ನಮ್ಮ ಭಾವನೆಗಳ ಪ್ರಕಟಣೆಯಲ್ಲಿ ಬಹುಮುಖ್ಯ ಪಾತ್ರವಹಿಸುವ ಈ ಮಿದುಳಿನ ವ್ಯವಸ್ಥೆಯನ್ನು ಮೊಟ್ಟಮೊದಲು ವಿವರಿಸಿದ ಕೀರ್ತಿ ಜೇಮ್ಸ್ ಪಾಪೆಜ್‌ಗೆ ಸಲ್ಲುತ್ತದೆ. ಮಿದುಳಿನ ಪ್ರಧಾನ ಮಸ್ತಿಷ್ಕದ ಮೇಲ್ಮೈಗೂ (ಕಾರ್ಟೆಕ್ಸ್‌), ಹೈಪೋಥೆಲಾಮಸ್‌ಗೂ ನಡುವಿನ ನರತಂತು ಜಾಲವ್ಯೂಹವೇ ಲಿಂಬಿಕ್ ವ್ಯವಸ್ಥೆ.

ನಿಮ್ಮ ಮನೆಗೊಂದು ಕೂಲರ್ ತಂದಿರಿ. ಏಪ್ರಿಲ್ ತಿಂಗಳು, ವಿಪರೀತ ಬಿಸಿಲು, ಸೆಖೆ. ಕೂಲರ್ ಆನ್ ಮಾಡಿ ತಂಪು ಹವೆಯನ್ನು ಹಿತವನ್ನು ಸವಿಯುವ, ಹಾಯಾಗಿ ನಿದ್ರಿಸುವ ಆಸೆಯಿಂದ ಸ್ವಿಚ್ ಹಾಕಿದರೆ, ಕೂಲರ್ ಕೆಲಸ ಮಾಡುತ್ತಿಲ್ಲ. ಆತ ತಕ್ಷಣ ನಿಮ್ಮ ಹೈಪೋಥೆಲಾಮಸ್‌ ಕಾರ್ಯ ಪ್ರವೃತ್ತವಾಗುತ್ತದೆ. ಸ್ವಾಯತ್ತ ನರವ್ಯವಸ್ಥೆಯ ಮುಖಾಂತರ, ನಿಮ್ಮ ಚರ್ಮದಡಿಯಲ್ಲಿರುವ ರಕ್ತನಾಳಗಳೆಲ್ಲ ಹಿಗ್ಗುವಂತೆ ಆದೇಶಿಸುತ್ತದೆ. ಅಲ್ಲಿ ರಕ್ತ ಸಂಚಾರ ಹೆಚ್ಚಿ ಮೈ ಬಿಸಿಯಾಗಿ, ಹೆಚ್ಚು ಬೆವರು ಉತ್ಪತ್ತಿಯಾಗುತ್ತದೆ. ಹೊರ ಬಂದ ಬೆವರು ಆವಿಯಾಗುವುದರ ಮೂಲಕ ನಮ್ಮ ದೇಹ ತಣಿಯುತ್ತದೆ. ಜೊತೆಗೆ ಬೀಸಣಿಗೆಯಿಂದಲೋ, ವಿದ್ಯುತ್ ಪಂಕದಿಂದಲೋ ಗಾಳಿ ಹಾಕಿಕೊಳ್ಳಲು ಮಿದುಳು ನಿಮ್ಮ ಕೈಗಳಿಗೆ ನಿರ್ದೇಶಿಸುತ್ತದೆ. ಇದರ ಜೊತೆ ಜೊತೆಗೆ ಆ ಕೆಲಸ ಮಾಡದ ಕೂಲರನ್ನು ನಿಮಗೆ ಮಾರಿದ ಅಂಗಡಿಯವರ ಮೇಲೆ ಅಸಾಧ್ಯ ಕೋಪ ಬರುತ್ತದೆ. ಎದುರಿಗಿದ್ದರೆ, ಕತ್ತಿನಪಟ್ಟಿ ಹಿಡಿದು, ಈ ಕೆಟ್ಟ ಕೂಲರನ್ನು ಬದಲಿಸಿ, ಹೊಸತನ್ನು ಕೊಡು ಎಂದು ಚೀರಬೇಕೆನಿಸುತ್ತದೆ. ಆದರೆ, ಮಿದುಳಿನ ಮೇಲ್ಮೈ ವಿವೇಚನೆಯಿಂದ ಈ ಸಮಸ್ಯೆಯ ಪರಿಹಾರ ಎಂದು ಆಲೋಚಿಸತೊಡಗುತ್ತದೆ. ಗ್ರಾರಂಟಿ ಕಾರ್ಡ್‌ ಇರುವುದರಿಂದ, ನಿಮ್ಮ ಸ್ನಾಹಿತರ ಸ್ನೇಹಿತ ಈ ಅಂಗಡಿಯವನಾದ್ದರಿಂದ, ಕೂಲರನ್ನು ರಿಪೇರಿ ಮಾಡಿಕೊಡುತ್ತಾನೆ; ಇಲ್ಲವೇ ಬದಲಿಸಿಕೊಡುತ್ತಾನೆ. ಇಲ್ಲದಿದ್ದರೆ ಇದ್ದೇ ಇದೆ ಗ್ರಾಹಕರ ರಕ್ಷಣಾ ವೇದಿಕೆ. ನ್ಯಾಯಾಲಯಕ್ಕಾದರೂ ಹೋಗಿ ಹೋರಾಡುವ ನಿರ್ಧಾರ ಮಾಡುತ್ತೀರಿ. ಅನ್ಯಾಯಕ್ಕೆ ಪ್ರತಿಭಟನೆ ಮಾಡಲೇಬೇಕು ಎಂದು ನಿರ್ಧರಿಸುತ್ತೀರಿ. ಇದೆಲ್ಲವೂ ಸಾಧ್ಯವಾಗಿದ್ದು ನಿಮ್ಮ ಲಿಂಬಿಕ್ ವ್ಯವಸ್ಥೆ ಮತ್ತು ಪ್ರಧಾನ ಮಸ್ತಿಷ್ಕದ ಫ್ರಾಂಟಲ್ ಲೋಬ್‌ನ ಹೊಂದಾಣಿಕೆಯ ಚಟುವಟಿಕೆಯಿಂದ.

ಮಿದುಳನ್ನು ಒಂದು ಸೈನ್ಯಕ್ಕೆ ಹೋಲಿಸುವುದಾದರೆ, ಪ್ರಧಾನ ಮಸ್ತಿಷ್ಕದ ಮೇಲ್ಮೈ (ಮುಖ್ಯವಾಗಿ ಮುಂಭಾಗ) ಶತೃ ಯಾರೆಂದು ನಿರ್ಧರಿಸುತ್ತದೆ. ಯುದ್ಧ ವಿಧಾನ, ಸಮರ ತಂತ್ರಗಳನ್ನು ರೂಪಿಸುತ್ತದೆ. ಲಿಂಬಿಕ್ ವ್ಯವಸ್ಥೆ ಮತ್ತು ಕೆಳ ಶಿರಗುಳಿ ಜೋಡಿಯು, ಯೋಜಿತ ಸಮರ ತಂತ್ರದಂತೆ. ರಣರಂಗಕ್ಕೆ ಹೋಗಿ ಶತೃವನ್ನು ಎದುರಿಸಿ ಹೋರಾಟಲು, ದೇಹಕ್ಕೆ ಆದೇಶ ನೀಡುವುದಲ್ಲದೆ, ಹೋರಾಟಕ್ಕೆ ಬೇಕಾದ ವಸ್ತುಗಳೆಲ್ಲವೂ (ಆಮ್ಲಜನರ, ಗ್ಲೂಕೋಸ್) ಸಿಗುವಂತೆ ನೋಡಿಕೊಳ್ಳುತ್ತದೆ. ಅವುಗಳ ಆದೇಶ ಮಧ್ಯ ಮಿದುಳು ನರಸೇತು, ಮೆಡುಲ್ಲಾ ಮುಖಾಂತರ, ಮಿದುಳ ಬಳ್ಳಿ ನರತಂತುಗಳು ಕೊನೆಗೆ ಸ್ನಾಯುಗಳಿಗೆ (ಇವು ಕಾಲಾಳುಗಳಿದ್ದಂತೆ) ಮುಟ್ಟುತ್ತದೆ. ಸೈನ್ಯಾಧಿಪತಿಯ ಯುದ್ಧ ಯೋಜನೆ, ಶತೃವನ್ನು ಮಟ್ಟಹಾಕಲು ಬೇಕಾದ ಮಾನಸಿಕ ಸಿದ್ಧತೆ (ಕೋಪ, ರೋಷ, ಆಕ್ರಮಣಶೀಲತೆ) ಹಾಗೂ ತೋಳು-ಕಾಲ್ಬಲ ಎಲ್ಲವೂ ಹೊಂದಿಕೊಂಡಾಗ ಯುದ್ಧ ನಡೆಯುತ್ತದೆ. ಇಲ್ಲದಿದ್ದರೆ ಹಿಂದೆಗೆದು ಪಲಾಯನ ಮಾಡುವಂತೆ ಮೇಲ್ಮೈ ಕಾಲಾಳುಗಳಿಗೆ ಸೂಚಿಸಬಹುದು.

ಯುದ್ಧದಲ್ಲಿ ಸಂದೇಶ ವಾಹಕರ ಪಾತ್ರ ಬಲು ಮುಖ್ಯ. ಎಲ್ಲಿ ಏನೇನಾಗುತ್ತಿದೆ. ಯಾರು, ಯಾರಿಗೆ ಏನು ಆದೇಶ ನೀಡಿದ್ದಾರೆ. ಅದನ್ನು ಎಷ್ಟು ಪಾಲಿಸಲಾಗಿದೆ. ಅಡೆತಡೆಗಳೇನು ಎಂದು ತಿಳಿದು ಸೈನ್ಯಾಧಿಪತಿಗೆ ಸುದ್ಧಿ ಕೊಡುವ ಸಿಬ್ಬಂದಿ ಪ್ರಮುಖ ಪಾತ್ರ ವಹಿಸುತ್ತಾರೆ. ಹಾಗೆಯೇ ಯಾವುದೇ ಸಂಸ್ಥೆಯಲ್ಲಿ ‘ಸಾರ್ವಜನಿಕ ಸಂಪರ್ಕಾಧಿಕಾರಿ’ ಇದ್ದು ಸಂಸ್ಥೆಯ ಆಡಳಿತ ನಿರ್ವಾಹಕರು ಮತ್ತು ಹೊರ ಜನರ (ಗ್ರಾಹಕರ) ನಡುವಿನ ಕೊಂಡಿಯಾಗುತ್ತಾನೆ. ಈ ರೀತಿಯ ಸಂದೇಶವಾಹಕರು-ಸಂಪರ್ಕಾಧಿಕಾರಿ ನಮ್ಮ ಮಿದುಳಿನಲ್ಲೂ ಇದ್ದಾನೆ. ಅವನೇ Basal Ganglia ಮಿದುಳ ತಳದ ನರಗಂಟುಗಳು. ಕಾಡೇಟ್, ಪುಟಮೆನ್, ಗ್ಲೋಬಸ್ ಪ್ಯಾಲಿಡಸ್, ಸಬ್‌ಸ್ಟಾಂಶಿಯ ನೈಗ್ರ ಇವೇ ಈ ನರಗಂಟುಗಳು. ಇವು ತಮ್ಮಲ್ಲೇ ಪರಸ್ಪರ ಸಂಪರ್ಕವನ್ನು ಪಡೆದಿರುವುದಲ್ಲದೆ ಮಿದುಳಿನ ಮುಂಭಾಗದಲ್ಲಿರುವ ಚಲನ ಕ್ಷೇತ್ರ, ಶಿರಗುಳಿ, ಉಪಮಸ್ತಿಷ್ಕ, ಮಿದುಳ ಕಾಂಡಗಳೊಂದಿಗೆ ಸಂಪರ್ಕ ಇಟ್ಟುಕೊಂಡಿವೆ. ನಾವು ಇಷ್ಟಪಟ್ಟು ಮಾಡುವ ಅಂಗ- ಚಲನಗಳನ್ನು ದೇಹದ ವಿವಿಧ ಭಂಗಿಗಳನ್ನು ನಾವು ನಡೆಯುವಾಗ ಕೈ ಬೀಸುವಂತಹ ಸ್ವಯಂಚಾಲಿತ ಚಲನೆಗಳನ್ನು ಇವು ನಿರ್ವಹಿಸುತ್ತವೆ.

