ಇಂಧನ ಬಳಕೆ, ಆರ್ಥಿಕ ಬೆಳವಣಿಗೆ ಮತ್ತು ಜನಸಂಖ್ಯೆಗಳಿಗೆ ಒಂದಕ್ಕೊಂದು ನಿಕಟವಾದ ಸಂಬಂಧವಿದೆ. ಪೆಟ್ರೋಲಿಯಂ ಉತ್ಪನ್ನಗಳ ಬಳಕೆ ೧೯೭೦-೭೧ರಲ್ಲಿ ೧೭.೯ ಮಿಲಿಯನ್‌ ಟನ್‌ಗಳಷ್ಟು ಇದ್ದದ್ದು ೨೦೦೦-೦೧ರಲ್ಲಿ ೯೬.೬ ಮಿಲಿಯನ್‌ ಟನ್‌ಗಳಿಗೆ ಏರಿತು, ನಮ್ಮ ದೇಶವು ಪ್ರತಿ ವರ್ಷ  ಬೇಡಿಕೆಯ ಶೇ. ೭೫ ರಷ್ಟು ಪೆಟ್ರೋಲಿಯಂ ಇಂಧನವನ್ನು ಬೇರೆ ದೇಶಗಳಿಂದ ಆಮದುಮಾಡಿಕೊಳ್ಳುತ್ತಿದೆ. ವಾಹನಗಳ  ಸಂಖ್ಯೆ ದಿನೇ ದಿನೇ ಏರುತ್ತಿದ್ದು ನೈಸರ್ಗಿಕ ಇಂಧನ ಬೇಡಿಕೆ ಹೆಚ್ಚುತ್ತಿದ್ದು, ನಮ್ಮ ದೇಶದ ವಿದೇಶಿ ವಿನಿಮಯಕ್ಕೆ ಮೀಸಲಾಗಿಟ್ಟ ಹಣ ತೈಲ ಪೂರೈಕೆಗೆ ಹೆಚ್ಚು ಭಾಗ ವ್ಯಯವಾಗುತ್ತಿದೆ

ಇದೇ ರೀತಿ ನೈಸರ್ಗಿಕ ಇಂಧನವನ್ನು ಭೂಮಿಯಿಂದ ತೆಗೆದರೆ ಮುಂದ ಇನ ೨೦-೨೫ ವರ್ಷಗಳಲ್ಲಿ ಪೆಟ್ರೋಲಿಯಂ ತೈಲದ ಕಣಜ ಮುಗಿಯಬಹುದು. ಜಾಗತಿಕ ತೈಲದ ಬೆಲೆ ಏರಿದರೂ ಅದು ನಮ್ಮ ದೇಶದ ಆರ್ಥಿಕ ಸಮತೋಲನದ ಮೇಲೆ ಭಾರಿ ಪರಿಣಾಮ ಬೀರುತ್ತದೆ. ಆದುದರಿಂದ ಪೆಟ್ರೋಲಲಿಯಂ ಇಂಧನಗಳ ಬದಲಿಗೆ ಬೇರೆ ಇಂಧನದ ಮೂಲವನ್ನು ಆಯ್ಕೆ ಮಾಡಬೇಕಾಗಿದೆ. ಅದರಲ್ಲಿ ಜೈವಿಕ ಇಂಧನವೂ ಒಂದು. ಇದರಿಂದ ನಮ್ಮ ದೇಶ ಇತರ ದೇಶಗಳ ಮೇಲೆ ಪೆಟ್ರೋಲಿಯಂ ಇಂಧನಕ್ಕೆ ಅವಲಂಬಿಸುವುದು ಕಡಿಮೆಯಾಗುತ್ತದೆ. ಆದುದರಿಂದ ಈಗಾಗಲೇ ಪೆಟ್ರೋಲಿಯಂ ಉತ್ಪನ್ನಗಳ ಬದಲಾಗಿ ಜೈವಿಕ ಇಂಧನ ತಯಾರಿಕೆ ಮತ್ತು ಬಳಸುವ ನಿಟ್ಟಿನಲ್ಲಿ ಯೋಜನೆಗಳು ಪ್ರಾರಂಭವಾಗಿವೆ.

