ಶ್ರೀ ಪು.ತಿ.ನ. ಅವರು ಪ್ರಧಾನವಾಗಿ ಜಿಜ್ಞಾಸುವಾದ ಕವಿ. ಚೆಲುವನ್ನು ಕಂಡೊಡನೆ ಅದರಲ್ಲಿ ಸೌಂದರ್ಯತೃಷೆಯಿಂದ ದುಢಮ್ಮನೆ ಧುಮುಕಿ ಅದರ ‘ರಸಪಾನಸ್ನಾನ’ದಿಂದ ಸೌಂದರ್ಯ ಸಮಾಧಿಯಲ್ಲಿ ಮುಳುಗಿ ಮೂಕವಾಗುವುದು ಇವರ ರೀತಿಯಲ್ಲ; ಸೌಂದರ್ಯಾನುಭವದ ಉನ್ಮಾದವನ್ನು ನಾದದ ಹೊನಲಿನಲ್ಲಿ ಹರಿಸಿ ಓದುಗರನ್ನು ತೆಕ್ಕನೆಯ ರಸದ ಮಡುವಿಗೆ ಸೆಳೆವ ಮೋಡಿಯ ರೀತಿಯೂ ಇವರದಲ್ಲ. ಎಂದರೆ ಇವರ ಸೌಂದರ್ಯಾನುಭವದಲ್ಲಿ  ಈ ಎರಡು ಪರಿಗಳೂ ತಕ್ಕ ಪ್ರಮಾಣದಲ್ಲಿ ಇಲ್ಲವೆಂದು ಈ ಮಾತಿನ ಅರ್ಥವಲ್ಲ. ಆದರೆ ವಸ್ತುವಿನ ಸೊಗಸನ್ನು ಮನಸಾರೆ ಅನುಭವಿಸಿದರೂ, ಅದರ ಅನುಭವದ ಜೊತೆಯಲ್ಲಿಯೇ, ಆ ಅನುಭವವನ್ನೇ ಪ್ರತ್ಯೇಕಿಸಿ, ಅದನ್ನು ತಮ್ಮ ಚಿಂತನೆಯ ವಸ್ತುವನ್ನಾಗಿಸಿ ಅದರಿಂದಲೂ ರಸವನ್ನು ಹಣಿಸುವ ಚಿಂತನಶೀಲತೆಯೆ ಇವರ ಕಾವ್ಯದ ಮುಖ್ಯ ಗುಣ ಎನಿಸುತ್ತದೆ. ಹೀಗಾಗಿ ಇವರ ಕಾವ್ಯ ರಸಾನುಭವ ಹಾಗೂ ರಸಜಿಜ್ಞಾಸೆ ಎರಡನ್ನೂ ಕಾವ್ಯರೂಪದಲ್ಲಿ ಹಿಡಿದು ನೀಡುವ ರೀತಿಯದು.

ಪು.ತಿ.ನ. ಅವರು ಚಿಂತನಶೀಲರಾದ ಕವಿಗಳು. ಏನು, ಏಕೆ ಎನ್ನುವುದೇ ಇವರ ಸ್ವಭಾವ. ಅವರೇ ಒಂದೆಡೆ ಹೇಳಿಕೊಂಡಿದ್ದಾರೆ.-

ಎನ್ನದು ತತ್ವಾನ್ವೇಷಣ ಕಾರ‍್ಯ:
ಏನೇತಕೆ ಎಂಬುದೆ ಹವ್ಯಾಸ
ಇದನುಳಿದಾಗದು ಪದವಿನ್ಯಾಸ?
[1]

ಎಂದು; ಹೌದು, ಏನು, ಏಕೆ ಎಂಬುದೇ ಇವರ ಹವ್ಯಾಸ. ‘ಇದನುಳಿದಾಗದು ಪದವಿನ್ಯಾಸ!’ ಈ ಕಾರಣದಿಂದಲೇ ಲೋಕದ ವಸ್ತುಗಳು ನೀಡುವ ನಲವನ್ನು ಅದು ತಮಗೆ ಲಭಿಸಿದಂತೆ  ಸುಮ್ಮನೆ ಒಪ್ಪಿಕೊಂಡು, ಅದನ್ನು ತನ್ನ ಹಾಗೂ ಪರರ ಆನಂದಕ್ಕಾಗಿ ಎತ್ತಿ ಹಿಡಿಯುವಷ್ಟರಲ್ಲೇ ಇವರ ಕಾವ್ಯ ನಿಲ್ಲದೆ, ಆ ವಸ್ತುಗಳು ಏಕೆ ತನ್ನ ಮನಸ್ಸಿನ ಮೇಲೆ ಈ ರೀತಿಯಾದ ಪರಿಣಾಮವನ್ನುಂಟುಮಾಡುತ್ತದೆ? ಎಂದು ಚಿಂತಿಸಿ ಅದಕ್ಕೆ ಉತ್ತರವನ್ನು ಕಂಡುಕೊಂಡು ನಲವನ್ನು ಪಡೆಯುವುದು ಈ ಜಿಜ್ಞಾಸೆಯ ಸ್ವರೂಪ.

ಇಂಥ ವಿಚಾರಶೀಲರಾದ ಕವಿ ಕನ್ನಡದಲ್ಲಿ ಬೇರೊಬ್ಬರಿಲ್ಲ.  ಇಂಥ ವಿಚಾರಶೀಲತೆಯಿರುವುದರಿಂದ ಕಾವ್ಯದ ರಸತ್ವವನ್ನು ಕುಂಠಿತಗೊಳಿಸುವ ಬುದ್ಧಿಯ ಪ್ರಾಧಾನ್ಯತೆ ಇವುಗಳಲ್ಲಿದ್ದು, ಇವರ ಕವಿತೆ ಒಂದು ರೀತಿಯಲ್ಲಿ ಕ್ಲಿಷ್ಟವಾಗಿ ಕಾಣುತ್ತದೆ ಎಂದು ಹಲವರು ಆಕ್ಷೇಪಿಸಿರುವುದುಂಟು. ನಿಜ, ಇವರ ಕವಿತೆಗಳಲ್ಲಿ ಒಂದು ರೀತಿಯ ಕ್ಲಿಷ್ಟತೆಯೇನೋ ಕಂಡುಬರುತ್ತದೆ. ಆದರೆ ಈ ಕ್ಲಿಷ್ಟತೆ ಬಹುಮಟ್ಟಿಗೆ ಭಾಷೆಗೆ ಸಂಬಂಧಿಸಿದ್ದೇ ಹೊರತು, ಭಾವ ಅಥವಾ ಚಿಂತನೆಗೆ ಸಂಬಂಧಿಸಿದ್ದಲ್ಲ. ಇವರ ಕೃತಿಗಳಲ್ಲಿ ಕಂಡುಬರುವ ಚಿಂತನೆ ರಸಾನುಭವದ ವಲಯದಿಂದ ಹೊರತಾದುದಲ್ಲ. ಈ ಚಿಂತನೆ ಕವಿಯ ಕಾವ್ಯಾನುಭವದ ಕಾವಿನಲ್ಲೆ ನಡೆದುದಾದುದರಿಂದ, ಚಿಂತನೆಯ ರಸನೆಯಲ್ಲಿ ಚರ್ವಿತವಾದ ಚಿಂತನಾಪ್ರಸೂತವಾದ ರಸಾನುಭವವೇ ಇವರ ಕಾವ್ಯದ ಜೀವಾಳ ಎನ್ನಬಹುದು.

