ತಾಲಲಲೇ ಮಾಯೀ ತಾಲಲಲೇ             ||ಪಲ್ಲವಿ**||
ಕೊಳೆತೂರು ಬೊಮ್ಮಣ್ಣನವನು
ಹೊಗೆಸೊಪ್ಪಿನ ಯಾಪಾರ್‌ಗಾರ
ಅಟ್ಟದ ಪುರ ಬೆಟ್ಟದ ಪುರ
ಒಟ್ಟಿಗೆ ಗುತ್ತಿಗೆ ಮಾಡಿದೆನಣ್ಣ
ಗಾಡಿನಾದರು ಕಟ್ಟಿದನಣ್ಣ
ಬೆಟ್ಟದ ಪುರಕೆ ಹೋದನಣ್ಣ
ಹೊಗೆಸೊಪ್ಪು ಕಿತ್ತನಣ್ಣ
ಗಾಡಿಗಾದರು ತುಂಬಿದನಣ್ಣ
ಗಾಡಿಗಾದರು ತುಂಬಿಕಂಡು
ಊರಿಗಾದರು ಬಂದನಣ್ಣ

ಕೊಳತೂರು ಬೊಮ್ಮಣ್ಣ ಗುತ್ತಿಗೆ ಹಿಡಿದ ಹೊಗೆಸಪ್ಪೆನೆಲ್ಲ ಗಾಡಿಲಿ ತುಂಬಿಕಂಡು ಮನೆಗೆ ಬಂದು, ಲಾಭದನ್ನೆಲ್ಲ ಪೆಟ್ಟಿ ಕಟ್ಟಿ ಅಟ್ಟಕ್ಕೆ ತುಂಬಿ, ಅಸಲಿನ ಹೊಗೆಸೊಪ್ಪನ್ನು ಮಾರುವುದಕ್ಕೆ ಅಂತ ಗಾಡಿಗೆ ತುಂಬಿದ, ಮರಳ್ಳಿ ಸಂತೆಗೆ ಮಾರುವುದಕ್ಕೆ ಹೊರಟಾಗ –

ಹೆಡ್ತಿನಾದರು ಕರದುಕೊಂಡು
ಹೆಡ್ತಿಗೆ ಬುದ್ಧಿ ಹೇಳಿದನಣ್ಣ
“ಮಡದಿ ಮರಳ್ಳಿ ಸಂತೆಗೆ ಹೊಯ್ತೀನಿ
ಹೆಣ್ಣೆ ಹಟ್ಟಲಿರುವ ದನವು ಜ್ವಾಕೆ
ಕೊಟ್ಟಿಗೆಲಿರುವ ಕುರಿಯು ಜ್ವಾಕೆ

ಬೆಟ್ಟದ ಪುರದ ಹೋರಿ ಜ್ವಾಕೆ
ಗುಳಿಯಲ್ಲಿರುವ ಜ್ವಾಳ ಜ್ವಾಕೆ
ಅಟ್ಟದಲ್ಲಿರುವ ಸೊಪ್ಪು ಜ್ವಾಕೆ
ಪರಾಯದೆಣ್ಣೆ ನೀನು ಜ್ವಾಕೆ
ನೀನುಟ್ಟಿರುವಂಥ ಸೀರೆ ಜ್ವಾಕೆ
ಮನೆಯಲಿ ಜ್ವಾಕೆ” ಎಂದನಣ್ಣ
ಹೆಡ್ತಿಗೆ ಬುದ್ಧಿ ಹೇಳಿದನಣ್ಣ
ಗಾಡಿನಾದರು ಕಟ್ಟಿದನಣ್ಣ
ಮರಳ್ಳಿ ಸಂತೆಗೆ ಹೊರಟನಣ್ಣ
ಸಂತೆಗಾದರು ಬಂದನಣ್ಣ
ಗಾಡಿನಾದರು ಬಿಟ್ಟನಣ್ಣ
ಯಾಪಾರನಾದರು ಮಾಡಿದನಣ್ಣ
ತಂದಿದ್ದ ಮಾಲ ಮಾರಿದನಣ್ಣ

ಬೊಮ್ಮಣ್ಣ ಮರಳ್ಳಿ ಸಂತೆಗೆ ಹೋದ ಮೇಲೆ, ಅವನ ಹೆಂಡತಿ ನೀರಿಗೆ ಹೊರಟಳು.

