ರಾಗಿಯ ಕಲ್ಲೆ ರಾಜ್ಯಕೆ ಹೆಚ್ಚಿನ ಕಲ್ಲು
ನಮ್ಮ ಅತ್ತಿಗೆ ನಾದಿನೀರು ಎದ್ದು | ಬೀಸೋಕಲ್ಲಿಗೆ
ಶಿವರಾಯ ಸ್ವಾಮಿ ನೆರಳಾಗೋ
ಬಾಳುವ ಮನೆಗೆ ಆನೆ ಅಂತೆ ರಾಗಿಕಲ್ಲು
ವಾರ್ ವಾರ್ಗಿತ್ತಿರಿಬ್ಬರೂವೆ ಎದ್ದು | ಬೀಸೋಕಲ್ಲಿಗೆ
ನಾರಾಯಣ ಸ್ವಾಮಿ ನೆರಳಾಗೋ
ತುಂಬೀದ ಮನೆಗೆ ಗುಂಬದಂತೆ ರಾಗಿಕಲ್ಲು
ದುಂಡೇರಿಬ್ಬರೂವೆ ಎದ್ದು | ಬೀಸೋಕಲ್ಲಿಗೆ
ನಂಜುಂಡಸ್ವಾಮಿ ನೆರಳಾಗೋ
ರಾಗಿ ಬೀಸೋಕಲ್ಲು ರಾಜ್ಯಕ್ಕೆ ಹೆಚ್ಚಿನಕಲ್ಲು
ನಮ ಮಾವನ ಮನೆಯ ಜೂಪಕಲ್ಲು | ಪಚ್ಚೆಕಲ್ಲು
ನಾ ಹಿಡಿದ ಕಲ್ಲು ತೆರೆ ಉಯ್ಯೋ
ಕಲ್ಲಾ ಬುಡ್ತಾಳಂದು ಕಡುಕೋಪ ನಿನಗ್ಯಾಕೆ
ಪುಟು ಕುಕ್ಕೇಲಿ ರವರತ್ನ | ತುಂಬ್ಕಂದು
ನಾಳೆ ಬೆಳಿಗೇಗೆ ಬರುವೇನು
ರಾಗಿ ದೇವರು ಬೇರಲ್ಲ ಬೆಳ್ಳಾಗೆ ತಾಳಸರು ತುದಿಗೆಂಪು
ನಾಳಿಸೋ ನಮ್ಮ ನಡುಮಲ್ಲಿ | ಹೋಗ್ವಾಗ
ಹಡಗೇಲಿ ಬರುವಾಗ ಬಂಡೀಲಿ
ಹೊಲದಲ್ಲಿ ಯಾಕೆ ಹೋರಾಟ ಬೇಗನೆ
ನಮ್ಮ ಮನೆಗೆ ಬಿಜಮಾಡೋ | ಹೋಗ್ವಾಗ
ಹೆಡಗೇಲಿ ಬರುವಾಗ ಬಂಡೀಲಿ
ಕಳದಲ್ಲಿ ಯಾಕೋ ಕಲಸಾಟ ರಾಜುಣವೇ
ಆಲಿಸೋ ನಮ ನಡು ಮನೇಲಿ |
ರಾಗಿ ಕಲ್ಲಾಡಿ ರಾಣೀರ ತೋಳಾಡಿ
ನಗರಾವಿನಾಂಗೆ ನಡುವಾಣಿ | ರಾಗಿಕಲ್ಲೆ
ನಿನ್ನೊಂದಿಗಾಡಿ ದಣಿವೇನೊ
Leave A Comment