ಮಣ್ಣಿನಲ್ಲಿ ಲವಣಗಳಿರುವುದು ಸ್ವಾಭಾವಿಕ. ಸಾಮಾನ್ಯವಾಗಿ ಕಂಡು ಬರುವ ಲವಣಗಳು, ಕೆಳಗೆ ತೋರಿಸಿದ ಧನ ಮತ್ತು ಋಣ ಆಯಾನ್‌ಗಳ ಸಂಯುಕ್ತ ವಸ್ತುಗಳಾಗಿರುತ್ತವೆ.

ಧನ ಅಯಾನ್‌ಗಳು ಋಣ ಅಯಾನ್‌ಗಳು
ಕ್ಯಾಲ್ಸಿಯಂ ಕ್ಲೋರಿನ್‌
ಮೆಗ್ನೀಸಿಯಂ ಸಲ್ಫೇಟ್
ಸೋಡಿಯಂ ಬೈಕಾರ್ಬೊನೇಟ್
ಪೊಟ್ಯಾಸಿಯಂ ಕಾರ್ಬೊನೇಟ್ ನೈಟ್ರೇಟ್

ಉತ್ತಮ ಮಣ್ಣಿನಲ್ಲಿರುವ ಲವಣಗಳಲ್ಲಿ, ಕ್ಯಾಲ್ಸಿಯಂ ಲವಣಗಳದೇ ಪ್ರಾಬಲ್ಯವೆನ್ನಬಹುದು. ನಂತರ ಸ್ಥಾನವು ಮೆಗ್ನೀಸಿಯಂ ಲವಣಗಳದ್ದು. ಸೋಡಿಯಂ ಮತ್ತು ಪೊಟ್ಯಾಸಿಯಂಗಳ ಲವಣಗಳು ಮಣ್ಣಿನಲ್ಲಿ ಅಲ್ಪ ಪ್ರಮಾಣದಲ್ಲಿರುತ್ತವೆ.

ಮಣ್ಣಿನಲ್ಲಿರುವ ಲವಣಗಳ ಪ್ರಮಾಣವನ್ನು ಕೆಳಗೆ ತೋರಿಸಿದಂತೆ ಎರಡು ರೀತಿಗಳಲ್ಲಿ ಹೇಳಬಹುದು:

i) ಮಣ್ಣಿನ ಶೇಕಡಾ ಲವಣದ ಪ್ರಮಾಣವನ್ನು ಹೇಳುವುದು.

ii) ಮಣ್ಣಿನ ರಾಡಿ ಮಾಡಿ, ಆ ರಾಡಿಯಿಂದ ದ್ರಾವಣವನ್ನು ಹೊರತೆಗೆದು, ಆ ದ್ರಾವಣದ ವಿದ್ಯುತ್ ವಹನ ಸಾಮರ್ಥ್ಯವೆಷ್ಟಿದೆ ಎಂದು ಅರಿಯುವುದು. ಈ ಸಾಮರ್ಥ್ಯವನ್ನು ೨೫ ಸೆಂ.ನಲ್ಲಿ ಪ್ರತಿ ಸೆಂ.ಮೀ.ಗೆ ಮಿಲಿ ಮೋಹ್‌ಗಳಲ್ಲಿ ಹೇಳುವುದು ರೂಢಿ. ಮೇಲೆ (ii)ರಲ್ಲಿ ಹೇಳಿದ ವಿದ್ಯುತ್ ವಹನ ಸಾಮರ್ಥ್ಯ ಪದ್ಧತಿಯನ್ನೇ ಈ ಅಧ್ಯಾಯದಲ್ಲಿ ಬಳಸಿದೆ.

ಮಣ್ಣಿನ ರಾಡಿಯಿಂದ ಹೊರತೆಗೆದ ದ್ರಾವಣದ ವಿದ್ಯುತ್ ವಹನವು ನಾಲ್ಕು ಮಿಲಿ ಮೋಹ್‌ಗಳಿಗಿಂತ ಕಡಮೆ ಇದ್ದಾಗ ಅಂಥಹ ಮಣ್ಣು ನಿರುಪದ್ರವಿ ಎನ್ನಬಹುದು. ಅಂತಹ ಮಣ್ಣಿನಲ್ಲಿ ಬೆಳೆಯುವ ಸಸ್ಯಗಳಿಗೆ ಲವಣದಿಂದ ಯಾವುದೇ ರೀತಿಯ ತೊಂದರೆಯುಂಟಾಗುವುದಿಲ್ಲ. ಆದರೆ ವಿದ್ಯುತ್ ವಹನವು ನಾಲ್ಕು ಮಿಲಿ ಮೋಹ್‌ಗಳನ್ನು ದಾಟಿತೆಂದರೆ ಅಂಥಹ ಮಣ್ಣಿನಿಂದ ನೀರು ಮತ್ತು ಪೋಷಕಗಳನ್ನು ತೆಗೆದುಕೊಳ್ಳಲು ಸಸ್ಯದ ಬೇರುಗಳಿಗೆ ತಡೆಯುಂಟಾಗುವುದರ ಪರಿಣಾಮವಾಗಿ ಸಸ್ಯಗಳ ಬೆಳವಣಿಗೆಯು ಕುಂಠಿತಗೊಂಡು ಇಳುವರಿಯೂ ಕಡಮೆಯಾಗುತ್ತದೆ.

ಮಣ್ಣಿನ ಸೂಕ್ಷ್ಮ ಕಣಗಳ ಸುತ್ತ, ಮುಖ್ಯವಾಗಿ ವಿನಿಮಯ ಕ್ಯಾಲ್ಸಿಯಂ ಮತ್ತು ಕೆಲಮಟ್ಟಿಗೆ ವಿನಿಮಯ ಮೆಗ್ನೀಸಿಯಂ ಆಯಾನ್‌ಗಳಿದ್ದರೆ, ಮಣ್ಣಿನ ಮತ್ತು ನೀರುಗಳ ಅನಿರ್ಬಂಧಿತ ಚಲನೆಗೆ ಅನುಕೂಲಕರವಾಗುತ್ತದೆ. ಇಂಥಹ ಮಣ್ಣಿನಲ್ಲಿ ಸಸ್ಯಗಳು ಸರಿಯಾಗಿ ಬೆಳೆಯುತ್ತವೆ. ಆದರೆ ವಿನಿಮಯ ಸೋಡಿಯಂ ಪ್ರಮಾಣವು ಅಧಿಕಗೊಂಡಿತೆಂದರೆ, ಮಣ್ಣಿನ ಕಣಗಳ ಸುತ್ತ ಇರುವ ಕ್ಯಾಲ್ಸಿಯಂ ಮತ್ತು ಮೆಗ್ನೀಸಿಯಂ ಅಯಾನ್‌ಗಳ ಸ್ಥಾನಗಳನ್ನು ಸೋಡಿಯಂ ಅಯಾನ್‌ಗಳು ಆಕ್ರಮಿಸಿಕೊಳ್ಳುತ್ತವೆ. ವಿನಿಮಯ ಸೋಡಿಯಂ ಪ್ರಮಾಣವು ಒಂದು ಮಿತಿಯನ್ನು ಮೀರಿತೆಂದರೆ, ಮಣ್ಣಿನ ಭೌತಿಕ ಗುಣಧರ್ಮಗಳ ಮೇಲೆ ದುಷ್ಪರಿಣಾಮಗಳುಂಟಾಗುತ್ತವೆ. ಮಣ್ಣಿನ ಕಣಗಳ ಅಪೇಕ್ಷಿತ ರಚನೆಯು ನಷ್ಟಗೊಂಡು ಹವೆ ಮತ್ತು ನೀರಿನ ಚಲನೆಗೆ, ಆತಂಕವೊಡ್ಡುವ ರಚನೆಯು ನಿರ್ಮಾಣಗೊಳ್ಳುತ್ತದೆ. ಹೀಗಾಗಿ ನೀರು ಮತ್ತು ಪೋಷಕಗಳನ್ನು ಮಣ್ಣಿನಿಂದ ಹೀರಿಕೊಳ್ಳಲು ಸಸ್ಯಗಳಿಗೆ ಅನಾನುಕೂಲವುಂಟಾಗುತ್ತದೆಯಲ್ಲದೇ ಸೋಡಿಯಂ ಅಧಿಕ ಪ್ರಮಾಣದಲ್ಲಿದ್ದಾಗ ಸಸ್ಯಗಳ ಬೇರುಗಳ ಮೇಲೂ ದುಷ್ಪರಿಣಾಮವನ್ನುಂಟು ಮಾಡುತ್ತವೆ.

ಮೇಲೆ ಸೂಚಿಸಿದ ಅಧಿಕ ಲವಣ ಮತ್ತು ಮಿತಿ ಮೀರಿದ ಮಿನಿಮಯ ಸೋಡಿಯಂಗಳಿಂದ ಸಮಸ್ಯಾತ್ಮಕ ಮಣ್ಣುಗಳು ನಿರ್ಮಾಣಗೊಳ್ಳದಂತೆ ಮತ್ತು ಕಾರಣಾಂತರಗಳಿಂದ ನಿರ್ಮಾಣಗೊಂಡ ಇಂಥಹ ಸಮಸ್ಯಾತ್ಮಕ ಮಣ್ಣುಗಳನ್ನು ಸುಧಾರಿಸಲು ಪ್ರಯೋಜನವಾಗಬಲ್ಲ ಪ್ರಮುಖ ಸಂಗತಿಗಳು ಈ ಅಧ್ಯಾಯದಲ್ಲಿವೆ.

ಲವಣಗಳು ಸಂಗ್ರಹಗೊಳ್ಳಲು ಕಾರಣಗಳು

ಶಿಲೆಗಳಿಂದ ಮತ್ತು ಖನಿಜಗಳಿಂದ ಸಿದ್ಧವಾದ ಮಣ್ಣಿನ ಮೂಲ ದ್ರವ್ಯದಿಂದ ಮಣ್ಣು ನಿರ್ಮಾಣವಾಗುತ್ತದೆ ಎಂಬ ಸಂಗತಿಯನ್ನು ಈಗಾಗಲೇ ತಿಳಿದುಕೊಂಡಿದೆ. ಈ ಶಿಲೆ ಮತ್ತು ಖನಿಜಗಳಲ್ಲಿರುವ ಲವಣಗಳು ಮತ್ತು ಇವುಗಳಲ್ಲಿರುವ ಧಾತುಗಳು, ಹಲವು ಬಗೆಯ ರಾಸಾಯನಿಕ ಕ್ರಿಯೆಗಳಿಗೆ ಒಳಪಡುವುದರಿಂದ ನಿರ್ಮಾಣಗೊಂಡ ಹೊಸ ಲವಣಗಳು ಮಣ್ಣಿನಲ್ಲಿರುವ ಲವಣಗಳ ಮೂಲ ಎನ್ನಬಹುದು. ಇದಲ್ಲದೇ ಕೆಳಗಿನ ಮೂಲಗಳಿಂದ ಲವಣಗಳು ಮಣ್ಣಿನಲ್ಲಿ ಸಂಗ್ರಹಗೊಳ್ಳುತ್ತವೆ.

ಬಸಿದು ಹೋಗದೇ ಉಳಿದುಕೊಂಡ ಲವಣಗಳು: ಅಧಿಕ ಮಳೆಯಾಗುವ ಪ್ರದೇಶಗಳ ಭೂಮಿಯ ಮೇಲೆ ಹರಿದು ಹೋಗುವ ನೀರಿನೊಡನೆ, ಕರಗಿದ ಲವಣಗಳು ಬೇರೆಡೆ ಸಾಗಿ ಹೋಗಬಹುದು, ಇಲ್ಲವೇ ಮಣ್ಣಿನೊಳಗೆ ಬಸಿದು ಹೋಗುವ ನೀರಿನೊಡನೆ ಹೋಗಿ ಭೂಮಿಯಾಳವನ್ನು ತಲುಪಬಹುದು. ಆದ್ದರಿಂದ ಇಂತಹ ಪ್ರದೇಶಗಳ ಮಣ್ಣಿನಲ್ಲಿ, ಲವಣಗಳು ಅಪಾಯದ ಮಟ್ಟವನ್ನು ಮೀರುವ ಸಂದರ್ಭಗಳು ಕಡಮೆ.

