ರಾಗ ಪಂಚಾಗತಿ ಮಟ್ಟೆತಾಳ

ಯಾರೆಲೋ ಬಂದ ವೀರ | ನೆನ್ನ ಠಾವಿಗೆ ||
ಮಾರಹರನಿಗೊಮ್ಮೆ ಬರಲು | ತೀರದಿಲ್ಲಿಗೆ ||
ಚೋರ ನಿನ್ನ ಬಲದ ಮೀಟ | ತೋರಿಸೆನುತಲಿ ||
ಕಾರಿ ಕೆಂಡಗಂಗಳಿಂದ | ಸಾರೆನುತ್ತಲಿ ||೧೨೧||

ಎಂದ ನುಡಿಯ ಕೇಳ್ದು ಹರಿಯು | ನಿಂದು ಪೇಳ್ದನು ||
ಬಂದು ಚೋರತನದಿ ಮಣಿಯ | ತಂದ ವೀರನು ||
ಕುಂದದಿದಿರು ನಿಲ್ಲೆನುತ್ತ | ಲೊಂದು ಶರವನು ||
ಮಂದಹಾಸದಿಂದಲೆಸೆಯೆ | ತರಿವುತೆಂದನು ||೧೨೨||

ಸ್ಥಿರವು ಕಾಯವೆನಗೆ ಕೇಳು | ನರನೆ ನಿನ್ನಯ ||
ಶರಗಳಿಂದಲಾಪುದೇನು | ಮರುಳೆ ತರಣಿಯ ||
ತರುಣನಿರ್ಪ ಬಳಿಗೆ ನಿನ್ನ | ನಿರದೆ ನಿಮಿಷದಿ ||
ತೆರಳಿಚುವೆನೆನುತ್ತ ಸರಳ | ಸುರಿದ ರೋಷದಿ ||೧೨೩||

ಬರುವ ಶರವ ತರಿವುತಾಗ | ಹರಿಯು ಪೇಳ್ದನು ||
ಸರಸಿಜಾಪ್ತನಣುಗನಿರ್ಪ | ಪುರಕೆ ಯೋಗ್ಯನು ||
ಕರಡಿ ನಿನ್ನ ಕಳುಹಿಸುವೆನೆ | ನುತ್ತ ಭರದಲಿ ||
ಮುರವಿರೋಧಿಯೆನಲಿಕಿಟ್ಟ | ಭಾರಿ ಗದೆಯಲಿ ||೧೨೪||

ರಾಗ ಭೈರವಿ ಭೋಗಷಟ್ಪದಿ

ಇಟ್ಟ ಭಾರಿ ಗದೆಯ ತರಿದು |
ದುಷ್ಟ ಜಾಂಬವಂತಗೆಂದ |
ಗಟ್ಟಿಯೆನುತ ಶಿಲೆಗೆ ತಲೆಯ ಕುಟ್ಟಿದಂದದಿ ||
ಸಿಟ್ಟಿನಿಂದ ಬಂದು ಕೆಣಕಿ |
ಕೆಟ್ಟು ಹೋಗಬೇಡೆನುತ್ತ |
ಸೃಷ್ಟಿಗೊಡೆಯ ಕ್ರೂರ ಶರವ ಬಿಟ್ಟನಾತಗೆ ||೧೨೫||

ನೀಲಗಾತ್ರ ಕೇಳು ನಿನ್ನ |
ಕೋಲಿಗಾನು ಬೆದರ್ವುದುಂಟೆ |
ತೋಳ ಬಲುಹ ನೋಡೆನುತ್ತ ಸೀಳಿ ಶರವನು ||
ಬಾಲದಿಂದ ಬಡಿವೆ ನಿನ್ನ |
ತಾಳಿಕೊಳ್ಳೆನುತ್ತ ಕಿನಿಸ |
ತಾಳಿ ತರುವ ಮುರಿದು ಹರಿಯ ಮೇಲೆ ಹೊಡೆಯಲು ||೧೩೬||

ವೃದ್ಧ ಕೇಳೊ ತರುಗಳೆನ್ನ |
ಹೊದ್ದಬಲ್ಲಿತೇನೊ ಮಲ್ಲ |
ಯುದ್ಧದಲ್ಲಿ ನಿನ್ನ ಧರೆಗೆ ಹೊದ್ದಿಸುವೆನದು ||
ಸಿದ್ಧವೆಂದ ಹರಿಯ ನುಡಿಯ |
ಕೇಳ್ದು ಜಾಂಬವಂತನಾಗ
ಎದ್ದು ಮುಷ್ಟಿಯಿಂದಲವನು ಗುದ್ದೆ ಕೃಷ್ಣಗೆ ||೧೨೭||

