ವಾರ್ಧಕ

ಇರದೆ ಮೃದುವಚನದಿಂದಗ್ರಜನ ತಾಪಮಂ
ಪರಿಹರಿಸಿ ಲಕ್ಷ್ಮಣಂ ಸರ್ವೋಪಚಾರದಿಂ
ಸರಸಿಜದ ದಳಗಳಿಂ ತಣ್ಣೀರಹನಿಗಳಂ ತಳಿದು ಚೇತನಗೊಳಿಸಲು |
ತರುನೆಳಲನಾಂತಿರಲು ಋಷ್ಯಮೂಕದೊಳಿರ್ಪ
ತರಣಿಸುತ ಸುಗ್ರೀವ ಕಂಡು ವಾಲಿಯ ಭಯದಿ
ಸರಸಿಜೋದ್ಭವಸುತಾದಿಗಳ ಹತ್ತಿರಕೆ ಕರೆದಾಗಲವರೊಡನೆಂದನು || ||೧||

ರಾಗ ಮಧ್ಯಮಾವತಿ ಏಕತಾಳ

ವಾನರೇಶ್ವರರೆಲ್ಲರು ಕೇಳಿ |
ಏನು ಸೋಜಿಗವೆಂದು ತನಗೀಗ ಪೇಳಿ || ಪಲ್ಲವಿ ||

ತರಣಿಪ್ರಕಾಶದಿಂ ಪಂಪಾತೀರಕೆ ಬಂದ |
ಲ್ಲಿರುವಂಥ ವೀರರ್ ಯಾರೆಂದು ನೋಡಿ ||
ದುರುಳನಗ್ರಜನು ಸಂಹರಿಸಬೇಕೆನುತೆನ್ನ |
ಕರೆಸಿ ತಾನಿವರನು ಕಳುಹಿಸಿರುವನೊ || ||೨||

ವೈರಿಗಳಾಗಲಿವರು ಹಿತರಾಗಲಿ |
ಮಾರುತಾತ್ಮಜ ನೀನು ಪೋಗಿಬಾರಯ್ಯ ||
ಬೇರೊಂದು ರೂಪಿನಿಂದಿವರಿರ್ಪ ಬಳಿಗಯ್ದಿ |
ಕಾರಣೀಕರ ಕಂಡು ಕರೆತಾ ಶೀಘ್ರದಲಿ || ||೩||

ವಾರ್ಧಕ

ಸಾರತರಮಾಗಿ ಸುಗ್ರೀವ ಪೇಳಿದ ಮಾತ
ನೋರಂತೆ ಕೇಳುತಾ ಕ್ಷಣದೊಳಲ್ಲಿಂ ಜಿಗಿದು
ಹಾರಿ ನಿಜರೂಪಮಂ ಬಿಟ್ಟು ಬಾಲಬ್ರಹ್ಮಚಾರಿವೇಷವತಾಳುತ |
ವೀರರೆಡೆಯಂ ಸಾರ್ದು ವಿನಯದಿಂ ವಂದಿಸುತ
ಶೂರ ರಘುಕುಲವನಧಿರಾಕಾನಿಶಾಕರರ
ಯಾರು ನೀವೆಲ್ಲಿಗಯ್ದುವಿರೆಂದು ಬೆಸಗೊಂಡನಪ್ರತಿಮ ಮರುತಾತ್ಮಜ || ||೪||

ರಾಗ ಗೌಳಮಲಹರಿ (ದೇಶಿ) ಏಕತಾಳ

ಯಾವಲ್ಲಿಂದ ಬಂದಿರಯ್ಯ | ನೀವು ಬಾಲಕರಿರ |
ಯಾವಲ್ಲಿಗೆ ಪಯಣವಯ್ಯ | ಜಾಣ ಬಾಲಕರಿರ || ||೫||

ಊರಾವುದು ತಂದೆತಾಯ್ಗ | ಳಾರು ಬಾಲಕರಿರ | ನಿಮ್ಮ |
ಘೋರಡವಿಗೆ ಕಳುಹಿಸಿದವರು | ಯಾರು ಬಾಲಕರಿರ || ||೬||

