ರೇಷ್ಮೆಬಟ್ಟೆಯೊಂದರಲ್ಲಿ ಥಳಥಳಿಸುವ ಜರದ ಎಳೆಗಳಂತೆ ಬಂಜಾರಾ ಬುಡಕಟ್ಟು ಭಾರತೀಯ ಬುಡಕಟ್ಟುಗಳಲ್ಲಿ ಎದ್ದು ಕಾಣುವಂಥದ್ದು. ಒಂದು ಕಾಲದಲ್ಲಿ ಅಲೆಮಾರಿ ಗುಂಪಾಗಿದ್ದ ಬಂಜಾರಾ ಬುಡಕಟ್ಟು ಕಾಲಾನಂತರದಲ್ಲಿ ಸ್ಥಿತ ವಸತಿ ಪರಿಕಲ್ಪನೆಗೆ ಹೊಂದಿ ತಾಂಡಾಗಳನ್ನು ವಿವಿಧ ಭೌಗೋಳಿಕ ಪ್ರದೇಶಗಳಲ್ಲಿ ನಿರ್ಮಿಸಿಕೊಂಡು ಭಾರತೀಯ ಗ್ರಾಮೀಣ ಬದುಕಿನೊಂದಿಗೆ ಒಂದಾಗಿ ಬೆಳೆದವರು. ಈ ಗುಂಪಿನ ವೈಶಿಷ್ಟ್ಯವೆಂದರೆ ತಮ್ಮ ನೆರೆಹೊರೆಯ ಭಾಷೆ ಸಂಸ್ಕೃತಿಗಳಿಗೆ ಹೊಂದಿಕೊಂಡದ್ದು, ಆದರೆ ಇವರು ತಮ್ಮ ಭಾಷೆ ಮತ್ತು ಸಂಸ್ಕೃತಿಗಳನ್ನು ಎಂದೂ ಬಿಟ್ಟುಕೊಟ್ಟವರಲ್ಲ. ವಿವಿಧ ಪ್ರದೇಶದ ನಾಗರಿಕತೆಗಳ ಪ್ರಭಾವಕ್ಕೆ ಒಳಗಾದರೂ, ತಮ್ಮದೊಂದು ವಿಶಿಷ್ಟ ವೇಷಭೂಷಣ, ರಂಗಕಲೆ, ಆಚರಣೆ, ಹಾಡುಗಳನ್ನು ಕೂಡ ಇವರು ಪ್ರತ್ಯೇಕವಾಗಿ ಉಳಿಸಿಕೊಂಡರು. ಅಷ್ಟೇ ಅಲ್ಲ, ತಮ್ಮ ಸಾಮಾಜಿಕ ನಡವಳಿಕೆ ರೀತಿ-ನೀತಿ ಸಂಬಂಧಗಳ ಬದಲಾವಣೆಗೆ ಅವರು ಎಂದೂ ಆಸ್ಪದ ಕೊಡಲಿಲ್ಲ. ಈ ಕಾರಣದಿಂದಾಗಿಯೇ ಇಂದು ಬಂಜಾರಾ ಬುಡಕಟ್ಟನ್ನು ಕುರಿತ ಅಧ್ಯಯನ ತೀವ್ರಗತಿಯಲ್ಲಿ ನಡೆಯಬೇಕಾಗಿದೆ ಮತ್ತು ನಡೆಯುತ್ತಿದೆ. ಏಕೆಂದರೆ ಇದೊಂದು ಅಖಿಲ ಭಾರತ ವ್ಯಾಪ್ತಿಯ ಅಲೆಮಾರಿ ಗುಂಪು.

ಬಂಜಾರಾ ಬುಡಕಟ್ಟಿನ ಮೂಲಪುರುಷ ಮೋಲಾದಾದಾ. ರಾಧಾದಾದಿ ಅವರುಗಳಿಂದ ಪೋಷಿತರಾಗಿ ಮಹಾಭಕ್ತ ಹಾತೀರಾಂ ಬಾವಾ, ಸಂತ ಸೇವಾಲಾಲ (ರಾಮಾವತ), ಲಿಂಗಾಮಸಂದ, ಲೋಕಮಸಂದ, ಜಯಮಲ್, ಫತಮಲ್, ಭಗವಾನದಾಸ ವಡತ್ಯಾ, ಜಗದೇ ಪವಾರ (ವಿಸಳಾವತ), ನಾನುಸಾದ (ರಾಮಾವತ), ಹಾಮುಭುಕ್ಯಾ, ಮೀಟು ಭುಕ್ಯಾ(ನೆಣಾವತ), ಭಜನಿ ಭುಕ್ಯಾ(ಕೊಡಾವತ) ಕಾನಾ ನಾಯಕ, ಲಿಖೀಷಾ ಬಂಜಾರಾ, ಹೂನಾಸತಿ ಮುಂತಾದವರು ಬಂಜಾರಾ ಸಮಾಜದಲ್ಲಿ ಜನ್ಮತಳೆದು, ಸಮಾಜಕ್ಕೋಸ್ಕರ ಮತ್ತು ದೇಶಕ್ಕಾಗಿ ಸೇವೆಗೈದು ಸಾರ್ಥಕ ಬದುಕು ನಡೆಸಿದ್ದಾರೆ. ಇವರಲ್ಲಿ ದೈವೀಕರಣಗೊಂಡವರು ವೀರರು ಮತ್ತು ಪೂಜ್ಯರು ಬರುತ್ತಾರೆ.

ಹಿಂದೆ ಬಂಜಾರಾ ಬುಡಕಟ್ಟು ವ್ಯಾಪಾರದ (ಲದೇಣಿಯಾ) ಮೂಲಕ ದೇಶ-ವಿದೇಶಗಳನ್ನು ತಮ್ಮ ಬುಡಕಟ್ಟಿಗೆ ಪರಿಚಯಿಸುವುದರ ಜೊತೆಗೆ ದೇಶದ ಘನತೆ, ಗೌರವ, ನಂಬಿಕೆ ಇತ್ಯಾದಿಗಳನ್ನು ಎತ್ತಿಹಿಡಿದು, ರಜಪೂತ(ರಾಣಾ ಪ್ರತಾಪಸಿಂಹ) ಕಾಲದಲ್ಲಿ ವೀರ ಸೈನಿಕರಾಗಿ, ಮಗದೊಮ್ಮೆ ಹೈದರಾಬಾದಿನ “ಅಸಫ ಜಾಯಿ” ಮನೆತನದ ಸೈನ್ಯದಲ್ಲಿ ಸೇರಿ ತಮ್ಮ ಶೌರ್ಯ ಸಾಹಸಗಳನ್ನು ಮೆರೆದು ಖ್ಯಾತನಾಮರಾದರು.

ಲಿಖೀಷಾ ಬಂಜಾರಾ ಸ್ವಾಭಿಮಾನಕ್ಕೋಸ್ಕರ ತನ್ನ ಜೀವದ ಹಂಗನ್ನು ತೊರೆದು ಚಕ್ರವರ್ತಿ ಔರಂಗಜೇಬನ ಸೈನಿಕರಿಗೆ ಬಗ್ಗದೇ ದೆಹಲಿಯ ಚಾಂದನಿ ಚೌಕದಿಂದ ಸಿಖ್ಖಗುರು ತೇಗ ಬಹಾದ್ದೂರರ ಮುಂಡವನ್ನು ಬಣ್ಣ ತುಂಬಿದ ಎತ್ತಿನ ಗಾಡಿಯಲ್ಲಿ ತಂದು ತನ್ನ ಮನೆಯಲ್ಲಿರಿಸಿ ಔರಂಗಜೇಬನ ಸೈನಿಕರು ಬರುವುದರೊಳಗೆ ಆ ಮನೆಗೆ ಬೆಂಕಿಯಿಟ್ಟು ಸ್ವಾಭಿಮಾನ ಪರಮಾವಧಿಯನ್ನು ಪ್ರದರ್ಶಿಸಿದುದು ಸಾಮಾನ್ಯವೇನಲ್ಲ. ಪೃಥ್ವಿರಾಜ ಚವ್ಹಾಣ, ರಾಣಾ ಪ್ರತಾಪಸಿಂಹ ಮುಂತಾದ ದೊರೆಗಳು ಮೊಘಲರ ವಿರುದ್ಧ ಹೋರಾಡಿ ಕೊನೆಗೆ ಸೋತು ಕಾಡುಪಾಲಾದರು. ಎಷ್ಟು ತಡೆದರೂ ಕೇಳದ ಬಂಜಾರಾಗಳು, ದೇಶಾಭಿಮಾನಕ್ಕಾಗಿ ತಮ್ಮ ರಾಜರುಗಳನ್ನು ಹಿಂಬಾಲಿಸಿ ತಮ್ಮ ರಾಜರು ಯುದ್ಧದಲ್ಲಿ ಗೆದ್ದು ಮರಳಿ ತಮ್ಮ ರಾಜ್ಯಕ್ಕೆ ಹಿಂದಿರುಗುವವರೆಗೂ ಬರೀ ನೆಲದ ಮೇಲೆ ಮಲಗಿ ತಮ್ಮ ಬುಡಕಟ್ಟನ್ನು ಸಂಘಟಿಸುವುದಕ್ಕಾಗಿ ಪ್ರತಿಜ್ಞೆ ಕೈಗೊಂಡದ್ದು ಮತ್ತು ಅದರಂತೆ ಕಾರ್ಯ ಮಾಡಿದ್ದು, ಸ್ವಾಭಿಮಾನದ ಸಂಕೇತವಾಗಿದೆ.

ನಾಗರಿಕತೆಯ ಪ್ರಭಾವದಿಂದಾಗಿ ಬಂಜಾರಾ ಬುಡಕಟ್ಟಿನ ಸಾಂಸ್ಕೃತಿಕ ಪ್ರಸರಣ ಹಾಗೂ ಅವರ ವೈಶಿಷ್ಟ್ಯಗಳಲ್ಲಿ ಪರಿವರ್ತನೆ ನಮಗೆ ಕಂಡುಬರುತ್ತಿರುವುದು ಪ್ರಧಾನವಾಗಿ ಕರ್ನಾಟಕ, ಮಹಾರಾಷ್ಟ್ರ, ಮತ್ತು ಆಂಧ್ರಪ್ರದೇಶಗಳಲ್ಲಿ ಹಾಗೆ ನೋಡಿದರೆ ಗುಜರಾತ, ರಾಜಸ್ಥಾನ, ಉತ್ತರ ಭಾರತ ಈ ಮುಂತಾದ ಪ್ರದೇಶಗಳಲ್ಲಿರುವ  ಗುಜ್ಜರ, ಮಾರವಾಡಿ, ರಜಪೂತ ಮುಂತಾದ ಪಂಗಡಗಳ ರೂಪ-ಸ್ವರೂಪಗಳ ಜೊತೆಗೆ ಕೆಲವು ಸಾಮ್ಯಗಳನ್ನು ಹೊಂದಿರಬಹುದಾದ ಬಂಜಾರಾ ಬುಡಕಟ್ಟು, ಇಂದು ಅತ್ಯಂತ ಸಂಕೀರ್ಣ ಸಂಸ್ಕೃತಿಯ ಮಾದರಿಯಾಗಿದೆ. ಕಾರಣ ಈ ಹಿನ್ನೆಲೆಯಲ್ಲಿ, ಪರಸ್ಪರ ಕೊಡುಕೊಳ್ಳುವಿಕೆ ಅಧ್ಯಯನ ಮಾಡುವುದು (ಅದಕ್ಕೆ ಜನಾಂಗೀಯ ಅಧ್ಯಯನ ಶಿಸ್ತುಗಳನ್ನು ಬಲ್ಲ ವಿದ್ವಾಂಸರಿಗಾಗಿ ಈ ಕಾರ್ಯ ಕಾದಿರುತ್ತದೆ) ಅಗತ್ಯವೆನಿಸುತ್ತದೆ.

ಈ ದಿಶೆಯಲ್ಲಿ “ಬಂಜಾರಾ ಸಮಾಜಕ್ಕೆ ಸೇವಾಲಾಲರ ಕೊಡುಗೆ” ಒಂದು ವಿನಮ್ರ ಪ್ರಯತ್ನ, ಸೇವಾಲಾಲ ಒಬ್ಬ ಮಹಾಯೋಗಿ, ಮಹಾಜ್ಞಾನಿ, ವಿಭೂತಿ ಪುರುಷ, ಪವಾಡ ಪುರುಷ, ಕಾಲಜ್ಞಾನಿ, ಸಮಾಜ ಸುಧಾರಕ ಎಂದು ಮುಂತಾಗಿ ಬಂಜಾರಾ ಬುಡಕಟ್ಟು ವರ್ಣಿಸುತ್ತದೆ. ಇವರು ಅಂದಿನ ಮೈಸೂರು(ಕರ್ನಾಟಕ) ರಾಜ್ಯ, ಮದ್ರಾಸ್, ಆಂಧ್ರಪ್ರದೇಶ, ಮಹಾರಾಷ್ಟ್ರ, ಮಧ್ಯಪ್ರದೇಶ, ಗುಜರಾತ ಮುಂತಾದ ರಾಜ್ಯಗಳಲ್ಲಿ ಸಂಚರಿಸಿ ಸಮಾಜ ಸಂಘಟನೆ ಮತ್ತು ಸಮಾಜ ಸುಧಾರಣೆಯ ಜೊತೆಗೆ ಧರ್ಮ ಬೋಧನೆ, ತನ್ನಿಂದಾದಷ್ಟು ಬಡಬಗ್ಗರಿಗೆ, ದೀನದಲಿತರಿಗೆ ಸಹಾಯ ಮಾಡಬೇಕೆನ್ನುವ ಮಾನವ ಧರ್ಮಪ್ರತಿಪಾದನೆ ಮಾಡುತ್ತ, ಅನೇಕ ಪವಾಡಗಳನ್ನು ಮಾಡಿದ್ದು ನಿಜ ಎಂದು ನಂಬಲಾಗುತ್ತದೆ. ಈ ಮಹಾಪುರುಷನ ವಿವಿಧ ಬಗೆಯ ಸಾಧನೆಗಳನ್ನು ಕುರಿತು ಬಂಜಾರಾಗಳು ತಮ್ಮ ಜನಪದ ಗೀತೆಗಳಲ್ಲಿ ಹಾಡುವುದನ್ನು ಕಾಣಬಹುದು.”

[1]

ಸೇವಾಲಾಲ ೧೫-೨-೧೭೩೯ ರಂದು ಜನಿಸಿ ೧೨-೪-೧೮೦೬ರಲ್ಲಿ ನಿಧನ ಹೊಂದಿದರು. ಒಟ್ಟು ೬೭ ವರ್ಷ ಬದುಕಿದ ಈ ಸಂತರನ್ನು ಬಂಜಾರಾಗಳು ಇಂದಿಗೂ ಪೂಜ್ಯ ಭಾವನೆಯಿಂದ ಕಾಣುತ್ತಾರೆ. ಸೇವಾಲಾಲ ನಿಧನಹೊಂದಿ ಸುಮಾರು ೧೯೮ ವರ್ಷಗಳು ಗತಿಸಿದವು. ಅಖಂಡ ಭಾರತದ ಬಂಜಾರಗಳು ಈ ಸಂತರನ್ನು ತಮ್ಮ “ಕುಲಗುರು” ಎಂದು ಪೂಜ್ಯ ಭಾವನೆಯಿಂದ ಸ್ತುತಿಸುವುದನ್ನು ನೋಡಿದರೆ, ಬಂಜಾರಾಗಳಿಗೆ ಸೇವಾಲಾಲರ ಮೇಲೆ ಅಪಾರವಾದ ಪ್ರೀತಿ, ಗೌರವ ಇದೆ ಎಂಬುದು ಕಂಡುಬರುತ್ತದೆ.

ಸೇವಾಲರ ಅಜ್ಜ (ದಾದಾ) ರಾಮಜಿ ನಾಯಕ, ರಾಮಾವತ ಗೋತ್ರದವರು. ಇವರು ಆಂಧ್ರಪ್ರದೇಶದ “ರಾಮಗುಂಡಮ” ಅಥವಾ “ರಾಮಜಿ ನಾಯಕ ತಾಂಡಾ”(ಗುತ್ತಿ ಸಮೀಪ)ದಲ್ಲಿ ೩೬೦ ಕುಟುಂಬಗಳೊಂದಿಗೆ ವಾಸಿಸುತ್ತಿದ್ದರು. ಇವರು ಭಾರೀ ಶ್ರೀಮಂತರಾಗಿದ್ದು, ಇವರ ಬಳಿಯಲ್ಲಿ ೪,೦೦೦ ದನಕರುಗಳಿದ್ದವೆಂದು ಸ್ಥಳೀಯ ಬಂಜಾರಾ ಬುಡಕಟ್ಟಿನ ಹೇಳಿಕೆ. ರಾಮಜಿ ನಾಯಕ ಕೊಟ್ಟ ವಚನಪಾಲನೆಗಾಗಿ ತನ್ನ ಪ್ರಾಣವನ್ನು ಕೊಡಲು ಹಿಂದೆ ಮುಂದೆ ನೋಡುತ್ತಿರಲಿಲ್ಲ ಎನ್ನುವ ನಿಷ್ಠಾವಂತ ವ್ಯಕ್ತಿ. ಯಾವುದೇ ಕಾರ್ಯ ಮಾಡಬೇಕಾದರೆ ತನ್ನ ತಂಡದ ಜನರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳುತ್ತಿದ್ದನು.

ರಾಮಜಿ ನಾಯಕ ಮೊಘಲರೊಂದಿಗೆ ಒಪ್ಪಂದ ಮಾಡಿಕೊಂಡು ಭಾರೀ ಪ್ರಮಾಣದ ಸರಕುಗಳನ್ನು ತಮ್ಮ ಸಾವಿರಾರು ಗೋವುಗಳ ಮೇಲೆ ಒಂದು ಪ್ರದೇಶದಿಂದ ಮತ್ತೊಂದು ಪ್ರದೇಶಕ್ಕೆ ಸಾಗಿಸುವ ಕಾರ್ಯ ಮಾಡುತ್ತಿದ್ದನು.

ರಾಮಜಿ ನಾಯಕನ ಹೆಂಡತಿಯ ಹೆಸರು ಮಂಗಲಾಬಾಯಿ. ಅಚ್ಚುಕಟ್ಟಾದ ತಾಂಡಾದಿಂದ ಬಂದವಳಾದ್ದರಿಂದ ಗಂಡನ ದಿನನಿತ್ಯದ ಕಾರ್ಯದಲ್ಲಿ ಹೆಗಲಿಗೆ ಹೆಗಲು ಕೊಟ್ಟು, ಆಕೆ ಸಹಕರಿಸುತ್ತಿದ್ದಳು. ಈ ದಂಪತಿಗಳಿಗೆ ಶಿವನ ಮೇಲೆ ಅಪಾರ ಭಕ್ತಿ. ಇವರಿಗೆ ಭೀಮಾ, ಖೇಮಾ ಮತ್ತು ಹೇಮಾ ಎಂಬ ಮೂರು ಜನ ಗಂಡುಮಕ್ಕಳಿದ್ದರು.

ಕೆಲವು ವರ್ಷಗಳಾದ ಮೇಲೆ ರಾಮಜಿ ನಾಯಕ ಬಳ್ಳಾರಿ ಮಾರ್ಗವಾಗಿ ಮಂಗಳೂರಿಗೆ ಬಂದು ಕೆಲವು ವರ್ಷಗಳವರೆಗೆ ಬಿಡಾರ ಹಾಕಿದನೆಂದು ತಿಳಿದುಬರುತ್ತದೆ. ಈ ಸಂದರ್ಭದಲ್ಲಿ ಮಂಗಳೂರಲ್ಲಿ ಸಮುದ್ರ ಮಾರ್ಗವಾಗಿ ಬರುತ್ತಿದ್ದ ಹಡಗುಗಳಿಂದ ಮಸಾಲೆ ಜಿನಸು ಮತ್ತು ಇತರ ಸರಕುಗಳನ್ನು ಸಾಗಿಸುವ ಹೊಣೆ ಹೊತ್ತು ತಮ್ಮ ವ್ಯಾಪಾರವನ್ನು ಚುರುಕುಗೊಳಿಸಿದನು.

ರಾಮಜಿ ನಾಯಕ ಮಂಗಳೂರ ಪ್ರದೇಶದಲ್ಲಿದ್ದಾಗ ಹಿರಿಯ ಮಗ ಭೀಮಾ ನಾಯಕ ಮದುವೆ ವಯಸ್ಸಿಗೆ ಬಂದಿರುತ್ತಾನೆ.

“ಗಡ ಮಂಗಳೂರ ರಾಮಜಿ ವಸಚ
ಭೀಮಾರಿ ವಾಯಾರಿ ವಾತೇ ಕರಚ”

ಅರ್ಥ : ಮಂಗಳೂರ ಸಮೀಪ ರಾಮಜಿ ವಾಸಿಸುತ್ತಿದ್ದ, ಭೀಮಾನ ಮದುವೆಯ ಬಗ್ಗೆ ಯೋಚಿಸುತ್ತಿದ್ದ.

“ಜಯರಾಮ ವಡತ್ಯಾ ಚಿತೋರಗಡೇಮ
ಸರಳ ಚಲೋಜೋ ಓರೇ ಘರೇನ
ಓರ ಛೋರಿಚ ಏಕ ಧರ್ಮಣಿ
ಭೀಮಾಸಾರು ಕರ ಮಾಂಗಣಿ
ಜಯರಾಮ ಕೇರೋ ಕೇದ ನಾಯಕೇನ
ವೋರೆ ಬಾಳಾನ ಕನ್ಯಾದಾನ ಕರೂಚು”

ಅರ್ಥ : ಚಿತ್ರದುರ್ಗದ ತಾಂಡಾದಲ್ಲಿ ಜಯರಾಮ ಜಾಧವ ವಾಸಿಸುತ್ತಿದ್ದನು. ಅವನ ಮಗಳಾದ ಧರ್ಮಣಿಗೆ ಭೀಮಾನ ಮದುವೆ ಸಂಬಂಧ ಕೇಳುತ್ತಾರೆ. ಜಯರಾಮ ಒಪ್ಪಿಕೊಂಡು ಹಿರಿಯರ ಮುಖಾಂತರ ರಾಮಜಿ ನಾಯಕನಿಗೆ ತನ್ನ ಮಗ ಭೀಮಾನಿಗೆ ಕನ್ಯಾದಾನ ಮಾಡುತ್ತೇನೆಂದು ಸುದ್ದಿ ತಲುಪಿಸುತ್ತಾನೆ.