ಶುಷ್ಕ ಮತ್ತು ಅರೆ ಶುಷ್ಕ ಪ್ರದೇಶಗಳಲ್ಲಿ ವಾರ್ಷಿಕ ಮಳೆಯು ಕಡಮೆಯಾಗುತ್ತಿರುವುದರಿಂದ, ಲವಣಗಳು ಹೆಚ್ಚು ಆಳಕ್ಕೆ ಬಸಿದು ಹೋಗುವುದಿಲ್ಲ. ಅಲ್ಲದೇ, ಒಣ ಹವೆಯಿರುವುದರಿಂದ ನೀರು ಆವಿಯಾಗಿ ಹೋಗಿ ಲವಣಗಳು ಮಣ್ಣಿನ ಮೇಲ್ಭಾಗದಲ್ಲಿಯೇ ಸಂಗ್ರಹವಾಗುತ್ತವೆ. ಯಾವುದೇ ಕಾರಣದಿಂದ ಜಲ ಪಾತಳಿಯು ಮೇಲೇರಿದರೆ ನೀರಿನ ಸಂಗಡ ಲವಣಗಳೂ ಬಂದು ಮಣ್ಣಿನ ಮೇಲೆಯೇ ಉಳಿಯುತ್ತವೆ.

ಬಸಿ ನೀರಿನೊಡನೆ ಬಂದ ಲವಣಗಳು: ನಾಲೆ, ಕೆರೆ ಇತ್ಯಾದಿ ಜಲ ಸಂಗ್ರಹದಿಂದ ನೀರು ಸ್ರವಿಸಿ, ಭೂಮಿಯೊಳಗಿಂದ ಹರಿದು ಬಂದು ತಗ್ಗು ಪ್ರದೇಶದಲ್ಲಿ ಸಂಗ್ರಹಗೊಳ್ಳಬಹುದು. ಮಾರ್ಗದಲ್ಲಿರುವ ಮಣ್ಣಿನಲ್ಲಿ ಲವಣಗಳಿದ್ದರೆ, ಅವುಗಳನ್ನು ತನ್ನೊಡನೆ ತರುತ್ತದೆಯಾದ್ದರಿಂದ ತಗ್ಗು ಪ್ರದೇಶದ ಭೂಮಿಯಲ್ಲಿ ಲವಣದ ಪ್ರಮಾಣವು ಅಧಿಕಗೊಳ್ಳುತ್ತದೆ.

ಭೂಮಿಯಾಳದ ನೀರಿನೊಡನೆ ಬಂದ ಲವಣಗಳು: ಯಾವುದೇ ಕಾರಣದಿಂದ ಭೂಮಿಯ ಕೆಳ ಭಾಗದಲ್ಲಿರುವ ನೀರು ಮೇಲೇರುತ್ತ ಬಂದು ಪ್ರದೇಶವು ಜೌಗಾಯಿತೆಂದರೆ, ಮಣ್ಣಿನಲ್ಲಿರುವ ಲವಣಗಳು ಮೇಲ್ಭಾಗದಲ್ಲಿ ಸಂಗ್ರಹಗೊಳ್ಳುತ್ತವೆ.

ಸಮುದ್ರ ತೀರದಲ್ಲಿರುವ ಮಣ್ಣು: ಸಮುದ್ರದ ನೀರು ಉಕ್ಕಿ ಬಂದಿತೆಂದರೆ ತೀರದಲ್ಲಿರುವ ಮಣ್ಣಿನಲ್ಲಿ ಲವಣಗಳು ಉಳಿದುಕೊಳ್ಳುತ್ತವೆ. ಕೆಲವು ಬಾರಿ ವೇಗದಿಂದ ಬೀಸುವ ಗಾಳಿಯು ತನ್ನೊಡನೆ ಸಮುದ್ರದ ನೀರಿನ ತುಂತುರು ಹನಿಗಳನ್ನು ಹೊತ್ತು ತಂದು ಹಲವಾರು ಕಿ.ಮೀ. ದೂರದಲ್ಲಿರುವ ಮಣ್ಣಿಗೆ ಒಯ್ದು ಬಿಡುತ್ತದೆ. ಇದಲ್ಲದೇ ಭೂಸ್ತರಗಳಲ್ಲಾಗುವ ನೈಸರ್ಗಿಕ ವ್ಯತ್ಯಾಸಗಳಿಂದ, ಸಮುದ್ರದ ತಳ ಭಾಗವು ಮೇಲೆದ್ದು ಬರಬಹುದು. ಅಂತಹ ಪ್ರದೇಶಗಳಲ್ಲಿ ನಿರ್ಮಾಣಗೊಂಡ ಮಣ್ಣಿನಲ್ಲಿ ಲವಣದ ಪ್ರಮಾಣವು ಅಧಿಕವಾಗಿರುತ್ತದೆ.

ನೀರಾವರಿ ಜಲ: ಕೆಲವು ಪ್ರದೇಶಗಳಲ್ಲಿರುವ ಬಾವಿ, ಹಳ್ಳ ಇತ್ಯಾದಿಗಳ ನೀರಿನಲ್ಲಿ ಅಧಿಕ ಪ್ರಮಾಣದಲ್ಲಿ ಲವಣಗಳಿರುತ್ತವೆ. ಇಂತಹ ಮೂಲದ ನೀರನ್ನು ನೀರಾವರಿಗೆಂದು ಬಳಸಿದರೆ ಮಣ್ಣಿನಲ್ಲಿ ಲವಣಗಳು ಸಂಗ್ರಹವಾಗುತ್ತ ಸಾಗಿ ಕೆಲ ವರ್ಷಗಳಲ್ಲಿ ಲವಣದ ಪ್ರಮಾಣವು ಅಪಾಯದ ಮಟ್ಟವನ್ನು ಮುಟ್ಟುತ್ತದೆ.

ಲವಣ ಮತ್ತು ಸೋಡಿಯಂಯುಕ್ತ ಮಣ್ಣಿನ ವರ್ಗೀಕರಣ

 • ಮಣ್ಣಿನಲ್ಲಿರುವ ಲವಣದ ಪ್ರಮಾಣವು ಅಧಿಕಗೊಂಡು, ಮಣ್ಣಿನಲ್ಲಿರುವ ಸಸ್ಯಗಳ ಬೆಳವಣಿಗೆಯು ಕುಂಠಿತಗೊಳ್ಳುವ ಸ್ಥಿತಿಯನ್ನು ಮುಟ್ಟಿದಂಥ ಮಣ್ಣಿಗೆ ಲವಣಯುತ (ಚೌಳು) ಮಣ್ಣು ಎನ್ನುತ್ತಾರೆ.
 • ಅದರಂತೆಯೇ, ಮಣ್ಣಿನಲ್ಲಿರುವ ವಿನಿಮಯ ಸೋಡಿಯಂನ ಪ್ರಮಾಣ ಅಧಿಕಗೊಂಡು ಸಸ್ಯಗಳ ಬೆಳವಣಿಗೆ ಅಪಾಯಕಾರಿಯೆನಿಸುವ ಮಟ್ಟವನ್ನು ಮುಟ್ಟಿತೆಂದರೆ, ಅಂಥಹ ಮಣ್ಣಿಗೆ ಸೋಡಿಯಂ ಪ್ರಾಬಲ್ಯದ ಮಣ್ಣು ಎನ್ನಬಹುದು.

ಆದರೆ, ಲವಣಗಳು ಮತ್ತು ವಿನಿಮಯ ಸೋಡಿಯಂ, ಇವು ಯಾವ ಮಟ್ಟದಲ್ಲಿದ್ದಾಗ ಅವು ಸಸ್ಯಗಳಿಗೆ ಹಾನಿಕಾರಕವೆನಿಸುತ್ತವೆಂಬುದನ್ನು ಖಚಿತವಾಗಿ ಹೇಳುವುದು ಕಷ್ಟಕರ. ಇವುಗಳ ಅಪಾಯಕಾರಿ ಮಟ್ಟವು ಕೆಳಗೆ ಸೂಚಿಸಿದಂಥ ಹಲವು ಸಂಗತಿಗಳ ಮೇಲೆ ಅವಲಂಬಿಸಿರುವುದೇ ಈ ಅನಿಶ್ಚಿತತಗೆ ಕಾರಣವೆನ್ನಬಹುದು.

 • ಮಣ್ಣಿನ ಕಣಗಳ ಗಾತ್ರ
 • ಲವಣಗಳ ಪ್ರಕಾರಗಳು
 • ಮಣ್ಣಿನ ಬೇರೆ ಬೇರೆ ಅವುಗಳಲ್ಲಿ ಲವಣಗಳು ಹಂಚಿ ಹೋಗಿರುವ ರೀತಿ
 • ಬೆಳೆಯಬೇಕೆಂದಿರುವ ಬೆಳೆಗಳ ಸ್ವಭಾವ.

ಪರಿಸ್ಥಿತಿಯು ಮೇಲಿನಂತೆ ಇದ್ದರೂ ಈ ಸಮಸ್ಯಾತ್ಮಕ ಮಣ್ಣುಗಳನ್ನು ಲವಣ ಮತ್ತು ವಿನಿಮಯ ಸೋಡಿಯಂ ಇವುಗಳ ಪ್ರಮಾಣಗಳ ಮೇಲಿಂದ ಮೂರು ಗುಂಪುಗಳಾಗಿ ವರ್ಗೀಕರಿಸುವ ವಿಧಾನವು ಸರ್ವಸಮ್ಮತವೆನಿಸಿದೆ. ವಿವರಗಳನ್ನು ಕೋಷ್ಟಕ ೧೮ರಲ್ಲಿ ಕೊಡಲಾಗಿದೆ.

ಕೋಷ್ಟಕ ೧೮: ಲವಣದ ಮತ್ತು ವಿನಿಮಯ ಸೋಡಿಯಂನ ಪ್ರಮಾಣಗಳ ಮೇಲಿಂದ ಮಣ್ಣಿನ ವರ್ಗೀಕರಣ

ಆ. ಸಂ.

ಮಣ್ಣಿನ ವರ್ಗ

ಮಣ್ಣಿನ ರಾಡಿಯಿಂದ ಹೊರಬಂದ ದ್ರಾವಣದ ವಿದ್ಯುತ್ ವಹನ ಪ್ರತಿ ಸೆಂ.ಮೀ.ಗೆ ಮಿಲಿಮೋಹ್‌ಗಳಲ್ಲಿ

ಶೇಕಡಾ ವಿನಿಮಯ ಸೋಡಿಯಂ

ಆಮ್ಲ-ಕ್ಷಾರ ನಿರ್ದೇಶಕ(pH)

ಲವಣಯುತ ಮಣ್ಣು (ಚೌಳು ಕಡಮೆ ೪ಕ್ಕಿಂತ ಹೆಚ್ಚು ೧೫ ಕ್ಕಿಂತ ಕಡಮೆ ಸಾಮಾನ್ಯವಾಗಿ ೮.೫ಕ್ಕಿಂತ ಕಡಮೆ
ಲವಣ ಮತ್ತು ಸೋಡಿಯಂ ಇರುವ ಮಣ್ಣು ೪ಕ್ಕಿಂತ ೧೫ಕ್ಕಿಂತ ಅಧಿಕ ಲವಣಗಳಿರುವ ವರೆಗೆ ೮.೫ನ್ನು ಮೀರುವುದಿಲ್ಲ.
ಲವಣ ರಹಿತ ಆದರೆ ವಿನಿಮಯ ಸೋಡಿಯಂ ಇರುವ ಮಣ್ಣು ೪ಕ್ಕಿಂತ ಕಡಮೆ ೧೫ಕ್ಕಿಂತ ಅಧಿಕ ೮.೫ಕ್ಕಿಂತ ಅಧಿಕ

ಕೋಷ್ಟಕ ೧೮ರಲ್ಲಿ ತಿಳಿಸಿರುವ ಮೂರು ಗುಂಪುಗಳಿಗೆ ಸೇರಿದ ಮಣ್ಣುಗಳ ಕೆಲವು ಗುಣದರ್ಮಗಳ ವಿವರಗಳು ಕೆಳಗಿನಂತಿವೆ.