ಪೆಸರದೇನು ನಾಚದೆನ್ನೊಳ್ | ಉಸುರಿ ಬಾಲಕರಿರ | ನೀವು |
ಋಷಿಗಳಂತೆ ವೇಷದಿ ಸಾ | ಹಸದ ಬಾಲಕರಿರ || ||೭||

ಕಾನನ ಕಾನನ ಹುಡುಕುವ | ದೇನು ಬಾಲಕರಿರ | ಸುಂದ |
ರಾನನ ಬಾಡಿರುವುದೇಕೆ | ಜಾಣ ಬಾಲಕರಿರ || ||೮||

ರಾಗ ಕೇದಾರಗೌಳ ಅಷ್ಟತಾಳ

ಧರೆಯೊಳತ್ಯಧಿಕವೆಂದೆನಿಪಯೋಧ್ಯಾಪುರ |
ದರಸನ ಸುತರು ನಾವು ||
ವರಪಿತನಾಜ್ಞೆಯಂತಡವಿಯೊಳ್ಪದಿನಾಲ್ಕು |
ವರುಷವಿರಲು ಬಂದೆವು || ||೯||

ಹಿರಿಯಾತ ನಾ ರಾಮ ತಮ್ಮ ಲಕ್ಷ್ಮಣನೀತ |
ಭರತ ಶತ್ರುಹರೀರ್ವರು ||
ಇರುವರೂರೊಳಗನುಜಾತರೆನ್ನಯ ಮೋಹ |
ದರಸಿ ಜಾನಕಿಯೆಂಬಳು || ||೧೦||

ದುರುಳ ರಾವಣ ನಾವಿಲ್ಲದ ವೇಳ್ಯದಿ ಸೀತಾ |
ತರುಣಿಯನೊಯ್ದನೆಂದು ||
ಶರಣ ಜಟಾಯು ಪೇಳ್ದುದರಿಂದ ನಾವಿಲ್ಲಿ |
ಗರಸಿಕೊಂಡಯ್ತಂದೆವು || ||೧೧||

ತೋರುವ ಗಿರಿಯಾವುದದರೊಳಗಿರುವವ |
ನಾರು ನಿನ್ನಯ ಪೆಸರು ||
ಭೋರನೆ ತಿಳುಹೆನಲತಿಭಕ್ತಿಭಾವದಿ |
ಮಾರುತಾತ್ಮಜನೆಂದುನು || ||೧೨||

ರಾಗ ಧನ್ಯಾಸಿ ಅಷ್ಟತಾಳ

ಪಾಹಿಪಂಕಜದಳಲೋಚನ | ಮುಕ್ತಿಂ |
ದೇಹ್ಯಹಲ್ಯಾಶಾಪಮೋಚನ |
ಮಹಾಂತಗುಣನಿಧಿ | ಮಹಿಮ ಸಜ್ಜನಪಾಲ || ||೧೩||

ಅಂಗಜಪಿತ ಪಾಪನಾಶನ | ಬಾಣ |
ಭಂಗ ಉತ್ತಮ ಗರುಡಾಸನ |
ಸಂಗರಹಿತ ದೇವೋ | ತ್ತುಂಗ ನೀಲನಿಭಾಂಗ || ||೧೪||

ಲೋಕನಾಯಕ ಸದ್ವಿಚಾರಣ | ಕರು |
ಣಾಕರ ದುರಿತಸಂಹಾರಣ ||
ಸಾಕೇತಪುರವಾಸ | ಶರಣು ರಾಮಚಂದ್ರೇಶ || ||೧೫||

ಭಾಮಿನಿ

ಜೀಯ ನೀವೀಗೆಂದ ವಾನರ
ರಾಯ ಸಚಿವರು ನಾವು ನಮ್ಮಯ
ತಾಯಿ ತಂಗಿ ತದೀಯ ಕಪಿಕುಲಸಾರ್ವಭೌಮಂಗೆ |
ವಾಯುವೆನ್ನಯ ತಾತನೆನ್ನಭಿ
ಧೇಯ ಹನುಮನುಯೆಂದು ಮಿಕ್ಕಿನ
ಮಾಯೆಯವರಾವಲ್ಲೆನುತ ನುತಿಸಿದನು ಪದಕೆರಗಿ || ||೧೬||