ರಾಮಜಿ ನಾಯಕ, ಜಯರಾಮ ಜಾಧವನ ಮಾತಿನಿಂದ ಸಂತೋಷಪಡುತ್ತಾನೆ. ಮುಂದೆ ದೀಪಾವಳಿ ಹಬ್ಬದ ಸಂದರ್ಭದಲ್ಲಿ ಭೀಮಾ ಧರ್ಮಣಿಯ ಮದುವೆ ಚಿತ್ರದುರ್ಗ ಸಮೀಪ ತಾಂಡಾದ ಜಯರಾಮ ಜಾಧವನ ಮನೆಯ ಮುಂದೆ ಅದ್ಧೂರಿಯಾಗಿ ಮಾಡುತ್ತಾರೆ.

“ಭೀಮಾ ನಾಯಕ ಮದುವೆ ಮುಗಿದ ಮೇಲೆ ಕೆಲವು ವರ್ಷಗಳವರೆಗೆ ಕುಟುಂಬದ ಸದಸ್ಯರೊಂದಿಗೆ ಮಂಗಳೂರಲ್ಲಿದ್ದು, ಅಲ್ಲಿಂದ ಸಂಬಾರ ವಸ್ತುಗಳನ್ನು ಅಗ್ಗದರದಲ್ಲಿ ಖರೀದಿಸಿ ಬೇರೆ ಬೇರೆ ಪ್ರದೇಶಕ್ಕೆ ರಫ್ತು ಮಾಡುವ ಕೆಲಸದಲ್ಲಿ ತೊಡಗುತ್ತಾನೆ. ವ್ಯಾಪಾರದಲ್ಲಿ ಪ್ರಗತಿ ಆಗುತ್ತಿದ್ದಂತೆ ಕುಟುಂಬದ ಮತ್ತು ತಾಂಡಾದ ಸದಸ್ಯರೊಂದಿಗೆ ಮೈಸೂರು ರಾಜ್ಯದ ಚಿತ್ರದುರ್ಗ, ಚಿಕ್ಕಮಗಳೂರು, ಕಾರವಾರ, ಗೋಕರ್ಣ, ಶಿರ್ಶಿ, ಹೊನ್ನಾಳ್ಳಿ, ಸೂರಗೊಂಡನಕೊಪ್ಪ, ಚಿನ್ನಿಕಟ್ಟಿ ಮುಂತಾದ ಪ್ರದೇಶಗಳಿಗೆ ವ್ಯಾಪಾರ ಮಾಡುತ್ತ ವಿವಿಧ ಜನಾಂಗಗಳ ಸಂಪರ್ಕಕ್ಕೆ ಬಂದು ತಮ್ಮ ವ್ಯಾಪಾರ ಅಭಿವೃದ್ಧಿಗೊಳಿಸುತ್ತಾನೆ.

ಭೀಮಾ ನಾಯಕ ತನ್ನ ತಂಡದೊಂದಿಗೆ ಗೋಕರ್ಣದಿಂದ “ಲವಣ”[2] ಖರೀದಿಸಿ ಬೇರೆ ಬೇರೆ ಪ್ರದೇಶಗಳಿಗೆ ರಫ್ತು ಮಾಡುತ್ತಿದ್ದರು. ಬಹಳ ವರ್ಷಗಳವರೆಗೆ ಭೀಮಾನಾಯಕ  ಶಿರ್ಶಿ, ಸೂರಗೊಂಡನಕೊಪ್ಪ, ಚಿನ್ನಿಕಟ್ಟಿ, ಬೆಳಗುತ್ತಿ ಮುಂತಾದ ಪ್ರದೇಶಗಳಲ್ಲಿದ್ದು ಗೋವುಗಳನ್ನು ಕಾಯುತ್ತಿದ್ದನು ಎಂದು ಬಂಜಾರಾ ಗೀತೆಗಳಲ್ಲಿ ಉಲ್ಲೇಕ ಬರುತ್ತದೆ.

ಭೀಮಾ ಮತ್ತು ಧರ್ಮಣಿ ಸಂತಾನ ಕುರಿತು ಒಂದು ಜನಪದ ಐತಿಹ್ಯ ಬರುತ್ತದೆ. ಭೀಮಾ ದಂಪತಿಗಳಿಗೆ ಮದುವೆ ಆಗಿ ಹನ್ನೆರಡು ವರ್ಷಗಳು ಕಳೆದರೂ ಮಕ್ಕಳಾಗಲಿಲ್ಲ. ಭೀಮಾ ನಾಯಕ ಶಿರ್ಶಿ ಮಾರಿಕಾಂಬೆಯ ಹೆಸರಿನ ಮೇಲೆ “ಝಂಡಿ ಜೋಲ್‌”(ಶಿಂದಿ ಗಿಡಗಳ ಬನ)ದಲ್ಲಿ ತಪಸ್ಸು ಮಾಡುತ್ತಾನೆ. ಹಲವು ದಿನಗಳಾದ ಮೇಲೆ ಭೀಮಾ ನಾಯಕನ ಭಕ್ತಿಗೆ ಮೆಚ್ಚಿದ ಮಾರಿಕಾಂಬೆ, ಪ್ರತ್ಯಕ್ಷಳಾಗಿ ಪುತ್ರ ಸಂತಾನದ ಫಲ ಕೊಡುವೆ, ಆದರೆ ಹಿರಿಯ ಮಗನಿಗೆ ತನ್ನ ಸೇವಕ(ಭಕ್ತ)ನನ್ನಾಗಿ ಮಾಡಬೇಕೆಂದು ಭೀಮಾ ನಾಯಕನಿಂದ ವಚನ ಪಡೆಯುತ್ತಾಳೆ. ಮಾರಿಕಾಂಬೆ ಭೀಮಾ ನಾಯಕನಿಗೆ ಪ್ರಸಾದ ಕೊಟ್ಟು ಆಶೀರ್ವದಿಸಿ ಮಾಯವಾಗುತ್ತಾಳೆ. ಭೀಮಾ ನಾಯಕ ಮನೆಗೆ ಬಂದು ಧರ್ಮಣಿಗೆ ಪ್ರಸಾದ ಕೊಟ್ಟು ಎಲ್ಲ ವಿಷಯ ಹೇಳುತ್ತಾನೆ. ಧರ್ಮಣಿಗೆ ಮಾರಿಕಾಂಬೆಯ ಮೇಲೆ ಅತೀವ ಭಕ್ತಿ ಉಕ್ಕುತ್ತದೆ. ಕೆಲವು ತಿಂಗಳು ಕಳೆದ ಮೇಲೆ ದೇವಿಯ ಆಶೀರ್ವಾದದಿಂದ ಧರ್ಮಣಿ ಗರ್ಭವತಿ ಆಗಿ ಗಂಡುಮಗುವಿಗೆ ಜನ್ಮ ನೀಡುತ್ತಾಳೆ ಎಂದು ಬಂಜಾರಾ ವಕ್ತೃಗಳ ಹೇಳಿಕೆ.

“ನೌ ಮೀನಾ ನೌಧನ್ನ ಪೂರೋರೆ ಭರಾನ
ನಕ್ಷತ್ರ ಲಾಗೋರೆ ರೋಹಿಣಿರೋ ಧನ್ನ
ಮಾದೇವರೋ ಧನ್ನ ಸೋಮವಾರರೇನ

ತಾರೀಖ ಪಂದ್ರ ಮೀನಾ ದುಸರೇನ
ಸಾಲ ಸತ್ರ ಎಕ್ಕೋಣ ಚಾಳಿಸೇನ
ಜಲ್ಮಲಿದೋ ಸೇವಾಲಾಲ ಅವತಾರ ಲಿದೋರ”

ಅರ್ಥ : ಒಂಬತ್ತು ತಿಂಗಳು ಒಂಬತ್ತು ದಿನಗಳು ತುಂಬಿ ರೋಹಿಣಿ ನಕ್ಷತ್ರ, ಸೋಮವಾರ ದಿನಾಂಕ ೧೫-೨-೧೭೩೯ರಂದು ಸೇವಾಲಾಲ ಜನ್ಮ ತಾಳುತ್ತಾನೆ.

ಸೇವಾಲಾಲರ ಜನನದ ಸಮೀಕ್ಷೆ :

೧) ಬಂಜಾರ ಭಾಸ್ಕರ ಅಜಮೇರ (ಮರಾಠಿ) ಈ ಪುಸ್ತಕದಲ್ಲಿ ಮಹಾರಾಷ್ಟ್ರದ ಅಕೋಲಾ ಜಿಲ್ಲೆಯ ಮಾನೋರಾ ತಾಲೂಕಿನ ಪೋಹರಾಗಡ (ಹಿಲವಾಡಾ)ದಲ್ಲಿ ಭೀಮಾನಾಯಕ ಧರ್ಮಣಿ ದಂಪತಿಗಳ ಉದರದಲ್ಲಿ ೧೫ ಫೆಬ್ರವರಿ ೧೭೩೯ರಂದು ಸೇವಾಲಾಲರ ಜನನ ಆಗಿದೆ ಎಂದು ಅಭಿಪ್ರಾಯಪಟ್ಟಿದ್ದಾರೆ.

೨) ಕವಿ ಆತ್ಮರಾಮ ಇವರು ಬರೆದಿರುವ “ಸೇವಾದಾಸ ಲೀಲಾ ಚರಿತ್ರ”(ಮರಾಠಿ)ದಲ್ಲಿ ಸೇವಾಲಾಲರ ಜನನ ಶುದ್ಧ ಪೂರ್ಣಿಮೆಯಂದು ಗುತ್ತಿ ಬಳ್ಳಾರಿಯಲ್ಲಿ ಆಗಿದೆ ಎಂದಿದ್ದಾರೆ.

೩) ಶ್ರೀ ಸೇವಾದಾಸ ಜಗದಂಬಾ ಲೀಲಾ ಭಾಗ-೨೬ (ಮರಾಠಿ)ರಲ್ಲಿ ಹ.ಭ.ಪ. ರಾಜುದಾಸ ಚವ್ಹಾಣ ಇವರು ಕರ್ನಾಟಕ ಗುತ್ತಿ ಬಳ್ಳಾರಿಯಲ್ಲಿ, ಭೀಮಾ ಧರ್ಮಣಿ ದಂಪತಿಗಳಿಂದ ೧೫-೨-೧೭೩೯ರಂದು ಸೇವಾಲಾಲರ ಜನನವಾಗಿದೆ ಎಂದು ಹೇಳುತ್ತಾರೆ.