ಇಪ್ಪತ್ತೈದು ವರ್ಷದ ಯುವಕನಿಗೆ, ಎಪ್ಪತ್ತೈದು ವರ್ಷ ವಯಸ್ಸಿನ ವೃದ್ಧನ ಪಾತ್ರವನ್ನು ಕೊಟ್ಟು ಮುದುಕನಂತೆ ಮೇಕಪ್ ಮಾಡಿ ರಂಗಸ್ಥಳಕ್ಕೆ ತಂದು ಬಿಡಿ. ನಡುಬಾಗಿದ ಭಂಗಿ, ಚಿಕ್ಕ ಚಿಕ್ಕ ಹೆಜ್ಜೆಗಳ ನಡಿಗೆ. ನಡುಗುವ ಕೈಗಳು, ತಲೆ ತುಟಿಗಳು, ನಿಧಾನವಾಗಿ ಹೊರಬರುವ ಅಸ್ಪಷ್ಟ ಮಾತುಗಳು, ಸ್ಥಿರವಿಲ್ಲದ, ಜೋಲಿ ಹೊಡೆಯುವ ದೇಹ… ಆಹಾ ಎಂತಹ ಅದ್ಭುತ ಅಭಿಯ ಎಂದು ಹೇಳುತ್ತೀರಿ. ಈ ನಟ ವೃದ್ಧಾಪ್ಯದಲ್ಲಿ ಬರುವ ಮಿದುಳಿನ ತಳದ ನರಗಂಟುಗಳ ರೋಗಸ್ಥಿತಿಯನ್ನು ಅನುಕರಿಸಿ, ಪ್ರೇಕ್ಷಕರಿಂದ ಚಪ್ಪಾಳೆ ಗಿಟ್ಟಿಸಿದ್ದಾನೆ. ಈ ನರಗಂಟುಗಳ ಪ್ರಾಮುಖ್ಯತೆ, ಅವು ಚೆನ್ನಾಗಿದ್ದಾಗ, ನಮ್ಮ ಅರಿವಿಗೆ ಬರುವುದೇ ಇಲ್ಲ. ಅವು ರೋಗಗ್ರಸ್ತವಾಗಿ, ಪಾರ್ಕಿನ್‌ಸನ್‌ನ ರೋಗ ಬಂದಾಗ, ಅವುಗಳ ಪ್ರಾಮುಖ್ಯತೆ ಗೊತ್ತಾಗುತ್ತದೆ. ಯಾವ ಭಾವನೆಯೂ ಇಲ್ಲದ, ಮೇಣದಲ್ಲಿ ಮಾಡಿದಂತೆ ಕಾಣುವ, ನಿರ್ಜೀವ ಮುಖಭಾವ, ಜಪಮಾಲೆ ಎಣಿಸಿದಂತೆ ಚಲಿಸುತ್ತಲೇ ಇರುವ ಕೈ ಬೆರಳುಗಳು, ಕೈ, ಕಾಲು, ಕತ್ತುಗಳ ನಡುವ, ಬಾಗಿದ ದೇಹ, ಬಿಗಿದ ಸ್ನಾಯುಗಳು, ನಿಧಾನಗತಿಯ ಚಲನೆ, ಊಟ ಮಾಡಲು, ಸ್ನಾನ ಮಾಡಲು, ಉಡುಪು ತೊಡಲು ವ್ಯಕ್ತಿ ಮೊದಲಿಗಿಂತಲೂ ಮೂರು-ನಾಲ್ಕು ಪಟ್ಟು ಹೆಚ್ಚು ಹೊತ್ತು ತೆಗೆದುಕೊಳ್ಳುವುದು, ಬೇಸರ, ನಿರಾಸಕ್ತಿ, ದುಃಖ, ಕೆಲಸ ಮಾಡಲಾಗದೇ ಕುಳಿತೂ ಮಲಗಿ ಕಾಲಹರಣ, ಜೊಲ್ಲು ಸುರಿಯುವಿಕೆ, ಬುದ್ಧಿ -ಚತುರತೆಗಳೆಲ್ಲ ಕ್ಷೀಣಿಸುವುದು, ಕೊನೆಗೆ ಪರಾವಲಂಬನೆಯ ಮತಿಹೀನ ಸ್ಥಿತಿ-ಪಾರ್ಕಿನ್‌ಸನ್ ರೋಗದ ಪ್ರಮುಖ ಲಕ್ಷಣಗಳು.

