ಗೇರುಸೊಪ್ಪೆ : ಹೊನ್ನಾವರದಿಂದ ಶರಾವತಿ ನದಿಗುಂಟ ೨೪ ಕಿ.ಮೀ. ಸುಖಮಯ ನಾವೆವಿಹಾರ ಮಾಡಿ ಇಲ್ಲವೆ ಬಸ್ಸಿನಲ್ಲಿ ೨೪ ಕಿ.ಮೀ. ಪ್ರಯಾಣಿಸಿ ಈ ನೆಲೆಯನ್ನು ಸೇರಬಹುದು. ಹಿಂದೆ ಪರದೇಶಗಳಲ್ಲು ಪ್ರಸಿದ್ಧಿ ಪಡೆದ “ಕರೆಮೆಣಸಿನ ರಾಣಿ” (Pepper Queen of India) ಚೆನ್ನ ಬೈರಾದೇವಿ ರಾಜ್ಯವಾಳಿದ ಈ ರಾಜಧಾನಿ ಇಂದು ದಟ್ಟ ಕಾಡಿನ ನಡುವೆ ಹೇಳ ಹೆಸರಿಲ್ಲದೆ ಹಾಳು ಸುರಿಯುತ್ತಲಿದೆ. ಈ ರಾಜ್ಯಕ್ಕೆ ನಗಿರೆ ರಾಜ್ಯವೆಂತಲೂ ಹೆಸರಿತ್ತು. ಅನೇಕ ಕಟ್ಟಡಗಳು, ಕಟ್ಟಡಗಳ ನೆಲಗಟ್ಟುಗಳು, ದೇವಾಲಯಗಳ ಅವಶೇಷಗಳು, ಜೈನ ಬಸದಿಗಳು, ಶಾಸನಗಳು ದಟ್ಟಡವಿ ಮಧ್ಯದಲ್ಲಿ ಪಾಳು ಬಿದ್ದಿವೆ. ಇಲ್ಲಿಯ ಚತುರ್ಮುಖ ಬಸದಿ ಪ್ರೇಕ್ಷಣೀಯ. ನಾಲ್ಕು ನಿಟ್ಟಿನಿಂದ ಒಂದೇ ರೀತಿಯಾಗಿ ಕಾಣುವ ಕಲಾಕುಸುರಿನ ಜಾಣ್ಮೆ ಮಿಗಿಲಾದದ್ದು. ವ್ಯಾಪಾರಕ್ಕಾಗಿ ಈ ಸ್ಥಳ ವಿದೇಶದಲ್ಲಿಯೂ ಪ್ರಖ್ಯಾತವಾಗಿದ್ದುದರಿಂದಲೇ ಈ ಊರಿಂದ ಬಹುದೂರವಿದ್ದ ಶರಾವತಿಯ ಜೋಗಿಗೆ “ಗೇರಸೊಪ್ಪಾ ಜಲಪಾತ” ಎಂಬ ಹೆಸರು ರೂಢಿಯಾಯಿತು. ನೋಡತಕ್ಕ ನೆಲೆಯಿದು.

ಹಾಡುವಳ್ಳಿ : ನಗರಿ ಅರಸರ ದಾಯಾದಿಗಳಾಳುತ್ತಿದ್ದ ಹಾಡುಹಳ್ಳಿ (ಸಂಗೀತಪುರ) ಭಟಕಳದಿಂದ ೨೧ ಕಿ.ಮೀ. ದೂರದಲ್ಲಿದೆ. ಹಾಡುಹಳ್ಳಿಯ ಶಿಲ್ಪಕಲಾ ವೈಭವವು ಉನ್ನತ ಮಟ್ಟದ್ದಾಗಿದೆ. ಗತ ವೈಭವದ ಕುರುಹುಗಳಾಗಿ ೨೪ ಜೈನ ತೀರ್ಥಂಕರಿರುವ ಬಸದಿಯಿದೆ. ಸಂಗಮವರಿ ಕಲ್ಲುಗಳಿಂದ ರಚಿಸಲ್ಪಟ್ಟಿರುವ ಸುಂದರ ಮೂರ್ತಿಗಳಡಿಗೆ ಬರಹಗಳಿವೆ. ಪ್ರಖ್ಯಾತ ಗುರು ವೈಯಾಕರಣಿ ಭಟ್ಟಾಕಳಂಕ ಇಲ್ಲಿ ನೆಲೆಸಿದ್ದನಂತೆ. ಚಂದ್ರಗಿರಿ-ಇಂದ್ರಗಿರಿಗಳಲ್ಲಿ ಸಂಗೀತೋತ್ಸವ ನಡೆಯುತ್ತಿತ್ತಂತೆ. ಚಂದ್ರನಾಥ ಬಸದಿ, ಪದ್ಮಾವತಿ ದೇವಿಯ ಗುಡಿ, ಬಸದಿಯ ತೀರ್ಥಂಕರರು ಇಂದು ಮೌನವಾಗಿ ಧ್ಯಾನಾಸಕ್ತರಾದಂತಿದೆ. ಹಾಡಹಳ್ಳಿಯ ವೈಭವ ಕಾಡುಗೂಡಿ ಹೋಗಿದೆ. ಅಲ್ಲಲ್ಲಿ ಸುಂದರ ಮೂರ್ತಿಗಳು, ಕೆತ್ತನೆಗಳು ಚಳಿ-ಮಳೆ-ಬಿಸಿಲುಗಳನ್ನು ಲೆಕ್ಕಿಸದೆ ನಿಂತಿವೆ. ಇಲ್ಲಿ ಜೈನಕೇರಿ ಎಂದು ತೋರಿಸುವ ಎಡಯಲ್ಲಿ ಸುಮಾರು ೯೦೦ ಬಾವಿಗಳು ಹಾಳು ಬಿದ್ದಿವೆ! ಈ ಊರಿನಲ್ಲಿ ಉತ್ಖನನ ನಡೆಸಿದರೆ ಇಲ್ಲಿಯ ಐತಿಹಾಸಿಕ ಶ್ರೀಮಂತಿಕೆಯ ಮೇಲೆ ಹೆಚ್ಚಿನ ಬೆಳಕು ಬೀಳಲನುಕೂಲವಾಗುವದು.

ಮಿರ್ಜಾನ : ಕುಮಟೆಯಿಂದ ೧೦ ಕಿ.ಮೀ. ಅಂತರದಲ್ಲಿ ಅಘನಾಶಿನಿ ನದಿಯ ತೆಕ್ಕಯಲ್ಲಿ ಇತಿಹಾಸ ಪ್ರಸಿದ್ಧ ಮಿರ್ಜಾನ ಇದೆ. ಕಾಲಕಾಲಕ್ಕೆ ಈ ಊರು ಬೇರೆಬೇರೆ ತೆರನಾಗಿ ಕರೆಯಲ್ಪಟ್ಟಿದೆ. ಮಿಡಿಜಯ್ ಮಿಡಜಿ ಎಂಬುದು ಇದರ ಮೊದಲಿನ ಹೆಸರು. ವಿದೇಶಿಯರು ಮಿರಜಿ ಎಂದರು. ಬಿಜಾಪುರ ಆದಿಲಶಹನಿಂದ ಕಟ್ಟಲ್ಪಟ್ಟ ಕೋಟೆಗೆ ನಾಲ್ಕು ಪ್ರವೇಶ ಮಾರ್ಗಗಳಿದ್ದು ಅಗಲವಾದ ಮೆಟ್ಟಲುಗಳಿವೆ. ೯ ಬಾವಿಗಳು, ಸುರಂಗ ಮಾರ್ಗವಿದ್ದು ೧೦ ಎಕರೆ ವಿಸ್ತಾರವಾಗಿದೆ. ಪ್ರಮುಖ ನೌಕಾ ವ್ಯಾಪಾರ ಕೇಂದ್ರವಾಗಿತ್ತು. ಮಲ್ಲಿಕೇಶ್ವರ, ಲಕ್ಷ್ಮಿನಾರಾಯಣ ದೇವಾಲಯಗಳಿವೆ. ಪಾರ್ಶ್ವನಾಥನ ಮುರಿದ ವಿಗ್ರಹ ಹಾಗು ಊರ ಹೊರಗೆ ಆರು ವೀರಗಲ್ಲುಗಳಿವೆ. ಪೂರ್ವದಲ್ಲಿ ಡೆಕ್ಕನದಿಂದ ವ್ಯಾಪಾರಿಗಳು ಕುದುರೆ-ಕತ್ತೆ-ಎತ್ತುಗಳ ಮೇಲೆ ಸರಕು ಹೇರಿಕೊಂಡು ಇಲ್ಲಿಗೆ ಬರುತ್ತಿದ್ದರು. ಅವುಗಳ ಮೈತೊಳೆಸುವ ನೀರು ಕುಡಿಸುವ ಹಳ್ಳಗಳಿಗೆ ಇಂದಿಗು “ಕುದುರೆಹಳ್ಳ” “ಕತ್ತೆಹಳ್ಳ” ಎಂದು ಕರೆಯುತ್ತಾರೆ. ಅಂಕೋಲೆ ನಾಡನ್ನಾಳಿದ ಸರ್ಪಮಲ್ಲಿಕನೆಂಬವನು ಈ ಕೋಟೆಯನ್ನು ಗೆದ್ದು ಆಳ್ವಿಕೆ ನಡೆಸಿದ್ದರಿಂದ ಈ ಕೋಟೆಗೆ ಸರ್ಪಮಲ್ಲಿಕನ ಕೋಟೆ ಎಂದೂ ಹೆಸರಿದೆ.

