ರಾಗ ಮುಖಾರಿ ಏಕತಾಳ

ಬೇಟೆಗೆನುತ್ತ ನಡೆದನಂದು | ಆ ಪ್ರಸೇನ |
ಬೇಟೆಗೆನುತ್ತ ನಡೆದನಂದು || ಪಲ್ಲವಿ ||

ಸಾಟಿಯಿಲ್ಲದ ಬಲು ಕಾಟಕಮಂದಿಯ |
ಕೂಟದಿ ಘನತರ ಈಟಿಯವರು ಸಹ || ಅ ||

ಕಂಡೊಂದು ಅಡವಿಯ ಪೊಕ್ಕು | ಬಲೆಯನೊಡ್ಡಿ |
ಕೊಂಡು ಮೃಗವ ಮದದ ಸೊಕ್ಕು ||
ತಂಡತಂಡವಿಹ | ಹಿಂಡನೀಕ್ಷಿಸಿ ಈಟಿ |
ಗೊಂಡಿರುವುತ ಮೃಗ | ದಿಂಡುದರಿವುತ ||೫೯||

ತರತರದಲಿ ಮೃಗವ ಕೊಂದು | ಪ್ರಸೇನನು |
ಸರಸದಿ ಮುಂದೆ ಬರಲ್ಕಂದು ||
ವರಕೇಸರಿ ಬರೆ | ಸರಳೆಸೆಯಲ್ಕೀ |
ಕೆರಳಿ ಬಂದಿವನ | ಕೊರಳ ಮುರಿದುದು ||೬೦||

ಮೃಗರಾಜನಾ ಪ್ರಸೇನನನು | ಸಂಹರಿಸುತ್ತ |
ಜಗಜಗಿಸುವ ರತ್ನವನು ||
ಮಿಗೆ ಕೊಂಡೊಯ್ಯಲು | ವಿಗಡ ಋಕ್ಷಾಧಿಪ |
ಮೃಗರಾಜನ ಕಂ | ಡೊಗುಮಿಗೆ ಮಣಿಯೆ ||೬೧||

ಭಾಮಿನಿ

ಅರಸ ಕೇಳಿಂತಾ ಪ್ರಸೇನನ |
ಕೆರಳಿ ಕೊಂದಾ ಸಿಂಹನನು ಬಳಿ |
ಕಿರದೆ ಜಾಂಬವ ತರಿದು ಮಣಿ ಸಹಿತೈದಿದನು ಬಿಲವ ||
ಚರರು ಕಾಣದೆ ಆ ಪ್ರಸೇನನ |
ಅರಸಿ ಕಂಡರು ಮರಣವಿಡಿದಾ |
ಇರವ ಕಾಣುತ ಮರಳಿ ಪೂರ್ವಜನೆಡೆಗೆ ಅರುಹಿದರು ||೬೨||

ರಾಗ ಮಧುಮಾಧವಿ ಅಷ್ಟತಾಳ

ಲಾಲಿಸು ಸತ್ರಾಜಿತ ಭೂಪ | ಇಂದಿನ ವಾರ್ತೆ |
ಜಾಲವಲ್ಲೈ ಕೀರ್ತಿ ಕಲಾಪ ||
ಪೇಳುವುದೇನ್ ಗುಣ | ಶೀಲ ನಿನ್ನನುಜನು |
ಲೀಲೆಯಿಂದಲಿ ಶಬ | ರಾಳಿಯ ಕೂಡುತ |
ಮೇಲೆ ಬೇಟೆಗೆನು | ತಾಲೋಚಿಸುತಲಿ |
ಪಾಳಯ ಸಹಿತಲಿ | ಕಾಲನ ತೆರದಿ ||೬೩||

ಅಡವಿಗೆ ಪೋಗಿ ಬೇಟೆಯ ವೇಳೆ | ಆ ದೆಸೆಯಲ್ಲಿ |
ನಡೆದ ವೃತ್ತಾಂತಗಳನು ಪೇಳೆ ||
ಒಡಲೊಳು ಕಡು ಭಯ | ಬಡುತಿದೆ ಅಭಯವ |
ಕೊಡಿಸಲು ನುಡಿವೆ ಕೇಳ್ | ಬಿಡುತೆಮ್ಮನು ಮುಂ |
ಗಡೆ ನಿನ್ನನುಜನು | ನಡೆಯಲು ಪರಿಕಿಸೆ |
ಮಡಿದೊರಗಿಹನೈ | ಅಡವಿಯೊಳವನು ||೬೪||