ರಾಗ ಘಂಟಾರವ ಅಷ್ಟತಾಳ

ಚಿತ್ತವಿಸೈ ಪರೀಕ್ಷಿತ ಭೂಪ | ನಿನ್ನ |
ಪೆತ್ತಯ್ಯನ ಮಾತುಳ ಕೋಪ ||
ವೆತ್ತು ಅದ್ರಿಗೆ ಸಿಡಿಲೆರಗಿದ | ತೆರ |
ದೊಳ್ತಿವಿಯಲುಧರೆಗುರುಳಿದ ||೧೨೮||

ತರಹರಿಸುತಲೆದ್ದು ಜಾಂಬವ | ರೋಷ |
ಧರಿಸಿ ಬರಲು ಕಂಡು ಮಾಧವ ||
ಸರಿಯಾಗಿ ಮಲ್ಲಯುದ್ಧದಿ ನಿಂದು | ಕಾದೆ |
ಸುರರಭ್ರದಲಿ ಪೊಗಳಿದರಂದು ||೧೨೯||

ಹೀಗೆ ಕಾದಲು ಅಷ್ಟವಿಶಂತಿ | ದಿನ |
ಸಾಗಲು ಕೃಷ್ಣನ ಕರಹತಿ ||
ಗಾಗ ಸೋಲುತ ಋಕ್ಷಾಧಿಪ | ತಾ |
ನಾಗಲಿಂತೆಂದ ಮನದ ತಾಪ ||೧೩೦||

ರಾಗ ಸಾಂಗತ್ಯ ರೂಪಕತಾಳ

ಹರ ಹರ ತಾನಿಷ್ಟು ಯುಗ ಪರಿಯಂತವು |
ಪರರ ಕಯ್ಯಲಿ ಸೋತುದಿಲ್ಲ ||
ವರ ಸತ್ತ್ವ ತಗ್ಗಿತು ಭುಜಬಲ ಹಿಂಗಿತು |
ನರರಂದದವನೀತನಲ್ಲ ||೧೩೧||

ತ್ರೇತಾಯುಗದೊಳೆನಗಿದಿರು ನಿಲ್ಲುವರನ್ನು |
ಈ ತೆರದೊಳು ಕಾಣೆನಿಂದು ||
ಸೋತೆ ನಾನೀ ಯುಗದೊಳಗಿವನ್ಯಾರೆಂದು |
ನಾ ತಿಳಿಯೆನು ಅಕಟಕಟ ||೧೩೨||

ಜಾಣ ನೀನ್ಯಾರೆನ್ನ ಗೆಲಿದ ಧೀರನು ಲಕ್ಷ್ಮೀ |
ಪ್ರಾಣೇಶನಾದ ಶ್ರೀಹರಿಯೊ ||
ಸ್ಥಾಣುವೆನಿಪ ಮಹೇಶ್ವರನೊ ಪೇಳೆನ್ನೊಳು |
ವಾಣಿಯರಸ ಕಮಲಜನೊ ||೧೩೩||

ಎಂದು ದುಃಖಿಸುತಲಿ ಜಾಂಬವ ಮನದೊಳು |
ನೊಂದುಕೊಳ್ಳುತಲಾಗಳಂದು ||
ಇಂದಿರೆಯರಸ ರಾಘವನಂದ ಕಾಣಿಸೆ |
ನಿಂದೆರಗುತ ಸ್ತುತಿಸಿದನು ||೧೩೪||

ವಾರ್ಧಕ

ಜಯ ದಶರಥನ ಬಾಲ ಮುನಿಯಜ್ಞಪರಿಪಾಲ |
ಜಯ ತಾಟಕೀಮಥನ ಜಯ ಅಹಲ್ಯೋದ್ಧರಣ |
ಜಯ ಜನಕಜಾರಮಣ ವಿಮಳರತ್ನಾಭರಣ ಜಯ ತ್ರಿಶಿರಖರನಾಶನ ||
ಜಯ ಶಬರಿಯಘನಾಶ ತರಣಿಯಾತ್ಮಜ ಪೋಷ |
ಜಯ ಸುರಪಸುತಶಿಕ್ಷ ಭಕ್ತಜನಸಂರಕ್ಷ |
ಜಯ ದೈತ್ಯಕುಲಕಾಲ ಜಯ ವಿಭೀಷಣಪಾಲ ಜಯ ಜಯೆಂದೆರಗಿರ್ದನು ||೧೩೫||

