ಸಂಗೊಳ್ಳಿ ರಾಯಣ್ಣನ ಗುಂಪಿನಲ್ಲಿ ಬೇಡರ ಬಾಬಾ ನಾಯಿಕನಿದ್ದನು; ಲಿಂಗಾಯಿತರ ಬಸಲಿಂಗಪ್ಪನಿದ್ದನು. ಮುಸಲ್ಮಾನರ ಅಪ್ಪುಗಾರೆ ದಾದಾಸಾಹೇಬನಿದ್ದನು. ಮರಾಠಾ ರಾಣೋಜಿ ಇದ್ದನು. ಜೈನರ ನೇಮಣ್ಣನಿದ್ದನು. ಬ್ರಿಟೀಶರು ಅವನನ್ನು ಪುಂಡರ ಪುಢಾರಿಯೆಂದು ನಾಮಕರಣ ಮಾಡುವವರೆಗೆ ಅವನ ಗುಂಪಿನಲ್ಲಿ ಅವನಿಗಿಂತ ಹಿರಿಯರು ಅನೇಕರಿದ್ದರು. ಅವರಲ್ಲಿ ೬೦ ವರುಷಗಳ ಸುತಗಟ್ಟಿಯ ಯಲ್ಲಾ ನಾಯಕ, ೫೦ ವರ್ಷಗಳ ಸಂಗೊಳ್ಳಿ ಬಾಬಾ ನಾಯಕ ಪ್ರಮುಖರಾಗಿದ್ದರು.

[1]

ರಾಯಣ್ಣನು ಬೆಳೆಯುತ್ತಿದ್ದಂತೆ ರಾಯಣ್ಣನ ಹೆಸರಿನಿಂದ ಕೆಲವು ಪುಂಡರು ತಳ್ಳಿ ಮಾಡತೊಡಗಿದರು. ಇದನ್ನು ನಿಗ್ರಹಿಸಲು ರಾಯಣ್ಣ ಪ್ರತ್ಯಕ್ಷವಾಗಿ ವೇಷಾಂತರ ಬದಲಿಸಿ, ಕಕ್ಕೇರಿಗೆ ಹೋದನು. ಇಡೀ ರಾತ್ರಿ ಬೇರೆ ಬೇರೆ ಓಣಿಗಳ ಭಾಗದಲ್ಲಿ ಅಡ್ಡಾಡಿ ಬಿಸ್ವವ್ವ ದೇವತೆಯ ಗುಡಿಗೆ ಬಂದನು. ಆಗಾಗ ಮಲಗಲು ಬಂದ ಜನ ರಾಯಣ್ಣನ ಬಗೆಗೆ ಒಳ್ಳೊಳ್ಳೆಯ ಮಾತುಗಳನ್ನಾಡುತ್ತಿದ್ದರು. ಮತ್ತೆ ರಾಯಣ್ಣ ದಂಡುಕಟ್ಟುತ್ತಿದ್ದಾನೆ. ಅವನಿಗೆ ನಮ್ಮ ತಾಯಿ ಬಿಸ್ಸವ್ವಮ ದಯೆ ಇದೆ ಎನ್ನುತ್ತಿದ್ದರು. ರಾಯಣ್ಣನು ಸಾಮಾನ್ಯ ಮನುಷ್ಯನಂತೆ ಕತ್ತಿಯನ್ನು ಟೊಂಕಕ್ಕೂ ಡಾಲನ್ನು ಬೆನ್ನಿಗೂ ಹಾಕಿಕೊಂಡು ಕಂಬಳಿ ಹೊದ್ದಿದ್ದನು.

ಬೆಳಗಿನ ಜಾವ ಕೋಳಿ ಕೂಗಿತು. ಗರತಿಯರು ಬೀಸುವ ಕಲ್ಲುಗಳಿಗೆ ಮುಕ್ಕು ಹಾಕಿ ಹಾಡಲು ಸುರು ಮಾಡಿದ್ದರು.

ಸಂಗೊಳ್ಳಿ ರಾಯಣ್ಣ ಹಂಗರಿದ ದಳವಾಯಿ
ದಂಗೆ ಎಬ್ಬಿಸ್ಯಾನ ನಾಡಾಂಗ | ಕಿತ್ತೂರ
ಕಂಗೆಟ್ಟ ಜನರು ಕೂಡ್ಯಾರs ||

ಚನ್ನಮ್ಮನ ನೆನದರ ದೇವಿಯ ನೆನದ್ಹಂಗ
ಚಿನ್ನ ಶೂರದ ಶಕ್ತಿಯ | ಬಿಷ್ಟವ್ವ ತಾಯಿ
ಚನ್ನಮ್ಮಗ ಯಶ ಕೊಡತಾಳs ||

ಸಂಗೊಳ್ಳಿ ರಾಯಣ್ಣ ಮಂಗ್ಯಾನ ಕುಲದವನ
ಟೊಂಗಿ ಟೊಂಗೆಲ್ಲ ಜಿಗದಾನ | ರಾಯಣ್ಣ
ಇಂಗರಜರಿಗೆ ಕೈಯ್ಯ ಕೊಟ್ಟಾನs ||