ಭಾಮಿನಿ

ಚರರ ನುಡಿಯನು ಕೇಳಿದಾಕ್ಷಣ |
ಅರಸ ಮೂರ್ಛಿತನಾಗಿ ಮಿಗೆ ಚೇ |
ತರಿಸಿಕೊಂಡೆದ್ದಾಗಲನುಜನ ಶೀಲಗುಣಗಳನು ||
ಮರೆತು ತಾನಿರುವಂದವೆಂತೈ |
ಹರ ಮಹಾದೇವೆನುತ ಕರಗುತ |
ಅರಸುತರಸುತ ಬಂದು ಕಂಡನು ವನದ ಮಧ್ಯದಲಿ ||೬೫||

ಕಂದ

ಮಡಿದನುಜನ ದೇಹವ ಕಂ |
ಡೊಡನಾ ಸತ್ರಾಜಿತ ಭೂಪಾಲಕನಾಗಳ್ ||
ಉಡುತತಿ ಧರೆಗುರುಳ್ವಂದದಿ |
ಕೆಡೆದನುಜನ ಗುಣಗಳ ನೆನೆದು ಶೋಕಿಸಿದಂ || ||೬೬||

ರಾಗ ನೀಲಾಂಬರಿ ಏಕತಾಳ

ಈ ರೀತಿಯ ಮರಣ ಬಂತೆ | ತಮ್ಮಾ ತಮ್ಮಾ || ನಾನಿ |
ನ್ನಾರ ಕೂಡೆ ಬಾಳಲಯ್ಯೊ | ತಮ್ಮಾ ತಮ್ಮಾ ||
ಮಾರನ ಸ್ವರೂಪನಂತಾ | ತಮ್ಮಾ ತಮ್ಮಾ || ಮೊಗ |
ದೋರಿ ಮಾತನಾಡೆನ್ನೊಳು | ತಮ್ಮಾ ತಮ್ಮಾ ||೬೭||

ಯಾತಕಿನ್ನೊಳುರುಹದೆ ನೀ | ತಮ್ಮಾ ತಮ್ಮಾ || ಬಂದೀ |
ರೀತಿಯಲ್ಲಿ ಮಡಿದೆಯಲ್ಲೊ | ತಮ್ಮಾ ತಮ್ಮಾ ||
ಈ ತೆರದಿ ಮೆಯ್ಯೊಳ್ ಗಾಯ | ತಮ್ಮಾ ತಮ್ಮಾ || ಗೈದು |
ಘಾತಿಸಿ ವೋದವರ್ಯಾರು | ತಮ್ಮಾ ತಮ್ಮಾ ||೬೮||

ದಿನಪನಿತ್ತ ಮಣಿಯ ಧರಸಿ | ತಮ್ಮಾ ತಮ್ಮಾ || ಬಂದೀ |
ವನದ ಮಧ್ಯದಲ್ಲಿ ನಿನ್ನ | ತಮ್ಮಾ ತಮ್ಮಾ ||
ತನುವ ಸೀಳಿದವರು ಯಾರು | ತಮ್ಮಾ ತಮ್ಮಾ || ನಾನಿ |
ನ್ನೆನುವುದೇನು ದೈವಗತಿಯೊ | ತಮ್ಮಾ ತಮ್ಮಾ ||೬೯||

ರಾಗ ಕಾಂಭೋಜಿ ಝಂಪೆತಾಳ

ಅಳಲಲ್ಯಾಕಿದಕಿನ್ನು ಸಹಜಾತಗಿಂದಿನಲಿ |
ನೆಲನ ಋಣ ತೀರಿತಲ್ಲದಡೆ |
ಇಳೆಯೊಳಗೆ ಈತನೊಳು ಕಲಹಗೈವರ ಕಾಣೆ |
ತಿಳಿಯೆ ಮಾಧವನೆನ್ನ ಕೂಡೆ ||೭೦||