೪) ಡಾ. ಹರಿಲಾಲ ಪವಾರ ಅವರ “ಸಂತ ಸೇವಾಲಾಲ” ಕೃತಿಯಲ್ಲಿ, ಕರ್ನಾಟಕದ ದಾವಣಗೆರೆ ಜಿಲ್ಲೆಯ ಹೊನ್ನಾಳಿ ತಾಲೂಕಿನ ಸೂರಗೊಂಡನಕೊಪ್ಪ ಸಮೀಪದಲ್ಲಿರುವ ಬೆಳಗುತ್ತಿ ಸಮೀಪ ಒಂದು ಬಂಜಾರಾ ತಾಂಡಾದಲ್ಲಿ ರಾಮಾವತ ಗೋತ್ರದ ಭೀಮಾ ಧರ್ಮಣಿ ದಂಪತಿಗಳ ಉದರದಲ್ಲಿ ದಿನಾಂಕ ೧೫-೨-೧೨೩೯ ರಂದು ಸೇವಾಲಾಲರ ಜನನ ಆಗಿದೆ ಎಂದು ಅಭಿಪ್ರಾಯಪಡಲಾಗಿದೆ.

೫) ಅಖಿಲ ಭಾರತ ಬಂಜಾರಾ ಸಂಘದವರು ೧೫ ಫೆಬ್ರವರಿ ೨೦೦೨ರಂದು ಸೇವಾಲಾಲರ ೨೬೩ನೇ ಜನ್ಮೋತ್ಸವ ಆಚರಣೆಯನ್ನು, ಆಂಧ್ರಪ್ರದೇಶದ ಅನಂತಪುರ ಜಿಲ್ಲೆಯ ಗುತ್ತಿ ಸಮೀಪದ ಸೇವಾಗಡದಲ್ಲಿ ಅದ್ಧೂರಿಯಾಗಿ ಆಚರಿಸಿ, ಆ ಸ್ಥಳಕ್ಕೆ “ಸೇವಾಗಡ” ಎಂದು ನಾಮಕರಣ ಮಾಡಿ, ದೊಡ್ಡ ಪ್ರಮಾಣದಲ್ಲಿ ಸೇವಾಲಾಲರ ಮಂದಿರ ಕಟ್ಟಿಸಬೇಕೆಂದು ನೀಲನಕ್ಷೆ ತಯಾರಿಸಿದ್ದಾರೆ. ಮತ್ತು ಶ್ರೀ ಸೇವಾಲಾಲರ ಜನನ ೧೫-೨-೧೭೩೯ ರಂದು ರಾಮಗುಂಡಂ, ರಾಮಾಜಿನಾಯಕ ತಾಂಡಾದಲ್ಲಿ ಆಗಿದೆ ಎಂದು ಅಭಿಪ್ರಾಯ ಪಟ್ಟಿರುತ್ತಾರೆ.

ಸೇವಾಲಾಲರ ಜನ್ಮಸ್ಥಳದ ಬಗ್ಗೆ ಈ ಮೇಲಿನ ಸಂಗತಿಗಳು ತಿಳಿದುಬರುತ್ತವೆ. ಹೀಗೆ ಒಬ್ಬ ಪ್ರಭಾವಶಾಲಿ ವ್ಯಕ್ತಿ ತಮ್ಮ ತಮ್ಮವನೆಂದು, ತಮ್ಮಲ್ಲಿ ಹುಟ್ಟಿದವನು ಎಂದು ಹೇಳುವುದು ಸರ್ವೇಸಾಮಾನ್ಯವಾಗಿರಬಹುದು. ಆದರೆ ಸೇವಾಲಾಲರ ಬಗ್ಗೆ ಈ ಬಂಜಾರಾ ಬುಡಕಟ್ಟು ತಾಳಿರುವ ಪುರಮಪೂಜ್ಯ ಭಾವನೆಯನ್ನು ನೋಡಿದರೆ, ಇವರು ಕರ್ನಾಟಕದಲ್ಲಿ ಹುಟ್ಟಿದರು ಎಂದು ಖಚಿತವಾಗಿ ಹೇಳುವುದು ಸ್ಪಷ್ಟವಾಗುತ್ತದೆ. ಆದರೆ ಕರ್ನಾಟಕದ ಸೂರಗೊಂಡನಕೊಪ್ಪ ಸಮೀಪದ ಬೆಳಗುತ್ತಿಯಲ್ಲಿ ಇವರು ಜನಿಸಿರಬೇಕೆಂದು ಊಹಿಸಲು ಸಾಕಷ್ಟು ಆಧಾರಗಳಿವೆ. ಸೇವಾಲಾಲರ ಜನನದ ಬಗ್ಗೆ ಇರುವ ದಾಖಲೆಗೆ ಸಂಬಂಧಪಟ್ಟಂತೆ ಎಲ್ಲಿಯೂ ಭಿನ್ನಾಭಿಪ್ರಾಯಗಳು ಕಂಡುಬರುವುದಿಲ್ಲ.

ಸೇವಾಲಾಲ ಒಬ್ಬ ಸಂತ, ಯೋಗಿ ಎಂಬುದು ಎಲ್ಲರೂ ಒಪ್ಪುವಂಥ ಮಾತು. ಅವನು ಬ್ರಹ್ಮಚಾರಿ ಆಗಿಯೇ ಜೀವನ ನಡೆಸಿದ್ದಾನೆ ತನ್ನ ನಾಲ್ವರು ಸಹೋದರರಾದ ಹಂಪಾ, ಬದ್ದು, ಭಾಣಾ ಮತ್ತು ಪೂರಾ. ಇವರಲ್ಲಿ ಭಾಣಾಭಾಯಿ ಹಸುಗೂಸು ಇರುವಾಗಲೇ ಸಾಯುತ್ತಾನೆ. ಉಳಿದ ಮೂವರು ಮದುವೆಯಾಗಿ ಜೀವನ ನಡೆಸುತ್ತಾರೆ.

ಸೇವಾಲಾಲರ ಸಹೋದರ ಹಾಂಪಾಭಾಯಿಯ ಐದನೆಯ ತಲೆಮಾರಿನವರಾದ ಶ್ರೀ ರಾಮರಾವ ಮಹಾರಾಜರು ಇಂದಿಗೂ ಬ್ರಹ್ಮಚಾರಿಯಾಗಿಯೇ ಉಳಿದಿದ್ದಾರೆ. ಇವರು ಮಹಾರಾಷ್ಟ್ರದ ಪೋಹರಾದೇವಿಯಲ್ಲಿರುವ ಸೇವಾಲಾಲ ಮತ್ತು ಮರಿಯಮ್ಮ ದೇವಸ್ಥಾನದ ಉತ್ತರಾಧಿಕಾರಿ ಆಗಿ, ಇಂದು ಸಮಸ್ತ ಬಂಜಾರಾಗಳಿಗೆ ಪೂಜ್ಯನೀಯರಾಗಿದ್ದಾರೆ ಮತ್ತು ಧರ್ಮಗುರುಗಳಾಗಿರುವುದನ್ನು ಈ ಸಂದರ್ಭದಲ್ಲಿ ಉಲ್ಲೇಖಿಸುವುದು ಅಗತ್ಯವೆಂದು ಭಾವಿಸುತ್ತೇನೆ.

ಸೇವಾಲಾಲರ ಬಾಲ್ಯ :

ಸೇವಾಲಾಲ ಬಾಲ್ಯದಲ್ಲಿ ನೋಡಲು ಸುಂದರನಾಗಿದ್ದು, ತನ್ನ ದಿನನಿತ್ಯದ ಕೆಲಸಗಳಲ್ಲಿ ಚುರುಕಾಗಿದ್ದನು. ಬಾಲ್ಯದಲ್ಲಿ ಸಕ್ಯಾ-ಪಟ್ಯಾ ಮತ್ತು ಇತರ ಗೋಪಾಲಕರೊಂದಿಗೆ ತಮ್ಮ ತಂದೆಯ ಬಳಿಯಿರುವ ೩,೭೫೫ ಗೋವುಗಳನ್ನು ಅಡವಿಯಲ್ಲಿ ಕಾಯುತ್ತಿದ್ದನು. ಸೇವಾಲಾಲರ ಬಾಲ್ಯ ಜೀವನಕ್ಕೆ ಸಂಬಂಧಪಟ್ಟ ಮತ್ತೊಂದು ದಂತಕಥೆ ಬರುತ್ತದೆ. ಇದನ್ನು ಇಲ್ಲಿ ಹೇಳುವ ಕಾರಣವೆಂದರೆ ಎಲ್ಲ ಪ್ರದೇಶದ ಬಂಜಾರಾ ಬುಡಕಟ್ಟು ಇವರ ಈ ದಂತಕಥೆಯನ್ನು ನಂಬಿಕೊಳ್ಳುತ್ತ ಬಂದಿದೆ. ಮುಂದೆ “ಮರಿಯಮ್ಮ”[3] ಸೇವಾಲಾಲರ ಕನಸಿನಲ್ಲಿ ಬಂದು ಪೀಡಿಸತೊಡಗಿದಳು. ನೀನು ನನ್ನ ಭಕ್ತನಾಗು, ನಿನ್ನಂಥ ಸೇವಕನನ್ನು ಎಲ್ಲಿಯೂ ಕಾಣಲಾರೆ ಎಂದು ಹೇಳುತ್ತಾಳೆ. ಸೇವಾಲಾಲ, ಮರಿಯಮ್ಮಳ ಮಾತಿಗೆ ಒಪ್ಪದೆ ತನ್ನ ತಾಯಿ-ತಂದೆಯ ಸೇವೆಯಲ್ಲಿ ತೊಡಗುತ್ತಾನೆ. ಕೋಪಗೊಂಡ ಮರಿಯಮ್ಮ ಭಾಣಾಭಾಯಿಗೆ ಹಸುಗೂಸು ಇರುವಾಗಲೇ ಸಾಯಿಸಿಬಿಡುತ್ತಾಳೆ. ಧನ ಧಾನ್ಯ ಸಂಪತ್ತನ್ನೆಲ್ಲ ಸೂರೆಮಾಡಿ (ನಾಶ ಮಾಡಿ) ಅನ್ನಕ್ಕೂ ಗತಿಯಿಲ್ಲದಂತೆ ಮಾಡುತ್ತಾಳಂತೆ. ಛಲಗರನಾದ ಸೇವಾಲಾಲ ಯಾವುದೇ ಬಗೆಯ ಕಷ್ಟ ನಷ್ಟಗಳಿಗೆ ಹೆದರದೆ ಹುಲ್ಲಿನ ಮಾರಾಟಕ್ಕೆ ನಿಲ್ಲುತ್ತಾನೆ. ಬಂಜಾರಾ ಗೀತೆಗಳಲ್ಲಿ ಬರುವ ಉಲ್ಲೇಖವನ್ನು ನೋಡಬಹುದು :

“ಶಿರ್ಶಿ ಕೋಟಾಮ ಖಡವೇಚನ
ಹಾಟಕಿದೋರ ಘಂವು ಚಾವಳೇರಿ
ಮೋಲ ಲಾಯೋರ ಕಾಳಿ ಪಾಟೇನ”

ಅರ್ಥ : ಶಿರ್ಶಿ ಕೋಟಾದ ಸಂತೆಯಲ್ಲಿ ಹುಲ್ಲು ಮಾರಿ ಗೋಧಿ, ಅಕ್ಕಿ ಮತ್ತು ಕರಿ ಮೇಕೆಯ ಮರಿಯನ್ನು ಕೊಂಡು ತರುತ್ತಾನೆ.