ರಂಗ ಕಿತ್ತೂರ ನಾಡ ಹೊಕ್ಕ ನೋಡೋಣ ಬಾರ
ಮೂಲೆ ಮೂಲೆಲ್ಲ ಕನ್ನಡಿ
| ಮಲಸರ್ಜ
ಮಾಲ ಕಟ್ಟಿಸಿ ಇರಲಿಲ್ಲ
s ||

ಹಿಂದೊಮ್ಮೆ ತಾನು ರಾತ್ರಿ ಸಂಚರಿಸುವಾಗ, ಸಂಪಗಾವಿಯಲ್ಲಿ ಗರತಿಯೊಬ್ಬಳು ಬೀಸುತ್ತ ರಾಯಣ್ಣನ ಗೌರವ ಸೂಸುವ ಹಾಡುಗಳನ್ನು ಕೇಳಿದ್ದನು. ನಂದಗಡದಲ್ಲಿ ಹಂತಿ ಹೊಡೆಯುವ ಒಕ್ಕಲಿಗರು ರಾಯಣ್ಣನ ಬಗೆಗೆ ಹಾಡು ಹಾಡುತ್ತಿರುವುದನ್ನು ಕೇಳಿದ್ದನ್ನೂ ಚಿಕ್ಕಂದಿನಲ್ಲಿ ತಾಯಿಯು ಬೀಸುವಾಗ ಕಿತ್ತೂರ ಅರಸರ ಬಗೆಗೆ, ಕಕ್ಕೇರಿ ಬಿಷ್ಟವ್ವನ ಬಗೆಗೆ ಹಾಡುವುದನ್ನು ಕೇಳಿದ್ದನು. ನಮ್ಮ ಜನ ಎಷ್ಟು ಸತ್ಯವನ್ನು ಈ ಹಾಡುಗಳಲ್ಲಿ ತುಂಬಿರುತ್ತಾರೆ ! ಎಂಬ ವಿಚಾರ ರಾಯಣ್ಣನಲ್ಲಿ ಮೂಡಿತು.  ತನಗೆ ಅರಿವಿಲ್ಲದೆ ಚಿಕ್ಕಂದಿನಲ್ಲಿ ಹಂತಿ ಹಾಡುಗಳನ್ನು ಹಾಡಿದ್ದು ತನಗೇ ನೆನಪಾಯಿತು.

ಹರೆಯದವನು ಎನ್ನಿಸಿಕೊಳ್ಳುವಾಗ, ಹುಲಿ ವೇಷ ಹಾಕಿ ಕುಣಿದಾಗ, ಹೋಳಿ ಪದಗಳ ನೆನಪು ಉಮ್ಮಳಿಸಿತು. ರಣಹಲಿಗೆಯ ಬಡಿಯುವ ಶಬ್ದ ಗುಣ ಗುಣಸಿತು. ಈಗ ತನ್ನೆಲ್ಲ ಲಕ್ಷ ಮದ್ದು-ಗುಂಡುಗಳ ಕಡೆಗೆ ಇದೆ. ಅದೇ ನಾದ, ಪಿರಂಗಿಯವರನ್ನು ಓಡಿಸುವ ಗುರಿಯೊಂದೇ. ಹಾಗೆ ಓಣಿಗಳಲ್ಲಿ ಹಾಯ್ದು ನಂದಗಡದ ಕಡೆಗೆ ಸಾಗಿದನು.

ಆಗ ಖಾನಾಪೂರದಲ್ಲಿ ಬ್ರಿಟೀಶರ ಒಂದು ಸೈನ್ಯವಿತ್ತು. ಮೇಜರ್ ಪಿಕರಿಂಗ ಅಲ್ಲಿನ ಸೈನ್ಯಾಧಿಕಾರಿ ಆಗಿದ್ದ. ರಾಯಣ್ಣ ಜನೇವರಿ ೯ ರ ರಾತ್ರಿ ೧೦ ಗಂಟೆಯ ಹೊತ್ತಿಗೆ ಆ ಸೈನಿಕ ಶಿಬಿರದ ಮೇಲೆ ದಾಳಿ ಮಾಡಿದನು. ಊರಿನೊಳಗೆ ನುಗ್ಗಿ ಲೂಟಿ ಮಾಡಿ ಗಡಕ್ಕೆ ಹಿಂದಿರುಗಿದನು. ಆ ವೇಳೆಗೆ ಅವನ ಸೇನೆಯ ಸಂಖ್ಯೆ ಮೂರು ಸಾವಿರದಷ್ಟು ಇತ್ತು. ಅವರೊಡನೆ ಇಟಗಿಗೆ ಹೋಗಿ ರಾಯಣ್ಣ ರೈತರಿಂದ ಐದು ಸಾವಿರ ರೂಪಾಯಿಗಳನ್ನು ಸಂಗ್ರಹಿಸಿದನು. ಸೈನ್ಯ ಪರಶವಾಡದ ಮೂಲಕ ಅಂಕಲಿಗಿಗೆ ಹೊರಟಿತು. ದಾರಿಯಲ್ಲಿ ಸಿಕ್ಕಿದ ಸರಕಾರಿ ಚಾವಡಿಗಳನ್ನೆಲ್ಲ ಸುಟ್ಟು ಹಾಕಲಾಯಿತು. ಅಂಕಲಗಿಯ ರಾಚೂಟಪ್ಪ ೫೦೦ ರೂಪಾಯಿ ಕಾಣಿಕೆಯ ಕೊಟ್ಟ. ಅಲ್ಲಿಂದ ಕ್ರಾಂತಿಕಾರರು ಹಡಲಗಿಗೆ ಬಂದರು.[2]