ಕಂಕಳಲ್ಲಿ ಕೊಡವ ಇರಿಕಿದಳಣ್ಣ
ಬಾವಿಯು ನೀರಿಗೆ ಹೊರಟಳಣ್ಣ
“ಅಂಡುಗಾಲಿನ ಹನುಮಕ್ಕ
ದುಂಡು ಮುಸುಡಿ ಚೌಡಕ್ಕ
ಬಾವಿ ನೀರಿಗೆ ಬಂದೀರಕ್ಕ
ಕಟ್ಟೆ ನೀರಿಗೆ ಬಂದೀರಕ್ಕ ?’
ಸಂಗಡಗಾತಿರ ಕರದಳಣ್ಣ
ನೀರಿಗಾದರು ಹೊರಟಳಣ್ಣ.

ಬೊಮ್ಮಣ್ಣನ ಹೆಂಡತಿ ಸ್ನೇಹಿತೆಯರು ಹೊಗೆಸೊಪ್ಪಿನ ತೆವಲುಗಾತಿರು ನೀರಿಗೆ ಹೋಗುತ್ತಿದ್ದಾಗ, ಅವರು –

ತರಗೆಲೆ ಗೋಟಡಕೆ ತಗದರಣ್ಣ
ಕಟುಮ ಕಟುಮನೆ ಕಡಿದರಣ್ಣ

ಬೊಮ್ಮಣ್ಣನ ಹೆಂಡತಿಗೂ ಗ್ಯಾನವಾಯಿತು.

“ಅವುಸಿಗಂಡ್ ಅವುಸಿಗಂಡ್ ತಿನ್ನಬೇಡಿ
ನನಗೆ ಸ್ವಲ್ಪ ಕೊಡಿರಕ್ಕ’

ಅಂತ ಕೇಳಿದಾಗ, ಅವರಿಗೆ ಸಿಟ್ಟು ಬಂತು. “ಅಯ್ಯೋ ಬಂಗದ ನನ್ ಸವ್ತೀ, ನಾವೇನ್ ಆವಿಸ್ಕ ತಿಂದವು ? ಇಷ್ಟಗಲ ತರಗೆಲೆ, ಎರಡು ಗೋಟಕೆ ಕಡಿತಾ ಇಮಿ’ ಅಂದರು. ಅವರೆಲ್ಲ ಬಾಯಾಡಿಸುವುದನ್ನು ಕಂಡು ಸುಮ್ಮನಿರಲಾರದೆ ಬೊಮ್ಮಣ್ಣನ ಹೆಂಡತಿ, “ಅದ್ನೇ ನಂಗೂ ವಸಿ ಕೊಡಿ” ಅಂತ ಕೇಳಿದಳು.

ತರಗೆಲೆ ಗೋಟಡಕೆ ತಗದರಣ್ಣ
ಅವಳಿಗೆ ಸ್ವಲ್ಪ ಕೊಟ್ಟರಣ್ಣ
ತರಗೆಲೆ ಗೋಟಡಕೆ ಅಗಿದಳಣ್ಣ
ನಾಲಿಗೆ ನೀಟಿ ನೋಡಿದಳಣ್ಣ

ಎಲೆ ಅಡಿಕೆ ಅಗಿದುದರಿಂದ ನಾಲಗೆ ಕೆಂಪಾಗಿತ್ತು. ಖುಷಿಯಾಯಿತು. “ಅಕ್ಕಾ, ಅಂಡುಗಾಲಿನ ಹನುಮಕ್ಕಾ, ಚೆಂದಾಗಿ ಕೆಂಪಾಗೈತೆ. ನೀಮು ಕಡೆ ಮೇಲೆ ಹಾಕ್ಕಂಡ್ರಲ್ಲಾ ಅದೊಸಿ ಕೊಡಿ’ ಅಂದಳು.

