್ತ  ವಿದ್ಯಾವಂತ ವರ್ಗ ಹೇಗೋ ಹಾಗೇಯೇ, ಅನಕ್ಷರಸ್ಥ ಸಮೂಹವೂ ಸಹೃದಯರೇ ಎಂಬುದನ್ನು ನಾವು ಮರೆಯಬಾರದು.

ಕನ್ನಡವು ಪಡೆದ ಬಹುಸಂಖ್ಯೆಯ ರಾಷ್ಟ್ರೀಯ ಪ್ರಶಸ್ತಿಗಳ ಹಾಗೂ ಮತ್ತಿತರ ಕಾರಣಗಳಿಂದ, ಇಡೀ ಭಾರತದ ಗಮನವು ಇತ್ತ ಕಡೆಗೆ ತಿರುಗಿರುವ ಹೊತ್ತಿನಲ್ಲಿ, ಕನ್ನಡೇತರ ಪರಿಸರಗಳವರಿಗೆ ಕನ್ನಡ ಶ್ರೇಷ್ಠ ಕೃತಿಗಳನ್ನು ಪರಿಚಯ ಮಾಡಿಕೊಡುವ ಕಾರ್ಯವು ಈಗ ಮೊದಲಿಗಿಂತ ಹೆಚ್ಚಾಗಿ ನಡೆಯಬೇಕಾಗಿದೆ. ಅದಕ್ಕಾಗಿ ವಿವಿಧ ಭಾರತೀಯ ಭಾಷೆಗಳಲ್ಲಿ ಪರಿಣತರಾದ ಅನುವಾದಕರ ತಂಡವೊಂದು ಸಿದ್ಧವಾಗಬೇಕಾಗಿದೆ. ಈ ತಂಡವು ಕನ್ನಡದ ಪ್ರಾತಿನಿಧಿಕವೂ ಉತ್ತಮವೂ ಆದ ಕೃತಿಗಳನ್ನು ತಾವು ಪರಿಣತಿ ಹೊಂದಿದ ಅನ್ಯಭಾರತೀಯ ಭಾಷೆಗಳಿಗೆ ಅನುವಾದ ಮಾಡುವುದಲ್ಲದೆ, ಅನ್ಯಭಾಷೆಯ ಶ್ರೇಷ್ಠ ಕೃತಿಗಳನ್ನು ಕನ್ನಡಕ್ಕೆ ತರಬೇಕಾಗಿದೆ. ಈಚಿನ ಕೆಲವು ವರ್ಷಗಳಲ್ಲಿ ಕನ್ನಡದ ಹಲವು ಮುಖ್ಯ ಬರಹಗಾರರು ಭಾರತೀಯ ಹಾಗೂ ಭಾರತೀಯೇತರ ಭಾಷೆಗಳ, ಕಾವ್ಯ ಹಾಗೂ ಇನ್ನಿತರ ಪ್ರಕಾರಕ್ಕೆ ಸೇರಿದ ಮಹತ್ವದ ಕೃತಿಗಳನ್ನು ಕನ್ನಡಕ್ಕೆ ತಂದಿದ್ದಾರೆ ಎನ್ನುವುದು, ಈ ದಶಕದ ಸಾಹಿತ್ಯ ಸಂದರ್ಭದಲ್ಲಿ ಪರಿಗಣಿಸಬೇಕಾದ ಸಂಗತಿಯಾಗಿದೆ. ಇದಕ್ಕಿಂತಲೂ ಮುಖ್ಯವಾದದ್ದೆಂದರೆ, ಕನ್ನಡ ಸಾಹಿತ್ಯದ  ಸಾಧನೆಯನ್ನೂ, ವಿಶಿಷ್ಟತೆಯನ್ನೂ, ಉತ್ಕೃಷ್ಟತೆಯನ್ನೂ ಇಂಗ್ಲಿಷ್ ಭಾಷೆಯ ಮೂಲಕ ಭಾರತೀಯ ಹಾಗೂ ಪಾಶ್ಚಿಮಾತ್ಯ ವಲಯಗಳಿಗೆ ಪರಿಚಯ ಮಾಡಿಕೊಡುವ ಕೆಲಸ. ಯಾಕೆಂದರೆ, ಇತರ ಭಾಷಾಸಾಹಿತ್ಯಗಳು ನಮಗೆ ಅನುವಾದಗಳ ಮೂಲಕ ಪರಿಚಯವಾಗಿರುವ ಅಲ್ಪ-ಸ್ವಲ್ಪ ಪ್ರಮಾಣಕ್ಕೆ ಹೋಲಿಸಿ ನೋಡಿದರೂ, ನಮ್ಮ ಸಾಹಿತ್ಯವು ಮುಖ್ಯವಾಗಿ ಇಂಗ್ಲಿಷಿನ ಮೂಲಕ ಕರ್ನಾಟಕದಾಚೆಗೆ ಪರಿಚಯವಾಗಿರುವುದು ತೀರಾ ಕಡಿಮೆಯೆಂದೇ ಹೇಳಬೇಕು. ಈವರೆಗಿನ ಆದಾನ-ಪ್ರದಾನ ಕಾರ್ಯವು, ಸಾಹಿತ್ಯ ಅಕಾಡೆಮಿ, ನ್ಯಾಷನಲ್ ಬುಕ್‌ಟ್ರಸ್ಟ್ ಹಾಗೂ ಇನ್ನಿತರರ ವೈಯ್ಯಕ್ತಿಕ ಪರಿಶ್ರಮ ಮತ್ತು ಶ್ರದ್ಧೆಗಳಿಂದ ತಕ್ಕಮಟ್ಟಿಗೆ ನಡೆದಿರುವುದಾದರೂ,  ಇದೂ ಏನೇನೂ ಸಾಲದು. ಇದಕ್ಕಾಗಿ ವಿವಿಧ ಭಾಷೆಗಳಲ್ಲಿ ಪರಿಣತರಾದವರನ್ನೊಳಗೊಂಡ ಪ್ರತ್ಯೇಕವಾದ ಹಾಗೂ ಸ್ಥಾಯಿಯಾದ ಅನುವಾದ ವಿಭಾಗವೊಂದನ್ನು, ಕನ್ನಡ ಸಾಹಿತ್ಯ ಪರಿಷತ್ತಾಗಲಿ, ಕರ್ನಾಟಕ ಸಾಹಿತ್ಯ ಅಕಾಡೆಮಿಯಾಗಲಿ, ಅಥವಾ ಇದೀಗ ಪ್ರಾರಂಭವಾಗಿರುವ ಕನ್ನಡದ ವಿಶ್ವವಿದ್ಯಾಲಯವಾಗಲಿ ಒಳಕೊಳ್ಳುವುದಾದರೆ ಅದೊಂದು ಮಹತ್ವದ ಹೆಜ್ಜೆಯಾಗುತ್ತದೆ. ಇದರ ಜತೆಗೆ ಇನ್ನೂ ಒಂದು ವಿಷಯವನ್ನು ಕುರಿತು ಮರುವಿಚಾರ ಮಾಡಬೇಕಾಗಿದೆ. ಅದೇನೆಂದರೆ ಬಹುತೇಕ ಪಶ್ಚಿಮದ ಇಂಗ್ಲಿಷೇತರ ಸಾಹಿತ್ಯ ಕೃತಿಗಳು ಕನ್ನಡಕ್ಕೆ ಬಂದಿರುವುದು, ಅವು ಪಡೆದುಕೊಂಡ ಇಂಗ್ಲಿಷ್ ಅನುವಾದಗಳ ಮೂಲಕವೇ. ಆದರೆ, ಈ ಬಗೆಯ ಕೃತಿಗಳನ್ನು ಇದುವರೆಗಿನಂತೆ ಇಂಗ್ಲಿಷ್ ಅನುವಾದಗಳನ್ನವಲಂಬಿಸಿ ಕನ್ನಡಕ್ಕೆ ತರುವ ಬದಲು. ಆಯಾ ಭಾಷೆಗಳನ್ನು ಮೂಲದಲ್ಲಿಯೆ ಕಲಿತ ಪರಿಣತರು, ನೇರವಾಗಿ ಅವುಗಳನ್ನು ಕನ್ನಡ ಭಾಷೆಗೆ ತರುವ ಪ್ರಯತ್ನಗಳು ಹೆಚ್ಚು ಸಮರ್ಪಕವಾಗುತ್ತವೆ. ಆದಕಾರಣ ಕೆಲವು ಮುಖ್ಯ ಯೂರೋಪಿಯನ್ ಭಾಷೆಗಳನ್ನು ಕಲಿಯಲು ಆಸಕ್ತಿಯಿದ್ದವರನ್ನು ಆಯ್ಕೆಮಾಡಿ, ಸರ್ಕಾರವು ಫೆಲೋಷಿಪ್‌ಗಳನ್ನು ಕೊಟ್ಟು, ಆಯಾ ಭಾಷೆಯ ಸಂಸ್ಥೆಗಳಿಗೆ ಒಂದೆರಡು ವರ್ಷಗಳ ಕಾಲ ಕಳುಹಿಸಿಕೊಡುವ ಯೋಜನೆಯೊಂದನ್ನು ಹಾಕಿಕೊಳ್ಳುವುದು ಅಗತ್ಯವಾಗಿದೆ.