ಬಾಪು ಭಂಡಾರಿ ಎಂಬವನು ಆಗಲೇ ತಾನು ರಾಯಣ್ಣ ಕಡೆಯವನು ಎಂದು ಹೆಸರುವಾಸಿಯಾದ ಪುಂಡನಾಗಿದ್ದನು. ಈ ಪಂಡನು ತನ್ನ ಹಳೆಯ ಕೆಲವು ವೈರತ್ವಗಳನ್ನು ಸಾಧಿಸಲು ಆ ರೀತಿ ಹೇಳುತ್ತಿದ್ದನೆಂಬುದನ್ನು ರಾಯಣ್ಣನ ಬಂಟರು ತಿಳಿದಿದ್ದರು. ಹಡಲಗಿಯ ಜನರು ಬಹುಗೌರವದಿಂದ ರಾಯಣ್ಣನ ದಂಡನ್ನು ಕರೆದು ಹೋಳಿಗೆಯ ಊಟ ಹಾಕುವವರಿದ್ದರು. ರಾಯಣ್ಣ ಚೆನ್ನಮ್ಮನ ಬಲಗೈ ಬಂಟ, ಸಂಗೊಳ್ಳಿಯ ಶೂರ, ಆಂಗ್ಲರ ಗಂಡ,ಇತ್ಯಾದಿಯಾಗಿ ತಿಳಿದು ಅವರನ್ನೆಲ್ಲ ಗೌರವಿಸಬೇಕೆಂದೂ, ಕೆಲವರು ಅವನ ದಂಡಿನಲ್ಲಿ ಕೂಡಬೇಕೆಂದೂ ಗೊತ್ತು ಮಾಡಿದ್ದರು.

ಇಂತಹ ವಾತಾವರಣದಲ್ಲಿ ಬಾಪು ಭಂಡಾರಿಯು ಆ ಊರಿಗೆ ಕೊಳ್ಳೆಯನ್ನಿಟ್ಟು ಕೆಲವರ ಬಣಿವೆಗಳು, ದನಕರುಗಳು ಮಕ್ಕಳು ಸುಟ್ಟು ಹೋದವು. ರಾಯಣ್ಣನನ್ನು ಕಂಡು ಒಬ್ಬ ಹಿರಿಯನು ಏನಪ್ಪಾ ರಾಯಣ್ಣ ಎಂತಹ ಕೆಟ್ಟ ಕೆಲಸ ಮಾಡಿದೆ ನೀನು? ಎಂದು ಸಿಟ್ಟಿನಿಂದ ನುಡಿದನು.

ಆಗ ರಾಯಣ್ಣನು ‘ಈ ಕೆಲಸ ನನ್ನದಲ್ಲ, ಚೆನ್ನಮ್ಮನ ಆಣೆಗೂ ಈ ಕೆಲಸ ನನ್ನದಲ್ಲ? ಹರಹರ ಮಹಾದೇವ ಯಾರು ಈ ತಪ್ಪು ಮಾಡಿರುವರೊ ಅಂತಹವರನ್ನು ಶಿಕ್ಷಿಸುತ್ತೇನೆ. ದಯಮಾಡಿ ತಿಳಿಯಿರಿ ನಮ್ಮ ಹೆಸರಿಗೆ ಕಲಂಕ ತರುವ ಈ ತಪ್ಪು ಕೆಲಸ ಎಂದು ಹಿರಿಯನಿಗೆ ಕೈಮುಗಿದು ರಾಯಣ್ಣ ಹೇಳಿದನು. ಮತ್ತು ಆ ಹಿರಿಯನಿಗೆ ಹಾನಿಯಾದ ಬಗೆಗೆ ಸ್ವಲ್ಪ ಹಣವನ್ನು ಕೊಟ್ಟು ಕಳುಹಿದನು.

ಬಾಪು ಭಂಡಾರಿ ನಂದಗಡದಲ್ಲಿ ಹೋಗಿ ತನ್ನದುಷ್ಟು ಕೆಲಸವನ್ನು ನಡೆಯಿಸುತ್ತ ಸಾಗಿದ್ದನು. ‘ಚೆನ್ನಮ್ಮ ರಾಣಿಗೆ ಜಯವಾಗಲಿ’ ಎಂದು ಬಾಯಲ್ಲಿ ಹೇಳುತ್ತಿದ್ದನು. ಅವನ ಕೈಯಲ್ಲಿಯ ಆಯುಧ ಕಂಡು ಇವನು ಚೆನ್ನಮ್ಮ ರಾಣಿಯ ದಂಡಿತನವೇ ಇರಬಹುದು ಎಂಬುದು ಜನರ ತಿಳಿವಳಿಕೆಯಾಗಿತ್ತು! ಆದರೆ ಹಣ ಕೊಡಬೇಕೆಂದು ಎಡಗೈ ಚಾಚುತ್ತಿದ್ದನು.