ಬಣ್ಣದಂಥ ನೆರಿಯ ಒಳಗೆ
ಬಂಗಾರದಂಥ ಹೊಗೆಯಸೊಪ್ಪು
ಹೊಗೆಯಸೊಪ್ಪ ತಗದರಣ್ಣ
ಅವಳಿಗೆ ಸ್ವಲ್ಪ ಕೊಟ್ಟಳಣ್ಣ
ಮುಂಬಲ್ಲ ಮೇಲೆ ಮಡಿಗಿದಳಣ್ಣ
ಕುರುಕಿ ಕುರುಕಿ ನೋಡಿದಳಣ್ಣ
ರಸಾನಾದರು ಕುಡಿದಳಣ್ಣ
ನೆತ್ತಿಗಾದರು ಏರಿತಣ್ಣ
ಬಾವಿ ನೀರ ಹೊತ್ಕಂಡಾಗ
ಮನೆಗಾದರು ಬಂದsಳಣ್ಣ

ಎಂದೂ ಹೊಗೆಸೊಪ್ಪು ಹಾಕಿಕೊಂಡವಳಲ್ಲ, ಮನೆಗೆ ಬಂದ ಮೇಲೆ ತೆವಲು ಹತ್ತಿತು. ಜೊತೆಗಾತಿಯರು ಕೊಟ್ಟಿದ್ದ ಸೊಪ್ಪು ಒಂದು ಸಾರಿಗೇ ಮುಗಿದು ಹೋಗಿತ್ತು. ಬೆಳಿಗ್ಗೆ ಎದ್ದಕೂಡಲೇ ಪುನಃ ಅವರ ಹತ್ತಿರಕ್ಕೆ ಹೋಗಿ ಕೇಳಿದಳು.

ಅಂಡುಗಾಲ ಹನುಮಕ್ಕನ ಮನೆಗೆ
ದುಂಡು ಮುಸುಡಿ ಚೌಡಿ ಮನೆಗೆ
ಪಕ್ಕದ ಮನೆಗೆ ಹೋದಳಣ್ಣ
ಹೊಗೆಯ ಸೊಪ್ಪು ಕೇಳಿದಳಣ್ಣ
“ಏಳುಕೆ ಮುಂಚೆ ಕೇಳುಕೆ ಬಂದ್ಯಾ
ವಾಣಿಗೆಟ್ ನನ್ನೈದನ ಮಗಳೆ ?”

ಜೊತೆಗಾತಿಯರೆಲ್ಲ, “ನಿನ್ ಗಂಡ ಮಾಡುದೇ ಹೊಗೆಸೊಪ್ನ ಯಾಪಾರ. ಮಲ್ಲಿ ಬೇಕಾದಂಗೆ ಮಡಗವನೆ. ತಕ್ಕಂದು ಆಕನಾರದೆ ನಮ್ಮ ಬಂದು ಕೇಳ್ತಾ ಇದ್ದಯಾ ?’ ಅಂತ ಬೈದರು. ತಮ್ಮ ಮನೆಯಲ್ಲಿರುವುದೂ ಅದೇ ಹೊಗೆಸೊಪ್ಪು ಅಂತ ಆಗ ಅವಳಿಗೆ ಅರಿವಾಯಿತು. ತಮ್ಮಲ್ಲೇ ಇರುವುದ್ಕೆ ಇನ್ನೊಬ್ಬರನ್ನ ಯಾಕೆ ಕೇಳಬೇಕು ಅಂತ ಬಿರಬಿರನೆ ಮನೆಗೆ ಬಂದಳು.

