ರಾಯ ಮೀನಿಗೋಯ್ತಾರೆ
ರಾಯ ನಗರದ ಕೆರೆಗೆ ಮೀನಿಗೋಯ್ತಾರೆ | ಸೊಲ್ಲು |

ಚಿಬ್ಬಲು ಪುಟ್ಟಿ ತೆಗೆಯಮ್ಮ
ದೊಡ್ಡ ಬಲೆಯ ತೆಗೆಯಮ್ಮ
ಚಿಬ್ಬಲು ಪುಟ್ಟಿ ತೆಗೆದಾಳೊ
ದೊಡ್ಡ ಬಲೆಯ ತೆಗೆದಾಳೊ
ನಗರದ ಕೆರೆಗೆ ಮೀನಿಗ್ಹೊರಟಾರೊ
ಅವರು ಮೀನಿಗ್ಹೊರಟಾರೊ

ಮುಳುಗಿ ಮುಳ್ಗಿ ಎದ್ದಾನೊ
ದಪ್ಪದಪ್ಪ ಮೀನ್ ಹಿಡಿದಾನೊ
ಕೋಡಿ ಬಾಯಿಗೆ ಬಂದಾನೊ
ಮತ್ತಷ್ಟೊಗರ ಹಾಕಿನೊ
ಉಜ್ಜಿ ಕೆರೆದು ತೊಳೆದಾನೊ
ಉಜ್ಜಿ ಕೆರ‍್ದು ತೊಳ್ದುಕೊಂಡು
ಅವರು ಮನೆಗೆ ಬಂದಾರೊ

ಮನೆಗೆ ಬಂದು ಸಂಬಾರೇಳಿರಿ
ರಾಯ ಮನೆಗೆ ಬಂದು ಸಂಬಾರೇಳಿರಿ
ದಂಡೆ ಮನೇರ್ ಕೇಳಮ್ಮಿ
ಪಕ್ಕುದ್ ಮನೇರ್ ಕೇಳಮ್ಮಿ
ನೀಲಕ್ಕ ನಿಂಗಕ್ಕ
ಮಾದಕ್ಕ ಮಲ್ಲಕ್ಕ
ಅವ್ವ ಕೂದ ಮೀನಿಗೆ ಸಂಬಾರೇಳಿರಿ
ಅವ್ವ ಸಂಬಾರೇಳಿರಿ
ಅಮ್ಮಿ ಆರುಬಳ್ಳ ಮೆಣ್ಸುನ್‌ಕಾಯಿ ಅರ‍್ದಾಕು
ಮೂರು ಬಳ್ಳ ಮೆಣ್ಸಿನ್‌ಕಾಯ್ ಮುರ‍್ದಾಕು
ಒಂದು ಗುಂಡು ಹುಣ್ಸಯ್ಯ ಕದರುಯ್ಯಿ
ಮೂರು ಬಿಂದ್ಗೆ ನೀರ ಬೆರಸೆತ್ತು
ಅಮ್ಮಿ ಒಲೆ ಮ್ಯಾಲ್ಮಡಗಮ್ಮಿ
ಅಮ್ಮಿ ಬೆಂಕಿ ಒಟ್ಟಮ್ಮಿ
ಬೆಂಕಿ ಹಾಕಮ್ಮಿ ಅಮ್ಮಿ
ಚೆನ್ನಾಗಿ ಬೇಯ್ಸಮ್ಮಿ ಅಮ್ಮಿ
ನೆಕ್ಕಿ ನೋಡಮ್ಮಿ ಅಮ್ಮಿ
ಅವ್ರು ಸಂಬಾರೇಳಿರೊ ಅವರು
ಸಮಕಟ್ಟೇಳಿರೊ

ಹೆಣ್ಣು ಸಂಬಾರಾಕಿದೋ
ಹೆಣ್ಣು ಒಲೆ ಮ್ಯಾಲಿಟ್ಟಾದೋ
ಮೀನು ಕೊತ ಕೊತ ಬೆಂದಾದೊ
ಎಸ್ರು ಗಮಗಮ್ಮೆಂದಾದೊ
ಗಮ್ ಗಮ ಗುಟ್ಟಿದೊ

ಅಟ್ಲಿಗೇಣಿ ಹಾಕೀಳೊ
ಹರುಕಲು ಚಟ್ಟಿ ತಗಿದಾಳೊ
ದಪ್‌ದಪ್ ಕಡಿಯ ತುಂಬೀಳೊ
ಹಾಯ್ಗಡಿಯ ಆದಾಳೋ
ಕೂಯ್ಗಡಿಯ ಕೂದಾಳೊ
ಅಟ್ಟಲ ಮೇಲೆ ಮಡಗೀಳೊ
ಹೆಣ್ಣು ಅಮಸಿ ಮಡಿಗೀಳೊ

ಚವುಡಿಲಿ ಮನಗಿದ್ದು ಬಂದ ರಾಯರ‍್ಗೆ
ತಪ್ಪಲೇಲಿ ನೀರ ಕೊಟ್ಟಾಳೊ
ತಣಗೆನಾದರೆ ಮಡಗೀಳೊ
ಹರಕಲ ಗುಂಡೇಡಿಕ್ಕೀಳೊ
ತಲೆ ಬಾಲೆರಡ ಹಾಕೀಳೊ
ಅಮ್ಮಿ ದಂಡೆ ಕಡಿಯೆಲ್ಲಿ
ಅಮ್ಮಿ ಪಕ್ಕದ ಕಡಿಯೆಲ್ಲಿ