ಈ ನರಗಂಟುಗಳು ರೋಗಗ್ರಸ್ತವಾದರೆ, ಇನ್ನೂ ಹಲವಾರು ರೋಗಗಳು ಕಾಣಿಸಿಕೊಳ್ಳುತ್ತವೆ. ಉದಾಹರಣೆಗೆ-

. ಹಂಟಿಂಗ್ಟನ್ ಕೋರಿಯಾ: ರೋಗಿಯ ಕೈಕಾಲುಗಳು ತೀವ್ರವಾಗಿ ಅದುರುವುದು ಅಥವಾ ಅನಗತ್ಯವಾಗಿ, ವಿಚಿತ್ರವಾಗಿ ಚಲಿಸುತ್ತವೆ. ಹಾವಿನಂತೆ ನುಲಿಯುತ್ತವೆ. ಈ ಚಲನೆಯನ್ನು ರೋಗಿ ತಡೆಯಲಾದ. ಆತ ನೇರವಾಗಿ ನಡೆಯಲಾರ. ಬರೆಯುವ, ಮಾತನಾಡುವ ಸೂಕ್ಷ್ಮ ವಲನ ಕ್ರಿಯೆಗಳನ್ನು ಮಾಡಲಾರ. ಈ ಹಂತದಲ್ಲಿ ಕಾಡೇಟ್ ಭಾಗ ಹೆಚ್ಚು ಹಾನಿಗೀಡಾಗಿರುತ್ತದೆ. ಆನಂತರ ಮಿದುಳಿನ ಮೇಲ್ಮೈ ಕೂಡ ಹಾನಿಗೀಡಾಗಿ ರೋಗಿ ‘ಮತಿಹೀನ ಸ್ಥಿತಿ’ಗೆ ಒಳಗಾಗುತ್ತಾನೆ. ಪೂರ್ಣ ಪರಾವಲಂಬಿಯಾಗುತ್ತಾನೆ.

. ಹೆಮಿಬ್ಯಾಲಿಸ್ಮಸ್: ಈ ರೋಗ ಸ್ಥಿತಿಯಲ್ಲಿ ರೋಗಿಯ ಒಂದು ಪಾರ್ಶ್ವ ಅನಿಯಂತ್ರಿತವಾಗಿ ಚಲಿಸತೊಡಗುತ್ತದೆ. ಕ್ರೀಡಾಪಟು ಜಾವೆಲಿನ್ ಅಥವಾ ತೂಕದ ಗುಂಡನ್ನು ಎಸೆಯುವಾಗ ಮಾಡುವ ಚಲನೆಯಂತೆ, ರೋಗಿ ಕೈಯಲ್ಲಿ ಯಾವ ತೂಕದ ಗುಂಡು-ಜಾವೆಲಿನ್ ಇಲ್ಲದ್‌ಇದ್ದರೂ, ಚಲನೆ ಮಾಡುತ್ತಾನೆ!