ಮಿತ್ರ ದಯಗೈದಿರುವ ರತ್ನವನು ಯದುರಾಜ |
ಗಿತ್ತಡದು ಯೋಗ್ಯವೆಂದೆನುತ ||
ಸುತ್ರಾಮವಂದಿತನು ಯತ್ನದಲಿ ಕೇಳಿಹನು |
ಶತ್ರುವಾದನು ಅನುಜಗಾತ ||೭೧||

ಸಂದ ರತ್ನವು ಬಳಿಕ ಸಾಧ್ಯವಾಗುವ ಫಲವು |
ಯೆಂದಿಗಾದರು ಇರಲು ತನಗೆ ||
ಹೊಂದುವುದು ತನಗೆನುತ ಮನದಿ ನಿರ್ಧರಿಸಿ ನಡೆ |
ತಂದ ಚಿಂತಿಸುತ ಅರಮನೆಗೆ ||೭೨||

ಭಾಮಿನಿ

ಧರಣಿಪಾಗ್ರಣಿ ವರಪರೀಕ್ಷಿತ |
ದೊರೆಯೆ ಕೇಳೈ ವರ ಸ್ಯಮಂತಕ |
ಧರನು ಕೃಷ್ಣನ ಮೇಲೆ ಸಂಶಯಗೈದ ಭಾವವನು ||
ಪರಮಪುರುಷನು ಅರಿತು ಮನದೊಳು |
ತರುಣಿಯರ ಮೇಳದಲಿ ಇರುತಿರೆ |
ಕಿರುನಗೆಯ ಸೂಸಲ್ಕೆ ರುಗ್ಮಿಣಿ ಕೇಳಿದಳು ಪತಿಯ ||೭೩||

ರಾಗ ತೋಡಿ ಅಷ್ಟತಾಳ

ಸರಸಿಜನಯನ ನೀ ಲಾಲಿಸಿಂದೀ ಪರಿ |
ತರುಣಿಯರ್ ಮಧ್ಯದಲಿ ||
ಕಿರುನಗೆ ಸೂಸುವ ಕಾರಣವೇನೆಂದು |
ಅರುಹು ನೀ ಕರುಣದಲಿ ||೭೪||

ವಲ್ಲಭೆ ನಿನ್ನೊಳು ಪೇಳುವ ಕಾರ್ಯಗ |
ಳಲ್ಲ ಕೇಳೆನಗೆ ನಾರಿ ||
ಪುಲ್ಲಲೋಚನೆ ನಿನ್ನೊಳ್ ಸೊಲ್ಲಿಸಿದರೆ ಫಲ |
ವಿಲ್ಲವೆಂದನು ಕಂಸಾರಿ ||೭೫||

ಹೇ ದಯಾಂಬುಧಿ ನಿನ್ನ ಮನದೊಳಗರಿತುದ |
ಭೇದವಿಲ್ಲದೆ ಪೇಳಲು ||
ಮೋದದೊಳರಿವೆಯೆಂಬರಸಿಗೆ ಪೇಳ್ದನು |
ಮಾಧವ ಕರುಣದೊಳು ||೭೬||

ರಾಗ ಬೇಗಡೆ ಆದಿತಾಳ

ನಾರಿ ಕೇಳಿಂದಾದ ಪರಿಯನು | ಸತ್ರಾಜಿತಾಖ್ಯಗೆ |
ವಾರಿಜಪ್ರಿಯನಿತ್ತ ರತ್ನವನು ||
ಭೂರಿ ತೋಷದೊಳಾತನನುಜನು |
ಚಾರು ರತ್ನವ ಕಂಧರದಿ ಮಿಗೆ |
ಹಾರಧರಿಸಿ ವಯ್ಯಾರದಿಂದಲಿ |
ಚಾರಕರ ಕೂಡುತ್ತ ಪೊರುಡುತ ||೭೭||

