ಮದುವೆ ಎನ್ನೋದಾ ಯಾರಮ್ಮಾ ಮಾಡ್ದೋರು
ಭೂಲೋಕಾದಲ್ಲೀ ಬಸವೈಯ್ಯಾ
ಭೂಲೋಕಾದಲ್ಲೀ ಬಸವೈಯ್ಕೂತೂಕೊಂಡು
ದೇವೀ ದೇವಾರಾ ಒಳಗೊಂಡು
ದೇವೀ ದೇವಾರಾ ಒಳಗೊಂಡು ಬಸವೈಯ್ಯ
ಭೂಲೋಕಾದಲ್ಲೀ ಮದುವೇಯಾ

ತಾಯಿಯಾ ನೆನೆದಾರೇ ಬೇಗಾನೇ ಪದಬರ‍್ಲೀ
ತಾಯವ್ಳೇ ಗಂಗೇ ದಡದಲ್ಲೀ – ಸರಸತಿಯು
ಕಾಯಾಕುಂಡ್ಹೋಗೀ ಕರತಲ್ಲೀ

ಅಕ್ಕಾನಾ ನೆನೆದಾನೆ ಗಕ್ಕಾನೇ ಪದಬರ‍್ಲೀ
ಅಕ್ಕವ್ಳೇ ಗಂಗೇ ದಡದಲ್ಲಿ – ಸರಸತಿಯ
ಅಕ್ಕೀ ಹೂದವಳಾ ಕರತನ್ನೀ

ಹಳ್ಳಾಕೊಳ್ಳಾದ್ಲ ಮುಳ್ಜಾಜೀ ವನದಲ್ಲೀ
ಒಳ್ಯೋತೀ ನಿನ್ನ ಅರಸೀದೆ – ಸರಸತಿಯೆ
ಎಲ್ಲೀ ಹೋದಮ್ಮಾ ಪದ ಬರಲಿ

ಅಟ್ಟಾ ಬೆಟ್ಟಾದಲ್ಲಿ ಪುಟ್ಟಾಜೀ ವನದಲೀ
ಸೆಟ್ಯೋಳೆ ನಿನ್ನಾ ಅರಸೀದೇ – ಸರಸತಿಯೆ
ಎತ್ತಾ ಹೋದಮ್ಮಾ ಪದಬರ‍್ಲೀ

ತಾಯೀ ಸರಸಾತೀ ಬಾಗ್ಲಲ್ಲೀ ಯಾಕ್ನಿಂದೆ
ತೋರೇನೂ ಬಾರೇ ನಿನಗಿಂಬಾ – ರಾಯಾರ‍್ಮಾನೇ
ಸಾಲೂ ಮಂಚಾವೇ ಒರಗಮ್ಮಾ

ಅಕ್ಕಾ ಸರಸತಿಯೇ ಹಟ್ಟೀಲ್ಯಾಕೇ ನಿಂತೆ
ಕೊಟ್ಟೇನೂ ಬಾರೇ ನಿನಗಿಂಬಾ – ಸರಸತಿಯೆ
ಪಟ್ಟೇ ಮಂಚಾವೇ ವರಗಮ್ಮಾ

ಅಗ್ಚೀ ಬುಡದಡಿಯ ಸೊಗಸೂ ಮಾಡೋ ಹೆಣ್ಣೆ
ಅವಸರದಲ್ಬಂದೇ ನಿನಬಾಳೀಗೆ – ಸರಸತಿಯೇ
ಕೆಲ್ಸಾ ಬಿಟ್ಹಾಡಾ ಕಲಿಸಮ್ಮಾ

ನಗ್ಗಾಲಾ ಮರದಡಿಯೆ ನಿಲ್ರೀಯಾ ಮಾಡ್ಹೋಗಿ
ಎಗ್ಗಿಲ್ದೇ ಬಂದೇ ನಿನ ಬಳೀಗೇ – ಸರಸತಿಯೆ
ಚಂದುಳ್ಳಿ ಹಾಡಾ ಕಲಿಸಮ್ಮಾ

ಉದ್ದೀನ್ಹೊಲದಲ್ಲಿ ದೊಡ್ಹೋಟ್ಟೇ ಬೆನವಣ್ಣ
ಉದ್ದೀನುಂಡಿಲಿಗೇ ಎರೆದುಪ್ಪಾ – ಕೊಡುವೇವೂ
ಇದ್ದಟ್ಟುಮತಿಯಾ ಕೊಡು ನಾಮಾಗೇ

ಉದ್ದೀನ್ಹೊಲದಲ್ಲಿ ದೊಡ್ಹೋಟ್ಟೇ ಬೆನವಣ್ಣ
ಉದ್ದೀನುಂಡಿಲಿಗೇ ಎರೆದುಪ್ಪಾ – ಕೊಡುವೇವೂ
ಇದ್ದಟ್ಟು ಪದವ ಬರಕೋಡು

ಎಳ್ಳೀನ್ಹೊಲದಲ್ಲೀ ಉಳ್ಳಾಡೋ ಬೆನರಣ್ಣಾ
ಎಳ್ಳೀನುಂಡಿಲಿಗೇ ಎರೆದುಪ್ಪಾ – ಕೊಡುವೇವು
ಎಳ್ಳೋಟೂ ಮತಿಯಾ ಬರಕೋಡೂ

ಎಳ್ಳಾನ್ಕರೀ ಎಳ್ಳು ಎಳ್ಳಾನೇ ಬಿಳೀ ಎಳ್ಳು
ಎಳ್ಳಾನೇ ತೊಳೆದಾ ತಿಳಿನೀರು
ಎಳ್ಳೂ ತೊಳೆದಾ ತಿಳಿನೀರಾ ಕುಡ್ಯೋಕ್ಬಂದೂ
ಪಕ್ಷೀ ಹೇಳೀದೋ ಶಕುನಾವಾ

ಉದ್ದಿನ್ಕರೀಯುದ್ದು ಉದ್ದಿನ್ಬಿಳೀಯುದ್ದು
ಉದ್ದಾನ್ನೆ ತೊಳೆದಾ ತಿಳಿನೀರೂ
ಉದ್ದಾನೇ ತೊಳೆದಾ ತಿಳಿನೀರ‍್ಕುಡ್ಯೋಕ್ಬಂದು
ಹಲ್ಲೀ ಹೇಳೀತೂ ಶಕುನಾವಾ

ಶಕುನಾ ನಮಗಾದೊ ಸಾಲಾವಳಿ ನಿಮಗಾದೋ
ನಾಳೇಯ ಲಗ್ನಾ ನಮಗಾದೋ

ಇಪ್ಪತ್ವರ್ಷಾಕೇ ಹುಟ್ಟೀತು ಈ ಲಗ್ನ
ತುಪ್ಪಾದಾ ಭಾವೀ ನಡುಮಾನ್ಲೀ – ತೋಡ್ಕೊಂಡು
ಅವರಪ್ಪಾ ಮಾಡಾನೂ ಮದುವೇಯಾ

ನಲ್ವತ್ವರ್ಷಾಕೇ ಹುಟ್ಟೀತು ಈ ಲಗ್ನ
ಎಣ್ಣೇ ಭಾವೀಯಾ ನಡುಮನ್ಲಿ – ತೋಡ್ಕೊಂಡು
ಅವರಣ್ಣಾ ಮಾಡಾನೂ ಮದುವೇಯಾ