ಮೂಲತಃ ಭಾಷಾಂತರವೆಂಬುದು ತೌಲನಿಕ ಅಧ್ಯಯನ ಕ್ಷೇತ್ರಕ್ಕೆ ಸಂಬಂಧಿಸಿದ ವಿಷಯವಾಗಿದೆ. ಇದುವರೆಗಿನ ಭಾರತೀಯ ಭಾಷೆಗಳ ಪರಿಮಿತ ಅನುವಾದ ಪ್ರಯತ್ನಗಳ ಮೂಲಕ, ಭಾರತೀಯ ಭಾಷಾ ಸಾಹಿತ್ಯಗಳ ಬಗ್ಗೆ ಸ್ಥೂಲವಾದ ತರತಮಗಳ  ಅರಿವಾಗಬಹುದೇ ವಿನಾ, ಸಮರ್ಪಕವಾದ ತೌಲನಿಕ ವಿವೇಚನೆಗೆ ಅಧಿಕೃತವಾದ ಸಾಮಗ್ರಿಯೇನೂ ದೊರೆತಂತಾಗುವುದಿಲ್ಲ. ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಕಟಿಸಿರುವ ‘ಕಂಪ್ಯಾರಟಿವ್ ಇಂಡಿಯನ್ ಲಿಟರೇಚರ್’ ಸಂಪುಟಗಳು ಮತ್ತು ಇತ್ತೀಚಿಗೆ ಸಿದ್ಧವಾಗುತ್ತಿರುವ ‘ಎನ್‌ಸೈಕ್ಲೋಪೀಡಿಯಾ ಆಫ್ ಇಂಡಿಯನ್ ಲಿಟರೇಚರ್’ ಸಂಪುಟಗಳೂ ಮತ್ತು ಪ್ರಾಚೀನ ಹಾಗೂ ಆಧುನಿಕ ಭಾರತೀಯ ಸಾಹಿತ್ಯಗಳ ವಿಶ್ವಕೋಶಗಳೂ ಪ್ರಕಟವಾದಾಗ, ಭಾರತೀಯ ಸಾಹಿತ್ಯಗಳ ತೌಲನಿಕ ಅಧ್ಯಯನಕ್ಕೆ ಭದ್ರವಾದ ಬುನಾದಿಯೊಂದು ದೊರೆತಂತಾಗುತ್ತದೆ. ಆಗ ನಾವು ಭಾರತೀಯ ಸಾಹಿತ್ಯ  ಸಂದರ್ಭದಲ್ಲಿ ಕನ್ನಡದ ವಿಶಿಷ್ಟತೆಗಳನ್ನೂ ಮೌಲಿಕತೆಯನ್ನೂ ತೌಲನಿಕವಾಗಿ ಗುರುತಿಸಿಕೊಳ್ಳಲು ಸಾಧ್ಯವಾಗುತ್ತದೆ.

ತೌಲನಿಕ ಅಧ್ಯಯನಕ್ಕೆ ಸಂಬಂಧಸಿದಂತೆ ಇನ್ನೂ ಒಂದು ಸಂಗತಿಯನ್ನು ನಾವು ಗುರುತಿಸಿಕೊಳ್ಳಬೇಕಾಗಿದೆ. ಅದೇನೆಂದರೆ, ನಮ್ಮ ಸಾಹಿತ್ಯದ ಹಾಗೂ ಸಾಹಿತ್ಯ ವಿಮರ್ಶೆಯ ಮತ್ತು ಕಾವ್ಯಮೀಮಾಂಸೆಯ ತೌಲನಿಕ ಆಧ್ಯಯನ ಈವರೆಗೆ ಬಹುಮಟ್ಟಿಗೆ ಇಂಗ್ಲಿಷ್ ಭಾಷೆಯ ಮೂಲಕ ಪರಿಚಿತವಾದ ಪಶ್ಚಿಮದ ಸಾಹಿತ್ಯ ಹಾಗೂ ಸಾಹಿತ್ಯ ಚಿಂತನೆಗಳ ಅರಿವಿನ ಹಿನ್ನೆಲೆಯಲ್ಲಿಯೆ ನಡೆದಿದೆ ಎನ್ನುವುದು ಚಾರಿತ್ರಿಕವಾದ ಒಂದು ಘಟನೆಯಾಗಿದೆ. ಆದರೆ ಈವರೆಗೆ ನಡೆದ ತೌಲನಿಕ ವಿವೇಚನೆಗಳು ಒಂದರ್ಥದಲ್ಲಿ ಅಸಮಗ್ರವಾದವುಗಳೆಂಬುದು ನಿಜ. ಯಾಕೆಂದರೆ, ತಿಳಿವಿನಲ್ಲಿ, ಚಿಂತನೆಯಲ್ಲಿ ಸಮೃದ್ಧಿಯಲ್ಲಿ ಮಿಗಿಲಾದ ‘ಪೂರ್ವ’ದ ಸಾಹಿತ್ಯ ಪರಂಪರೆಯ ಅರಿವೇ ಇಲ್ಲದಂತೆ ನಾವು ಬದುಕಿದ್ದೇವೆ. ಈ ದೃಷ್ಟಿಯಿಂದ, ಚೀನಾ, ಜಪಾನ್, ಬರ್ಮಾ, ಇಂಡೋನೇಷಿಯಾ ಇತ್ಯಾದಿ ದೇಶಗಳ ಸಾಹಿತ್ಯವನ್ನೂ, ಸಾಹಿತ್ಯ ತತ್ವಗಳನ್ನೂ ಇನ್ನಾದರೂ ತಿಳಿದುಕೊಳ್ಳುವ ಪ್ರಯತ್ನದಲ್ಲಿ ನಾವು ತೊಡಗಬೇಕಾಗಿದೆ.

