ತಾಲಲಲೇ ಮಾಯೀ ತಾಲಲಲೇ             ||ಪಲ್ಲವಿ||
ಮೂಡು ಸೀಮೆ ಒಳಗೆ ಒಬ್ಬ
ಹೊನ್ನಾಲಪ್ಪ ಕಿವುಡ ಗೌಡ
ದಾರಿ ಹೊಲವ ಮಾಡವನಂತೆ
ಜೋಳನಾದರು ಬಿತ್ತವನಂತೆ
ಅಟ್ಟಣನಾದರು ಹಾಕಿದನಂತೆ
ಹೊಲವನಾದರು ಕಾದವನಂತೆ
ಕಣಿವೆ ಕೆಳಗಲ ಕೊಂಗರು
ಎತ್ತಿನ ಯಾಪಾರ‍್ಕೆ ಬಂದರು

ಬಂದವರು, ಕಿವುಡ ಗೌಡನ್ನ ಕಂಡು, “ಈ ದಾರಿ ಎಲ್ಲಿಗೋದ್ದು?” ಅಂತ ಕೇಳಿದರು. ಗೌಡ ಕಿವುಡ. ಅವರು ಕೇಳಿದ್ದು ಗೊತ್ತಾಗ್ನಿಲ್ಲ. ಗೌಡ ಚೆನ್ನಾಗಿ ಬೆಳೆ ಮಾಡಿದ್ದ. ಜೋಳದ ತೆನೆಯೂ ವೈನಾಗಿದ್ದುವು. ಅದನ್ನೇ ಕೊಂಗರು ಕೇಳಿದರು ಅಂತ ತಿಳ್ಕೊಂಡ. “ಏನೋ ಮುಂಡೇ ಮಕ್ಕಳೇ, ಹೋಗವರು ಬರವರು ಎಲ್ಲ ನನ್ನೊಲದಲ್ಲಿ ದಪ್ಪ ಸಣ್ಣ ದಪ್ಪ ಸಣ್ಣ ಬೆಳೆದದೆ ಅಂತ ಕೇಳ್ತೀರಾ ? ಹೋಗರಯ್ಯ, ಕಷ್ಟ ಮಾಡಿ ಬೆಳೆದಿವ್ನೀ” ಅಂದ. ಇಂತಾ ಕಿವುಡ್ನೊಂದ್ಗೆ ಇನ್ನೇನ್ ಮಾತಾಡದು ಅಂತ ಕೊಂಗರು ಹೊಂಟೋದ್ರು. “ನಾನು ದಾರಿ ಹೊಲ ಮಾಡ್ಕಂಡದ್ದು ಭಾಳ ಯರ‍್ತ ಆಗ್ಬುಡ್ತು. ಇದನ್ನ ಹೆಡ್ತಿಗೆ ಹೇಳ್ಬೇಕು” ಅಂತ ಗೌಡ ಮನ್ಗೆ ಬಂದ. ಗೌಡ್ನ ಹೆಡ್ತೀನೂ ಕಿವುಡಿ.