ಮರಿಯಮ್ಮಳ ಮೇಲೆ ಸೇವಾಲಾಲನಿಗೆ ನಿಧಾನವಾಗಿ ಭಕ್ತಿ ಮೂಡುತ್ತದೆ. ಕೊನೆಗೆ ಮರಿಯಮ್ಮಳ ಭಕ್ತನಾಗುತ್ತಾನೆ. ಸೇವಾಲಾಲನ ಗೋವು-ಧನ-ಧಾನ್ಯ ಎಲ್ಲವೂ ಮರಳಿ ಬರುವಂತೆ ಮರಿಯಮ್ಮ ಆಶೀರ್ವದಿಸುತ್ತಾಳೆ. ಶಿರ್ಶಿ ಕೋಟಾ, ಸೂರಗೊಂಡನಕೊಪ್ಪ ಈ ಪ್ರದೇಶಗಳಲ್ಲಿ ಸೇವಾಲಾಲ ಅನೇಕ ಪವಾಡ ಮಾಡಿದನೆಂದು ತಿಳಿದು ಬರುತ್ತದೆ. ಉದಾ : ಕರಿಮಣ್ಣಿನಿಂದ (ಕಾಳಿಧೂಡೇರ ಶಿರಾ ಬಣಾನ) ಶಿರಾ ತಯಾರಿಸಿದ್ದು ಇತ್ಯಾದಿ.

ಸೇವಾಲಾಲನ ತಂಡವು, ಸೂರಗೊಂಡನಕೊಪ್ಪದಿಂದ ಬಳ್ಳಾರಿಗೆ ಬಂದಾಗ, ಅಲ್ಲಿ ಸೇವಾಲಾಲನ ಚಿಕ್ಕಪ್ಪ “ಹೇಮಾ ನಾಯಕ” ಬಳ್ಳಾರಿ ಜಿಲ್ಲೆಯ ಕೋಮರನಹಳ್ಳಿ ಸಮೀಪದ “ಖಮದರ ನಾಯಕ ತಾಂಡಾ”ದಲ್ಲಿ ನೆಲೆಸಿದನೆಂದು ವಕ್ತೃಗಳು ಹೇಳುತ್ತಾರೆ. ಗುತ್ತಿ ಸಮೀಪದಲ್ಲಿ ಬಹಳ ದಿನಗಳವರೆಗೆ ಸೇವಾಲಾಲ ಮತ್ತು ಅವನ ತಂಡದವರು ಇದ್ದರು. ಈ ಗುತ್ತಿ ಸಮೀಪದಲ್ಲಿ ಗೋವುಗಳಿಗೆ ಮೇವಿನ ಮತ್ತು ನೀರಿನ ಅನುಕೂಲ ಆಗಿರಬೇಕು. ಆದ್ದರಿಂದ ಬಹಳ ವರ್ಷಗಳವರೆಗೆ ಇಲ್ಲಿ ಸೇವಾಲಾಲ ಪೂರ್ವಜರು ವಾಸಿಸಿದ್ದರು. ಬಹುಶಃ ಸೇವಾಲಾಲರ ಅಜ್ಜ ರಾಮಜಿ ನಾಯಕ ಈ ಸ್ಥಳದಲ್ಲಿಯೇ ತೀರಿಕೊಂಡಿರಬೇಕು. ಕೆಲವು ದಿನಗಳಾದ ಮೇಲೆ ಭೀಮಾ ನಾಯಕ ಗುಂತಕಲ್, ಉರುವುಕೊಂಡ ಸಮೀಪದ ಕದರಪಲ್ಲಿ (ಕೊಡಪಲ್ಲಿ, ಖೇರಾಳಿ, ತಲಂಗಾಣ)ದಲ್ಲಿ ಉಳಿದರು.

ಸೇವಾಲಾಲ ತನ್ನ ಕುಟುಂಬದ ಸದಸ್ಯರು ಮತ್ತು ಭೀಲಾ ಕಾರಭಾರಿ, ರೂಪಾನಾಯಕ, ಸೋಮಾಭಂಗಿ, ಕೇಸಾ ಜಂಗಿ, ನಾತ್ಯಾ ವಡತ್ಯಾ, ಲಖಮಾ, ಸಕ್ಯಾ-ಪಟ್ಯಾ ಮುಂತಾದ ವ್ಯಕ್ತಿಗಳು ಗೋಪಾಲಕರೊಂದಿಗೆ ಕೂಡಿಕೊಂಡು ಸಾವಿರಾರು ಗೋವುಗಳ ಜೊತೆಗೆ ಹೈದ್ರಾಬಾದಕ್ಕೆ ಹೋಗುತ್ತಾರೆ. ನಿಜಾಮ ಸಂಸ್ಥಾನಿಕರೊಂದಿಗೆ ಕೆಲವು ಒಪ್ಪಂದಗಳ ಸಂಬಂಧ ವೈಮನಸ್ಸು ಬರುತ್ತದೆ. ಆದರೂ ಇವರು ನಿಜಾಮನ ಸಂಸ್ಥಾನಕ್ಕೆ ಹೋಗಿದ್ದಾಗ ಸೇವಾಲಾಲರ ಭಾವಚಿತ್ರ ತೆಗೆದುಕೊಂಡಿದ್ದಾರೆ.”[4] ಇದ್ದುದರಿಂದ ಸೇವಾಲಾಲರ ಭಾವಚಿತ್ರ”[5] ನಿಜಾಮ ಸಂಸ್ಥಾನದಲ್ಲಿ ದೊರೆತಿರುವುದನ್ನು ಈ ಸಂದರ್ಭದಲ್ಲಿ ಪ್ರಸ್ತಾಪಿಸಲಾಗಿದೆ. ಕೆಲವು ಬಂಜಾರಾ ಗೀತೆಗಳಲ್ಲಿ ಉಲ್ಲೇಖಗಳಿಂದ ಸ್ಪಷ್ಟವಾಗುವುದೇನೆಂದರೆ ನಿಜಾಮನು ಸೇವಾಲಾಲನಿಗೆ ಅಲೆಮಾರಿ ಗುಂಪಿನ ಒಬ್ಬ ಸಾಮಾನ್ಯ ಸಾಧು ಎಂದು ಭಾವಿಸಿದ್ದನು. ಸೇವಾಲಾಲ ಒಬ್ಬ ಪವಾಡಪುರುಷನೆಂದು ತಿಳಿದುಬಂದಾಗ ಅವರನ್ನು, ಸೈನಿಕರ ಮುಖಾಂತರ ಅರಮನೆಗೆ ಬರಲು ಆಮಂತ್ರಿಸುತ್ತಾನೆ. ನಿಜಾಮನ ಆಹ್ವಾನ ಸ್ವೀಕರಿಸಿ, ಅವರು ಕುದುರೆ (ಕುದುರೆಯ ಹೆಸರು ತೋಳರಾಮ) ಹತ್ತಿ ಅರಮನೆಗೆ ಹೋಗಿದ್ದರು ಎಂದು ಬಂಜಾರಾ ಗೀತೆಗಳಲ್ಲಿ ಪ್ರಸ್ತಾಪ ಬರುತ್ತದೆ. ಸೇವಾಲಾಲರ ತಂಡ ಹೈದರಾಬಾದದಲ್ಲಿ ಕೆಲವು ವರ್ಷಗಳವರಗೆ ಇದ್ದು ಪೇನಗಂಗಾ, ಗಂಗಾಖೇಡ ಮುಖಾಂತರ ಮಹಾರಾಷ್ಟ್ರದ ನಾಂದೇಡ ಕಡೆಗೆ ವಲಸೆ ಹೋಗುತ್ತಾರೆ.

ಪೇನಗಂಗಾ ನದಿ ತೀರಪ್ರದೇಶದಲ್ಲಿ ಮೂರು ದಿನಗಳ ಮುಕ್ಕಾಮ ಮಾಡುತ್ತಾರೆ. ಮೂರು ದಿನಗಳ ತುಂತುರು ಮಳೆಯಿಂದ ಸೇವಾಲಾಲರ ತಂಡಕ್ಕೆ ಮತ್ತು ಗೋವುಗಳಿಗೆ ಬಹಳ ತೊಂದರೆ ಆಗಿ ಜನ ಕಂಗಾಲಾಗುತ್ತಾರೆ. ಹೀಗಿರುವಾಗ ವ್ಯಾಪಾರದಿಂದ ದೊಡ್ಡ ಪ್ರಮಾಣದ ಸಂಪಾದನೆ ಮಾಡಿಸುವೆ ಭೀವಂಡಿ ಕಲ್ಯಾಣಕ್ಕೆ ಹೋಗೋಣ ಎಂದು ಮರಿಯಮ್ಮ ಸೇವಾಲಾಲನಿಗೆ ಪ್ರೇರೇಪಿಸುತ್ತಾಳೆಂದು ಒಂದು ಐತಿಹ್ಯದಲ್ಲಿ ಬರುತ್ತದೆ.

“ಗಳೇಮಾಯಿ ಮಾಳ ಕಮಲೇರೋ
ಭೀವಂಡಿ ಕಲ್ಯಾಣ ಲದಣಿರ ಜಾರೋ
ತೋಳಾ ರಾಮೇಪರ ಭಾಯಾರ ಮೂರ್ತಿ
ದೇವಿ ಸಾತ ಜಾರೀರ”

ಅರ್ಥ : ಸೇವಾಲಾಲನ ಕೊರಳಲ್ಲಿ ಕಮಲದ ಹಾರ, ಕುದುರೆ ಮೇಲೆ ಕುಳಿತಿದ್ದಾನೆ. ಭೀವಂಡಿ ಕಲ್ಯಾಣಕ್ಕೆ ವಲಸೆ ಹೋಗುತ್ತಿದ್ದಾಗ, ದೇವಿ ಮಾಯ ರೂಪದಲ್ಲಿ ಜೊತೆಗಿರುತ್ತಾಳೆ.

ಸೇವಾಲಾಲರ ತಂಡವು ದಟ್ಟ ಅಡವಿಯ ಮಾರ್ಗವಾಗಿ ಗೋವುಗಳ ಮೇಲೆ ಗಂಟು ಮೂಟೆಗಳನ್ನು ಹೇರಿಕೊಂಡು, ಭಯದ ವಾತಾವರಣದಲ್ಲಿ ಇಡೀ ದಿವಸ ಪ್ರಯಾಣ ಬೆಳೆಸುತ್ತಾರೆ. ಸಂಜೆಯಾದೊಡನೆ ನಂದಗಾಂವ ಸಮೀಪದ ಬಯಲಿನಲ್ಲಿ ಬೀಡಾರ ಹೂಡುತ್ತಾರೆ. ಮಧ್ಯರಾತ್ರಿಯಲ್ಲಿ ಭಿಲ್ ಆದಿವಾಸಿಗಳು ಬಂದು ಇವರ ಗೋವುಗಳಲ್ಲಿದ್ದ ಹೋರಿ(ಸಾಂಡ ಗರಾಸ್ಯಾ)ಯನ್ನು ಕದ್ದೊಯ್ಯುತ್ತಾರೆ. ಭಿಲ್ ಆದಿವಾಸಿಗಳು ಹೋರಿ ಕದ್ದೊಯ್ದ ವಿಷಯ ಗೊತ್ತಾದಾಗ, ಅವರ ಜೊತೆಗೆ ಕಾಳಗ ಮಾಡಿ ಜಯಿಸಿ ಹೋರಿಯನ್ನು ಮರಳಿ ತರುತ್ತಾರೆ.