ಲವಣಯುತ ಮಣ್ಣು

 • ಲವಣಗಳು ಮಣ್ಣಿನ ಮೇಲ್ಭಾಗದಲ್ಲಿ ಸಂಗ್ರಹವಾಗಿರುತ್ತವೆ. ಇವು ಬಿಳಿ ಬಣ್ಣದ ಪುಡಿಯ ರೂಪದಲ್ಲಿ ಕಂಡುಬರುತ್ತವೆ.
 • ಈ ಲವಣಗಳಲ್ಲಿ ಕೆಲವು ಬಾರಿ ಬೈಕಾರ್ಬೊನೇಟ್ ಸ್ವಲ್ಪ ಪ್ರಮಾಣದಲ್ಲಿ ಇರಬಹುದಾದರೂ ಕಾರ್ಬೊನೇಟ್ ಇರುವುದಿಲ್ಲ. ಇಲ್ಲಿ ಕ್ಲೋರೈಡ್ ಮತ್ತು ಸಲ್ಫೇಟ್ ಇವುಗಳಲ್ಲದೇ ಪ್ರಾಬಲ್ಯ. ಕೆಲವು ಸಾರಿ, ನೈಟ್ರೇಟ್ ಇರಬಹುದು.
 • ಮಣ್ಣಿನ ಕಣಗಳ ರಚನೆಯು ಉತ್ತಮವಾಗಿಯೇ ಇರುತ್ತದೆ. ಹೀಗಾಗಿ ನೀರು ಮಣ್ಣನ್ನು ಸುಲಭವಾಗಿ ಪ್ರವೇಶಿಸಿ ತಡೆಯಿಲ್ಲದೇ ಆಳಕ್ಕೆ ಬಸಿದು ಹೋಗಬಲ್ಲದು.

ಲವಣ ಮತ್ತು ಸೋಡಿಯಂ ಇರುವ ಮಣ್ಣು

 • ಗುಂಪಿನ ಮಣ್ಣಿನಲ್ಲಿ ಲವಣಗಳು ದೊಡ್ಡ ಪ್ರಮಾಣದಲ್ಲಿರುತ್ತವೆಯಲ್ಲದೇ ವಿನಿಮಯ ಸೋಡಿಯಂ ಸಹ ಅಧಿಕ.
 • ಮಣ್ಣಿನಲ್ಲಿ ಲವಣದ ಪ್ರಾಬಲ್ಯವಿರುವವರೆಗೆ ಭೌತಿಕ ಗುಣಧರ್ಮಗಳಲ್ಲಿ ಈ ಮಣ್ಣು ಮೇಲೆ ಹೇಳಿದ ಲವಣಯುತ ಮಣ್ಣನ್ನು ಹೋಲುತ್ತದೆ.
 • ಲವಣಗಳನ್ನು ಬಸಿದು ತೆಗೆದೊಡನೆ, ಈ ಮಣ್ಣು ಕೆಳಗೆ ತಿಳಿಸಿದ ಲವಣರಹಿತ ಆದರೆ ಸೋಡಿಯಂ ಇರುವ ಮಣ್ಣಿನ ಗುಣಸ್ವಭಾವವನ್ನು ಪಡೆಯುತ್ತದೆ.

ಲವಣ ರಹಿತ ಸೋಡಿಯಂ ಆಧಿಕ್ಯದ ಮಣ್ಣು

 • ಮೇಲೆ ಸೂಚಿಸಿದಂತೆ, ಲವಣಯುತ ಸೋಡಿಯಂ ಅಧಿಕ್ಯದ ಮಣ್ಣಿನಿಂದ ಲವಣಗಳನ್ನು ಬಸಿದು ತೆಗೆದರೆ, ಅದು ಲವಣ ರಹಿತ ಸೋಡಿಯಂ ಅಧಿಕ್ಯದ ಮಣ್ಣಾಗಿ ಪರಿವರ್ತನೆಯನ್ನು ಹೊಂದುತ್ತದೆ.
 • ವಿನಿಮಯ ಸೋಡಿಯಂ ನೀರಿನೊಡನೆ ಪ್ರತಿಕ್ರಿಯೆಗೊಂಡು ಸೋಡಿಯಂ ಹೈಡ್ರಾಕ್ಸೈಡ್ ನಿರ್ಮಾಣಗೊಳ್ಳುತ್ತದೆ. ಈ ಕ್ಷಾರದಲ್ಲಿ, ಮಣ್ಣಿನಲ್ಲಿರುವ ಸಾವಯವ ಪದಾರ್ಥವು ಕರಗಿ ಕಪ್ಪು ಬಣ್ಣದ ಪುಡಿಯು ರೂಪದಲ್ಲಿ ಮಣ್ಣಿನ ಮೇಲೆ ಕಂಡು ಬರುತ್ತದೆ. ಇಂತಹ ಮಣ್ಣನ್ನೇ ಹಿಲಗಾರ್ಡ್‌ಎಂಬುವರು ಕಪ್ಪು ಕ್ಷಾರ ಎಂದು ಕರೆದರು ರಷ್ಯಾದೇಶದ ವಿಜ್ಞಾನಿಗಳು ಸೋಲೋನಿಡ್ಜ್ (Solonetz) ಎಂಬ ಹೆಸರನ್ನಿಟ್ಟರು.
 • ವಿನಿಮಯ ಸೋಡಿಯಂನ ಪ್ರಭಾವದಿಂದ ಮಣ್ಣಿನಲ್ಲಿರುವ ಜಿನಗು ಎರೆಕಣಗಳು ಒಂದರಿಂದ ಇನ್ನೊಂದು ದೂರ ಸರಿಯುತ್ತವೆ. ಪ್ರತ್ಯೇಕಗೊಂಡ ಈ ಕಣಗಳು ನೀರಿನೊಡನೆ ಚಲಿಸಿ, ಕೆಳಗಿನ ಸ್ತರವನ್ನು ತಲುಪುತ್ತವೆ. ಇದರ ಪರಿಣಾಮವಾಗಿ ಮೇಲಿನ ಸ್ತರದ ಮಣ್ಣು ತುಲನಾತ್ಮಕವಾಗಿ ದೊಡ್ಡ ಕಣಗಳಿಂದ ಕೂಡಿರುತ್ತದೆ. ಆದರೆ ಸ್ವಲ್ಪ ಆಳದಲ್ಲಿ, ಜಿನಗು ಎರೆ ಕಣಗಳು ಸಂಗ್ರಹಗೊಂಡು ಗಟ್ಟಿಯಾಗಿ ಲೋಲಕಾಕಾರದ ಮತ್ತು ಸ್ಥಂಭಾಕಾರದ ರಚನೆಗಳು ರೂಪುಗೊಳ್ಳುತ್ತವೆ.
 • ಅಧಿಕ ಪ್ರಮಾಣದಲ್ಲಿರುವ ವಿನಿಮಯ ಸೋಡಿಯಂ, ಮಣ್ಣಿನ ಭೌತಿಕ ಮತ್ತು ರಾಸಾಯನಿಕ ಗುಣಧರ್ಮಗಳ ಮೇಲೆ ದುಷ್ಪರಿಣಾಮಗಳನ್ನು ಉಂಟು ಮಾಡುತ್ತದೆ. ವಿನಿಮಯ ಸೋಡಿಯಂನ ಪ್ರಮಾಣವು ಅಧಿಕಗೊಂಡಂತೆ, ಮಣ್ಣಿನ ರಚನೆಯು ನಷ್ಟಗೊಂಡು ಕಣಗಳು ಚದರುತ್ತವೆ.
 • ಮಣ್ಣಿನಲ್ಲಿ ಲವಣದ ಪ್ರಮಾಣವು ಕಡಿಮೆ ಇರುತ್ತದೆ. ಆದರೆ, ಇರುವ ಲವಣದಲ್ಲಿ, ಕ್ಲೋರೈಡ್, ಸಲ್ಫೇಟ್ ಮತ್ತು ಬೈಕಾರ್ಬೊನೇಟ್ ಇವುಗಳ ಪ್ರಮಾಣವು ಅಧಿಕವಾಗಿರುತ್ತದೆ. ಕೆಲವು ಪ್ರಸಂಗಗಳಲ್ಲಿ, ಕಾರ್ಬೊನೇಟ್ ಸಹ ಕಂಡು ಬರಬಹುದು.
 • ಆಮ್ಲ-ಕ್ಷಾರ ನಿರ್ದೇಶಕವು (pH) ಅಧಿಕಗೊಳ್ಳುತ್ತದೆ. ಕೆಲವು ಪ್ರಸಂಗಗಳಲ್ಲಿ ಇದು ೧೦ನ್ನು ಮೀರಬಹುದು.
 • ಆಮ್ಲ-ಕ್ಷಾರ ನಿರ್ದೇಶಕವು ಅಧಿಕಗೊಂಡಿತೆಂದರೆ ಕಾರ್ಬೊನೇಟಿನ ಸಾನಿಧ್ಯದಲ್ಲಿ ಕ್ಯಾಲ್ಸಿಯಂ ಮತ್ತು ಮೆಗ್ನಿಸಿಯಂ ಅಯಾನ್‌ಗಳು ನೀರಿನಲ್ಲಿ ಕರಗದ ಸಂಯುಕ್ತಗಳಾಗಿ ಪರಿವರ್ತನೆ ಹೊಂದುತ್ತದೆ. ಹೀಗಾಗಿ ಇಂತಹ ಮಣ್ಣಿನ ಕಣಗಳ ಮೇಲೆ ವಿನಿಮಯ ಕ್ಯಾಲ್ಸಿಯಂ ಮತ್ತು ಮೆಗ್ನೀಸಿಯಂ ಅಯಾನ್‌ಗಳು ಇರದೇ ವಿನಿಮಯ ಸೋಡಿಯಂ ಅಯಾನ್‌ಗಳದೇ ಪ್ರಾಬಲ್ಯವಿರುತ್ತದೆ.
 • ತುಂಬಾ ಅಪರೂಪದ ಪ್ರಸಂಗಗಳಲ್ಲಿ ಮಣ್ಣಿನ ದ್ರಾವಣದಲ್ಲಿ ಮತ್ತು ಕಣಗಳ ಮೇಲೆ ಪೊಟ್ಯಾಸಿಯಂ ಅಯಾನ್‌ಗಳು ಕಂಡುಬರುತ್ತವೆ.

