ಶಾರ್ದೂಲವಿಕ್ರೀಡಿತಂ
ಶ್ರೀಲೋಲಂ ವನಮಾಲಕೌಸ್ತುಭಧರಂ ಪೀತಾಂಬರಾಲಂಕೃತಂ |
ಬಾಲಾರ್ಕಾಶತಕೋಟಿಭಾಸುರನಿಭಂ ಶೈಲಾಧರಂ ಸುಂದರಮ್ |
ನೀಲಾಂಗಂ ಖಳಕಂಸವೀರ್ಯಮಥನಂ ಭೂತಾಧಿನಾಥಪ್ರಿಯಂ |
ತ್ರೈಲೋಕ್ಯಾದಿಮುನೀಂದ್ರದೇವವಿನುತಂ ದುಗ್ಧಾಪುರೇಶಂ ಭಜೇ ||
ರಾಗ ನಾಟಿ ಝಂಪೆತಾಳ
ಜಯತು ಪಾರ್ವತಿಪುತ್ರ | ಜಯತು ರತಿಪತಿಮಿತ್ರ |
ಜಯತು ಸುಂದರ ಗಾತ್ರ | ಜಯತು ಸುಚರಿತ್ರ ||
ಜಯತು ಜಯ ಜಯತು ||೧||
ಜಯತು ಮದಕರಿವದನ | ಜಯ ಸಕಲ ಅಘಹರಣ |
ಜಯತು ವಿಘ್ನವಿಹರಣ | ಜಯ ಉರಗಭರಣ ||
ಜಯ ಜಯತು ಜಯತು ||೨||
ರಜತಾದ್ರಿಗಿರಿವಾಸ | ಭುಜಗ ಭೂಷಣ ಈಶ |
ಗಜಚರ್ಮಧರ ದೇವ | ಭಜಕ ಸಂಜೀವ ||
ಜಯ ಜಯತು ಜಯತು ||೩||
ವಿಜಯಗಸ್ತ್ರವನಿತ್ತ | ತ್ರಿಜಗವಂದಿತ ಖ್ಯಾತ |
ಗಜವದನ ಗುಹತಾತ | ಸುಜನುತ ಪ್ರೀತ |
ಜಯತು ಜಯ ಜಯತು ||೪||
ಗಿರಿಜಾತೆ ಹರಿಪ್ರೀತೆ | ಹರಿಯನುಜೆ ದಿವಿಜನುತೆ |
ತರಣಿಕೋಟಿಪ್ರಕಾಶೆ ದುರುಳಖಳನಾಶೆ ||
ಜಯ ಜಯತು ಜಯತು ||೫||
ಶರಣನೆಂಬೀ ಪರಿಯ | ಕರುಣವಿಟ್ಟೀ ಕಥೆಯ |
ವಿರಚಿಸುವ ಮತೀಗೀಗ | ಕರುಣಿಪುದು ಬೇಗ ||
ಜಯತು ಜಯ ಜಯತು ||೬||
ವಾರ್ಧಕ
ಸರಸಿಜೋದ್ಭವನರಸಿ ಶಾರದೆಗೆ ವಂದಿಸುತ |
ಸುರಪಮುಖ್ಯಾಮರರಿಗೆರಗುತ್ತ ಸಕಲ ಮುನಿ |
ವರರಿಗಾನತನಾಗಿ ಮರುತಾತ್ಮಜನಿಗೆರಗಿ ಪರಮ ಸಂತೋಷದಿಂದ ||
ಗುರುವಿನ ಪದಾಂಬುಜಕ್ಕೆರಗಿ ಹಿರಿಯರನು ಸ |
ತ್ಕರಿಸಿ ಸನ್ನುತಗೈದು ಧರೆಯ ಕವಿಗಳ ನೆನೆದು |
ಪರಮ ವೇದವ್ಯಾಸಮುನಿಪನಂ ಭಜಿಸುತ್ತಲೊರೆವೆನೀ ಸತ್ಕಥೆಯನು ||೭||
ಭಾಮಿನಿ
ವಲ್ಮಿಕದಿ ಆವಾಸಗೈದನ |
ಬಲ್ಮೆಯಿಂದಾಭರಣ ಧರಿಸಿದ |
ಸಾಲ್ಮೋಗದ ಮಹದೇವನರಸಿಯ ಪಿತನ ಪಕ್ಷವನು |
ಪಲ್ಮೊರೆದು ತರಿದವನ ಸುತನಿಗೆ |