ಅಟ್ಣನಾದರು ಬಿಟ್ಟನಂತೆ
ಮನೆಗೆನಾದರು ಬಂದನಂತೆ
ಮನೆಲಿರು ಹೆಡ್ತಿ ಕೂಡ

ಗಂಡನಿಗಿಂತ ಹೆಚ್ಚಿನ ಕಿವುಡಿ
ನಿಂಗಿ ನಿಂಗಿ ಅಂದನಂತೆ
ನಿಂಗಿನಾದರು ಕೂಗಿದನಂತೆ

“ನೋಡಮ್ಮಿ, ದಾರಿ ಹೊಲ ಮಾಡ್ಕಂದಿಮಿ. ತಿರಗಾಡ ಜನವೆಲ್ಲ ಜೋಳದ ತೆನೆ ದಪ್ಪ ಸಣ್ಣ ಅಂತ ಕಣ್ಣೆಸರು ಮಾಡ್ತಾರೆ. ಹೊಲ ಮಾರ‍್ಬಿಡಮೋ ಇಲ್ಲ ತೆನೆ ಕೂದ್ಬಿಡಮೋ” ಅಂತ ಕೇಳಿದ. ಕಿವುಡು ಹೆಡ್ತಿಗೆ ಗಂಡ ಹೇಳಿದ್ದು ಸರಿಯಾಗಿ ಕೇಳ್ನಿಲ್ಲ. “ದಪ್ಪ ಸಣ್ಣ” ಅಂದದ್ದು ಮಾತ್ರ ಗೊತ್ತಾಯ್ತು. ಮೊದಲಿಂದ್ಲೂ ಅವಳ್ಗೆ ಒಡ್ವೆ ಆಸೆ. ನನ್‌ಗಂಡ, ಒಂದ್‌ಸಾವಿರ ಪಲ್ಲ ಜ್ವಾಳ ಆಯಿತ್ತೇ, ನೂರ್ ಪಲ್ಲ ಸಂಸಾರ‍್ಕೆ ಮಡಿಕಂಡು, ಮಿಕ್ಕಿದ ಮಾರಿ, ನನ್ಗೆ ದಪ್ಪ ಗುಂಡು ಸಣ್ಣ ಗುಂಡು ಮಾಡಿಸ್ತೀನಿ ಅಂತ ಅವನೆ ಅಂದ್ಕಂಡಳು. ಹರಾಯದಲ್ಲಿಲ್ಲ, ಪರಾಯದಲ್ಲಿಲ್ಲ ಅರ್ಧ ವಯಸ್ಸಾಯ್ತು. ಊರು ಹೋಗು ಅಂತದೆ, ಕಾಡು ಬಾ ಅಂತದೆ. ಇಂಥ ಕಾಲದಲ್ಲಿ ಮಾಡಿಸ್ತೀನಿ ಅಂತಾನೆ, ಈಗಾರ ಮಾಡಿಸ್ಲೀ, ದಪ್ಪ ಗುಂಡಾದರೇನು, ಸಣ್ಣ ಗುಂಡಾದರೇನು ? ಅಂದ್ಕಂಡು –

ಸಣ್ಣ ಗುಂಡ್ನಾದರು ಮಾಡಿಸು ಗೌಡ
ದೊಡ್ಡ ಗುಂಡ್ನಾದರು ಮಾಡಿಸು ಗೌಡ
ನೀನೊಪ್ಪಿದ ಗುಂಡ ಮಾಡ್ಸಿದಾರೆ
ಅಕ್ಕಳಿಕ್ಕೆ ರೆಡಿಯಾಗಿವ್ನೀ,

ಅಂದಳು, ಗಂಡನ ಮಾತು ಹೆಡ್ತಿಗೆ ಹೆಡ್ತಿ ಮತು ಗಂಡನ್ಗೆ ಗೊತ್ತಾಗ್ನಿಲ್ಲ. ಗಂಡ ಒಡವೆ ಮಾಡಿಸ್ತಾನೆ ಅಂತ್ಲೇ ಅವಳು ತಿಳ್ಕಂಡು ಮಗಳಿಗೆ ಹೇಳಿದ್ಳು.

ಗುಡು ಗುಡುನೆ ಬಂದಾಳಂತೆ
ಮಗಳನಾದರು ಕೂಗಿದಳಂತೆ
ಹೊಟ್ಟೆಲುಟ್ಟಿದ ಮಗಳು ಕೂಡ
ಅವ್ವನಿಗಿಂತ ಹೆಚ್ಚಿನ ಕಿವುಡಿ

“ನೋಡಮ್ಮೀ, ನಿಮ್ಮಪ್ಪ ಈಗ ನಂಗೆ ಸಣ್ಣ ಗುಂಡು ದೊಡ್ಡ ಗುಂಡು ಮಾಡಿಸ್ತೀನಿ ಅಂದ ನೋಡ್ದಾ, ಹರಾಯದಲ್ಲಿಲ್ಲ ಪರಾಯದಲ್ಲಿಲ್ಲ, ಮುಪ್ಪಿನ ಕಾಲ್ದಲ್ಲಿ ಮೂರಂಗ ಅಂತ ಈಗ ಮಾಡಿಸ್ತೀನಿ ಅಂತಾನೆ’ ಅಂದಳು. ಆ ಹುಡ್ಗಿಗೆ “ಹರಾಯ ಪರಾಯ’ ಅನ್ನುದು ಮಾತ್ರ ಗೊತ್ತಾಯ್ತು. ಮದುವೆಗೆ ಬಂದಿದ ಹುಡ್ಗಿ ಅದು. ಅವ್ವ ಬಂದು ನನ್ನ ಮುದ್ಕನ್ಗೆ ಮದ್ವೆ ಮಾಡ್ಲೋ ಹರಾಯದವನ್ಗೆ ಪರಾಯದವನ್ಗೆ ಮದ್ವೆ ಮಾಡ್ಲೋ ಅಂತ ಕೇಳ್ತಾ ಅವಳೆ. ಯಾರ‍್ನಾಂತ ಹೇಳ್ಲಿ ಅಂತ ಯೋಚ್ನೆ ಮಾಡಿ –