ಕಾನನದಿ ಮೃಗಬೇಟೆಯಾಡುತ | ಸಾನುರಾಗದಲಿ || ಯಿರಲಾ
ಸ್ಥಾನಕೆ ಮೃಗರಾಜ ಬರಲು ಪ್ರ | ಸೇನ ಮನದಲಿ || ಕೋಪಿಸಿ |
ಬಾಣವೆಸೆಯಲ್ಕಾತನಸುವನು | ಹಾನಿಗೈವುತ್ತಲಿ ಕೇಸರಿ |
ತಾನು ರತ್ನವನೊಯ್ಯುತಿರೆ ಮಿಗೆ |
ಕಾಣುತಲಿ ಋಕ್ಷಾಧಿಪನು ಕಡು |
ಜಾಣತನದಲಿ ಬಂದು ಸಿಂಹದ |
ಗೋಣಮುರಿದಾ ರತ್ನವೊಯ್ದನು ||೭೮||

ಕೇಳುತಲಿ ಚರರಿಂದ ವಾರ್ತೆಯ | ತಾಳಿ ಮಮತೆಯನು | ಅನುಜನ |
ಮೇಲೆ ಅರಸುತ ಕಾಣುತಾತನ | ಶೀಲ ಗುಣಗಳನು || ವರ್ಣಿಸಿ |
ಬಾಳ ಮರುಗುತ್ತಾಗ ಎನ್ನಯ | ಮೇಲೆ ಮನವನ್ನು || ಶಂಕಿಪ |
ಕೇಳಿದೆನು ಆ ರತ್ನವನು ಯದು |
ಪಾಲಗೀವುದುಯೆಂದೆನುತ ಕೊಡ |
ದಾಲಯಕೆ ಗಮಿಸಿರ್ಪನಂದಿಲಿ |
ಜಾಲವಲ್ಲಿಂತೀಗ ಗ್ರಹಿಸಿದ ||೭೯||

ರಾಗ ಸೌರಾಷ್ಟ್ರ ತ್ರಿವುಡೆತಾಳ

ಇರದೆ ಮಣಿಹೃತ ದೋಷವೆನ್ನಲಿ |
ಬರಿದೆ ಪೇಳಿದನೆಂಬುದನು ನಾ |
ನರಿತು ನಕ್ಕೆನು ಈ ವಿಷಯಕೆಲೆ | ಸರಸಿಜಾಕ್ಷಿ ||೮೦||

ಎಂದ ವಚನಕೆ ರುಗ್ಮಿಣಿಯು ತಾ |
ನೆಂದಳೆಲೆ ಪ್ರಾಣೇಶ ನಿನ್ನಲಿ |
ಬಂದುದ್ಯಾಕಪವಾದ ಮಾತುಗ | ಳಿಂದು ಪೇಳೈ ||೮೧||

ರುದ್ರಸಖನಿಂತೆಂದ ಸತಿಯಲಿ |
ಭಾದ್ರಪದ ಸಿತಪಕ್ಷ ನಾಲ್ಕನೆ |
ಭದ್ರತಿಥಿ ದಿವಸದಲಿ ಕ್ಷೀರ ಸ | ಮುದ್ರಸುತ ||೮೨||

ನೋಡಿದುದರಿಂದೀ ಕೊರತೆ ನುಡಿ |
ಮೂಡಿದುದು ತನಗೆನುತ ಮಡದಿಯ |
ಕೊಡೆ ಸಂತಯಿಸಲ್ಕೆ ನುಡಿದಳು | ನೋಡಿ ಹರಿಯ ||೮೩||

ನಿಗಮಕೋಟಿಗೆ ನಿಲುಕದಿಹ ಬಲು |
ಬಗೆಯ ಮಹಿಮನೆ ತವ ನಿಜವ ನಾ |
ಲ್ಮೊಗ ಸುರಾದ್ಯರಿಗರಿಯಲರಿದೆನೆ | ನಗುತ ಹರಿಯು ||೮೪||

ಕರೆದು ಸಾತ್ಯಕಿಗೆಂದ ಯದುಬಲ |
ವೆರಸಿ ದಿನಪನ ಭಜಕನನುಜನು |
ಹರಣ ತೊರೆದಾ ವನಕೆ ತೆರಳಲು| ನೆರಹು ಗಾಢ ||೮೫||

ಎಂದ ಮಾತಿಗೆ ಸಾತ್ಯಕಿಯು ಯದು |
ವೃಂದಗೂಡಿಸಿ ನಮಿಸಿತಿರೆ ಗೋ |
ವಿಂದ ಗರುಡನನೇರಿ ಪೊರಟಾ | ನಂದದಿಂದ ||೮೬||