೧೯೦೦ರಲ್ಲಿ ರುಡಾಲ್ಫಾಡೀಸಲ್‌ರು ಜೈವಿಕ ಇಂಧನ (ನೆಲಗಡಲೆ ಎಣ್ಣೆ) ಬಳಸಿ ಡೀಸಲ್‌ ಯಂತ್ರವನ್ನು ಓಡಿಸಬಹುದೆಂದು ತೋರಿಸಿದ್ದಾರೆ. ೧೯೭೦ರಲ್ಲಿ ವಿಜ್ಞಾನಿಗಳು ಸಸ್ಯಮೂಲ ಎಣ್ಣೆಯನ್ನು ಸುಲಭವಾದ ರಾಸಾಯನಿಕ ಕ್ರಿಯೆಯಿಂದ ಅದರ ಅಂಟಿನ ಅಂಶವನ್ನು ಕಡಿಮೆ ಮಾಡಿ ಡೀಸೆಲ್‌ ಗುಣಗಳನ್ನು ಹೆಚ್ಚಿಸಿ ವಾಹನಗಳನ್ನು ಚಲಿಸಲು ಉಪಯೋಗಿಸಬಹುದು ಎಂದು ಕಂಡು ಹಿಡಿದಿದ್ದಾರೆ. ಈಗ ನಮ್ಮ ದೇಶದಲ್ಲಿ ಪೆಟ್ರೋಲಿಯಂ ಇಂಧನಕ್ಕೆ ಪರ್ಯಾಯವಾಗಿ ಜೈವಿಕ ಇಂಧನ ಉಪಯೋಗಿಸುವ ನಿಟ್ಟಿನಲ್ಲಿ ಸಂಶೋಧನೆ ಪ್ರಾರಂಭವಾಗಿದ್ದು, ಅದಕ್ಕೆ ಬೇಕಾಗುವ ಎಣ್ಣೆ ಬೀಜ ಉತ್ಪಾದಿಸುವ ಮರಗಿಡಗಳನ್ನು ಕೃಷಿಗೆ ಯೋಗ್ಯವಲ್ಲದ ಬಂಜರು ಭೂಮಿಯಲ್ಲಿ ಬೆಳೆದು ಎಣ್ಣೆ ಉತ್ಪಾದಿಸಲು ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಅನೇಕ ಯೋಜನೆಗಳನ್ನು ರೂಪಿಸಿವೆ.

ಸುಮಾರು ೧೧ ವಿವಿಧ ಖಾದ್ಯ ಮತ್ತು ಅಖಾದ್ಯ ತೈಲಗಳನ್ನು ಪೆಟ್ರೋಲಿಯಂ ಉತ್ಪನ್ನಗಳ ಬದಲಾಗಿ ಬಳಸಬಹುದೆಂದು ಗುರುತಿಸಲಾಗಿದೆ. ಅವುಗಳಲ್ಲಿ ಹೊಂಗೆ, ಜಟ್ರೋಫಾ (ಕಾಡು ಹರಳು, ತುರಕ ಹರಳು), ಹಿಪ್ಪೆ, ಬೇವು, ಸಿಮರೂಬ ಮರಗಳ ಬೀಜದಿಂದ ಬರುವ ಎಣ್ಣೆಯಿಂದ ವಾಹನ ಮತ್ತು ನೀರೆತ್ತುವ ಇಂಜಿನ್ ಗಳನ್ನು ಓಡಿಸಬಹುದೆಂದು ಸಂಶೋಧನೆಯಿಂದ ತಿಳಿದು ಬಂದಿದೆ.

ಜೈವಿಕ ಇಂಧನ ಎಂದರೇನು?

