ಭಾಮಿನಿ
ಇಂತು ಪುರಜನ ಬಂಧುಜನ ಸಹಿ |
ತಂತರಾತ್ಮಕನೋಲಗದಿ ನಲ |
ವಾಂತು ಮಂಡಿಸೆ ಮೆರೆದುದಾ ಸಭೆ ಸುರಪನೋಲಗದ ||
ಕಾಂತಿ ಶತಮಿಗಿಲಾಯ್ತು ಲಕ್ಷ್ಮೀ |
ಕಾಂತ ಕುಳಿತಾ ಸಭೆಯ ಸಂಭ್ರಮ |
ವೆಂತು ಪೊಗಳುವೆ ಶೇಷರಾಜಂಗರಿದು ವಿವರಿಸಲು ||೧||
ರಾಗ ಭೈರವಿ ಝಂಪೆತಾಳ
ಈ ಪರಿ ವೈಭವದಿ | ಶ್ರೀಪತಿಯೊಡ್ಡೋಲಗದಿ |
ಆ ಪುರಜನರೆಲ್ಲ | ಭಾಪೆನುತಲಿ ||೧||
ಪರಮಸಂತಸದಿಂದ | ಮೆರೆವ ಯಾದವವೃಂದ |
ಸರಸಿಜಾಪ್ತನ ಶರಣ | ನುರೆ ಮೌನದಿಂದ ||೨||
ಚಿಂತಿಸುತ ಇರಲಾತ | ಕಂತುಪಿತನೀಕ್ಷಿಸುತ |
ಸಂತಯಿಸೆ ಪೇಳ್ದನಾ | ದ್ಯಂತ ವೃತ್ತಾಂತ ||೩||
ರಾಗ ಕಾಂಬೋಜಿ ಝಂಪೆತಾಳ
ಕೇಳಯ್ಯ ಸತ್ರಾಜಿತಾಖ್ಯ ಮನವೊಲಿದು |
ಬೀಳುಗೊಂಡು ಚಿಂತೆಯನು ತಾಳು ಧೈರ್ಯವನು ನೆನೆದು || ಪಲ್ಲವಿ ||
ತರಣಿ ದಯೆಗೈದಿರುವ ರತ್ನವನು ನಿನ್ನನುಜ |
ಧರಿಸುತ್ತ ಮೃಗಬೇಟೆಗೆಂದೆನುತ ವನಕೆ ||
ತೆರಳಿದಾದಿನ ಸಿಂಹ ತರಿಯೆಯೆನ್ನಯ ಮೇಲೆ |
ನೆರೆಮನವನಿಟ್ಟಿರುವ ಪರಿಯ ಕಳೆವುದಕೆ ||೧||
ನಿನಗಾಗಿ ನಾ ಪೋಗಿ ಘನತರದ ಬಿಲಕಾಗಿ |
ಸೆಣಸಿದನು ಎನ್ನೊಡನೆ ಜಾಂಬವನು ತಾನು ||
ಅನುವರದಿ ಸೋತವನು ಕನಕಾಂಗಿಯೋರ್ವಳನು |
ವಿನಯದೊಳಗೆನಗಿತ್ತ ದಿನಪಮಣಿಸಹಿತ ||೨||
ನಿನ್ನ ಮನದೊಳು ಶಂಕೆ ಎನ್ನ ಮೇಲಿರುವುದಕೆ |
ಮುನ್ನ ಕಳೆಯಲು ಪೋಗೆ ಕನ್ನಿಕೆಯು ಎನಗೆ ||
ಸನ್ನುತದಿ ದೊರಕಿದಳು ಇನ್ನು ಮಣಿಕೊಳ್ಳುವುದು |
ನಿನ್ನ ಮಣಿ ನಿನಗಾಯ್ತು ಎನ್ನ ದೂರದಿರು ||೩||
ಎಂದ ಹರಿನುಡಿ ಕೇಳಿ ನೊಂದು ಲಜ್ಜೆಯ ತಾಳಿ |
ಕುಂದುಮೊಗನಾಗಿ ಮುಸುಕಿಂದ ತಲೆವಾಗಿ ||
ನಿಂದುಕೊಂಡವನತಿಯ ಮಂದಮತಿಯವ ನುಡಿಯ |
ಕುಂದದಾಲೋಚಿಸುತಲೆಂದ ಮರುಗುತ್ತ ||೪||
ರಾಗ ನೀಲಾಂಬರಿ ಆದಿತಾಳ
ಹರ ಹರಾ ನಾನರಿಯದಾದೆ | ಪರಮಾತ್ಮ ನೀನೆಂದು ||
ಪರಮಾತ್ಮನ ಮೇಲೆ ದೋಷ | ಹೊರಿಸಿ ಪೇಳ್ದೆ ನಿಂದೆ ||೧||
ಕುಕ್ಷಿಯೊಳೀರೇಳು ಜಗವ | ರಕ್ಷಿಸುವ ದೇವ ||
ಪಕ್ಷಿವಾಹನನೆಂಬುದ | ಈಕ್ಷಿಸದೆ ಮದದ ||೨||
ಗರ್ವದಿಂದ ಮರೆತೆನಿಂದು | ಸರ್ವಾತ್ಮಕನೆಂದು |
ಸರ್ವಥಾ ಪಾಪಿಯಾಗೀ | ಊರ್ವಿಯೊಳಗ್ಯಾಕೆ ||೩||
