ಮೀಸಲ ಮೀಸಲ ಯಲ್ಲಮ್ಮಗೆ ಯಾವುದು ಮೀಸಲ
ರಾಮನ ಮುಂದೆ ಒಡದು ಹೇಳವ್ವ ಹೆಚ್ಚಿನ ಮೀಸಲ ಪಲ್ಲ
ಹೂ ನನಗ ಮೀಸಲ ರಾಮ
ಹಣ್ಣು ನನಗ ಮೀಸಲ
ಹೂವು ಅಂಬುದು ಹುಳುವಿನೆಂಜಲ
ಹಣ್ಣೆಂಬುದು ನೊಣವಿನೆಂಜಲ || ಹ್ಯಾಂಗ ಮೀಸಲ ೧
ಕಾಯಿ ನನಗ ಮೀಸಲ ರಾಮ
ಕರ್ಪೂರ ನನಗ ಮೀಸಲ
ಕಾಯಿ ಎಂಬುದು ಕಲ್ಲಿನೆಂಜಲ
ಕರ್ಪೂರೆಂಬುದು ಕಡ್ಡಿ ಎಂಜಲ || ಹ್ಯಾಂಗ ಮೀಡಲ ೨
ಸೀರಿ ನನಗೆ ಮೀಸಲ ರಾಮ
ಕುಪ್ಪಸ ನನಗ ಮೀಸಲ
ಸೀರಿ ಎಂಬುದು ಲಾಳಿ ಎಂಜಲ
ಕುಪ್ಪಸ ಎಂಬುದು ಕತ್ರಿ ಎಂಜಲ || ಹ್ಯಾಂಗ ಮೀಸಲ ೩
ಹುಗ್ಗಿ ನನಗ ಮೀಸಲ ರಾಮ
ಹೋಳಿಗಿ ನನಗ ಮೀಸಲ
ಹುಗ್ಗಿ ಎಂಬುದು ಹುಟ್ಟಿನೆಂಜಲ
ಹೋಳಿಗೆಂಬುದು ಕಲ್ಲಿನೆಂಜಲ || ದೇವಿ ಹ್ಯಾಂಗ ಮೀಸಲ ೪
ಭಾವ ನನಗ ಮೀಸಲ ರಾಮ
ಭಕ್ತಿ ನನಗ ಮೀಸಲ
ಕಾಡಬ್ಯಾಡಪ ತಾಯಿನ
ಕಾಡುದು ಧರ್ಮ ಅಲ್ಲಪ ಪರಶುರಾಮ || ಅದೇ ನನಗ ಮೀಸಲ ೫
Leave A Comment