ರಾಯ ನಾನೇನು ಬಲ್ಲೆ ರಾಯ
ರಾಯ ನಾನೇನು ಬಲ್ಲೆ ರಾಯ
ಮಾಡಿದಳಗುಣವೊ ಮಡಕೆ ಗುಣವೊ
ಹೋಜಿ ಮಾಡಿದ ಸಟ್ಗದ ಗುಣವೊ
ತಿಟ್ಟೇಮೇಲಿರುವ ಪಟ್ಟಲದಮ್ಮನಿಗೆ
ತಪ್ಪದೆ ಒಂದೊತ್ತಿರುವೆನು
ನಾನೇನು ಬಲ್ಲೆ ಗಂಡರಾಯ
ಕೋನೆ ದೇವಾರು ಬಲ್ಲಾದು
ನನಗೊಂದು ತಿಳಿಯಾದು

ಅಟ್ಟಲಿಗೇಣಿ ಹಾಕೀನೋ
ಹರಕಲಚಟ್ಟ ತೆಗೆದಾನೊ
ಅಮ್ಮಿ ಯಾರಿಗೆ ಮಡಗಿದ್ದಿ
ಅಮ್ಮಿ ಯಾತಕ ಮಡಗಿದ್ದಿ

ತಂಗಳಿಗೆ ಮಡಗಿದ್ದೆ
ರಾಯ ತಂಗಳಿಗೆ ಮಡಗಿದ್ದೆ
ರಾಯ ನಿನಗೂ ಎರಡಾವೆ
ರಾಯ ಮಕ್ಕಳಿಗೆರಡಾವೆ
ರಾಯ ತಂಗಳಿಗೆರಡಾವೆ
ತಂಗಳಿಗೆರಡಾವೆ

ಜೋಬಿಗೆ ಕೈಯ ಹಾಕೀನೊ
ಪರಂಗಿ ಚಾಕ ತಗಿದಾನೊ
ಮೂಗ ಕೂದಾನೊ ಮೂಗಿನ
ಹೊಳ್ಳೆ ಕೂದಾನೊ

ಕೂದ ಮೂಗ ಬಿಂದಿಗೆಗಾಕ್ಕೊಂಡು
ಹೆಣ್ಣು ಬಾವಿಗೆ ಹೊರಟಾದೊ
ಬಿಂದಿಗೆನಾದರೆ ಮಡಗೀಳು
ಬಾವಿ ಬಗ್ಗಿ ಬಗ್ಗಿ ನೋಡೀಳು
ಅವ್ವಾ ನನ್ನ ಗಂಡ ಕೂದನವ್ವ
ಮೂಗ ಕೂದನವ್ವ

ಅವ್ವ ಅಂದಕೆ ಕೂದಾನೆ
ಅವ್ವ ಚಂದಕೆ ಕೂದಾನೆ
ಅವ್ವ ದಂಡೆ ಮನೆಯವರೆ
ಅವ್ವ ಪಕ್ಕದ ಮನೆಯವರೆ
ಅವ್ವ ಕೂದ ಮೂಗೀಗೆ ಔಷದಿ ಹೇಳೀರಿ
ಅವ್ವ ಔಷದಿ ಹೇಳಿರಿ

ಮೂರು ಬಳ್ಳ ಮೆಣಸಿನ ಕಾಯ
ಅರದು ಒತ್ತಮ್ಮಿ ಅಮ್ಮಿ
ಆರು ತಬ್ಬ ಚುರುಕನ ಸೊಪ್ಪ
ಕಲಸಿ ಮೆತ್ತಮ್ಮಿ ಅಮ್ಮಿ
ಅಮ್ಮಿ ಮೂಗಿಗೆ ಮೆತ್ತಮ್ಮಿ
ಮೂಗಿನ ಹೊಳ್ಳೆಗೆ ಮೆತ್ತಮ್ಮಿ

ಹೆಣ್ಣು ಹಾಗೆ ಮಾಡೀದೋ
ಶಿವನೆ ಹಾಗೆ ಮಾಡೀದೊ

ಹೆಣ್ಣು ಉರಿ ಉರಿ ಅಂದಾದೊ
ಹೆಣ್ಣು ಜೀವ ಬಿಟ್ಟೀದೊ
ಏಳೂರ ಸೊಳ್ಳೆ ಸೇರೀವೊ
ಸೇರಿ ನ್ಯಾಯ ಮಾಡೀವೊ

ಪಾಠಾಂತರ ಮತ್ತು ಸಮಾನ ಆಶಯ ಪಠ್ಯ

೧. ಮೀನಿನ ಬಯಕೆ; ಲಿಂಗಯ್ಯ ಡಿ. ಕರ್ನಾಟಕ ಜನಪದ ಕಾವ್ಯಗಳು, ದಿನಕರ ಪ್ರಕಾಶನ ಬೆಂಗಳೂರು ೧೯೭೬ ಪು.ಸಂ. ೧೬೯-೧೭೪.*      ಮೀನಿನೆಸರು; ರಂಗಣ್ಣ ವಿ.ಎಸ್. ಕೋಲ್ ಕೋಲ್ ಕೂಡಿ ಬರಲಿ, ಕನ್ನಡ ಅಧ್ಯಯನ ಸಂಸ್ಥೆ ಮೈಸೂರು ವಿಶ್ವವಿದ್ಯಾಲಯ ಮೈಸೂರು ೧೯೭೬ ಪು.ಸಂ. ೬೬-೬೯