ರಾಯಣ್ಣ ವೇಗವಾಗಿ ನಂದಗಡಕ್ಕೆ ಧಾವಿಸಿದನು. ಒಬ್ಬ ಹೆಣ್ಣು ಮಗಳು ರಾಯಣ್ಣನನ್ನು ಕಂಡು ‘ಅಣ್ಣಾs ನನ್ನ ಮಂಗಳಸೂತ್ರ ಉಳಿಸು’ ಎಂದು ಕೂಗಿಕಂಡಳು. ಬಾಪು ಎಂಬ ಕೊಲೆಗಡುಕ ನನ್ನ ಗಂಡನನ್ನು ಹಿಡಿದಿದ್ದಾನೆ. ಯಾರನ್ನಾದರೂ ಕರೆಯಬೇಕೆಂದು ಓಡಾಡುತ್ತಿರುವಾಗ ನೀನೇ ವೀರಭದ್ರನಂತೆ ಬಂದಿರುವಿ, ಎಂದು ಅಳಲು ತೋಡಿಕೊಂಡಳು.

ಖುದ್ದಾಗಿ ರಾಯಣ್ಣ ‘ಬಾಪು ಆತನನ್ನು ಬಿಟ್ಟು ಬಿಡು’ ಎಂದು ಆಜ್ಞಾಪಿಸಿದನು.

‘ಇದು ನನ್ನ ಊರು. ನಾನು ಶೂರ, ಕೆಲವರನ್ನು ಕೊಲ್ಲುತ್ತೇನೆ. ನೀನೇನು ಮಾಡುವಿ?’ ಎಂಬ ಅಹಂಕಾರ ತೋರಿದನು.

ಅಂದು ಸಂಜೆ ಅದೇ ಮಹಿಳೆ ‘ಆ ಪಾಪಿ ತನ್ನ ಗಂಡನನ್ನು ಕೊಂದಿರುವುದಾಗಿ ದುಃಖ ಪಟ್ಟಳು.

ರಾಯಣ್ಣ ಬಾಪುವನ್ನು ಹಿಡಿದು ತರಲು ಆಜ್ಞಾಪಿಸಿದನು. ದಿಡ್ಡೀಮನಿ ಭೀಮಣ್ಣ, ಕಿತ್ತೂರಿನ ಸಂಗಣ್ಣ, ಬೆಳವಡಿಯ ರುದ್ರನಾಯಕ, ಸಮಸೇರಗಡದ ಮುಸ್ಯಾಢೋರ ಆತನ್ನು ಹಿಡಿಯಲು ಹೊರಟಾಗ, ಬಾಪುವಿನ ಮಗ ಅಡ್ಡ ಬಂದನು. ಭಂಢಾರಿ ಕತ್ತಿ ಹಿರಿದು ಸಂಗಣ್ಣನಿಗೆ ಗಾಯ ಮಾಡಿದನು. ಎಲ್ಲರೂ ಕೂಡಿ ಬಾಪು ಭಂಡಾರಿಯನ್ನು ಹೊಡೆದು ಕೆಡವಿದರು. ನಂದಗಡದ ಜನರೆಲ್ಲರೂ ಆನಂದ ಭರಿತರಾದರು. ರಾಯಣ್ಣನ ಬಂಟರಿಗೂ,ಚೆನ್ನಮ್ಮಾಜಿಯವರಿಗೂ ಜಯಕಾರ ಹೇಳಿದರು. ನಂದಗಡದಿಂದ ಹಡಲಗಿಗೆ ಸುದ್ದಿ ಹೋಯಿತು. ರಾತ್ರಿ ಹಡಲಗಿಯಲ್ಲಿ ರಾಯಣ್ಣನ ಜಯಕಾರವನ್ನು ಜನ ಮಾಡಿತು. ಕಿತ್ತೂರಿನ ಬಗೆಗೆ ಮಲ್ಲಸರ್ಜನ ಬಗೆ, ಜಯಕಾರದ ದನಿಗಳೇ ಮೊಳಗಿದವು.

ಬ್ರಿಟೀಶ ಅಧಿಕಾರಿಗಳು ಸಂಗೊಳ್ಳಿ ರಾಯಣ್ಣನು ‘ಬೀಡಿ’ಯ ಮೇಲೆ ದಾಳಿ ಮಾಡಿದ ದಿನಾಂಕವನ್ನು ತಪ್ಪಾಗಿ ನಮೂದಿಸಿದ್ದಾರೆ. ಇತರ ಹೇಳಿಕೆಗಳ ಪ್ರಕಾರ ೧೮೨೯ ರಲ್ಲಿ ದಾಳಿಯಾಯಿತು ಎಂದು ಇತಿಹಾಸಕಾರರು ನಿರ್ಣಯಕ್ಕೆ ಬಂದಿರುವರು ಬೀಡಿ ಕಛೇರಿಯನ್ನು ಸುಟ್ಟು ಹಾಕಿದ ಬಗೆಗೆ ವರದಿಗಳು ಬ್ರಿಟೀಶರಲ್ಲಿವೆ. ನಿಸ್ಪತ್ ಎಂಬ ಅಧಿಕಾರಿಯು ಸೈರಿಕರಿಗೆ ಪ್ಯೂನ್‌ಎಂದು ಬಳಸಿರುವ ದಾಖಲೆಯನ್ನು ನೋಡಿದಾಗ ಕೀಳು ಅರಿಮೆ ಇರುವ ಅವನ ಮನಸ್ಸು ತಿಳಿಯುತ್ತದೆ. ಈ ಆಂಗ್ಲ ಅಧಿಕಾರಿಗೆ ಪ್ಯೂನ ಇರುವುದು ಕಛೇರಿಯ ಮುಂದೆ ಖಡ್ಗ ಹಿಡಿದವರು ವೀರರು ಎಂಬ ಅರಿವು ಮತ್ಸರವನ್ನಲ್ಲದೆ ಅಥವಾ ಆಜ್ಞಾನವನ್ನಲ್ಲದೆ ಇನ್ನೇನು ತೋರುಸುತ್ತದೆ?

