ಒಬ್ಬಾಳೆ ತಾಯೀಗೂ ರಾಮ ರಾಮಾ
ಏಳು ಮಂದಿ ಗಂಡ್‌ಗಾಳೂ ರಾಮಾ ರಾಮಾ**
ಹೊತ್ತಾರೆ ಮುಂದೆ ಎದ್ದಾರೀಗ
ಅಣ್ಣಾ ತಮ್ಮಾ ಇಬ್ಬಾರೀಗ
ಹೋರಿಗ್ ಅಕ್ಕಚ್ಚ್ ಬಾಯೀರ್ ಹಾಕಿದಾರೀಗ
ಹೋರಿ ಹೆರ್‌ಗೇ ಬಿಟ್ಟಾರೀಗ
ಏಳು ಮಂದೀ ಲಣ್ಣಾ ತಮ್ಮಾ
ಮಲ್ ಗದ್ದೀಗ್ ಹೂಡೀದಾರೂ
ಮನೀ ಹತ್ರ ಮಲ್ ಗದ್ದೆ
ಹೂಡಾನಾರೂ ಕಟ್ಟೀರೀಗ

ಅಣ್ಣಾ ತಮ್ಮಾ ಏಳು ಜನಾ
ಮಳೀನಾರೂ ಹಿಡಿದಾರೀಗ
ಒಂದು ಸುತ್ತಾ ಹೊಡಿದಾರೀಗ
ಸುಡೂ ಧೂಳೇ ಎದ್ದೀತೀಗ
ಮತ್ತೊಂದೇ ಸುತ್ತಾ ಹೊಡಿದಾರೀಗ
ಕೆಮ್ಮಣ್ಣೇ ಎದ್ದಾವೀಗ
ಮತ್ತೊಂದೇ ಸುತ್ತಾ ಹೊಡಿದಾರೀಗ
ಕಡ್ ಮಣ್ಣೆ ಎದ್ದಾವೀಗ
ಇನ್ನೊಂದೇ ಸುತ್ತಾ ಬಂದಾವೀಗ
ನೇಲಾನೆ ಮುರಿದಾವೀಗ
ಮತ್ತೊಂದೇ ಸುತ್ತಾ ಬಂದಾವೀಗ
ನೊಗನಾರೂ ಮುರಿದಾವೀಗ
ಇನ್ನೊಂದು ಸುತ್ತಾ ಬಂದಾವೀಗ
ಜತ್ಕ ಬಳ್ಳೀ ತಿಂದಾವೀಗ
ಹೂಡನಾರೂ ಬಿಟ್ಟೇರೀಗ

ಅಣ್ಣಾ ತಮ್ಮಾ ಏಳೂ ಮಂದೀ
ಹೋರೀ ಹಟ್ಟೀಗ್ ಎಬ್ಬೀರೀಗ
ಒಳ್‌ಗೊಮ್ಮೇ ಬಂದಾರೀಗ
ಅಣ್ಣಾ ತಮ್ಮಾ ಏಳು ಮಂದೀ
ತಾಯೀನ ಕರ್‌ದಾರೀಗ
“”ಮನೀ ಹತ್ರ ಮಲೂಗೆದ್ದೆ
ದೇವೂರ ಹೊಸ್‌ಗದ್ದೆ
ಹೂಡಾನಾರೂ ಕಟ್ಟೀತ್ ತಾಯೀ
ಒಂದ್ ಸುತ್ತು ಎಬ್ಬಿತ್ ತಾಯೀ
ನೇಲಾನಾರೂ ಮುರ್‌ದೋ ತಾಯೀ
ಮತ್ತೊಂದ್ ಸುತ್ತೂ ಎಬ್ಬೀತ್ ತಾಯೀ
ನೊಗಾನಾರೂ ಮುರ್‌ದೋ ತಾಯೀ
ಇನ್ನೊಂದು ಸುತ್ತೂ ಎಬ್ಬೀತು ತಾಯೀ