ರಾಗ ಮೆಚ್ಚುಗೌಳ ಅಷ್ಟತಾಳ

ಮರುಳು ಮಾತೆನ್ನೊಡೆನುಸುರುವದೇತಕೊ |
ತೆರಳತ್ತ ಬ್ರಹ್ಮಚಾರಿ ||
ಮರುತಸಂಜಾತನ ಬಗೆಯ ಕೇಳಿರುವೆ ಭೀ |
ಕರಕಳೇವರನಾತನು | ಹನುಮಂತನು || ||೧೭||

ನಿಜವೇಷವಿದೆ ನೋಡು ಹನುಮಂತ ನಾ ನಿನ್ನ |
ಭಜಕನಾಗಿರುವೆನಯ್ಯ ||
ಅಜಸುರಾದಿಗಳು ಪೂಜಿಸುವಂಥ ಪಾದದ |
ನಿಜಭಕ್ತಿ ನೀಡೋ ರಾಮ | ಸಮರನಿಸ್ಸೀಮ || ||೧೮||

ಸಾಕಯ್ಯ ಬೆಳೆದುದು ಭೂವ್ಯೋಮ ಪಾತಾಳ |
ಲೋಕವ ನಡುಗಿಸಿದೆ ||
ಹೇ ಕಪಿವರ ಮೊದಲಂದವ ಧರಿಸು ವಿ |
ವೇಕದ ಮತಿಯಿದೆಂತು | ನಿನಗೆ ಬಂತು || ||೧೯||

ಹಿಂದೆ ಬಾಲ್ಯದೊಳೆನ್ನ ಮಾತೆಯಂಜನೆದೇವಿ |
ಯೆಂದ ಉಪದೇಶದಲಿ ||
ಸಂದರ್ಶನದಿ ಜನ್ಮ ಸಫಲವಾಯಿತು ದಯ |
ದಿಂದೊಲಿದಿಷ್ಟವೀಯೋ | ನೀ ಕಾಯೋ || ||೨೦||

ಸುಗ್ರೀವನೆಂಬ ಮರ್ಕಟರಾಜ ತವ ಪದಾ |
ನುಗ್ರಹ ಬಯಸಿಹನು ||
ಅಗ್ರಜ ವಾಲಿಯ ಭಯದೊಳಗೀ ಪರ್ವ |
ತಾಗ್ರದೊಳಿಹನು ದಯ | ಮಾಡಬೇಕಯ್ಯ || ||೨೧||

ಮಾರುತಾತ್ಮಜ ನಿನ್ನ ಸಂಗತಿಗಳನು ವಿ |
ಚಾರಿಸಲೇಕರಿತೆ ||
ತೋರಿಬೇಗದೊಳೀಗ ಸಖ್ಯವ ಮಾಡಿಸು |
ಸಾರಸಸಖಸುತನ | ಸುಗ್ರೀವನ || ||೨೨||

ಉಗ್ರಗಭಸ್ತಿ ಸಂಜಾತನು ತವಪಾದಾ |
ನುಗ್ರಹ ಬಯಸಿಹನು ||
ಅಗ್ರಜ ವಾಲಿಯ ಭಯದಿಂದಲೀ ಪರ್ವ |
ತಾಗ್ರದಿ ನೆಲಸಿರುವ | ನಾವ್ ಪೋಗುವ || ||೨೩||

ಕಂದ

ಈ ಪರಿಯುಸಿರುತ ಮಾರುತಿ
ಭೂಪಾಲರ ನಿಜ ಪೆಗಲಿನೊಳೇರಿಸುತಲ್ಲಿಂ |
ದಾಪರ್ವತಕವದಿರ ಪ್ರ
ತಾಪವನುಸಿರಿದನಂದಾ ಭಾಸ್ಕರಸುತಗಂ || ||೨೪||