ಸಂಗೊಳ್ಳಿ ರಾಯಣ್ಣನ ಬಗೆಗೆ ಒಂದೆರಡು ಪತ್ರಗಳನ್ನು ಬರೆದಿರುವುದು ತಿಳಿದರೂ ಅದರಲ್ಲಿ ಲತನ್ನ ಅಶಕ್ತತೆಯನ್ನು ವ್ಯಕ್ತಪಡಿಸಿದ್ದುಂಟು, ನಿಸ್ವತ್‌, ರಾಯಣ್ಣನ ದಾಳಿಯಿಂದ ಕಛೇರಿಗಳು ಸುಡಲ್ಪಟ್ಟವು. (ಬ್ರಿಟೀಶರ ವಿರೋಧವಾಗಿ ಈ ಕಛೇರಿಗಳು ಸುಡಲ್ಪಟ್ಟವು. ಜನಸಾಮಾನ್ಯರಿಗಾಗಲೀ ಸಿರಿವಂತರಿಗಾಗಲೀ ಎಂದೂ ರಾಯಣ್ಣ ಅಂಜಿಸಿದವನಲ್ಲ! ಬ್ರಿಟೀಶರ ಬಾಲ ಬಡುಕತನದಿಂದ ವರ್ತನೆ ಮಾಡುವವರನ್ನು ರಾಯಣ್ಣ ಹಾಗೂ ರಾಯಣ್ಣನ ದಂಡು ಅಂಜಿಕೆಯನ್ನು ತೋರಿಸಿದ್ದುಂಟು. ಅವರಿಗಾರಿಗೂ ಪ್ರಾಣಹಾನಿ ಎಂದೂ ಆದ ಉದಾಹರಣೆಗಳಿಲ್ಲ. ಬಾಪು ಭಂಡಾರಿಯ ದುರ್ವತನೆಗಾಗಿ, ರಾಯಣ್ಣನ ದಂಡಿನವರು ಅವನ ಪ್ರಾಣ ಹರಣ ಮಾಡಿದ್ದು ಈಗಾಗಲೇ ತಿಳಿದಿರುವ ಸಂಗತಿಯಾಗಿದೆ. ನಿಸ್ಬತ್‌ತನ್ನ ಅಧಿಕಾರಿಯಾದ ರಾಸ್‌ಗೆ ಬರೆದ ಪತ್ರಗಳು ಕಲಮಾನ (ದಿನಾಂಕಗಳನ್ನು) ತಿಳಿಸುತ್ತವೆ ಹೊರತು ಇನ್ನೇನು ವಾಸ್ತವತೆಯ ಸಂಗತಿಗಳನ್ನು  ತಿಳಿಸುವುದಿಲ್ಲ ಎಂದೆನಿಸುತ್ತವೆ. ಉದಾ: ಸಂಪಗಾವಿಯಲ್ಲಿ ಕಛೇರಿಗೆ ಬೆಂಕಿ ಹತ್ತಿಕೊಂಡಾಗ ಕಛೇರಿಯಲ್ಲಿಯ ನಾಲ್ಕು (೪) ಜನರು ಸತ್ತಾಗ ಅಲ್ಲಿ ಯಾರೂ ಸತ್ತಿಲ್ಲವೆಂಬ ಇಂಗ್ಲೀಷದ ವಾಕ್ಯವನ್ನು ತಿಳಿಯಬೇಕು.[3]

ನಿಸ್ಭತ್‌ಮ್ಯಾಕ್ಲಿಯಾಡನಿಗೆ ದಿ. ೮.೧.೧೮೩೦ರಂದು ಪತ್ರ ಬರೆದಿರುವುದರಿಂದ ಈ ದಾಳಿಯು (ಖಾನಪೂರದ ದಾಳಿ) ಹಿಂದಿನ ದಿನಗಳಲ್ಲಿ ನಡೆದಿರಲೇಬೇಕು.[4]

ರಾಯಣ್ಣನು ಇಟಗಿಗೆ ಬರುವ ಹೊತ್ತಿನಲ್ಲಿ ಅವನ ದಂಡಿನ ಖರ್ಚಿಗಾಗಿಯೇ ರೈತ ಕುಟುಂಬದವರು ಐದು ಸಾವಿರ ರೂಪಾಯಿಗಳನ್ನು ಕೂಡಿಸಿ ಕೊಟ್ಟದುಂಟು. ಇದು ದಂಡಿನ ಬಗೆಗಿರುವ ಗೌರವಗಳನ್ನು ಸೂಚಿಸುತ್ತದೆ. ಅದರಂತೆ ಪಾರಿಶವಾಡ ಅಂಕಲಗಿಗಳಲ್ಲಿ ರಾಯಣ್ಣನಿಗೆ ಹಣದೊರಕಿದಂತೆ ಕಾಣುತ್ತದೆ. ಅಂಕಲಗಿಯಲ್ಲಿ ರಾಚೋಟೆಪ್ಪ ಮತ್ತು ಗಜಪತಿ ಎಂಬವರು ಪ್ರೀತಿಯಿಂದ ಹಣ ನೀಡಿದ್ದಾಗಿ ತಿಳಿಯುತ್ತದೆ.

