ರಾಗ ಎರುಕಲ ಕಾಂಭೋಜಿ ಏಕತಾಳ

ನೀತಿಯಲ್ಲ ಪೋಪುದಿಂದು | ನೀ ಕೇಳು ಮತ್ಪ್ರಾಣಕಾಂತ || ಪಲ್ಲವಿ ||

ಜಾತನಂಗದ ಪೇಳ್ದೊಂದು | ಮಾತ ಕೇಳಿದೆ ನಾನಿಂದು || ಅನುಪಲ್ಲವಿ ||

ಪುಂಡರೀಕನೇತ್ರನು ಮಾ | ರ್ತಂಡಜಾತ ಸುಗ್ರೀವನು |
ಕಂಡು ತಮ್ಮೊಳಂತರಂಗ | ಗೊಂಡೇಕಾಂತದಿ ||
ಚಂಡವಿಕ್ರಮ ರಾಮನ | ಹೆಂಡತಿಯನಾ ರಾವಣ |
ಕೊಂಡುಪೋದನಾ ರಕ್ಕಸನ | ಖಂಡಿಸಲಾಗಿ || ||೬೯||

ನಿನ್ನ ಕೊಂದಾತ ಸತಿ | ಯನ್ನು ಬಿಡಿಸಿ ಕೊಡುವೆನೆಂದು |
ಮನ್ನರಾಧಿಪತಿಯು ಸತ್ಯ | ವನ್ನಿತ್ತನಂತೆ ||
ನಿನ್ನ ತಮ್ಮ ಸೀತಾದೇವಿ | ಯನ್ನು ತರುವ ಬಗೆಗಾಗಿ |
ತನ್ನ ಕಪಿಸೇನೆ ಸಹಿತ | ಸನ್ನಹವಾಗಿ || ||೭೦||

ಬಂದು ರಾಮಸೇವೆ ಮಾಳ್ಪೆ | ನೆಂದು ಭಾಷೆ ಕೊಟ್ಟನಂತೆ |
ಸಂದೇಹವಿಲ್ಲದೆ ತಮ್ಮೊ | ಳೊಂದಾದರಂತೆ ||
ದುಂದುಭಿಯ ಕಾಯವ ಕಾ | ಲಿಂದ ಚಿಮ್ಮಿ ಯೋಜನಕ್ಕೆ |
ಬಂದು ಬೀಳಲಾಮೇಲೆ ಕೇ | ಳೊಂದು ಕಾರ್ಯವ || ||೭೧||

ಏಳು ತಾಳವೃಕ್ಷವನ್ನು | ಸೀಳುಮಾಡಿ ಈಗ ನಿಮ್ಮ |
ಮೇಲೆ ಕೂಡಿ ಬಪ್ಪರಂತೆ | ಕಾಳಗಕ್ಕೆಂದು ||
ನಾಳೆ ನೋಡಿಕೊಂಬ ಯುದ್ಧ | ವೇಳೆಯಲ್ಲವೆನುತಲವನ |
ಕಾಲ ಮೇಲೆ ಬಿದ್ದು ತಾರೆ | ಹೇಳಿಕೊಂಡಳು || ||೭೨||

ರಾಗ ಪಂತುವರಾಳಿ ಅಷ್ಟತಾಳ

ಚಿತ್ರತರಾಂಗಿ ಕೇಳ್ಬಾಲೆ | ಚಿತ್ರವಾಯ್ತು ನಿನ್ನ ಮಾತು |
ಮಿತ್ರಜಾತಂಗಂಜಿ ನಡೆವ | ವರ್ತಮಾನವುಂಟೆ ಕಾಂತೆ || ||೭೩||

ಧಾತ್ರಿಯೊಳೆನ್ನಧಟಿಗೆ ತ್ರಿ | ಮೂರ್ತಿಗಳಂಜುವರೈಸೆ |
ಮತ್ತೆ ರಾಮಗೀಮರೆಂಬ | ಮರ್ತ್ಯರಿಂದಲೇನಪ್ಪುದೆ || ||೭೪||

ಚಿತ್ತದಲ್ಲಿ ಶಂಕೆ ಬೇಡ | ಮತ್ತೆ ನೋಡೆನ್ನ ಕೈವಾಡ |
ಅತ್ತ ಹೋಗು ತಡೆಯಬೇಡ | ಮತ್ತಕಾಶಿನಿಯೆ ಗಾಢ || ||೭೫||