ಜೈವಿಕ ಡೀಸಲ್‌ ದೀರ್ಘ ಸರಪಳಿ ಕೊಬ್ಬಿನ ಆಮ್ಲದಿಂದ (Long chain Fatty Acid) ಉತ್ಪತ್ತಿಯಾದ ಮೋನೊ ಅಲ್ಕೈಲ್‌ ಎಸ್ಟರ್ (Mono Alkyl Ester). ಜೈವಿಕ ಡೀಸೆಲ್‌, ಸಸ್ಯಗಳಿಂದ ಉತ್ಪತ್ತಿಯಾದ ಎಣ್ಣೆಯನ್ನು ಮೆಥನಾಲ್‌ ಅಥವಾ ಎಥನಾಲ್‌ಜೊತೆ ಸೇರಿಸಿ NAOH/kOH ಪ್ರಚೋದಕದೊಂದಿಗೆ ಟ್ರಾನ್ಸ್‌ಎಸ್ಟರಿಫಿಕೇಷನ್‌ ಮಾಡಿದ ಉತ್ಪನ್ನ. ಟ್ರಾನ್ಸೆಸ್ಟೆರಿಫಿಕೇಷನ್‌ ವಿಧಾನವು ಎಣ್ಣೆಯಲ್ಲಿ ಫ್ರೀಫ್ಯಾಟಿ ಆಸಿಡ್‌ ಅಂಶವನ್ನು ತೆಗೆದು ಡೀಸೆಲ್‌ ಅಂಶಗಳನ್ನು ಸೇರಿಸಿ ವಾಹನಗಳಿಗೆ ಉಪಯೋಗಿಸುವ ಡೀಸೆಲ್‌ ಆಗಿ ಪರಿವರ್ತಿಸುತ್ತದೆ. ಈ ವಿಧಾನದಿಂದ ಜೈವಿಕ ಇಂಧನವು ಡೀಸೆಲ್‌ ಹೊಂದಿರುವ ಸುಲಭವಾಗಿ ಉರಿಯುವ ಗುಣಗಳನ್ನು ಹೊಂದುವುದರಿಂದ, ರಾಷ್ಟ್ರೀಯ ಜೈವಿಕ ಇಂಧನ ಕಾರ್ಯಕ್ರಮವನ್ನು ಕಾರ್ಯರೂಪಕ್ಕೆ ತಂದಾಗ, ಇದನ್ನು ಬಹುಮಟ್ಟಿಗೆ ಪೆಟ್ರೋಲಿಯಂ ಇಂಧನಕ್ಕೆ ಪರ್ಯಾಯವಾಗಿ ಉಪಯೋಗಿಸಬಹುದು.

ಜೈವಿಕ ಇಂಧನ/ಜೈವಿಕ ಡೀಸೆಲ್

ಪೆಟ್ರೋಲಿಯಂ ಡೀಸೆಲ್‌ನ ಪರ್ಯಾಯವಾಗಿ ಜೈವಿಕ ಡೀಸೆಲ್‌ ಅನ್ನು ಉಪಯೋಗಿಸಬಹುದು, ಏಕೆಂದರೆ,

೧. ಇದನ್ನು ನೇರವಾಗಿ ಅಥವಾ ಡೀಸೆಲ್‌ ಜೊತೆ ವಿವಿಧ ಪ್ರಮಾಣದಲ್ಲಿ ಮಿಶ್ರಣಮಾಡಿ ಉಪಯೋಗಿಸಬಹುದು.

೨. ಪೆಟ್ರೋಲಿಯಂ ಡೀಸೆಲ್‌ನ ಗುಣಗಳನ್ನು ಇದು ಹೊಂದಿರುವುದರಿಂದ ಇಂಜಿನ್‌ ಬದಲಾವಣೆ ಅಗತ್ಯವಿಲ್ಲ.

೩. ಜೈವಿಕ ಇಂಧನದ ಕಾರ್ಯಕ್ರಮ ಹಲವಾರು ಉದ್ಯೋಗ ಅವಕಾಶಗಳನ್ನು ಒದಗಿಸುವುದರ ಜೊತೆಗೆ, ರೈತರು ಕೃಷಿಕಾರ್ಮಿಕರು ಬಿಡುವಿನ ವೇಳೆಯಲ್ಲಿ ಬೀಜ ಸಂಗ್ರಹಣೆ ಮತ್ತು ಮಾರಾಟದಿಂದ ಅಧಿಕ ಆರ್ಥಿಕ ಲಾಭ ಗಳಿಸಬಹುದು.