ರಾಗ ಭೈರವಿ ತ್ರಿವುಡೆತಾಳ

ಧಾರಿಣೀಪತಿ ಕೇಳು ಮುರಹರ | ಭೂರಿವೈಭವದಿಂದ ಯಾದವ |
ವೀರ ಸುಭಟವೃಂದ ಸಹ ಗಂ | ಭೀರ ಭೇರಿನಾದದಲಿ ಕಹ |
ಳಾರವದಿ ಮೆರೆವುತ್ತಲಿರುವ ನ | ಗಾರಿ ಘೋಷದಿ ಬರಲು ಮುಂಗಡೆ |
ಚಾರುತರ ಪಾಠಕರು ಪೊಗಳಲು | ಸಾರಿ ಬ್ರಾಹ್ಮಣಮಧ್ಯದಲ್ಲಿ ಹರಿ |
ಕಂಡನಾಗ | ಚೋದ್ಯವ | ಕಂಡನಾಗ ||೮೭||

ವಾರ್ಧಕ

ಪೊಡವಿಪಾಲಕ ಪರೀಕ್ಷಿತಭೂಪ ಲಾಲಿಸೈ |
ಮಡಿದಿರುವ ಆ ಪ್ರಸೇನನ ಕಂಡು ಮುರಹರಂ |
ಕಡು ಚೋದ್ಯಬಡುತ ಸಿಂಹದ ನಖದ ಗಾಯದಿಂ ಮರಣವಾಯ್ತೀತಗೆಂದು ||
ಒಡನೆ ಹರಿ ಹಜ್ಜೆಯಂ ಕಾಣುತ್ತಲಾ ಹರಿಯು |
ನಡೆದು ಮುಂದಕೆ ಬರಲ್ ಕರಡಿಯಿಂದಲಿ ಮರಣ |
ಪಡೆದ ಮೃಗರಾಜನಂ ಕಂಡು ವಿಸ್ಮಿತನಾಗಿ ನುಡಿದನಸುರಾರಿ ನಗುತ ||೮೮||

ರಾಗ ಕೇದಾರಗೌಳ ಝಂಪೆತಾಳ

ಈಕ್ಷಿಸೀ ಬಗೆಯನೆಲ್ಲ | ಕೇಸರಿಯ | ಋಕ್ಷಪನು ಕೊಂದನಲ್ಲ ||
ದಕ್ಷವಿಧ್ವಂಸಸಖನು | ಈ ವಿಧಿ ಪ | ರೀಕ್ಷಿಸುವೆನೆನುತ ತಾನು ||೮೯||

ಬರಲು ಸಂತಸದಾಳುತ | ಶ್ರೀಹರಿಯು | ಕರಡಿಹಜ್ಜೆಯ ನೋಡುತ ||
ಭರದಿ ಯದುಬಲವ ಕೂಡಿ | ಋಕ್ಷಪನು | ತೆರಳಿರುವ ಪಥವ ನೋಡಿ ||೯೦||

ಭಾಮಿನಿ

ಬರುತಿರಲು ಮುಂದೆಸೆವ ಸರಸಿಯ |
ಸರಸಿಜಾಕ್ಷನು ನೋಡಿ ಸೈನಿಕ |
ವೆರಸಿ ಕಾಲ್ಮೊಗದೊಳೆದು ವಟುಕುಜದೆಡೆಯ ಕುಳಿತಿರಲು ||
ದುರುಳ ಮಾರ್ಬಲವೆರಸಿ ವನವನು |
ಚರಿಸುತಲ್ಲಿಗೆ ಬಂದನಾಕ್ಷಣ |
ಜರೆಯ ಸುತ ಮಗಧೇಶ ಘೋರಾರ್ಭಟೆಯ ರಭಸದಲಿ ||೯೧||

ಕಂದ

ಬಂದಾ ದಾನವರೆರೆಯಂ |
ನಿಂದೀಕ್ಷಿಸುತೈದೆ ಯಾದವಬಲಮಂ ||
ತಿಂದೀ ಕ್ಷಣ ತೇಗುವೆನೆನು |
ತೆಂದಾಲೋಚಿಸುತಾಗಲವನಿಂತೆಂದಂ ||೯೨||