ನಲ್ಮೆಯಿಂ ಸಾರಥಿಯಗೈದನ |
ಒಲ್ಮೆಯಿಂದಲಿ ಪೇಳ್ವೆನೀ ಕಥೆ ಯಕ್ಷಗಾನದಲಿ || ||೮||
ದ್ವಿಪದಿ
ವರ ಮಹಾಭಾಗವತಪೌರಾಣದೊಳಗೆ |
ಹರಿ ಸತ್ಯಭಾಮೆಯೊಲಿಸಿದ ಕಥೆಯ ಧರೆಗೆ ||೯||
ವಿರಚಿಪೆನು ಕ್ಷೀರಪುರವರನ ಕರುಣದಲಿ |
ಮೆರೆವಂತೆ ಕ್ಷಿತಿಯೊಳಗೆ ಯಕ್ಷಗಾನದಲಿ ||೧೦||
ಬಾಲಕನ ಕೃತಿಯೆಂದು ನಿಂದಿಸದೆ ಜಗದಿ |
ಶೀಲರಾಲಿಸಿ ತಿದ್ದಿ ಮೆರೆಸುವುದು ಮುದದಿ ||೧೧||
ಪ್ರಾಸಂ ವಿಷಮಾಕ್ಷರಗಳೆಂಬುದನು ಅರಿಯೆ |
ದೋಷವನು ಪರಿಹರಿಸಿ ಸಲಹು ಶ್ರೀಹರಿಯೆ ||೧೨||
ರಾಗ ಸೌರಾಷ್ಟ್ರ ತ್ರಿವುಡೆತಾಳ
ಭೂಮಿಪಾಲ ಪರೀಕ್ಷಿತಂಗೆ ಸ |
ನಾಮ ಶುಕಮುನಿಯೊಲಿದು ಕರುಣದಿ |
ಆ ಮಹಾಭಾಗವತಕಥೆಯನು | ಪ್ರೇಮದಿಂದ ||೧೩||
ಶ್ರುತಗೊಳಿಸುತಿರೆ ಕೇಳ್ದನಾ ಭೂ |
ಪತಿಯು ವರ ಸತ್ರಾಜಿತಾಖ್ಯನು |
ನುತಿಸಿ ತರಣಿಯ ಪಡೆದು ರತ್ನವ | ಸುತೆಯ ಮುದದಿ ||೧೪||
ನರಕವೈರಿಗೆಯಿತ್ತನೆಂತೀ |
ಹರಿಯ ಕರುಣದಿ ಪೇಳೆನಲು ಭೂ |
ವರನ ಪೊಗಳುತ ಪೇಳ್ದನಾ ಮುನಿ | ವರನು ದಯದಿ ||೧೫||
ಭಾಮಿನಿ
ಧರಣಿಪಾಲಕ ಕೇಳು ದ್ವಾರಕ |
ಪುರದರಸು ವಸುದೇವನುದರದಿ |
ಸಿರಿಯರಸ ಸಹ ಬಲರು ರಂಜಿಸುತಿರಲು ತತ್ಪುರದಿ ||
ಇರುವನೈ ಸತ್ರಾಜಿತಾಖ್ಯನು |
ಒರೆವೆ ಮುಂದಣ ಚರಿತೆಯಾಲಿಸು |
ದುರಿತಫಣಿಸಂಕುಲಕೆ ವಿನತಾಸುತನವೋಲೆಂದ ||೧೬||
ರಾಗ ಮಧ್ಯಮಾವತಿ ತ್ರಿವುಡೆತಾಳ
ಹರಿಕುಲಜ ಕೇಳೈ ಕುಶಸ್ಥಳಿ | ಪುರವನಾಳುತ್ತಿರಲು ರಾಯನು |
ತರುಣಿ ಕಾಂಚನಮಾಲಿನಿಯು ಸಹ | ಹರುಷದಿಂದಿರಲವಳಲಿ ||೧೭||
ಪೂರ್ವಗಿರಿ ಶಿಖರದಲಿ ರವಿ ಮೆಯ್ | ದೋರ್ವ ತೆರದಲಿ ಸುತೆಯು ಜನಿಸಲು |
ಪಾರ್ವತೀಶನು ಒಲಿದನೆನುತಾ | ಊರ್ವಿಪತಿ ಸಂತಸದಲಿ ||೧೮||