ಭಾಮಿನಿ

ಪುರವಮುತ್ತಿರೆ ವೈರಿಸೇನೆಯು
ಶರಭಶತಬಲಿ ಗಜಗವಯ ಸಂ
ಗರ ಭಯಂಕರ ಸುಮುಖ ದುರ್ಮುಖ ಗಂಧಮಾದನರ |
ಜರಿಯಗೆಡಹುತ ಅಂಗದನ ಪುರ
ಕಿರಿಸಿ ಭೀಕರಗಜ ಸುಷೇಣರ
ನೆರವಿಯಲಿ ನಡೆತಂದು ರವಿಜನ ತಡೆದನಾ ವಾಲಿ || ||೭೬||

ರಾಗ ಮಾರವಿ ಝಂಪೆತಾಳ

ಮತ್ತು ಮತ್ತೆನ್ನೊಡನೆ | ನಿತ್ತುಕೊಂಡೀ ರಣದೊ |
ಳುತ್ತರವ ಕೊಡುವೆ ಬಲು | ಧೂರ್ತ ಸುಗ್ರೀವ || ||೭೭||

ಧೂರ್ತನಲ್ಲದೊಡನುಜ | ಪತ್ನಿಯನು ಸೆರೆವಿಡಿದು |
ರಕ್ತಮದದಿಂದ ಕೊಡ | ದಿರ್ಪೆಯಾ ವಾಲಿ || ||೭೮||

ತಮ್ಮನೆಂಬುದರಿಂದ | ಧರ್ಮವರಿತೀಗ ಬಿಡೆ |
ಶರ್ಮವಿಡಿದೀ ಪರಿಯ | ಹೆಮ್ಮೆ ಬಂತಲ್ಲ || ||೭೯||

ಹೆಮ್ಮೆಯಲ್ಲದಡಿನಿತು | ದುರ್ಮಾರ್ಗಿಯಾಗಿ ದು |
ಷ್ಕರ್ಮಗತಿ ನಡೆಸುವುದು | ಧರ್ಮವೇನಣ್ಣ || ||೮೦||

ಮೊದಲೈದು ಬಾರಿ ನೋ | ಡಿದೆ ನಿನ್ನ ಶೌರ್ಯವನು |
ಅದ ಮರೆತು ಮತ್ತೆ ಬಂ | ದಿದಿರಾದೆ ಕಳ್ಳ || ||೮೧||

ಇದನೋಡು ಹೊಸಪರಿಯ | ಕದನಕೌಶಲಗಳನು |
ತುದಿಗಾಲ ನಿನಗೆ ಬಂ | ದೊದಗಿತೆಂದರಿಯ || ||೮೨||

ಬಾಯಿಂದ ಬಂದುದನು | ಬಗುಳಿ ನೀನೆನ್ನೊಡನೆ |
ಸಾಯದಿರು ಪೆಟ್ಟಿನಲಿ | ಸಟೆಯಲ್ಲ ತಮ್ಮ || ||೮೩||

ನ್ಯಾಯವುಸಿರಿದ ಮಾತು | ನಡತೆ ತಪ್ಪಿದ ಮೇಲೆ |
ನಾಯಿಂದ ಕಡೆಯಾಗಿ | ಬಗುಳುವುದೆ ಸಹಜ || ||೮೪||

ಹೆಚ್ಚು ಮಾತುಗಳೇಕೆ | ಎಚ್ಚರಿತುಕೊಳ್ಳೆನುತ |
ಕಿಚ್ಚಿನಂದದ ಕಣೆಯ | ನೆಚ್ಚನಾ ವಾಲಿ || ||೮೫||

ಚಚ್ಚರದಿ ಬಪ್ಪ ಪೊಸ | ಪೊಚ್ಚ ಕಣೆಗಳನೆಲ್ಲ |
ನುಚ್ಚುನುರಿಗೆಯ್ದ ಖತಿ | ಪೆಚ್ಚಿ ಸುಗ್ರೀವ || ||೮೬||