ಲವಣ ಹಾಗೂ ಸೋಡಿಯಂ ಇರುವ ಮಣ್ಣಿನ ನಿರ್ವಹಣೆ

ಕೇವಲ ಲವಣಗಳ ಅಧಿಕ್ಯವಿರುವ ಮಣ್ಣಿನ ನಿರ್ವಹಣೆಗೂ ಮತ್ತು ವಿನಿಮಯ ಸೋಡಿಯಂ ಅಧಿಕವಿರುವ ಮಣ್ಣಿನ ನಿರ್ವಹಣೆಗೂ ಅಂತರವಿದೆ. ಲವಣಯುತ ಮಣ್ಣಿನಲ್ಲಿ ಕೇವಲ ಲವಣಗಳು ದೊಡ್ಡ ಪ್ರಮಾಣದಲ್ಲಿದ್ದರೆ ಕೆಳಗಿನ ಕ್ರಮಗಳನ್ನು ಕೈಗೊಳ್ಳಬಹುದು.

i. ಲವಣಗಳನ್ನು ಸಂಗ್ರಹಿಸಿ ಹೊರ ಹಾಕುವ ಕ್ರಮ: ಮಣ್ಣಿನ ಮೇಲ್ಭಾಗದಲ್ಲಿ ಬಿಳಿಯ ಪುಡಿ ರೂಪದಲ್ಲಿ ಸಂಗ್ರಹವಾಗಿರುವ ಲವಣಗಳನ್ನು ಶೇಖರಿಸಿ ಸಂಬಂಧಿಸಿದ ಪ್ರದೇಶದಿಂದ ಹೊರಗೆ ಸಾಗಿಸಬಹುದು. ಈ ಕ್ರಮದಿಂದ ಮಣ್ಣಿನಲ್ಲಿರುವ ಎಲ್ಲ ಲವಣಗಳನ್ನು ಹೊರಹಾಕಲು ಸಾಧ್ಯವಾಗದಿದ್ದರೂ ಲವಣಗಳು ಗಣನೀಯ ಪ್ರಮಾಣದಲ್ಲಿ ಮಣ್ಣಿನಿಂದ ಹೊರಗೆ ಹೋದಂತಾಗುತ್ತವೆಂಬುದರಲ್ಲಿ ಸಂಶಯವಿಲ್ಲ.

ii. ನೀರಿನ ಸಹಾಯದಿಂದ ಲವಣಗಳನ್ನು ಭೂಮಿಯಾಳಕ್ಕೆ ಬಸಿಯುವಂತೆ ಮಾಡುವ ಕ್ರಮ: ಈ ಮೊದಲೇ ಸೂಚಿಸಿದಂತೆ, ಲವಣಗಳ ಸಾನ್ನಿಧ್ಯದಿಂದ ಮಣ್ಣಿನ ರಚನೆಯು ಉತ್ತಮವಾಗಿಯೇ ಇರುತ್ತದೆ. ಆದ್ದರಿಂದ ಮಣ್ಣಿನೊಳಗೆ ನೀರು ಸರಾಗವಾಗಿ ಚಲಿಸಿ ಭೂಮಿಯಾಳಕ್ಕೆ ಹೋಗಬಲ್ಲದು. ಈ ಸ್ವಭಾವದ ಪ್ರಯೋಜನವನ್ನು ಪಡೆದುಕೊಂಡು ಲವಣಗಳು ಸಸ್ಯದ ಬೇರುಗಳ ವಲಯಕ್ಕಿಂತ ಸಾಕಷ್ಟು ಆಳಕ್ಕೆ ಬಸಿದು ಹೋಗುವಂತೆ ಮಾಡಬಹುದು.

ಭೂಮಿಯನ್ನು ಅನುಕೂಲ ಆಕಾರದ ಮಡಿಗಳನ್ನಾಗಿ ವಿಂಗಡಿಸಿ, ಪ್ರತಿ ಮಡಿಯ ಸುತ್ತಲೂ ಬದುಗಳನ್ನು ನಿರ್ಮಿಸಬೇಕು. ಈ ಮಡಿಗಳಲ್ಲಿ ಲವಣಗಳಿಲ್ಲದ ಉತ್ತಮ ಗುಣಮಟ್ಟದ ನೀರನ್ನು ನಿಲ್ಲಿಸಬೇಕು. ಲವಣಗಳು ನೀರಿನಲ್ಲಿ ಕರಗುತ್ತವೆ. ನೀರು ಭೂಮಿಯಾಳಕ್ಕೆ ಹೋದಂತೆಲ್ಲ ಅದರಲ್ಲಿ ಕರಗಿದ ಲವಣಗಳೂ ಕೆಳಗಿಳಿದು ಹೋಗಿ ಮೇಲಿನ ಮಣ್ಣು ಸಸ್ಯಗಳ ಬೆಳವಣಿಗೆಗೆ ಯೋಗ್ಯವೆನಿಸುತ್ತದೆ.

ಒಂದು ಮಹತ್ವದ ವಿಷಯವನ್ನು ಇಲ್ಲಿ ಗಮನಿಸಬೇಕು. ಲವಣಗಳನ್ನು ಹೊತ್ತು ಬಸಿದು, ಮಣ್ಣಿನ ಆಳಕ್ಕೆ ಚಲಿಸಿದ ನೀರನ್ನು ಬಸಿಗಾಲುವೆಗಳ ಮೂಲಕ ಆ ಪ್ರದೇಶದಿಂದ ಹೊರ ಹಾಕಬೇಕಾದ ಕಾರ್ಯವು ಅತ್ಯವಶ್ಯ. ಇಲ್ಲದಿದ್ದರೆ, ಆಸ್ಪದವು ದೊರೆತೊಡನೆ ಲವಣಗಳು ಮಣ್ಣಿನ ಮೇಲ್ಭಾಗಕ್ಕೆ ಬರುವ ಸಾಧ್ಯತೆಯಿದೆ (ಬಸಿಗಾಲುವೆಗಳ ನಿರ್ಮಾಣಕ್ಕೆ ಸಂಬಂಧಿಸಿದ ವಿವರಗಳನ್ನು ಅಧ್ಯಾಯ ೪ರಲ್ಲಿ ಕೊಡಲಾಗಿದೆ.)

iii. ನೀರಾವರಿಯನ್ನು ಮಾಡಲು ಭೂಮಿಯ ಸೂಕ್ತ ರಚನೆ

ಅ) ಬದು ಪಟ್ಟಿ ಇಲ್ಲವೇ ಮಡಿ ಪದ್ಧತಿಯ ನೀರಾವರಿಯನ್ನು ಬೆಳೆಗೆ ಪೂರೈಸಿದರೆ, ನೀರು ಭೂ ಪ್ರದೇಶದೆಲ್ಲೆಡೆ ಒಂದೇ ಸಮನಾಗಿ ನಿಲ್ಲುವುದರಿಂದ ಒಂದೇ ಬಗೆಯಿಂದ ಭೂಮಿಯೊಳಗೆ ಬಸಿದು ಹೋಗಿ ತನ್ನೊಡನೆ ಲವಣಗಳನ್ನು ಕೆಳಗೊಯ್ಯುತ್ತದೆ.

ಆ) ಭೂಮಿಯನ್ನು ಬದು ಕಾಲುವೆ ಪದ್ಧತಿಯಿಂದ ತಯಾರಿಸಿ ಕಾಲುವೆಯಲ್ಲಿ ಎಲೆಕೋಸು ಹೂಕೋಸು. ಮೂಲಂಗಿ ಮುಂತಾದ ತರಕಾರಿಗಳನ್ನು ಬೆಳೆದರೆ, ಬೆಳೆಗಳ ಮೇಲೆ ಲವಣದಿಂದಾಗುವ ದುಷ್ಪರಿಣಾಮವು ಅತಿ ಕಡಮೆ ಎಂದು ಕಂಡುಬಂದಿದೆ. ಮುಂಜಾನೆ ಪೂರೈಸಿದ ನೀರಿನ ಸ್ವಲ್ಪ ಭಾಗವು ಬೋದುಗಳತ್ತ ಚಲಿಸಿ ಅಲ್ಲಿಂದಲೇ ಆವಿಯಾಗುವುದರಿಂದ ಆ ನೀರಿನಲ್ಲಿರುವ ಲವಣಗಳು ಬೋದುಗಳ ಮೇಲೆ ಸಂಗ್ರಹಗೊಳ್ಳುತ್ತವೆ. ಹೀಗಾಗಿ ಕಾಲುವೆಗಳಲ್ಲಿರುವ ಬೆಳೆಗಳಿಗೆ ಲವಣಗಳಿಂದಾಗುವ ಅಪಾಯವು ತಪ್ಪುತ್ತದೆ.

ಇ) ಬದು-ಕಾಲುವೆ ಪದ್ಧತಿಯ ನೀರಾವರಿಯಲ್ಲಿ ಒಂದು ಕಾಲುವೆಯನ್ನು ಬಿಟ್ಟು ಇನ್ನೊಂದರಲ್ಲಿ ನೀರನ್ನು ಪೂರೈಸಿದರೆ, ಜೋಳ, ಮುಸುಕಿನ ಜೋಳ, ಅಲಸಂದೆ, ಟೊಮೆಟೋ ಮುಂತಾದ ಬೆಳೆಗಳಿಂದ ಉತ್ತಮ ಇಳುವರಿಯನ್ನು ಪಡೆಯಬಹುದೆಂದು ಕಂಡುಬಂದಿದೆ. ನೀರನ್ನು ಪೂರೈಸದ ಕಾಲುವೆಗಳನ್ನು ನೀರಿನ ಪೂರೈಕೆಯಾಗುವ ಕಾಲುವೆಗಳಿಗಿಂತ ಹೆಚ್ಚು ಆಳವಾಗಿರುವಂತೆ ನೋಡಿಕೊಳ್ಳಬೇಕು. ಆಳವಾಗಿರುವ ಈ ಕಾಲುವೆಗಳು ಬಸಿಗಾಲುವೆಯ ಕಾರ್ಯವನ್ನು ನಿರ್ವಹಿಸುತ್ತವೆ. ಲವಣಗಳು, ಬೆಳೆಯಿರುವ ಸಾಲುಗಳಿಂದ ದೂರ ಚಲಿಸಿ ಅಲ್ಲಿ ಸಂಗ್ರಹಗೊಳ್ಳುವುದರಿಂದ ಬೆಳೆಗಳು ಲವಣದ ದುಷ್ಪರಿಣಾಮವನ್ನು ತಪ್ಪಿಸಿಕೊಂಡಂತಾಗುತ್ತದೆ.

ಈ) ಕೆಲವು ಬೆಳೆಗಳ ಬೀಜಗಳು ಮೊಳಕೆಯೊಡೆಯುವಾಗ ಮತ್ತು ಸಣ್ಣ ಸಸಿಗಳಾಗಿದ್ದಾಗ ಲವಣಗಳಿಂದಾಗುವ ದುಷ್ಪರಿಣಾಮವನ್ನು ತಡೆದುಕೊಳ್ಳಲಾರವು. ಸಸಿಗಳು ಸರಿಯಾಗಿ ಬೇರು ಬಿಟ್ಟವೆಂದರೆ ಲವಣಗಳ ದುಷ್ಪರಿಣಾಮಗಳನ್ನು ಎದುರಿಸಿ, ಉತ್ತಮ ಇಳುವರಿಯನ್ನು ಕೊಡಬಲ್ಲವು ಬೆಳೆಯ ಪ್ರಾರಂಭಿಕ ಸಮಯದಲ್ಲಿ ಲವಣಗಳಿಂದಾಗುವ ಅಪಾಯವನ್ನು ತಪ್ಪಿಸಲು ಕೆಳಗಿನ ವಿಧಾನವನ್ನು ಅನುಸರಿಸಬಹುದು.

ಬೀಜಗಳನ್ನು ಬಿತ್ತಬೇಕೆಂದಿರುವ ಭೂ ಪ್ರದೇಶಕ್ಕೆ ನೀರನ್ನು ಪೂರೈಸಿ ಮೇಲ್ಮಣ್ಣಿನಲ್ಲಿರುವ ನೀರು ಆವಿಯಾಗಿ ಹೋಗುವವರೆಗೆ ಭೂಮಿಯನ್ನು ಹಾಗೆಯೇ ಇರಲು ಬಿಡಬೇಕು. ನೀರು ಆವಿಯಾಗುತ್ತ ಸಾಗಿದಂತೆ ಮಣ್ಣಿನಲ್ಲಿರುವ ಲವಣಗಳು ಮೇಲೆ ಬಂದು ಮಣ್ಣಿನ ಮೇಲ್ಭಾಗದಲ್ಲಿ ಸಂಗ್ರಹಗೊಳ್ಳುತ್ತದೆ. ನಂತರ ಭೂಮಿಯನ್ನು ಕಬ್ಬಿಣದ ರೆಕ್ಕೆಯ ನೇಗಿಲಿಂದ (Mould board plough) ಉಳುಮೆ ಮಾಡಬೇಕು. ಬೇಸಾಯದ ಈ ಕ್ರಮದಿಂದ ಲವಣ ಭರಿತ ಮೇಲ್ಮಣ್ಣು ಕೆಳಗೆ ಹೋಗಿ ಲವಣ ರಹಿತ ಅಥವಾ ಅಲ್ಪ ಲವಣವಿರುವ ಕೆಳಗಿನ ಮಣ್ಣು ಮೇಲೆ ಬರುತ್ತದೆ. ಆಗ ಬೀಜಗಳನ್ನು ಬಿತ್ತಬೇಕು. ಮಣ್ಣಿನಲ್ಲಿರುವ ಆರ್ದ್ರತೆಯಿಂದ ಬೀಜಗಳು ಮೊಳಕೆಯೊಡೆಯುತ್ತವೆ. ಸಸಿಗಳು ಬೇರು ಬಿಟ್ಟು ಬಲಿಷ್ಠವಾದುವೆಂದರೆ ಲವಣದ ದುಷ್ಪರಿಣಾಮವನ್ನು ಸಮರ್ಥವಾಗಿ ಎದುರಿಸುತ್ತವೆ.