ರಾಗ ಭೈರವಿ ಅಷ್ಟತಾಳ

ಆರೆಲೊ ಕಾಡೊಳು ಪರಿ | ವಾರ ಸಹಿತ ಕೂಡಿ |
ಚೋರರಂತೆ ಕುಳಿತಿಪ್ಪ | ನ್ಯಾರು ನೋಡೀತ ||೯೩||

ನರರ ಮಾಂಸವ ತಿಂಬ | ಡರಸಿಕೊಳ್ಳೆನುತ್ತವನ |
ಚರಿಸಲಿಂದು ಪಾರಣೆಗೆ | ದೊರೆಕಿತೆನ್ನುತ ||೯೪||

ಎಂದು ಆರ್ಭಟಿಸುತ್ತ | ಲಂದು ಕಾಣುತ್ತ ಇದಿ |
ರ‍್ನಿಂದು ಸಾತ್ಯಕಿ ಪೇಳ್ದ | ಅಂದು ಕನಲುತ್ತ ||೯೫||

ರಾಗ ಘಂಟಾರವ ಅಷ್ಟತಾಳ

ಕೂಗಲ್ಯಾತಕೋ ಫಢ ಫಢ ದನುಜ ನಿ |
ನ್ನಾಗಮವು ಎಮ್ಮೊಡನೆ ಸಲ್ಲದು | ಬೇಗ ಕೆಲಸಾರೆನ್ನುತ ||೯೬||

ಖುಲ್ಲ ಮಾನವ ನಿನಗಿಷ್ಟು ಗರ್ವವೆ |
ಹಲ್ಲಮುರಿವೆನು ನಿಲ್ಲೆನುತ್ತಲಿ | ಬಿಲ್ಲನುರೆ ಝೇಗೈದನು ||೯೭||

ಎಂದ ಮಾತಿಗೆ ಕಿನಿಸಿನಿಂದ ಸಾತ್ಯಕಿ |
ಒಂದು ಶರವೆಸೆಯಲ್ಕೆ ಕೌತುಕ | ವೆಂದನಾ ಮಗಧೇಶನು ||೯೮||

ಹಿಂದೆ ನಿನ್ನನು ಕೊಂದು ಬಿಡುವೆನೆನು |
ತಂದು ಗದೆಯಲಿ ಬಡೆಯೆ ಸಾತ್ಯಕಿ | ನೊಂದು ಮೂರ್ಛೆಗೆ ಸಂದನು ||೯೯||

ರಾಗ ಘಂಟಾರವ ಆದಿತಾಳ

ಘೋರ ದೈತ್ಯಕರಹತಿಗೆ ಸಾತ್ಯಕಿ | ವೀರ ಮೂರ್ಛಿತನಾಗೆ ||
ವಾರಿಜನಾಭನು ದನುಜನ ಗರ್ವವ | ತೀರಿಪೆನೀ ಗಳಿಗೆ ||೧೦೦||

ಎನುತಲಿ ಬಂದಾ ದನುಜನ ಸರಿಸದಿ | ಚಿನುಮಯನಿಂತೆಂದ ||
ನೆಣಗೊಬ್ಬಿಲಿ ಬಂದಣಕದೊಳೆಮ್ಮನು | ಕೆಣಕದಿರೆನಲೆಂದ ||೧೦೧||

ರಾಗ ಭೈರವಿ ಏಕತಾಳ

ಫಡ ಗೋಪಾಲಕನೆ ಕೇಳು | ನಿನ್ನಯ ಶೌರ್ಯ |
ಸುಡು ಬಲ್ಲೆ ಹಿಂದೆ ತಾಳು ||
ಒಡಲಿನ ಭಯಕಾಗಿ ಗೋಮಂತ ಶೈಲವ |
ಅಡರಿ ಪೋದವ ನೀನೆಲೈ ||೧೦೨||