ರಾಗ ಪಂಚಾಗತಿ ಮಟ್ಟೆತಾಳ

ಜಾಣನಹುದೊ ಭಳಿರೆ ತಮ್ಮ | ತ್ರಾಣವನ್ನು ಕಂಡೆನೀಗ |
ಆನಲಾಪಡಿದರ ಕೊಳ್ಳೊ | ಮಾಣದದ್ರಿಯ ||
ಮಾಣದಿಟ್ಟ ಗಿರಿಯ ತಡೆದು | ಕಾಣುವಂತೆ ಮರನ ಕೊಂಬ |
ಭಾನುಸುತನು ಬಿಸುಟ ಸುರಪ | ಸೂನುವಿದಿರಿಗೆ || ||೮೭||

ಬರುವ ಗಿರಿಯ ಕಂಡು ವಾಲಿ | ಕರದಿ ಪಿಡಿದು ಮುರಿವುತದನು |
ತಿರುಪಿ ಬಿಸುಟ ಕೋಪದಿಂದ | ತರಣಿತನುಜಗೆ ||
ಭರಿತರೋಷದಿಂದಲದನು | ಮುರಿದು ಗರ್ಜಿಸುತ್ತ ದೊಡ್ಡ |
ಪರುವತವನು ಬಿಸುಟನಿಂದ್ರ | ತರಳನಿದಿರಿಗೆ || ||೮೮||

ತಂಡತಂಡದದ್ರಿಗಳನು | ಕೊಂಡುಕೊಂಡು ಬಿಸುಡುತಿರಲು |
ಚೆಂಡಿನಾಟವಾಯಿತಮರ | ತಂಡ ಬೆದರಲು ||
ಹಿಂಡು ಹಿಂಡು ಮರನಕಿತ್ತು | ಕೊಂಡು ತಂದು ಕೊಡುವರ್ ಮತ್ತು |
ದಂಡಗಯ್ಯೊಳಿಡಲು ಸಮರ | ದಿಂಡುಗೆಟ್ಟಿತು || ||೮೯||

ಅಷ್ಟದೆಸೆಯೊಳಿರುವ ವೃಕ್ಷ | ಬೆಟ್ಟವೆಲ್ಲತೀರಲಾಗ |
ಜಟ್ಟಿಗಾಳಗಕ್ಕೆ ಬೆದರಿ | ತಷ್ಟ ದಿಗ್ಗಜ ||
ಪೆಟ್ಟು ಪೆಟ್ಟಿಗೊಮ್ಮೆಕೂಗು | ತಟ್ಟಿ ಹಿಡಿದು ಬಡಿದು ಸದೆದು |
ಮುಷ್ಟಿಯುದ್ಧದಲ್ಲಿ ಹೆಣಗು | ತೊಟ್ಟಯಿಸಿದರು || ||೯೦||

ಇಂತು ಹೆಣಗುತವರು ಮನದಿ | ಪಂಥವಿಡಿದು ಕಾದುತಿರಲು |
ಅಂತರಂಗದೊಳಗೆ ರವಿಜ | ಚಿಂತಿಸಿರ್ದನು ||
ಅಂತ್ಯಕಾಲ ಶಣನಿಂಗೆ | ಬಂತೆನುತ್ತ ಬಗೆದು ರಾಮ |
ನಿಂತುಕೊಂಡು ಧನುವ ಮರೆಯೊಳ್ | ಸಂತವಿಸಿದನು || ||೯೧||

ರಾಮ ಶರವ ಪೂಡಿ ಸು | ತ್ರಾಮನಣುಗನಂಗಕೆಸೆಯೆ |
ಭೂಮಿಗೊಡನೆ ಬಿದ್ದ ಕೀಶ | ಸ್ತೋಮದೊಡೆಯನು ||
ಆ ಮಹಾಂತ ರಾಮ ಶರವ | ವಾಮಹಸ್ತದಲ್ಲಿ ಪಿಡಿದು |
ಭೂಮಿಪಾಲನೊಡನೆ ನುಡಿದ | ನೇಮದಿಂದಲಿ || ||೯೨||

ಬೋಧೆಯಿಂದ ಸಮರದೊಳಗೆ | ಸೋದರನ್ನ ಮೊಗವನೋಡಿ |
ಕ್ರೋಧದಿಂದ ಜರೆಯಿತಿವರ | ಮೂದಲಿಸಿದನು ||
ಏ ದುರಾತ್ಮ ಕಪಟವಿದ್ಯ | ಸಾಧಿಸಿದೆಲ ಭಳಿರೆ ಯೆಂ |
ತಾದರೂ ಕೀರ್ತಿ ಬಂತು | ಮೇದಿನಿಯೊಳು || ||೯೩||