ಧರಣಿಯೊಳ್ ಬಾಳುವುದೆಂತು | ಹರಿಯೊಳ್ ಕಷ್ಪವಾಂತು ||
ಕರುಣಾಳು ಎನ್ನ ತಪ್ಪ | ಮರೆದು ಕಾಯೊ ನೀನು ||೪||
ಕಂದ
ಈ ತೆರದೊಳ್ ಮರುಗುವುದಂ |
ನೀತಿಯುತರ್ ಕಂಡು ಜರೆವುತ್ತಿರಲಾಗಳ್ ||
ಆತನು ವಂದಿಸುತಿಂತೆಂ |
ಬಾತನ ಮನ್ನಿಸಿ ಮುದದೊಳಗೀ ತೆರನೆಂದಂ ||೧||
ರಾಗ ಮಧುಮಾಧವಿ ಅಷ್ಟತಾಳ
ಮರುಗದಿರೈ ಸತ್ರಾಜಿತ ನೀನು |
ಅರಿಯದೆ ಪೇಳ್ದರೆ ಕೊರತೆಯದೇನು || ಪಲ್ಲವಿ ||
ಹಿಂದೆ ನಾ ಕೇಳಿದ | ರಿಂದ ನೀ ಗ್ರಹಿಸುವ |
ದಂದವಹುದುಯೆನು | ತಂದು ಮಾಧವ ನಲ |
ವಿಂದ ಪೇಳಿದನಾತಗೆ | ವಿಧಿಲಿಖಿತಗ |
ಳಿಂದಲಾದುದು ಈ ಬಗೆ | ಯೋಚಿಸದಿರಿ |
ನ್ನೆಂದು ಮನ್ನಿಸಿ ದೀನ | ಬಂಧು ಸಂತಯಿಸಿದ ||೧||
ಹರಿಯ ವಾಕ್ಯವ ಕೇಳಿ | ಪರಿತೋಷವನು ತಾಳಿ |
ಕೊರತೆ ಬಂದುದ ಪರ | ಹರಿಸಲೆನುತ ತನ್ನ |
ಅರಮನೆಗಾಗಿ ಬಂದು | ಪುತ್ರಿಯ ಹರಿ |
ಕರುಣಾಸಾಗರನಿಗಿಂದು | ಕೊಡುವೆನೆಂದು |
ಪರಮ ಸಂತೋಷದಿ | ಪುರವ ಶೃಂಗರಿಸಿದ ||೨||
ತೋರಣ ಕುರುಜು ಮೇ | ರುವೆಯಿಂದ ಪುರವ ವಿ |
ಸ್ತಾರದಿ ರಚಿಸುತ | ಲೀ ರೀತಿ ಸಕಲವನು | ಭೂಪಾಲನು |
ಧಾರಿಣಿಯಮರರನು | ಬರಿಸಿ ಬೇಗ |
ಚಾರು ಸುಲಗ್ನವನು | ಇರಿಸಿ ತಾನು |
ವೀರರೊಂದುಳಿದೈವ | ತ್ತಾರು ದೇಶದವರಿಗೆ ||೩||
ರಾಗ ಕಾಂಭೋಜಿ ಝಂಪೆತಾಳ
ಚಾರಕರ ಮುಖದಿಂದ ಲೇಖನವ ಕಳುಹಿಸುತ |
ಚಾರುತರ ಉಡುಗೊರೆಯು ಸಹಿತ ||
ಧಾರಿಣೀಪತಿಗಳೆಡಗೀ ರೀತಿ ಕಳುಹಿಸುತ |
ಭೂರಿಸಂತಸದಿಂದಲಾತ ||೧||
ಹೊತ್ತ ಕಡುದುರಿತವನು ಪರಿಹರಿಸಬೇಕೆಂದೆ |
ನುತ್ತ ಭೂಪಾಲಕನು ಮನದಿ ||
ಪತ್ತನವ ಪೊರಡುತೈತಂದು ಬಿನ್ನಯಿಸಿ ಪುರು |
ಷೋತ್ತಮನೊಳೆಂದನತಿ ನಯದಿ ||೨||
ನಾನು ಸರ್ವಾಪರಾಧವ ಗೆಯ್ದೆನೆಂದು ಅನು |
ಮಾನಿಸದೆ ದಯದೊಳಗೆ ಬಂದು ||
ಸಾನುರಾಗದೊಳೆನ್ನ ಪುತ್ರಿಯನು ಕೈಕೊಂಡು |
ನೀನೆನ್ನನುದ್ಧರಿಪುದಿಂದು ||೩||
ಭಾಮಿನಿ
ಎನುತ ಕರಗಳ ಮುಗಿದು ನಿಂದಿರೆ |
ಚಿನುಮಯನು ಕಾಣುತ್ತಲೆಂದನು |
ಕನಕ ಕನ್ನಿಕೆ ರತ್ನವಿತ್ತರೆ ಕೈಕೊಳದೆ ಬಿಡುವ ||
ವಿನಯಹೀನರು ಇಹರೆ ಲೋಕದಿ |
ಸನುಮತದೊಳೈತರುವೆ ತೆರಳೆಂ |
ದೆನುತ ಕಳುಹಲು ಹರುಷದಿಂದೈತಂದ ಪುರವರಕೆ ||೧||