ರಾಗ ಘಂಟಾರವ ರೂಪಕತಾಳ

ಭಾನುನಂದನ | ವಾನರೇಶ್ವರ |
ನೀನು ಲಾಲಿಸು | ಮಾನಸವಿಟ್ಟು || ಪಲ್ಲವಿ ||

ರಾಮನೀತನು | ರಾಜೀವಾಕ್ಷನು |
ಭೂಮಿಪಾಲನು | ಭಾನುವಂಶನು || ||೨೫||

ಸಾಕೇತಾಧಿಪ | ನಾದ ದಶರಥ |
ನಾ ಕುಮಾರರು | ರಾಮ ಲಕ್ಷ್ಮಣ || ||೨೬||

ಮಾತೆಕೈಕೆಯ | ಮಾತಿಗೋಸುಗ |
ಈತ ರಾಘವ | ಸೀತೆಯೂ ಸಹ || ||೨೭||

ಧಾರಿಣೀಪತಿ | ಧರ್ಮಮಾರ್ಗದಿ |
ಘೋರಡವಿಯಲಿ | ವಾಸಿಸುತ್ತಿರೆ || ||೨೮||

ಪಂಚವಟಿಯೊಳು | ಪೋಗಿ ರಾವಣ |
ವಂಚನೆಯಿಂದ | ಒಯ್ದು ಸೀತೆಯ || ||೨೯||

ಕೊಂಡುಪೋದರೆ | ಕಾಡು ದಾರಿಯ |
ಕಂಡುಕೊಳ್ಳುತೈ | ತಂದರಿಲ್ಲಿಗೆ || ||೩೦||

ಕಾರಣೀಕರು | ಕಂಡರಿರ್ವರು |
ಸೂರಿಯಾತ್ಮಜ | ಸುಲಭರಲ್ಲಯ್ಯ || ||೩೧||

ರಾಗ ಘಂಟಾರವ ಅಷ್ಟತಾಳ

ರಾಮ ಹರೇ ರಾಮ | ರಾಮ ಹರೇ ರಾಮ |
ರಾಮ ಹರೇ ಪಾಹಿ | ರಾಮ ಹರೇ ||ಪಲ್ಲವಿ ||

ಭೀಮಪರಾಕ್ರಮ ಭಕ್ತರಕ್ಷಾಮಣಿ |
ಕೋಮಲರೂಪಹರೇ || ಅನುಪಲ್ಲವಿ ||

ಇಕ್ಷ್ವಾಕುವಂಶದ ಭೂಮಿಪಾಲರು ಧರ್ಮ |
ರಕ್ಷಕರಧಿಕರಲ್ಲೈ | ಮಮಾ |
ಪೇಕ್ಷೆಯೊಂದುಂಟದ ಕೇಳಿ ನೀ ನ್ಯಾಯವ |
ನೀಕ್ಷಿಸಿ ಸಲಹಬೇಕು || ||೩೨||

ಅಗ್ರಜ ವಾಲಿ ಪರಾಕ್ರಮದಿಂದೆನ್ನ |
ನಿಗ್ರಹಿಸಲು ಬಗೆದು | ತಾ ಮ |
ಹೋಗ್ರದೆ ಹೊರಗಟ್ಟಿ ಕೂಡಿಕೊಂಡಿರುವ ಪಾ |
ಣಿಗ್ರಹದ ಸತಿಯ || ||೩೩||

ಶೌರ್ಯಬಲಾನ್ವಿತನಾತನ ಭಯಕಾಗಿ |
ಸೂರ್ಯನಪ್ಪಣೆಯಿಂದಲಿ | ಮುನಿ |
ವರ್ಯ ಮಾತಂಗ ಶಾಪವಿದ್ದುದರಿಂದ |
ಧೈರ್ಯದಿಂದಿರುವೆನಿಲ್ಲಿ || ||೩೪||