iv. ಲವಣ ಸಹಿಷ್ಣು ಬೆಳೆಗಳ ಬಳಕೆ: ದೊಡ್ಡ ಪ್ರಮಾಣದಲ್ಲಿ ಲವಣಗಳಿರುವ ಮಣ್ಣಿನಲ್ಲಿಯೂ ಕೆಲವು ಬೆಳೆಗಳು ಸರಿಯಾಗಿ ಬೆಳೆದು ಉತ್ತಮ ಇಳುವರಿಯನ್ನು ಕೊಡುವ ಸಾಮರ್ಥ್ಯವನ್ನು ಹೊಂದಿದ್ದರೆ ಇನ್ನು ಕೆಲವು ಬೆಳೆಗಳು ಲವಣದ ದುಷ್ಪರಿಣಾಮವನ್ನು ಸಹಿಸಿಕೊಳ್ಳಲಾರದೆ ಕುಂಠಿತಗೊಳ್ಳುತ್ತವೆ. ಬೆಳೆಗಳ ಲವಣ ಸಹಿಷ್ಣತೆಯನ್ನು ಪರೀಕ್ಷಿಸಲು ಕೆಳಗಿನ ಸಂಗತಿಗಳನ್ನು ಪರಿಗಣಿಸಲಾಗುತ್ತದೆ:

 • ಸಂಬಂಧಿಸಿದ ಬೆಳೆಯು ಲವಣಯುತ ಮಣ್ಣಿನಲ್ಲಿ ಬೆಳೆದು, ತನ್ನ ಜೀವನ ಚಕ್ರವನ್ನು ಪೂರ್ತಿಗೊಳಿಸುತ್ತದೆಯೇ ಎಂಬುದನ್ನು ವೀಕ್ಷಿಸಬೇಕು.
 • ಲವಣಯುತ ಮಣ್ಣಿನಲ್ಲಿ ದೊರೆತ ಈ ಇಳುವರಿಯು, ಆ ಬೆಳೆಯನ್ನು ಲವಣರಹಿತ ಮಣ್ಣಿನಲ್ಲಿ ಬೆಳೆದಾಗ ದೊರೆಯುವ ಇಳುವರಿಯು ಶೇಕಡಾ ಎಷ್ಟೆಂಬುದನ್ನು ಲೆಕ್ಕ ಮಾಡಬೇಕು. ಶೇಕಡಾ ಈ ಇಳುವರಿಯು ಅಧಿಕವಿದ್ದಷ್ಟು ಆ ಬೆಳೆಯ ಲವಣ ಸಹಿಷ್ಣುತೆಯೂ ಅಧಿಕವೆಂದು ತಿಳಿಯಬೇಕು.

ಲವಣ ಸಹಿಷ್ಣುತೆಯ ಮೇಲಿಂದ ವಿವಿಧ ಬೆಳೆಗಳನ್ನು ಮೂರು ಗುಂಪುಗಳಲ್ಲಿ ವಿಂಗಡಿಸಲಾಗಿದೆ. ಇಂತಹ ವರ್ಗೀಕರಣವು ಕೋಷ್ಟಕ ೧೦ರಲ್ಲಿದೆ. ಅದೇ ರೀತಿ ಮಣ್ಣಿನಲ್ಲಿರುವ ಬೋರಾನ್‌ನ ಅಧಿಕ್ಯವನ್ನು ಸಹಿಸಿಕೊಳ್ಳುವ ಸಾಮರ್ಥ್ಯವಿರುವ ಮತ್ತು ಸಹಿಸಿಕೊಳ್ಳಲಾರದ ಬೆಳೆಗಳ ಪಟ್ಟಿಯು ಕೋಷ್ಟಕ ೮ರಲ್ಲಿದೆ.

ವಿನಿಮಯ ಸೋಡಿಯಂ ಅಧಿಕ್ಯವಿರುವ ಮಣ್ಣಿನ ನಿರ್ವಹಣೆ

ವಿನಿಮಯ ಸೋಡಿಯಂ, ಅಧಿಕ ಪ್ರಮಾಣದಲ್ಲಿರುವ ಮಣ್ಣಿನಲ್ಲಿಯೂ ನೀರಿನ ಸಹಾಯದಿಂದ ಸೋಡಿಯಂ ಅನ್ನು ಬಸಿದು ಹೊರ ಹಾಕುವುದು ಅವಶ್ಯವಿದೆ. ಆದರೆ ನೀರನ್ನು ಮಾತ್ರ ಪೂರೈಸಿದರೆ ಮಣ್ಣಿನ ಕಣಗಳ ಮೇಲಿರುವ ವಿನಿಮಯ ಸೋಡಿಯಂ ಹೊರ ಬರುವುದಿಲ್ಲ. ಆದ್ದರಿಂದ ಸೂಕ್ತವಾದ ರಾಸಾಯನಿಕ ದ್ರವ್ಯಗಳನ್ನು ಮಣ್ಣಿಗೆ ಸೇರಿಸಿ, ವಿನಿಮಯ ಸೋಡಿಯಂ ಮಣ್ಣಿನ ಕಣಗಳನ್ನು ತೊರೆದು ಹೊರ ಬಂದು ಅದು ಲವಣ ರೂಪಕ್ಕೆ ಪರಿವರ್ತನೆಯನ್ನು ಹೊಂದುವಂತೆ ಮಾಡಬೇಕು. ಆಗ ಸೋಡಿಯಂ ಲವಣವನ್ನು ನೀರಿನ ಸಹಾಯದಿಂದ ಬಸಿದು ತೆಗೆಯಬಹುದು. ಇಂತಹ ರಾಸಾಯನಿಕ ದ್ರವ್ಯಗಳನ್ನು ಮಣ್ಣು ಸುಧಾರಕಗಳೆಂದು ಕರೆಯುವರು.

) ಮಣ್ಣಿನ ಸುಧಾರಕಗಳ ಪ್ರಕಾರಗಳು: ಸುಧಾರಕಗಳೆಂದು ಬಳಸುವ ರಾಸಾಯನಿಕ ವಸ್ತುಗಳಲ್ಲಿ ಮೂರು ಪ್ರಕಾರಗಳಿವೆ:

 • ನೀರಿನೊಡನೆ ಅಲ್ಪ ಪ್ರಮಾಣದಲ್ಲಿ ಕರಗ ಬಲ್ಲ ಕ್ಯಾಲ್ಸಿಯಂನ ಲವಣಗಳು: ಉದಾ: ಜಿಪ್ಸಂ.
 • ಆಮ್ಲಗಳು ಇಲ್ಲವೇ ಆಮ್ಲತೆಯನ್ನು ನಿರ್ಮಿಸುವ ದ್ರವ್ಯಗಳು. ಉದಾ: ಗಂಧಕಾಮ್ಲ, ಗಂಧಕ, ಕಬ್ಬಿಣದ ಸಲ್ಫೇಟ್, ಅಲ್ಯುಮಿನಿಯಂ ಸಲ್ಫೇಟ್ ಮತ್ತು ಸುಣ್ಣ – ಗಂಧಕ ಮಿಶ್ರಣ.
 • ನೀರಿನಲ್ಲಿ ಕರಗದ ದ್ರವ್ಯಗಳು. ಉದಾ: ಸುಣ್ಣದ ಕಲ್ಲು.

ಮೇಲಿನವುಗಳಲ್ಲಿ ಯಾವ ವಸ್ತುವನ್ನು ಸುಧಾರಕವೆಂದು ಬಳಸಬೇಕು ಎಂಬುದು ಕೆಳಗಿನ ಸಂಗತಿಗಳ ಮೇಲೆ ಅವಲಂಬಿಸಿದೆ.

 • ಮಣ್ಣಿನ ಪರಿಸ್ಥಿತಿ.
 • ಸ್ಥಾನಿಕವಾಗಿ ಲಭ್ಯತೆ.
 • ಸುಧಾರಕಗಳ ಬೆಲೆ.

ಮಣ್ಣಿನ ಪರಿಸ್ಥಿತಿಯನ್ನು ಅವಲೋಕಿಸಿದಾಗ ಮಣ್ಣಿನಲ್ಲಿರುವ ಕ್ಯಾಲ್ಸಿಯಂನ ಪ್ರಮಾಣ, ಆಮ್ಲ-ಕ್ಷಾರ ನಿರ್ದೇಶಕ ಇತ್ಯಾದಿಗಳನ್ನು ಪರಿಗಣಿಸಬೇಕು. ಮಣ್ಣಿನಲ್ಲಿ ಕ್ಯಾಲ್ಸಿಯಂ ಕಾರ್ಬೊನೇಟ್‌ನ ಪ್ರಮಾಣವು ಕಡಮೆ ಇದ್ದರೆ ಜಿಪ್ಸಂ ಬಳಸಬೇಕು. ಕ್ಯಾಲ್ಸಿಯಂ ಕಾರ್ಬೊನೇಟ್ ಸಾಕಷ್ಟು ಇರುವಲ್ಲಿ ಗಂಧಕವನ್ನು ಉಪಯೋಗಿಸಬೇಕು.

) ಸುಧಾರಕಗಳನ್ನು ಮಣ್ಣಿಗೆ ಪೂರೈಸುವಾಗ ಅನುಸರಿಬೇಕಾದ ವಿಧಾನಗಳು: ಸುಧಾರಕಗಳನ್ನು ಮಣ್ಣಿಗೆ ಪೂರೈಸುವಾಗ ಕೆಳಗಿನ ವಿಧಾನಗಳನ್ನು ಅನುಸರಿಸಬೇಕು.

 • ಸುಧಾರಿಸಬೇಕಾದ ಭೂಮಿಗೆ ೫-೭ ಸೆಂ.ಮೀ.ನಷ್ಟು ನೀರನ್ನು ಪೂರೈಸಬೇಕು.
 • ನೀರು ಕೆಳಗೆ ಬಸಿದು ಹೋಗಿ ಮಣ್ಣಿನ ಮೇಲ್ಭಾಗದ ಆದ್ರತೆಯು ಕಡಮೆಯಾಗುವವರೆಗೆ ಹಾಗೆಯೇ ಇರಗೊಡಬೇಕು.
 • ಬೇಸಾಯದ ಉಪಕರಣಗಳನ್ನು ಉಪಯೋಗಿಸಬಹುದಾದಷ್ಟು ಮಣ್ಣು ಒಣಗಿದೊಡನೆ, ಲೆಕ್ಕ ಮಾಡಿ ಅವಶ್ಯವಿರುವಷ್ಟು ರಾಸಾಯನಿಕ ದ್ರವ್ಯವನ್ನು (ಸುಧಾರಕವನ್ನು) ಎಲ್ಲೆಡೆ ಸರಿಯಾಗಿ ಬೀಳುವಂತೆ ಪಸರಿಸಬೇಕು.
 • ಕುಂಟೆ ಅಥವಾ ಡಿಸ್ಕ್‌ಕುಂಟೆಯ ಸಹಾಯದಿಂದ, ರಾಸಾಯನಿಕ ದ್ರವ್ಯವನ್ನು ಮೇಲ್ಮಣ್ಣಿನಲ್ಲಿ ಮಿಶ್ರ ಮಾಡಬೇಕು.
 • ನಂತರ ಭೂಮಿಯ ಮೇಲೆ ನಿಲ್ಲುವಷ್ಟು ನೀರನ್ನು ಮಣ್ಣಿಗೆ ಪೂರೈಸಬೇಕು. ಸುಮಾರು ೧೨೦-೧೫೦ ಸೆಂ.ಮೀ. ನೀರು ಮಣ್ಣಿನೊಳಗಿಂದ ಬಸಿದು ಹೋಗುವವರೆಗೆ ಈ ರೀತಿ ನೀರನ್ನು ಪೂರೈಸುತ್ತಲೇ ಇರಬೇಕು.
 • ಗಂಧಕವನ್ನು ಭೂಮಿಗೆ ಹಾಕಿದರೆ ಅದು ಸೂಕ್ಷ್ಮ ಜೀವಿಗಳ ಕ್ರಿಯೆಯಿಂದ ಗಂಧಕಾಮ್ಲವಾಗಿ ಪರಿವರ್ತನೆ ಹೊಂದಲು ಕೆಲವು ದಿನಗಳ ಕಾಲಾವಕಾಶ ಬೇಕಾಗುತ್ತದೆ. ಆದ್ದರಿಂದ ಗಂಧಕವನ್ನು ಮಣ್ಣಿನೊಡನೆ ಮಿಶ್ರ ಮಾಡಿದ ನಂತರ ೧೦-೧೫ ದಿನಗಳವರೆಗೆ ತಡೆದು, ಆ ಮೇಲೆ ನೀರನ್ನು ಪೂರೈಸಬೇಕು.