ಜತ್ಕಾ ಬಳ್ಳೀ ತಿಂದವು ತಾಯೀ
ಏಳು ಮಂದೀ ಅಣ್ಣಾ ತಮ್ಮ
ಹುಟ್ಟೀಗೊಮ್ಮೆ ಬಂದೀತು ತಾಯೀ
ಬಲ್ಲಾ ಜೋಯ್ಸ್ರಿ ಮನೇಗ್ ಹೋಯಿ
ಲೋಟಾನಿಮಿತ್ಯಾ ಕೇಂಡ್ ಬಾರೋ”
ತಾಯೀ ಎಂಬ್ ಅರಳೇದೇವಿ
ಅಷ್ಟನಾರೂ ಕೇಂಡಾಳೀಗ
ಒಕ್ಲ್ ಮಕ್ಳನೇ ಕರ್‌ದಾಳೀಗ
“”ಕುದ್ರಿಗೆ ಅಲ್ಲಣೇ ಬಿಗಿಯೋ ಗಂಡೇ”
ಕುದ್ರಿಗೆ ಅಲ್ಲಣೀ ಬಿಗಿದಾ ಗಂಡ್
ತಾಯೀ ಎಂಬ ಅರಳೇದೇವಿ
ತಾಯೀ ಎಂಬ ಅರಳೇದೇವಿ
ಉಪ್ಪರ‍್ಗೇ ಮೇಲೇ ನಡಿದಾಳೀಗ
ಹಾಡಾದೆಣ್ಣೆ ತೆಗ್ದಾಳೀಗ
ಅಂಗೈಗೇ ಹಾಕೀದಾಳೂ
ನೆತ್ತೀ ತುಂಬಾ ಗೆಡ್ಸೀದಾಳೂ
ಹಣ್‌ಗ್ಯಾರೂ ತೆಗ್‌ದಾಳೂ
ತಲೇನಾರೂ ಬಾಚೀದಾಳೂ

ತಲೇ ಸೂಡ್ಸೇ ಹಾಕೀದಾಳೂ
ಕಣ್ಣೀಗ್ ಕಪ್ಪೊಲಿಟ್ಟಾಳೀಗ
ಹಣೇ ಕೆಂಪೀ ಇಟ್ಟಾಳೀಗ
ಪೆಟ್ಗೇ ಬಾಗಿಲಾ ತೆಗೀದಾಳ್
ಬೇಕೆಂಬ್ ಚಿನ್ನಾ ತೆಗ್ದಿದಾಳು
ಬೇಕೆಂಬ್ ಸೀರಿ ತೆಗ್ದಿದಾಳು
ಬೇಕೆಂಬ್ ಸೀರೀ ಉಟಾಳೀಗ
ಉಪ್ಪರ‍್ಗೆ ಕೆಳ್ಗೇ ಬಂದಾಳೀಗ
ತಾಯೀ ಎಂಬಾ ಅರಳೇದೇವಿ
ಚಿನ್ನಾದ ಚೌಂತೀ ಹಣ್ಣ
ಶಣ್ಣಕ್ಕೆ ತೆಗೀದಾಳು
ಬೆಳ್ಳೀಯ ಹರಿವಾಣಕೆ
ಇದಾನೆರಡ ಇಟ್ಟಾಳೀಗ
ಇದಾನೆರಡ ಇಟ್ಟಾಳೀಗ
ಇದಾನೆರಡನಾರೂ ಹಿಡೀದಾಳೂ
ಕುದ್ರೀ ಬುಡಕೆ ನಡಿದಾಳೀಗ
ಲೋಟಾ ನಿಮಿತ್ಯಾಕ್ಹೊರಟಾಳೀಗ
ಕುದೂರಿನ್ನಾ ಏರಿದಾಳೀಗ
ಜೋಯ್ಸ್ರ್ ಮನೀಗ್ ನಡಿದಾಳೀಗ
ಜೋಯ್ಸ್ರ್ ಮನೀಗ್ ಹೋದಾಳೀಗ