ರಾಗ ಕೇದಾರಗೌಳ ಅಷ್ಟತಾಳ

ಇಂತು ಸಂಸ್ತುತಿಸುವ ಕಮಲಜಸುತ ಜಾಂಬ | ವಂತನನೀಕ್ಷಿಸುತ ||
ಸಂತಸದಲಿ ಪಿಡಿದೆತ್ತಿ ಬೋಳೈಸುತ್ತ | ಲಿಂತೆಂದ ರಘುನಾಥನು ||೧೩೬||

ಇನಿತು ಕಾದಿದೆನೆಂದು ಮನದಿ ದುಃಖಿಸದಿರು | ಕಿನಿಸಿಲ್ಲ ಕೇಳು ನಾನು ||
ಸನುಮತದಲಿ ಬಂದ ಕಾರ್ಯವೇನುಸಿರಲಿ | ಮಣಿಯಿಂದ ಜನರೆನ್ನನು ||೧೩೭||

ದೂರುವರದರಿಂದಲೊಯ್ಯೆ ನಾನಿಲ್ಲಿಗೆ | ಭೋರನೈತಂದೆನೆಂಬ ||
ಚಾರು ಸುದರ್ಶನಧಾರಿಯ ನುಡಿ ಕೇಳಿ | ವೀರ ಜಾಂಬವನೆಂದನು ||೧೩೮||

ರಾಗ ಆನಂದಭೈರವಿ ಏಕತಾಳ

ಪಾಹಿ ಪಂಕಜನೇತ್ರ ಸುರಮುನಿಸ್ತೋತ್ರ |
ತ್ರಾಹಿ ಸಜ್ಜನಪೋಷ ರಮೆಯ ಪ್ರಾಣೇಶ || ಪಲ್ಲವಿ ||

ನಿನ್ನ ಮಹಿಮೆಯನ್ನು ಅರಿಯದೆ ನಾನು |
ಪನ್ನತಿಕೆಯೊಳಿಂದು ಕಾದಿದೆ ದಯಸಿಂಧು ||೧೩೯||

ಎನ್ನಪರಾಧವ ಕ್ಷಮಿಸಿಕೊ ದೇವ |
ಕನ್ಯಾರತ್ನನೊಂದನೀವೆ ಸಚ್ಚಿದಾನಂದ ||೧೪೦||

ಎಂದು ಜಾಂಬವ ತಾನು ಸಂಭವೆಯಳನು |
ಮಂದರಧರಗಿತ್ತ ಸುತೆ ರತ್ನಸಹಿತ ||೧೪೧||

ಭಾಮಿನಿ

ಉತ್ತರೆಯ ಸುತ ಕೇಳು ತನ್ನಯ |
ಪುತ್ರಿಯಹ ಜಾಂಬವತಿಯೆಂಬಳ |
ಇತ್ತನಾ ಶ್ರೀಹರಿಗೆ ಮಣಿ ಸಹ ವಿವಿಧ ವಸ್ತುಗಳ ||
ಮತ್ತೆ ಪೂಜಿಸಿದನು ಪರಾತ್ಪರ |
ವಸ್ತುವನು ಭಕ್ತಿಯಲಿ ಬಲಿಮುಖ |
ನತ್ತಲಾದುದ ಪೇಳ್ವೆ ಚಿತ್ತವಿಸೆಂದನಾ ಮುನಿಪ ||೧೪೨||

ರಾಗ ಕಾಂಭೋಜಿ ರೂಪಕತಾಳ

ಬಿಲದ ಬಾಗಿಲಲೈದೆ | ನೆಲಸಿಕೊಂಡಿಹ ಯದು |
ಬಲವು ತಮ್ಮಯ ಮನದಿ | ಹಲವು ಯೋಚಿಸುತ ||
ಜಲಜದಳಾಕ್ಷ ಈ | ನೆಲಗ್ಯಾಕೆ ಬಾರದೆ |
ತಳುವಿದನೆಂಬುದ | ತಿಳಿಯೆವೆಂದೆನುತ ||೧೪೩||