ಕಂದ
ಬಂದಾ ಭೂಪಂ ತನ್ನಯ |
ನಂದನೆಯಹ ಸತ್ಯಭಾಮೆಯಂ ಕರೆದವಳೊಳ್ ||
ಮಂದಸ್ಮಿತ ವಚನದೊಳಿಂ |
ತೆಂದುಂ ತಕ್ಕಯಿಸುತ ನುಡಿದಂ ತಾನಾಗಂ ||೧||
ರಾಗ ಕಲ್ಯಾಣಿ ಏಕತಾಳ
ಇತ್ತ ಬಾರೌ ಮೋಹದ | ಪುತ್ರಿ ಸತ್ಯಭಾಮೆ |
ಮತ್ತಗಜಯಾನೆ ಕೇಳೊಂ | ದುಕ್ತಿಯ ನಾ ಪೇಳ್ವೆ ||
ಮತ್ತಕಾಶಿನಿ ಕನ್ನೆಯರ | ಉತ್ತಮ ಮಣಿಯೆ |
ಚಿತ್ತಜನಯ್ಯಗೆ ನಿನ್ನ | ಅರ್ತಿಯಿಂದಲೀವೆ ||೧||
ಎಂದು ನಿಶ್ಚಯಗೈದಿರ್ಪೆ | ನಿಂದು ನಿನ್ನ ಮನದ |
ಅಂದವೇನೆಂದೆಂಬ ಪಿತಗೆ | ವಂದಿಸುತ್ತ ನುಡಿದಳ್ ||
ಸಿಂಧುವಿನುಲ್ಲಾಸದಿಂದ | ಚಂದವಾದುದೆನುತ |
ಮಂದಹಾಸದಿ ತಾತನೊ | ಳೆಂದಳು ನಾಚುತ್ತ ||೨||
ಪುರಹರನಾಪ್ತನಿಗೆನ್ನ | ಕರುಣದಿಂದ ಧಾರೆ |
ಎರೆಯಲು ಕೃತಾರ್ಥಳಾದೆ | ಸರಿಯಾರೆನಗೆ ಬೇರೆ ||
ನೆರೆ ರೋಗಿ ವೈದ್ಯರ ಮತವು | ಇರದೆ ಒಂದಾಯ್ತೆಂದು |
ಹರುಷಿಸುವ ಸುತೆಯ ರಾಯ | ಪರಸುತಿರ್ದನಂದು ||೩||
ರಾಗ ಸೌರಾಷ್ಟ್ರ ತ್ರಿವುಡೆತಾಳ
ಇಂತು ಮದುವೆಗೆ ಸಕಲ ಸನ್ನಹ |
ವಾಂತು ಹರುಷದೊಳಗಿರೆ ||
ಕಾಂತೆ ಭಾಮೆಯ ವಿವಹಸಂಭ್ರಮ | ವೆಂತು ಒರೆವೆ ||೧||
ದೊರೆ ಕುಮಾರರು ಋಷಿವರರು ಸಹ |
ಬರಲು ಭೂಪ ಸರ್ವರ ||
ಪರಿಪರಿಯೊಳುಪಚರಿಸಿದನು ಕೇಳ್ | ಧರಣಿಯಧಿಪ ||೨||
ಪರಮವೈಭವದಿಂದಲಿಂತಿವ |
ರಿರಲಿಕಾಗ ದ್ವಾರಕಾ ||
ಪುರದೊಳಗೆ ವಸುದೇವದೇವಕಿ | ಗೆರಗೆ ಬೇಗ ||೩||
ಕಂದ
ಪಿಡಿದೆತ್ತುತ ತನಯನ ಮೆಯ್ |
ದಡವುತಲತಿ ಸಂತೋಷದಿಂ ಪರಸುತಲಾಗಲ್ ||
ನುಡಿದರಿದೇನೈ ಹರುಷದ |
ಕಡಲೊಳಗಾಳುವೆಯೆನಲವರೊಡನಿಂತೆಂದಂ ||೧||
ರಾಗ ಶಂಕರಾಭರಣ ಅಷ್ಟತಾಳ
ತಾತ ಲಾಲಿಪುದೆನ್ನ ಮಾತ ನೀವ್ ಕರುಣದಿ |
ಮಾತೆ ಸಹಿತ ಮುದದಿ ||
ಪ್ರೀತಿಯಿಂ ಸತ್ರಾಜಿತಾಖ್ಯ ತನ್ನಯ ತನು |
ಜಾತೆಯನೆನಗೀವೆನು | ಎಂದನು ತಾನು ||೧||
ತೆರಳಲು ಬೇಕು ದಿಬ್ಬಣ ಸಹ ಪುರಜನ |
ಪರಿಜನರಾಪ್ತರೆಲ್ಲ ||
ಕರೆದುಕೊಡುವ ಹೆಣ್ಣ ವರಿಸಿಕೊಂಬುದು ಬಣ್ಣ |
ನೆರೆ ನಿಮ್ಮ ಚಿತ್ತ ಹ್ಯಾಗೆ | ಈ ಬಗೆಗೆ ||೨||
ಎಂದು ಮಾತಿಗೆ ವಸುದೇವದೇವಕಿ ತಮ್ಮ |
ಕಂದನ ತಕ್ಕವಿಸಿ ||
ಚಂದವಾದುದು ನಾವಾನಂದದಿ ಬರುವೆವು |