ರಾವಣನೆಂಬ ನಿಶಾಚರನನು ಹಿಂದೆ |
ಕೋವಿದ ಹಿಡಿದು ತಂದು | ತಾರಾ |
ದೇವಿಯ ಮಗನ ತೊಟ್ಟಲಿಗೆ ಕಟ್ಟಿದ ವಾಲಿ |
ದೇವೇಂದ್ರಸುಕುಮಾರನು || ||೩೫||

ದೇವತೆಗಳು ಸಹಿತಂಜುವರಣ್ಣನ |
ಠೀವಿ ಪರಾಕ್ರಮಕೆ | ರಾಮ |
ದೇವ ನಾವಿಬ್ಬರು ಜೋಡಾದೆವೀ ವಾಲಿ |
ರಾವಣರಿಂದ ಹೀಗೆ || ||೩೬||

ಕಣ್ಣಾರೆ ಕಂಡರೆ ಬಿಡುವೆನೆ ಸೀತೆಯ |
ಎನ್ನ ಮನಃಪ್ರೀತೆಯ | ನಿನ್ನ |
ಅಣ್ಣನ ಪಾಡೇನು ವಾಲಿಯ ಕೊಂದೀಗ |
ಮಣ್ಣಗೂಡಿಸುವೆನೆಂದ || ||೩೭||

ಜಾಣ ನೀನಾದರೆ ನೋಡು ಕೈಯೊಳಗಿದ್ದ |
ಬಾಣಜಾತಂಗಳನು | ವಾಲಿ |
ಪ್ರಾಣವ ಕೊಂಡೊಂದು ನಿಮಿಷದಿ ನಿನ್ನಯ |
ರಾಣಿಯ ನಿನಗೀವೆನು || ||೩೮||

ರಾಗ ನಾದನಾಮಕ್ರಿಯೆ ಅಷ್ಟತಾಳ

ಅಮಮ ವಾಲಿಯ ರಾಮಕೊಂದರೆ | ಸತಿ |
ರುಮೆಯ ಬಿಡಿಸಿ ನೀನು ತಂದರೆ ||
ನಿಮಿಷದೊಳೀ ಸೇನೆ ಸಹ ಬಂದು | ಪಾದ |
ಕಮಲದ ಸೇವೆ ಮಾಡುವೆ ನಿಂದು || ||೩೯||

ನುಡಿದ ಮಾತಿಗೆ ಎಡರಿಲ್ಲದೇ | ಇಕ್ಕೋ |
ಕೊಡುವೆ ನಂಬುಗೆ ಮಾತಷ್ಟಲ್ಲದೆ ||
ಬಿಡದೆ ಕೈತಟ್ಟುತೊಬ್ಬೊಬ್ಬರು | ಒಂದೇ |
ದೃಢಮನದವರಾದರಿಬ್ಬರೂ || ||೪೦||

ಕನ್ನೆಯನಸುರ ಕದ್ದೊಯ್ವಾಗ | ತನ್ನ |
ಚಿನ್ನಗಳೆಲ್ಲವ ತೆಗೆದಾಗ ||
ಎನ್ನ ಪರ್ವತಕಿಟ್ಟಳದ ನಾನು | ಕಟ್ಟಿ |
ಚೆನ್ನಾಗಿಟ್ಟಿರುವೆ ನೋಡಿದ ನೀನು || ||೪೧||

ಎಂದು ಸರ್ವಾಭರಣಗಳನ್ನು | ಬೇಗ |
ತಂದು ಕೈಯಲಿ ಕೊಟ್ಟರದರನ್ನು ||
ಇಂದಿರೆಯರಸ ತಾ ನೋಡಿದ | ಮನ |
ನೊಂದುಕೊಂಡತಿ ಚಿಂತೆ ಮಾಡಿದ || ||೪೨||

ರಾಗ ನೀಲಾಂಬರಿ ಆದಿತಾಳ

ಕಂಜಾನನೆ ಕಲಕೀರವಾಣಿ | ಸಂಜೀವನೆ ಸರಸಕಲಾಪೆ ||
ಮಂಜುಳತರಂಗಿಣಿ ಮನೋಹರೆ | ಕುಂಜರಗಮನೆ ಸುನಿಧಾನೆ || ||೪೩||