ವಿಜ್ಞಾನಿಯ ದೃಷ್ಟಿ ಮತ್ತು ಕವಿಯ ಹೃದಯವುಳ್ಳ ಈ ಜಿಜ್ಞಾಸುವಾದ ಕವಿ, ನಲವನ್ನು ಪಡೆಯುವ ಸಂದರ್ಭಗಳಲ್ಲೆ ಆ ನಲವಿನ ಸೆಳೆತದಿಂದಲೂ ತೆಕ್ಕನೆಯೆ ತನ್ನನ್ನು ಬೇರ್ಪಡಿಸಿಕೊಂಡು, ಆ ನಲವನ್ನು ಪರಿಭಾವಿಸುವಂತಹ ಮುಕ್ತಿಪ್ರಾಚುರ‍್ಯವುಳ್ಳ ಈ ಕವಿ, ತನ್ನಲ್ಲಿ ನಡೆಯುವ ಕವಿಕರ್ಮವನ್ನು ಜಿಜ್ಞಾಸೆಗೆ ಒಳಪಡಿಸುವುದರಿಂದ ನಮಗೆ ಕಾವ್ಯಸೃಷ್ಟಿಯನ್ನು ಕುರಿತು ಹಲವು ಉಜ್ವಲವಾದ ವಿಚಾರಗಳು ವಿನೂತನವೆಂಬಂತೆ ಅವರ ಹಲವು ಕವಿತೆಗಳಲ್ಲಿ ಮತ್ತು ಹಲವು ಮುನ್ನುಡಿಗಳಲ್ಲಿ ಅಭಿವ್ಯಕ್ತಿಯನ್ನು ಪಡೆದಿದೆ:

“ಮನುಷ್ಯನ ಹಂತದಲ್ಲಿ ಪಂಚಭೂತಗಳ ಮೇಲೆ ತನ್ನ ಪ್ರಭುತ್ವವನ್ನು ನೆಲೆಗೊಳಿಸಲು ಹವಣಿಸುತ್ತಿರುವ ಜೀವಸತ್ವಕ್ಕೆ ಸ್ವಾಪಸ್ವಪ್ನ ಜಾಗರಗಳೆಂಬ ಸ್ಥಿತಿತ್ರಯಗಳಲ್ಲಿ ಸಂಪೂರ್ಣ ತೃಪ್ತಿಯಿಲ್ಲ. ಅದರ ಪ್ರಯತ್ನವೆಲ್ಲ ಹದುಳದತ್ತ, ಚಿಂತೆಯೆಲ್ಲ ಸುಖದತ್ತ. ಆ ನೆಲೆಯನ್ನು ಅದು ಇಗೊ ಮುಟ್ಟಿತೆನ್ನುವಷ್ಟರಲ್ಲಿ, ಆನಂದವೆಂಬ ಮತ್ತೊಂದು ಬೆಲೆ ಅದರ ಅನುಭವಕ್ಕೆ ಬಂದು, ತುರೀಯವೆಂಬ ಅವಸ್ಥಾವಿಶೇಷವೂ ತನಗುಂಟೆಂಬುದನ್ನು ತೋರಿ, ಅದನ್ನು ಸುಖಾಭೀಪ್ಸೆಯಿಂದ ವಂಚಿಸುತ್ತದೆ. ಮನುಷ್ಯವರ್ಗದಲ್ಲಿ ಉಚ್ಚತಮವಾದ ನೆಲೆಗೇರಿದ ಚೈತನ್ಯಸತ್ವದ ಹಾರೈಕೆಯಲ್ಲ ಇನ್ನು ಈ ಆನಂದದತ್ತ….. ಇನ್ನು ಅದರ ಪ್ರಾಪ್ಯ ರಸಸ್ಥಿತಿ. ಈ ಸ್ಥಿತಿಗೆ ಪ್ರಥಮ ಸೋಪಾನದಂತಿದೆ ಕಲೆ. ಅಲ್ಲಿ ಮೊದಲಿಡುವ ರಸಾವಸ್ಥೆಯ ಪರಿಧಿಯಲ್ಲಿ ಹೊಂಚುವ ಭವ ಕಾವ್ಯವೆನ್ನಿಸಿಕೊಂಡು ಪ್ರತಿಭೆಯ ಮೆರುಗನ್ನು ತಳೆದು ಸಮ್ಮೋಹನವಾಗುತ್ತದೆ.”[2] ಇಂಥ ನಲವನ್ನು ಹಿಡಿದುಬಿಡುವಾಟದಲ್ಲಿ ತೊಡಗಿರುವ ಕೋಗಿಲೆ ಕವಿ. ಜೀವನದ ನೂರಾರು ಲೌಕಿಕ ಮೌಲ್ಯಗಳ ನಡುವೆ ಹರಡಿಹೋಗಿರುವ, ಬೆರೆತು ಹೋಗಿರುವ ಬೆಲೆಯನ್ನು ಪ್ರತ್ಯೇಕಿಸಿ ಹಿಡಿದುಕೊಡುವ ಕೌಶಲವೇ ಕವಿಯದು. ದೇಗುಲವನ್ನು ಕುರಿತು “ವಿಷಯಲಗ್ನಾನಂದವಂ ಬೇರ್ಪಡಿಸಲಾದ ತಂತ್ರಾಲಯ” (ಮಲೆದೇಗುಲ: ಪು. ೨೭) ಎಂದು ಅವರು ಹೇಳಿರುವ ಮಾತೇ ಕವಿಗೂ, ಕಾವ್ಯಕ್ಕೂ ಅನ್ವಯಿಸುತ್ತದೆ. ವಿಷಯಲಗ್ನವಾಗಿರುವ ಆನಂದವನ್ನು ಬೇರ್ಪಡಿಸುವ ಕವಿಯನ್ನು ಪು.ತಿ.ನ. ಅವರು, ಒಂದು ರೇಡಿಯೋ ಎನ್ನುತ್ತಾರೆ, ಒಂದು ಸಾನೆಟ್ಟಿನಲ್ಲಿ-

ಯೋಜನಗಳಾಚೆಯೊಳು ಎಲ್ಲಿಯೋ ಜನಿಯಾಂತು
ಮಿಂಚಿನಣುಗಳನೇರಿ, ಸಕಲ ದಿಜ್ಞಂಡಲವ
ಸಂಚರಿಸುತಂತರದಿ ಮೌನದಿಂದ ಮಿಡಿಯುತಿಹ
ಸೋಜಿಗದ ಗೀತವನು ಹಿಡಿಯಿತುಜ್ವಲಗೊಳಿಸಿ
ಶ್ರೋತ್ರಪಥಕೈದಿಸುವ ಯಂತ್ರದೊಲು ಹೇ ಕವಿಯೆ,

ಬಾಳುಬಾಳುಗಳಾಚೆ ಬ್ರಹ್ಮಾಂಡ ಹೃದಯಾಂತ
ರಾಳದೊಳದು ಸಂತತಂ ಸಂಜನಿಸಿ, ಆನಂದ

ಮಾತೃಕೆಯೆ ತಾನಾಗಿ, ವಿಶ್ವಕೆಲ್ಲಕು ಹರಡಿ,
ವಿಕೃತಪದರಗಳಲ್ಲಿ ಮೌನವಾಗಿ ಸಶಿವದ

ಗೀತವನು ಕರಣಗೋಚರಮಾಗೆ ಸ್ಪಂದಿಸುತ
ಚೇತನರೊಳಾ ಚಿದಾನಂದವನೆ ಮರುಕೊಳಿಪ,
ಪ್ರಕೃತಿ ಶಿಲಾಲಿಪಿಯು ಸಮೆದ, ಚಿದ್ಯಂತ್ರ ನೀನಲಾ!