ಸಂಗಡಗಾತಿರ ಮಾತ ಕೇಳಿ
ಮನೆಗಾದರು ಬಂದಳಣ್ಣ
ಅಟ್ಟಣಿ ಏಣಿ ಹಾಕಿದಳಣ್ಣ
ಹೊಗೆಸೊಪ್ಪು ಇಳಿಕಿದಳಣ್ಣ
ಎಪ್ಪತ್ತು ಕಟ್ಟ ಹೊಗೆಸೊಪ್ಪು
ಒಪ್ಪದಲ್ಲಿ ಇಳಿಕಿದಳಣ್ಣ
ಎಪ್ಪತ್ತು ಕಟ್ಟ ಹೊಗೆಸೊಪ್ಪ
ಹೋಯ್ತಾ ಬತ್ತಾ ತಿಂದಳಣ್ಣ

ಗಂಡ ಅಟ್ಟದ ಮೇಲಿಟ್ಟಿದ್ದ ಎಪ್ಪತ್ತು ಕಟ್ಟು ಹೊಗೆ ಸೊಪ್ಪು ತಿಂದರೂ ಅವಳಿಗೆ ತೆವಲು ತೀರಲಿಲ್ಲ. ಮನೇಲಿದ್ದುದು ಮುಗಿದು ಹೋಗುತ್ತಲೆ ಅಕ್ಕ ಪಕ್ಕದ ಮನೆಯವರನ್ನು ಕೇಳುವುದಕ್ಕೆ ಹೋದಳು.

ಆಚೆ ಕೇರಿಗೆ ಹೋದಳಣ್ಣ
ಈಚೆ ಕೇರಿಗೆ ಬಂದಳಣ್ಣ
“ಚಿಕ್ಕ ನಿಂಗಕ್ಕ ದೊಡ್ಡ ನಿಂಗಕ್ಕ
ನೀವೊಂದು ಸ್ವಲ್ಪ ಕೂಡಿರಕ್ಕ”

ಅವರು ಕೊಡಲಿಲ್ಲ “ಏನ್ ಬಂಗದ ನನ್‌ಸವ್ತಿ ಹಟ್ಟಿಲಿ ಗುಳಿವಳಗೆ ಜ್ವಾಳ ತುಂಬದೆ. ಕೊಟ್ಟಿಗೇಲಿ ದನ ಕುರಿ ಅವೆ. ಹೊಗೆಸೊಪ್ಪು ತಕ್ಕಕಾಗುದಿಲ್ವಾ ? ನಾವು ಕಂಬಳ ಕೂಲಿ ಮಾಡವರು. ನಮ್ಮ ಕೇಳುಕೆ ಬಂದಿದ್ದೀ ?’ ಅಂತ ಬೈದರು. ಬೊಮ್ಮಣ್ಣನ ಹೆಂಡತಿ ಯೋಚನೆ ಮಾಡಿದಳು. ಮನೇಲಿಬೇಕಾದಷ್ಟಿತ್ತು. ಇವರಿಗಿಂತ ಕಡಮೆಯ ನಾನು ಅಂತ ಮನೆಗೆ ಬಂದು –

ಜ್ವಾಳದ ಗುಳಿಯ ತಗದಳಣ್ಣ
ಜ್ವಾಳನಾದರು ತುಂಬಿದಳಣ್ಣ
ಅಂಗಡಿಗಾದರೆ ಅಳೆದಾಳಣ್ಣ
ಹೊಗೆಯಸೊಪ್ಪ ತಂದಾಳಣ್ಣ
ಕೊಳತೂರು ಬೊಮ್ಮಣ್ಣನೆಡ್ತಿ
ಹೊಗೆಸೊಪ್ಪಿನ ತೆವಲುಗಾತಿ