ಇಂದಿನೊಳೀ ಲಗ್ನಕೆ | ಪೋಗುವ ಜೋಕೆ ||೩||
ಆಗಲೆ ಚಾರರೈತಂದು ಬಿನ್ನಯಿಸಿದರ್ |
ಹೀಗೆಂದು ಕೃಷ್ಣನಿಗೆ ||
ನೀಗಿ ಲಾಕ್ಷಾಗೃಹದಿಂದೇಕಚಕ್ರಕೆ |
ಪೋಗಿ ಪಾಂಡವರ್ ಮುಂದಕೆ | ಪಾಂಚಾಲಕೆ ||೪||
ರಾಗ ಕಲ್ಯಾಣಿ ಅಷ್ಟತಾಳ
ಶಿವ ಶಿವ ಕುಂತಿಯಾತ್ಮಜರಿಗೀ ಪರಿಯ |
ಭವಣೆಯು ದೊರಕಿತೆ ದುಷ್ಟನ ಕಯ್ಯ ||
ಕವಳವಾದರು ಬಹುವಿಧದಿಂದಲೆನುತ |
ತವಕದಿ ಪೊರಟನೀಕ್ಷಿಸಲು ಶ್ರೀನಾಥ ||೧||
ವಾರ್ಧಕ
ಭೂರಮಣ ಲಾಲಿಸೈ ಪಾಂಡವರನೀಕ್ಷಿಸಲ್ |
ಮಾರಮಣನಿತ್ತ ತೆರಳಲು ಹೃದಿಕ ತನಯನ |
ಕ್ರೂರನೆಂಬವಗಂತೆ ತಿರುಗೆ ಶತಧನ್ವನೀ ಪರಿಣಯದ ವಾರ್ತೆ ತಿಳಿದು ||
ನಾರಿಯಂ ತನಗೀವೆನೆಂದು ವಂಚಿಸಿದನೀ |
ಚೋರಗೋವಳಗಿತ್ತನಾ ದುರಾತ್ಮನ ಕಾಲ |
ನೂರ ಪೊಗಿಸದೆ ಮಾಣೆನೆಂದು ರೋಷಿತನಾಗಿ ನಿಜಮಂತ್ರಿಗಿಂತೆಂದನು ||೧||
ರಾಗ ಕಾಂಭೋಜಿ ಝಂಪೆತಾಳ
ಹುಡುಗಿಯನು ತನಗೀವೆನೆಂದೆನುತ ಮಣಿಧರನು |
ದೃಢದಿಂದ ಪೇಳಿ ನಿಜಸುತೆಯ ||
ಹುಡುಗ ಗೋವಳಗೀವನಂತೆ ದಿಟ ಕುಹಕಿಯನು |
ಬಿಡುವುದಿಂದುಚಿತವೇನಯ್ಯ ||೧||
ಸೃಷ್ಟಿಯಧಿಪತಿತನಕೆ ಯೋಗ್ಯವಾಗಿಹ ನೃಪರ |
ಬಿಟ್ಟು ಗೊಲ್ಲರ ನಂದಸೂನು ||
ಶ್ರೇಷ್ಠನೆಂದೆನುತೆನ್ನ ಬಿಟ್ಟು ಕನ್ನಿಕೆಯಿತ್ತು |
ಕೆಟ್ಟ ಕೇಡೇನ ಪೇಳುವೆನು ||೨||
ಕರಿತುರಗ ರಥಪದಾತಿಯ ಬಲದ ಮೊತ್ತವನು |
ನೆರಹು ಶೀಘ್ರದಿ ಕುಶಸ್ಥಳಿಯ ||
ಪುರವ ಮುತ್ತುವ ತಡೆಯದೆಂದೆನಲು ಕೈಮುಗಿದು |
ದೊರೆಗೆಂದ ರೋಷಕುಪಶಮೆಯ ||೩||
ರಾಗ ಕಾಪಿ ಅಷ್ಟತಾಳ
ರೋಷವ ಸೈರಿಸು ಜೀಯ | ಕ್ಷಮಾ |
ರೂಪವ ಧರಿಸಲು ಗುಣವಿರ್ಪುದಯ್ಯ || ಪಲ್ಲವಿ ||
ದಿನಪನ ಭಜಕನಾಗಿಹನು | ತನ್ನ |
ತನುಜೆಯ ಮಂದರಧರಗಿತ್ತಿರುವನು ||
ವಿನತಜನಿಂಗಹಿ ಇದಿರೆ ಚಂದ್ರನ ಬಕ |
ಮುನಿದು ನಿಂದಿಸಿದಂತೆ ಪೇಳುವರೆಲ್ಲ ||೧||
ಹರಿಶರಣಾಂಬರೀಷನಿಗೆ | ಮುನಿ |
ವರ ದುರ್ವಾಸನು ಮುನಿದೇನಾದ ಕಡೆಗೆ ||
ತರಳ ಧ್ರುವನ ಮತ್ಸರದಿಂದ ಮಲತಾಯಿ |
ಸುರುಚಿ ಘಾತಿಸಿ ಕಡೆಗೇನಾದಳನರ್ಥದಿ ||೨||
ದೃಢಮನದಿಂದಲಿ ನೋಡು | ಜಗ |
ದೊಡೆಯನಾಶ್ರಿತರನು ಕೆಣಕಲು ಕೇಡು ||
ಹುಡುಗಿಯ ನೆವದಿಂದ ತಿಳಿದು ತಿಳಿದು ಪೋಗಿ |