ಆಧುನಿಕ ಯಂತ್ರವಾದ ‘ರೇಡಿಯೋ’ವನ್ನು ಹೀಗೆ ಕವಿಯ ಪಾತ್ರಕ್ಕೆ ಒಂದು ಪ್ರತಿಮೆಯನ್ನಾಗಿ ಬಳಸಿಕೊಂಡು ಹೇಳಿರುವುದು ಬಹುಶಃ ಇದೇ ಮೊದಲೆಂದು ತೋರುತ್ತದೆ. ಹೌದು, ಕವಿ ಒಂದು ರೇಡಿಯೋ; ಸಹಜವಾಗಿ ‘ಆನಂದಮಾತೃಕೆಯೆ ತಾನಾಗಿ ವಿಶ್ವಕೆಲ್ಲಕು ಹರಡಿ’ದ್ದರೂ ವಿಕೃತಿಯ ಪದರಗಳಲ್ಲಿ ಮೌನವಾಗಿರುವ ಶಿವದ ಗೀತವನ್ನು ಕರಣಗೋಚರವಾಗುವಂತೆ ಸ್ಪಂದಿಸುತ್ತ, ಸಹೃದಯರಲ್ಲಿ ಆ ಚಿದಾನಂದವನ್ನೇ ಮರುಕೊಳಿಸುವ ಆ ದಿವ್ಯ ವಿಜ್ಞಾನಿಯಾದ ಪ್ರಕೃತಿ ಸವೆದ ಒಂದು ಚಿದ್ಯಂತ್ರ ಈ ಕವಿ. ಅಷ್ಟೇ ಅಲ್ಲ ಕವಿ ಒಬ್ಬ ರಸವಿಧಾತನೂ ಹೌದು ಎನ್ನುತ್ತಾರೆ ಪು.ತಿ.ನ. ಒಂದೆಡೆ. ‘ಕವಿ’ ಎಂಬ ನಾಟಕದ ಧ್ಯಾನಶ್ಲೋಕವೇ ಕವಿ ಮಹಿಮೆಯ ಸ್ತವನ-

ಒಂದು ಮೊಗದೊಳು ಚೆಲುವು
ಮತ್ತೊಂದರೊಳು ನಲವು

ರಸಿಕರೊಲುಮೆಯೆ ಬಳಕೆಗೆಂಥ ನಾಣ್ಯ!
ಇದನು ಟಂಕಿಸುತ್ತಿರುವ ಕವಿಯೆ ಮಾನ್ಯ
ನಮೋ ನಮೋ ಆತನಿಗೆ
ನಮೋ ರಸವಿಧಾತನಿಗೆ
[3]