ಕುದ್ರೇ ಹೋಯೀಲೀಗಳೂ
ಜೋಯ್ಸ್ರ ಮನೇ ಅಂಗ್ಳದಲ್ಲೀ
ಅಲ್ಲಾರು ನಿಂತೀತೀಗ
ಅರಳೇದೇವಿ ಅಂಬೌಳೀಗ
ಕುದ್ರೇ ತಗ್ಗೇ ಇಳಿದಾಳೀಗ
ಜೋಯ್ಸ್ರ ಮನೇ ಒಳ್ಗೆಹೋದ್ಲ್
ಅರಳೇದೇವಿ ಅಂಬೌಳೀಗ
ಜೋಯ್ಸನಾರೂ ಕರ್‌ದಾಳೀಗ
ಜೋಯ್ಸ ಮಕ್ಕಳೆಂಬೌರೀಗ
“”ಸಾನಾಕಾರೂ ಹೋಯೀರೀಗ”
ಚಾವ್ಡೀ ಕುರ್ಸೀಲ್ ಕೂತಾಳೀಗ
ಜೋಯ್ಸ್ರ್ ಸಾನಾ ಮಾಡೀ ಬಂದಾರೀಗ
ಸಾನಾ ಮಾಡೀ ಬಂದಾ ಜೋಯ್ಸ್ರ್
“”ಒಳ್ಗನ್ ದೇವ್ರ ಪೂಜೇ ಮಾಡೀ
ಪೂಜೇ ಮಾಡೀ ಬತ್ತೇ ದೇವಿ
ಹೆರ‍್ಗೇ ಆರೂ ಕೂತ್ಕೋದೇವಿ”
ಒಳ್ಗಿನ್ ಪೂಜೇ ಮಾಡಿರು ಜೋಯ್ಸ್ರ್
ಚಾವ್ಡೀಗಾರೂ ಬಂದ್ರ್ ಜೋಯ್ಸ್ರ್
“”ಏನೂ ಬಂದೇ ದೇವೀ ನೀನೂ
ಎಂದು ಬಾರ‍್ದಿದ್ ಅರಳೇದೇವಿ
ಇಂದೇನೇ ಬಂದೇ ದೇವಿ
ಬಂದಾ ಕಾರ‍್ಣ ಬೇಗ ಹೇಳೋ”
“”ಒಂದ್ ಲೋಟಾ ನಿಮಿತ್ಯಾಲಾಯ್ಕ್‌ಸ್ವಾಮೀ”
ಕವ್‌ಡೀ ಹರ್‌ಲ್ ತೆಗ್ದ್ರ್ ಜೋಯ್ಸ್ರ್
ಜೋಯ್ಸ್ರ್ ನಿಮಿತ್ಯಕೆ ಕೂತಾರೀಗ
“”ಮನೀ ಹತ್ರ ಮಲೂಗದ್ದೆ
ಹೊಸಕೆರೇ ಹೊಸಬಾಮೀ
ನಿಗ್‌ಳಾರೊ ಒಂದ್ಹೊಕ್ಕಿ
ನರ ಹಾವ್ತೀ ಬೇಡ್‌ತ್ತ”
“”ಕುರಿಯಾರಾ ಕೊಡ್ತೇ ಸ್ವಾಮೀ
ಕೋಣನಾರೂ ಕೊಡ್ತೇ ಸ್ವಾಮಿ”
“”ಕುರಿಯಾರೂ ಬ್ಯಾಡಾ ಅಂತೆ
ಕೋಣನಾರೂ ಬ್ಯಾಡಾ ಅಂತೆ”
“”ಕೋಳೀಯಾರೂ ಕೊಡ್ತೇ ಸ್ವಾಮೀ
ಕೋಳೀಹಾರಾ ಬ್ಯಾಡಂತೇ
ನರ ಹಾವ್ತೀ ಬೇಡ್‌ತ್ತದ್”
“”ನರ ಹಾವ್ತೀ ಕೊಡುತಾ ಸ್ವಾಮಿ”
