ಈಶ್ವರ ಮೂರುತಿಗೆ ಯಾವದು ನೀರೋ
ಆನಂತ ಮೂರುತಿಗೆ ಯಾವದು ನೀರೋ
ದೇವಿ ಎಲ್ಲಮ್ಮಗ ಯಾವದು ನೀರೋ ಶಿವಶಿವ          ೧

ಈಶ್ವರ ಮೂರುತಿಗೆ ಬಾವಿಯ ನೀರೋ
ಆನಂದ ಮೂರುತಿಗೆ ಹೊಳಿಯ ನೀರೋ
ದೇವಿ ಎಲ್ಲಮ್ಮಗ ಎಣಿಗೊಂಡ ನೀರೋ ಶಿವಶಿವ        ೨

ಈಶ್ವರ ಮೂರುತಿಗೆ ಯಾವದು ಉಡುಗರೆ
ಆನಂದ ಮೂರುತಿಗೆ ಯಾವದು ಉಡುಗರೆ
ದೇವಿ ಎಲ್ಲಮ್ಮಗ ಯಾವದು ಉಡುಗರೆ ಶಿವಶಿವ        ೩

ಈಶ್ವರ  ಮೂರುತಿಗೆ ಬಿಳಿಯ ಉಡುಗರೆ
ಆನಂತ ಮೂರುತಿಗೆ ಕಾವಿಯ ಉಡುಗರೆ
ದೇವಿ ಎಲ್ಲಮ್ಮಗ ಜರತಾರ ಮಡಿಯು ಶಿವಶಿವ         ೪

ಈಶ್ವರ ಮೂರುತಿಗೆ ಏನೇನು ಧರಿಸ್ಯಾರು
ಆನಂದ ಮೂರುತಿಗೆ ಏನೇನು ಧರಿಸ್ಯಾರು
ದೇವಿ ಎಲ್ಲಮ್ಮಗ ಏನೇನು ಧರಿಸ್ಯಾರು ಶಿವಶಿವ        ೫

ಈಶ್ವರ ಮೂರುತಿಗೆ ವಿಭೂತಿ ಧರಿಸ್ಯಾರು
ಆನಂದ ಮೂರುತಿಗೆ ಗಂಧವ ಧರಿಸ್ಯಾರು
ದೇವಿ ಎಲ್ಲಮ್ಮಗ ಭಂಡಾರ ಧರಿಸ್ಯಾರು ಶಿವಶಿವ       ೬

ಈಶ್ವರ ಮೂರುತಿಗೆ ಯಾವದು ಹೂವ
ಆನಂದ ಮೂರುತಿಗೆ ಯಾವದು ಹೂವ
ದೇವಿ ಎಲ್ಲಮ್ಮಗ ಯಾವದು ಹೂವ ಶಿವಶಿವ  ೭

ಈಶ್ವರ ಮೂರುತಿಗೆ ಮಲ್ಲಿಗೆ ಹೂವ
ಆನಂದ ಮೂರುತಿಗೆ ಶಾವಂತಿಗಿ ಹೂವ
ದೇವಿ ಎಲ್ಲಮ್ಮಗ ಕೇದಿಗಿ ಹೊಡಿಯು ಶಿವಶಿವ          ೮

ಈಶ್ವರ ಮೂರುತಿಗೆ ಯಾವದು ನೈವೇದ್ಯ
ಆನಂದ ಮೂರುತಿಗೆ ಯಾವದು ನೈವೆದ್ಯ
ದೇವಿ ಎಲ್ಲಮ್ಮಗ ಯಾವದು ನೈವೆದ್ಯ ಶಿವಶಿವ         ೯

ಈಶ್ವರ ಮೂರುತಿಗೆ ಉತ್ತತ್ತಿ ಹಣ್ಣು
ಆನಂದ ಮೂರುತಿಗೆ ಬಾಳಿಯ ಹಣ್ಣು
ದೇವಿ ಎಲ್ಲಮ್ಮಗ ಟೆಂಗಿನ ಕಾಯಿ ಶಿವಶಿವ    ೧೦

ಈಶ್ವರ ಮೂರುತಿಗೆ ಯಾವದು ದೀಪ
ಆನಂದ ಮೂರುತಿಗೆ ಯಾವದು ದೀಪ
ದೇವಿ ಎಲ್ಲಮ್ಮಗ ಯಾವದು ದೀಪ ಶಿವಶಿವ   ೧೧

ಈಶ್ವರ ಮೂರುತಿಗೆ ಒಳ್ಳೆಯೆಣ್ಣಿ ದೀಪ
ಆನಂದ ಮೂರುತಿಗೆ ನಂದಾದೀಪ
ದೇವಿ ಎಲ್ಲಮ್ಮಗ ತುಪ್ಪದ ದೀಪ ಶಿವಶಿವ     ೧೨

ಈಶ್ವರ ಮೂರುತಿಗೆ ಯಾವದು ಧೂಪ
ಆನಂದ ಮೂರುತಿಗೆ ಯಾವದು ಧೂಪ
ದೇವಿ ಎಲ್ಲಮ್ಮಗ ಯಾವದು ಧೂಪ ಶಿವಶಿವ  ೧೩

ಈಶ್ವರ ಮೂರುತಿಗೆ ಊದಿನಕಡ್ಡಿ ಧೂಪ
ಆನಂದ ಮೂರುತಿಗೆ ಗುಗ್ಗಳ ಧೂಪ
ದೇವಿ ಎಲ್ಲಮ್ಮಗ ಕರಪುರ ಧೂಪ ಶಿವಶಿವ    ೧೪

ಈಶ್ವರ ಮೂರುತಿಗೆ ಯಾವದು ಎಡಿಯು
ಆನಂದ ಮೂರುತಿಗೆ ಯಾವದು ಎಡಿಯು
ದೇವಿ ಎಲ್ಲಮ್ಮಗ ಯಾವದು ಎಡಿಯು ಶಿವಶಿವ         ೧೫

ಈಶ್ವರ ಮೂರುತಿಗೆ ಹುಗ್ಗಿಯ ಎಡಿಯು
ಆನಂದ ಮೂರುತಿಗೆ ಹೋಳಿಗೆಯ ಎಡಿಯು
ದೇವಿ ಎಲ್ಲಮ್ಮಗ ಕರಿಗಡಬ ಎಡಿಯು ಶಿವಶಿವ          ೧೬