) ಸುಧಾರಕಗಳನ್ನು ಭೂಮಿಗೆ ಪೂರೈಸಿದಾಗ ನಡೆಯುವ ರಾಸಾಯನಿಕ ಕ್ರಿಯೆಗಳು:

i. ಕ್ಯಾಲ್ಸಿಯಂ ಕಾರ್ಬೊನೇಟ್ ಇರುವ ಮಣ್ಣು


 ii. ಕ್ಯಾಲ್ಸಿಯಂ ಕಾರ್ಬೊನೇಟ್ ಇರದ ಮಣ್ಣು (ಆಮ್ಲಕ್ಷಾರ ನಿರ್ದೇಶಕವು . ಅಥವಾ ಅದಕ್ಕಿಂತ ಅಧಿಕ):

 

 • ಜಿಪ್ಸಂ: ಮೇಲೆ ವಿವರಿಸಿದಂತೆ ಸೋಡಿಯಂ ಮಣ್ಣು ಮತ್ತು ಜಿಪ್ಸಂ ಇವು ಪ್ರತಿಕ್ರಿಯೆಗೊಂಡು ಕ್ಯಾಲ್ಸಿಯಂ ಮಣ್ಣು ಮತ್ತು ಸೋಡಿಯಂ ಸಲ್ಫೇಟ್ ಹೊರಬರುತ್ತವೆ.
 • ಗಂಧಕ: ಮೇಲೆ ವಿವರಿಸಿದಂತೆ, ಗಂಧಕದಿಂದ ಗಂಧಕಾಮ್ಲವು ನಿರ್ಮಾಣಗೊಳ್ಳುತ್ತದೆ. ಆದರೆ, ಮಣ್ಣಿನಲ್ಲಿ ಕ್ಯಾಲ್ಸಿಯಂ ಕಾರ್ಬೊನೇಟ್ ಇಲ್ಲದಿರುವುದರಿಂದ ಕೆಳಗೆ ತೋರಿಸಿದ ರಾಸಾಯನಿಕ ಕ್ರಿಯೆಯು ನಡೆಯುತ್ತದೆ. 

iii. ಕ್ಯಾಲ್ಸಿಯಂ ಕಾರ್ಬೊನೇಟ್ ಇಲ್ಲದ ಮಣ್ಣು (ಆಮ್ಲಕ್ಷಾರ ನಿರ್ದೇಶಕವು . ಕ್ಕಿಂತ ಕಡಮೆ):

 

 • ಜಿಪ್ಸಂ – ಮೇಲೆ (i) ಮತ್ತು (ii)ರಲ್ಲಿ ವಿವರಿಸಿದಂತೆ.
 • ಗಂಧಕ – ಮೇಲೆ (ii) ರಲ್ಲಿ ವಿವರಿಸಿದಂತೆ
 • ಕಬ್ಬಿಣದ ಸಲ್ಫೇಟ್ – ಮೇಲೆ (ii)ರಲ್ಲಿದ್ದಂತೆ

ಮಣ್ಣಿಗೆ ಬೇಕಾಗುವ ಜಿಪ್ಸಂನ ಪ್ರಮಾಣ : ಮಣ್ಣಿನಲ್ಲಿರುವ ವಿನಿಮಯ ಸೋಡಿಯಂನ ಪ್ರಮಾಣವನ್ನು ಯಾವ ಮಟ್ಟಕ್ಕೆ ಇಳಿಸಬೇಕೆಂಬುದರ ಮೇಲಿಂದ, ಮಣ್ಣಿಗೆ ಪೂರೈಸಬೇಕಾದ ಜಿಪ್ಸಂನ ಪ್ರಮಾಣವನ್ನು ನಿರ್ಧರಿಸಬೇಕಾಗುತ್ತದೆ. ವಿನಿಮಯ ಸೋಡಿಯಂನ ಪ್ರಭಾವವನ್ನು ನಿವಾರಿಸಲು ಮಣ್ಣಿಗೆ ಪೂರೈಸಬೇಕಾದ ಜಿಪ್ಸಂನ ಪ್ರಮಾಣವನ್ನು, ಪ್ರಯೋಗಾಲಯದಲ್ಲಿ ಕೆಳಗಿನಂತೆ ಕಂಡುಕೊಳ್ಳಲಾಗುತ್ತದೆ.

 • ಒಂದು ಲೀಟರು ಶುದ್ಧ ನೀರಿಗೆ ೫ ಗ್ರಾಂ. ಶುದ್ಧ ಜಿಪ್ಸಂ ಪುಡಿಯನ್ನು ಸೇರಿಸಿ ಚೆನ್ನಾಗಿ ಅಲುಗಾಡಿಸಬೇಕು. ಮೇಲಿರುವ ತಿಳಿ ದ್ರಾವಣವನ್ನು ಸೋಸುಕಾಗದದ ಮೂಲಕ ಸೋಸಿ ಸಂಗ್ರಹಿಸಿಟ್ಟುಕೊಂಡು ಈ ದ್ರಾವಣದಲ್ಲಿರುವ ಕ್ಯಾಲ್ಸಿಯಂನ ಪ್ರಮಾಣವನ್ನು ಕಂಡುಹಿಡಿಯಬೇಕು.
 • ಒಂದು ಗಾಜಿನ ಪಾತ್ರೆಯಲ್ಲಿ ೫ ಗ್ರಾಂ ಮಣ್ಣನ್ನು ತೆಗೆದುಕೊಂಡು ಅದಕ್ಕೆ ಮೇಲೆ ಹೇಳಿದ ಜಿಪ್ಸಂ ದ್ರಾವಣವನ್ನು ಸೇರಿಸಿ ಸರಿಯಾಗಿ ಅಲುಗಾಡಿಸಿ, ಸೋಸು ಕಾಗದದ ಮೂಲಕ ಸೋಸಬೇಕು.
 • ಮೇಲಿನಂತೆ ಸೋಸಿದ ದ್ರಾವಣದಲ್ಲಿರುವ ಕ್ಯಾಲ್ಸಿಯಂ ಮತ್ತು ಮೆಗ್ನೀಸಿಯಂ ಇವುಗಳ ಪ್ರಮಾಣವನ್ನು ಕಂಡುಹಿಡಿಯಬೇಕು. ಈ ಪ್ರಮಾಣವನ್ನು ಜಿಪ್ಸಂನ ಮೂಲ ದ್ರಾವಣದಲ್ಲಿದ್ದ ಕ್ಯಾಲ್ಸಿಯಂನ ಪ್ರಮಾಣದಿಂದ ಕಳೆದರೆ, ಬರುವ ಅಂಕೆಯು, ಮಣ್ಣು ಬಳಸಿಕೊಂಡ ಜಿಪ್ಸಂನ (ಕ್ಯಾಲ್ಸಿಯಂನ) ಪ್ರಮಾಣವನ್ನು ಸೂಚಿಸುತ್ತದೆ.
 • ಮೇಲೆ ವಿವರಿಸಿದಂತೆ ದೊರೆತ ಕ್ಯಾಲ್ಸಿಯಂ ಅನ್ನು ಮಿಲಿ ಗ್ರಾಂ ಈಕ್ವಿವ್ಯಾಲಂಟ್ (ಪ್ರತಿ ೧೦೦ ಗ್ರಾಂ) ರೂಪಕ್ಕೆ ಪರಿವರ್ತಿಸಲಾಗುತ್ತದೆ. ಈ ಅಂಕೆಯು ಒಂದು ಮಿಲಿ ಗ್ರಾಂ ಈಕ್ವೀವ್ಯಾಲಂಟ್ (m.e) (ಪ್ರತಿ ೧೦೦ ಗ್ರಾಂ ಮಣ್ಣಿಗೆ) ಎಂದಾದರೆ ಒಂದು ಹೆಕ್ಟೇರು ಭೂಮಿಯು ೧೫ ಸೆಂ.ಮೀ. ಆಳದವರೆಗೆ ಇರುವ ಮಣ್ಣಿನ ವಿನಿಮಯ ಸೋಡಿಯಂ ಅನ್ನು ನಿವಾರಿಸಲು ೧.೭೨ ಟನ್ನು ಶುದ್ಧ ಜಿಪ್ಸಂ ಬೇಕಾಗುತ್ತದೆ. ಇದೇ ಆಧಾರದ ಮೇಲೆ ಸಂಬಂಧಿಸಿದ ಮಣ್ಣಿಗೆ ಹಾಕಬೇಕಾದ ಜಿಪ್ಸಂನ ಪ್ರಮಾಣವನ್ನು ಲೆಕ್ಕ ಮಾಡಬಹುದು.

ಉದಾ: ಒಂದು ಮಣ್ಣು ೪ ಮಿ.ಗ್ರಾಂ. ಈಕ್ವಿವ್ಯಾಲಂಟ್ ಕ್ಯಾಲ್ಸಿಯಂ ಅನ್ನು ಉಪಯೋಗಿಸಿಕೊಂಡಿತೆಂದರೆ, ಆ ಮಣ್ಣಿನ ಒಂದು ಹೆಕ್ಟೇರು ಪ್ರದೇಶದ ೧೫ ಸೆಂ.ಮೀ. ಆಳದಲ್ಲಿರುವ ವಿನಿಮಯ ಸೋಡಿಯಂ ಅನ್ನು ಹೊರ ಹಾಕಲು ೪ x ೧.೭೨ ಅಂದರೆ ೬.೮೮ ಟನ್ನು ಶುದ್ಧ ಜಿಪ್ಸಂ ಬೇಕಾಗುತ್ತದೆ.

ಪ್ರಯೋಗಾಲಯದ ಪರಿಸ್ಥಿತಿಗಿಂತ ಭೂಮಿಯ ಮಣ್ಣಿನ ಪರಿಸ್ಥಿತಿಯು ಭಿನ್ನವಾಗಿರುತ್ತದೆ. ಆದ್ದರಿಂದ, ವಾಸ್ತವವಾಗಿ ಮಣ್ಣಿಗೆ ಪೂರೈಸಬೇಕಾದ ಜಿಪ್ಸಂನ ಪ್ರಮಾಣವನ್ನು ತಿಳಿಯಲು ಪ್ರಯೋಗಾಲಯದಲ್ಲಿ ಕಂಡುಬಂದ ಅಂಕೆಯನ್ನು ೧.೨೫ ರಿಂದ ಗುಣಿಸುವ ಪದ್ಧತಿಯು ರೂಢಿಯಲ್ಲಿದೆ. ಮೇಲಿನ ಉದಾಹರಣೆಯಲ್ಲಿ ಕಂಡು ಬಂದ ೬.೮೮ ಟನ್ನು ಅಂಕೆಯನ್ನು ೧.೨೫ ರಿಂದ ಗುಣಿಸಿದರೆ,

೬.೮೮ x ೧.೨೫ = ೭೬ ಟನ್ನು

ಅಂದರೆ ಪ್ರತಿ ಹೆಕ್ಟೇರಿಗೆ ೮.೬ ಟನ್ನುಗಳಷ್ಟು ಜಿಪ್ಸಂ ಅನ್ನುಪೂರೈಸಬೇಕು ಎಂದಂತಾಯಿತು.