ಸದಾಶಿವಗಡ : ಕಾರವಾರದ ಕಾಳಿನದಿಯ ಇನ್ನೊಂದು ತೀರದಲ್ಲಿ ಸದಾಶಿವಗಡವಿದೆ. ೧೬೯೮ರಲ್ಲಿ ಸೋದೆಯ ಒಂದನೇ ಸದಾಶಿವ ನಾಯಕನು ಕಟ್ಟಿಸಿರುವ ಕೋಟೆ (ಸದಾಶಿವಗಡ) ಎತ್ತರ ಗುಡ್ಡದಲ್ಲಿದ್ದು ಅಲ್ಲಿಂದ ಕಾಣುವ ನದಿ-ಸಮುದ್ರದ ನೋಟ ವರ್ಣನಾತೀತ. ಕೋಟೆಯ ಪಕ್ಕದಿಂದಲೇ ಈಗ ಕಾಳಿ ಸೇತುವೆಯ ರಸ್ತೆ ಹೋಗಿದೆ. ಕೋಟೆಯಲ್ಲಿ ಕೊತ್ತಳ, ಕಿಂಡಿ ತೋಪುಗಳನ್ನು ಅವಶೇಷಗಳನ್ನು ಕಾಣಬಹುದು. ಚಿಟ್ಕುಳಿ, ಬಾಳೆಕಿಲ್ಲೆ, ಸಿಂತಾಕೌರಾ ಎಂಬ ಹೆಸರು ಈ ಊರಿನ ಭಾಗಕ್ಕೆ ಇದೆ. ಮಹಾಸತಿ ಚಿತೆಗೆ ಹೋದ ಕುಳಿ ಇದಾಗಿರಬಹುದು. ಊರಲ್ಲಿ ಅನೇಕ ದೇವಾಲಯಗಳಿವೆ. “ಪೀರ ಕರಿಮುದ್ದಿನ ಮಸೀದೆ” ಎಂಬ ದೊಡ್ಡ ಸುಂದರ ಮಸೀದೆ ಇದೆ. ಸದಾಶಿವಗಡ ಕೋಟೆ ಆಯಕಟ್ಟಿನ ಪ್ರದೇಶದಲ್ಲಿದ್ದು ಗೋವೆಯ ಕದಂಬರು, ವಿಜಯನಗರದ ಅರಸರು, ಪೋರ್ತುಗೀಜರು, ಇದನ್ನು ಗೆಲ್ಲುವ ಬಗ್ಗೆ ಕಾತರರಾಗಿದ್ದರು. ಸೋಂದೆ ಅರಸನ ನಂತರ ಮರಾಠರ ಆಧೀನದಲ್ಲಿದ್ದು ಮುಂದೆ ಹೈದರ ಟಿಪ್ಪುಗಳ ವಶಕ್ಕೆ ಬಂದು ಕೊನೆಗೆ ಬ್ರಿಟಿಶರ ವಶವಾಯಿತು. ಕಾಳಿ ನದಿಯು ಸಾಗರ ಸೇರುವಾಗ ಸಂಗಮದೆಡೆ ಏನು ಸೊಗಸು!