ಗುಂಪಿನ ಜನರೊಡನೆ ನಾಶಿಕ ಮಾರ್ಗವಾಗಿ ಭೀವಂಡಿ ಕಲ್ಯಾಣಕ್ಕೆ ಬಂದು, ಅಲ್ಲಿ ದವಸ ಧಾನ್ಯಗಳನ್ನು ಅಗ್ಗದ ದರದಲ್ಲಿ ಖರೀದಿಸಿ, ಬೇರೆ ಬೇರೆ ಪ್ರದೇಶಗಳಿಗೆ ಒಯ್ದು ಮಾರುತ್ತಾರೆ. ಸುರತ್ ಮಾರ್ಗವಾಗಿ ಹೋಗುತ್ತಿದ್ದಾಗ, ರಾತ್ರಿ ವೇಳೆಯಲ್ಲಿ ಮೊಘಲರೊಂದಿಗೆ ಟಗರಿನ ಸಂಬಂಧ ಜಗಳವಾಗುತ್ತದೆ. ಸೇವಾಲಾಲರ ಹಿಂಡಿನಲ್ಲಿದ್ದ ಟಗರನ್ನು ಮೊಘಲ ಸೈನಿಕರು ಕದ್ದೊಯ್ದು ರಾತ್ರೋ ರಾತ್ರಿ ಕತ್ತರಿಸಿ ತಿಂದುಹಾಕುತ್ತಾರೆ. ಅಲ್ಲಿ ಸೂರತ್ ರಾಜನ ಜೊತೆ ಹೋರಾಟಕ್ಕಿಳಿದು ಜಯ ಸಾಧಿಸುತ್ತಾರೆ. ಮುಂದೆ ಸೇವಾಲಾಲರ ತಂಡ ಸೂರತದಿಂದ ಬೇರೆ ಬೇರೆ ಪ್ರದೇಶಗಳಿಗೆ ಹೋಗಿ ವ್ಯಾಪಾರ ಮಾಡುತ್ತಾರೆ.

ಸೇವಾಲಾಲ ಪವಾಡ ಪುರುಷನೆಂದು ಗೊತ್ತಾದಾಗ, ನರಸಿಂಗದಾದಾ ಎಂಬುವನು ಬಂಜಾರಾ ಯುವಕ ಚಿಂಗರ‍್ಯಾನಿಗೆ, ಬಂಜಾರಾ ಮಹಿಳೆಯ ಪೋಷಕ ತೊಡಿಸಿ, ಸೇವಾಲಾಲರ ಪವಾಡ ಬಯಲು ಮಾಡಬೇಕೆಂದು ಅವನ ಬಳಿ ಕರೆತರುತ್ತಾನೆ. ಚಿಂಗರ‍್ಯಾನಿಗೆ ಮದುವೆ ಆಗಿ ಹಲವು ವರ್ಷಗಳಾದವು ಮಕ್ಕಳಾಗಿಲ್ಲವೆಂದು ಹೇಳುತ್ತಾನೆ. ಸೇವಾಲಾಲ ಚಿಂಗರ‍್ಯಾನಿಗೆ ಆಶೀರ್ವದಿಸುತ್ತಾನೆ. ಚಿಂಗರ್ಯಾ ಸ್ತ್ರೀ ಆಗಿ, ಪುತ್ರ ಸಂತಾನ ಪಡೆಯುತ್ತಾನೆ ಎಂದು ಬಂಜಾರಾ ಗೀತೆಗಳಲ್ಲಿ ಮೂಡಿಬಂದಿದೆ.

ಸೇವಾಲಾಲ ಭಾರತದ ಬೇರೆ ಬೇರೆ ಪ್ರದೇಶಗಳಲ್ಲಿ ವ್ಯಾಪಾರ ಮಾಡುತ್ತಾ, ರಾಜ ಮಹಾರಾಜರುಗಳಿಗೆ ಅಷ್ಟೇ ಪ್ರಾಮಾಣಿಕವಾಗಿ ನಿಷ್ಠೆಯಿಂದ ಸೇವೆ ಸಲ್ಲಿಸುತ್ತ ಉತ್ತರ ಭಾರತದ ವಿವಿಧ ಪ್ರದೇಶಗಳಲ್ಲಿ ಸಂಚರಿಸುತ್ತಾನೆ. ತಮ್ಮ ಇಳಿವಯಸ್ಸಿನಲ್ಲಿ ಮಹಾರಾಷ್ಟ್ರದ ಭೌಗೋಳಿಕ ಪ್ರದೇಶಗಳಲ್ಲಿ ಸಂಚರಿಸಿ, ಅಕೋಲಾ, ಪುಸದ, ಮನೋರಾ, ದಿಗ್ರಸ ಮಾರ್ಗವಾಗಿ ರೂಯಿಗಡ ಎಂಬಲ್ಲಿಗೆ ತಲುಪಿಸಿದರು. ಅಲ್ಲಿಯ ಗುಡ್ಡಗಾಡು ಪ್ರದೇಶ ಸೇವಾಲಾಲರಿಗೆ ಮೆಚ್ಚುಗೆ ಆಯಿತು. ಗೋವುಗಳನ್ನು ಮೇಯಿಸಲಿಕ್ಕೆ ಅನುಕೂಲವಾದ ಗುಡ್ಡಗಾಡು ಪ್ರದೇಶವೆಂದು ತಿಳಿದು, ಭೂರಿ ಪಟಾರದ (ಪೋಹರಾದೇವಿ) ಮೇಲೆ ತಾಂಡಾ ಕಟ್ಟಿಕೊಂಡು ನೆಲೆಸಿದರು.”[6]

ಮರಿಯಮ್ಮ ಸೇವಾಲಾಲ ಸ್ವರ್ಗಕ್ಕೆ ಹೋದದ್ದು:

ಒಂದು ದಂತಕಥೆಯ ಪ್ರಕಾರ ಸೇವಾಲಲ ತಮ್ಮ ಜೀವನದ ಮುಕ್ಕಾಲು ಭಾಗವನ್ನು ಮರಿಯಮ್ಮಳಸೇವೆ, ಜನಸೇವೆ ಮತ್ತು ಗೋವುಗಳ ಸೇವೆ ಮಾಡುವುದರಲ್ಲಿಯೇ ಕಳೆಯುತ್ತಾನೆ. ಇವನು ಜನರಿಗೆ ವಿವಿಧ ಬಗೆಯ ನೆರವು ನೀಡಿದನು. ಆಗ ಜನ, ಮರಿಯಮ್ಮಳಿಗೆ ಬಿಟ್ಟು ಸೇವಾಲಾಲನಿಗೆ ಹೆಚ್ಚು ಪೂಜೆ ಮಾಡತೊಡಗಿದರು. ಮರಿಯಮ್ಮಳಿಗೆ ಇರಿಸು ಮುರಸು ಆಗಿ ಸೇವಾಲಾಲನ ಪ್ರಭಾವ ಕಡಿಮೆ ಮಾಡಬೇಕೆಂದು ಅವನಿಗೆ ಮದುವೆ ಮಾಡಿಸಿ ಬ್ರಹ್ಮಚಾರಿ ವೃತ ಮುರಿಯಲು ಸಂಚು ಹೂಡುತ್ತಾಳೆ. ಸೇವಾಲಾಲ ತನ್ನ ಮನಸ್ಸು ದೀನದಲಿತರಿಗೆ ಮತ್ತು ಗೋವುಗಳ ಸೇವೆಯಲ್ಲಿ ತೊಡಗಿರುವುದರಿಂದ ತಾನು ಎಂದೂ ಸಂಸಾರಸ್ಥ ಆಗಲಾರೆ ಎಂದು ದೃಢ ಸಂಕಲ್ಪ ಮಾಡಿದ. ಸಮಸ್ತ ಬಂಜಾರಾ ಹೆಣ್ಣು ಮಕ್ಕಳಿಗೆ ತಾನು ಭಾಯಿ (ಸಹೋದರ) ಆದ್ದರಿಂದ ಮದುವೆ ಅನ್ನುವುದು ತನ್ನ ಜೀವನದಲ್ಲಿ ಇಲ್ಲವೆಂದು ಹೇಳುತ್ತಾನೆ. ಇಬ್ಬರಲ್ಲಿ ವಾಗ್ವಾದ ಆಗಿ ಅಂತಿಮ ತೀರ್ಮಾನಕ್ಕಾಗಿ ಸ್ವರ್ಗಕ್ಕೆ ಹೋಗಲು ನಿರ್ಧರಿಸಿದ ದೇವಸ್ಥಾನಕ್ಕೆ ಬರುತ್ತಾರೆ.

ಸೇವಾಲಾಲ ತನ್ನ ಸಹೋದರರನ್ನು ಕರೆದು ಬೇವಿನ ಸೊಪ್ಪುಗಳನ್ನು ತರಿಸಿ ಅದರ ಹಾಸಿಗೆ ಮಾಡಿಸುತ್ತಾನೆ. ಸ್ವರ್ಗಕ್ಕೆ ಹೋಗುವ ಪೂರ್ವದಲ್ಲಿ ನಾಲ್ಕು ನಿಯಮಗಳನ್ನು ಪಾಲಿಸಲು ಹೇಳುತ್ತಾನೆ.

೧) ಬೇವಿನ ಸೊಪ್ಪುಗಳ ಮೇಲಿಂದ ತಾನು ತಾನಾಗಿಯೇ ಏಳುವವರೆಗೆ ತನ್ನನ್ನು ಯಾರೂ ಮುಟ್ಟಬಾರದು.

೨) ಸ್ವರ್ಗದಿಂದ ಹಿಂತಿರುಗಿ ಬರುವವರೆಗೆ ನಾಲ್ಕು ಮೂಲೆಗಳಲ್ಲಿ ದೀಪ ಉರಿಯುತ್ತಿರಬೇಕು.

೩) ಮೂರು ದಿನಗಳವರೆಗೆ ತನ್ನ ಸುತ್ತ ಭಜನೆ ಮೇಳಗಳು ನಡೆದಿರಬೇಕು.

೪) ತಾನು ಸ್ವರ್ಗಕ್ಕೆ ಹೋದ ವಿಷಯ ಹೆತ್ತ ತಾಯಿಗೆ ಗೊತ್ತಾಗಬಾರದು.

ಬೇವಿನ ಸೊಪ್ಪುಗಳಿಂದ ತನ್ನನ್ನು ಸಂಪೂರ್ಣವಾಗಿ ಮುಚ್ಚುವಂತೆ ಮಾಡಿ ಸುತ್ತ ಲೋಬಾನದ ಹೊಗೆಯಾಡುತ್ತಿರಬೇಕು ಎಂದು ಹೇಳಿ, ಸೊಪ್ಪಿನ ಹಾಸಿಗೆಯ ಮೇಲೆ ಮಲಗುತ್ತಾನೆ. ಮರಿಯಮ್ಮಳ ಜೊತೆ ದೇವಲೋಕಕ್ಕೆ ಬಂದು ತಾವು ಬಂದ ವಿಷಯ ರಾಮನ ಬಳಿ ಪ್ರಸ್ತಾಪಿಸಿದರು. ರಾಮ ಸೇವಾಲಾಲನನ್ನು ಕೇಳಿದಾಗ, ತಾನು ಬ್ರಹ್ಮಚಾರಿ ತನಗೆ ಮದುವೆ ಅನ್ನುವುದೆ ಇಲ್ಲವೆಂದು ಹೇಳುತ್ತಾನೆ. ರಾಮನ ಸೂಚನೆಯಂತೆ ಬ್ರಹ್ಮನು ಸೇವಾಲಾಲರ ಹಣೆಬರಹ ಪರೀಕ್ಷಿಸುತ್ತಾನೆ. ಸೇವಾಲಾಲನಿಗೆ ಮದುವೆ ಅನ್ನುವುದೇ ಇಲ್ಲವೆಂದು ಮರಿಯಮ್ಮಳಿಗೆ ಹೇಳುತ್ತಾನೆ. ಕೊನೆಗೂ ಸೇವಾಲಾಲನ ಮಾತು ನಿಜವಾಯಿತೆಂದು ಮರಿಯಮ್ಮ ಒಂದು ಉಪಾಯ ಹೂಡುತ್ತಾಳೆ. ಸ್ವರ್ಗದಲ್ಲಿ ನನ್ನ ಸಹೋದರಿಯರು ಇದ್ದಾರೆ. ಅವರನ್ನು ಭೆಟ್ಟಿ ಆಗಿ ಬರುತ್ತೇನೆ. ನಾನು ಬರುವವರೆಗೆ ಸಮಾಧಾನದಿಂದ ಕುಳಿತುಕೋ ಎಂದು ಸೇವಾಲಾಲನಿಗೆ ಹೇಳಿ ಮರಿಯಮ್ಮ ಭೂಲೋಕಕ್ಕೆ ಬರುತ್ತಾಳೆ. ಭೂಲೋಕಕ್ಕೆ ಬಂದು ಸೇವಾಲಾಲನ ತಾಯಿ ಧರ್ಮಣಿಯ ಹತ್ತಿರ ಸೇವಾಲಾಲ ನಿಧನ ಹೊಂದಿದ ವಿಷಯ ಹೇಳಿ ದಿಗ್ಭ್ರಮೆಗೊಳಿಸುತ್ತಾಳೆ.

ಸೇವಾಲಾಲ ನಿಧನ ಹೊಂದಿದ ವಿಷಯ ತಾಯಿ ಧರ್ಮಣಿಗೆ ಗೊತ್ತಾಗುತ್ತಿದ್ದಂತೆ ಮುಗಿಲೇ ತಲೆಯ ಮೇಲೆ ಬಿದ್ದಂತಾಯಿತು. ಹೆತ್ತ ಕರುಳು ತಡೆಯದೆ ದೇವಸ್ಥಾನದ ಕಡೆಗೆ ರೋಧಿಸುತ್ತ ಧಾವಿಸಿ ಸೇವಾಲಾಲರ ದೇಹಸ್ಪರ್ಶಿಸಲು ಮುಂದಾಗುತ್ತಾಳೆ. ಹಾಂಪಾ, ಬದ್ದು ಇಬ್ಬರು ದೇಹಸ್ಪರ್ಶ ಮಾಡದಂತೆ ತಾಯಿ ಧರ್ಮಣಿಯನ್ನು ತಡೆಯುತ್ತಾರೆ. ದೂರದಲ್ಲಿ ನಿಂತು ನೋಡುತ್ತಿದ್ದ ಮರಿಯಮ್ಮ ಅಲ್ಲಿಯೂ ವಿಫಲಳಾದೆ ಎಂದು ತಿಳಿದು, ಕೊನೆಗಳಿಗೆಯಲ್ಲಿ ಹಾರಾಡುವ ಚಿಟ್ಟೆಯಾಗಿ ದೇವಸ್ಥಾನ ಪ್ರವೇಶಿಸಿ ದೀಪ ಆರಿಸುತ್ತಾಳೆ. ದೀಪಗಳು ಆರಿದೊಡನೆ ಹಾಂಪಾ ಬದ್ದು ತಾಯಿಯನ್ನು ಬಿಟ್ಟು ದೀಪ ಹಚ್ಚಲು ಮುಂದಾಗುತ್ತಾರೆ. ಇತ್ತ ಧರ್ಮಣಿ ಬೇವಿನ ಸೊಪ್ಪಿನಲ್ಲಿದ್ದ ಸೇವಾಲಾಲರ ಶರೀರದ ಮೇಲೆ ಬಿದ್ದು ರೋಧಿಸುತ್ತಾಳೆ. ಧರ್ಮಣಿ ದೇಹಸ್ಪರ್ಶ ಮಾಡಿದಾಗ ಸೇವಾಲಾಲರ ದೇಹವು ಮೂರು ಬಾರಿ ನೆಗೆದು ಪ್ರಾಣಪಕ್ಷಿ ಹಾರಿಹೋಗುತ್ತದೆ.

ಇವೆಲ್ಲ ಈ ರೀತಿಯ ಅನೇಕ ದಂತಕಥೆಗಳು ಸೇವಾಲಾಲರ ಸುತ್ತ ಹುಟ್ಟಿಕೊಂಡಿವೆ. ಇವು ಎಷ್ಟರ ಮಟ್ಟಿಗೆ ಸತ್ಯ, ಎಷ್ಟರ ಮಟ್ಟಿಗೆ ವಾಸ್ತವ ಎಂದು ಹೇಳುವುದು ತುಂಬಾ ಕಠಿಣವಾಗಿದೆ. ಏಕೆಂದರೆ ಬಂಜಾರು ಬುಡಕಟ್ಟು ಈ ವಿಷಯಗಳನ್ನು ನಂಬುತ್ತಾರೆ. ಆದ್ದರಿಂದ ಇವುಗಳನ್ನು ಹೇಳದೆ ವಿಧಿ ಇಲ್ಲ. ಹೇಳದೆ ಬಿಟ್ಟರೆ ಬಂಜಾರಾ ಜನರ ನಂಬಿಕೆಗೆ ಚ್ಯುತಿ ಬರುತ್ತದೆ. ಕಾರಣ ಸೇವಾಲಾಲರ ಜೀವನಕ್ಕೆ ಸಂಬಂಧಪಟ್ಟಂತೆ ಈ ಕೆಲವು ಪವಾಡಸದೃಶ ಘಟನೆಗಳನ್ನು ಹೇಳಲೇಬೇಕಾಗುತ್ತದೆ.

“ಲಿಂಬ ಚಾಂದಣೇರಿ ಡೋಲಿ ಭಾಂದನ
ಲೇಯಿಜಾರೇ ಪೋಹರಾಗಡೇನ
ಲಾಖಲೋಕ ವೋರ ಸೋಬತನ”

ಅರ್ಥ: ಬೇವು ಮತ್ತು ಶ್ರೀಗಂಧದ ಕಟ್ಟಿಗೆಗಳಿಂದ ತಯಾರಿಸಿದ ಡೋಲಿಯಲ್ಲಿ ಸೇವಾಲಾಲರ ಕಳೇಬರ ಪೋಹರಾದೇವಿಗೆ ಹೊತ್ತೊಯ್ದರು.

ಸೇವಾಲಾಲ ಭೂರಿಪಟಾರ (ಪೋಹರಾದೇವಿ)ದ ಮೇಲೆ ಗೋವುಗಳನ್ನು ಕಾಯುತ್ತಿದ್ದ ಜಾಗದಲ್ಲಿ, ಶ್ರೀಗಂಧದ ಕಟ್ಟಿಗೆಯಲ್ಲಿ ಅಂತ್ಯಸಂಸ್ಕಾರ ಮಾಡಿದರು. ಸಾವಿರಾರು ಜನ ತಮ್ಮ ನೆಚ್ಚಿನ ನಾಯಕನಿಗೆ ಅಂತಿಮ ನಮನ ಸಲ್ಲಿಸಿದರು. ಸೇವಾಲಾಲ ಉರಿಯುತ್ತಿರುವ ಬೆಂಕಿಯ ಮಧ್ಯದಿಂದ ಬಾನುಲಿ ಮುಖಾಂತರ-

“ಸಾತ ಪೀಡಿಮಾಯಿ ಅವತಾರಲೀಂವು
ಚೌದ ಪೀಡಿಮಾಯಿ ಗುತ್ತಿಬಲ್ಲಾರಿಮ
ಘರ ಜಲಮಲೀಂವು”

ಅರ್ಥ: ಏಳನೆಯ ತಲೆಮಾರಿನಲ್ಲಿ ಅವತಾರ ತಾಳುತ್ತೇನೆ. ಹದಿನಾಲ್ಕನೆಯ ತಲೆಮಾರಿನಲ್ಲಿ ಗುತ್ತಿಬಲ್ಲಾರಿಯ ಪೂರ್ವದ ಮನೆತನದಲ್ಲಿ ಮರುಜನ್ಮ ಪಡೆಯುವೆ ಎಂದು ಸಂದೇಶ ನೀಡಿದನು ಎಂದು ನಂಬಲಾಗುತ್ತದೆ; ಮತ್ತು ಹೇಳಲಾಗುತ್ತದೆ.

ಸೇವಾಲಾಲ ಒಬ್ಬ ಸಂತನಾಗಿ ಇಡೀ ಬಂಜಾರಾ ಸಮುದಾಯಕ್ಕೆ ಒಬ್ಬ ಪ್ರಿಯ “ಭಾಯಾ” (ಸಹೋದರ) ಆಗಿದ್ದರು. ನಮ್ಮ ದೇಶದಲ್ಲಿ ರೈಲುಗಳ ಸಂಚಾರ ಇರದಂಥ ಕಾಲದಲ್ಲಿ ತಮ್ಮ ಸಾವಿರಾರು ಗೋವುಗಳ ಮೇಲೆ ಬಂಜಾರಾ ಬುಡಕಟ್ಟಿನವರ ಜೊತೆಗೆ, ದೇಶದ ವಿವಿಧ ಪ್ರದೇಶಗಳಲ್ಲಿ ಸಂಚರಿಸಿ ಸಾಮಾನು ಸರಂಜಾಮುಗಳನ್ನು ಸಾಗಿಸುತ್ತಿದ್ದರು. ದುಡಿಯುವ ಮಾರ್ಗದ ಧರ್ಮ ಬೋಧನೆ ಮಾಡುತ್ತ ಈ ಬುಡಕಟ್ಟು ಪ್ರಗತಿ ಕಾಣುವಲ್ಲಿ ಶ್ರಮಿಸಿದರು. ಇವರ ಕೊಡುಗೆ ಬಂಜಾರಾ ಸಮಾಜಕ್ಕೆ ಮಾತ್ರ ಸೀಮಿತವಾಗಿರದೆ, ಅಖಂಡ ಮಾನವ ಸಮಾಜಕ್ಕೆ ಆದರ್ಶವಾಗಿದೆ. ಏಕೆಂದರೆ ದುಡಿಮೆಯಿಲ್ಲದೆ ಮಾನವ ಜನಾಂಗವು ಪ್ರಗತಿಯನ್ನು ಕಾಣಲಾರದು; ಶ್ರೇಯಸ್ಸನ್ನು ಹೊಂದಲಾರದು. ಆದ್ದರಿಂದ ಸೇವಾಲಾಲರ ಜೀವನದಿಂದ ನಾವು ಕಲಿಯಬೇಕಾದ ಪಾಠವೆಂದರೆ ದುಡಿಮೆಯೇ ಸರ್ವಶ್ರೇಷ್ಠ; ಕೆಲಸ ಮಾಡುತ್ತಲೇ ಇರಬೇಕು. “ಕಾಯಕವೇ ಕೈಲಾಸ” ಎನ್ನುವ ಹನ್ನೆರಡನೆಯ ಶತಮಾನದ ಬಸವಣ್ಣನವರ ಮಾತನ್ನು ಇದು ನೆನಪಿಗೆ ತಂದುಕೊಡುವುದಿಲ್ಲವೆ? ಹಾಗಾಗಿ ಇದೇ ಸೇವಾಲಾಲರ ಜೀವನ ಸಂದೇಶವಾಗಿದೆ.

