ತ್ವಾಡನ್ಗೆ ತೋಳ್ ಬಂದಿ
ಹೆಗ್ಗಣಕೆ ಎಡಕಟ್ಟು

ತ್ವಾಡಣ್ಣನ್ ಮೇಲಾಸೆ
ಅವಳಾರು ತಿಂಗಳ್ ಬಿಮ್ಮನಸೆ
ಅವಳ್ ಮೂರು ತಿಂಗಳ್ ಬಾಣಂತಿ

ದಪ್ಪಕ್ಕಿ ಅನ್ನ
ಅವಳೊಲ್ಲಲಂತೆ ಗಿಲ್ಲಲಂತೆ

ತ್ವಾಡನ್ಗೆ ತೋಳ್ ಬಂದಿ
ಹೆಗ್ಗಣಕೆ ಎಡಕಟ್ಟು

ಸಣ್ಣಕ್ಕಿ ಅನ್ನ
ಅವಳೊಲ್ಲಲಂತೆ ಗಿಲ್ಲಲಂತೆ

ಅವಳ್ ಮಂಡೆ ಹೂವೀನ್ ಹಾಸೀಗೆ
ತುಂಬಿ ಹೂವ್ನ ತಲೆದಿಂಬು

ತ್ವಾಳನ್ಗೆ ತೋಳ್ ಬಂದಿ
ಹೆಗ್ಗಣಕೆ ಎಡಕಟ್ಟು

ಅದಷ್ಟನ್ನೆ ಉಂಡಾಳಂತೆ
ಅವಳು ಗುಡಸಲ್ಮೇಲೆ ವರಗಳಂತೆ

ಚಿಕ್ಕೇನ ಹಳ್ಳಿ ಬಯಲೆಲ್ಲ
ತುದಿಗೆಂಪುವಾದಾವು

ತ್ವಾಡನ್ಗೆ ತೋಳ್‌ಬಂದಿ
ಹೆಗ್ಗಣಕೆ ಎಡಕಟ್ಟು
ತೋಡಣ್ನ ದಿಬ್ಬಾಕೆ

ಕತ್ತರಿಸಿ ಉತ್ತರಿಸಿ
ಅವಳ್ ದಿಬ್ಬಾಕೆ ತುಂಬುಕಂಡ

ಗದ್ದೇಯ ಗೌಡ್ಬಂದ
ಅವರ್ ಗದ್ದೇನೆಲ್ಲ ನೋಡುತಾರೆ

ತೋಡನ್ಗೆ ತೋಳ್ ಬಂದಿ
ಹೆಗ್ಗಣಕೆ ಎಡಕಟ್ಟು

ವಡ್ಡರಳ್ಳಿ ವಡ್ಡಾರು
ಅವರ‍್ನ ಬೇಗದಲ್ಲಿ ಕರೆಸಾರೆ

ಬೇಗದಲಿ ಬರುತಾರೆ
ಅವ್ರು ದಿಬ್ಬನಾರೆ ಅಗಿತಾರೆ

ತಿಮ್ಮಸುಟ್ಟ ಎಳಕಂಡು
ತ್ವಾಡಣ್ಣ ಓಡೋಯ್ತನೆ
ಅವ್ರು ಹಿಡಕಂಡು ಬಂದ್ರಂತೆ

ತ್ವಾಡನ್ಗೆ ತೋಳಬಂದಿ
ಹೆಗ್ಗಣಕೆ ಎಡಕಟ್ಟು

ಅಲ್ಲೇಳಿರೆ ಇಲ್ಲೇಳಿರೆ
ಬಲ್ಲಂತ ಜಾಣೇರು ತಿಳಿದೇಳೀರೆ

ಅಯ್ಯಯ್ಯೊ ತ್ವಾಡಣ್ಣ
ನಿನ್ಬಾಲೆಲ್ಲ ಈಜೋದೊ

ಮೈಸೂರ ಸೂಳೇರು ಕೇಳೆ ಹೆಣ್ಣೆ
ಅವ್ರು ಸರಸಕೆ ಬಂದಿದ್ರು ಕೇಳೆ ಹೆಣ್ಣೆ

ಸರಸಕೆ ಬಂದಿದ್ರು ಕೇಳೆ ಹೆಣ್ಣೆ
ನನ್ಬಾಲವೆಲ್ಲ ಈಜೋದೊ ಕೇಳೇ ಹೆಣ್ಣೆ