ಅಮ್ಮ ಮುದ್ಕನ್ಗಾದ್ರೂ ಮಾಡೋಗವ್ವ
ಪ್ರಾಯದವನ್ಗಾದ್ರೂ ಮಾಡೋಗವ್ವ
ನೀವು ಒಪ್ಪಿ ಮದ್ವೆ ಮಾಡುವವನ
ಮದ್ವೆ ಆಗುಕೆ ರೆಡಿಯಾಗಿವ್ನೀ

ಅಂದಳು. ತನಗೆ ಮದ್ವೆ ಮಾಡ್ವ ಸುದ್ದಿ ಕೇಳಿ ಹುಡ್ಗಿಗೆ ಖುಷಿ ಆಯ್ತು. ಇದ್ನ ಅಜ್ಜಿಗೆ ಹೇಳೋಣಾಂತ ಹೋದಳು.

ಗುಡು ಗಡುನೆ ಬಂದಳಂತೆ
ಅಜ್ಜಿ ಮುಂದೆ ನಿಂತಳಂತೆ

“ಅಜ್ಜ ಅಜ್ಜೀ ನನಗೆ ಈ ವರ್ಷ ಮದ್ವೆ ಮಾಡ್ತಾರಂತೆ. ಮುದ್ಕನ್ಗೆ ಮಾಡ್ಲೋ ಪರಾಯದವನ್ಗೆ ಮಾಡ್ಲೋ ಅಂತ ಅವ್ವ ಕೇಳಿದ್ಲು ಯಾರ‍್ಗಾನ ಮಾಡಿ ಅಂದೆ” ಅಂತಂದಳು. ಅಜ್ಜೀನು ಕಿವುಡಿ. ಅವಳ್ಗೆ ಊಟದೊತ್ತಾಗಿ ಹೊಟ್ಟೆ ಹಸಿದಿತ್ತು. ಹುಡ್ಗಿ ಮದ್ವೆ ಹೇಳಿದರೆ, ಮುದ್ಕಿ ಮೊಮ್ಮಗಳು ಬಂದು ನಿಂಗೆ ಬಿಸಿಟ್ಟು ಇಕ್ಕಲೋ ತಂಗ್ಳಿಟ್ಟು ಇಕ್ಕಲೋ ಅಂತ ಕೇಳ್ತಾ ಅವಳೆ. ನಾನು ಯಾವ ಹಿಟ್ಟು ಅಂತ ಕೇಳ್ಲೀ ಅನ್ಕಂಡು –

ಅಮ್ಮಿ ತಂಗಳಿಟ್ಟನಾರು ಇಕ್ಕು ಹೋಗು
ಬಿಸಿಟ್ಟನಾರು ಇಕ್ಕುಹೋಗು
ಯಾವ ಊಟ ಇಕ್ಕಿದರು
ಉಣ್ಣುದುಕೀಗ ರೆಡಿಯಾಗಿವ್ನಿ

ಅಂದಳು. ಈ ಹುಡುಗಿ ಜಯಮಾನ್ಕೆ ಪಕ್ಕದೂರಿನವರು ನೋಡುಕೆ ಬಂದರು, ನಡುಮಲ್ಲಿ ಕುಂತ್ಕಂಡರು. ಕಿವುಡು ಗೌಡ್ನ ಹೆಡ್ತಿ ಕಿಮಿ ಕೇಳ್ದಿದ್ರೂ ಭಾಳ ಚಮತ್ಕಾತಿ. “ಹೆಣ್ಣು ಕೇಳುಕೆ ನೆಂಟರು ಬಂದು ನಡ್ಮಲ್ಲಿ ಕೂತವರೆ. ನೆಂಟರ ಎದುರ‍್ಗೆ ಮನೇಲಿ ಸಾಮಾನಿಲ್ಲ ಅಂದ್ಬುಟ್ರೆ ಬಡವರ ಮನೆ ಹೆಣ್ಣು ಅಂದ್ಬುಡ್ತಾರೆ, ಜೋರಾಗಿ ಕೂಗಿದ್ರೆ ಕಿವುಡರ ಮನೆ ಹೆಣ್ಣು ಅಂದ್ಬುಡ್ತಾರೆ’ ಅಂದ್ಕಂಡು-