“”ಹೆರೀಮಗಾನ್ದೆಂಡತಿಯೌವ್ಳ್
ಮನೀ ಕೆಲ್ಸಕೆ ಬೇಕೋ ಸ್ವಾಮೀ
ಅಡಿಗೇಯಾ ಮಾಡ್ಯವ್ಳು
ನಮಗೆಲ್ಲಾ ಬಡೀಸ್ಯವ್ಳು
ಮತ್ತೊಬ್ಬ ಮಗ್ನಾ ಹೆಂಡಾತಿ
ಗಂಡೇ ಕರ‍್ಗಳರಕೋಲೀಗ್ ಬೇಕು

ಮತ್ತೊಬ್ಬ ಮಗ್ನಾ ಹೆಂಡತಿ
ಹಟ್ಟೀ ಕೆಲ್ಸಕೇ ಬೇಕೌಳ್
ಇನ್ನೊಬ್ಬ ಮಗ್ನಾ ಹೆಂಡತಿ
ಮುಸ್ರಿ ತಿಕ್ಕುಕೆ ಬೇಕೌಳ್
ಮತ್ತೊಬ್ಬ ಮಗ್ನಾ ಹೆಂಡಾತೀ
ಕಸಾಲಾರೂ ತೆಗೊಕೆಬೇಕು
ಯಾರಾನೆ ಕೊಡೂದು ಸ್ವಾಮಿ”
ಇಷ್ಟು ಮಾತು ಆಡಿದಾಳು
ಆರು ಮಂದಿರ್ ಹೆಸ್ರೂ ಹೇಳಿ
ಚಿನ್ನದ ಬೌಂತೀ ಹೆಣ್ಣಿ
ಶಣ್ಣಕ್ಕೀ ಅಕ್ಕೀಲಬ್ದ್
ಆ ಜೋಯ್ಸ್ರ್ ಅಂಬೌರೀಗೂ
ದಕ್‌ಸೀಣೆ ಕೊಟ್ಟಾಳು
“”ನಾ ಮನೀಗ್ ಹೋತೆ ಜೋಯ್ಸ್ರೆ”
“”ಈ ನರಾ ಹಾವ್ತೀ ಕೋಡೂ ನೀನು
ನೀನೂ ಸುಕಾ ಆಗೂದಿಲ್ಲೆ”
ಅಷ್ಟು ಮಾತೂ ಕೇಂಡಾಳ್ ದೇವಿ
ಚಾವ್ಡೀ ತಗ್ಗೆ ಇಳಿದಾಳ್ ದೇವಿ
ಕುದ್ರೀ ಬುಡ್ಕೆ ಬಂದಾಳ್ ದೇವಿ
ಕುದ್ರೀ ಬೆನ್ಮೇಲ್ ಏರಿದಾಳ್ ದೇವಿ
ಮನೀಗೊಮ್ಮೆ ಬಂದಾಳ್ ದೇವಿ
ಅರ್‌ಳೇದೇವಿ ಎಂಬೌಳೀಗ
ಮನೀಕಡೇಗೆ ಬಂದಾಳೀಗ
ಮನೀಗೊಮ್ಮೆ ಬಂದಳ್ ದೇವಿ
ಕುದ್ರೆ ತಗ್ಗೆ ಇಳಿದಾಳ್ ದೇವಿ
ಚಾವೂಡೀಗ್ ಬಂದೀಗ ದೇವಿ
ಏಳೂ ಮಂದೀ ಅಣ್ಣಾ ತಮ್ಮಾ
“”ಜೋಯ್ಸ್ರ ಮನೀಂದ ಬಂದ್ರ್ಯಾತಾಯಿ
ಜೋಯ್ಸಾರೂ ಲಿದ್ದೀದಾರಾ

ಲೋಟಾ ನಿಮಿತ್ಯಾ ಕೇಂಡೀರಾ”
“”ಲೋಟಾ ನಿಮಿತ್ಯಾ ಕೇಂಡೆ ಮಗಾ