ಸತ್ತ್ವರಜತಮ ಗುಣದಿ ವರ್ತಿಪ | ಸತ್ಯಭಾಮಾದೇವಿ ಸಹಿತಲಿ |
ಅರ್ತಿಯಿಂದಿರುತಿರಲು ರಾಯನು | ಮತ್ತೆ ಯೋಚಿಸುತೆಂದನು ||೧೯||
ಇಂದುಧರನನು ಪೂರ್ವಜನ್ಮದಿ | ಚಂದದಿಂದರ್ಚಿಸದ ಕಾರಣ |
ಮಂದಭಾಗ್ಯನು ಆದೆನೀ ಪರಿ | ಮುಂದುಗಾಣೆನೆನುತ್ತಲಿ ||೨೦||
ಹಲವನೆಣಿಸುತ ಧನವಿಹೀನತೆ | ಕಳೆವುಪಾಯಕೆ ನಳಿನಸಖನನು |
ಒಲಿಸಿ ಮನದಿರ ಪಡೆವೆನೆನುತಲಿ | ತಿಳಿದು ತಾನತಿ ಭರದೊಳು ||೨೧||
ಬಂದು ನಿರ್ಮಲ ಜಲದೊಳಗೆ ನಲ | ವಿಂದ ಸ್ನಾನವ ರಚಿಸಿ ಶುಚಿಯಲಿ |
ನಿಂದು ಮಿಗೆ ಅರವಿಂದಸಖನನು | ಒಂದೆ ಮನದಲ್ಲಿ ಭಜಿಸುತ ||೨೨||
ರಾಗ ಮಾರವಿ ಆದಿತಾಳ
ಬಿಡು ಬಿಡು ಚಿಂತೆಯ | ಪೊಡವಿಪ ನಿನ್ನಯ | ದೃಢಭಕುತಿಗೆ ನಾನು ||
ಒಡಬಡುತಲಿ ನಿ | ನ್ನೆಡೆಗೈತಂದೆನು | ನುಡಿ ಮನದಿಷ್ಟವನು ||೨೩||
ತಡೆಯದೆನಲು ತಪ | ಬಿಡುತಕ್ಷಿಗಳನು | ಸಡಲಿಸುತಲಿ ತಪನ ||
ಅಡಿದಾವರೆಯೊಳು | ಪೊಡಮಡುತೆಂದನು | ಕಡುಚಿಂತೆಯ ಹದನ ||೨೪||
ಎನ್ನುವುದೇನೈ | ನಿನ್ನ ಮನಕೆ ಶ್ರುತ | ವೆನ್ನಯ ಮನದಿರವು ||
ಧನ್ಯನಾದೆ ಸಂ | ಪನ್ನ ಭಾಗ್ಯವಿ | ತ್ತೆನ್ನ ರಕ್ಷಿಸು ದೇವ ||೨೫||
ಇಂತೆನಲಾ ಭೂ | ಕಾಂತನಿಗೆ ವರ ಸ್ಯ | ಮಂತಕರತ್ನವನು ||
ಸಂತಸದಲಿ ಕರು | ಣಾಂತಃಕರಣದಿ ಏ | ಕಾಂತ ಭಕ್ತನೊಳವನು ||೩೬||
ದಿನದಿನ ಅಷ್ಟಮ | ಭಾರ ಕನಕವನು | ಮಣಿ ಕೊಡುವುದು ನಿನಗೆ ||
ಜನಿಸದು ದುರ್ಭಿ | ಕ್ಷಾದಿ ಭಯಂಗಳು | ಎನುತ ಭರದಿ ಪೋಗೆ ||೨೭||
ವಾರ್ಧಕ
ಇಂದುವಂಶಜ ಪರೀಕ್ಷಿತನ ಭೂಪ ಲಾಲಿಸಿಂ |
ತೆಂದು ರತ್ನವನಿತ್ತು ದಿನಮಣಿಯು ತೆರಳೆ ನಲ |
ವಿಂದ ಹರುಷಿತನಾಗಿ ವರ ಸ್ಯಮಂತಕಮಣಿಯ ಕೊಂಡು ನಿಜಪುರಕೆ ಬರಲು ||
ಅಂದದಿಂದಾ ದ್ವಾರಕಾಪುರದೊಳಿರುವ ಜನ |
ವೃಂದವೀಕ್ಷಿಸಿ ವಿಸ್ಮಯಂ ಬಡುತ ಬೆದರಿ ಗೋ |