ಅಣ್ಣ ಕಾಲ್ ಸನ್ನೆ ಮಾಡ್ತಾಳೆ
ಕೈ ಸನ್ನೆ ಮಾಡ್ತಾಳೆ
ಕಾಲ್ ಸನ್ನೆ ಕೈಸನ್ನೆ ಮಾಡಿ
ಗಂಡನ ದಂಡಕೆ ಕರೆದಾಳಣ್ಣ

ಗಂಡ ಬಂದ. “ಯಜಮಾನ ಹೆಣ್ ಕೇಳುಕೆ ನೆಂಟರು ಬಂದು ನಡ್ಮಲ್ಲಿ ಕೂತವರೇ, ಮಲ್ಲಿ ಏನಂದ್ರೆ ಏನಿಲ್ಲ. ಈ ಹತ್ರುಪಾಯಿ ತಕ್ಕೊಂಡೋಗಿ ಪೇಟೇಲಿ ಸಾಮಾನು ತಕ್ಕಬನ್ನಿ’ ಅಂದಳು. ಕಿವುಡು ಗೌಡ್ನಿಗೆ ಹೆಡ್ತಿ ಹೇಳಿದ್ದು ತಿಳಿನಿಲ್ಲ “ನೋಡ್ದಾ, ನೀನು ಇದೂವರ‍್ಗೆ ನನ್ನ ಮಗಳ ಮದ್ವೆ ಆಗಲ್ಲ. ಹತ್ರುಪಾಯಿ ತಕ್ಕಂಡು ದೇಶಾಂತರ ಹೋಗಿ ಮಗಳ ಮದ್ವೆ ಆಯಿತ್ಲೇ ಬಾ ಅಂತಾ ಹೇಳ್ತಾ ಅವಳೆ. ನಂಗೆ ಈ ಬೊಗಟೆಗೆ ಬದ್ಕು, ಮಕ್ಕಳು ಯಾಕೆ’ ಅನ್ಕಂಡು ಹೊರಟೇಬಿಟ್ಟ !

ಹಳೆಯ ಕಂಬಳಿ ತಗದನಣ್ಣ
ಹತ್ತು ರೂಪಾಯಿ ಈಸಿಕಂಡ
ದೇಶಾಂತರ ಹೊರಟೇಬಿಟ್ಟ.

ಊರಿಂದಾಚೆ ಕುಂಬಳಗೂಡಿಗಂಟ ಹೊಂಟೋದ. ಪಕ್ಕದಲ್ಲಿ ಒಳಗೆರೆ. ಒಂದು ಮರ‍್ದ ಕೆಳಗೆ ಕುಂತ್ಕಂಡ. ಕುಂಬಳಗೂಡವರು ಕುರುಬಗೌಡರು ಎಂಟ್ನೂರು ಕುರಿ ಹೊಡ್ಕಂಡು ಅಲ್ಲಿಗ್ಬಂದ್ರು. ಹನ್ನೆರ‍್ಡ್ ಗಂಟೆ ಆಯ್ತು. ಊಟ ಆಗಿರ‍್ನಿಲ್ಲ. ಊಟಕ್ಕೆ ಹೊಗ್ಬೇಕಾದ್ರೆ ಕುರಿ ನೋಡ್ಕಾಕೆ ಒಬ್ರು ಬೇಕಾಗಿತ್ತು. ಹೊನ್ನಾಲಪ್ಪ ಮರದಡಿ ಕುಂತಿದ್ದನ್ನ ನೋಡಿ, ಕುರಿಗೆ ನೀರ್ ಕುಡಿಸಿ, ಒಳಗೆರೆಲಿ ಬಿಟ್ಟು ಗೌಡ್ನ ಹತ್ರ ಬಂದು, “ಊಟ ಮಾಡ್ಕ ಬರೂವರ‍್ಗೆ ನಮ್ ಕುರಿಯ ಹುಷಾರಾಗಿ ನೋಡ್ಕಂಡ್ರೆ ಎಂಟ್ನೂರ್ ಕುರಿ ಒಳಗೆ ಒಂದ್ ಕುಂಟ್ ಕುರಿ ಕೊಡ್ತೀಮಿ” ಅಂದರು. ಗೌಡ ಮಾತಾಡ್ದೆ “ಏನು” ಅನ್ನುವಂಗೆ ಮೇಲ್ಕೆ ಅಂತಿ ನೋಡ್ದ. ಗೌಡ ಸುಮ್ಗಿದ್ನ ಕಂಡು ಕುರಿ ಮೇಯಿಸುಕ್ಕೆ ಒಪ್ಕಂಡ ಅಂತ ತಿಳ್ಕಂಡು ಅವರು ಊಟಕ್ಕೆ ಹೊಂಟೋದ್ರು. ಕುರಿ ಬುಟ್ಬುಟ್ಟು ಇವರ‍್ಯಾಕೆ ಹೊಂಟೋದ್ರು ಅಂತ ಯೇಚ್ನೆ ಮಾಡ್ತ ಗೌಡ ಕುಂತಿದ್ದ. ವಸಿ ಹೊತ್ತಾಯ್ತು, ಊಟ ಮಾಡ್ಕ ಬಂದು ಕುರಿ ಲೆಕ್ಕ ಹಾಕಿದ್ರು. ಎಲ್ಲ ಸರಿಯಾಗಿದ್ದೊ. ಒಂದೂ ಕಡ್ಮೆ ಇರ‍್ನಿಲ್ಲ. ಹಿಂದಿನ ಕಾಲ್ದವರು ಆಡಿದ ಮಾತ ಕಳ್ಕ ಬಾರ‍್ದು ಅಂತ –