ಫಣಿವೇಣಿಯ ಕುಚಗಳ ಮಧ್ಯದಿ | ಕುಣಿದಾಡುವ ಸರವಿದೆ ಸಹಜ |
ಮಣಿಕಂಕಣ ಮುದ್ರಿಕೆಗಳ ಸರ | ಪಣಿಯಂದವ ಬಣ್ಣಿಸಲೇಸೈ || ||೪೪||

ಲೋಲಾಕ್ಷಿಯ ಕರ್ಣದೊಳೊಪ್ಪುವ | ಓಲೆಯೊಳಿರಿಸಿದ ಮೌಕ್ತಿಕವು ||
ಬಾಲಾರ್ಕನ ಜರೆಯುವ ಮೂಗುತಿಗಿಟ್ಟ | ನೀಲದ ಹರಳಿದಕೋ ಸಹಜಾತ || ||೪೫||

ನೋಡುವರಾಭರಣವ ಸಹಜನೆ | ಚೂಡಾಮಣಿ ನಾಸ್ತಿ ಇದರೊಳಗೆ ||
ಮೂಢಾತ್ಮಕನೊಯ್ವಂಜಿಕೆಗೆ ಬೀ | ಸಾಡಿದಳೆಲ್ಲಿಯೊ ಎನಲೆಂದ || ||೪೬||

ಕಾಲುಂಗುರ ಬಲ್ಲೆನು ಹೊರತಾಗಿ | ಮೇಲಾದಾಭರಣವನರಿಯೆ ||
ನೀಲಾಳಕಿಯ ನಿರ್ಮಲಗುಣವ | ಪೇಳೀಪರಿ ನೀ ಚಿಂತಿಸಲೇಕೆ || ||೪೭||

ವಾರ್ಧಕ

ಇನಸುತನು ಕೊಟ್ಟ ಸರ್ವಾಭರಣವಂ ಕಂಡು
ಮನಸಿನಲಿ ಕಡುನೊಂದು ಚಿಂತಿಸುವ ಮತ್ತೊಡನೆ
ಕನಸ ಕಂಡೆಚ್ಚರಿಕೆದೋರ್ವಂತೆ ಕ್ಲೇಶಂಗಳಂ ಮರೆತನಾಕ್ಷಣದೊಳು |
ಜನಕನಂದನೆಗಿಡುವ ಪುಣ್ಯಫಲವಿರಲು ಬರು
ವನಕ ತೆಗೆದಿರಿಸು ಸುಗ್ರೀವ ನೀನಿನ್ನು ಸುರ
ಪನಸುತನ ಸಂಗರಕೆ ಬರಹೇಳೆನಲು ಶಕ್ತಿ ಪರಿಕಿಸಲು ಮನದಂದನು || ||೪೮||

ರಾಗ ಮಾರವಿ ಝಂಪೆತಾಳ

ರಾಘವ ಮಹಾವೀರ ಕೇಳು ಸುವಿಚಾರ |
ಈಗೆನ್ನ ಸಂಶಯವ ಪರಿಹರಿಸು ಪೂರ || ಪಲ್ಲವಿ ||

ದುಂದುಭಿಯ ಒಡಲಧರೆ | ಯಿಂದಲಮರೇಂದ್ರಸುತ |
ನೊಂದು ಮೊಳವನು ಸಹಸ | ದಿಂದಲೆತ್ತುವನು ||
ಇಂದು ನೀನೆತ್ತಿದರೆ ಸಂದೇಹ ಪೋಗಿ ಬಳಿ |
ಕೊಂದೆ ಮತದಿಂದಲಿಹೆ | ನೆಂದು ಪೇಳಿದನು || ||೪೯||