ವಿಂದ ರಕ್ಷಿಸು ನಮ್ಮನೆನುತ ಹರಿಗೊಂದಿಸುತಲೆಂದರೀ ಮಾತನಂದು ||೨೮||
ರಾಗ ಮಾರವಿ ಆದಿತಾಳ
ಸ್ವಾಮಿ ಲಾಲಿಸಿ ಕೇಳೆಮ್ಮ ಮಾತ || ಪಲ್ಲವಿ ||
ನಿನ್ನಯ ಕರುಣದಿ | ಚೆನ್ನಾಗಿ ಈ ಪುರದಿ |
ಅನ್ಯ ಭಯಗಳಿಲ್ಲದಿರುತಿರ್ದೆವು ||
ಪನ್ನಗಶಯನ ಕೇ | ಳಿನ್ನು ಪೇಳುವುದೇನು |
ನಿನ್ನಯ ಬಳಿಗರ್ಕ ತಾನಾಗಿ ಬರುವನೈ ||೨೯||
ದೇವ ಎಮ್ಮಯ ದೃಷ್ಟಿ | ಸೀವುತಿಹುದು ಮುಟ್ಟಿ |
ಕಾವುದು ಕರುಣದಿ ದಯವ ತೋರಿ ||
ಕಾವುದೆಲ್ಲರನು ಕೃ | ಪಾವಲೋಕನದಿಂದ |
ಶ್ರೀವರ ಸುಜನರ ಸಲಹುವನೆ ||೩೦||
ಎಂದು ಪೇಳಿದ ಮಾತಿ | ನಂದವ ಕೇಳುತ್ತ |
ಸಿಂಧುಶಯನ ನಸುನಗುತಲಾಗ ||
ಮಂದರಧರ ದೀನ | ಬಂಧು ಅಭಯಕರ |
ದಿಂದ ನೆಗಹಿ ಪೇಳ್ದಾನಂದದಿಂದ ||೩೧||
ರಾಗ ಬೇಗಡೆ ಏಕತಾಳ
ಅಂಜಲ್ಯಾಕಿಂತು ನೀವೆಲ್ಲ | ನಾ ಪೇಳ್ವೆ ಕೇಳಿ |
ಅಂಜಿಕೆಯ ಬಿಟ್ಟು ಈ ಸೊಲ್ಲ ||
ಕಂಜಸಖನಲ್ಲಲ್ಲ ಬಾಲಕ | ರಂಜದಿರಿ ನೀವೀಗ ಧರೆಯೊಳು |
ರಂಜಿಸುತ ಮೆರೆದಿಪ್ಪವರ ಗುರು | ಗುಂಜಿಯನು ಮಾಣಿಕ್ಯವೆಂಬರೆ ||೩೨||
ವಾರಿಜಾಪ್ತನಿತ್ತ ರತ್ನವನು | ಸತ್ರಜಿತಾಖ್ಯನು |
ಭೂರಿತೋಷದಿ ಕೊಂಡು ಬರುತಿಹನು ||
ಧಾರಿಣಿಗೆ ರವಿ ಬರ್ಪನೆಂಬೀ | ವಾರತೆಯು ಪುಸಿಯೆಂದು ಮಿಗೆ ಕಂ |
ಸಾರಿ ಸುಜನೋದ್ಧಾರಿ ದುರಿತವಿ | ದೂರ ಸರ್ವರ ಸಂತವಿಟ್ಟನು ||೩೩||
ಭಾಮಿನಿ
ಎನುತ ಸಂತಯಿಸಲ್ಕೆ ಬಳಿಕಾ |
ಜನನಿಕರ ತಮ್ಮನೆಗೆ ಹೊಕ್ಕಿರೆ |
ಮಣಿಧರನು ನಿಜಗೃಹಕೆ ಬಂದ ಮಣಿಯ ಪೂಜಿಸಲು ||
ದಿನದಿನದೊಳೆಂಟೆಂಟು ಬಾರದ |
ಕನಕವನು ಮಣಿ ಕೊಡುವುದದರೊಳು |
ಜನಿಸದಾ ದುರ್ವ್ಯಾಧಿ ದುರ್ಭಿಕ್ಷಾದಿ ಭಯವೆಂದ ||೩೪||
ರಾಗ ಕಾಂಭೋಜಿ ಝಂಪೆತಾಳ
ಧರಣಿಪಾಲಕ ಲಾಲಿಸಿಂತು ತರಣಿಯ ದಯದಿ |