ಹೊಸ ಕೆರೆ ಹೊಸ ಬಾಮಿ
ನಿಗುಳಾರೊ ಬಂದ್ಹೊಕ್ಕೀ
ನರ ಹಾವ್ತಿ ಬೇಡ್‌ತಂಬ್
ಕುರಿಯಾರಾ ಲಾಗಾ ಆಂಬ್ರ್
ಕೋಣಾನಾರೂ ಆಗಾ ಅಂಬ್ರ್
ಯಾರಾನೇ ಕೊಡೂದು ಮಗಾ
ಏಳೂ ಮಂದೀ ಅಣ್ಣಾ ತಮ್ಮಾ
ಏಳೂ ಜನಾ ಹೆಂಡೀರೀಗ
ಯಾರಾನೇ ಕೊಡೊದಂದೇ”
“”ಕಿರೀಮಗಾನ್ಹೆಂಡತೀನ
ಅವ್ಳನಾರೂ ಕೊಡ್ವಾ ತಾಯಿ”
ಇಷ್ಟು ಮಾತೂ ಆಡೀರೀಗ
ಹೆರಿ ಮಗ್ನಾ ಹೆಂಡತೀ
ಬಿಳ್ಗಿಂದ್ ಹೊರ್‌ಗೇ ಬರೂವಂಗೂ
ಇವ್ರ ಮಾತೂ ಕೇಳೂತಿತ್ತು
ಅಡೂಗೀಯಾ ಲನೂವಾಯ್ತು
ಊಟಾಕಾರೂ ಕರ್‌ದಾಳೀಗ
ಉಂಡು ಕೈ ಬಾಯ್ ತೊಳಿದಾರೀಗ
“”ಅಣ್ಣಾ ತಮ್ಮಾರ‍್ಹೆಂಡಾರೀಗ
ಏಳು ಜನಾ ನೀವೀಗ
ಗುಡ್ಡೀ ಸೊಪ್ಪೀಗೆ ಹೋಯ್ತಿಮಗಾ
ಹಟ್ಟೀಗ್ ಸೊಪ್ಪು ತನ್ನೀ ಈಗ”
ಏಳು ಮಂದೀ ಕೂಡಿಕಂಡ್
ಗುಡ್ಡೀ ಸೊಪ್ಪೀಗ್ ನಡಿದಾರೀಗ
ಏಳು ಹೊರೇ ಮಾಡೀರೀಗ
ಏಳು ಹೊರೇ ಕಟ್ಟೀರೀಗ
ಹೊರೆ ಕಟ್ಟೀ ನಿತ್ತ್‌ರೀಗ
“”ನನ್ನ ಮಂಡೀದ್ದೊಂದ್ ಹೇನೇತೆಗೆ”
“”ಏಳು ಜನಾ ಬಿಟ್ಟೇ ಇತ್
ನಾಳೀಗಾರೇ ಜನಾಲಿದ್ರೆಸೈ”
“”ಅದು ಎಂತಾ ಮತೂಲಕ್ಕಾ”
“”ನಿನ್ನ ಬಾವಾಮಾಯಿ ಈಗ
ಮಾತ್‌ಲಾಡ್‌ತ್ತ್ ಕೇಂಡೆ ನಾನೂ
ಹೊಸ ಕೆರೇ ಹೊಸ ಬಾಮಿ
ನಿಗಳಾರೂ ಹೊಕ್ಕೀತಂಬ್ರ್
ನಿಗ್ಳಿಗೆ ನಿನ್ನಾ ಕೊಡೂದಂಬ್ರ್
ಮಾತನಾರೂ ಆಡೂತಿದ್ರ್”
ಅಷ್ಟು ಮಾತೂ ಕೇಂಡಾರೀಗ
ಮಂಡೀ ಹೇನೇ ಬರ್‌ದಾರೀಗ
ಮಂಡೇ ಸೂಡ್ಯೇ ಹಾಕೀರೀಗ