“ಇಷ್ಟಕ್ಕೂ ಪ್ರತಿನಿತ್ಯ ಹೊಸ ಹೊಸ ಜನರು ಬಂದು ಸೇರುತ್ತಲೇ ಇದ್ದರು, ನಂದಗಡದ ಮೇಲೆ ದಾಳಿ ಮಾಡಲು ಹೊರಟಾಗ ಅವರ ಬಳಿ ಬಂದು ಸಾವಿರದಷ್ಟು ಅನುಯಾಯಿಗಳು ಇದ್ದರು. ಒಂದು ದಿನ ಮಲೆನಾಡಿನಿಂದ ಹಿಂಡುಹಿಂಡಾಗಿ ಬಂದು ಜನ ಸೇರಿದರಂತೆ, ಆಗ ತಮ್ಮ ಬಳಿ ಮೂರು ಸಾವಿರ ಅನುಯಾಯಿಗಳು ಇದ್ದರು” ಎಂದಿದ್ದಾನೆ. ರಾಯಣ್ಣ.[5]

ನಿಸ್ಬತ್‌ನು ಗುಪ್ತಚಾರಿಕೆಯನ್ನು ನಡೆಯಿಸುತ್ತಿದ್ದನು. ಕಲೆಕ್ಟರ್ ನೆಂದು ಕರೆಯಿಸಿಕೊಳ್ಳುತ್ತಿರುವ ಕೃಷ್ಣರಾವನು ನಂದಗಡ ಹಾಗೂ ಮುಗಟಖಾನ ಹುಬ್ಬಳ್ಳಿಗೆ ಓಡಾಟ ಮಾಡಿದನು. ರಾಯಣ್ಣನ ದಂಡಿನವರಾರು ದೊರಕಲಿಲ್ಲ. ರಾಯಣ್ಣ ಕೈಕೊಟ್ಟನೆಂದು ಪುನಃ ಸಂಪಗಾವಿಯ ಕಡೆಗೆ ಸಾಗಿದರು.

ಸಂಪಗಾವಿಯಲ್ಲಿ (೧೨.೧.೧೮೩೦) ಕಾಳಗವಾಯಿತು. (೪೦೦) ನಾಲ್ಕ ನೂರ ಜನರೂ ಆರು ಕುದುರೆಯ ಸವಾರರು ಕಾಳಗ ಮಾಡಿದರೆಂದು ವರದಿ ಇದೆ. ಅಲ್ಲಿಯ ಹೋರಾಟದಲ್ಲಿ ಮಸೀದೆಯ ಮೇಲೆ ಸರಕಾರಿ ಕಛೇರಿಯ ಕಾಗದ ಪತ್ರಗಳ ಗಂಟು ಮೂಟೆಗಳನ್ನು ಇರಿಸಿದ್ದರು. ರಾಯಣ್ಣ ಮಸೀದೆಯ ಮೇಲೆ ಕಾಲ್ಮರಿಯಿಂದ ಹತ್ತುವುದಿಲ್ಲ! ಅವನು ಎಲ್ಲ ದೇವಸ್ಥಾನಗಳಿಗೆ ಮಹತ್ವ ನೀಡುತ್ತಾನೆ ಎಂದು ಕಛೇರಿಯ ಜನರಿಗೂ ಬ್ರಿಟೀಶ ಅಧಿಕಾರಿಗಳಿಗೂ ತಿಳಿದಿತ್ತು. ಆದರೆ ಅವುಗಳನ್ನು ಕಾವಲು ಮಾಡುತ್ತಿದ್ದ ನಾಲ್ವರನ್ನು ಹತ್ಯೆ ಮಾಡಿದನು ಎಂಬ ದಾಖಲೆಗಳಿವೆ. the Talk lofficier fired on the insurgents from the top of the mosque. They killed two of their number and severely wounded to others.)

ಸಂಗೊಳ್ಳಿ ರಾಯಣ್ಣ ಒಂದು ಕಡೆಗೆ ಬರುತ್ತಾನೆ ಎಂದು ಗ್ರಹಿಸಿದ ಜನರಿಗೆ, ಎಂದೂ ಆ ನಿಟ್ಟಿನಲ್ಲಿ ದೊರಕಿಲ್ಲ! ಇನ್ನೊಂದೆಡೆಗೆ ದಾಟಿ ಹೋಗುವ ಸುಳಿವೂ ಇದ್ದಾಗ, ಅಲ್ಲಿ ಅವನಾಗಲಿ ಅವನ ದಂಡಿನವರಾಗಲೀ ಹಾಯ್ದು ಹೋಗುತ್ತಲೇ ಇರಲಿಲ್ಲ. ರಾಯಣ್ಣ ದಿಕ್ಕುಗಳನ್ನು ಬದಲಿಸುತ್ತಿದ್ದನು. ಗುಪ್ತಚಾರರ ಗುಪ್ತಚಾರನಾಗಿ ರಾಯಣ್ಣ ಮುಂದೊರೆಯುತ್ತಿದ್ದನು, ಸಂಪಗಾವಿ-ದೇಶನೂರಗಳ ದಾಳಿಗಳಿಂದ ಮೇಲಿನ ಮಾತು ಸಾಕ್ಷಿಯಾಗುತ್ತಿದೆ. ಸಂಗೊಳ್ಳಿಯಲ್ಲಿ ಕಛೇರಿ ಇದ್ದದ್ದು ತಿಳದೇ ಇತ್ತು! ತನ್ನ ಹುಟ್ಟೂರಿನಲ್ಲಿಯ ಕಛೇರಿಯನ್ನು ಸಾವಿರ ಸೈನಿಕರೊಂದಿಗೆ ಬಂದು ಸಂಗೊಳ್ಳಿಯ ಚಾವಡಿಯನ್ನು ಸುಟ್ಟು ಭಸ್ಮ ಮಾಡಿದನು. ಮೇಜರ ಪಿಕರಿಂಗ ರಾಯಣ್ಣನ ದಂಡು ನಾಶಮಾಡಲು ಹಗಲೂ ರಾತ್ರಿ ಪ್ರಯತ್ನಿಸಿದನು. ಬೆಳಗಾವಿಯನ್ನು ಕೇಂದ್ರವನ್ನಾಗಿ ಇರಿಸಿಕೊಂಡು, ಸುತಗಟ್ಟಿ, ದೇಶನೂರ, ಪಾರಿಶವಾಡ, ಖಾನಾಪೂರ, ನಂದಗಡ ಇತ್ಯಾದಿ ಸ್ಥಳಗಳಿಗೆ ಗುಪ್ತಚಾರರನ್ನೂ, ಬಂದೂಕದಾರಿಗಳಾದ ಸಿಪಾಯಿಗಳನ್ನು ಕಳಿಸಿ, ದಾರಿಕಾಯುತ್ತ ಕೂಡ್ರುತ್ತಿದ್ದನು.

ಬಳಿಕ ರಾಯಣ್ಣಕಿತ್ತೂರಿಗೆ ಬಂದು, ಗುರುಸಿದ್ಧೇಶ್ವರ ಗುಡಿಯಲ್ಲಿ ಕಾಯೊ ಒಡೆದು, ಕರ್ಪೂರ ಹಚ್ಚಿ, ಹಣ್ಣಿನ ನೈವೇದ್ಯ ಮಾಡಿದನೆಂದು ತಿಳಿದುಬರುತ್ತಿದೆ.

ಅಲ್ಲಿ ನೆರೆಯಲ್ಲಿರುವ ತಾಟಗಿ ಕೃಷ್ಣಪ್ಪ ಎಂಬವರ ತೋಟದಲ್ಲಿ ಕಬ್ಬಿನ ಹಾಲು ಕುಡಿದರೆಂದೂ, ಕುದುರೆಗಳ ಮೇಲೆ ಎರಡು ದೊಡ್ಡ ಹೊರೆಗಳ ಕಬ್ಬನ್ನು ಒಯ್ದರೆಂದೂ ತಿಳಿದುಬರುತ್ತಿದೆ.

ರಾಯಣ್ಣನು ಬಾಳಗುಂದದ (ದಿ. ೧೪ರ ರಾತ್ರಿ) ಕೊಳ್ಳದ ಸಮೀಪ ಆಂಗ್ಲರ ಪಡೆಯೊಡನೆ ಕದನವಾಯಿತು. ಆಂಗ್ಲ ಸೈನಿಕರು ಓಡಿ ಹೋದ ಬಳಿಕ ಹಲ್ಯಾಳದಲ್ಲಿ ದಾಳಿಯಾಯಿತು.

ಈ ಹಲ್ಯಾಳವು ಈಗಿನ ಉತ್ತರ ಕನ್ನಡ ಜಿಲ್ಲೆಯಲ್ಲಿದೆ. ಈ ಕಾಳಗದಲ್ಲಿ ರಾಯಣ್ಣನ ಕಡೆಯವರು ಇಬ್ಬರು ಮರಣ ಹೊಂದಿದರು. ನಾಲ್ಕು ಜನರು ಗಾಯಗೊಂಡು, ರಾಯಣ್ಣನಿಗೂ ಗಾಯವಾಯಿತು. ಆದುದರಿಂದ ಉಪಚಾರಕ್ಕಾಗಿ ಬಾಳಗುಂದದ ತನ್ನ ಸ್ಥಾನಕ್ಕೆ ತೆರಳಿದನು.

ಗುಂಡೊಳ್ಳಿ (ಖಾನಾಪೂರ ತಾಲೂಕ) ಕದನ (೨೧.೧.೧೮೩೦) ಯಾವದೂ ಮುನ್ಸೂಚನೆಯನ್ನು ನೀಡದೇ ಬ್ರಿಟೀಶರು ಸೇರಿಸಿದ ಸೈನ್ಯವನ್ನು ದುತ್ತೆಂದು ಹೊಡೆಯುವುದು ರಾಯಣ್ಣನಿಗೆ ಸಾಧಿಸಿತ್ತು.