ಮೆರೆದನೈ ಬಹಳ ವೈಭವದಿ ||
ವರ ಕುಬೇರನ ತೆರದಿ ಧನವಂತನಾಗಿಯತಿ |
ಹರುಷದೊಳಗಿರ್ದ ತತ್ಪುರದಿ ||೩೫||
ಇತ್ತ ಶ್ರೀಹರಿಯು ಯದುರಾಜನಿಗೆ ಸ್ಯಮಂತಕದ |
ರತ್ನವನು ಬರಿಸಬೇಕೆನುತ ||
ಚಿತ್ತದಲಿ ಆಲೋಚಿಸುತ್ತಲೊಂದಿನ ಚರನ |
ಹತ್ತಿರಕೆ ಕರೆದೆಂದನಾಗ ||೩೬||
ಚಾರಕನೆ ನೀ ಕೇಳು ನಾನೆಂಬ ವಚನವನು |
ವೀರಭಾಸ್ಕರನ ಭಕ್ತನನು ||
ಸಾರಿ ಕರೆತರಬೇಕು ತೆರಳೆಂದು ಕಳುಹಿದನು |
ಮಾರಪಿತನಿರ್ದನಾಗಳಿಗೆ ||೩೭||
ಭಾಮಿನಿ
ವಾರಿಜಾಕ್ಷನ ನೇಮವನು ಮಿಗೆ |
ಚಾರಕನು ಧರಿಸುತ್ತ ಶಿರದಲಿ |
ಭೂರಿ ವೈಭವದಿಂದ ಮೆರೆಯುವ ಸಭೆಯ ಹೊರವಂಟು ||
ಮಾರುತನ ಗತಿಯನ್ನೆ ಜರೆವುತ |
ಭೋರನೈತಂದಾಗ ವಸತಿ |
ದ್ವಾರವನು ಒಳಪೊಕ್ಕು ಪೇಳಿದನಂದು ಈ ಹದನ ||೩೮||
ರಾಗ ಘಂಟಾರವ ಅಷ್ಟತಾಳ
ಲಾಲಿಸೆನ್ನಯ ಮಾತ ಮಹಾಖ್ಯಾತ |
ನೀಲಕಂಧರನಾಪ್ತನಾದ ಶ್ರೀ | ಲೋಲ ಕಳುಹಿದ ಪರಿಯನು ||೩೯||
ದಾನವಾರಿಯ ನೇಮವಾಯ್ತೆನಗೀಗ |
ಭಾನುಭಕ್ತನ ಕರೆದು ತಾರೆನೆ | ಸಾನುರಾಗದಿ ಬಂದೆನು ||೪೦||
ತೆರಳಯ್ಯ ಸ್ವಾಮಿಯಿರುವ ಬಳಿಗೆ ಬೇಗ |
ಕರುಣಸಾಗರಚರಣಯುಗಸಂ | ದರುಶನಾರ್ಥಿಗೆ ತವಕದಿ ||೪೧||
ಕಂದ
ಇನಿತೆಂದಾ ದೂತನನುಂ |
ವಿನಯದಿ ಮನ್ನಣೆಯಿಂದ ಬೀಳ್ಗೊಡುತವನಾಗಳ್ ||
ವನಜಾಕ್ಷನನೀಕ್ಷಿಪರೇಂ |
ಘನಹರುಷದಿ ಪೊರಮಡುತೈತಂದಂ ಜವದಿಂ ||೪೨||
ರಾಗ ಭೈರವಿ ತ್ರಿವುಡೆತಾಳ
ಬಂದನಾಗ | ವಿನಯದೊ | ಳಂದು ಬೇಗ || ಪಲ್ಲವಿ ||
ಚಂದದಲಿ ಮನ | ದಂದು ಬಳಿಕರ | ವಿಂದಸಖನನು ಒಲಿಸಿದ ||
ಕುಂದದವನಾ ನಂದದಿಂದಲಿ | ಬಂದು ಮಣಿ ತನಗಿತ್ತುದ ||
ಮಂದಹಾಸದಿ ಧರಿಸಿ ತಾನದ | ರಂದವೀಕ್ಷಿಸಿ ಹರುಷದ ||
ಚಂದದಿಂದಲಿ ಬಂದು ನುತಿಸಿ ಮು | ಕುಂದ ಜಯ ಜಯತೆಂದು ನಮಿಸಿದ ||