ಕೆಡಬೇಡ ನಿನಗೆ ಸಾರಿದೆ ಕಡ್ಡಿ ಮುರಿದು ||೩||
ಭಾಮಿನಿ
ಎನಲು ಸಚಿವನ ನುಡಿಯ ಕೇಳುತ |
ಕನಲಿ ಗರ್ಜಿಸುತೆಂದನೆಲವೋ |
ಬಿನುಗೆ ನೀನುತ್ತರವನೀವೆಯೊ ಸಲುಗೆಯಿಂದೀಗ ||
ಘನ ಮದಾಂಧತೆಯಿಂದ ಗೋವಳ |
ನನು ಮಹತ್ತ್ವವ ಮಾಡಿ ಪೊಗಳುವೆ |
ರಣಕೆ ತೆರಳುವೆನೆನುತ ವೀರಾವೇಶದಲಿ ಪೊರಟ ||೧||
ರಾಗ ಭೈರವಿ ಏಕತಾಳ
ಬಂದನು ಗಜರಥ | ಮಂದಿ ಕುದುರೆಗಳ |
ಸಂದಣಿ ಪಾಠಕ | ರಂದು ಪೊಗಳಲೈ |
ತಂದ ಭರಕೆ ನಾ | ಗೇಂದ್ರನಳುಕೆ ನಭ |
ಕೆಂಧೂಳಿಯೊಳಿನ | ನಂದು ಮುಸುಕಲು || ಕೇಳೈ ಭೂಪ ||೧||
ಹುಡುಗೀಯದೆ ನುಡಿ | ಗೆಡರ ಗೈದವನವ |
ನೊಡಲ ನೆಣನ ಭೂತ | ಗಡಣಗಳಿಗೆ ಉಣ |
ಬಡಿಸುವೆನುತಲಿ | ಖಡುಗವ ಝಳಪಿಸಿ |
ಕಡುಗಲಿಗಳು ಘುಡು | ಘುಡಿಸುತೈದಿದರು || ಕೇಳೈ ಭೂಪ ||೨||
ಪೃಥ್ವಿಯು ಶರಧಿಯ | ಸುತ್ತಿದ ತೆರದಿ ಕು |
ಶಸ್ಥಳಿ ನಗರವ | ಮುತ್ತಲು ಚರರ್ ಕಾ |
ಣುತ್ತ ಬೆದರಿ ನಡು | ಗುತ್ತ ತಮ್ಮೊಡೆಯಗೆ |
ಬಿತ್ತರಿಸಿದರೀ | ವೃತ್ತಾಂತವನು || ಕೇಳೈ ಭೂಪ ||೩||
ರಾಗ ಲಾವಣಿ ಆದಿತಾಳ
ಬಿರ್ರನೆ ಬಂದೆವು ನಿನ್ನ ದರುಶನಕೆ | ಮಹರಾಜ ಸದನಕೆ |
ಬಿರ್ರನೆ ಬಂದೆವು ನಿನ್ನ ದರುಶನಕೆ || ಪಲ್ಲವಿ ||
ಬಿರ್ರನೆ ಬಂದೆವು ನಿನ್ನ ಬಳಿಗೆ | ಅರ್ಯಮನಸ್ತಮಿಸಿದ ಮ್ಯಾಗೆ |
ಸರ್ರನೆ ಬಂದು ಕವಿದಿಹರಂ ಪುರಕೆ | ವೈರಿಗಳ್ ಜೋಕೆ |
ಸರ್ರನೆ ಬಂದು ಕವಿದಿಹರು ಪುರಕೆ ||೧||
ಭಾಮಿನಿ
ಎಂದ ಚಾರರ ನುಡಿಗೆ ಯೋಚಿಸು |
ತೆಂದನಾತಗೆ ಹಿಂದೆ ಎನ್ನಯ |
ನಂದನೆಯ ನಾ ಕೊಡುವೆನೆಂದಿಹೆನದರಿನಿಂದೀಗ ||
ಬಂದನೇ ಬಲಸಹಿತ ಪುರಕೆಂ |
ದಂದು ತಾನೇ ಕರದಿ ಧನುಶರ |
ವಂ ಧರಿಸಿ ಮಾರಾಂತು ನುಡಿದನು ಹೃದಿಕತನಯನೊಳು ||
ರಾಗ ಮಾರವಿ ಆದಿತಾಳ
ವೀರ ನೀನಹುದೊ ಖರೆ | ಚೋರರ ತೆರ | ವೀ ರಾತ್ರಿಯೊಳಗರರೆ ||
ಭೂರಿಮಾರ್ಬಲ ನೆರೆ | ದೂರ ಮುತ್ತಿರುವರೆ |
ಕಾರಣವೇನೆಂದೊರೆ ||೧||
ಸತ್ಯಧರ್ಮವ ಪೇಳುವೆ | ವಚನಭ್ರಷ್ಟ | ವ್ಯರ್ಥ ನಿನ್ನಯ ಬಾಳುವೆ ||
ಪುತ್ರಿಯ ಕೊಡದಿರ್ದ | ಧೂರ್ತ ನಾಲಿಗೆ ಕೊಯ್ದು |
ಶಸ್ತ್ರದೊಳುರ ಸೀಳುವೆ ||೨||
ದುರ್ಜನರೆರೆಯ ನೀನು | ಪೂರುವ ಪುಣ್ಯ | ವರ್ಜಿತನಾದವನು ||