ಎಂಟುನೂರು ಕುರಿಯ ಒಳಗೆ
ತಡಕಿ ಹುಡುಕಿ ಹಿಡಿದರಣ್ಣ
ಕುಂಟು ಕುರಿಯ ಹಿಡಿದರಂತೆ
ಗೌಡನ ತಕೆ ತಂದರಂತೆ

“ಗೌಡಾ, ಒಂದೂ ಕಡ್ಮೆ ಆಗದಂಗೆ ಕುರಿ ನೋಡ್ಕಂಡಿದ್ದಯಿ. ಆಡಿದ ಮಾತ್ನಂಗೆ ತಕೋ ಕುರಿಯ” ಅಂದ್ರು. ಕುಂಟುಕುರಿ ನೋಡಿ ಗೌಡನಿಗೆ ಕೋಪ ಬಂತು. “ನೋಡ್ದಾ ಇವರಾ, ನಾನು ಕುಂತ ಜಾಗಬಿಟ್ಟು ಮೇಲ್ಕೆ ಎದ್ದೋಗ್ನಿಲ್ಲ. ಕುರಿ ಕಾಲು ಮುರಿದಿದ್ದೀ ಅಂತ ಬಂದವರಲ್ಲಾ’

ಅಂತ –

ಕಲ್ಲು ನಾನು ತಗಿಯಾನಿಲ್ಲ
ಕುರಿಯ ಕಾಲು ಒಡಿಯಾನಿಲ್ಲ
ನನ್ನಾಣುಗು ನಾನು ಒಡಿಯಾನಿಲ್ಲ
ಕಣ್ಣಾಣಗು ನಾನು ಒಡಿಯಾನಿಲ್ಲ

ಅಂದ. ಅವರು ಇನ್ನೂ ಹೆಚ್ಚಿನ ಕಿವುಡರು. “ಕುರಿ ಕಾದಿದ್ಕೆ ಗೌಡ ಒಳ್ಳೆ ಕುರಿ ಕೇಳ್ತಾ ಅವ್ನೆ’ ಅಂದ್ಕಂಡು –

ಅಣ್ಣ ಇಷ್ಟವಾದರೆ ತಕ್ಕಳಬಹುದು
ಕಷ್ಟವಾದರೆ ಬಿಟ್‌ಬಿಡಬಹುದು

ಅಂದರು, ಕೊನ್ಗೆ ಅವರ‍್ಗೂ ಗೌಡನಿಗೂ ಜಗಳ ಅಂಟ್ಕತು, ಕಿವುಡ ಕಿವುಡರ ಜಗಳ ದೊಡ್ಡದಾಯ್ತು. ಊರ ಮುಂದ್ಲ ಶ್ಯಾನುಭೋಗನ ತಾಕೆ ಬಂದರು.