ಭಕುತಿಯಿಂದ | ಬಲುತರ | ಭಕುತಿಯಿಂದ ||೪೩||
ಕಂದ
ನುತಿಸುತ ಚರಣದೊಳೆರಗಲ್ |
ಅತಿ ಹರುಷದೊಳವನನು ಮನ್ನಿಸುತಿರಲಾಗಳ್ ||
ರತಿಪತಿಪಿತನೊಳ್ ರಾಯಂ |
ಅತಿ ಭಕುತಿಯೊಳಿಂತೆಂದನು ಕುಡ್ಮಲಕರದಿಂ ||೪೪||
ರಾಗ ಸಾರಂಗ ಅಷ್ಟತಾಳ
ದೇವ ಲಾಲಿಸು ಬಿನ್ನಪವನೊಂದ | ಪಾದ |
ಸೇವಕನೆಂಬ ಕರುಣದಿಂದ || ಪಲ್ಲವಿ ||
ಕರುಣಾಸಾಗರ ನಿನ್ನ ಬಳಿಯಿಂದ | ಬಂದ |
ಚರನೋರ್ವ ಪೇಳ್ದ ವಚನದಿಂದ ||
ತೆರಳಿ ಬಂದೆನು ನಿನ್ನ ಬಳಿಗೀಗ | ಎನ್ನೊ |
ಳರುಹುವ ಮಾತು ಪಾಲಿಸು ಬೇಗ ||೪೫||
ಎನಲೆಂದನಸುರಾರಿ ದಯದಿಂದ | ಭಾನು |
ನಿನಗಿತ್ತ ವಿಮಲ ರತ್ನವನೊಂದ ||
ಸನುಮತದಲಿ ಯದುರಾಜನಿಗೆ | ಈಯೆ |
ಘನ ಪರಾಕ್ರಮಿ ಯೋಗ್ಯವಾತನಿಗೆ ||೪೬||
ಇಂತೆನಲಾಗಿ ಭೂಪಾಲನು | ದಾನ |
ವಾಂತಕನೆಂದ ಮಾತಿಗೆ ತಾನು ||
ಎಂತು ಕೊಡುವೆ ಧನದಾಶೆಗೆ | ಬಲು |
ಚಿಂತೆಯೊಳೆಂದಘನಾಶಗೆ ||೪೭||
ರಾಗ ಸಾವೇರಿ ಆದಿತಾಳ
ಅಹಹಾ ಏ ಮುರಮಥನ | ನೀನೆಂಬುದು |
ವಿಹಿತವೆ ಜಡಜಾಪ್ತನ ||
ಬಹು ಸ್ತುತಿಸಿದಡನು | ಗ್ರಹಿಸಿದ ಮಣಿಯನು |
ಅಹಿಶಯನನೆ ತವ | ಮಹಿಮೆಯ ನೋಡಲು |
ಬಹು ಸ್ತುತಿದೂರನೆ | ಸಹಜವೆ ಕೇಳ್ವುದು ||೪೮||
ಮುನ್ನ ಸುದಾಮ ಮುಖ್ಯರ | ಚಿಂತಿತಾರ್ಥಗ |
ಳನ್ನು ಪಾಲಿಸಿ ಸುರರ ||
ಸನ್ನುತ ಬ್ರಹ್ಮಾಂಡ | ವನ್ನು ಗರ್ಭದೊಳಾಂತ |
ಮನ್ಮಥಪಿತ ಕರು | ಣಾರ್ಣವ ನೀ ಮಣಿ |
ಯನ್ನು ಕೇಳಲು ನಾ | ನಿನ್ನೆಂತೀವೆನು ||೪೯||
ಎಂದೆನಲಾ ನುಡಿಗೆ | ನಗುತಲರ |
ವಿಂದನಾಭನು ಆತಗೆ ||
ಎಂದನು ಮಧುರೋಕ್ತಿ | ಯಿಂದ ನಿನ್ನಯ ಮನ |
ನೊಂದುಕೊಳ್ಳಲು ಬೇ | ಡಿಂದು ನಿನ್ನ ಮಣಿ |
ಯಿಂದಹುದೇನದ | ನಿಂದೀಯದಿರೈ ||೫೦||
ಭಾಮಿನಿ