ಏಳು ಜನಾ ಸೊಪ್ಪ ಹೊತ್ತು
ಹಟ್ಟೀಗ್ ತಂದ್ ಹಾಕೀರೀಗ
ಅಕ್ಕ ತಂಗೀ ಏಳು ಜನಾ
ನನ್ನ ಸೊಪ್ಪು ತೊಳೀನ್ಯಾಕ್ಕಾ
ಒಳ್ಗೆನಾರೂ ನಡೀತ್ ಹೆಣ್ಣ
“”ಅಡೀಗೀಯಾ ಮನೆಯಲ್ಲಿ
ಅತ್ಯಮ್ಮಾ ನೀವು ಕೇಳಿ
ನನ್ನಣ್ಣನೊಬ್ಬ ಲಿಂಬಯ್ಯಾ
ಚೆಂಡೀನಾಟಕೆ ಹೋಯಿದ ಅಂಬ್ರ್
ಚೆಂಡಡೀ ಬಿದ್ನಂಬ್ರ್
ಅಂಗಾಲೇ ಒಡದೀತ್
ಮುಂಗಾಲೇ ಜರ್‌ದಿತ್ತ

ಕಂಡೋಡಿ ನಾಬತ್ತೆ”
“”ನನ ಕೈಲಿ ಏನ್‌ಕೇಂತೆ
ನಿನ್ನ ಬಾವ್ನ ಕೈಲೇ ಕೇಣ್ ಮಗೂ”.
“”ಚಾವೂಡೀಗ್ ನಡೀದಾಳು
ಕುರ್ಸೀ ಮ್ಯಾಲೆ ಕೂತವ್ರೇ
ನನ್ನಣ್ಣನೊಬ್ಬ ನಿಂಬಯ್ಯ
ಚಂಡೀನಾಟಕೆ ಹೋಯಿದ್‌ಅಂಬ್ರ್
ಚೆಂಡಾಡಿ ಬದ್ನಂಬ್ರ್
ಅಂಗಾಲೇ ಒಡ್‌ದೀತ್
ಮುಂಗೈಯ ಜರ್‌ದೀತ್
ಕಂಡೋಡಿ ನಾ ಬತ್ತೆ”
“”ನನ ಕೈಲಿ ಏನ್‌ಕೇಂತೆ
ನಿನ ಮಾವ್ನ ಕೈಲೇ ಕೇಣ್ ಮಗ”
ಅಲ್ಲಿಂದ ಹೊರಟಾಳೂ
ಉಪ್ಪರ‍್ಗೀಗ್ ನಡಿದಾಳು
ಉಪ್ಪರೀ ಮ್ಯಾಲಿರುವಾ
ಮಾವಯ್ಯ ನೀವ್ ಹೇಳಿ
ನನ್ನಣ್ಣೊಬ್ಬ ನಿಂಬಯ್ಯ
ಚೆಂಡೀನಾಟಕೆ ಹೋಯಿದ ಅಂಬ್ರ್
ಚೆಂಡಾಡೇ ಬದ್ನಂಬ್ರ್
ಅಂಗಾಲೇ ಬಿಡ್‌ದೀತ್
ಮುಂಗೈಯೇ ಮುರ್‌ದೀತ್
ಕಂಡೋಡೀ ನಾ ಬತ್ತೆ
ಕೇಂಡೋಡೀ ನಾ ಬತ್ತೆ”
“”ನನಕೈಲೇ ಏನೂ ಕೇಂತೇ
ನಿನ ಗಂಡ್ನ ಕೈಲೇ ಕೇಣ್”
“”ಹಟ್ಟೀ ಹಣೀಗ್ ನಡಿದಾಳು
ಹಟ್ಟೀ ಹಣೀಗ್ ಕೂತವ್ರೇ
ಜತ್ಕಾ ಬಳ್ಳಿ-ನೇಯ್‌ವವ್ರೇ