ಮೂರ್ಜಗಪತಿಗೆ ಸು | ತೆಯನಿತ್ತು ಪಾಪವಿ |
ಸರ್ಜಿತನಾದೆ ನಾನು ||೩||
ಎನಲೆಂದ ಗರ್ಜಿಸುತ | ನಿನ್ನನು ಕಾವ | ಬಿನುಗುಳ್ಯಾರೆನುತ ||
ನೆನೆದುಕೋ ಇಂದಿಗೆ | ಪಣೆಯ ಬರಹ ತೀರಿ |
ತೆನುತೆಚ್ಚ ಬೊಬ್ಬಿಡುತ ||೪||
ರಾಗ ಭೈರವಿ ಏಕತಾಳ
ಪೊಡೆದಸ್ತ್ರವನುರೆ ಕಡಿದು | ಘುಡು | ಘುಡಿಸುತನಲಶರ ಪಿಡಿದು ||
ಬಿಡಲು ಜಲಾಸ್ತ್ರದೊಳದನು | ಬಳಿ | ಕಡಗಿಸೆ ಕಾಣುತಲವನು ||೧||
ಉರಗಶರೌಘವನೆಸೆಯೆ | ಬಲು | ಬರದಿ ಭೂವರನನು ಕವಿಯೆ ||
ಗರುಡ ಕಳಂಬದೊಳದನು | ಪರಿ | ಹರಿಸಲು ಶೈಲಾಸ್ತ್ರವನು ||೨||
ತೆಗೆದೆಸೆಯಲು ಕುಲಿಶದಲಿ | ಆದ | ಬಗೆಯದೆ ಕಡಿದ ಸತ್ತ್ವದಲಿ ||
ಮಿಗೆ ಖಡ್ಗದಿ ಮಸ್ತಕವ | ಕಡಿ | ದೊಗೆದಿಳುಹಿದ ಶರಧನುವ ||೩||
ಭಾಮಿನಿ
ಎಲೆ ಧರಾಧಿಪ ಕೇಳು ಮಣಿಧರ |
ಹಲವು ವಿಧದಲಿ ಹೆಣಗಲಾ ಜಯ |
ಲಲನೆ ಶತಧನ್ವನಲಿ ನೆಲೆಸಲು ಕಂಡು ಬಲದವರು ||
ಕೊಳುಗುಳವು ಲೇಸಲ್ಲವೆನ್ನುತ |
ಕಳಕೆ ಬೆಂಗೊಟ್ಟೋಡುತಿರುವರ |
ಛಲದಿ ಬೆರಸುತ ಮರಳಿ ತನ್ನಯ ಪುರಕೆ ತಿರುಗಿದನು ||೧||
ಕಂದ
ಪ್ರಾಣವ ತೊರೆದಿಹ ಪಿತನಂ |
ಕಾಣುತಲಾ ಸತ್ಯಭಾಮೆಯತಿ ವೇಗದೊಳಂ ||
ಗೋಣರಿಯಿಸುವೆ ಸುದರ್ಶನ |
ಪಾಣಿಯೊಳೊರೆದವನನೆಂದರಸುತೈತಂದಳ್ ||
ಭಾಮಿನಿ
ಕಂಡು ಶ್ರೀಹರಿ ಮನದೊಳಚ್ಚರಿ |
ಗೊಂಡನೆರಗಿದ ಭಾಮೆಯಳ ಬೆಸ |
ಗೊಂಡನೇನಿದು ಎಲ್ಲಿಗೈದುವುದಳುವುದೇಕೆನಲು ||
ಚಂಡಬಲ ಹೃದಿಕಜನು ಪಿತನಸು |
ಗೊಂಡನಿರುಳಲಿ ಅವನ ಕೊಲ್ವ ಪ್ರ |
ಚಂಡ ವಿಕ್ರಮಿ ನೀನೆನುತ್ತಿರೆ ಪುಂಡರೀಕಾಕ್ಷ ||೧||
ರಾಗ ಸೌರಾಷ್ಟ್ರ ಆದಿತಾಳ
ಏಳು ತಿಳಿದೆನು ನಡೆದ ಕಥೆಯೆಲ್ಲ | ಶತಧನ್ವನೆಂಬನ |
ಬಾಳಗೊಡೆ ನಾ ಕೊಲುವೆ ಸಟೆಯಲ್ಲ ||
ಖೂಳ ಕೌರವರಿಂದ ಪಾಂಡವ | ಬಾಲರರಗಿನ ಮನೆಯ ಕಷ್ಟವ |
ಬೀಳುಗೊಂಡುದ ಕೇಳಿ ಪೋದೆನು | ಲೀಲೆಯಿಂ ಸಂತೈಸಿ ಮರಳಿದೆ ||೧||
ತೆರಳು ನೀ ಪುರಕೀಗಲೀಕ್ಷಣದಿ | ಮಾತುಳನ ಕೊಂದಿಹ |
ದುರುಳನನು ಸಂಹರಿಸಿ ನಾ ರಣದಿ ||
ಬರುವೆ ನೋಡೆಂದರುಹಿ ರೋಷದಿ | ಗರುಡಗಮನನು ಪೊರಟು ಹೃದಿಕನ |
ತರಳನನು ಅರಸುತ್ತ ಬರುವುದ | ನರಿತನಾ ಶತಧನ್ವನಿತ್ತಲು ||೨||