ಕನ್ನಡ ಸಾಹಿತ್ಯ ವಿಮರ್ಶೆಯನ್ನು ಬೆಳೆಯಿಸುವುದರಲ್ಲಿ, ವಿಮರ್ಶಕರ ಜತೆಗೆ, ಕನ್ನಡ ನಾಡಿನ ಪ್ರತಿಷ್ಠಿತ ಪತ್ರಿಕೆಗಳೂ, ನಿಯತಕಾಲಿಕೆಗಳೂ, ಸಾಹಿತ್ಯಕ ಕಿರುಪತ್ರಿಕೆಗಳೂ, ವಿಶ್ವವಿದ್ಯಾಲಯದ ಕನ್ನಡ ವಿಭಾಗಗಳು ಮತ್ತು ಸಾಹಿತ್ಯ ಅಕಾಡೆಮಿ, ಸಾಹಿತ್ಯ ಪರಿಷತ್ತಿನಂಥ ಸಂಸ್ಥೆಗಳು ಏರ್ಪಡಿಸಿದ ವಿಚಾರಸಂಕಿರಣಗಳೂ, ಸಾಹಿತಿಗಳನ್ನು ಕುರಿತು ಆಗಾಗ ಬಂದ ಸಂಭಾವನಾಗ್ರಂಥಗಳೂ, ಪ್ರಮುಖವಾದ ಪಾತ್ರವನ್ನು ವಹಿಸಿವೆ. ಹೀಗಾಗಿ ಕಳೆದ ಐದಾರು ದಶಕಗಳಲ್ಲಿ ಸಾಹಿತ್ಯನಿರ್ಮಿತಿಯ ಜತೆ ಜತೆಗೆ ಸಾಹಿತ್ಯ ವಿಮರ್ಶೆಯ ಪಂಪರೆಯೊಂದು ರೂಪುಗೊಂಡಿದೆ. ಮರು ಪರಿಶೀಲನೆಗೆ ತಕ್ಕ ಒಂದು ಸಂದರ್ಭಕ್ಕೆ ನಾವು ಬಂದು ನಿಂತಿರುವ ಈ ಹೊತ್ತಿನಲ್ಲಿ ಇದುವರೆಗಿನ ಕನ್ನಡ ಸಾಹಿತ್ಯದ ಜತೆಗೆ, ಸಾಹಿತ್ಯ ವಿಮಶೆಯನ್ನೂ, ಪುನರ್ ವಿಮರ್ಶೆಗೆ ಗುರಿಪಡಿಸುವ ಕೆಲಸ ನಡೆಯಬೇಕಾಗಿದೆ.  ಹಾಗೆಯೆ ಮುಖ್ಯವಾದ ವಿಮರ್ಶಕರ ಹಾಗೂ ಸಂಶೋಧಕರ ಕೊಡುಗೆಗಳೇನೆಂಬುದನ್ನೂ ನಾವು ಪರಿಶೀಲಿಸಬೇಕಾಗಿದೆ; ಹೊಸಗನ್ನಡದ ಮಹತ್ವದ ಲೇಖಕರ ಸಮಗ್ರ ಅಧ್ಯಯನ ಹಾಗೂ ವಿವೇಚನೆ, ಎಲ್ಲ ಚಳುವಳಿಗಳಾಚೆಯ ಈ ಹೊತ್ತಿನ ಮುಕ್ತವಾತಾವರಣದಲ್ಲಿ ನಡೆಯುವುದು ಅಗತ್ಯವಾಗಿದೆ. ಹಾಗೆ ಅದನ್ನು  ನಡೆಸಬಲ್ಲ, ವಿಮರ್ಶೆಯನ್ನೆ ಒಂದು ಪ್ರತ್ಯೇಕ ಶಿಸ್ತನ್ನಾಗಿ ತೆಗೆದುಕೊಂಡ ಹೊಸಪೀಳಿಗೆಯ ವಿಮರ್ಶಕರ ತಂಡವೊಂದು ಸಿದ್ಧವಾಗಿದೆ. ಆದರೂ, ಒಂದೊಂದು ಸಲ ನಮ್ಮ ಸಮಕಾಲೀನ ಸಾಹಿತ್ಯವಿಮರ್ಶೆ ಸ್ಪಂದನ ಶೀಲತೆಯನ್ನು ಕಳೆದುಕೊಂಡು ಸೃಜನಾತ್ಮಕತೆಗೆ ವಿರೋಧವಾಗಿದೆಯೇನೂ ಎಂಬಂತಹ ಪ್ರವೃತ್ತಿಗಳನ್ನು ಪ್ರಕಟಿಸುವಂತೆ ತೋರುತ್ತದೆ. ಯಾರ ಬಗೆಗಾದರೂ ಒಮ್ಮೆ ಹುಟ್ಟಿಕೊಂಡ ಅತಿಯಾದ ಪಕ್ಷಪಾತವಾಗಲೀ, ಅತಿಯಾದ ಪೂರ್ವಗ್ರಹವಾಗಲಿ, ಬದಲಾಗದಂತೆ ಬಹುಕಾಲ ಮುಂದುವರಿದುಬಿಡುತ್ತದೆ. ವಿಮರ್ಶೆ ಸೃಜನಶೀಲತೆಯನ್ನು ಗುರುತಿಸುವ ಹಾಗೂ ಬೆಳೆಯಿಸುವ ಸ್ವರೂಪದ್ದಾಗಬೇಕು. ಈ ಅರ್ಥದಲ್ಲಿ ವಿಮರ್ಶೆಯ ಪ್ರಯೋಜನ ಸಾಂಸ್ಕೃತಿಕವಾಗಿ ಮುಖ್ಯವಾಗುತ್ತದೆ. ಸಾಹಿತ್ಯಕ್ಷೇತ್ರಕ್ಕೆ ಹೊಸದಾಗಿ ಪ್ರವೇಶಿಸಿದ ಹಾಗೂ ಬೆಳೆಯಬಲ್ಲ ತರುಣ ಬರಹಗಾರರ ದೃಷ್ಟಿಯಿಂದಲಂತೂ ಈ ಮಾತು ತುಂಬ ಮುಖ್ಯವಾದದ್ದು. ವಿಮರ್ಶೆಯನ್ನು ಸಮರ್ಥವಾಗಿ ನಿರ್ವಹಿಸಬಲ್ಲ ಬುದ್ಧಿವಂತರು ನಮ್ಮ ನಡುವೆ ಇದ್ದಾರೆ. ಆದರೆ ಬರೀ ಬುದ್ಧಿವಂತಿಕೆಯೊಂದೇ ಸಾಲದು; ಬೇಕಾದದ್ದು ಹೃದಯವಂತಿಕೆ ಹಾಗೂ ಪ್ರಾಮಾಣಿಕತೆ ಮತ್ತು ಪರಂಪರೆಯ  ಗಾಢವಾದ ತಿಳಿವಳಿಕೆ. ಒಂದು ಸಾಹಿತ್ಯ ಪರಂಪರೆಯ ಗಾಢವಾದ ಅರಿವಿನಿಂದ ವಿಮರ್ಶೆಗೆ ಬರುವ ಸಮತೂಕವೆ ಬೇರೆಯದು. ಅಂಥ ವಿಮರ್ಶೆ, ಬಹುಕಾಲದಿಂದ ಹಾಗೂ ಶ್ರದ್ಧೆಯಿಂದ ಸಾಹಿತ್ಯ ನಿರ್ಮಿತಿಯಲ್ಲಿ ತೊಡಗಿಕೊಂಡಂಥವರ ಸಾಧನೆಯನ್ನು, ಅವಿಚಾರಿತವಾಗಿ ತಳ್ಳಿಹಾಕದೆ, ಆಯಾ ಲೇಖಕರು ಒಟ್ಟು ಸಾಹಿತ್ಯ ಪರಂಪರೆಯಲ್ಲಿ ಎಲ್ಲಿ ಹಾಗೂ ಎಷ್ಟರಮಟ್ಟಿಗೆ ಪ್ರಸ್ತುತವಾಗುತ್ತಾರೆ ಎಂಬುದನ್ನು ತಕ್ಕ ಜವಾಬ್ದಾರಿಯಿಂದ ಪರೀಕ್ಷಿಸಿ ನೋಡುತ್ತದೆ.

ಇದುವರೆಗಿನ ನಮ್ಮ ಸಾಹಿತ್ಯ ವಿಮರ್ಶೆ ಬಹುಮಟ್ಟಿಗೆ ಪಶ್ಚಿಮದ ಮಾದರಿ ಹಾಗೂ ಮಾನದಂಡಗಳನ್ನು ಅವಲಂಬಿಸಿದ್ದಾಗಿದೆ. ಭಾರತೀಯ ಕಾವ್ಯಮೀಮಾಂಸೆಯ ಪರಿಜ್ಞಾನದ ಹಿನ್ನೆಲೆಯೂ, ಪಾಶ್ಚಾತ್ಯ ಸಾಹಿತ್ಯ ವಿಮರ್ಶೆಯ ತಾತ್ವಿಕ ತಿಳಿವಳಿಕೆಯೂ ಮೇಳವಿಸಿದ ವಿಮರ್ಶನ ದೃಷ್ಟಿಯೊಂದು ಸಮಾನಾಂತರವಾಗಿ ಇದ್ದರೂ, ಮೇಲುಗೈ ಪಡೆದದ್ದು ಪಾಶ್ಚಾತ್ಯ ಪ್ರೇರಣೆ ಹಾಗೂ ಮಾದರಿಗಳೇ. ಇದರಿಂದ ಕನ್ನಡ ವಿಮರ್ಶೆಗೆ ಖಂಡಿತವಾಗಿಯೂ ಪ್ರಯೋಜನವಾಗಿದೆ, ಎಂಬುದನ್ನು ಮರೆಯುವಂತಿಲ್ಲ. ಮೊದಮೊದಲು ಪಾರಿಭಾಷಿಕಗಳ ಬಗ್ಗೆ ಇದ್ದ ಗೊಂದಲಗಳು ಕ್ರಮಕ್ರಮೇಣ ಕಡಿಮೆಯಾಗಿ ಆನಂತರದ ವಿಮರ್ಶೆಯ ಭಾಷೆ ಹೆಚ್ಚು ಖಚಿತತೆಯನ್ನು ಪಡೆದುಕೊಂಡಿತೆಂಬುದು ನಿಜ. ಈ ಹೊತ್ತಿನ ಸಾಹಿತ್ಯ ವಿಮರ್ಶೆಯಲ್ಲಿ, ಅನ್ಯದೇಶೀಯ ಪ್ರೇರಣೆ ಹಾಗೂ ಮಾದರಿಗಳ ಹಂಗನ್ನು ಹರಿದುಕೊಂಡು, ಕೃತಿಯೊಂದನ್ನು ಅದರ ಪಾರಂಪರಿಕ ಹಾಗೂ ಸಾಂಸ್ಕೃತಿಕ ಸಂದರ್ಭದಲ್ಲಿ ಇರಿಸಿ ಪರಿಶೀಲಿಸುವ ಪ್ರವೃತ್ತಿಗಳು ಮೂಡುತ್ತಿರುವುದು ಸಂತೋಷದ ಸಂಗತಿಯಾಗಿದೆ.