ನನ್ನಣ್ಣನೊಬ್ಬ ನಿಂಬಯ್ಯ
ಚೆಂಡೀನಾಟಕೆ ಹೋಯಿದ ಅಂಬ್ರ್
ಚೆಂಡಾಡೀ ಬಿದ್ನಂಬ್ರ್
ಅಂಗಾಲೇ ಒಡ್‌ದೀತ್
ಮುಂಗಾಲೇ ಮುರ್‌ದೀತ್
ಕಂಡೋಡಿ ನಾ ಬತ್ತೇ”
“”ಉಗ್‌ದಾ ಎಂಜಾಲೊಣಗೊದ್ರೊಳ್ಗೆ
ಹಚ್ಚೀದ್ ದೀಪಾ ನೆಂಗೊದ್ರೊಳ್ಗೆ
ನೀನಾರೂ ಬರಾಬೇಕು”
ಅಷ್ಟು ಮಾತೂ ಕೇಂಡಾಳ್ ಹೆಣ್ಣು
ಹಾರೀಬಿದ್ದೇ ಹೋದಾಳ್ ಹೆಣ್ಣು
ಹೆಬ್ಬಾಲ್ ಕಡೀಂದೆ ಹೋಗಾಲಿಲ್ಲೆ

ಕುರ‍್ಬಾಲ ಕಡೀಂದೆ ಹೋದಾಳು
ಲಿಂಬಯ್ಯಾ ಅಂಬೌನ್
ಅವ್ಳಣ್ಣ ನೆಂಬೌನ್
ತಂಗೀಯ ಬರೂ ಹಾದೀ
ದೂರಿಂದೇ ನೋಡೂತ್ತಿದ್ದ
ನನ್ನ ಬಡ ತಂಗೀ ಬರೂವಾಳೂ
ಏನು ಮೇಮೇ ತೂರತಾಳೂ
“”ಹೆಬ್ಬಾಲ ಕಡೀಂದ್ ಬಪ್ಪೌಳ್ ನೀನೂ
ಕುರ‍್ಬಾಲ ಕಡೀಂದ್ ಏನೂ ಬಂದೆ”
ಒಳ್‌ಗೊಮ್ಮೆ ನಡೆದಾಳೂ
ಅಲ್ಲಷ್ಟೇ ಮರ‍್ಕೀದಾಳೂ
ಎಮ್ಮೀ ಹಟ್ಟೀಗ್ ನಡೀದಾಳೂ
ಅಲ್ಲಷ್ಟೇ ಮರ‍್ಕೀದಾಳೂ
“”ತಕ್ಕಂಡ್ ಹೋದಾ ಎಮ್ಮೀ ಸಾಲಾದಿದ್ರೆ
ಇನ್ನೊಂದ್ ಎಮ್ಮೀ ತಕ್ಕಂಡ್ಹೋಗು”
“”ತಕ್ಕಂಡ್ ಹೋದ ಎಮ್ಮೀನಾ
ಹಿಂದಾಕೆ ಹೊಡ್ ತಾರೋ”
ಅಷ್ಟ ಮಾತೂ ನುಡೀದಾಳೂ
ಒಳ್‌ಗೊಮ್ಮೆ ಬಂದಾಳ್ ಹೆಣ್ಣು
“”ಕೆಳ್ ತೋಟಾರ‍್ಹೋಗಣ್ಣ
ಒಂದ್ ಕೊನೇ ಹೊಗುತಾರೋ”
ಅಣ್ಣಾನೇ ಅಂಬೌನ್
ಒಂದ್ ಕೊನೇ ಹೂಗೇ ತರ‍್ಸೀದಾ
ತೊಳ್‌ಸೀಯಾ ಬುಡಕೆ ಹೋದಾಳ್
ಒಂದ್ ಕೊನೇ ಹೂಗ್ ಏರ‍್ಸಿದಾಳ್
ತೊಳ್ಸೀಗ ದೀಪಾ ಹಚ್ಚೀದಾಳ್
