ಡಕ್ಕಲಿಗರನ್ನು ಕರ್ನಾಟಕದ ವಿಭಿನ್ನ ಪ್ರದೇಶಗಳಲ್ಲಿ ಬೇರೆ ಬೇರೆ ಹೆಸರುಗಳಿಂದ ಕರೆಯುವ ವಾಡಿಕೆಯಿದೆ. ಉದಾ: ದಕ್ಲರು, ಡಕ್ಕಲರು, ಡಕ್ಕಲಿ, ಡಕ್ಕಲಿಗ, ಡಕ್ಕಲಿಗರು, ಡೊಕ್ಕಲಿ, ಡೊಕ್ಕಲಿಗ, ಡೊಕ್ಕಲರು, ಡೊಕ್ಕಲಿಗರು, ಮಾದಿಗರ ಗುರು, ಉತ್ತಮ ಕುಲದವರು, ಮ್ಯಾಗಿನವರು, ಫೇಡ ಮಾದರ, ಊರ ಹೊರಗಿನವರು ಈ ಮುಂತಾದ ಹೆಸರುಗಳಿಂದ ಕರೆದರೆ, ಮಹಾರಾಷ್ಟ್ರದಲ್ಲಿ ಡಕ್ಕಲವಾರ, ಆಂಧ್ರದಲ್ಲಿ ಡೊಕ್ಕಲಾಳ್ಳು ಮತ್ತು ತಮಿಳುನಾಡಿನಲ್ಲಿ ಡಕ್ಲರಂ ಎಂದು ಕರೆಯುತ್ತಾರೆ. ಕ್ಷೇತ್ರಕಾರ್ಯದ ಅವಧಿಯಲ್ಲಿ ಸಾಮಾನ್ಯವಾಗಿ “ಡಕ್ಕಲಿಗರು” ಎಂಬ ಹೆಸರಿನಿಂದ ಕರೆಯುವುದು ಕಂಡು ಬರುತ್ತದೆ. ಈ ಅಂಶ ಗಮನದಲ್ಲಿಟ್ಟುಕೊಂಡು ಈ ಪುಸ್ತಿಕೆಯಲ್ಲಿ ಡಕ್ಕಲಿಗರು ಎಂಬ ಪದವನ್ನು ಬಳಸಲಾಗಿದೆ.

ಡಕ್ಕಲಿಗ ಅಥವಾ ಡೊಕ್ಕಲಿಗ ಎಂಬ ಪದದಲ್ಲಿ ‘ಇಗ’ ಎಂಬುದು ಪ್ರತ್ಯಯವಾಗಿದ್ದು ಡಕ್ಕ ಅಥವಾ ಢಕ್ಕೆ ಎಂಬುದು ವಾದ್ಯ ಸೂಚಕ ಪದ. ಈ ಶಬ್ದದ ಅರ್ಥ ಕುರಿತು ಶಬ್ದಕೋಶದಲ್ಲಿ ನೋಡಿದಾಗ ತೊಗಲ, ತಮಟೆ ಒಂದು ಬಗೆಯ ಚರ್ಮವಾದ್ಯ ಎಂದು ಅರ್ಥೈಸಲಾಗಿದೆ. ಮೊದಮೊದಲು ಈ ಜನಪದ ಗುಂಪು ಢಕ್ಕೆ ಅನ್ನುವಂಥ ಚರ್ಮವಾದ್ಯವನ್ನು ಮಾಡುವುದರಲ್ಲಾಗಲಿ ಅಥವಾ ನುಡಿಸುವುದರಲ್ಲಾಗಲಿ ನಿಪುಣತೆ ಪಡೆದುಕೊಂಡಿರಬೇಕು. ಏಕೆಂದರೆ ವರ್ಣಾಶ್ರಮ ಧರ್ಮ ಪದ್ಧತಿಯಲ್ಲಿ ಗಾಣ ಹೊಡೆಯುವವ ಗಾಣಿಗನಾದಂತೆ, ಹೂಮಾರುವವರು ಹೂಗಾರ ಆದಂತೆ, ಲವಣ ಮಾರುವವರು ಲವಣಿಯರಾದಂತೆ, ಬುಡಬುಡಕಿ ಬಾರಿಸಿ ಶಕುನ ಹೇಳುವವರು ಬುಡಬುಕಿಯರಾದಂತೆ, ಗೊಂದಲ ವೃತ್ತಿ ಮಾಡುವವರು ಗೊಂದಲಿಗರಾದಂತೆ, ಢಕ್ಕೆ ಬಾರಿಸುವವರು