ಚಿತ್ತಾರದಸೆಯ ಎತ್ತಾಗೆ ಬರೆಯೋನ ಶಿವನೆ
ಇತ್ತಾಲ ಬಾಳೆ ಇದರೀಗೆ | ಭೈರುವಸ್ವಾಮಿ
ಹೇಗೆ ಮಾಡೀಯೆ ಜನರೀಗೆ ||

ಬೆಡಗೀನಸೆಯ ಎತ್ತಾಗೆ ಬರೆಯೋನ ಶಿವನೆ
ಇತ್ತಾಲ ಬಾಳೆ ಇದಿರೀಗೆ | ಭೈರುವಸ್ವಾಮಿ
ಹೇಗೆ ಮಾಡೀಯೆ ಜನರೀಗೆ ||

ಕಂಬಕೆ ಇದುರಾಗಿ ತುಂಬ್ಯವರೆ ಚೌಕಾವ
ಕಂಬದಲೆರಡು ಅರಗಿಣಿ | ಪುಣಗಿನ ಬೆಕ್ಕು
ಅವು ಸೋಬಾನ್ದ ನುಡಿಯ ನುಡಿದಾವೆ ||

ಗುಡಿಗೆ ಇದುರಾಗಿ ಹೂಡ್ಯವರೆ ಚೌಕಾವ
ಗೂಡಿನಲೆರಡು ಅರಗಿಣಿ | ಪುಣಗಿನ ಬೆಕ್ಕು
ಅವು ಸಂಭ್ರಮದ ನುಡಿಯ ನುಡಿದಾವೆ ||

ನಾಗಳಮುತ್ತು ವಾರಲ್ಲಿ ರಾಸಿ ಹುಯ್ದು
ಹರವ್ಯವ್ರೆ ಮುತ್ತು ಹಸೆಗೆಲ್ಲ | ಗಂಡೀನ
ತಾಯಿ ತುಂಬ್ಯವಳೆ ಚೌಕಾವ ||

ಒಕ್ಕಳಮುತ್ತು ವತ್ತೀಲಿ ರಾಸಿಹುಯ್ದು
ತುಂಬ್ಯವ್ರೆ ಮುತ್ತ ಹಸಗೆಲ್ಲ | ಗಂಡೀನ
ಅಕ್ಕ ತುಂಬ್ಯವಳೆ ಚೌಕಾವ ||

ಮುತ್ತಿನ ಹಸೆ ಬರೆದು ಮುತೈದೇರು ನಿಂತವರೆ
ಕ್ವಾವೆ ಕಾಳಿಂಗ ಪದಹೇಳೊ ||
ರಾಜಣದ ಹಸೆ ಬರೆದು ನಾರೀರು ನಿಂದವರೆ

ಗೋವೆ ಕಾಳಿಂಗ ಕತೆ ಹೇಳೊ ||
ಎಣ್ಣೆ ಅರಿಸಿಣ ಸೊನ್ನೆನಾಡುತ ಬಂದೋ
ಇನ್ನ ಮನಿಗ್ಯವನೆ ಮದುವಣ್ಣ | ನಿಧಿಮ್ಯಾಲೆ

ಅವು ಸೊನ್ನೆನಾಡ್ಯವೆ ಉಗುರ‍್ಹೆಣ್ಣೆ ||
ಉಗುರೆಣ್ಣೆ ಹೋಗಿ ಗಗನಾವ ತಗಿಲಾವೆ
ಮಗನ ಮಂಡೇಲಿ ಹೊರಗ್ಯವೆ ||

ಅರಿಸಿಣ ಸೀಗೆಕಾಯಿ ಸೊನ್ನೆನಾಡುತ ಬಂದೋ
ಇನ್ನ ಮನಿಗ್ಯವನೆ ಮದುವಣ್ಣ | ನಿಧಿಮ್ಯಾಲೆ
ಅವು ಸೊನ್ನೆತಾಡ್ಯವೆ ಉಗುರ‍್ಹೆಣ್ಣೆ ||

ಉಗುರ‍್ಹೆಣ್ಣೆ ಹೋಗಿ ಗಗನಾವ ತಗಿಲಾವೆ
ಮಗನ ಮಂಡೇಲಿ ತಳಿಗ್ಯಾವೆ ||

ಒಕ್ಕಳ ಹುಚ್ಚೆಳ್ಳು ಎತ್ತಿಗಾಣಕೆ ಹುಯ್ದು
ಶಿವಪ್ಪನೆಂಬ ಎರಡೆತ್ತು | ಆಡಿದ ಎಣ್ಣೆ
ನಾರಿ ಮಗನೀಗೆ ಉಗುರ‍್ಹೆಣ್ಣೆ ||

ಉಗುರೆಣ್ಣೆ ಹೋಗಿ ಗನಾವ ತಳುಗ್ಯಾವೋ
ಮಗನ ಮಂಡೇಲಿ ಹೊರಿಗ್ಯಾವು ||

ಹತ್ತುಕೊಳಗ ಹುಚ್ಚೆಳ್ಳು ಎತ್ತಿ ಗಾಣಕೆ ಹುಯ್ದು
ಶಿವಪ್ಪನೆಂಬ ಎರಡೆತ್ತು | ಆಡಿದ ಎಣ್ಣೆ
ಶೆಟ್ಟ್ಯೋರ ಮಗನೀಗೆ ಉಗುರ‍್ಹೆಣ್ಣೆ ||

ಉಗುರೆಣ್ಣೆ ಹೋಗಿ ಗಗನಾವ ತಳುಗ್ಯಾವೋ
ಮಗನ ಮಂಡೇಲಿ ಹೊರಿಗ್ಯಾವು ||