ಕಾಲತುದಿಯಿಂದ ಮೂ | ರೇಳು ಯೋಜನ ಬಿಸುಟ |
ಮೇಲೆ ತಾಳೆಯ ಮರಗ | ಳೇಳ ಕಡಿದಿಡಲು ||
ಶ್ರೀಲೋಲ ಶರಣೆಂದು | ಕಾಲಿಗೆರಗಲು ರವಿಜ |
ವಾಲಿಯನು ರಣಕೆ ಬರ | ಹೇಳೆಂದ ರಾಮ || ||೫೦||

ರಘುವರನ ಸಾಹಸವ | ಮಿಗೆ ಕಂಡು ಸುಗ್ರೀವ |
ನಗಲಿ ಭಯವನು ಕೀಶ | ರುಗಳೊಡನೆ ಬಂದು ||
ಜಗಳಕಣ್ಣನ ಕರೆಯ | ಲಗಣಿತಪರಾಕ್ರಮದಿ |
ಹಗರಣಕ್ಕೊದಗಿ ತ | ಮ್ಮಗೆ ನುಡಿದ ವಾಲಿ || ||೫೧||

ರಾಗ ಶಂಕರಭರಣ ಮಟ್ಟೆತಾಳ

ಭಾನುತನುಜ ಭಳಿರೆಯನುಜ | ಬಂದೆಯಾ ಮಮ |
ಏನು ಧೈರ್ಯದಿಂದ ಕರೆದೆ | ಎಲೊ ಪರಾಕ್ರಮ || ||೫೨||

ಮಾನಿನಿಯನು ಬಿಡುವುದಕ್ಕೆ | ಮನಸು ಬಾರದೆ |
ನೀನು ಕೆಡುವೆ ನೀತಿಯಲ್ಲ | ನಿನಗೆ ಸಾರಿದೆ || ||೫೩||

ನಾನು ಸತಿಯ ಕೊಡೆನು ಜವದಿ | ಮರಳಿ ಪೋಗೆಲಾ ||
ನೀನು ಹಿಂದೆ ಪಡೆದ ಭಂಗ | ವೆಲ್ಲ ಮರೆತೆಲಾ || ||೫೪||

ಅಣಕವಲ್ಲ ಮೊದಲಿನಂತೆ | ಅಣ್ಣ ರಣದೊಳು |
ಸೆಣಸಿ ನೋಡು ಸಲುಗೆಯಿಂದ | ಶೌರ್ಯಗುಣದೊಳು || ||೫೫||

ಎಂದ ಮಾತ ಕೇಳಿ ಕೋಪ | ದಿಂದಲನುಜಗೆ |
ಒಂದು ಗಿರಿಯ ಕಳಚಿ ಬಿಸುಟ | ನಂದು ರವಿಜಗೆ || ||೫೬||

ಬರುವ ಗಿರಿಯ ತಡೆದು ದೊಡ್ಡ | ಪರುವತಂಗಳ |
ಸುರಪನಣುಗನಂಗಕಿಟ್ಟ | ತರತರಂಗಳ || ||೫೭||

ಮರ ಮರಂಗಳುಭಯ ಬಲದೊ | ಳುರುಳ್ವ ಗಿರಿಗಳ |
ಮೊರೆವ ರಭಸಕಮರರಂಜು | ತಿರುವ ಪರಿಗಳ || ||೫೮||

ಅದ್ರಿ ವೃಕ್ಷವೆಲ್ಲ ತೀರಿ | ತಿಬ್ಬರಿದಿರಲಿ |
ಗುದ್ದುತೊಡನೆ ಕಯ್ಯ ಕಾಲಿಂ | ದೊದ್ದು ಭರದಲಿ || ||೫೯||

ಉರಕೆ ಮುಷ್ಟಿಯಿಂದ ತಿವಿದ | ಭರದ ಪೆಟ್ಟಿಗೆ |
ತಿರುಗೆ ತಲೆಯು ಭಾನುತನುಜ | ನೊರಗೆ ಸೃಷ್ಟಿಗೆ || ||೬೦||