ಕವಿಯ ಅನುಭವದ ನಾಣ್ಯಕ್ಕೆ ಎರಡು ಮುಖ. ಒಂದು ಚೆಲುವು ಮತ್ತೊಂದು ನಲವು. ಸೌಂದರ‍್ಯ ಆನಂದಗಳ ಮುದ್ರೆಯನ್ನು ತಳೆದು ಕವಿಯ ಅನುಭವದ ಟಂಕಸಾಲೆಯಿಂದ ಹೊರಬಂದ ಈ ನಾಣ್ಯ ರಸಿಕರ ಒಲುಮೆಯ ಲೋಕದಲ್ಲಿ ಚಲಾವಣೆಯಾಗತಕ್ಕದ್ದು. ಹೀಗೆ ಹೊಸ ಹೊಸ ಚೆಲುವು-ನಲವಿನ ಮೌಲ್ಯದ ನಾಣ್ಯಗಳಿಂದ ರಸಿಕಲೋಕದ ಭಾವಸಂಪತ್ತನ್ನು ಹೆಚ್ಚಿಸುವ ರಸಬ್ರಹ್ಮನೇ ಕವಿ-ಎನ್ನುತ್ತಾರೆ ಪು.ತಿ.ನ. ಮತ್ತೊಂದೆಡೆ ಕವಿ-ಕಾವ್ಯರಹಸ್ಯವನ್ನು ಕುರಿತು “….. ಚಲಿಸುವ ಮನಸ್ಸಿನ ಚಲನವನ್ನು ಪಳಗಿಸಿ ಸ್ಥಿಮಿತಕ್ಕೆ ತಂದು ಮಡುಗಟ್ಟುವಂತೆ ನಿಲ್ಲಿಸುವ ಕುಶಲಿಯನ್ನು ಮನುಷ್ಯವರ್ಗವೇ ಆದರಿಸುತ್ತದೆ. ಇಂಥ ಕುಶಲ ಶಿಲ್ಪಿಗಳ ವರ್ಗಕ್ಕೆ ಸೇರಿದವನು ಕವಿ. ಅವನ ಕಾವ್ಯದಿಂದ ನಾವು ಬಯಸುವುದು ಆತ ನಮ್ಮ ಚಲಮನಸ್ಸಿನ ಚಲನವನ್ನು ಭಾವಗಳಿಂದ ಪಳಗಿಸಿ ರಸದಲ್ಲಿ ಸ್ಥಿಮಿತಗೊಳಿಸುವ ಸಾಮರ್ಥ್ಯವನ್ನು…. ನಮ್ಮ ಮನಸ್ಸನ್ನು ನಮಗೆ ತಂದೊಪ್ಪಿಸುವುದಕ್ಕೆ ಕವಿ ಹುಡುಕುವ ವಿಷಯ ತಂತ್ರವೇ ಕಾವ್ಯ”[4] ಎಂದು ಸರಳ ಸುಂದರವಾದ ಮಾತುಗಳಲ್ಲಿ ಕಾವ್ಯರಹಸ್ಯವನ್ನೆ ತೆರೆದು ತೋರಿದ್ದಾರೆ. ನಮ್ಮದೇ ಆದ ಈ ಮನಸ್ಸು ನಮ್ಮದಲ್ಲದ ರೀತಿಯಲ್ಲಿ ಸಂತತವೂ ಅಲೆಯುತ್ತಾ ಕಂಡ ಕಂಡ ವಿಷಯಗಳಲ್ಲಿ ರಮಿಸುತ್ತಿದೆ. ಇಂಥ ಮನಸ್ಸನ್ನು ವಿಷಯ ಸಂಗದಿಂದ ಬಿಡಿಸಿ ಒಂದೆಡೆ ನಿಲಿಸಲೆಂದಲ್ಲವೇ ಜಪ, ತಪ, ಧ್ಯಾನ, ಪೂಜೆ, ಪ್ರಾರ್ಥನೆ ಎಲ್ಲವೂ. ಬಸವಣ್ಣನವರಂಥ ಸಾಧಕರ ಜೀವನದ ಒಳತೋಟಿಯ ವಚನಗಳಲ್ಲಿ ಕಾಣುವುದು ಈ ಸ್ವಚ್ಛಂದ ಮನಸ್ಸಿನ ಚಲವನ್ನು ಒಂದೆಡೆ ತರಲಾರದೆ ಹೋದ ಕೊರಗಿನ ಉದ್ಗಾರಗಳನ್ನೆ. ಊರ್ಧ್ವಾಭಿಮುಖಿಯಾದ ಎಲ್ಲ ಚೇತನವೂ ಚಲಮನಸ್ಸಿನ ಚಲನವನ್ನು ಸ್ಥಿಮಿತಗೊಳಿಸಲು ಹೋರಾಡಬೇಕಾಗುತ್ತದೆ. ಈ ಪ್ರಯತ್ನದಲ್ಲಿ ನಮ್ಮ ಮನಸ್ಸನ್ನು ಸಂಪೂರ್ಣ ನಮ್ಮದನ್ನಾಗಿಸುವುದೇ ಯೋಗ. ಕಾವ್ಯದಲ್ಲಿ ಕವಿ ನಲವಿನ ಮೂಲಕ ಅಭಿವ್ಯಕ್ತಗೊಳಿಸುವ ಚೆಲುವು, ಕ್ಷಣಕಾಲವಾದರೂ ಹರಿದಾಡುವ ಮನಸ್ಸನ್ನು ಭಾವಗಳಿಂದ ಪಳಗಿಸಿ ರಸದಲ್ಲಿ ಸ್ತಿಮಿತಗೊಳಿಸುವುದರಿಂದ  ಕಾವ್ಯವೂ ಈ ಅರ್ಥದಲ್ಲಿ ಒಂದು ಯೋಗವೆ. ಸೌಂದರ್ಯದ ರಹಸ್ಯವೂ ಇದೇ. ಕವಿ ಹೀಗೆ ಭಾವಗಳ ಮುಖೇನ ನಲವನ್ನು ಅಥವಾ ರಸವನ್ನು ನಮಗೆ ನೀಡುವ ಕೌಶಲವೇ ಪ್ರತಿಭೆ. ಈ ಪ್ರತಿಭೆಯನ್ನು ಕುರಿತು ನಮ್ಮ ಆಲಂಕಾರಿಕರು ನವನವೋನ್ಮೇಷಶಾಲಿಯಾದ ಪ್ರಜ್ಞೆ ಎಂದು ಹೇಳಿದ್ದಾರೆ. ಈ ಮಾತಿನ ವಿವರಣೆ ಪು.ತಿ.ನ. ಅವರಿಂದ ಒಂದು ಹೊಸ ಮೆರುಗನ್ನು ಪಡೆದಿದೆ ಒಂದೆಡೆ: “ಕಾವ್ಯ ಎಂಬ ಮಾತನ್ನು ಉಚ್ಛರಿಸಿದ ಕ್ಷಣವೇ ಮತ್ತೆರಡು ಮಾತುಗಳು ಮೂಡುತ್ತದೆ; ಪ್ರತಿಭೆ ಮತ್ತು ಧ್ವನಿ. ಕವಿಯ ಪರವಾಗಿ ಪ್ರತಿಭೆ, ಸಹೃದಯನ ಪರವಾಗಿ ಧ್ವನಿ; ಇಲ್ಲಿ ‘ಪ್ರತಿಭೆ’ಯಂತೆ ಆಗಮನ, ಅಲ್ಲಿ ‘ಧ್ವನಿ’ಯಂತೆ ನಿರ್ಗಮನ. ನಡುವೆ ಮಹತ್ತರವಾದ ಕಾವ್ಯ ಕೋಲಾಹಲ”[5] ಎಂದ ಸೂಕ್ತಿ ಸದೃಶ ಮಾತಿನಲ್ಲಿ ಕಾವ್ಯ ವ್ಯಾಪಾರವನ್ನು ವಿವರಿಸಿದ್ದಾರೆ. ಇನ್ನು ಪ್ರತಿಭೆಯನ್ನು ಕುರಿತು “ನವನವೋನ್ಮೇಷಶಾಲಿಯಾದ ಪ್ರಜ್ಞೆ ಎಂಬುದು ಅದರ ಅತ್ಯಂತ ಸಮೀಪವಾದ ವರ್ಣನೆ ಎನ್ನಬಹುದು. ಹಾಗಾದರೆ ಪ್ರಜ್ಞೆ ಎಂದರೇನು? ಅರಿವಿನ ಸಂವೇದನಾ ರೂಪವನ್ನು ‘ಪ್ರಜ್ಞೆ’ ಎನ್ನಬಹುದಲ್ಲವೇ? ಸಂವೇದನೆಯಿಲ್ಲದೆ ಯಾವುದರ ನಿಜವಾದ ಅರಿವೂ ನಮಗಾಗದು. ಮಗು ಅಳುತ್ತಿದ್ದರೆ ಮಲತಾಯಿಗೆ ಅದರ ಅಸುಖದ ಅರಿವು ಮಾತ್ರ ಆಗುತ್ತದೆ. ತಾಯಿಗೊ  ಆ  ಅಸುಖದ ‘ಪ್ರಜ್ಞೆ’ ಮೂಡುತ್ತದೆ. ಜಗತ್ತು ದುಃಖ ಭೂಯಿಷ್ಠವಾದುದು ಎಂಬುದು ಯಾರಿಗೆ ಗೊತ್ತಿಲ್ಲ? ಆದರೆ ಅದರ ‘ಪ್ರಜ್ಞೆ’ ನಮಗಿಲ್ಲ. ಆ ‘ಪ್ರಜ್ಞೆ’ಯನ್ನು ಪಡೆದುದರಿಂದ ಬುದ್ಧ ಕಾಡಿಗೋಡಿ ಪ್ರಬುದ್ಧನಾದ. ಸುಸಂಸ್ಕೃತವಾದ ಚೈತನ್ಯ ಮಾತ್ರ ತನ್ನ ಅತ್ಯುನ್ನತ ಸ್ಥಿತಿಯಲ್ಲಿ ‘ಪ್ರಜ್ಞೆ’ಯನ್ನು ಪಡೆಯಬಲ್ಲುದು…. ಕವಿಯ ಕಾವ್ಯದಲ್ಲಿ ‘ಪ್ರಜ್ಞೆ’ ಹರಿದಾಗ ಮಾತ್ರ ಅದು ಸಕಲ ಭೋಗ್ಯವಾಗುತ್ತದೆ….. ಕವಿ ತನ್ನ ಆತ್ಮ ಸಂಸ್ಕಾರದಿಂದ ‘ಪ್ರತಿಭೆ’ಗೆ ಎಂದರೆ ಉದಯೋನ್ಮುಖ ಪ್ರಜ್ಞೆಗೆ ಮಿಕ್ಕವರಿಗಿಂತ ಹೆಚ್ಚು ಪಾತ್ರವಾಗುವಂತೆ ಮಾಡಿಕೊಳ್ಳುವುದು ಇದರಲ್ಲಿ ಒಂದು ಅಂಶ. ಮತ್ತೊಂದಂಶ, ಹೀಗೆ ಪ್ರಾಪ್ತವಾದ ಪ್ರತಿಭಾ ಪುರಸ್ಕೃತ ಪ್ರಜ್ಞೆಯನ್ನು ಎಲ್ಲೂ ಪೋಲಾಗದಂತೆ ಕಾವ್ಯಕಾಯದಲ್ಲಿ ಪ್ರವಹಿಸುವಂತೆ ಮಾಡುವ ಪರಿಕರ್ಮ ಕೌಶಲವನ್ನು ಪಡೆಯುವುದು”[6] ಇದು ಕವಿಕರ್ಮವನ್ನು ಕುರಿತ ವ್ಯಾಖ್ಯಾನ. ಕವಿಗೆ ಇಂತಹ ಒಂದು ಶಕ್ತಿ ಹೇಗೆ ಪ್ರಾಪ್ತವಾಗುತ್ತದೆ ಎನ್ನುವ ಪ್ರಶ್ನೆಗೆ ಪು.ತಿ.ನ. ಅವರು ಬೇರೊಂದೆಡೆ “ಕಾವ್ಯದ ಉತ್ಪತ್ತಿಗೆ ಕವಿಗೆ ಹುಟ್ಟಿನಿಂದಲೇ ಪ್ರಾಪ್ತವಾದ ಎರಡು ಗುಣಗಳಿರಬೇಕೆಂದು ತೋರುತ್ತದೆ. ಭವದ ತೀವ್ರ ಸಂವೇದನಾ ರೂಪವಾದ ಪ್ರಜ್ಞೆ. ಇದನ್ನು ಬೇಕಾದರೆ ಭವನಿಮಜ್ಜನ ಚಾತುರ್ಯ ಎಂದು ಕರೆಯಬಹುದು – ಮತ್ತು ಆ ನಿಮಗ್ನತೆಯಿಂದ ಪಾರಾಗಿ ನಿಲ್ಲುವ ಲಘಿಮಾಕೌಶಲ; ಈ ಎರಡು ಗುಣಗಳು ಕವಿಗಿದ್ದ ಹೊರತು ಕಾವ್ಯ ಸಿದ್ಧಿಸಲಾರದು.”[7] ಎನ್ನುತ್ತಾರೆ. ಕಾವ್ಯವನ್ನು ಕುರಿತು ಇತ್ತೀಚಿನ ಅವರ ನಿಲುವು ಇದು. ಕವಿಯಲ್ಲಿ ಪ್ರಧಾನವಾದುದು ಈ ಮುಕ್ತಿಯ ಆಸೆ. ಕ್ಷಣ ಕ್ಷಣವೂ ವಸ್ತುಸಂಗದಿಂದ ತನ್ನನ್ನು ಬೇರ್ಪಡಿಸಿಕೊಂಡು ಅದನ್ನು ಪರಿಭಾವಿಸುವ ಕೌಶಲ ಸಿದ್ಧಿಸಿದಷ್ಟೂ ಕವಿಯ ಕಾವ್ಯ ಉತ್ಕೃಷ್ಟವಾಗುತ್ತದೆ. ಪು.ತಿ.ನ. ಅವರಲ್ಲಿ ಈ ಮುಕ್ತಿಪ್ರಾಚುರ್ಯ ಎಷ್ಟರಮಟ್ಟಿಗಿದೆ ಎಂದರೆ ತಾವು ವಸ್ತುವಿನ ಆತ್ಮಸಂಗದಿಂದ ಪಡೆದ ನಲವಿನಿಂದಲೂ ತಮ್ಮನ್ನು ತೆಕ್ಕನೆಯೆ ಬೇರ್ಪಡಿಸಿಕೊಂಡು, ಅದನ್ನೇ ಜಿಜ್ಞಾಸೆಗೆ ಒಳಪಡಿಸಿ ಅದರಿಂದಲೂ ರಸವನ್ನು ಪಡೆಯುವಷ್ಟರಮಟ್ಟಿಗೆ! “ಮುಕ್ತಿಪ್ರಾಚುರ್ಯವಿಲ್ಲದಿದ್ದರೆ ಲಭಿಸುವುದು ಪ್ರಚಾರ ಸಾಹಿತ್ಯ; ಪ್ರಬೋಧನ ಸಾಹಿತ್ಯ;….. ಆತನ ಗುರಿ ಭಾವೋದ್ವೇಗ ಪ್ರಚೋದನೆಯಲ್ಲ, ಭಾವಾವೇಗ ಪ್ರಶಮನ.”[8] “ಆದುದರಿಂದ ಕಾವ್ಯಭೋಗಿಗಳು ಪ್ರಚೋದಕ ಮತ್ತು ಪ್ರಚಾರಕ ಸಾಹಿತ್ಯವನ್ನು ಅಷ್ಟಾಗಿ ಆಪೇಕ್ಷಿಸುವುದಿಲ್ಲ. ಅವರು ಕೃತಿಯಲ್ಲಿ ಅಪೇಕ್ಷಿಸುವುದು ರಸವಹನಗುಣವನ್ನು; ತತ್ವಾನ್ವೇಷಣೆಯನ್ನಲ್ಲ, ತತ್ವ ಪ್ರಚಾರವನ್ನಲ್ಲ. ಆದ್ಯತನ ರಾಗದ್ವೇಷ ನ್ಯಾಯಾನ್ಯಾಯ ಸುಖದುಃಖ ಪ್ರಾಚುರ್ಯೋದ್ಗಾರವನ್ನಲ್ಲ-ಭವಶಮನವನ್ನು. ಬೆಂಕಿಯ ಕಾವನ್ನಲ್ಲ, ಕನ್ನಡಿಯಲ್ಲಿ, ಜಾಜ್ವಲ್ಯಮಾನವಾಗಿ ಹೊಳೆಯುವ ಬೆಂಕಿಯ ಶೀಲತೆಯನ್ನು….. ಎಲ್ಲರ ವ್ಯಕ್ತಿತ್ವದಲ್ಲೂ ನಿಗೂಢವಾದ ಅಮೂರ್ತವಾದ ಆತ್ಮವನ್ನು ಕಾವ್ಯದ ಕಾವ್ಯೋಪಕರಣಗಳಿಂದ ಅಂಗೈ ನೆಲ್ಲಿಯಾಗಿ ಮಾಡುವ ಕವಿಯ ಕೃತಿ ವರ್ತಮಾನದಲ್ಲಿ ಜನ್ಮವೆತ್ತಿದ್ದರೂ ಅದರ ಸೆಳೆತಕ್ಕೆ ಸಿಕ್ಕಿಕೊಳ್ಳದೆ ಸಂತತ ವರ್ತಮಾನಕ್ಕೇರುತ್ತದೆ-ತನ್ನಲ್ಲಿ ತುಂಬಿಕೊಂಡಿರುವ ನಲವಿನ ಪ್ಲಾವಕ ಶಕ್ತಿಯಿಂದ.”[9] ಇಂಥ ನಲವನ್ನು ತುಂಬಿಕೊಂಡ ಕಾವ್ಯ, ಭೂಮಿಗೆ ಸೌಮ್ಯೋಪಗ್ರಹವಾದ ಚಂದ್ರನಂತೆ. “ಯಾವ ಉದ್ವೇಗದ ಆಕರ್ಷಣೆಗೂ ಸಿಕ್ಕದೆ ಕೆಳಕ್ಕೆ ಬೀಳದೆ ಅದರ ಸೆಳೆತಕ್ಕೆ ತನ್ನ ಗರ್ಭಪ್ರಾಪ್ತವಾದ ವಿಕರ್ಷಣ ಶಕ್ತಿಯನ್ನು ಮಾರೊಡ್ಡಿ ಮೇಲೆ ತೇಲುತ್ತಾ ಭವದ ಸುತ್ತ ಪರಿಭ್ರಮಿಸುವ ಆತ್ಮ ಸುಧಾಂಶಗಳು ಕವಿಯ ರಚನೆಗಳು.”[10]