ನಮ್ಮವನೇ ಆದ ರಾಮಪ್ಪ ಎಂಬುವನನ್ನು ಫಿಕರಿಂಗ ಹುರಿದುಂಬಿಸಿ, ತನ್ನೆಡೆಗೆ ಸೆಳೆದುಕೊಂಡಿದ್ದನು. ರಾಮಪ್ಪ ಗುಂಡೊಳ್ಳಿ ಅಥವಾ ಸುತ್ತ ಮುತ್ತಲಿನ ವಿಷಯಗಳನ್ನು ಫಿಕರಿಂಗನಿಗೆ ವರದಿ ಮಾಡುತ್ತಿದ್ದನು. ರಾಮಪ್ಪ ಅಖಬರನವೀಸ ಎಂಬುದು ಇವನಿಗಿರುವ ಹೆಸರು. ಆ ತಾಲೂಕಿನ ಲಿಂಗನಮಠ ಊರಿನಿಂದ ವರದಿ ಮಾಡಿದ್ದಾನೆ. ಬಹುಶಃ ಇಂಗ್ಲೀಷ ಬಲ್ಲ ಇವನನ್ನು ಫಿಕರಿಂಗ ಸಹಜವಾಗಿಯೇ ಅವನ ಬುಟ್ಟಿಗೆ ಹಾಕಿಕೊಂಡಿರಬೇಕು.

ಫೀಕರಿಂಗನದು ಸುಸಜ್ಜಿತ ಸೈವ್ಯವಿತ್ತು. ಮೊದ ಮೊದಲು ಈ ರಾಮಪ್ಪನು ರಾಯಣ್ಣನನ್ನು ಜೀವಂತವಾಗಿ ಹಿಡಿದು ಕೊಡಲು ಬ್ರಿಟೀಶರಿಗೆ ಮಾತು ಕೊಟ್ಟಿದ್ದನೆಂದು ತಿಳಿದು ಬರುತ್ತದೆ. ಧಾರವಾಡದ ಕಡೆಯಿಂದ ಹೆಚ್ಚಿನ ಸೈನ್ಯ ಬ್ರಿಟೀಶ ಪರವಾಗಿ (ಅಂದರೆ ಶೇತ್ಸನದಿಗಳು ಕೂಡಿಕೊಂಡಿದ್ದರೆಂದು ತಿಳಿಯುತ್ತದೆ.[6]

ಮುಂದಿನ ದಾಳಿ ೮.೨.೧೮೩೦ ರಂದು ಕಿತ್ತೂರ ಮತ್ತು ದೇಗಾವಿಗಳಲ್ಲಿ ನಡೆಯುವುದು ಎಂಬ ಸೂಚನೆ ಗೊತ್ತಾಯಿತು. ಆ ದಿನ ಕಿತ್ತೂರಿನ ಅಂಗಡಿಗಳೆಲ್ಲ ‘ಹರತಾಳ’ವನ್ನು ಆಚರಿಸಿದ್ದವು.

ಬಹುದೊಡ್ಡ ದಾಳಿ ಇದಾಗಿತ್ತು. ಕೋರಿ ಎಂಬಾತನ ವರದಿಯ ಪ್ರಕಾರ ೭೮ ಜನರು ಸತ್ತರಂತೆ, ೮೫ ಜನ ಸೆರೆಸಿಕ್ಕರಂತೆ, ೩೬ ಜನ ಗಾಯಗೊಂಡವರಂತೆ. ಕೊರ್ರಿ‍ಎಂಬಾತ ಬ್ರಿಟಿಶರ ೧೮ನೇ ರೆಜಮೆಂಟ್‌ರಾಯಣ್ಣನ ಎದುರು ಬಿದ್ದದ್ದು. ರೆಜಮೆಂಟದಲ್ಲಿ ಸತ್ತವರ ಸಂಖ್ಯೆಯನ್ನು ಹೇಳಲಾಗಿಲ್ಲ. ಆದರೆ ತಮ್ಮದು ಕಚ್ಚಾ ಸೈನ್ಯವಿತ್ತೆಂದು ತಿಳಿಸುತ್ತಾನೆ. ಜನಪದರು ರಾಯಣ್ಣನು ಮಾಡಿದ ೧೦-೧೨ ಯುದ್ಧಗಳನ್ನು ಹಾಡಿಕೊಂಡದ್ದುಂಟು.[1]    ಕಿತ್ತೂರ ಇತಿಹಾಸ ೧೯೯೮, ಪು.೧೧೧, ವಿ.ಜಿ. ಮಾರಿಹಾಳ

[2]    ಸಂಗೊಳ್ಳಿ ರಾಯಣ್ಣ ಶಿವರಾಮು. ಐ.ಬ.ಎಚ್‌. ೧೯೭೩. ಬೆಂಗಳೂರು. (ಪುಟ-೫೫-೫೬)

[3]    They did not plunder the village.

[4]    Having received in telligence of the plunder and burning of Khanapoor by the Kittur insurgents.

[5]    ಸಂಗೊಳ್ಳಿ ರಾಯಣ್ಣ. ಪುಟ ೧೦೮. ಸೂರ್ಯನಾತ ಕಾಮತ. ಸಂ.

[6]    The following people of Nowlgoond taluk distingushed themselves.