೧೯೮೨ ರಲ್ಲಿ ಪ್ಯಾರಿಸ್‌ನಲ್ಲಿ ೨೫ ವರ್ಷದ ವ್ಯಕ್ತಿಯೊಬ್ಬ ‘ಕಾರ್ಬನ್ ಮಾನಾಕ್ಸೈಡ್‌’ ವಿಷವೇರಿಕೆಗೆ ತುತ್ತಾದ (ವಾಹನಗಳು ಉಗುಳುವ ಕರಿಹೊಗೆಯಲ್ಲಿ ಈ ವಿಷಾನಿಲವಿರುತ್ತದೆ. ಯಾವುದೇ ವಸ್ತು ಅರ್ಧಂಬರ್ಧ ಉರಿದು ಕರಿಹೊಗೆ ಬಂದಾಗ, ಆ ವಾತಾವರಣದಲ್ಲಿ ಈ ವಿಷಾನಿಲ ಹೆಚ್ಚುತ್ತದೆ). ಆತನೊಂದು ವಿಚಿತ್ರ ದೇಹ ಸ್ಥಿತಿಗೆ ಒಳಗಾದ, ಯಾವಾಗಲೂ ಹಾಸಿಗೆಯ ಮೇಲೆ ನಿಷ್ಕ್ರಿಯನಾಗಿ ಮಲಗಿರುತ್ತಿದ್ದ. ಏಳಬೇಕು, ಎದ್ದು ಓಡಾಡಬೇಕು. ಕೆಲಸ-ಕರ್ತವ್ಯ ಮಾಡಬೇಕು ಎಂಬ ಆಲೋಚನೆಗಳು ಮನಸ್ಸಿನಲ್ಲಿ ಬಂದರೂ, ಅವನ್ನು ಕಾರ್ಯರೂಪಕ್ಕೆ ತರಲು ಅವನಿಗೆ ಆಗುತ್ತಿರಲಿಲ್ಲ. ಮಾತಾಡಲೂ ಆಗುತ್ತಿರಲಿಲ್ಲ. ಆದರೆ, ಯಾರಾದರೂ ಕೈಹಿಡಿದು ಎಬ್ಬಿಸಿದರೆ, ಸ್ಪ್ರಿಂಗ್‌ನಂತೆ ಜಿಗಿದೆದ್ದು ಎಲ್ಲ ಕೆಲಸ ಕಾರ್ಯಗಳನ್ನು ಮಾಡುತ್ತಿದ್ದ, ಮಾತೂ ಆಡುತ್ತಿದ್ದ ! ಆತನ ಮಿದುಳಿನ ಸ್ಕ್ಯಾನಿಂಗ್‌ ಮಾಡಿದಾಗ, ಆತನ ಗ್ಲೋಬಸ್ ಪ್ಯಾಲಿಡಸ್ ಸಂಪೂರ್ಣವಾಗಿ ಹಾನಿಗೀಡಾಗಿತ್ತು. ಅದರಿಂದಾಗಿ ಈ ನತದೃಷ್ಟ ತಾನೇ ಸ್ವತಃ ಯಾವುದೇ ದೇಹದ ಚಲನೆಯನ್ನು ಪ್ರಾರಂಭಿಸುವ ಸಾಮರ್ಥ್ಯವನ್ನು ಕಳೆದುಕೊಂಡಿದ್ದ. ಇತರರ ಪ್ರಚೋದನೆಯಿಂದ, ಚಲನೆ ಪ್ರಾರಂಭವಾದರೆ, ಅದನ್ನು ಮುಂದುವರೆಸಲು ಶಕ್ತನಾಗಿದ್ದ. ಅಂದರೆ ಗ್ಲೋಬಸ್-ಪ್ಯಾಲಿಡಸ್‌ನ ಪ್ರಾಮುಖ್ಯತೆ ಏನು ಅರ್ಥವಾಯಿತಲ್ಲವೇ?