ಅಣ್ಣ ಊರ ಮುಂದಾಲ ಶಾನುಭೋಗ್ನ
ಮನೆಗಾದರು ಬಂದರಣ್ಣ

ಶಾನುಭೋಗನೂ ಕಿವುಡ. ಶ್ರಾವಣ ಶನಿವಾರ ದೇವರ ಪೂಜ್ಗೆ ದಾರಿಲಿ ತುಳಸಿ ಎತ್ತಿದ್ದ. “ಬುದ್ಧಿ ಬುದ್ಧೀ, ನಾನು ಕುಂತ್ ಜಾಗ ಬುಟ್ಟು ಏಳ್ನಿಲ್ಲ. ಕುರಿ ಕಾಲು ಮುರಿದಿದ್ದೀ ಅಂತ ಅವ್ರೆ’ ಅಂದ ಗೌಡ –

ಸ್ವಾಮಿ ನನ್ನಾಣುಗು ನಾನು ಒಡಿಯಾನಿಲ್ಲ
ಕಣ್ಣಾಣುಗು ನಾನು ಒಡಿಯಾನಿಲ್ಲ.

ಕುರುಬ ಗೌಡರೂ ದೂರು ಹೇಳಿದರು : “ನೋಡಿ ಬುದ್ಧೀ, ನಾಮು ಹೇಳಿದ್ದು ಕುಂಟುಕುರಿ, ಇವನೀಗ ಒಳ್ಳೆ ಕುರಿ ಕೇಳ್ತಾ ಅವ್ನೆ. ಎಲ್ಲಿಂದ ಕೊಡ್ಮಾ” ಶಾನುಭೋಗನಿಗೆ ಇವರು ಹೇಳಿದ್ದು ಅವನು ಹೇಳಿದ್ದು ಯಾವುದೂ ಸರಿಯಾಗಿ ಕೇಳ್ನಿಲ್ಲ. ತುಳಸಿ ಎತ್ತೂದ್ ಕಂಡು ಬೈತಾ ಅವ್ರೆ ಅನ್ಕಂಡ. “ಏನ್ರೋ, ದಾರಿವಳಗೆ ನನ್ನ ತುಳಸಿ ಎತ್ತಬೇಡಿ ಅಂತೀರಾ ? ಬ್ರಾಮ್ಮರನ ಕಂಡ್ರೆ ರೈತರಿಗೆ ಭಾಳ ಸರಾಗ. ತುಳ್ಸಿ ಗಿಡ್ಕೆ ನಿಮ್ಮೆಡ್ತಿರಾಗ್ಲೀ ನಿಮ್ತಾಯಿ ತಂದೇರಾಗ್ಲೀ ನೀರಾಕಿ ಬೆಳೆದಿದ್ರಾ ? ದಾರಿಲಿ ಬೆಳೆದಿತ್ತು. ಎತ್ಕತಾ ಇವ್ನಿ. ನಿಮ್ಗೇನ್ ನಷ್ಟ ? ಬನ್ನಿ  ಮನೇ ಮೂಲೇಲಿ ನ್ಯಾಯ ತೀರಿಸ್ತೀನಿ’ ಅಂದ. ಅವರು ಬಂದ್ರು. ಹುಷಾರುಗಾರ ಶ್ಯಾನುಭೋಗ. ಅವರ‍್ನೆಲ್ಲಾ –

ಮನೆಯ ಮೂಲ್ಗೆ ಸೇರಿಸ್ಕಂಡು
ಬೀಡೆ ದೊಣ್ಣೆ ಎಳೆದೇಕಂಡ
ಬೀಡೆ ದೊಣ್ಣೆ ಎಳದನಂತೆ
ಬುರುಡೆ ನೋಡಿ ಬುಟ್ಟನಂತೆ
ಬೀಡೆ ದೊಣ್ಣೆ ಏಟು ಬಿದ್ದು

ಆ ಊ ಎಂದರಂತೆ
ಟುಮ್ಮ ಟುಮ್ಮನೆ ಕುಣಿದರಂತೆ
ತಕ್ಕ ತಕ್ಕನೆ ನೆಗೆದಾರಂತೆ
ದೊಣ್ಣೆ ಏಟು ಬಿದ್ದವಂತೆ
ಕಿವುಡು ಅಲ್ಲಿ ಇಳಿದೇ ಹೋಯ್ತು.*      ಕಿವುಡ, ಲಿಂಗಯ್ಯ ಡಿ. ಕರ್ನಾಟಕ ಜನಪದ ಕಾವ್ಯಗಳು, ದಿನಕರ ಪ್ರಕಾಶನ ಬೆಂಗಳೂರು ೧೯೭೬ ಪು.ಸಂ.