“”ಒಡ್ದ್ ಹೂಗೂ ಬಾಡ್ಡ್ರ್‌ಗತೀಗ್
ಹಚ್ಚೀದ ದೀಪಾ ನೆಂಗೀರ್ ಗತೀಗ್
ನನ್ನ ಗಂಡನ ಮನೆಗೆ ಬಂದೇ ಹೋಗೋ”
ಅಷ್ಟು ಮಾತು ನುಡಿದಾಳೀಗ
ಗಂಡನ ಮನೆಗೇ ಹೊರ್‌ಟಾಳೀಗ
ಇವ್ಳಾರೂ ಬರುವ ದಾರಿ
ಮಾಯೀಯೂ ಮಾವನೂ
ಹಾದೀಯೇ ನೋಡುತಿದ್ರ್
ಅಷ್ಟೂ ಹೊತ್ತೀಗ್ ಬಂದೀತ್ ಹೆಣ್ಣು
“”ಬಿಸೂಲೀಗೆ ಬಂದೆ ಮಗಾ
ಮುಕಾ ಮ್ವಾರೀ ತೊಳ್ವಮಗಾ”
ಮಾಯೀಯೂ ಸೊಸೇಯೂ
ಕೆರೀಗಾರೂ ಇಳೀದಾರೂ
ಮುಕಾ ಮಾರೀ ತೊಳಿದಾರೂ
ಕೆರಿಗ್ ಹಿಡ್‌ದೇ ದೂಡೀದಾಳೂ
ಮಾಯೀಯೂ ಅಂಬೌಳ್
ನಿಗಳಾರೂ ಬಂದೀತೀಗ
ಇವ್ಳನ್ನ್ ಎತ್ತೀ ಹಿಡ್ಡೀತೀಗ
“”ನಿನ್ನ ಬಳಿ ಯಾವ್ದು ಮಗಾ”
“”ನನ್ನ ಬಳಿ ನಿಗ್ಳಾ ಬಳಿ”
ಎತ್ತಿಯಾರೂ ಹಿಡ್ಡೀತೀಗ
ಇಷ್ಟು ಮಾತೂ ಆಡ್ವಂಗೂ
ಆವ್ಳಣ್ಣಾ ಬಂದಾನೀಗ
“”ನಿನ ತಂಗೀನ್ ಕರ‍್ಕಂಡ್ ಹೋಗು”
ನಿನ್ನ ಬಳೀ ನನ್ನ ಬಳಿ
ಬಂದೇಯೇ ಆದ್ದ್ರಿಂದ
ಅವ್ಳ ನಾರೂ ತಿನ್ನೊದಿಲ್ಲೆ
ಅವ್ಳನ್ನೇ ಆದಾರೂ
ಮ್ಯಾಲೆತ್ಯೇ ಕೊಟ್ಟೀತ್ ನಿಗ್ಳ್
ತಂಗೀಯ ಕರ್‌ಕಂಡ್
ಅವ್ಳ ಮನೀಗ್ ನಡೀದಾನೂ*      ಪ್ರತಿಪಾದಾಂತದಲ್ಲೂ “ರಾಮ ರಾಮಾ’ ಎಂದು ಸೇರಿಸಿಕೊಳ್ಳಬೇಕು.

**      ನಿಗಳ್‌ಬಲಿ, ಕೆದ್ಲಾಯ ಕುಂಜಿಬೆಟ್ಟು ಸುಬ್ರಹ್ಮಣ್ಯ, ಹಾಡಿಗೆ ಹನ್ನೆರಡು ಕಬರು ಕನ್ನಡ ಅಧ್ಯಯನ ಸಂಸ್ಥೆ ಮೈಸೂರು ವಿಶ್ವವಿದ್ಯಾಲಯ, ಮೈಸೂರು. ೧೯೭೩, ಪು.ಸಂ. ೧೨೩-೧೩೩.