ಕಂದ
ನಂದನ ಕಂದನನಿದಿರಿಸ |
ಲೆಂದಕ್ರೂರನ ಕೃತವರ್ಮರನುಂ ಕೇಳಲ್ ||
ಎಂದರು ತಮ್ಮಲಿ ಹರಿಯದಿ |
ದೆಂದಿಗು ಬರೆವೆನಲವರಂ ಧಿಕ್ಕರಿಸುತ್ತಂ ||೧||
ವಾರ್ಧಕ
ರಣಹೇಡಿಗಳ್ ನೀವೆನುತ್ತ ಪೊರಟಲ್ಲಿಂದ |
ಧನುಶರವ ಧರಿಸುತ್ತ ಬರುತಿರಲ್ ಕಂಡಾಗ |
ವನಜಾಕ್ಷನಾತನಂ ತಡೆದು ನುಡಿಸಿದನೆಲವೊ ಬಣಗೆ ನಿಲ್ನಿಲ್ಲೆನುತ್ತ ||
ಕಣುಗಳಲಿ ಕಿಡಿಯುಗುಳಿ ಧನುವಿಗಾ ಶತಧನ್ವ |
ಕಣೆಯ ಜೋಡಿಸಿ ನುಡಿದ ನಿನಗಿನ್ನು ಬಾಳಿರುವ |
ಋಣ ತೀರಿತೆಂದೆ ತಿಳಿ ಪೆಣಕೆ ಕಾಲನ ಕೂಡೆ ಸೆಣಸಾಟದೋಲಾಯ್ತಲಾ ||೧||
ರಾಗ ಮಾರವಿ ಝಂಪೆತಾಳ
ಧರೆಯೊಳಗೆ ಬಾಳುವನೆ | ಇರುಳೊಳಾರರಿಯದಂ |
ತರಿದು ಕೊರಳನು ಕೊಂದ ದುರುಳ ||
ಧುರದೊಳಿದಿರಾದಡಾ | ನರಕವನು ತೋರ್ಪೆ ನೀ |
ನರಿಯೆ ನೋಡೆಂದಿಟ್ಟ ಸರಳ ||೧||
ಮಾವನನು ಕೊಂದುದಕೆ | ಸಾವನೊದಗಿಪೆನೆಂದು |
ಭಾವಿಸಿದೆಯಾ ನೀನು ಹಿಂದೆ ||
ದೇವಕ್ಯಗ್ರಜನ ಕೊಂ | ದಾವ ನರಕವ ಕಂಡೆ |
ಕಾವರಾರಿಲ್ಲಿನ್ನು ಮುಂದೆ ||೨||
ದುಷ್ಟ ಕಂಸನ ಗತಿಯು | ಇಷ್ಟವಾದರೆ ಯೇತ |
ಕಿಷ್ಟು ಕಳವಳ ಪೋಗೆನುತ್ತ ||
ವಿಷ್ಟರಶ್ರವನೆಸೆಯೆ | ನಷ್ಟಗೈದಾ ಶರವ |
ಸೃಷ್ಟಿಯೊಳು ಕೆಡೆದು ಪ್ರತಿಯಿತ್ತ ||೩||
ತೊಟ್ಟ ಬಾಣಂಗಳನು | ತಟ್ಟನವ ಮುರಿದೆಸೆಯೆ |
ಬಿಟ್ಟು ಮಾರ್ಗದೊಳು ಮಾರ್ಗಣವ ||
ಕುಟ್ಟಿ ಈಡಾಡೆ ಬೇ | ರಿಟ್ಟಡವ ತರಿದು ತರಿ |
ದೊಟ್ಟಲಿವ ಕೊನೆಗೆ ಕೋಲ್ಗಳನು ||೪||
ಕಡಿದು ಬಿಸುಡಲು ಧನುವ | ಹಿಡಿದು ಶತಧನ್ವನಾ |
ಮೃಡನ ಸಖನಿದಿರು ಬರುತಿರಲು ||
ಕಡೆಗಾಲ ಬಂತಿವನ | ಹಿಡಿದೊಯ್ವೆನೆಂದೆನುತ ||
ಹೆಡತಲೆಯ ಮೃತ್ಯು ನಗುತಿರಲು ||೫||
ಜಡಜನಾಭನು ಕರದಿ | ಪಿಡಿದಿರುವ ಚಕ್ರ ಬಿಡೆ |
ಕಿಡಿ ಸೂಸಿ ಬಂದು ನಿಂದಿರುವ ||
ಕಡು ಪರಾಕ್ರಮಿಯ ಕೊರ | ಳೆಡೆಯ ಕತ್ತರಿಸಲಡ |
ಗೆಡೆದ ಬೇರರಿದವೋಲ್ ತರುವ ||೬||
ವಾರ್ಧಕ
ಬಿದ್ದ ಖಳನಂ ಕಾಣುತಿದ್ದ ಮಿಕ್ಕಿನ ಭಟರು |
ಬುದ್ಧಿಯಿಲ್ಲದೆ ಕದನಕೈತಂದೆವೀ ತಪ್ಪ |
ತಿದ್ದಿ ಸಲಹಪ್ಪ ನೀನೆನುತ ಸಾಷ್ಟಾಂಗದಿಂದಿದ್ದು ಬೇಡುತ್ತಲಿರಲು ||
ಹೊದ್ದಿದವರಂ ತಕ್ಕವಿಸಿ ಮನ್ನಿಸುತ ಬಳಿಕ |