ಮೊದಲೇ ತೆವಲು ಹತ್ತಿದವಳು. ತಂದ ಸೊಪ್ಪು ಮುಗಿಯುತ್ತಲೂ ಇನ್ನೂ ಇನ್ನೂ ತಿನ್ನೋಣ ಅನ್ನಿಸಿತು

ಕಟುಕನಾದರೆ ಕರೆದಾಳಣ್ಣ
ಕೊಟ್ಟಿಗೆ ಕುರಿಯ ಮಾರಿದಳಣ್ಣ
ಕುರಿಯ ಮಾರಿದ ಹೊಗೆಸೊಪ್ಪು
ಕುರಿ ಬುಡುಹೊತ್ಗೆ ತಿಂದಳಣ್ಣ
ಕಣಿವೆ ಕೆಳಗಲ ಕೊಂಗರ ಕರ‍್ಡು
ಹಟ್ಟಿಲಿರುವ ದನವ ಮಾರ‍್ದ
ದವನ ಮಾರಿ ತಂದ ಸೊಪ್ಪ
ದನಬುಡು ಹೊತ್ಗೆ ತಿಂದೇಬಿಟ್ಟ
ಹೋರಿ ಮಾರ‍್ದ ಹೊಗೆಯಸೊಪ್ಪ
ಹೊಯ್ತಾ ಬತ್ತಾ ತಿಂದೇ ಬಿಟ್ಟ
ಕಂಚುಮುಟ್ಟ ತಗದಳಣ್ಣ
ಕಂಚುಗಾರಿಗೆ ಮಾರಿದಳಣ್ಣ
ಕೊಳತೂರು ಬೊಮ್ಮಣ್ಣನೆಡ್ತಿ
ಹೊಗೆಸೊಪ್ಪಿನ ತೆವಲುಗಾತಿ
ಕೈಯಲ್ಲಿದ್ದ ಕಡಗ ಕಳದು