ಸೇವಾಲಾಲ ಒಬ್ಬ ಸಮಾಜ ಸುಧಾರಕ ಆಗಿದ್ದರೆಂಬುದು ಬಹಳ ಮಹತ್ವದ ಸಂಗತಿ. ತಾವು ಬದುಕುವುದರ ಜೊತೆಗೆ ತಮ್ಮ ಸಾವಿರಾರು ಕುಟುಂಬದವರಿಗೆ ಧರ್ಮಬೋಧನೆ ಮಾಡಿ ದುಡಿದು ಬದುಕಲು ತಿಳಿಸಿದರು.

ಆದರೆ ಕೇವಲ ಬಂಜಾರಾ ಬುಡಕಟ್ಟಿಗೆ ಮಾತ್ರ ಸೀಮಿತವಾಗಿರದ “ಸಂತ ಸೇವಾಲಾಲ”ರ ವಿಷಯ ಅಖಿಲ ಭಾರತ ಮಟ್ಟದ ಅಧ್ಯಯನಕ್ಕೆ ವಸ್ತು, ಭಾರತದ ವಿಭಿನ್ನ ಪ್ರದೇಶಗಳಲ್ಲಿ ಹರಡಿರುವ ಬಂಜಾರಾ ಬುಡಕಟ್ಟಿನ ಲಭ್ಯವಿರುವ ಎಲ್ಲ ಸಾಹಿತ್ಯ ಸಂಗ್ರಹಿಸಬೇಕು. ಆದರೆ ಅದು ಅಷ್ಟುಸುಲಭದ ಕಾರ್ಯವಂತೂ ಖಂಡಿತ ಅಲ್ಲ. ಮೌಖಿಕ ಪರಂಪರೆ ಮತ್ತು ಲಭ್ಯವಿರುವ ಲಿಖಿತ ಪರಂಪರೆಗಳಲ್ಲಿ ಸೇವಾಲಾಲರ ಬದುಕಿನ ಸಂಗತಿಗಳನ್ನು ಹೆಕ್ಕಿ ತೆಗೆದು, ಆತ ಹೇಗೆ ಒಬ್ಬ “ಸಾಂಸ್ಕೃತಿಕ ವೀರ” ಎನ್ನುವುದನ್ನು ವಿವೇಚಿಸಬೇಕು ಅಂಥ ಕಾಲ ಬೇಗ ಬರಲಿ ಎಂದು ಅಪೇಕ್ಷಿಸುತ್ತೇನೆ.

ಸೇವಾಲಾಲರನ್ನು ಸುತ್ತುವರೆದ ಎಲ್ಲ ದಂತಕಥೆ ಪವಾಡಗಳಿಂದ ಬಿಡಿಸಿಕೊಂಡು ಬಂದಾಗ, ಅವರ ಜೀವನ ಇಂದಿಗೂ ಪ್ರಸ್ತುತವಾಗಿದೆ. ಏಕೆಂದರೆ ಅವರು ಸದಾ ದುಡಿಮೆಯನ್ನೇ ನಂಬಿದವರು, ಶ್ರಮಜೀವಿಗಳು ಮತ್ತು ಪ್ರಾಣಿ ದಯಾಪರರು. ಅವರಿಗೆ ದನಕರುಗಳ ಮೇಲೆ ಇದ್ದ ಪ್ರೀತಿ ಅಪಾರ.

ಈ ದೃಷ್ಟಿಯಿಂದ ಸೇವಾಲಾಲರ ಜೀವನವೆಂದರೆ ದುಡಿಮೆಯ ಜೀವನದ ಶ್ರಮಜೀವನ. ಇದು ಮಾನವತೆಗೆ ಬಹಳ ಅಗತ್ಯವಾದ ಸಂದೇಶವೂ ಕೂಡ. ಮಾನವ ಸಮಾಜ ದುಡಿಯುತ್ತಲೇ ಇರಬೇಕು. ಮನುಷ್ಯ ತಾನು ಪ್ರಾಣಿ ದಯಾಪರನಾಗಿರಬೇಕು. ದೀನದಲಿತರಿಗೆ ತನ್ನಿಂದಾದಷ್ಟು ಸಹಾಯ ಸಲ್ಲಿಸಬೇಕು. ಇದೇ ಮಾನವ ಜೀವನಕ್ಕೆ ಸೇವಾಲಾಲರು ನೀಡುವ ಸಂದೇಶ.

* * *


*     “ಕರ್ನಾಟಕ ಭಾರತಿ” ಸಂಪಾದಕರು : ಡಾ. ಕೆ.ಆರ್. ದುರ್ಗಾವಾಸ, ಸಂಪುಟ-೩೪, ಸಂ.೧-೨, ಪ್ರಸಾರಾಂಗ, ಕವಿವಿ, ಧಾರವಾಡ ೨೦೦೭, ನಿಯತಕಾಲಿಕೆಯಲ್ಲಿ ಪ್ರಕಟವಾದ ಲೇಖನ.

[1]     ಹಾಗೆ ನೋಡಿದರೆ ಆಧುನಿಕ ಜನಪದ ವಿಜ್ಞಾನಿಗಳು ಅವತಾರಗಳನ್ನು ನಂಬುವುದಿಲ್ಲ. ಆದರೆ ಸೇವಾಲಾಲನು ಅವತಾರಿ ಪುರುಷನೆಂದು ಈ ಅಲೆಮಾರಿ ಗುಂಪು ನಂಬಿಕೊಂಡು ಬಂದಿದೆ. ಏಕೆಂದರೆ ಬಂಜಾರಾಗಳು ಹಾಡುವ ಮೌಖಿಕ ಪರಂಪರೆಯ ಅವರ ಹಾಡು ಮತ್ತು ಭಜನೆಗಳಲ್ಲಿ ಪವಾಡದ ವಿಷಯ ಹೇರಳವಾಗಿ ಕಂಡುಬರುತ್ತದೆ. ಅದರಂತೆ ಸ್ತುತಿ, ಭಜನೆ ಇತ್ಯಾದಿ ಗೀತೆಗಳನ್ನು ಬಂಜಾರಾ ಬುಡಕಟ್ಟು ಹಾಡುತ್ತ ಬಂದಿದೆ.

[2]     ಈ ದೃಷ್ಟಿಯಿಂದ “ಲವಣ” ಶಬ್ದದಿಂದ ಲವಣಿಯರು ಆಡುವ ಮಾತಿನಲ್ಲಿ ಲಮಾಣಿ, ಲಮಾಣಿಯರು ಎನ್ನುವ ರೂಪ ಬಂದಿದೆ ಎಂದು ಹೇಳಬಹುದು ಮತ್ತು ಇದು ಸೂಕ್ತವೆನಿಸುತ್ತದೆ. ಕೆಲವು ಕಡೆ “ಲಮಾಣಿ” ಎನ್ನುವ ಶಬ್ದಕ್ಕೆ ಬೈಗುಳದ ಅರ್ಥವೂ ಬಂದಿದೆ. ಇದು ಕಡೆಗಣಿಸುವಂಥದ್ದು.

[3]     ಶಿರ್ಶಿ ಮಾರಿಕಾಂಬೆಯೇ ಮರಿಯಮ್ಮ ದೇವತೆ ಎಂದು ಬಂಜಾರು ಬುಡಕಟ್ಟು ನಂಬುತ್ತ ಬಂದಿದೆ.

[4]     “ಅಸಫ ಜಾಹಿ” ಮನೆತನದ ಒಬ್ಬ ವ್ಯಕ್ತಿ ಭಾಗಾಮತಿ ಎನ್ನುವ ಬಂಜಾರಾ ಯುವತಿಯನ್ನು ಪ್ರೇಮಿಸಿ ಮದುವೆಯಾದ ಸಂದರ್ಭವೊಂದನ್ನು ಹೇಳಲಾಗುತ್ತದೆ. ಹೀಗಾಗಿ ಹೈದ್ರಾಬಾದಿನ ಮೂಲ ಹೆಸರು “ಭಾಗ್ಯನಗರ” ಎಂದೇ ಇತ್ತೆಂದು ತಿಳಿದುಬರುತ್ತದೆ.

[5]     ಹೈದ್ರಾಬಾದಿನ ನಿಜಾಮ ಅರಸು ಮನೆತನದಲ್ಲಿ ಶ್ರೀ ಸೇವಾಲಾಲರ “ಭಾವಚಿತ್ರ” ಇದೆ ಎಂದು ಗೊತ್ತಾದಾಗ, ಶ್ರೀ ಚಂದ್ರಭಾನ ರಾಠೋಡ ನಿಜಾಮಾಬಾದ ಅವರು ಕಾರ್ಯಪ್ರವೃತ್ತರಾದರು. ಹಲವು ಬಾರಿ ನಿಜಾಮ ಅರಸು ಮನೆತನಕ್ಕೆ ಭೇಟಿಕೊಟ್ಟು, ಸೇವಾಲಾಲರ ಭಾವಚಿತ್ರ ತರುವಲ್ಲಿ ಯಶಸ್ವಿಯಾದರು. ಅಖಂಡ ಭಾರತದ ಬಂಜಾರಾ ಸಮಾಜಕ್ಕೆ ಸೇವಾಲಾಲರ ಭಾವಚಿತ್ರ ಪರಿಚಯಿಸಿದ ಕೀರ್ತಿ ಚಂದ್ರಭಾನರಿಗೆ ಸಲ್ಲುತ್ತದೆ.

[6]     ಸೇವಾಲಾಲನ ತಂದೆ ಭೀಮಾ ನಾಯಕ ಮರಣಿಸಿದ ಸಂಗತಿ ಎಲ್ಲಿಯೂ ತಿಳಿದು ಬರುವುದಿಲ್ಲ. ಆದ್ದರಿಂದ ಇಂದಿಗೂ ಅದೊಂದು ಒಗಟಾಗಿಯೇ ಉಳಿದಿದೆ.