೪. ಹಲವು ಸಂಶೋಧನೆಗಳಿಂದ ಜೈವಿಕ ಇಂಧನ ಪೆಟ್ರೋಲಿಯಿಂ ನೈಸರ್ಗಿಕ ಇಂಧನಕ್ಕಿಂತ ಭಾರಿ ಕಡಿಮೆ ಪ್ರಮಾಣದಲ್ಲಿ ಹೈಡ್ರೋಕಾರ್ಬನ್‌, ಕಾರ್ಬನ್‌ ಮೊನಾಕ್ಸೈಡ್‌ನ್ನು ವಾತಾವರಣಕ್ಕೆ ಬಿಡುತ್ತದೆ ಎಂದು ಕಂಡುಬಂದಿದೆ.

೫. ಪೆಟ್ರೋಲಿಯಂ ಇಂಧನ ವಾತಾವರಣಕ್ಕೆ ಕಾರ್ಬನ್‌ ಡೈಆಕ್ಸೈಡ್‌ನ್ನು ಹೆಚ್ಚಿನ ಪ್ರಮಾಣದಲ್ಲಿ ಸೇರಿಸುತ್ತಾ ಹೋಗುತ್ತದೆ. ಆದರೆ, ಜೈವಿಕ ಇಂಧನ ಸಸ್ಯಗಳು ವಾತಾವರಣದಲ್ಲಿನ ಕಾರ್ಬನ್‌ ಡೈಆಕ್ಸೈಡ್‌ನ ಕೆಲವು ಭಾಗವನ್ನು ತಾವೇ ಪುನಃ ಬಳಸಿಕೊಳ್ಳುತ್ತವೆ. ಜೈವಿಕ ಇಂಧನದ ಮರಗಳನ್ನು ಬೆಳೆಸಿದರೆ ದೀರ್ಘಕಾಲ ಉತ್ಪತ್ತಿ ಬರುತ್ತಲೇ ಇರುತ್ತದೆ.

ಜೈವಿಕ ಇಂಧನದ ಮರಗಳನ್ನು ಬೆಳೆಯುವುದರಿಂದ ಮಣ್ಣಿನ ಸವಕಳಿಯನ್ನು ತಡೆಯಬಹುದು ಮತ್ತು ಮಣ್ಣಿನ ತೇವಾಂಶವನ್ನು ಕಾಪಾಡುವುದರೊಂದಿಗೆ ಆ ಪ್ರದೇಶವನ್ನು ನಿತ್ಯ ಹಸಿರಾಗಿಸಬಹುದು.

ಕೆಳಗಿನ ಕೋಷ್ಟಕದಲ್ಲಿ ನಮೂದಿಸಿರುವ ಮರಗಳನ್ನು ಸಾಮಾನ್ಯವಾಗಿ ಕರ್ನಾಟಕ ರಾಜ್ಯದ ಎಲ್ಲಾ ಪ್ರದೇಶಗಳಲ್ಲಿ ಬೆಳೆಯಬಹುದಾಗಿದೆ. ಜೊತೆಗೆ ಹೊಂಗೆ, ಬೇವು, ಹಿಪ್ಪೆ ಮರಗಳನ್ನು ನೂರಾರು ವರ್ಷಗಳಿಂದ ರೈತರು ಜೊತೆ ಜೊತೆಯಲ್ಲಿ ತಮ್ಮ ಹೊಲ ಗದ್ದೆಗಳ ಬದುಗಳಲ್ಲಿ ಬೆಳೆಸಿಕೊಂಡು ಬಂದಿರುವುದರಿಂದ ಅವುಗಳ ನಿಕಟ ಪರಿಚಯ ಅವರಿಗಿದೆ.

ಸಾಮಾನ್ಯ ಹೆಸರು

ವೈಜ್ಞಾನಿಕ ಹೆಸರು

ತೈಲ ಇಳುವಳಿ (ಶೇ.)