ಎರಗಿ ನೋಡುತ ಹರಿ | ವಿರಹ ದುಃಖದಿ ಮನ |
ಕರಗುತ ತಮ್ಮೊಡ | ನರುಹಿದಂದವಧಿ ||
ಸರಿಯಾದುದಿಲ್ಲೇ ನಾ | ವಿರುವುದೇತಕೆ ಪೋಗ್ವ |
ಪುರಕೆನೆ ಸಾತ್ಯಕಿ | ಅರುಹಿದ ನಯದಿ ||೧೪೪||

ಕೆಟ್ಟ ದ್ರೋಹಗಳಿವು | ದುಷ್ಟಮರ್ದನನನ್ನು |
ಬಿಟ್ಟು ಪೋದರೆ ನಮ್ಮ | ಪಟ್ಟಣದೊಳಗೆ ||
ಶ್ರೇಷ್ಠ ವಸುದೇವಗೆ | ಗುಟ್ಟೇನನೆಂಬಿರಿ |
ಒಟ್ಟಾಗಿ ಸತಿಯರು | ಭೀಷ್ಮಕಸುತೆಗೆ ||೧೪೫||

ಹವಣಿಪುದಿರಲೀ ದೇ | ವಕಿ ಕಂಡು ತನ್ನಯ |
ಕುವರನೆಲ್ಲಿಹನೆಂದು | ಕೇಳಲಾ ಸತಿಗೆ ||
ಪವಣಿಪುದೇನೆನ್ನುತವರೆಲ್ಲ ಚಿಂತಿಸು |
ತವಿಳಂಬದಿಂ ಬಂದ | ರಂದು ದ್ವಾರಕೆಗೆ ||೧೪೬||

ಕಂದ

ಅತಿ ದುಗುಡದಿ ಬಹ ಸಾತ್ಯಕಿಯಂ |
ಸತಿಚಿಂತಾಮಣಿಯಹ ದೇವಕಿ ಕಾಣುತ್ತಂ ||
ಸುತನಾವೆಡೆಗೈದಿದನೆ |
ನ್ನುತೆ ಶೋಕಗೊಳುತ್ತ ಭಕುತಿಯಿಂದವನೊಡನೆಂದಳ್ ||೧೪೭||

ರಾಗ ನೀಲಾಂಬರಿ ಏಕತಾಳ

ಕಂದನಾವೆಡೆ ಪೇಳಯ್ಯ | ಸಾತ್ಯಕಿ ನಿನ |
ಗಿಂದು ದುಗುಡವೇನಯ್ಯ ||
ಮಂದರಧರ ಅರ | ವಿಂದನಾಭನ ಕಾಣ |
ದಿಂದೆನ್ನ ಮನದೊಳು | ಹೊಂದಿರ್ಪುದತಿ ಕ್ಲೇಶ ||೧೪೮||

ಸುತಶಿರೋಮಣಿರನ್ನನು | ನಿಮ್ಮೆಲ್ಲರ |
ಜತೆಗೂಡಿ ಪೋದವನು ||
ಅತಿ ದಿನವಾಯ್ತೆನ್ನ | ರತುನವ ಕಾಣದೆ |
ಪಥದೊಳಗಿಹನೆ ವಾ | ರತೆಯ ಪೇಳೆನಲೆಂದ ||೧೪೯||

ರಾಗ ಸಾರಂಗ ಅಷ್ಟತಾಳ

ಚಿತ್ತವಿಸಲು ಬೇಕಮ್ಮ | ನಾ ಪೇಳುವ |
ವರ್ತಮಾನಗಳನು ನಿಮ್ಮ ||
ಪುತ್ರನು ಯದುಬಲ | ಮೊತ್ತ ಸಹಿತ ಪೋಗಿ |
ದೈತ್ಯ ತಡೆಯೆ ಪುರು | ಷೋತ್ತಮ ಜಯಿಸಿದ ||೧೫೦||

ನಡೆಯಲು ಪಥವಿಡಿದು | ವನದೊಳೊಂದು |
ಕಡು ಘೋರ ಬಿಲ ತೋರ್ದುದು ||
ಜಡಜಾಕ್ಷ ನಮ್ಮೊಳು | ನುಡಿದ ದ್ವಾದಶದಿನ |
ನಡೆಯುವ ಮುನ್ನ ತಾ | ದೃಢದೊಳು ಬಹೆನೆಂದು ||೧೫೧||