ನಮ್ಮ ಸಾಹಿತ್ಯ ವಿಮರ್ಶೆಯ ಸಂದರ್ಭದಲ್ಲಿ ನಮ್ಮ ಗ್ರಾಮೀಣ ಪರಿಸರದ ಬರಹಗಾರರ ಸಮಸ್ಯೆಗಳನ್ನು ಲೆಕ್ಕಕ್ಕೆ ತೆಗೆದುಕೊಳ್ಳಬೇಕಾಗಿದೆ. ಸಾಮಾನ್ಯವಾಗಿ ಹೆಚ್ಚಿನ  ಸಾಹಿತ್ಯಕ ಚಟುವಟಿಕೆಗಳು, ಪುಸ್ತಕ ಪ್ರಕಾಶನ, ವಿಮರ್ಶೆಯ ಹಾಗೂ ಸಂವಹನದ ಮಾಧ್ಯಮಗಳು, ಬಹುಮಟ್ಟಿಗೆ ನಗರ ಕೇಂದ್ರಿತವಾಗುತ್ತಿರುವ ಸಂದರ್ಭದಲ್ಲಿ, ಗ್ರಾಮೀಣ ಪರಿಸರದ ಬರಹಗಾರರಿಗೆ ಸರಿಯಾದ ಪರಿಗಣನೆಯಾಗಲೀ ಪ್ರೋತ್ಸಾಹವಾಗಲೀ, ಅವರ ಕೃತಿಗಳ ಬಗ್ಗೆ ಸಮರ್ಪಕವಾದ ವಿಮರ್ಶೆಯಾಗಲೀ ನಡೆಯುತ್ತಿಲ್ಲ ಎಂಬ ಅಭಿಪ್ರಾಯವೊಂದು ಪ್ರಚಲಿತವಾಗಿದೆ. ಎಷ್ಟೋ ವೇಳೆ ನಗರ ಕೇಂದ್ರಗಳಲ್ಲಿ ವಿವಿಧ ಸಮೂಹ ಮಾಧ್ಯಮಗಳಿಗೆ ಸಮೀಪದಲ್ಲಿರುವವರಿಗೆ ದೊರಕುವ ‘ಪ್ರಕಾಶನ’ದ  ಅನುಕೂಲ ಇವರಿಗೆ ಇಲ್ಲದಿರಬಹುದೆಂಬ  ಸಂಗತಿಯನ್ನು ತಳ್ಳಿಹಾಕಲಾಗದಿದ್ದರೂ, ನಿಜವಾದ ಲೇಖಕ ಅವನು ಎಲ್ಲಿಯೇ ಇರಲಿ, ಅವನು ಪಡೆಯಬೇಕಾದಷ್ಟು ಪರಿಗಣನೆಯಿಂದ ವಂಚಿತನಾಗಲಾರನೆಂದೇ ನನ್ನ ತಿಳಿವಳಿಕೆ. ಆದರೂ ಕರ್ನಾಟಕ ಸಾಹಿತ್ಯ ಅಕಾಡೆಮಿ ಮತ್ತು ಸಾಹಿತ್ಯ ಪರಿಷತ್ತಿನಂಥ  ಸಂಸ್ಥೆಗಳು ನಗರಕೇಂದ್ರಗಳಾಚೆಯ ಪ್ರತಿಭೆಗಳನ್ನು ಹೆಚ್ಚು ಹೆಚ್ಚಾಗಿ ತಮ್ಮ ಕಾರ‍್ಯಕ್ರಮಗಳೊಳಗೆ ತೊಡಗಿಸಿಕೊಳ್ಳುವುದರ ಮೂಲಕ, ಅವರನ್ನು ಪರಿಗಣನೆಗೆ ತೆಗೆದುಕೊಂಡು ಪ್ರೋತ್ಸಾಹಿಸುವುದು ಅಗತ್ಯವಾಗಿದೆ. ಹಾಗೆಯೇ ನಮ್ಮ ಸಾಹಿತ್ಯಕ ಹಾಗೂ ಸಾಂಸ್ಕೃತಿಕ ಚಟುವಟಿಕೆಗಳು, ಸಾಧ್ಯವಾದ ಮಟ್ಟಿಗೆ ದೊಡ್ಡ ದೊಡ್ಡ ನಗರಗಳಿಗೆ ಸೀಮಿತವಾಗದಂತೆ ಅವುಗಳ ಕಾರ್ಯವ್ಯಾಪ್ತಿಯನ್ನು ವಿಸ್ತರಿಸಬೇಕಾಗಿದೆ. ಸಾಕಷ್ಟು ಕಾರ್ಯಕ್ರಮಗಳನ್ನು ಕನ್ನಡದ ಗಡಿನಾಡುಗಳಲ್ಲಿ (ಸಾಧ್ಯವಾದರೆ ಕರ್ನಾಟಕದ ಆಚೆಗೂ) ಹಮ್ಮಿಕೊಳ್ಳಬೇಕು. ಮತ್ತು ಈ ಬಗೆಯ ಕಾರ‍್ಯಕ್ರಮಗಳಲ್ಲಿ, ಆಯಾ ಗಡಿಗಳಾಚೆಯ ಸೋದರ ಭಾಷಾಸಾಹಿತಿಗಳನ್ನು, ಕಲಾವಿದರನ್ನು, ನಮ್ಮವರ ಜೊತೆಗೆ ತೊಡಗಿಸಿಕೊಳ್ಳಬೇಕು. ಬಹುಭಾಷಿಕ ಪರಿಸರದ ನಡುವೆ ಬದುಕುವ ನಾವೆಲ್ಲರೂ ಈ ಬಗೆಯ ಭಾಷಾ ಬಾಂಧವ್ಯಗಳ ಮೂಲಕವಾಗಿಯೇ ಬೆಳೆಯಬೇಕಾಗುತ್ತದೆ. ಅನೇಕ ಬಗೆಯ ವಿಚ್ಛಿದ್ರಕಾರಕ ಶಕ್ತಿಗಳ ಅಬ್ಬರಗಳ ನಡುವೆ ಸಾಹಿತ್ಯವು ನಮ್ಮನ್ನು ಒಂದುಗೂಡಿಸದಿದ್ದರೆ, ಮತ್ತೆ ಯಾವುದು ತಾನೆ ಕೂಡಿಸೀತು? ಯಾಕೆಂದರೆ ಸಾಹಿತ್ಯದ ಮೂಲ ದ್ರವ್ಯವೇ ಪ್ರೀತಿ. ಸಾಹಿತ್ಯ ಹುಟ್ಟುವುದೇ ಅದಮ್ಯವಾದ ಜೀವನ ಪ್ರೀತಿಯಿಂದ. ಆದಕಾರಣ-

ಪ್ರೀತಿಯಿಲ್ಲದವನು ಕವಿಯಾಗಲಾರ, ಕಲಾವಿದನಾಗಲಾರ, ವಿಜ್ಞಾನಿಯಾಗಲಾರ, ರಾಜಕಾರಣಿಯಾಗಲಾರ, ಅಥವಾ ಕ್ರಾಂತಿಕಾರಿಯಾಗಲಾರ. ಬದುಕನ್ನು ಕುರಿತ ನಿಜವಾದ ಪ್ರೀತಿ ಇದ್ದವನಿಗೆ ಮಾತ್ರ ಅದರ ಸಮೃದ್ಧಿಯಲ್ಲಿ, ವೈವಿಧ್ಯತೆಯಲ್ಲಿ, ಸ್ವಾತಂತ್ರ್ಯದಲ್ಲಿ ಹಾಗೂ ಶ್ರೇಯಸ್ಸಿನಲ್ಲಿ ಆಸಕ್ತಿ ಹುಟ್ಟೀತು. ಅದಿಲ್ಲದೆ ಬದುಕನ್ನು ಕೇವಲ ವ್ಯಾವಹಾರಿಕವಾಗಿ ಹಾಗೂ ಪ್ರಾಯೋಜನಿಕ ದೃಷ್ಟಿಯಿಂದ ನೋಡುವವನಿಗೆ, ಅದರೊಳಗಿನ ಚೆಲುವಿಕೆಯಾಗಲೀ, ಜೀವಂತಿಕೆಯಾಗಲೀ ಕಂಡೀತು ಹೇಗೆ? ಸಾಹಿತ್ಯದ ಮುಖ್ಯಗಮನವೇ, ಮನುಷ್ಯನನ್ನು ಪ್ರಾಯೋಜನಿಕ ಬುದ್ಧಿಯ ನಿಲುವಿನಿಂದ ಪಾರುಮಾಡಿ, ಬದುಕಿನ ನಿಜವಾದ ಅರ್ಥವಂತಿಕೆಯ ಅನ್ವೇಷಣೆಗಳ ಕಡೆ ತೊಡಗಿಸುವುದು. ಭಾಷೆಯ ಬಗ್ಗೆ ನಿಜವಾದ ಪ್ರೀತಿಯಿದ್ದವನ ಅಭಿಮಾನ ಕೇವಲ  ಆವೇಶದ ಕೂಗಾಟವಾಗುವುದಿಲ್ಲ; ಬದುಕಿನ ಬಗ್ಗೆ ನಿಜವಾದ ಪ್ರೀತಿಯಿದ್ದವನ ಬರಹ ಲಘುವಾಗುವುದಿಲ್ಲ; ಸಾಹಿತ್ಯದ ಬಗ್ಗೆ ನಿಜವಾದ ಪ್ರೀತಿಯಿದ್ದವನ ವಿಮರ್ಶೆ ಸಮತೋಲನವನ್ನು ಕಳೆದುಕೊಳ್ಳುವುದಿಲ್ಲ; ಜನದ ಶ್ರೇಯಸ್ಸಿನ ಬಗ್ಗೆ ನಿಜವಾದ ಪ್ರೀತಿಯಿದ್ದ ರಾಜಕಾರಣಿ ಕೇವಲ ತತ್ಕಾಲವಷ್ಟನ್ನೆ ನೋಡುವುದಿಲ್ಲ; ಅಪ್ರಾಮಾಣಿಕನಾಗುವುದಿಲ್ಲ. ಪ್ರೀತಿಯಿದ್ದವನ ಬದುಕಿನ ಗ್ರಹಿಕೆ ಮೇಲ್ಪದರದ್ದಲ್ಲ; ಯಾಕೆಂದರೆ ಪ್ರೀತಿ ಎಂದರೆ ವಸ್ತುವೊಂದರ ಅಂತರಂಗವನ್ನು ಹೊಕ್ಕು ಅದನ್ನು ಸಹಾನುಭೂತಿಯಿಂದ ನೋಡುವ ಒಂದು ಕ್ರಮ. ಪ್ರತಿಭೆ ಅನ್ನುವುದು ಕೂಡಾ ಪ್ರೀತಿಗೆ ಇನ್ನೊಂದು ಹೆಸರು. ಇಂಥ ಅದಮ್ಯವಾದ ಜೀವನ ಪ್ರೀತಿಯ ಮೂಲಕವೇ ನಮ್ಮ ಎಲ್ಲ ಮಹಾನ್ ಲೇಖಕರೂ ಬದುಕನ್ನು ಕಂಡಿದ್ದಾರೆ, ಕಾಣಿಸಿದ್ದಾರೆ. ಬದುಕಿನ ಬಗೆಗಿರುವ ಪ್ರೀತಿಯನ್ನು ವಿಸ್ತರಿಸಿದ್ದಾರೆ. ನಾನಿಲ್ಲಿ ಈ ಉತ್ಸವದ ಅಧ್ಯಕ್ಷತೆಯ ಗೌರವಕ್ಕೆ ಪಾತ್ರನಾಗಿ ನಿಮ್ಮ ಎದುರಿಗೆ ನಿಂತಿರುವುದೂ, ಅದೇ ಪ್ರೀತಿಯ ಕಾರಣದಿಂದ. ಹೀಗಿರುವಾಗ-

ಪ್ರೀತಿ ಇಲ್ಲದ ಮೇಲೆ
ಹೂವು ಅರಳೀತು ಹೇಗೆ?
ಮೋಡ ಕಟ್ಟೀತು ಹೇಗೆ ?
ಹನಿಯೊಡೆದು ಕೆಳಗಿಳಿದು

ನೆಲಕ್ಕೆ ಹಸಿರು ಮೂಡೀತು ಹೇಗೆ?
ಪ್ರೀತಿ ಇಲ್ಲದ ಮೇಲೆ
ಮಾತಿಗೆ ಮಾತು ಕೂಡೀತು ಹೇಗೆ?
ಅರ್ಥ ಹುಟ್ಟೀತು ಹೇಗೆ?
ಬರೀ ಪದಕ್ಕೆ ಪದ ಜತೆಗಿದ್ದ ಮಾತ್ರಕ್ಕೆ
ಪದ್ಯವಾದೀತು ಹೇಗೆ?
ಪ್ರೀತಿ ಇಲ್ಲದಮೇಲೆ
ಸಂಶಯದ ಗಡಿಗಳುದ್ದಕ್ಕು
ಸಿಡಿಗುಂಡುಗಳ ಕದನ ನಿಂತೀತು ಹೇಗೆ?
ಜಾತಿ-ಮತ-ಭಾಷೆ-ಬಣ್ಣಗಳ ಗೋಡೆಯ ನಡುವೆ
ನರಳುವ ಪಾಡು ತಪ್ಪೀತು ಹೇಗೆ?
ನಮ್ಮ ನಿಮ್ಮ ಮನಸ್ಸು
ಮರುಭೂಮಿಯಾಗದ ಹಾಗೆ
ತಡೆಯುವುದು ಹೇಗೆ?

-೧೯೯೨