ಖಳರೊಳಗಧಮ ನಿನ್ನ | ಅಂಜಿಕೆಯಿಂದ |
ತೊಲಗಿದುದಲ್ಲ ಮುನ್ನ ||
ಸಲೆ ನಿರಾಯುಧನಾಗಿ ಸಿಲುಕಿದ ಕಾರಣ |
ಅಲಸಿ ಪೋದವನೆಂದೆಲೈ ||೧೦೩||

ಎಂಭತ್ತನಾಲ್ಕು ಬಾರಿ | ಸಂಗರಗೆಯ್ಯ |
ಲಂಬಿಲ್ಲವೇನೊ ಹೋರಿ ||
ಅಂಬುಧಿಯೊಳಗಡಗಿಹ ಹೇಡಿಯೆನಲಾಗ |
ಲಂಬುಜಾಕ್ಷನು ಪೇಳ್ದನು ||೧೦೪||

ದುಷ್ಟ ನೀನಂದಿನೊಳು | ಬಂದೆಮ್ಮಯ |
ಪಟ್ಟಣ ಮುತ್ತಿರಲು ||
ಕೊಟ್ಟ ಸರ್ವಸ್ವವ ಬಿಟ್ಟು ರಣಾಗ್ರದಿ |
ಬಿಟ್ಟು ಓಡಿದನ್ಯಾರಯ್ಯ ||೧೦೫||

ಭೂರಿ ಬಲವು ಸಹಿತ | ನಿದ್ರೆಯೊಳಿರೆ |
ಚೋರ ನೀ ವಂಚಿಸುತ್ತ ||
ಭೋರನೈತಂದು ನಿರಾಯುಧರೊಡವೆಯ |
ಸೂರೆಗೊಂಡವನಹುದು ||೧೦೬||

ಖೂಳ ರುಗ್ಮನ ಬಲವ | ನೀ ತಂದಿಪ್ಪ |
ತ್ತೇಳಕ್ಷೌಹಿಣಿ ಸೈನ್ಯವ ||
ಕಾಳಗದೊಳಗೆನ್ನ ಕೋಲಿಗರ್ಪಿಸಿ ತಲೆ |
ಬೋಳುಗೈದುದನರಿಯೆ ||೧೦೭||

ಎಂದ ಮಾತನು ಕೇಳುತ್ತ | ರೋಷದೊಳಕ್ಷಿ |
ಯಿಂದ ಕಿಡಿಯ ಸೂಸುತ್ತ ||
ಇಂದು ತಾನಳುಕಲು ಮುಂದಸ್ತ್ರಸಂನ್ಯಾಸ |
ವೆಂದೆಚ್ಚ ಬೊಬ್ಬಿಡುತ ||೧೦೮||

ಅಮರಾರಿಯೆಸೆದಸ್ತ್ರವ | ಖಂಡಿಸುತಲಿ |
ಅಮಿತಕೋಪದಿ ಮಾಧವ ||
ಕುಮತಿ ನಿನ್ನಯ ಪರಾಕ್ರಮವ ತೋರಿಂದಿ |
ಸಮರದೊಳೆನುತೆಚ್ಚನು ||೧೦೯||

ರಾಗ ಭೈರವಿ ಅಷ್ಟತಾಳ

ಎಸೆದಸ್ತ್ರವನುರೆ ತರಿದು | ಪಲ್ | ಮಸೆವುತಲಸ್ತ್ರವ ಸುರಿದು ||
ಅಸುರಹರನ ಮೇಲೊಳಗೆ | ಪೊಸ | ವಿಶಿಖದಿ ತರಿದಾ ಖಳಗೆ ||೧೧೦||

ವಧೆ ಮರುತಜನಿಂದೆನುತ | ಹರಿ | ಮುದದೊಳನಿಲಶರ ತೊಡುತ ||
ಅಧಮನ ಹಾರಿಸಿ ಪುರಕೆ | ಮಿಗೆ ತ್ರಿದಶರು ಹರುಷಿಸೆ ವನಕೆ ||೧೧೧||

ವರ ಸಾತ್ಯಕಿಯನು ಕರದಿ | ತಡ | ವರಿಸಲಿಕೆದ್ದನು ಭರದಿ ||
ನೆರೆ ಸೈನಿಕವನು ಕೂಡಿ | ಆ | ಕರಡಿಯೆಯ್ದಿದ ಬಿಲ ನೋಡಿ ||೧೧೨||