ಇತರ ಸುಧಾರಕಗಳು ಮತ್ತು ಅವುಗಳ ಪ್ರಮಾಣ

ವಿನಿಮಯ ಸೋಡಿಯಂನಿಂದಾಗುವ ದುಷ್ಪರಿಣಾಮವನ್ನು ನಿವಾರಿಸಲು ಪೂರೈಸಬೇಕಾದ ಜಿಪ್ಸಂ ಪ್ರಮಾಣವನ್ನು ಕಂಡು ಹಿಡಿಯುವ ವಿಧಾನವನ್ನು ಅರಿತುಕೊಂಡಾಯಿತು. ಆದರೆ ಜಿಪ್ಸಂನ ಬದಲು ಗಂಧಕ, ಗಂಧಕಾಮ್ಲ, ಕಬ್ಬಿಣದ ಸಲ್ಫೇಟ್ ಮುಂತಾದ ವಸ್ತುಗಳನ್ನು ಬಳಸುವ ಪ್ರಸಂಗವು ಎದುರಾದರೆ, ಅವುಗಳ ಪ್ರಮಾಣವನ್ನು ನಿರ್ಧರಿಸಬೇಕಾಗುತ್ತದೆ. ಇದಕ್ಕೆ ಸಂಬಂಧಿಸಿದ ವಿವರಗಳು ಕೋಷ್ಟಕ ೧೯ರಲ್ಲಿವೆ.

ಕೋಷ್ಟಕ ೧೯: ಮಣ್ಣಿನೊಳಗಿನ ವಿನಿಮಯ ಸೋಡಿಯಂನ ದುಷ್ಪರಿಣಾಮವನ್ನು ಹೋಗಲಾಡಿಸಲು ಪೂರೈಸಬೇಕಾದ ರಸಾಯನಿಕ ಸುಧಾರಕಗಳ ಪ್ರಮಾಣ

ಅ. ಸಂ.

ರಾಸಾಯನಿಕ ಸುಧಾರಕಗಳ ಹೆಸರು

ಒಂದು ಟನ್ನು ಜಿಪ್ಸಂ ಸರಿಸಮ ವೆನಿಸುವ ಪ್ರಮಾಣ (ಟನ್ನುಗಳು)

ಜಿಪ್ಸಂ
ಗಂಧಕಾಮ್ಲ ೦.೫೭೦
ಗಂಧಕ ೦.೧೮೬
ಸುಣ್ಣ – ಗಂಧಕ (ಶೇ. ೨೪ ಗಂಧಕವಿದೆ) ೦.೭೫೬
ಕಬ್ಬಿಣದ ಸಲ್ಫೇಟ್ (Fe SO೭HO) ೧.೬೨೦
ಅಲ್ಯೂಮಿನಿಯಂ ಸಲ್ಫೇಟ್
(AI (SO) ೧೮ HO
೧.೨೯೦
ಕ್ಯಾಲ್ಸಿಯಂ ಕಾರ್ಬೊನೇಟ್ ೦.೫೮೦

ಸಾವಯವ ಸುಧಾರಕಗಳು: ಮೇಲೆ ವಿವರಿಸಿದ, ರಾಸಾಯನಿಕ ವಸ್ತುಗಳನ್ನಲ್ಲದೇ ಕೆಲವು ಸಾವಯವ ವಸ್ತುಗಳನ್ನು ಬಳಸಿಯೂ ವಿನಿಮಯ ಸೋಡಿಯಂನಿಂದಾಗುವ ಅಪಾಯವನ್ನು ನಿವಾರಿಸಬಹುದು. ಇವುಗಳಲ್ಲಿ ಕೆಳಗಿನ ವಸ್ತುಗಳು ಪ್ರಮುಖವಾದುವೆನ್ನಬಹುದು.

i. ಸಕ್ಕರೆ ಕಾರ್ಖಾನೆಗಳಲ್ಲಿ ಉಪವಸ್ತುವಾಗಿರುವ ಕಾಕಂಬಿ: ಕಾಕಂಬಿಯಲ್ಲಿ, ಸರಾಸರಿ ಶೇಕಡಾ ೬೦ ರಿಂದ ೭೦ ಪಿಷ್ಟ ಪದಾರ್ಥಗಳು, ಶೇಕಡಾ ೦.೫ ಸಾರಜನಕ, ಶೇಕಡಾ ೦.೫ ರಂಜಕದ ಪೆಂಟಾಕ್ಸಾಯ್ಡ್, ಶೇಕಡಾ ೪ ರಿಂದ ೫ ಪೊಟ್ಯಾಶ್, ಶೇಕಡಾ ೨ ಕ್ಯಾಲ್ಸಿಯಂ ಮತ್ತು ಶೇಕಡಾ ೦.೫ ಗಂಧಕಾಮ್ಲ ಇರುತ್ತದೆಯೆಂದು ಕಂಡುಬಂದಿದೆ. ಕಾಕಂಬಿಯನ್ನು ಮಣ್ಣಿಗೆ ಸೇರಿಸಿದ ನಂತರ ಪಿಷ್ಟವು ಸೂಕ್ಷ್ಮ ಜೀವಿಗಳ ಕ್ರಿಯೆಯಿಂದ ಕಳಿಯತೊಡಗಿ ಅಸಿಟಿಕ್, ಪ್ರೊಪಿಯೋನಿಕ್, ಬ್ಯೂಟರಿಕ್, ಲ್ಯಾಕ್ಟಿಕ್ ಮುಂತಾದ ಸಾವಯವ ಆಮ್ಲಗಳು ನಿರ್ಮಾಣಗೊಳ್ಳುತ್ತವೆ. ಈ ಆಮ್ಲಗಳು ಈ ಕಾಕಂಬಿಯಲ್ಲಿ ಮೂಲತಃ ಇದ್ದ ಗಂಧಕಾಮ್ಲ ಇವು ಮಣ್ಣಿನ ಆಮ್ಲ-ಕ್ಷಾರ ನಿರ್ದೇಶಕವನ್ನು ತಗ್ಗಿಸುತ್ತವೆಯಲ್ಲದೇ ಕಾಕಂಬಿಯಲ್ಲಿದ್ದ ಕ್ಯಾಲ್ಸಿಯಂ, ಮಣ್ಣಿನ ಕಣಗಳ ಸುತ್ತ ಇರುವ ವಿನಿಮಯ ಸೋಡಿಯಂ ಆಯಾನ್‌ಗಳನ್ನು ಹೊರಹಾಕುತ್ತದೆ. ಹೀಗಾಗಿ ಮಣ್ಣಿನ ಭೌತಿಕ ಮತ್ತು ರಾಸಾಯನಿಕ ಗುಣಧರ್ಮಗಳು ಉತ್ತಮಗೊಳ್ಳುತ್ತವೆ.

ii. ಪ್ರೆಸ್ ಮಡ್‌(Press Mud): ಸಕ್ಕರೆ ಕಾರ್ಖಾನೆಯಲ್ಲಿ ಕಬ್ಬಿನ ರಸವನ್ನು ವಿವಿಧ ರೀತಿಯಿಂದ ಉಪಚರಿಸಿ ಅದನ್ನು ಶುದ್ಧಗೊಳಿಸಲು ಸೋಸಬೇಕಾಗುತ್ತದೆ. ಸೋಸು ಬಟ್ಟೆಯ ಮೇಲೆ ಉಳಿದಿರುವ ಕಲ್ಮಷಕ್ಕೆ ಪ್ರೆಸ್‌ಮಡ್ ಎಂಬ ಹೆಸರು. ಇದರಲ್ಲಿ ಸರಾಸರಿ ಶೇಕಡಾ ೭೦ ಕ್ಯಾಲ್ಸಿಯಂ ಕಾರ್ಬೊನೇಟ್, ಶೇಕಡಾ ೮ ಸಾವಯವ ಪದಾರ್ಥ, ಶೇಕಡಾ ೦.೪ ರಿಂದ ೦.೫ ಸಾರಜನಕ ಮತ್ತು ಶೇಕಡಾ ೧.೨೫ ರಂಜಕದ ಪೆಂಟಾಕೈಡ್ ಇರುತ್ತವೆ.

ವಿನಿಮಯ ಸೋಡಿಯಂನಿಂದಾಗುವ ದುಷ್ಪರಿಣಾಮವನ್ನು ಹೋಗಲಾಡಿಸಲು ಪ್ರೆಸ್‌ಮಡ್  ಮತ್ತು ೫ ಟನ್ನು ಕಾಕಂಬಿ ಇವೆರಡನ್ನೂ ಮಿಶ್ರ ಮಾಡಿ ಬಳಸಿದರೆ ವಿನಿಮಯ ಸೋಡಿಯಂ ಪೀಡಿತ ಮಣ್ಣನ್ನು ಸುಧಾರಿಸಬಹುದೆಂದು ಪ್ರಯೋಗಗಳಿಂದ ಕಂಡುಬಂದಿದೆ.

iii. ಇತರ ಸಾವಯವ ಪದಾರ್ಥಗಳು: ವಿನಿಮಯ ಸೋಡಿಯಂ ಪ್ರಮಾಣವು ಅಧಿಕವಾಗಿರುವ ಮಣ್ಣನ್ನು ಸುಧಾರಿಸಲು ಸಗಣಿ ಗೊಬ್ಬರ, ಕಾಂಪೋಸ್ಟ್, ಧೈಂಚಾ ಬೆಳೆಯ ಹಸಿರು ಗೊಬ್ಬರ ಇತ್ಯಾದಿಗಳನ್ನು ಪ್ರಯೋಜನಕಾರಿಯಾಗಿ ಬಳಸಬಹುದು.

ಶುಷ್ಕ ಮತ್ತು ಅರೆ ಶುಷ್ಕ ಪ್ರದೇಶಗಳಲ್ಲಿ ಲವಣ ಮತ್ತು ವಿನಿಮಯ ಸೋಡಿಯಂನ ದೊಡ್ಡ ಪ್ರಮಾಣದಲ್ಲಿರುವ ಮಣ್ಣಿನ ಸುಧಾರಣೆ: ಶುಷ್ಕ ಮತ್ತು ಅರೆ ಶುಷ್ಕ ಪ್ರದೇಶಗಳಲ್ಲಿ ವಾರ್ಷಿಕ ಮಳೆಯ ಪ್ರಮಾಣವು ಕಡಮೆ ಇರುವುದರಿಂದ ಲವಣಗಳು ಭೂಮಿಯಾಳಕ್ಕೆ ಬಸಿದು ಹೋಗದೆ, ಮಣ್ಣಿನ ಮೇಲು ಪದರದಲ್ಲಿಯೇ ಸಂಗ್ರಹಗೊಂಡಿರುತ್ತವೆ. ಈ ಬಗೆಯ ಮಣ್ಣಿನಲ್ಲಿ ವಿನಿಮಯ ಸೋಡಿಯಂನ ಪ್ರಮಾಣವು ಅಧಿಕವಾಗಿರುತ್ತದೆ ಈ ಪ್ರದೇಶದಲ್ಲಿ ಉತ್ತಮ ಗುಣಮಟ್ಟದ ನೀರಾವರಿ ಜಲವೂ ಸಾಮಾನ್ಯವಾಗಿ ಸಿಗುವುದಿಲ್ಲ. ಇಂಥ ಪರಿಸ್ಥಿತಿಯಲ್ಲಿ ಮಣ್ಣನ್ನು ಸುಧಾರಿಸುವ ಕಾರ್ಯವು ಬಹು ಕಷ್ಟಕರ. ಕರ್ಲ ಭೂಮಿ ಎಂದೇ ಹೆಸರಾದ ಈ ಬಗೆಯ ಮಣ್ಣು ಕರ್ನಾಟಕದಲ್ಲಿರುವ ನರಗುಂದ ಮತ್ತು ಅದರ ಸುತ್ತಲಿನ ಪ್ರದೇಶಗಳಲ್ಲಿ ಕಂಡುಬರುತ್ತದೆ. ನರಗುಂದ ಕರ್ಲ ಮಣ್ಣಿನ ಕೆಲವು ಗುಣ ಧರ್ಮಗಳು ಕೋಷ್ಟಕ ೨೦ರಲ್ಲಿವೆ.