ಸಂತತವೂ ನಲವಿಗಾಗಿ ಹಾರೈಸುವ ‘ರಸದ ನೀರಡಿಕೆ’ಯುಳ್ಳ ಕವಿಚೇತನಕ್ಕೂ, ಈ ಬಹಿರಂಗ ಲೋಕಕ್ಕೂ ಇರುವ ಸಂಬಂಧವನ್ನು “ಮುದದ ಬೇಹರ”. ಮೋದದ ವ್ಯಾಪಾರ ಎಂದು ಪು.ತಿ.ನ. ಕರೆದಿದ್ದಾರೆ. ಸಮಸ್ತ ಸೃಷ್ಟಿಯೇ ತನ್ನ ನಲವನ್ನು ಕ್ಷಣ ಕ್ಷಣವೂ ಅಭಿವ್ಯಕ್ತಗೊಳಿಸಿಕೊಳ್ಳುವ ನಲವಿನ ಚಿಲುಮೆಯಾಗಿ ಕಾಣಿಸುತ್ತದೆ. ಕವಿಯ ಕಣ್ಣಿಗೆ ಈ ನಲವನ್ನು ಹಿಡಿದು ಬಿಡುವಾಟದಲ್ಲಿ ತೊಡಗಿರುವ ಪ್ರಕೃತಿಯ ಚೆಲುವಿನ ನಡುವೆ ಕವಿಯೂ ಈ ಸಮಸ್ತವನ್ನೂ ತನ್ನ ಕರಣಗಳಲ್ಲಿ ಕೊಂಡು ನಲಿಯುವ ರೀತಿಯೂ ಒಂದು ಸೋಜಿಗವಾಗಿ ತೋರುತ್ತದೆ. ಈ ವ್ಯಾಪಾರವನ್ನು ಕುರಿತು-

ಹಸಿರೆಲೆಗಳಂಜಲಿಯೊಳಾಂತು ರವಿ ತೇಜವಂ
ಜೀವಕರ್ಘ್ಯವನೆರೆದ ಬನದ ನಲವು.
ಕೆರೆ ಕೆರೆಯ ಹರಹಿನೊಳು ಜಲಹಾಸವನು ಮೆರೆಸಿ
ತಿರೆ ಬಣ್ಣಗೊಳಿಸುವೀ ಬಿಸಿಲ ನಲವು,
ಅಲೆ ಕೆದರೆ ತರು ಬೆದರೆ ನೀಲದಿಂದ ಧುಮ್ಮಿಕ್ಕಿ
ಕೋಡಿಗೇರುತ ಗಾಳಿ ಮೊರೆವ ನಲವು,
ಬೆಳಕೆಲರು ಹಸಿರುಗಳ ಪೌತ್ರ ನಾನೀ ನಲವ
ನನ್ನ ಕರಣದಿ ನಲಿವ ನಲವು

ಎನ್ನುತ್ತಾರೆ. ಹೀಗೆ ಚೆಲುವಾಗಿ ತೋರಿ ಹೃದಯವನ್ನು ಸೂರೆಗೊಂಡು, ನಲವಾಗಿ ತುಂಬುವ ಈ ಮೋದದ ವ್ಯಾಪಾರದ ರಹಸ್ಯವನ್ನು ಚಿಂತಿಸುತ್ತಾ ಕವಿ-

ಜಗ ಚೆಲುವೆನ್ನುವ ಬಗೆಯನುರಣನೆ
ವಿಶ್ವಾತ್ಮನ ನಿರ್ಹೇತುಕ ಕರುಣೆ
[11]