ಡಕ್ಲಲಿಗರಾಗಿರಬೇಕು? ಇದೇ ಪುಸ್ತಿಕೆಯಲ್ಲಿ ಬರುವ ಡಕ್ಕಲಿಗರ ಮೂಲವನ್ನು ಕುರಿತು ಹೇಳಿರುವ ಕಥೆಯು ಡಕ್ಕಲಿಗರ ಗುಂಪುಗಳಲ್ಲಿ ಪ್ರಚಲಿತವಿದ್ದರೂ ಇದರಿಂದ ಒಂದು ನಿಶ್ಚಿತ ನಿಲುವಿಗೆ ಬರಲು ಸಾಧ್ಯವಿಲ್ಲ. ‘ಡೊಕ್ಕಲಿಗ’ ಅಥವಾ ‘ಡಕ್ಕಲಿಗ’ ಎಂಬ ಹೆಸರು ಹೇಗೆ ಬಂದಿತೆಂಬುದನ್ನು ಖಚಿತವಾಗಿ ಹೇಳಲಾಗದು. ಆದರೆ ಗ್ರಾಮೀಣರಲ್ಲಿ ರೂಢಿಯಲ್ಲಿರುವ ಮಾತು ಹೀಗಿದೆ. ‘ಹೊಟ್ಟೆ’ ತುಂಬ ಅನ್ನ ಸಿಗದಿದ್ರೆ ಡೊಕ್ಕಿ ಎಲುವು ಮಡಿಚಿಕೊಂಡು ಮಲಗಿಕೋ ಎನ್ನುವ ಮಾತು ಇವತ್ತಿಗೂ ಪ್ರಚಲಿತವಿದೆ. ಡೊಕ್ಕಿ, ಡೊಕ್ಕಲ, ಡಕ್ಕಲಿ, ದಕ್ಕಲಿ, ಈ ಮುಂತಾದ ಹೆಸರುಗಳು ಈ ಗುಂಪಿನವರಿಗೆ ಇರುವುದನ್ನು ಕಾಣಬಹುದು. ಇಲ್ಲಿ ಹೇಳಲಾಗಿರುವ ‘ಡೊಕ್ಕಿ ಶಬ್ದವು ಎದೆಯ ಮೂಳೆ ಎಂಬ ಎಲುಬುಗಳ ಅರ್ಥವನ್ನು ಕೊಡುತತದೆ. ಇಂಥ ಡೊಕ್ಕೆಲುಬಿನ ಮೂಲದಿಂದ ಬಂದ ವ್ಯಕ್ತಿ ಡೊಕ್ಕಲಿಗನೇ? ಅಥವಾ ಢಕ್ಕೆ ಎನ್ನುವ ವಾದ್ಯ ಬಾರಿಸುತ್ತಿದ್ದ ವೃತ್ತಿ ತಂಡದವರು ಡಕ್ಕಲಿಗರಾದರೇ? ಈ ಪ್ರಶ್ನೆಗಳು ಪ್ರಶ್ನೆಗಳಾಗಿಯೇ ಉಳಿಲಯುತ್ತವೆ ಆದರೆ ಢಕ್ಕೆ ಬಾರಿಸುವ ಒಂದು ಜನಪದ ತಂಡವಿದ್ದು ೧೨ ನೆಯ ಶತಮಾನದ ಢಕ್ಕೆಯ ಮಾರಯ್ಯ ………….. ಇವರೆಲ್ಲ ಡೊಕ್ಕಲಿಗರಾಗಿದ್ದರೆ? ಆದರೆ ಇಂದು ಇಂಥ ಒಂದು ವಿಶೇಷ ವೃತ್ತಿಗಾಯಕ ತಂಡ ಇಂದಿಗೂ ದೊರೆಯುತ್ತಿಲ್ಲ. ಹಾಗಾದರೆ ಢಕ್ಕೆ ಬಾರಿಸುವ ವೃತ್ತಿ ಕಳೆದುಕೊಂಡು ಸುಮ್ಮನೆ ತಮ್ಮ ವಂಶದ ವೃತ್ತಿಯನ್ನು ಅನುಸರಿಸಿಕೊಂಡು ತಮ್ಮ ಹಕ್ಕಿನ ಮಾದಿಗರ ಮನೆಗಳಿಗೆ ಹೋಗಿ ಭಟ್ಟಂಗಿಯಂತೆ ಹೊಗಳುತ್ತ ತಮಗೆ ಸರಿಕಂಡಂತೆ ಈ ವೃತ್ತಿಯನ್ನು ಮುಂದುವರಿಸಿಕೊಂಡರೆ?”