ಬೀಳಲನುಜನಂಗಕೆರಡು | ಕಾಲಲೊದ್ದನು |
ಮೂಳ ಹೋಗು ಸಾಯೆನುತ್ತ | ವಾಲಿ ನಡೆದನು || ||೬೧||

ಹೋದನಣ್ಣನೆಂದು ತಿಳಿವು | ತಾಧರಿಸಿದನು |
ಕ್ರೋಧದಿಂ ಧರಾಧಿಪತಿಯ | ಮೂದಲಿಸಿದನು || ||೬೨||

ರಾಗ ಘಂಟಾರವ ರೂಪಕತಾಳ

ವಿಶ್ವನಾಯಕ | ನಿನ್ನ ವಾಕ್ಯವ |
ವಿಶ್ವಾಸವೆಂದು | ನಂಬಿದೆನಿಂದು || ಪಲ್ಲವಿ ||

ಎನ್ನವೈರಿಯ | ಮುಂದೆ ನಿಲ್ಲಿಸಿ |
ಕಣ್ಣಲಿ ಕಂಡೆ | ಚೆನ್ನವಾಗಿಯೆ ||
ಇನ್ನು ಸಾಕಯ್ಯ | ನಿನ್ನ ತಳ್ಳಿಯು |
ಮನ್ನರಾಧಿಪ | ಮಂಜುಳಾಕಾರ || ||೬೩||

ಸೂರ್ಯವಂಶದ | ರಾಯರಾಡಿದ |
ಕಾರ್ಯ ತಪ್ಪದು | ಕಪಟವಲ್ಲಿದು ||
ಧೈರ್ಯತಾಳಯ್ಯ | ಸೂರ್ಯನಂದನ |
ಕಾರ್ಯವೆಸಗಲು | ಮೋಸವಾಯಿತು || ||೬೪||

ವಾಲಿಯ ನಿನ್ನ | ಕಾಣಲಿರ್ವರ |
ಆಳುಭೇದವೆ | ತಿಳಿಯದಾಯಿತು ||
ನಿನ್ನ ಮೋಸದಿ | ಕೊಲಲು ಲೋಕದಿ |
ಎನ್ನ ನಿಂದಿಸಿ | ಜರೆವರಲ್ಲಯ್ಯ || ||೬೫||

ಬಾಲಕ ಗಜ | ಪುಷ್ಪದಾ ನಿಜ |
ಮಾಲೆ ಇಟ್ಟರೆ | ಇವನ ಕೊರಳಿಗೆ ||
ಮಲ್ಲ ಸಾಹಸ | ವಾಲಿಯನ್ನು ನಾ |
ಕೊಲ್ವೆನೀಕ್ಷಣ | ಇಲ್ಲ ಸಂಶಯ || ||೬೬||

ಮಗಧಜಾತೆಯ | ಮಗನು ನೀತಿಯ |
ಬಗೆದು ಮಾಲೆಯ | ನಿಟ್ಟ ರವಿಜಗೆ ||
ತರಣಿನಂದನ | ತೆರಳು ಇನ್ನು ನೀ |
ಧುರಕೆ ವಾಲಿಯ | ಕರೆದು ಬಾರಯ್ಯ || ||೬೭||

ಶಾರ್ದೂಲವಿಕ್ರೀಡಿತ

ಶ್ರೀರಾಮಾಖ್ಯನ ಮಾತ ಕೇಳ್ದು ರವಿಜಂ ಸದ್ಧೈರ್ಯದಿಂದಾಕ್ಷಣಂ
ಶೂರತ್ವಂಗಳ ತೋರ್ಪೆನೆಂದು ಬರುತಾ ಕಿಷ್ಕಿಂಧದ ದ್ವಾರದಿಂ |
ಘೋರಾಕಾರದಿ ಕೂಗಲಾ ಸುರಪಜಂ ಕೋಪಾಗ್ನಿಯಿಂದೇಳಲು
ತಾರಾದೇವಿ ವಿವೇಕದಿಂದ ತಡೆದೂ ತತ್ಕಾಂತಗಿಂತೆಂದಳು || ||೬೮||