ಎನ್ನುತ್ತಾರೆ ಚೆಲುವನ್ನು ಕಂಡು, ಅದರ ಅನುಭವದಿಂದ ಅನುಕರಣಿತವಾಗುತ್ತದೆ ನಮ್ಮ ಬಗ್ಗೆ. ಹೀಗೆ ಚೆಲುವಿನ ರೂಪದಲ್ಲಿ ನಮ್ಮ ಚಿತ್ತವನ್ನು ನಲವಿನಿಂದ ತರಂಗಿತವನ್ನಾಗಿಸುವ ಈ ಶಕ್ತಿ ವಿಶ್ವಾತ್ಮನ, ಅವ್ಯಾಜವಾದ ಕರುಣೆಯೇ ಎಂದು ಕವಿ ಹೇಳುತ್ತಾರೆ. ನಿಜವಾದ ಮೋದದ ವ್ಯಾಪಾರದ ಲಕ್ಷಣವೇ ಇಷ್ಟು; ಅದು ನಿರ್ಹೇತುಕವಾದುದು, ದೈವೀಕರುಣೆಯಂತೆ. ಇಂತು ಚೆಲುವಿನ ಅನುರಣನೆಗೆ ಹದಗೊಂಡ ಈ ಒಂದು ಮನಃಸ್ಥಿತಿ ಕವಿಗೆ ಸಂಸ್ಕಾರಲಭ್ಯವಾದುದು. ಕೋಗಿಲೆಯ ಉಲಿಯನ್ನು ಆಲಿಸಿ ಪುಲಕಿತರಾದಾಗ, ಅದರ ಕಾರಣವನ್ನು ಚಿಂತಿಸುತ್ತಾ-

ಈಯೆಡೆ ಆಯೆಡೆ ಬೇರೆಡೆ
ಬಿಡುವಿರುವೆಡೆ ಬಿಡುವಿರದೆಡೆ
ಒಲಿವೆಡೆ ನಲಿವೆಡೆ ಅಳುವೆಡೆ
ದೇಶವಿದೇಶದೊಳು
ಜನ್ಮದಿ ಜನ್ಮದಿ ನಾನಿದ
ಬಗೆಬಗೆಯೊಳು ಕೇಳಿದ ಹದ
ಇಂದೆಂತೆಯೊಳು ತೆರೆ ತೆರೆಯುತ
ತೋರಿದ ಹೃದಯದೊಳು.
[12]

ಎಂದು ಭಾವಿಸುತ್ತಾರೆ. ಚೆಲುವನ್ನು ಕಂಡೊಡನೆ ಹೀಗೆ ಪಡಿಮಿಡಿಯುವ ಅನುಭವಿಸಿ ಆನಂದಿಸುವ ಈ ಶಕ್ತಿ, ಈ ಜನ್ಮದ ಇಂಥ ಅನುಭವದಿಂದ ಸಿದ್ಧವಾದುದು ಮಾತ್ರವಲ್ಲ ಎಷ್ಟೋ ಜನ್ಮಾಂತರಗಳಲ್ಲೂ ಪಡೆದ ಅನುಭವದ ಪರಿಣಾಮದಿಂದ ಆದುದು ಎಂದು ಕವಿಯ ನಂಬಿಕೆ. ಕವಿ ಕಾಳಿದಾಸನೂ “ಭಾವಸ್ಥಿರಾಣಿ ಜನನಾಂತರ ಸಾಹೃದಾಣಿ” -ಎಂಬ ಮಾತಿನಲ್ಲಿ ಹಿಂದೆಯೇ ಇದೇ ಭಾವವನ್ನು ವ್ಯಕ್ತಪಡಿಸಿದ್ದಾನೆ. ಇಂಥ ಸಂಸ್ಕಾರವಂತನಾದ ಕವಿಗೆ ಒಂದು ಚಿತ್ತಸ್ವಾಸ್ಥ್ಯದ ಹೊತ್ತಿನಲ್ಲಿ ಚೆಲುವು ಮೈದೋರುತ್ತದೆ. ಈ ಬಗೆಯ ಚಿತ್ತಸ್ವ್ಯಾಸ್ಥ್ಯ ಅಥವಾ ಚೆಲುವಿಗೆ ಪಡಿಮಿಡಿಯಲು ಹದಗೊಂಡ ಮನಃಸ್ಥಿತಿಯಲ್ಲಿ ಕವಿ ನಿಂತಾಗ ಚೆಲುವು ಮೈದಾಳಿ ಬಗೆಗಣ್ಣಿನೆದುರು ನಿಲ್ಲುತ್ತದೆ. ಕವಿಗೆ ದೈನಂದಿನ “ಯೋಗಕ್ಷೇಮದ ವೇದನೆ”ಯಿಂದ ಒದಗುವ ಬಿಡುಗಡೆಯೇ ಇದರ ಲಕ್ಷಣ. ಈ ಸ್ಥಿತಿಯನ್ನು ಕುರಿತು-

ಏತಕು ಅಂಟದೆ ತನ್ನಾರಾಮದಿ
ಹದುಳದಿ ನೆಮ್ಮದಿಯೊಳು ಮನವಿತ್ತು.
………………………………….
ಇಂತಾ ದಿನವಿರೆ ಬಿನದಕೆ ಮೀಸಲು
ನನ್ನ ಮನಂ ಪಟವಿಳಿಸಿದ ಓಡೊಲು.
[13]

ಎಂದು ಕವಿತೆಯೊಂದರಲ್ಲಿ ಬಣ್ಣಿಸಿದ್ದಾರೆ. ಕವಿಯ ಚಿತ್ತ ಬಿನದವೊಂದಕ್ಕೆ ಮೀಸಲಾಗಿ, ಹದುಳದ ನೆಮ್ಮದಿಯಲ್ಲಿ, ಏತಕ್ಕೂ ಅಂಟದೆ ಆತ್ಮಾರಾಮ ಸ್ಥಿತಿಯಲ್ಲಿ ನಿಂತು ಪಟವಿಳಿಸಿದ ಓಡಿನಂತೆ ಯಾವ ಆತುರವೂ ಇಲ್ಲದೆ, ಸಾಕ್ಷೀಪ್ರಜ್ಞೆಯಲ್ಲಿ ನಿಂತು ಎಲ್ಲವನ್ನೂ ಸವಿಯುವ ಸ್ಥಿತಿಗೆ ಸಂದಾಗಲೇ, ನಲವನ್ನು ಪಡೆಯಬಲ್ಲುದು. ಇಂಥ ಒಂದು ಸ್ಥಿತಿಯನ್ನು, ‘ಕವಿ’ ಎಂಬ ನಾಟಕದಲ್ಲಿ ಕವಿಯ ಪಾತ್ರದ ಬಾಯಿಂದ ಆಡಿಸಿದ್ದಾರೆ-

ಎಂಥ ಸುಂದರ ದಿನವು ಮೈದೋರಿದಂತಿಹುದು
ಇಂದೆನ್ನ ಬಾಳಿನೊಳು. ಹಗುರವಾಗಿಹ ಚಿತ್ತ,
ತೀಕ್ಷ್ಣವಾಗಿದೆ ಕರಣ, ನಿರ್ಲಿಪ್ತವಾಗಿಹುದು
ಜೀವಾತ್ಮ. ಸ್ಥಿರತೆಯಿಂದೆಚ್ಚೆತ್ತು, ಅಲೆತಕ್ಕೆ
ಮೈತೆತ್ತು ಕೊನೆಗೆ ಸಂಚಲನ ಸುಪ್ತಿಗೆ ಸಂದ
ತಿಗುರಿಯೊಲು ನಾನಿಹೆನು. ಅಂತಲ್ಲ ಅಂತಲ್ಲ;
ಭಾವ ವೀಣೆಗೆ ಬಿಗಿದ ಕರಣಗಳ ತಂತಿಗಳ
ಮನವೊಪ್ಪೆ ಶ್ರುತಿಮಾಡಿ ನೂರು ಬೆರಲುಗಳಿಂದ
ಮಿಡಿವಂತೆ ತೋರುತಿದೆ ಪರಮಾತ್ಮ………..
[14]