ಬಿಳಗಿ : ಸಿದ್ದಾಪುರದಿಂದ ೧೩ ಕಿ.ಮೀ. ದೂರದಲ್ಲಿ ಜೈನ ಮನೆತನವು ೧೪೦೦ ರಿಂದ ೧೭೬೩ರ ವರೆಗೆ ವೈಭವದಿಂದ ರಾಜ್ಯವಾಳಿದ ಬಿಳಗಿ ಇದೆ. ಇದನ್ನು ಸಂಸ್ಕೃತೀಕರಣಮಾಡಿ ‘ಶ್ವೇತಪುರ’ ಎಂದು ಕರೆಯುತ್ತಿದ್ದರು. ನಾಲ್ಕು ಬಸದಿಗಳು ಜಿಲ್ಲೆಯಲ್ಲಿಯೆ ಅತಿ ದೊಡ್ಡವೆಂದು ಪರಿಗಣಿಸಲ್ಪಟ್ಟಿದ್ದು, ಹೊಯ್ಸಳ ಮಾದರಿಯ ವಾಸ್ತುಶಿಲ್ಪದಿಂದೊಡಗೂಡಿವೆ. ಶಿಲಾಲೇಖನಗಳು, ಕೋಟೆಯ ಅವಶೇಷಗಳು ಹೇರಳವಾಗಿವೆ. ಗುಡಿಗಳ ಗರ್ಭಗುಡಿ, ಮುಖಮಂಟಪ, ನವರಂಗಗಳು ಆಕರ್ಷಕವಾಗಿದೆ. ದುರ್ಗಾಂಬಿಕಾ ಹಾಗು ರಾಮದೇವಾಲಯಗಳಲ್ಲಿ ಕಾವಿಕಲೆಯ ಉತ್ತಮ ಚಿತ್ರಣವಿದೆ. ಬಿಳಗಿಯು ಸೋಮನದಿಯ ದಂಡೆಗೆ ಇದ್ದು ಇಲ್ಲಿಂದ ೧.೫ ಕಿ.ಮೀ. ದೂರದಲ್ಲಿ ಮೂರುಕುಡಿ ಎಂಬಲ್ಲಿ ೫೫ ಮೀ. ೩೫ ಮೀ ವಿಶಾಲವಾದ ಗುಹೆಯಿದೆ. ಬಿಳಗಿ-ಸಿದ್ದಾಪುರಗಳ ನಡುವೆ ಭುವನಗಿರಿ ಎಂಬ ಗುಡ್ಡವಿದ್ದು ವಿಷ್ಣುವಿಗ್ರಹವನ್ನೊಳಗೊಂಡ ಭುವನೇಶ್ವರಿ ದೇವಾಲಯ ಮತ್ತು ಮೂಕಾಂಬಿಕಾ ಕೆರೆ ಇವು ಚೆನ್ನಾಗಿವೆ.

ಇಟಗಿ : ಸಿದ್ದಾಪುರದಿಂದ ೧೯ ಕಿ.ಮೀ. ಮತ್ತು ಬಿಳಗಿಯಿಂದ ೫ ಕಿ.ಮೀ. ದೂರದಲ್ಲಿ ರಾಮೇಶ್ವರ, ವಿಠ್ಠಲ, ಕ್ಷೇತ್ರಪಾಲ ದೇವಾಲಯಗಳಿದ್ದು ಮೇ ತಿಂಗಳಲ್ಲಿ ಜಾತ್ರೆ ನಡೆಯುವದು.

ಹಳದಿಪುರ : ಹಿಂದೆ ಹೈದರಾಲಿ, ಮೈಸೂರು ದೊರೆಗಳು, ಬಿದನೂರ ಅರಸರು ಆಳಿದ “ಹಂದಿಪುರ” ಎಂದು ಕರೆಯಲ್ಪಡುತ್ತಿದ್ದ ಹಳದಿಪುರವು ಮುಖ್ಯ ಕೇಂದ್ರವಾಗಿತ್ತು ಎಂದು ಬುಕಾನನ್ ಹೇಳಿದ್ದಾನೆ. ವಿಮಲನಾಥ ತೀರ್ಥಂಕರರ ಬಸದಿ ಇಲ್ಲಿದೆ. ಗಣಪತಿ, ಗೋಪಾಲಕೃಷ್ಣ ಚಂಡೇಶ್ವರ, ಮುಖ್ಯ ಪ್ರಾಣರ ದೇಗುಲಗಳಿವೆ. ಗೋಪಾಲಕೃಷ್ಣ ಚಾಲುಕ್ಯ ಶೈಲಿಯಲ್ಲಿದ್ದು ಗ್ರಾಮದೇವರೆಂದು ಹೆಸರಾಗಿದೆ. ಕೊಂಕಣಿ ವೈಶ್ಯ ಸಮಾಜದವರು ನಿರ್ಮಿಸಿದ ಶ್ರೀಕೃಷ್ಣಾಶ್ರಮ ಮಠದ ಕಟ್ಟಡ ಪ್ರೇಕ್ಷಣೀಯವಾಗಿದೆ.