ಭಾಮಿನಿ

ಮಂದಗಾಮಿನಿ ಕೇಳು ಶ್ರೀಗೋ |
ವಿಂದನಾ ಗುಹೆಯೊಳಗೆ ಹೊಕ್ಕನು |
ಸಂದುದಾಜ್ಞಾಪಿಸಿದ ದಿನವೈತಂದೆವಿಲ್ಲಿಗೆನೆ ||
ನಿಂದವಳು ಸಿಡಿಲೆರಗಿದಂದದಿ |
ನೊಂದು ಮೂರ್ಛಿತಳಾಗಿ ಬಹು ವಿಧ |
ದಿಂದ ಮರುಗಿದಳಧಿಕ ಶೋಕಾತುರದಿ ಕಳವಳಿಸಿ ||೧೫೨||

ರಾಗ ತೋಡಿ ಆದಿತಾಳ

ಎಲ್ಲಿಗೈದಿದೆ ರಂಗಯ್ಯ | ನಿನ್ನ ಕಾಣದೆ |
ತಲ್ಲಣಿಸುವುದು ಕಾಯ ||
ಫುಲ್ಲಲೋಚನೆ ರುಗ್ಮಿಣಿ | ಕ್ಷಣಾರ್ಧ ಬಿಟ್ಟು |
ನಿಲ್ಲಳು ನಾರೀಮಣಿ ||೧೫೩||

ಇಂದುಸಮಾನವದನ | ದಂತಪಂಕ್ತಿಗ |
ಳಿಂದ ಶೋಭಿಪ ರದನ ||
ಕುಂದದೆ ತೋರು ಬಂದು | ಎನ್ನಯ ಮುದ್ದು |
ಕಂದ ಕಾರುಣ್ಯಸಿಂಧು ||೧೫೪||

ತರಳತನದಿ ಚಂದ್ರನ | ಪಿಡಿದ ಮೃದು |
ಕರವನ್ನು ತೋರೋ ಚಿಣ್ಣ ||
ದುರುಳೆ ಪೂತನಿಯಸುವ | ಹೀರಿದ ಬಾಯೊಳ್ |
ಕರೆದು ತೋರಿಸೊ ಮೋಹನ್ನ ||೧೫೫||

ಯಾವಲ್ಲಿಗೈದಿದನೆಂದು | ಪೇಳುವರಿಲ್ಲ |
ಈ ವಿಧಿಯಾಯಿತೆಂದು ||
ಸಾವಿರ ಗುಣ ವರ್ಣಿಸಿ | ಮರುಗ ವಸು |
ದೇವನದನು ಲಾಲಿಸಿ ||೧೫೬||

ಭಾಮಿನಿ

ವಲ್ಲಭೆಯ ಶೋಕವನು ಲಾಲಿಸಿ |
ಬಲ್ಲಿದನು ವಸುದೇವ ತವಕದಿ |
ನಿಲ್ಲದಾಕ್ಷಣ ಬಂದಿದೇನೆಂದೆನುತ ನೆಗಹುತಲಿ ||
ಫುಲ್ಲನೇತ್ರೆಯ ನಯನವಾರಿಯ |
ಸಲ್ಲಲಿತಕರದಿಂದಲೊರಸುತ |
ಮೆಲ್ಲನುರೆ ಮೆಯ್ದಡವಿ ತಕ್ಕಯಿಸುತ್ತಲಿಂತೆಂದ ||೧೫೭||

ರಾಗ ಮಾರವಿ ಏಕತಾಳ

ತುಂಬೆಗುರುಳೆ ಪ್ರತಿ | ರಂಭೆ ನೀ ಕೇಳಲೆ | ಅಂಬುಜದಳನಯನೆ ||
ಡೊಂಬಿಯಿದ್ಯಾತಕೆ | ಶಂಬರಾರಿಯ ಪಿತ | ನೆಂಬವನವ ನರನೆ ||೧೫೮||

ತೆಗೆ ತೆಗೆ ಶೋಕವ | ಸುಗುಣೆ ಕೇಳೀರೇಳು | ಜಗದೋದ್ಧಾರಕಗೆ ||
ಮಿಗೆಯಿದಿರಹ ವೈ | ರಿಗಳಾರವನೊಳು | ಖಗವಾಹನನೆಲಗೆ ||೧೫೯||