ಕ್ಲೂವರ್ ಬೂಸಿ ಸಿಂಡ್ರೋಮ್: ಮಿದುಳಿನ ಲಿಂಬಿಕ್ ವ್ಯವಸ್ಥೆಯ ಭಾಗವಾದ ಅಮಿಗ್ಡಿಲಾ, ಪ್ಯಾರಾ ಹಿಪ್ಪೋಕ್ಯಾಂಪಲ್ ಗೈರಸ್. ಹಿಪ್ಪೋಕ್ಯಾಂಪಸ್ ಮತ್ತು ಕಪೋಲ ಭಾಗಗಳನ್ನು ಎರಡೂ ಕಡೆ ಹಾಳು ಮಾಡಿದರೆ, ಆ ಪ್ರಾಣಿ ಪ್ರತಿಯೊಂದು ವಸ್ತುವನ್ನು ನೆಕ್ಕಲು, ಕಚ್ಚಲು ಪ್ರಾರಂಭಿಸುತ್ತದೆ. ತಿನ್ನುವ ವಸ್ತು ಯಾವುದು, ತಿನ್ನಬಾರದ ವಸ್ತು ಯಾವುದು ಎಂದು ಅದಕ್ಕೆ ಗೊತ್ತಾಗುವುದಿಲ್ಲ ಸದಾ ಕಾಲ ಅಸಹಜ ಲೈಂಗಿಕ ಚಟುವಟಿಕೆಯನ್ನು ತೋರಿಸುತ್ತದೆ. ಜೀವ ಅಥವಾ ನಿರ್ಜೀವ ವಸ್ತುವನ್ನು ಲೈಂಗಿಕ ಸಂಗಾತಿಯಂತೆ ಕಂಡು, ಸಂಭೋಗ ಚಟುವಟಿಕೆಯನ್ನು ಪ್ರದರ್ಶಿಸತೊಡಗುತ್ತದೆ.

ಕಾರ್ಸಕಾಫನ ಚಿತ್ತವಿಕಲತೆ: ಮಧ್ಯಪಾನ ಚಟಕ್ಕೆ ಒಳಗಾದವರು ಒಂದು ಬಗೆಯ ತೀವ್ರ ಬಗೆಯ ಮಾನಸಿಕ ರೋಗಕ್ಕೆ ತುತ್ತಾಗುತ್ತಾರೆ. ಇತ್ತೀಚೆಗೆ ಅವರು ಅನುಭವಿಸಿದ ಅನುಭವಗಳು, ಪಂಚೇಂದ್ರಿಯಗಳಿಗೆ ಸಂಬಂಧಿಸಿದ ಸಂವೇದನೆಗಳು ಮರೆತು ಹೋಗುತ್ತವೆ. ಉದಾಹರಣೆಗೆ ಬೆಳಿಗ್ಗೆ ತನ್ನನ್ನು ನೋಡಲು ಬಂದ ಮಗಳೊಂದಿಗೆ ಚೆನ್ನಾಗಿಯೇ ಮಾತನಾಡಿದ ವ್ಯಕ್ತಿಗೆ, ಸ್ವಲ್ಪ ಹೊತ್ತಿನ ನಂತರ, ಮಗಳು ಬಂದಿದ್ದು, ತನ್ನೊಂದಿಗೆ ಮಾತಾಡಿದ್ದು ಯಾವುದೂ ನೆನಪಿನಲ್ಲಿ ಉಳಿಯುವುದಿಲ್ಲ. ಆದರೆ ಅದನ್ನು ವ್ಯಕ್ತಿ ಒಪ್ಪಿಕೊಳ್ಳದೇ, ಮಗಳು ಸುಳ್ಳು ಹೇಳುತ್ತಿದ್ದಾಳೆ ಎಂದು ಸಾಧಿಸಬಹುದು ಅಥವಾ ನಿನ್ನೊಂದಿಗೆ ನಾನೇನು ಮಾತಾಡಿದೆ ಎಂದರೆ, ನೀನು ಏನು ಅಡಿಗೆ ಮಾಡಿದೆ ಎಂಬುದನ್ನು ವಿವರಿಸಿದೆ ಎಂದು ಬುರುಡೆ ಬಿಡಬಹುದು. ಕಳೆದ ಎರಡು ದಿನಗಳಿಂದಲೂ ಹಾಸಿಗೆ ಹಿಡಿದ ವ್ಯಕ್ತಿಯನ್ನು ‘ನಿನ್ನೆ ಸಂಜೆ ಎಲ್ಲಿಗೆ ಹೋಗಿದ್ದೆ?’ ಎಂದು ಕೇಳಿದರೆ, ಆತ ‘ನಾನು ಕೆಲಸಕ್ಕೆ ಹೋಗಿದ್ದೆ. ಹಾಗೇ ಬರುವಾಗ ದೇವಸ್ಥಾನಕ್ಕೆ ಹೋಗಿ ದೇವರಿಗೆ ವಿಶೇಷ ಪೂಜೆ ಮಾಡಿಸಿದೆ. ದೇವರಿಗೆ ಎಷ್ಟು ಚೆನ್ನಾಗಿ ಅಲಂಕಾರ ಮಾಡಿದ್ದರು’ ಎಂದು ಕಥೆ ಕಟ್ಟಿ ಹೇಳಬಹುದು. ಇದರ ಜೊತೆಗೆ ಯಾರೋ ಮಾತಾಡಿದಂತೆ ಧ್ವನಿ ಕೇಳಿಸುವ, ಯಾರೋ ಇದ್ದಂತೆ, ಏನೋ ಕಂಡಂತೆ ದೃಶ್ಯ ಭ್ರಮೆಯೂ ಇರಬಹುದು. ಇಂತಹ ರೋಗಿಗಳು ಸತ್ತಮೇಲೆ, ಅವರ ಮಿದುಳನ್ನು ತೆಗೆದು ಪರೀಕ್ಷಿಸಿದರೆ ಮ್ಯಾಮಿಲರಿ ಬಾಡೀಸ್, ಥೆಲಾಮಸ್‌ನ ಒಂದು ಭಾಗದಲ್ಲಿ ರಕ್ತಸ್ರಾವವಾಗಿ, ಅವು ಹಾನಿಗೀಡಾಗಿರುವುದು ಮತ್ತು ಲಿಂಬಿಕ್ ವ್ಯವಸ್ಥೆಯ ಇತರ ಭಾಗಗಳಲ್ಲಿ ಮಿದುಳಕಾಂಡ ಹಾಗೂ ಉಪಮಸ್ತಿಷ್ಕದಲ್ಲೂ ಕೆಲವು ನ್ಯೂನತೆಗಳು ಕಂಡು ಬರುತ್ತವೆ. ಇದರಿಂದ ನೆನಪಿನ ಶಕ್ತಿಗೂ (ಮುಖ್ಯವಾಗಿ ಒಂದರಡು ದಿನಗಳ ಅವಧಿಯ ಘಟನೆಗಳು) ಮ್ಯಾಮಿಲರಿ ಬಾಡೀಸ್‌ಗೂ ಸಂಬಂಧವಿದೆ ಎಂದು ಹೇಳಲಾಗುತ್ತದೆ.

ಮಿದುಳಿನ ಎರಡೂ ಕಡೆಯ ‘ಅಮಿಗ್ಡಿಲಾ’ವನ್ನು ಕತ್ತರಿಸಿ, ತೆಗೆದರೆ, ವ್ಯಕ್ತಿಯ ರೋಷ, ಆಕ್ರಮಣಶೀಲತೆ, ಹಿಂಸಾಚಾರ ಪ್ರವೃತ್ತಿ ತಗ್ಗುವುದನ್ನು ಗಮನಿಸಿ, ಕಳೆದ ದಶಕದ ಹಿಂದೆ, ಅನಿಯಂತ್ರಿತ ಹಿಂಸಾಚಾರ ಪ್ರವೃತ್ತಿಯ ದಮನಕ್ಕಾಗಿ, ಶಸ್ತ್ರಕ್ರಿಯೆಯಿಂದ ಅಮಿಗ್ಡಿಲಾವನ್ನು ತೆಗೆದು ಹಾಕುವ ಚಿಕಿತ್ಸಾ ಕ್ರಮ ಚಾಲ್ತಿಯಲ್ಲಿತ್ತು. ಪರಿಣಾಮಕಾರಿ ಶಮನಕಾರಿ ಔಷಧಗಳ ಆವಿಷ್ಕಾರದಿಂದಾಗಿ, ಈಗ ಈ ಶಸ್ತ್ರಕ್ರಿಯೆ ಮಾಡುವುದನ್ನು ನಿಲ್ಲಿಸಲಾಗಿದೆ. ಆದರೆ, ಆಕ್ರಮಣಶೀಲತೆ-ಹಿಂಸಾ ಪ್ರವೃತ್ತಿಗೆ ಅಮಿಗ್ಡಿಲಾ ಕುಮ್ಮಕ್ಕು ಕೊಡುತ್ತದೆ ಎಂಬ ಅಂಶ ಗಮನಾರ್ಹ.