[1][1] ಢಕ್ಕೆಯ ಮಾರಯ್ಯ ಎನ್ನುವ ಶರಣನೊಬ್ಬನ ವಚನಗಳು ಸಿಗುತ್ತವೆ. ‘ಕಾಲಾಂತರ ಭೀಮೇಶ್ವರಲಿಂಗ’ ಎನ್ನುವುದು ಈತನ ವಚನಗಳ ಅಂಕಿತ. ಈತನು ದುರಗಮುರಗಿಯವರ ಗುಂಪಿನಿಂದ ಬಂದ ವ್ಯಕ್ತಿ ಎಂದು ಹೇಳಲಾಗುತ್ತದೆ. (ಡಾ. ಹಕಾರಿ ೧೯೯೩:೨೬) ಇಲ್ಲಿ ಗಮನಿಸಬೇಕಾದ ಒಂದು ಅಂಶ ಇದೆ. ಅದೇನೆಂದರೆ ಮಾರಯ್ಯ ಎನ್ನುವ ಹೆಸರಿನ ಜೊತೆಗೆ ಸಮೀಕರಣಗೊಂಡಿರುವ ‘ಢಕ್ಕೆ’ ಅಂದರೆ ಬರೀ ಮಾರಯ್ಯ ಎಂದು ಹೇಳುವುದಿಲ್ಲ. ಈತನಿಗೆ ಢಕ್ಕೆಯ ಮಾರಯ್ಯ ಎಂದೇ ಹೇಳಲಾಗುತ್ತದೆ. ದುರಗಮುರಿಗೆ ಎನ್ನುವುದು ಒಂದು ವೃತ್ತಿಯಾಗಿದ್ದು ಈ ವೃತ್ತಿಯನ್ನು ಕೈಕೊಂಡ ದುರಗಮುರಗಿಯವರೇ ಒಂದು ವರ್ಗವಾಗಿ ರೂಪಗೊಂಡಿದ್ದರೆಂದು ಹೇಳಲು ಸಂದೇಹವಿಲ್ಲ. ಡಕ್ಕಲಿಗರೆಂದು ಕರೆಯಿಸಿಕೊಳ್ಳುವ ಜನರು ‘ದುರಗಮುರಗಿಯ ವೃತ್ತಿಯನ್ನು ಕೈಕೊಂಡು ಅವರಲ್ಲಿ ಮಾರಯ್ಯ ವ್ಯಕ್ತಿ ತುಂಬ ಪ್ರಬಲವಾಗಿರಬೇಕು. ಆತ ಢಕ್ಕೆ ಬಾರಿಸುವುದರಲ್ಲಿ ನಿಪುಣನಾಗಿದ್ದು ತನ್ನ ಈ ದುರಗಮುರಗಿಯ ವೃತ್ತಿಯನ್ನು ಮುಂದುವರಿಸಿಕೊಂಡು ಹೋದಾಗ ಅನೇಕರು ಆತನನ್ನು ಅನುಸರಿಸಬೇಕು ಮತ್ತು ವೃತ್ತಿಗಾಯಕ ಗುಂಪಿಗೆ ಸೇರಿದ ಈತನು ‘ಢಕ್ಕೆಯ ಮಾರಯ್ಯ’ ಎಂದು ಪ್ರಸಿದ್ಧಿಗೆ ಬಂದಿರಬೇಕು. ಆ ಕಾರಣವಾಗಿ ಶರಣರ ಕಾಲದಲ್ಲಿ ಢಕ್ಕೆ ಬಾರಿಸುವ ಕಾಯಕದ ಮಟ್ಟಕ್ಕೆ ಏರಿ ‘ಢಕ್ಕೆಯ ಮಾರಯ್ಯ’ ತನ್ನ ಕಾಯಕದ ದೃಷ್ಟಿಯಿಂದ ಮನ್ನಣೆ ಪಡೆದಿರಬೇಕು. ಈತ ಅಕ್ಷರಸ್ಥನಾಗಿ ಶರಣರ ಪ್ರಭಾವಕ್ಕೆ ಒಳಗಾದ ಹಿನ್ನೆಲೆಯೇನು? ಢಕ್ಕೆಯ ಮಾರಯ್ಯ ಶರಣರು ಪ್ರಸಾರಗೊಳಿಸಿದ ಕಾಯತತ್ವವನ್ನು ಸ್ವೀಕರಿಸಿ ತಾನು ಒಬ್ಬ ಅನುಭಾವಿಯಾಗಿ ವಚನಗಳನ್ನು ರಚಿಸಿದ್ದನೇ? ಢಕ್ಕೆಯ ಮಾರಯ್ಯನ ಹೆಸರಿನಲ್ಲಿ ಕೆಲವು ವಚನಗಳು ಇರುವಂತೆ ಕಂಡು ಬರುತ್ತವೆ. ಢಕ್ಕೆಯ ಬೊಮ್ಮಣ್ಣ ಎನ್ನುವ ಹೆಸರಿನಲ್ಲಿ ಕೆಲವು ವಚನಗಳು ಕಾಣಸಿಗುತ್ತವೆ. ಉದಾ:

‘ಕಾಯಕವೆಂಬ ಢಕ್ಕೆಯ ಮೇಲೆ
ಜೀವವೆಂಬ ಹಿಡಿಚೆಂಡು ಬೀಳೆ
ತ್ರಿವಿಧ ತಾ ತಾ ಎಂಬಾಸೆ
ಹಿಂಡಿ ಡಿಂ.. ಡಿಂ.. ಎನ್ನುತ್ತಿದೆ’

ಈ ವಚನಗಳನ್ನು ಪರಿಶೀಲಿಸಿದರೆ ವಿವಿಧ ವೃತ್ತಿಯ ಜನರು ಕಾಯಕತತ್ವಕ್ಕೆ ನಿಷ್ಠರಾದುದು ಸ್ಪಷ್ಟ. ಆದರೆ ಡಕ್ಕಲಿಗರೇ ಢಕ್ಕೆಯನ್ನು ಬಾರಿಸುವಲ್ಲಿ ನಿಪುಣರಾದರು ಮತ್ತು ತಮ್ಮ ಉಪಜೀವನಕ್ಕಾಗಿ ದುರಗಮುರಗಿಯ ವೃತ್ತಿಯನ್ನು ಕೈಕೊಂಡರು. ಇವರು ಡಕ್ಕಲಿಗರೇ ಎಂದು ಹೇಳುವುದಕ್ಕೆ ಖಚಿತವಾದ ಆಧಾರಗಳು ಸಿಗುವುದಿಲ್ಲ. ಇದಕ್ಕೆ ನಿರ್ದಿಷ್ಟ ಆಕರ ದೊರೆಯುವವರೆಗೆ ಇವರು ಡಕ್ಕಲಿಗರೆಂದು ಹೇಳಲುಬಾರದು ಮತ್ತು ಈ ಢಕ್ಕೆಯವರು ಡಕ್ಕಲಿಗರಾದರೆಂದು ಹೇಳುವುದು ಸಾಧ್ಯವಿಉಲ್ಲ. (ವಿವರಣೆಗೆ ನೋಡಿ ಡಾ. ಹರಿಲಾಲ ಪವಾರ ಕರ್ನಾಟಕದ ಹೆಳವರು ಒಂದು ಜಾನಪದೀಯ ಅಧ್ಯಯನ ೧೯೯೫).