ತರಳತನದೊಳಾ | ದುರುಳೆ ಪೂತನಿಯ | ಹರಣಗೊಂಡವನವನು ||
ಧರೆಯ ಭಾರವ ಪರಿ | ಹರಿಸೆ ಜನಿಸಿರುವ | ನೆರೆ ಮರುಗದಿರಿನ್ನು ||೧೬೦||

ರಾಗ ಸವಾಯ್ ಆದಿತಾಳ

ಇಂತೆನುತ ವಸುದೇವನು ಕಾಂತೆಯ | ಸಂತಯಿಸಲು ಗೋಪ ||
ಕಾಂತೆಯರೆಲ್ಲರು ನೆನೆವುತ ಕೃಷ್ಣನ | ಚಿಂತಿಸಿದರು ಕೇಳೈ ಭೂಪ ||೧೬೧||

ರಾಗ ನೀಲಾಂಬರಿ ರೂಪಕತಾಳ

ಲಲನೆ ನಾನೇನ ಮಾಡಲಿ | ಜಲಜಾಕ್ಷನ ಶ್ರೀಪದಯುಗ |
ನಳಿನವನು ಬಿಟ್ಟೆಂತಾವ್ | ನಿಲುವುದು ಈ ಪುರದಿ ||
ಬಲಿಮರ್ದನ ಪೋದವ ಈ | ನೆಲೆಗ್ಯಾತಕೆ ತಾ ಬಾರದೆ |
ಕುಳಿತೆಲ್ಲಿಹನೆಂಬುವ ಪರಿ | ತಿಳಿದರುಹುವರಿಲ್ಲ ||೧೬೨||

ರಂಗನ ಸುಂದರ ವದನವು | ಕಂಗೊಳಿಸದೆಯಿಹ ಕಾರಣ |
ಭಂಗದೊಳಗಜ ಶರಕೆ | ನ್ನಂಗವು ಕೇಳ್ ಸೂರೆ ||
ತುಂಗಕುಚವ ಬಲ್ಪಿಡಿದಾ | ಲಿಂಗಿಸಿ ಸುರತ ಕಲಾಪವ |
ಸಂಗವ ಮರೆತಿಹ ವ್ಯಥೆ | ಗಂಗಾಧರ ಬಲ್ಲ ||೧೬೩||

ಬೆಟ್ಟದ ಮರನೇರುತ ಕೈ | ಬಿಟ್ಟಂತಾದುದು ದ್ವಾರಕ |
ಪಟ್ಟಣದಧಿಪತಿಯಾದ ಶ್ರೀ | ಕೃಷ್ಣನ ಬಿಟ್ಟೆಂತು ||
ಸೃಷ್ಟಿಯೊಳಿಹೆ ಚೆಲುವೆಯೆ ನೀ | ತಟ್ಟನೆ ಪೇಳೆಂದೆನಲಿ |
ಕೃಷ್ಣರೊಳೊರ್ವಳು ತನ್ನಯ | ಗುಟ್ಟನು ತಿಳುಹಿದಳು ||೩||

ರಾಗ ಕಾಂಭೋಜಿ ಅಷ್ಟತಾಳ

ಚೋದಿಗವೇನೆ ನೀನೆಂದ ಮಾತುಗಳು |
ಆದಿಮೂರುತಿಯ ಕಾಣದೆ ಮನಸಿನೊಳು || ಪಲ್ಲವಿ ||

ಕಾಂತನ ಬರ ಹಾ | ರೈಸುತಲಿರುತಿರೆ |
ವಾರಿಜಾಕ್ಷನು ತಾ ಬಂದು ||೧||

ಸರಸಗಳಾಡುತ ಬಲು | ಎರಕದೊಳೆನಗತಿ |
ಹರುಷವ ತೋರುವ ಮುದದಿಂದ ||೨||

ಚೆಲುವನು ಕಾಮಿತ | ಫಲವನು ಸಲಿಸುತ |
ನಿಲದೈದಿದ ಮುದದಿಂದ ||೩||

ನಿಶಿಯೊಳು ಶ್ರೀಹರಿ | ಬಂದಿಹನೆಂಬುದ |
ಕೇಳುತ ಪೇಳ್ದಳು ಮುದದಿಂದ ||೪||‍

ರಾಗ ಸಾವೇರಿ ಆದಿತಾಳ

ಸಾಕು ಇದೇನು | ಬಡಿವಾರ ನೀರೆ | ಸಾಕು ಇದೇನು ||
ಶ್ರೀಕರ ರಂಗ ನಿ | ನ್ನಾ ಕಡೆ ಬಂದನೆಂದು || ಪಲ್ಲವಿ ||