ಕಾಗಲೋಡಿಗೆ ಮಾರಿದಳಣ್ಣ
ಮೂಗಲ್ಲಿದ್ದ ಮೂಗ್ತಿ ಬಿಚ್ಚಿ
ಮೂಗೂರಿಗೆ ಮಾರಿದಳಣ್ಣ
ಕತ್ತಿನಲ್ಲಿದ್ದ ತಾಳಿ ಬಿಚ್ಚಿ
ತಾಯೂರಿಗೆ ಮಾರಿದಳಣ್ಣ
ಉಟ್ಟಿರುವಂಥ ಸೀರೆ ಬಿಚ್ಚಿ
ಮಾರವಾಡಿಗೆ ಮಾರಿದಳಣ್ಣ
ಗೋಣಿಪಟ್ಟೆ ಉಟ್ಟಕಂಡು
ತಣ್ಣಗೆ ನುಣ್ಣಗೆ ಕುಂತಳಣ್ಣ
ಕೊಳತೂರು ಬೊಮ್ಮಣ್ಣನೆಡ್ತಿ
ಹೊಗೆಸೊಪ್ಪಿನ ತೆವಲುಗಾತಿ
ಮರಳ್ಳಿ ಸಂತೆಗೆ ಹೋಗಿದ್ದವನು
ಕೊಳತೂರು ಬೊಮ್ಮಣ್ಣನವನು
ಗಾಡಿನಾದರು ಅಟ್ಟಿಕಂಡು
ಊರಿಗಾದರು ಬಂದನಣ್ಣ
ಗಾಡಿನಾದರು ಬಿಟ್ಟು ಬಿಟ್ಟು
ಹೆಡ್ತಿನಾದರು ಕೂಗಿದನಣ್ಣ
“ಹೆಣ್ಣೆ ಯಾರ್ ಮನೆಯಲ್ಲಿ ?
ಹೆಣ್ಣೆ ಕಾಲಿಗೆ ನೀರ್ ತತ್ತಾ
ಹೆಣ್ಣೆ ಯಾರ್ ಮನೆಯಲ್ಲಿ ?
ಹೆಣ್ಣೆ ಕೈಯಿಗೆ ನೀರ್ ತತ್ತಾ’
ಗಂಡನ ಸದ್ದ ಕೇಳಿದಳಣ್ಣ
ದಡಕನೆ ಕದವ ತಗದಳಣ್ಣ
ಮೊಗೆಯಲಿ ನೀರ ತುಂಬಿದಳಣ್ಣ
ಗಂಡಗೆ ನೀರ ತಂದಳಣ್ಣ
“ಹೆಣ್ಣೆ ಉಟ್ಟಿದ್ದುದು ನೂಲಿನ ಸೀರೆ
ಈ ಬೆಡಗಿನ ಸೀರೆ ಎಲ್ಲಿಂದ್ ಬಂತೆ ?’
“ಸೀರೆ ಸೆಣೆದು ಸೂರಿಗೆ ಕಟ್ಟಿದ್ದಿ
ಸುಂಟರಗಾಳಿ ಎತ್ಕಂಡೋಯ್ತು
ಅದ್ಲಿ ಬದ್ಲಿ ಸೀರೆ ಇಲ್ಲಾ
ಗೋಣಿಪಟ್ಟಿ ಸುತ್ತಿಕಂಡೆ”
“ಸೀರೆ ಹೋದರು ಹೋಗಲಿ ಹೆಣ್ಣೆ
ಕೈಯಲ್ಲಿದ್ದ ಕಡಗ ಎಲ್ಲಿ ?’
ಮೂಗಲ್ಲಿದ್ದ ಮೂಗ್ತಿ ಎಲ್ಲಿ ?
ಕತ್ತಲಿದ್ದ ತಾಳಿ ಎಲ್ಲಿ ?
“ತಾಳಿ ಕಳ್ದು ಗೂಡಲಿಟ್ಟು
ತಾನನಾದರು ಮಾಡುತಿದ್ದಿ
ಸುಂಡಣ ಭಾವ ಕಚ್ಚಿಕಂಡು
ಬಿಲಕಾದರೆ ಹೊಂಟೇ ಹೋದ
“ತಾಳಿ ಹೋದರು ಹೋಗಲಿ ಹೆಣ್ಣೆ
ಕೊಟ್ಟಿಗೆಯಲಿದ್ದ ಕುರಿಯು ಎಲ್ಲಿ ?’
“ಕುರಿ ಬುಟ್ಕಂಡು ಒಳಗೆರೆಲಿದ್ದಿ
ತೋಳಣ್ಣ ಬಂದು ತಿಂದೆಬಿಟ್ಟ”
“ಕುರಿಹೋದರು ಹೋಗಲಿ ಹೆಣ್ಣೆ
ಹಟ್ಟಿಲಿದ್ದ ದನವು ಎಲ್ಲಿ ?’
“ಮೂಡಲ ಗಿಡವಿಗೆ ಹೊಡಿದಿದ್ದಿ ರಾಯ
ಕಿರುಬಣ್ಣ ಬಂದು ತಿಂದೆ ಬಿಟ್ಟ’
“ದನವು ಹೋದರು ಹೋಗಲಿ ಹೆಣ್ಣೆ
ಗುಳಿಲಿದ್ದ ಜ್ವಾಳ ಎಲ್ಲಿ ?”
“ಅಟ್ಟದ ಪುರದ ಬೆಟ್ಟದ ಪುರದ
ನಂಟರು ಬಂದು ಉಣ್ಕಂಡೋದರು”
“ಎಲ್ಲ ಹೋದರು ಹೋಗಲಿ ಹೆಣ್ಣೆ
ಹೊಗೆಯ ಸೊಪ್ಪು ಎಲ್ಲಿ ಹೋಯ್ತು ?”

ಎಷ್ಟೂ ಅಂತ ಸುಳ್ಳು ಹೇಳುವುದು ? ನಡೆದದ್ದನ್ನೆಲ್ಲ ಕೊನೆಗೆ ಹೇಳಿಬಿಟ್ಟಳು.