ಬೀಜ ಸಂಗ್ರಹಿಸುವ ಸಮಯ

ಹೊಂಗೆ ಪೊಂಗಾಮಿಯ ಪಿನ್ನಾಟ ೨೭೩೫ ಜನವರಿ-ಮಾರ್ಚ್
ಜಟ್ರೋಫಾ ಜಟ್ರೋಫಆ ಕುರ್ಕಾಸ್ ೩೮-೪೦ ಫೆಬ್ರವರಿ-ಅಕ್ಟೋಬರ್
ಬೇವು ಅಝಾಡಿರೆಕ್ಟ್ ಇಂಡಿಕಾ ೨೮-೩೬ ಜೂನ್‌ನವೆಂಬರ್
ಹಿಪ್ಪೆ ಮಧುಕ ಇಂಡಿಕಾ ೩–೩೫ ಜೂನ್‌ಆಗಸ್ಟ್‌
ಸಿಮರೂಬ ಸಿಮರೂಬ ಗ್ಲಾಕ ೬೦-೬೫ ಫೆಬ್ರವರಿ-ಏಪ್ರಿಲ್‌

ನಿರಂತರ ಆದಾಯ ಪಡೆಯುವ ದೃಷ್ಟಿಯಲ್ಲಿ ವಿವಿಧ ಜೈವಿಕ ಇಂಧನದ ಮರಗಳನ್ನು ಮಿಶ್ರ ಬೆಳೆಯಾಗಿ ಬೆಳೆಸುವುದು ಸೂಕ್ತ.

ಕೆಲವು ಮರಗಳು ೩ನೇ ವರ್ಷದಿಂದ ಆದಾಯ ಕೊಡಲು ಪ್ರಾರಂಭಿಸಿದರೆ ಇನ್ನು ಕೆಲವು ಮರಗಳು ೭-೧೦ನೇ ವರ್ಷದಿಂದ ಫಲ ಬಿಡಲು ಪ್ರಾರಂಭಿಸಿ ನೂರಾರು ವರ್ಷ ನಿರಂತರ ಆದಾಯ ಕೊಡುತ್ತವೆ.

ಕೃಷಿ ವಿಶ್ವವಿದ್ಯಾನಿಲಯ, ಬೆಂಗಳೂರು ಮತ್ತು ಕರ್ನಾಟಕ ರಾಜ್ಯ ಕೃಷಿ ಇಲಾಖೆಯು ರಾಜ್ಯಾದ್ಯಂತ ಆಯ್ದ ಸ್ಥಳಗಳಲ್ಲಿ ಸಸಿಗಳ ಉತ್ಪಾನದೆ ಹಾಗೂ ಅವುಗಳನ್ನು ರೈತರ ಬಂಜರು ಭೂಮಿಯಲ್ಲಿ ನೆಡುವ ಕಾರ್ಯಕ್ರಮವನ್ನು ಆಯೋಜಿಸಿದೆ.

ಕರ್ನಾಟಕದ ಜೈವಿಕ ಇಂಧನ ಮರಗಳ ಅಭಿವೃದ್ಧಿಯ ಸಲುವಾಗಿ ಹಾಕಿಕೊಂಡಿರುವ ಕ್ರಿಯಾ ಯೋಜನೆಯಲ್ಲಿ ರೈತರು ಬಂಜರು ಭೂಮಿಯನ್ನು ಬಳಸಿಕೊಂಡು, ಜೈವಿಕ ಇಂಧನ ನೀಡುವ ಹೊಂಗೆ , ಬೇವು, ಹಿಪ್ಪೆ, ಜಟ್ರೋಫ ಮತ್ತು ಸಿಮರೂಬ ಮುಂತಾದ ಮರಗಳನ್ನು ಬೆಳೆಸಿ, ಹೆಚ್ಚಿನ ಆದಾಯವನ್ನು ಗಳಿಸಬಹುದಾಗಿದೆ.

ಯೋಜನೆಯ ಉದ್ದೇಶಗಳು

೧. ಹೊಂಗೆ, ಬೇವು, ಹಿಪ್ಪೆ, ಜಟ್ರೋಫ ಮತ್ತು ಸಿಮರೂಬ ಮರಗಳ ಉತ್ಕೃಷ್ಟ ಮಾದರಿಗಳನ್ನು ಗುರುತಿಸುವುದು.