ನಿನ್ನೆ ರಾತ್ರೆಯೊಳು | ಪನ್ನಗಶಯನನೆಂ |
ದೆನ್ನಯ ರಮಣನ | ಮನ್ನಿಸಿ ನೆರೆದೆನು ||೧||

ಕಡೆಗೆ ನೋಡೆ ಕೈ | ಪಿಡಿಯೆ ಕಾಂತನು |
ಮಿಡುಕಿದೆ ಮನದೊಳು | ಕಡು ಭಯದಿಂದಲಿ ||೨||

ನೆನಸುವ ಕಾರಣ | ಕನಸಿಲಿ ತೋರುವ |
ಮನಸಿಜಪಿತ ಕೇಳ್ | ವನಿತೆಯೆಂಬುದು ಸಾಕು ||೩||

ವಾರ್ಧಕ

ಭೂಪಾಲ ಲಾಲಿಸೀ ಪರಿಯಿಂದ ಶ್ರೀಹರಿಯ |
ರೂಪುಗುಣಸಂಗಮಂ ಗೋಪವನಿತೆಯರು ಸಂ |
ತಾಪದಿಂ ನೆನೆವುತಂ ತಾಪ ಮಯಣವ ಹೊತ್ತಿ ನೀರಾಗಿಸುವ ತೆರದೊಳು ||
ಆ ಪೂಶರಂ ಬರೆದ ರೂಪು ಜಿತ ಸುರತಸ |
ಲ್ಲಾಪ ಬೊಂಬೆಯ ತೆರದೊಳಾ ಚಪಲನೇತ್ರೆಯರ್ |
ತಾಪಸರ ಮನದೊಳಿರಲಾ ಪತಿವ್ರತೆ ದೇವಕೀ ಪರಿಯೊಳವರ್ಗೆಂದಳು ||೧||

ರಾಗ ನವರೋಜು ಆದಿತಾಳ

ಕಾಂತೆಯರ್ ಪೇಳ್ವುದ ಕೇಳಿ | ಗುಣ |
ವಂತೆಯರ್ ಧೈರ್ಯವ ತಾಳಿ ||
ಚಿಂತಿಪುದ್ಯಾತಕೆ | ಸಂತಸದಲಿ ಕ್ಷಣ |
ವಂತರಿಸದೆ ಬಹ | ನಂತಮಹಿಮನವ ||೧||

ತುರುವ ಕಾವುತ ವನದಿ | ಇರೆ |
ವರ ಪೆರ್ಬಾವಿನ ತೆರದಿ ||
ದುರುಳನಘಾಸುರ | ಭರದಿ ನುಂಗಿದಡವ |
ನುರವ ಬಗಿದು ಕಾ | ಯ್ದುರು ಕೃಪಾಕರನು ||೨||

ತವಕದೊಳೆಲ್ಲರು ಪೋಗಿ | ಪರ |
ಶಿವೆಯ ಪಾದಕೆ ಬಾಗಿ ||
ನವವಿಧದಲಿ ಪೂ | ಜಿಸುವೆವು ನಾವೆಂ |
ದವರೆಲ್ಲರನಾ | ಯುವತಿ ಸೈರಿಸಿದಳು ||೩||

ಭಾಮಿನಿ

ಕೇಳು ಭೂವರ ದೇವಕಿಯು ವರ |
ಬಾಲೆಯರು ಪುರಜನರು ಸಹಿತಲಿ |
ಶೈಲನಂದನೆಯಂಘ್ರಿಕಮಲವ ಪೂಜಿಸುವ ಮನದಿ ||
ಲೀಲೆಯಿಂದಲಿ ಗಂಧ ಕುಂಕುಮ |
ಮಾಲೆಯಕ್ಷತೆ ಸುಮಗಳಿಂದಲಿ |
ಫಾಲನೇತ್ರನ ಸತಿಯು ಪೂಜಿಸುತೆರಗಿ ಪೇಳಿದರು ||೧||