ಹದ್ದನೇರುತ ಬಂದು ಸತ್ಯಭಾಮೆಯ ಕರೆದು |
ಯುದ್ಧವಾರ್ತೆಯನರುಹಿ ಸಕಲರಂ ನೆರಹಿಕೊಂಡಿರ್ದನತ್ತಲು ಸಭೆಯೊಳು ||೧||
ಭಾಮಿನಿ
ಸಪ್ತಋಷಿಗಳ ಮತದಿ ಗಾರ್ಗ್ಯನು |
ಸ್ವಸ್ತಿ ಪುಣ್ಯಾರ್ಚನೆಯ ಗೈಯಲು |
ರತ್ನಖಚಿತದ ಬಾಸಿಗವ ಸೂಡುತ್ತ ಶ್ರೀಹರಿಯು ||
ಮತ್ತೆ ಮಾತಾಪಿತರ ಪದಯುಗ |
ಕರ್ತಿಯಲಿ ಮಣಿಯಲ್ಕೆ ಮುಕುಟವ |
ನೆತ್ತಿ ಪರಸಲು ಶುಭಮುಹೂರ್ತದಿ ದಿಬ್ಬಣವು ಪೊರಟು ||೧||
ರಾಗ ಸಾರಂಗ ರೂಪಕತಾಳ
ಈ ರೀತಿಯಲಿ ಬಂಧು | ವಾರ ಭೂಸುರವೃಂದ |
ನಾರಿಯರೆಲ್ಲರು ಸಹಿತ ||
ಚಾರು ಅಂದಣದಲ್ಲಿ | ನಾರಿ ದೇವಕಿಯರು |
ವೀರ ಶೌರಿಯು ಬರಲಲ್ಲಿ ||೧||
ನಾನಾ ವಾದ್ಯಘೋಷದಿ | ಮಾನಿನಿಯರೆಲ್ಲ ಶೋ |
ಭಾನವ ಪಾಡುತಲಿರಲು ||
ಜಾಣಪಾಠಕರು ನಾ | ನಾ ವಿಧ ಪೊಗಳಲು |
ದಾನವಾರಿಯ ಮಹಿಮೆಗಳ ||೨||
ಭೂಸುರರ್ಗಳ ವೇದ | ಘೋಷದೊಳಾಗ ಶ್ರೀ |
ವಾಸುದೇವನ ಸಹೋದರಿಯು |
ಸೇಸೆಯನಿಕ್ಕುತ | ಲೇಸಿನ ಹಸೆಗಾಗಿ |
ತೋಷದಿ ಕರೆದಳು ವರನ ||೩||
ರಾಗ ಢವಳಾರ ಆದಿತಾಳ
ಅಂಬುಜನಾಭ ಮುರಾರಿ ಮುಕುಂದ |
ಕುಂದುಕಂಧನಾಪ್ತ ಸದ್ಗುಣವೃಂದ ||
ಜಾಂಬವತಿಯ ತಂದ ಧೀರ ದಂಪತಿಗಳ |
ಅಂಬುಜವದನೆಯರು ಕರೆದರೆ ||೧||
ಕಂದರ್ಪಪಿತ ಸತ್ಯಭಾಮೆಯರಾಗ |
ಚಂದದಿ ಹಸೆಯ ಮೇಲೊಪ್ಪಿದರೆ ಬೇಗ ||
ಚಂದನಗಂಧಿಯರೊಂದಾಗಿ ನೆರೆವುತ |
ತಂದರಾರತಿಯ ಮುದದಿಂದ ||೨||
ವಾರಣಗಮನದ ಚೆಲುವ | ಚಾರು ಚಂದಿರನಂತೆ ಹೊಳೆವ ||
ಮೋರೆಯೊಳೆಸೆವ ಕಸ್ತೂರಿತಿಲಕವು |
ಓರೆ ನೋಟದ ವಯ್ಯಾರಿಯರ್ ಮುದದಿ |
ಭಾರ ಸ್ತನಕೆ ನಡು ಬಳುಕುತ ಸತಿಯರು |
ಮೇರುವೆಯಾರತಿಯ ಬೆಳಗಿರೆ ||೩||
ಶಂಖ ಸುದರ್ಶನಧರೆಗೆ | ಪಂಕಜಾಕ್ಷಿಗೆ ಮುರಹರಗೆ ||
ಶಂಕರಪ್ರಿಯ ಗರುಡಾಂಕವಾಹನಗೆ |
ಕಿಂಕರಜನನುತ ವೇದಾಂತನಾದನಿಗೆ |
ಪಂಕಜಮುಖಿ ಗಜಗಮನೆಗೆ ಶ್ರೀ |
ವೇಂಕಟರಮಣಗೆ | ಕುಂಕುಮದಾರತಿಯ ಬೆಳಗಿರೆ ||೪||
ಮಂಗಳಮಹಿಮ ಶ್ರೀರಂಗನಾಯಕಗೆ |
ಮಂಗಳ ಅಂಗನಾಕುಲಶಿರೋಮಣಿಗೆ ||
ಮಂಗಳಗಂಗೆಯ ಪಡೆದ ಪಾವನಗೆ |
ಮಂಗಳವರದ ಕುರಂಗಲೋಚನೆಗೆ |
ಮಂಗಳ ಸತ್ಯಭಾವಕಿಗೆ || ಶೋಭಾನೆ ||೫||
ಯಕ್ಷಗಾನ ಜಾಂಬವತಿ ಕಲ್ಯಾಣ ಮುಗಿದುದು
Leave A Comment