೨. ಬೀಜ ಮತ್ತು ಕಸಿ ವಿಧಾನಗಳಿಂದ ಉತ್ಕೃಷ್ಟ ಮಾದರಿ ಸಸ್ಯಗಳನ್ನು ದೊಡ್ಡ ಪ್ರಮಾಣದಲ್ಲಿ ಅಭಿವೃದ್ಧಿ ಪಡಿಸುವುದು.

೩. ರೈತರಿಗೆ ಜೈವಿಕ ಇಂಧನದ ಬಳಕೆಯ ಬಗ್ಗೆ ತರಬೇತಿ ನೀಡುವುದು.

೪. ಸರ್ಕಾರಿ ಮತ್ತು ಖಾಸಗಿ ವಲಯಗಳ ವಿವಿಧ ಸಂಸ್ಥೆಗಳಿಗೆ ಬಂಜರು ಭೂಮಿಗಳಲ್ಲಿ ಜೈವಿಕ ಇಂಧನ ಮರಗಳನ್ನು ನೆಡಲು ಪ್ರೋತ್ಸಾಹ ನೀಡುವುದು.

೫. ಜೈವಿಕ ಇಂಧನ ಮರಗಳ ಮಾದರಿ ಕ್ಷೇತ್ರಗಳನ್ನು ಸ್ಥಾಪಿಸುವುದು.

೬. ಬೀಜಗಳ ಸಂಗ್ರಹಣೆ ಹಾಗೂ ಎಣ್ಣೆ ತೆಗೆಯುವ ವ್ಯವಸ್ಥೆ

೭. ಸಹಕಾರಿ ಮಾರುಕಟ್ಟೆ ವ್ಯವಸ್ಥೆ ಇತ್ಯಾದಿ.

ಮಾರುಕಟ್ಟೆ

ಜೈವಿಕ ಇಂಧನಗಳ ಮರದ ಬೀಜಗಳಿಗೆ ಸದ್ಯದಲ್ಲಿ ನಿಗದಿತ ಬೆಲೆ ಇಲ್ಲ. ಮಾರುಕಟ್ಟೆಯಲ್ಲಿ ಬೀಜಗಳ ಬೆಲೆಯನ್ನು ಪೂರೈಕೆ ಹಾಗೂ ಬೇಡಿಕೆಯ ಆಧಾರದ ಮೇಲೆ ನಿಗದಿ ಪಡಿಸಲಾಗುವುದು.  ಆದರೆ, ಮುಂದಿನ ದಿನಗಳಲ್ಲಿ ಎಣ್ಣೆ ಬೀಜಗಳಿಗೆ, ಜೈವಿಕ ಇಂಧನ ಮತ್ತು ಜೈವಿಕ ಇಂಧನ ಉಪ ಉತ್ಪನ್ನಗಳಿಗೆ ನಿಶ್ಚಿತವಾದ ಮಾರುಕಟ್ಟೆ ಬರುವುದರಲ್ಲಿ ಯಾವ ಸಂಶಯವೂ ಇಲ್ಲ.