ರಾಗ ಢವಳಾರ ತ್ರಿವುಡೆತಾಳ

ಪಾಲಿಸು ಪಾರ್ವತಿ ಪರಮೇಶ್ವರಿ |
ಲೋಲಾಕ್ಷಿಯೆ ಗೀರ್ವಾಣವಿನುತೆ ಮುನಿ |
ಜಾಲವಿನಮಿತೆ ಗಿರಿಜಾತೆ || ಗಿರಿಜಾತೆ ಹರಿವಾಹಿನಿ ಭಕ್ತರು |
ಪೇಳುವ ಬಿನ್ನಪವ ನವಧರಿಸು ||೧||

ಶುಂಭಾಂತಕಿ ತ್ರೈಜಗದ ಕು |
ಟುಂಬಿನಿ ಮಮ ಶಂಕವಿನಾಶಿನಿ |
ಕಂಬುಕಂಧರನ ಪ್ರಿಯೆ ಗೌರಿ || ಪ್ರಿಯೆ ಗೌರಿ ರಕ್ಷಿಸು ಕೃಷ್ಣನ |
ಬೆಂಬಿಡದಿಂದು ಕೃಪೆಯಿಂದ ||೨||

ತಾಯೆ ನೀ ಕರುಣಿಸದುಳಿದರೆ |
ಕಾಯುವರನ್ಯರ ನಾವ್ ಕಾಣೆವು |
ತೋಯಜಾಂಬಕಿಯೆ ಜಗನ್ಮಯೆ || ಜಗನ್ಮಯೆ ಮರೆಹೊಕ್ಕೆವು ನಿನ್ನನು |
ಕಾಯೆ ಶ್ರೀವರನ ದಯದಿಂದ ||೩||

ರಾಗ ಕಾಪಿ ಅಷ್ಟತಾಳ

ಈ ತೆರದೊಳು ಅಂಬಿಕೆಯೊಳು | ನಾನಾ |
ರೀತಿಯಿಂದಲಿ ಬೇಡಿಕೊಳಲು ||
ಭೂತಳದೊಳು ಜಗ | ನ್ಮಾತೆಯ ಪದಯುಗ |
ಓತು ನಂಬಿದವರಿಗೆ | ಭೀತಿ ಬರುವುದುಂಟೆ ||೧||

ಗಿರಿರಾಜಸುತೆಯು ಪೂಜಿಸಿದ | ಫಲ |
ಭರದಿ ತೋರುವ ತೆರದಿಂದ ||
ಗರುಡವಾಹನನಾಗಿ | ಹರಿ ಜಾಂಬವತಿ ರತ್ನ |
ವೆರಸಿ ಬಂದನು ಬೇಗ | ಪರಮ ದ್ವಾರಕೆಗಾಗ ||೨||

ಚಿತ್ತಜನಯ್ಯನ ಬರವ | ಕಾಣು |
ತಿತ್ತ ತೋಷದಿ ವಸುದೇವ ||
ಕೆತ್ತಿಗೆ ನವರತ್ನ | ಮುತ್ತಿನ ತೋರಣ |
ವಿತ್ತಂಡಕೆಸೆಯಲು | ಅತ್ಯಾನಂದಗಳಿಂದ ||೩||

ಬಂಧುಸಂತತಿ ತಿಳುಕೊಂಡು | ಮುದ |
ದಿಂದ ಕೃಷ್ಣನ ಇದಿರ್ಗೊಂಡು ||
ಸಂದ ಜನ್ಮವ ನಾ | ವಿಂದು ಪಡೆದೆವೆಂದು |
ಕುಂದದ ಹರುಷದಾ | ನಂದಭಾಷ್ಪಗಳಿಂದ ||೪||‍

ವಸುದೇವ ದೇವಕಿಗೆರಗಿ | ಅತಿ |
ಕುಶಲದಿ ನಮಿಸಿದ ಬಲಗೆ ||
ಎಸೆವ ಬಾಂಧವರ ಮ | ನ್ನಿಸೆ ಆರತಿಯ ತಂದು |
ಶಶಿಮುಖಿಯರು ಮತ್ತೆ | ಬಿಸಜಾಕ್ಷ ಸಂತಯ್ಸೆ ||೫||