ಚೋದಿಸುತೆಂದನು ಬಲಕೆ | ದಿನ | ದ್ವಾದಶವೀಕ್ಷಿಸಿ ಪುರಕೆ ||
ಮೋದದಿ ತೆರಳುವುದೆನುತ | ಮಧು | ಸೂದನ ಪೇಳಿದ ನಗುತ ||೧೧೩||

ಭಾಮಿನಿ

ಇಂತು ನಿಜ ಪರಿವಾರಕೆನೆ ತದ |
ನಂತರಾ ಬಿಲದೊಳಗೆ ಶಿಶುವು ಮ |
ಹಾಂತ ಶೋಕಿಸೆ ಕಂಡು ತೊಟ್ಟಿಲ ತೂಗೆ ಜಾಂಬವತಿ ||
ನಿಂತು ಪೇಳಿದಳಾಡಲಿಕ್ಕೆ ಸ್ಯ |
ಮಂತಮಣಿ ನಿನ್ನಯ್ಯ ತಂದಿಹ |
ಸಂತವಿರುವೆನಲಂದು ಶ್ರೀಹರಿ ಕೇಳುತಿಂತೆಂದ ||೧೧೪||

ರಾಗ ದೇಶಿ ತ್ರಿವುಡೆತಾಳ

ಲಾಲಿಸೀ ಬಿಲದೊಳಗಿರುತಿಹ ಹದನ |
ಬಾಲನ ಸಂತೈಸಿ ಪೇಳುವ ಪದನ ||
ಕೇಳಿದಿರೈಸೆ ನೀವಿದಕೆ ಸಾಕ್ಷಿಯನು |
ನಾಳೆ ಪೇಳಲು ಬೇಕೆಂದ ಶ್ರೀವರನು ||೧೧೫||

ಅಪವಾದ ಕಳೆಯಲು ತಂದ ರತ್ನವನು |
ಕೃಪೆಯಿಂದ ಕೊಡಲು ಸತ್ರಾಜಿತ ತಾನು ||
ಅಪರ ಬುದ್ಧಿಕೆಯಿಂದ ಮೊದಲು ತಾನೊಯ್ದು |
ವಿಪರೀತವಾಯ್ತೆಂದು ತಂದಿತ್ತನೊಲಿದು ||೧೧೬||

ಎಂಬುದ ತಿಳಿದಿರಿ ನೀವೆಂದು ಬಲವ |
ಅಂಬುಜನಾಭ ನಿಲಿಸಿ ಪೊಕ್ಕು ಬಿಲವ ||
ಮುಂಬಿಲಿ ಕತ್ತಲೆ ಪಥದಿ ಮುಂದಯ್ದಿ |
ಜಾಂಬವಸುತನನೀಕ್ಷಿಸಿ ನಿಂದ ಮುದದಿ ||೧೧೭||

ರಾಗ ಕೇದಾರಗೌಳ ಅಷ್ಟತಾಳ

ಮುರಹರ ಬಂದು ತಾ ಕಂಡನು ಬಾಲನ |
ಕರದೊಳು ರತ್ನವನು ||
ಭರದಿ ಕೊಂಡೊಯ್ಯುವ ಪರಿಗಾಗಿ ಯೋಚಿಸು |
ತಿರಲು ಕಾಣುತ ಬಾಲನು ||೧೧೮||

ಬೆದರಿ ಸಾರುತ ಮೊರೆಯಿಡೆ ಕೇಳ್ದು ಜಾಂಬವ |
ಹದನವ ತಿಳಿವೆನೆಂದು ||
ಒದಗಿ ರೋಷದಿ ಬಂದು ಮಧುಸೂದನನ ಕಂಡು |
ಬೆದರಿಸುತೆಂದನಿಂದು ||೧೧೯||

ಜಗದುದ್ಧಾರಕನೀತನೆಂಬುದನರಿಯದೆ |
ವಿಗಡ ಋಕ್ಷಾಧಿಪನು ||
ಪಗೆಯವನೆಂದು ತಾ ಗ್ರಹಿಸುತ್ತ ಮನದೊಳು |
ಹಗರಣಕನುವಾದನು ||೧೨೦||