ಇದು ಕವಿಗೆ ಒದಗುವ ಚಿತ್ತಸ್ವಾಸ್ಥ್ಯದ ವರ್ಣನೆ. ಚಿತ್ತ ಹಗುರವಾಗಿದೆ, ಕರಣಗಳು ತೀಕ್ಷ್ಣವಾಗಿ ಶ್ರುತಿಮಾಡಿದ ವೀಣೆಯ ತಂತಿಯಂತಿದೆ, ಜೀವಾತ್ಮ ನಿರ್ಲಿಪ್ತವಾಗಿದೆ. ಇಂತಹ ಒಂದು ಅಪೂರ್ವ ಸ್ಥಿತಿಯಲ್ಲಿ ಕವಿಗೆ ಸೌಂದರ್ಯಾನುಭವ ಲಭಿಸುತ್ತದೆ. ಇದು ಚಿತ್ತಕ್ಕೆ ಒದಗುವ ಒಂದು ಬಗೆಯ ಬಿಡುವು ಅಥವಾ ವಿಮುಕ್ತಿ. ಇಂಥ ಬಿಡುವಿನ ಪರಿಯನ್ನು ಕವಿ ‘ಬಿಡುವು’ ಎಂಬ ಸಾನೆಟ್‌ನಲ್ಲಿ ಸೊಗಸಾಗಿ ಚಿತ್ರಿಸಿದ್ದಾರೆ-

ಅಹ ಬಿಡುವೆ, ಶ್ರಾಂತಿ ದಯಪಾಲಿಸಿಹ ನಲ್ವರವೆ,
ಎನಿತು ಚೆಲುವಾಗಿಸಿಹೆ ಈ ಬಳಕೆ ಸಂಜೆಯನು!
ದಿನದ ಸ್ವರ್ಣಾದಾಯವೊಯ್ಯುತಿದೆ ದಿವಕಭ್ರ;
ತುಹಿನ ಕಿರಣನ ಕೋಡು ಮುದದ ಮದ್ದಾನೆ ಬಾನ್

ಸರದೊಳಗೆ ಮುಳುಗಿ ಕೋಡೆತ್ತಿದೊಲು ತೋರುತಿದೆ:
ಹಲಸು ಸಂಪಿಗೆ ಮಾವು ತೆಂಗು ತೆಂಗಿನ ಬಳಗ
ಬಳಸಿ ತುರುಗಲ ನಡುವೆ ರೇಖಿಸಿಹ ಕರುಮಾಡ
ತರುವುದಕ್ಷಿಗೆ ಯಕ್ಷ ರಾಜಧಾನಿಯ ಬೆರಗ.
ಪ್ರತ್ಯಕ್ಷಕಿಂದಾಯ್ತು ಭವನಿಯುಕ್ತಿ ವಿಮುಕ್ತಿ.
ಋಣಮುಕ್ತ ಬಂಧುವನು ಮಾನಿಸುವ ಕುಲದಂತೆ
ಮನವ ಮಾನಿಸುತಿಹುದು ಕಂಡುದನೆ ಚೆಲುವೆಂಬ
ಸತ್ಯದರಿವಿಂ ಸೃಷ್ಟಿ……………………..
[15]

ಇಲ್ಲಿ ಚಿತ್ರಿತವಾಗಿರುವುದು ಕವಿಯ ಮನಸ್ಸಿನ ಬಿಡುವಿನ ಅಥವಾ ನಲವಿಗೆ ಹದಗೊಂಡ ಚಿತ್ತವೃತ್ತಿಯ ಕಣ್ಣಿಗೆ ಕಂಡ ಒಂದು ಸಂಜೆ. ದಿನಬಳಕೆಯ ಈ ಸಂಜೆಯ ಅನುಭವದ ರಮ್ಯತೆಯ ಜೊತೆಯಲ್ಲೇ, ಈ ಕವಿಗೆ ವಿಶಿಷ್ಟವಾದ, ಆ ಸಂಜೆ ಹೀಗೆ ತೋರಲು ಕಾರಣವೇನೆಂಬುದರ ಜಿಜ್ಞಾಸೆಯೂ ಕಾವ್ಯವಾಗಿ ನಮಗೆ ನೀಡಲ್ಪಟ್ಟಿದೆ. ದಿನಬಳಕೆಯ ಸಾಮಾನ್ಯವಾದ ಈ ಸಂಜೆ ಇಂದು ಇಷ್ಟೊಂದು ಚೆಲುವಾಗಿ ತೋರಲು ಕಾರಣ ಬಿಡುವು. ಈ ‘ಬಿಡುವು’ ಎನ್ನುವುದು ದೈನಂದಿನ ಗಡಿಬಿಡಿಯಿಂದ ದೊರೆತ ‘ಪುರಸತ್ತು’ ಅಲ್ಲ. ಇದೊಂದು ಭಗವದ್ಗೀತೆಯ  ‘ಅಕರ್ಮ’ ಸ್ಥಿತಿ. ಕವಿ ಎಂತಹ ಗೊಂದಲದ ನಡುವೆ ತೊಡಗಿದ್ದರೂ ಚೆಲುವಿನ ವಸ್ತುವಿನ ಅನುಭವದಿಂದಲೋ ಪರಿಭಾವನೆಯಿಂದಲೋ, ಈ ಬಿಡುವಿನಲ್ಲಿ ಅವನು ನಿಲ್ಲಬಲ್ಲನು. ಇದೊಂದು ಚೆಲುವನ್ನು ಸವಿಯಲು ಹದಗೊಂಡ ಮನಃಸ್ಥಿತಿ. ಟಿಂಟರ್ನ್ ಅಬೆಯ ಪರ್ವತಾರಣ್ಯಗಳ ರಮ್ಯತೆಯನ್ನು ಐದು ವರ್ಷಗಳ ನಂತರ ಮತ್ತೊಮ್ಮೆ ಸಂದರ್ಶಿಸಿದ ವರ್ಡ್ಸ್‌ವರ್ತ್  ಕವಿ ಹೇಗೆ ಈ ದೃಶ್ಯಗಳ ಸೌಂದರ್ಯ ತನ್ನ ಮೇಲೆ ಪರಿಣಾಮ ಮಾಡಿತೆಂಬುದನ್ನು ಬಣ್ಣಿಸುತ್ತಾ-

These beauteous forms.
Through a long absence, have not been to me
As is a landscape to a blind man’s Eye.
But oft, in lonely rooms, and mid the din
Of towns and cities, I have owned to them,
In hours of weariness, sensations sweet,
Felt in the blood, and flet along the heart;
And passing even into purer mind,
With tranquil restoration:………………………
[16]