ಯಾಕಲ ತ್ವಾಡಣ್ಣ
ನಿನ್ನಲ್ಲೆಲ್ಲ ಮುರುದೋದೊ

ತ್ವಾಡನ್ಗೆ ತೋಳ ಬಂದಿ
ಹೆಗ್ಗಣಕೆ ಎಡಕಟ್ಟು

ಬೆಂಗಳೂರು ಸೂಳೇರು ಕೇಳೇ ಹೆಣ್ಣೆ
ಒಂದ್ ಗೋಟಡಕೆ ಕೊಟ್ಟಾರು ಕೇಳೇ ಹೆಣ್ಣೆ
ಗೋಟಡಿಕೆ ಕೊಟ್ಟಿದ್ರು ಕೇಳೆ ಹೆಣ್ಣೆ

ಯಾಕಲ ತ್ವಾಡಣ್ಣ
ನಿನ್ ಮಿಸೆಯೆಲ್ಲ ಸೀದೋದೊ

ಆ ಚೆನ್ನಪಟ್ಣದ ಸೂಳೇರು ಕೇಳೇ ಹೆಣ್ಣೆ
ಬಂಗೀಯ ಕೊಟ್ಟಿದ್ರು ಕೇಳೆ ಹೆಣ್ಣೆ

ಬಂಗೀಯ ಕೊಟ್ಟಿದ್ರು ಕೇಳೇ ಹೆಣ್ಣೆ
ನನ್ ಮೀಸೆಲ್ಲಾ ಸೀದೋದೊ ಕೇಳೇ ಹೆಣ್ಣೆ

ಅಲ್ಲೇಳಿರೆ ಇಲ್ಲೇಳಿರೆ
ಬಲ್ಲಂಥ ಜಾಣೇರು ತಿಳಿದೇಳಿಗೆ

ಕೆಮ್ಮಣ್ಣ ಗುಂಡೀಲಿ ವಂಟಿದರ್ ಕಾಣಕ್ಕ
ನೆಲ್ಲುಲ್ ಗುಂಡೀಲಿ ಸೀದರ್ ಕಾಣಕ್ಕ
ಚಿನ್ನದ ಚೂರೀಲಿ ಈದರ್ ಕಾಣಕ್ಕ
ರನ್ನದ್ ಮಂಕ್ರೀಲಿ ಹಾಕಿದರ್ ಕಾಣಕ್ಕ
ಕೊಡಗನ್ ಮಡಕೇಯ ತಂದರ್ ಕಾಣಕ್ಕ
ಚಿಗಟೂರ ಮೆಣಸಿನ ಕಾಯಿ ತಂದರ್ ಕಾಣಕ್ಕ
ಬೆಂಗಳೂರ್ ಬೆಳ್ಳುಳ್ಳಿ ತಂದರ್ ಕಾಣಕ್ಕ
ಚೆನ್ನಪಟ್ಣದ ಈರುಳ್ಳಿ ತಂದರ್ ಕಾಣಕ್ಕ

ಕೊತ್ನಳ್ಳಿ ಕೊತ್ಮೀರಿ ತಂದರ್ ಕಾಣಕ್ಕ
ಮೈಸೂರ್ ತುಪ್ಪವ ಹಾಕಿದರ್ ಕಾಣಕ್ಕ

ಗಾಣಿಗರ್ ಹಟ್ಟಿ ಎಣ್ಣೆ hUದರ್ ಕಾಣಕ್ಕ
ಡರ್‌ಬರ‍್ನೆ ಹುರಿದರ್ ಕಾಣಕ್ಕ
ಬಡದೋರತ್ಕಾಳು ತಿಂದರ್ ಕಾಣಕ್ಕ*   ತ್ವಾಡನ್ಗೆ ತೋಳಬಂದಿ ಹೆಗ್ಗಣಕೆ ಎಡಕಟ್ಟು; ಕಂಬಾರ ಚಂದ್ರಶೇಖರ ಮತ್ತು ಬರಗೂರು ಜಯಪ್ರಕಾಶ್, ಮುತ್ತು ಮುತ್ತಿನ ತ್ವಾಟ, ಬೆಂಗಳೂರು ವಿಶ್ವವಿದ್ಯಾಲಯ ಬೆಂಗಳೂರು – ೧೯೮೧. ಪುಸಂ. ೧೦೭-೧೦೯