ಇಂದುವಂಶಜ ಕೇಳು ಬಳಿಕಾ |
ಮಂದಮತಿ ಧನಲೋಭದಲಿ ಗೋ |
ವಿಂದನಾಜ್ಞೆಯ ಮೀರಿ ಲೆಕ್ಕಿಸದಿರ್ದನುಬ್ಬಿನಲಿ ||
ಒಂದು ದಿನ ಮೃಗಬಾಧೆಯಿಂದಲಿ |
ಬಂದು ಭೂಪಾಲಕನ ಅನುಜನೊ |
ಳೆಂದರಾ ವನಚಾರರೊಂದಿಸಿ ನೊಸಲ ಕೈಗಳಲಿ ||೫೧||
ರಾಗ ಮುಖಾರಿ ಆದಿತಾಳ
ತೆಕ್ಕೋ ಸಲಾಮು ಸರ್ರನೆ | ಪ್ರಸೇನಭೂಪ |
ತೆಕ್ಕೋ ಸಲಾಮು ಸರ್ರನೆ || ಪಲ್ಲವಿ ||
ಅಡವಿಯೊಳಗೆ ಮಿರಗ | ಗಡಣ ಹೆಚ್ಚಿಕೊಂಡೀಗ |
ಗಿಡಗಳ ಪುಡಿಗೈದವು | ಒಡೆಯ ಕೇಳೈದವು ||೫೨||
ಜಂಬು ಬದರಿಗಿಡ | ಲಿಂಬೆ ಮೊದಲು ಬುಡ |
ತುಂಬಿದ ಪುಷ್ಪವ ಕೂಡ | ಹಾಳಾದ ಕೇಡ ||೫೩||
ಪೇಳುವದೇನಿಂದು | ಪಾಳುಗೈದವು ಬಂದು |
ಏಳಿರೆಂದೆನಲು ಬೇಗ | ಪೇಳಿದನಾಗ ||೫೪||
ರಾಗ ಪಂಚಾಗತಿ ಮಟ್ಟೆತಾಳ
ಯಾತಕಿದಕೆ ಚಿಂತೆ ಕೇಳಿ | ಮಾತನೊಂದನು ||
ಬೀತಿರುವ ಮೃಗವ ನಾ | ಘಾತಿಸುವೆನು ||
ಪೇತು ಮೃಗಂಗಳಿಗೆ ಬೆದರ್ವ | ಮಾತದೇತಕೆ ||
ಸಾತಿಶಯದಿ ತೆರಳ್ವ ಹರಿಣ | ಜಾತಿಹಿಂಸಕೆ ||೫೫||
ಭರದಿ ಸರ್ವರಾಯುಧವನು | ಧರಿಸಿ ಕರದೊಳು ||
ನೆರಹಿ ಆಟವಿಕ ಜನರ | ನಿರದೆ ಮುದದೊಳು ||
ತೆರಳಬೇಕು ಕಾನನದೊಳು | ಕರಿಸಮೂಹವ ||
ಕರಡಿ ಸಿಂಗ ವ್ಯಾಘ್ರಗಳನು | ತರಿದು ಕೆಡಹುವ ||೫೬||
ಎಂದ ಮಾತ ಕೇಳುತೆಲ್ಲ | ರೊಂದುಗೂಡುತ ||
ಸಂದ ಧನುಶವರೌಘಗೊಂಡು | ನಿಂದರುಬ್ಬುತ ||
ಬಂದು ನಮಿಸಿ ನಿಂದ ಶಬರ | ರಂದವೀಕ್ಷಿಸಿ ||
ಚಂದದಿಂದ ವಾಜಿ ತರಿಸು | ತೆಂದ ಹರುಷಿಸಿ ||೫೭||
ತರಣಿಯಿತ್ತ ರತ್ನವನ್ನು | ಧರಿಸಿ ಕೊರಳಲಿ ||
ಭರದ ದಟ್ಟಿ ಚಲ್ಲಣಗಳ | ನಿರದೆ ತೊಡುತಲಿ ||
ತುರಗವೇರಿ ಪರಕೆಗೊಂಡು | ಆ ಪ್ರಸೇನನು ||
ಚರರ ಕೂಡೆ ವನಕೆ ತೆರಳ್ದ | ಏನನೆಂಬೆನು ||೫೮||
Leave A Comment