ಆದುದರಿಂದ ಈ ನಿಟ್ಟಿನಲ್ಲಿ ಸಂಘಟಿತವಾದ ಬೀಜಸಂಗ್ರಹಣ ಜಾಲ ಹಳ್ಳಿಗಳಲ್ಲಿ ಪ್ರಾರಂಭವಾಗಬೇಕಾಗಿದೆ. ಈ ಸಂಗ್ರಹಣಾ ಜಾಲವು ಈಗ ಪ್ರಚಲಿತದಲ್ಲಿರುವ ಹಾಲು ಒಕ್ಕೂಟದ ಮಾದರಿಯಲ್ಲಿ ಕೆಲಸ ಮಾಡಬಹುದು. ಹೀಗೆ ಸಂಗ್ರಹಿಸಿದ ಜೈವಿಕ ಇಂಧನದ ಬೀಜಗಳನ್ನು ಹೋಬಳಿ ಮಟ್ಟದಲ್ಲಿ ಅಥವಾ ತಾಲ್ಲೂಕು ಮಟ್ಟದಲ್ಲಿ ಎಣ್ಣೆ ತೆಗೆಯುವ ಯಂತ್ರವನ್ನು ಸ್ಥಾಪಿಸಿ ಎಣ್ಣೆಯನ್ನು ತೆಗೆಯುವ ಮತ್ತು ಹಿಂಡಿಯನ್ನು ಪುನಃ ಸಹಕರ ಸದಸ್ಯರುಗಳಿಗೆ ಮೊದಲು ಕೊಡುವ ವ್ಯವಸ್ಥೆ ಮಾಡಬಹುದು. ಈ ಎಣ್ಣೆಯನ್ನು ರೈತರು ಡೀಸಲ್‌ ಜೊತೆ ಶೇ. ೧೦ ರಿಂದ ೨೦ ರವರೆಗೆ ಮಿಶ್ರಣಮಾಡಿ ಟ್ರಾಕ್ಟರ್, ಟಿಲ್ಲರ್ ಮತ್ತು ಪಂಪ್‌ಸೆಟ್‌ಗಳಿಗೆ ಬಳಸಬಹುದು. ನಂತರ ಉಳಿದ ಹೆಚ್ಚಿನ ಎಣ್ಣೆಯನ್ನು ಜೈವಿಕ ಡೀಸಲ್‌ ಉತ್ಪಾದಿಸಲು ಕಾರ್ಖಾನೆಗಳಿಗೆ ಕಳುಹಿಸಬಹುದು. ಸಹಕಾರ ಸಂಘದ ಮಾದರಿಯಲ್ಲಿ ಜೈವಿಕ ಇಂಧನ ಮರಗಳ ಬೀಜಗಳನ್ನು ಸಂಗ್ರಹಿಸುವುದರಿಂದ ಮಧ್ಯವರ್ತಿಗಳನ್ನು ದೂರಮಾಡಬಹುದು. ಇದರಿಂದ ನಿಗದಿತ ಬೆಲೆ ಮತ್ತು ಹೆಚ್ಚಿನ ಪ್ರಮಾಣದಲ್ಲಿ ಬೀಜಗಳನ್ನು ಶೇಖರಣೆ ಮಾಡಲು ಸಹಾಯಕವಾಗುತ್ತದೆ. ಈ ರೀತಿಯಲ್ಲಿ ಸಂಗ್ರಹಿಸಿದ ಜೈವಿಕ ಇಂಧನದ ಬೀಜಗಳನ್ನು ಸಂಸ್ಕರಿಸಲು ಈ ಕೆಳಗಿನಂತೆ ಯೋಜನೆ ಹಾಕಬಹುದು.

೧ . ಸಂಗ್ರಹಿಸಿದ ಬೀಜಗಳನ್ನು ಕಾರ್ಖಾನೆಗೆ ಮಾರುವುದು.

೨. ತಾವೇ ಒಂದು ಸಣ್ಣ ಪ್ರಮಾಣದಲ್ಲಿ ಎಣ್ಣೆ ತೆಗೆಯುವ ಘಟಕ ಸ್ಥಾಪಿಸುವುದು.

೩. ತೆಗೆದ ಎಣ್ಣೆಯನ್ನು ಮತ್ತು ಹಿಂಡಿಯನ್ನು ಆ ಹಳ್ಳಿಯ ಸಂಘ ಸದಸ್ಯರು ಉಪಯೋಗಿಸಬಹುದು.

೪ . ಹೆಚ್ಚಿಗೆ ಉಳಿದ ಎಣ್ಣೆಯನ್ನು ಶುದ್ಧೀಕರಿಸಿ ಜೈವಿಕ ಡೀಸಲ್‌ ಮಾಡಲು ವ್ಯವಸ್ಥಿತ ಕಾರ್ಖಾನೆಗೆ ಕೊಡುವುದು.


*     ಈ ಅಧ್ಯಾಯವನ್ನು ಜೈವಿಕ ಇಂಧನ ಉದ್ಯಾನ, ಮಡೆನೂರು, ಹಾಸನ, ಕೃಷಿ ವಿಶ್ವವಿದ್ಯಾನಿಲಯ, ಬೆಂಗಳೂರು ಇವರ ಪ್ರಕಟಣೆಯಾದ ಜೈವಿಕ ಇಂಧನಕಿರುಹೊತ್ತಿಗೆಯಿಂದ ಪಡೆಯಲಾಗಿದೆ – ಸಂಪಾದಕರು