ಕೋಷ್ಟಕ ೨೦: ನರಗುಂದ ಕರ್ಲ ಮಣ್ಣಿನ ಕೆಲವು ಗುಣ ಧರ್ಮಗಳು

ಮಣ್ಣಿನ ಆಳ ಸೆಂ.ಮೀ.

ಆಮ್ಲ-ಕ್ಷಾರ ನಿರ್ದೇಶಕ

ಶೇಕಡಾ ಕ್ಯಾಲ್ಸಿಯಂ ಕಾರ್ಬೊನೇಟ್

ಶೇಕಡಾ ಮಣ್ಣಿನಲ್ಲಿ ಎರೆಯ ಪ್ರಮಾಣ

ಶೇಕಡಾ ಒಟ್ಟು ವಿನಿಯಮ ಲವಣಗಳು

ಶೇಕಡಾ ಸೋಡಿಯಂ

೦-೧೭ ೯.೦೪ ೧.೩೮ ೫೦.೦ ೪.೮೪ ೧೭.೩
೧೭-೩೪ ೯.೦೪ ೫.೮೧ ೫೪.೫ ೪.೭೨ ೧೯.೫
೩೪-೬೬ ೮.೮೪ ೫.೧೬ ೫೧.೫ ೫.೩೫ ೨೩.೪
೬೬-೧೧೨ ೮.೫೯ ೫.೧೬ ೫೫.೦ ೬.೮೬ ೧೭.೭

ಕಣಗಳ ರಚನೆಯು ಅನಪೇಕ್ಷಿತವಾಗಿರುವುದರಿಂದ ಈ ಮಣ್ಣಿನಲ್ಲಿ ನೀರು ಸುಲಭವಾಗಿ ಪ್ರವೇಶಿಸುವುದೂ ಇಲ್ಲ ಹಾಗೂ ಬಸಿದು ಕೆಳಗಿನ ಸ್ತರಗಳಿಗೆ ಚಲಿಸುವುದೂ ಇಲ್ಲ. ಮಣ್ಣು ಒಣಗಿದೊಡನೆ ಹೆಪ್ಪುಗಟ್ಟಿದಂತಾಗಿ ಜಲ ಮತ್ತು ವಾಯು ಚಲನೆಗೆ ಆತಂಕವುಂಟಾಗುತ್ತದೆ. ಹೀಗಾಗಿ, ಬೀಜಗಳು ಸರಿಯಾಗಿ ಮೊಳಕೆಯೊಡೆದು ಹೊರ ಬರುವುದು ಕಷ್ಟ. ಮೊಳೆತು ಹೊರಬಂದ ಸಸಿಗಳು ಬಲಿಷ್ಠವಾಗಿ ಬೆಳೆಯಲಾರವು. ಇದಲ್ಲದೇ ರಭಸದ ಮಳೆ ಬಂತೆಂದರೆ ಮಣ್ಣು ದೊಡ್ಡ ಪ್ರಮಾಣದಲ್ಲಿ ಕೊಚ್ಚಿ ಹೋಗುತ್ತದೆ. ನೀರಾವರಿಯ ಅನುಕೂಲತೆ ಇಲ್ಲದೇ ಇಂಥ ಭೂಮಿಯನ್ನು ಸುಧಾರಿಸುವುದು ತುಂಬಾ ಕಷ್ಟ. ಅದಾಗ್ಯೂ, ಮುಂದಿನ ಕ್ರಮಗಳನ್ನು ಕೈಕೊಂಡರೆ ಭೂಮಿಯನ್ನು ಕೆಲಮಟ್ಟಿಗೆ ಸುಧಾರಿಸಬಹುದೆಂದು ಕಂಡುಬಂದಿದೆ.

ಸಮಪಾತಳಿಯ ಒಡ್ಡುಗಳ ನಿರ್ಮಾಣ: ಸಮಪಾತಳಿ ಒಡ್ಡುಗಳಿಂದ ಭೂಸವಕಳಿಯು ಕಡಮೆಯಾಗುತ್ತದೆಯಲ್ಲದೇ ಭೂಮಿಯೊಳಗೆ ಇಂಗಲು ಮಳೆಯ ನೀರಿಗೆ ಹೆಚ್ಚು ಸಮಯ ದೊರೆಯುತ್ತದೆ.

ಸಮಪಾತಳಿ ರೇಖೆಗುಂಟ ಬೇಸಾಯ: ಸಮಪಾತಳಿ ರೇಖೆಗುಂಟ ಉಳುಮೆ ಮಾಡಿ ಹೆಂಟೆಗಳನ್ನು ಹಾಗೆಯೇ ಬಿಡಬೇಕು. ಹರಿದು ಹೋಗುವ ಮಳೆಯ ನೀರಿಗೆ ಈ ಹೆಂಟೆಗಳು ಕೆಲ ಮಟ್ಟಿಗೆ ತಡೆಯನ್ನುಂಟುಮಾಡುವುದರಿಂದ, ಮಳೆಯ ನೀರು ಭೂಮಿಯನ್ನು ಪ್ರವೇಶಿಸಲು ಹೆಚ್ಚು ಅವಕಾಶವನ್ನು ಕಲ್ಪಿಸಿಕೊಟ್ಟಂತಾಗುತ್ತದೆ.

ಸುಧಾರಕ ವಸ್ತುಗಳ ಬಳಕೆ: ಮಳೆಯು ಆರಂಭವಾಗುವುದಕ್ಕಿಂತ ಮೊದಲು ಪ್ರತಿ ಹೆಕ್ಟೇರಿಗೆ ೧೨೫ ರಿಂದ ೨೫೦ ಕಿ.ಗ್ರಾಂ. ಗಂಧಕ ಮತ್ತು ಸುಮಾರು ಆರು ಟನ್ ಸಗಣಿ ಗೊಬ್ಬರ ಇವುಗಳನ್ನು ಮಣ್ಣಿಗೆ ಸೇರಿಸಬೇಕು. ಇದರಿಂದ ಮಣ್ಣಿನ ಕಣಗಳ ಸುತ್ತಲಿರುವ ವಿನಿಮಯ ಸೋಡಿಯಂ ಹೊರ ಬಂದು ಸೋಡಿಯಂ ಸಲ್ಫೇಟ್ ರೂಪಕ್ಕೆ ಪರಿವರ್ತನೆ ಹೊಂದುವುದಲ್ಲದೇ ಮಣ್ಣಿನ ಆಮ್ಲ-ಕ್ಷಾರ ನಿರ್ದೇಶಕವೂ (pH) ಕಡಮೆಯಾಗುತ್ತದೆ. ಮಣ್ಣಿನ ಕಣಗಳ ರಚನೆಯು ಸುಧಾರಿಸಿ, ಹೆಚ್ಚು ನೀರು ಭೂಮಿಯಾಳಕ್ಕೆ ಬಸಿದು ಹೋಗಲು ಸಾಧ್ಯವಾಗುತ್ತದೆ.

ಮಣ್ಣಿನ ಗುಣಧರ್ಮಗಳಿಗೆ ಹೊಂದುವ ಬೆಳೆಗಳ ಆಯ್ಕೆ: ಮಣ್ಣಿನ ಗುಣಧರ್ಮಗಳು ಸಸ್ಯಗಳ ಸರಿಯಾದ ಬೆಳವಣಿಗೆಗೆ ಅನುಕೂಲಕರವಾಗಿದ್ದರೂ ಇಂತಹ ಅನಪೇಕ್ಷಿತ ಪರಿಸ್ಥಿತಿಯನ್ನು ಎದುರಿಸಿ ಸಮಾಧಾನಕರ ಇಳುವರಿಯನ್ನು ಕೊಡುವ ಬೆಳೆಗಳನ್ನೇ ಬೆಳೆಯಬೇಕು. ಎಮ್‌೩೫-೧ ತಳಿಯ ಹಿಂಗಾರಿ ಜೋಳ, ಸುಯೋಧರ ತಳಿಯ ಹತ್ತಿ ಮತ್ತು ಗೋಧಿ ಇವು ಇಲ್ಲಿಯ ಭೂಮಿಗೆ ಸೂಕ್ತವೆಂದು ಕಂಡುಬಂದಿದೆ.

ಕೆಲವು ಧನ ಮತ್ತು ಋಣ ಆಯಾನ್‌ಗಳು ಸಸ್ಯಗಳ ಮೇಲೆ ಉಂಟು ಮಾಡುವ ವಿಶಿಷ್ಟ ಪರಿಣಾಮಗಳು: ಅಧಿಕ ಪ್ರಮಾಣದ ಲವಣಗಳು ಮತ್ತು ಮಿತಿ ಮೀರಿದ ವಿನಿಮಯ ಸೋಡಿಯಂ ಮಣ್ಣಿನ ಭೌತಿಕ ಮತ್ತು ರಾಸಾಯನಿಕ ಗುಣಧರ್ಮಗಳ ಹಾಗೂ ಸಸ್ಯಗಳ ಬೆಳವಣಿಗೆಯ ಮೇಲೆ ಮಾಡುವ ದುಷ್ಪರಿಣಾಮಗಳ ಬಗ್ಗೆ ವಿವರಗಳು ಹಿಂದಿನ ಕಾಲಂಗಳಲ್ಲಿವೆ. ಕೆಲವು ಧನ ಮತ್ತು ಋಣ ಆಯಾನ್‌ಗಳಿಂದ ಸಸ್ಯದ ಮೇಲೆ ಆಗುವ ವಿಶಿಷ್ಟ ಪರಿಣಾಮಗಳು ಕೆಳಗಿನಂತಿವೆ.

 • ಮಣ್ಣಿನ ವಿನಿಮಯ ಸೋಡಿಯಂನ ಪ್ರಮಾಣವು ಅಧಿಕಗೊಂಡಿತೆಂದರೆ, ಸಸ್ಯಗಳು ಹೀರಿಕೊಳ್ಳುವ ಕ್ಯಾಲ್ಸಿಯಂ, ಮೆಗ್ನೀಸಿಯಂ ಮತ್ತು ಪೊಟ್ಯಾಸಿಯಂ ಪೋಷಕಗಳ ಪ್ರಮಾಣವು ಕಡಮೆಯಾಗುತ್ತದೆ.
 • ಮಣ್ಣಿನಲ್ಲಿ ಪೊಟ್ಯಾಸಿಯಂ ಪ್ರಮಾಣವು ಅಧಿಕಗೊಂಡಿತೆಂದರೆ ಸಸ್ಯಗಳಲ್ಲಿ ಮೆಗ್ನೀಸಿಯಂ ಕೊರತೆಯು ಕಂಡುಬರುತ್ತದೆ.
 • ಮಣ್ಣಿನಲ್ಲಿ ಕ್ಲೋರೈಡ್ ಪ್ರಮಾಣವು ಮಿತಿಮೀರಿದರೆ ಬಾದಾಮಿಯಂತಹ ಕಠಿಣ ಫಲಗಳನ್ನೀಯುವ ಬೆಳೆಗಳಿಗೆ ಈ ಪೋಷಕಗಳಿಂದ ಅಪಾಯವುಂಟಾಗುತ್ತದೆ.
 • ಕಾರ್ಬೊನೇಟಿನ ಪ್ರಮಾಣವು ಅಧಿಕಗೊಂಡರೆ, ಎಲೆಗಳಲ್ಲಿಯ ಪತ್ರಹರಿತ್ (Chlorophyll) ನಷ್ಟಗೊಂಡು ಸಸ್ಯದ ಎಲೆಗಳು ಮೊದಲು ಹಳದಿ ಬಣ್ಣಕ್ಕೆ ತಿರುಗಿ ನಂತರ ಬಿಳಚಿಕೊಳ್ಳುತ್ತವೆ.
 • ಬೋರಾನ್ ಪೋಷಕದ ಪ್ರಮಾಣವು ಅಧಿಕಗೊಂಡರೆ ಎಲೆಗಳ ತುದಿ ಭಾಗಗಳು ಒಣಗುತ್ತವೆ. ಎಲೆಗಳು ಹಳದಿ ಬಣ್ಣಕ್ಕೆ ತಿರುಗಬಹುದು ಇಲ್ಲವೇ ಒಣಗಬಹುದು.