ಎಂದು ಹೇಳುತ್ತಾನೆ. ಕವಿ ಎಲ್ಲೇ ಇರಲಿ, ಹೇಗೇ ಇರಲಿ ಅವನ ಅಂದಂದಿನ ಬಳಲಿಕೆಯಿಂದ ಅವನನ್ನು ಪಾರುಮಾಡಿ ಈ ಚೆಲುವಿನ ಚಿತ್ರಗಳ ಪರಿಭಾವನೆ ಒಂದು ಬಗೆಯ ಬಿಡುವನ್ನು ಅವನಿಗೆ ತಂದುಕೊಟ್ಟಿದೆ. ಇಂತಹ ಒಂದು ಬಿಡುವಿನ ಸಂಜೆಯಲ್ಲಿ ಪು.ತಿ.ನ. ಅವರ ಕಣ್ಣಿಗೆ ಬಾನೊಳಗೆ ಕಂಡ ರೇಖಾಚಂದ್ರ ಮುದದ ಮದ್ದಾನೆಯೊಂದು ಬಾನ್ ಸರಸಿಯಲ್ಲಿ ಮುಳುಗಿ ಕೋಡೆತ್ತಿದಂತೆ ತೋರುತ್ತಿದೆ. ದಿನ ಪರಿಚಿತದ ಎದುರಿನ ಮನೆಯ ಮಹಡಿ, ಹಲಸು ಸಂಪಿಗೆ ತೆಂಗುಗಳಿಂದ ಪರಿವೃತವಾದ ಕರುಮಾಡ ಇಂದು ಪ್ರತ್ಯಕ್ಷವೋ ಅದಕ್ಕೆ ಈಗ ಕವಿಯ ಅನುಭವದಲ್ಲಿ ‘ಭವನಿಯುಕ್ತಿ ವಿಮುಕ್ತಿ’ ಒದಗಿದೆ. ಯಾವುದು ದಿನದ ಭಾರದಿಂದ ಜಗ್ಗುತ್ತಾ ತನಗೆ ತೀರ ಪರಿಚಿತವಾಗಿತ್ತೋ, ಆ ಮನೆ ಈಗ ಈ ಸಂಜೆ ಬಾನಿನ ಬೆಳಕಿನಲ್ಲಿ, ಅದರ ಲೌಕಿಕ ಸಂಪರ್ಕದಿಂದ ಮುಕ್ತವಾಗಿ ನಲವಿನ ವಸ್ತುವಾಗಿ ಕವಿಯ ಕಣ್ಣಿಗೆ ಯಕ್ಷರಾಜಧಾನಿಯ ಬೆರಗನ್ನು ತರುತ್ತಿದೆ. ಋಣಮುಕ್ತ ಬಂಧುವನ್ನು ಮಾನಿಸುವ ಕುಲದಂತೆ ಲೋಕ ಭಾವೃಣಮುಕ್ತನಾಗಿ ರಸಲೋಕಕ್ಕೇರಿದ ಏನೆಲ್ಲವನ್ನೂ ಕಣ್ಣು ಚೆಲುವೆಂದು ಅಂಗೀಕರಿಸುತ್ತಿದೆ. ಬಿಡುವಿನ ಈ ಕ್ಷಣ ನಡೆದಿರುವ ಮೋದದ ವ್ಯಾಪಾರದಲ್ಲಿ ಆಗಿರುವುದು ಬಿಡುಗಡೆ. ಕವಿಗೂ ತನ್ನ ದೈನಂದಿನ ವ್ಯವಹಾರದ ಬಂಧನಗಳಿಂದ ದೊರೆತಿರುವ ಬಿಡುಗಡೆ; ಕವಿಪರಿಭಾವನೆಯಲ್ಲಿ ವಸ್ತುವಿಗೂ ಅದರ ಲೌಕಿಕ ಸಂಬಂಧದಿಂದ ಒದಗಿರುವ ಬಿಡುಗಡೆ. ವಸ್ತು-ಆತ್ಮಗಳೆರಡರ ಬಿಡುಗಡೆಯ ನಿಲುಗಡೆ ನಲವೆಂಬ ನಿಲುವಿನಲ್ಲಿ. ಈ ‘ಮುದದ ಬೇಹರ’ದಲ್ಲಿ, ಒಲವಿನ ಕೊಡು-ಪಡೆಯಲ್ಲಿ, ವಸ್ತು-ಆತ್ಮಗಳೆರಡೂ ಒಂದು ರೀತಿಯ ಸಾಮರಸ್ಯವನ್ನು ಪಡೆದಿರುವುದರಿಂದಲೇ, ಈ ಸಂಜೆಯ ಅನುಭವ ಇಷ್ಟು ಸುಂದರವಾಗಿದೆ. “ಮೊದಲು ಭವನುಭವದ ನಡುವೆ, ಬಿಡುಗಡೆ, ಮತ್ತೆ ಪುನರ್ಭವ; ಈ ಭವ ಪುನರ್ಭವಗಳ ನಡುವೆ ಈ ಬಿಡುಗಡೆ ತನ್ನ ಪ್ರಶಾಂತ ತೇಜಸ್ಸನ್ನು ಮೆರೆಸುತ್ತಿದ್ದರೆ ಅದು ಕಾವ್ಯ.”[17]

ಭವದ ಮೇಲಿಂದ ಎದ್ದು ಭಾವದಲ್ಲಿ ಸಂಚರಿಸಿ, ನುಡಿ ನುಡಿಯ ಕೇಂದ್ರದಲ್ಲಿ ರೂಪುಗೊಂಡು ಕಾಲದ ಉಪಹತಿಯನ್ನು ಶಮಿಸಿ ನವ್ಯವೆನಿಸಿ, ಎಲ್ಲವನ್ನು ಭೌತ ಋತದಿಂದ ರಸದ ಋತಕ್ಕೆ ಸಲ್ಲಿಸಿ, ನಿಯತಿಕೃತಿಗೆ ಈ ತೆರದಲ್ಲಿ ನರನಾತ್ಮ ರಸಮಧುರ ಪರಿಕರ್ಮವನ್ನು ಅನುಗೊಳಿಸಿ, ಇಹದ ಅರಿವನ್ನು ಸ್ತಬ್ಧಗೊಳಿಸಿ, ಜಾಗರವನ್ನೆ ಸ್ವಪ್ನವೆಂಬಂತೆ ಚಕಿತಗೊಳಿಸಿ ಬಗೆಯನ್ನು ಕೊಳುವ ಈ ಕವಿಕರ್ಮದ  ಅಧಿದೇವತೆಯನ್ನು ‘ರಸ ಸರಸ್ವತಿ’ಯನ್ನಾಗಿ ಕಂಡು ಕವಿ ಶರಣಾಗಿದ್ದಾರೆ.

ಅಲ್ಲೆ ನಿಲ್ಲೆಂದಿಹ ವ್ಯಾಪಾರವನು ನಿಲಿಸಿ
ಅರಿಷಟ್ಕಸಮೆದ ಸೆರೆಯಿಂ ಮುದವ ಬಿಡಿಸಿ
ಕರಣಕಾತ್ಮವೆ ವಿಷಯವಾದುದೆನೆ ಕಂಡ ಕಂಡೆಡೆಯಲ್ಲಿ ಚೆಲುವನಿರಿಸಿ
ಇಂದುವರೆಗೆನ್ನೆ ನೀನಮೃತಕರದಿಂದೆತ್ತಿ ಪೊರೆದ ತೆರದಿ
ಭವವನತರಿತದ ಮೀರಿ ನಿಲುವ ರಸಪದಕೆನ್ನಸಲಿಸು ಜವದಿ

ನವೋದಯ ೧೯೭೬


[1] ಅಹಲ್ಯೆ, ‘ಅರ್ಪಣೆ’ಯಲ್ಲಿ.

[2] ‘ಮಲೆದೇಗುಲ’ದ ಮುನ್ನುಡಿಯಲ್ಲಿ, ಪುಟ iii, iv.

[3] ಕವಿ : ಪುಟ ೩೬, ೩೭

[4] ಪು.ತಿ.ನ. : ಕಾವ್ಯಕುತೂಹಲ, ಪ. ೮.

[5] ಪು.ತಿ.ನ. : ಕಾವ್ಯಕುತೂಹಲ, ಪ. ೧೨.

[6] ಅಲ್ಲೇ, ಪು. ೧೪

[7] ಅಲ್ಲೇ, ಪು. ೧.

[8] ಪು.ತಿ.ನ.: ಕಾವ್ಯಕುತೂಹಲ, ಪು. ೨.

[9] ಅಲ್ಲೇ, ಪು. ೧೦.

[10] ಅಲ್ಲೇ, ಪು. ೨.

[11] ರಸ ಸರಸ್ವತಿ : ಪು.ತಿ.ನ., ಪು. ೩೮.

[12] ಗಣೇಶ ದರ್ಶನ : ಪು.ತಿ.ನ., ಪು. ೨೩-೨೪.

[13] ಶಾರದಯಾಮಿನಿ : ಪು.ತಿ.ನ., ಪು. ೩.

[14] ಕವಿ ಮತ್ತು ದೋಣಿಯ ಬಿನದ : ಪು.ತಿ.ನ., ಪು. ೩೫.

[15] ರಸ ಸರಸ್ವತಿ : ಪು.ತಿ.ನ., ಪು. ೩೧.

[16] Lines composed above Tintern abbey: Wordsworth lines 22 to 30.

[17] ಪು.ತಿ.ನ. : ಕಾವ್ಯಕುತೂಹಲ, ಪು. ೪.

(ಸಂಖ್ಯಾಗೊಂದಲ / ಚುಕ್ಕಿ ಚಿಹ್ನೆಯ ಗೊಂದಲ ಇರುವುದರಿಂದ ಈ ಅಧ್ಯಾಯದ ಕೆಲವು ಅಡಿಟಿಪ್ಪಣಿಗಳನ್ನು ನಮೂದಿಸಿಲ್ಲ)