“ಎಪ್ಪತ್ತು ಕಟ್ಟು ಹೊಗೆಸೊಪ್ಪು
ಹೋಯ್ತಾ ಬತ್ತ ತಿಂದೆಬಿಟ್ಟಿ
ಕಟುಕಗಾರ್ ನನ್ನೈದನ ಸೊಪ್ಪು
ಕುರಿಯನಾದರೆ ಮಾರಿಸ್ತಯ್ಯ
ಕಣಿವೆ ಕೊಂಗ್ ನನ್ನೈದನ ಸೊಪ್ಪು
ದನವನಾದರೆ ಮಾರಿಸ್ತಯ್ಯ
ಕಂಚುಗಾರ್ ನನ್ನೈದನ ಸೊಪ್ಪು
ಕಂಚು ಮುಟ್ಟ ಮಾರಿಸ್ತಯ್ಯ
ಕಾಗಲೋಡಿ ನನ್ನೈದನ ಸೊಪ್ಪು
ಕಡಗನಾದರೆ ಮಾರಿಸ್ತಯ್ಯ
ಮೂಗೂರ ನನ್ನೈದನ ಸೊಪ್ಪು
ಮೂಗ್ತಿನಾದರೆ ಮಾರಿಸ್ತಯ್ಯ
ತಾಯೂರ ನನ್ನೈದನ ಸೊಪ್ಪು
ತಾಳಿನಾದರೆ ಮಾರಿಸ್ತಯ್ಯ
ಮಾರವಾಡಿ ನನ್ನೈದನ ಸೊಪ್ಪು
ಸೀರೆನಾದರೆ ಮಾರಿಸ್ತಯ್ಯ

ಮನೆಯಲ್ಲಿದ್ದುದನ್ನೆಲ್ಲ ಹಾಳು ಮಾಡಿದ ಹೆಂಡತಿಯ ಮೇಲೆ ಬೊಮ್ಮಣ್ಣನಿಗೆ ಸಿಟ್ಟು ಬಂತು.

ಬೀಡದೊಣ್ಣೆ ಎಳೆದುಕೊಂಡ
ಮನೆಯ ಮೂಲ್ಗೆ ಸೇರಿಸಿಕಂಡ
ಬೀಡೆ ದೊಣ್ಣೆ ಏಟು ಬಿದ್ದು
ಟಮ್ಮ ಟುಮ್ಮನೆ ಕುಣಿದಳಣ್ಣ

ಇನ್ನೊಂದು ಸಾರಿ ಹೊಗೆಸೊಪ್ಪಿನ ಸಿಂತೆಗೆ ಹೋಗುವುದಿಲ್ಲ ಎನ್ನುವವರೆಗೆ, ಮೈಕೈ ಎಲ್ಲಾ ಬಾಸುಂಡೆ ಬರುವ ಹಾಗೆ ಬಾರಿಸಿದ. ಅಂದಿನಿಂದ ಬೊಮ್ಮಣ್ಣನ ಹೆಂಡತಿಗೆ ಹೊಗೆಸೊಪ್ಪಿನ ತೆವಲು ಇಳಿದು ಹೋಯಿತು.**      ಮುಂದೆ ಬರುವ ಪದ್ಯ ಭಾಗದ ಪ್ರತಿ ಎರಡು ಸಾಲುಗಳ ಕೊನೆಯಲ್ಲಿ ಈ ಪಲ್ಲವಿಯನ್ನು ಹಾಡಿಕೊಳ್ಳಬೇಕು.*      ಹೊಗೆಸೊಪ್ಪಿನ ತೆವಲು; ಲಿಂಗಯ್ಯ, ಡಿ. ಕರ್ನಾಟಕ ಜನಪದ ಕಾವ್ಯಗಳು, ದಿನಕರ ಪ್ರಕಾಶನ ಬೆಂಗಳೂರು – ೧೯೭೬ ಪು.ಸಂ.