ಭಾಮಿನಿ

ನೋಡಿದನು ಮುರಿದವನಿಪನನ
ಲ್ಲಾಡಿದನು ತುದಿಬೆರಳನಹುದೈ
ಖೋಡಿಯಿಲ್ಲದ ಖರೆಯನಹೆ ಖದ್ಯೋತವಂಶದಲಿ |
ಪಾಡಗಾಣೆನು ನಿನಗೆ ಸುರನರ
ಗೂಢಪದರೊಗ್ಗಿನಲಿ ಹುಸಿದಡೆ
ಕೂಡಿಕೊಂಡಯ್ತಂದು ಕೊಲಿಸಿದ ತಮ್ಮನಾಣೆಂದ || ||೯೪||

ರಾಗ ಮಾರವಿ ಅಷ್ಟತಾಳ

ಜಾಣನಹುದಹುದೋ | ಸಂಗರಕತಿ |
ತ್ರಾಣ ನಹುದಹುದೊ ||
ಕ್ಷೋಣಿಯೊಳ್ ನಿನಗೆಣೆ | ಗಾಣೆ ಪರಾಕ್ರಮಿ || ಜಾಣ || ಪಲ್ಲವಿ ||

ಇನ ವಂಶದರಸುಗಳೊಳಗೆ | ಹಿಂದೆ |
ಜನಿಸಿದವರು ನಿನ್ನ ಕೆಳಗೆ ||
ಘನಚೋರತನದ ಶಿಖಂಡಿ ವಿದ್ಯೆಯನೆಷ್ಟು |
ದಿನ ಸಾಧಿಸಿದೆಯೊ ನೀನು | ಲಂಡಿಗಳ ದು |
ರ್ಗುಣವ ಕೈಗೊಂಡೆಯೇನು | ನಿನ್ನಂಥ ಕು |
ಜನರಿಲ್ಲ ಸಾಕ್ಷಿಗಿನ್ನು | ರಾಘವ ಬಲು || ಜಾಣ || ||೯೫||

ಗಂಡನಿಲ್ಲದ ಹೆಂಗಳಂತೆ | ನಾಚಿ |
ಕೊಂಡು ನೀ ಮರೆಯಲ್ಲಿ ನಿಂತೆ ||
ಹೆಂಡತಿಗಾಗಿ ಕಂಡವರ ಮಾತಿನ ಮೇಲೆ |
ಭಂಡಾಟಗಳ ಮಾಡಿದೆ | ಹಸ್ತದಲಿ ಬಿಲ್ |
ಗೊಂಡು ಬಾಣವ ಪೂಡಿದೆ | ಜೋಡಾಗಿರ್ದ |
ಗಂಡುಸುತನ ನೋಡಿದೆ | ರಾಘವ ಬಲು || ಜಾಣ || ||೯೬||

ಲೇಸಾಯಿತಯ್ಯ ನಿನ್ನಂಗ | ಇನ್ನು |
ಏಸು ಪೇಳುವರೆ ಪ್ರಸಂಗ ||
ಮೋಸದೊಳೆನ್ನ ತರಿದೆ ನಿನಗಿದರಿಂದ |
ಲೇಸು ಕೀರ್ತಿಗಳು ಬಂತು | ಕಾಯದೊಳಿದ್ದ |
ಪಾಶದಾಶೆಗಳು ಸಂತು | ಮತ್ಸರವೆಂಬ |
ವಾಸಿಪಂಥಗಳಿನ್ನೆಂತು | ರಾಘವ ಬಲು || ಜಾಣ || ||೯೭||

ಭಾಮಿನಿ

ವಾಲಿಯಂಗದ ಶರವಿಡಿದು ಭೂ
ಪಾಲಕನ ಮೂದಲಿಸೆ ವಾನರ
ಜಾಲದೋಸರಿಕೆಯಲಿ ತಾರಾದೇವಿ ನಡೆತಂದು |
ಬಾಲನಂದಗದಸಹಿತ ರಮಣನ
ಮೇಲೆ ಬಿದ್ದಳುತಿರಲು ನತಜನ
ಪಾಲ ಸಂತೈಸುತ್ತ ಬಳಿಕಿಂತೆಂದನವನೊಡನೆ || ||೯೮||

ರಾಗ ಮಧ್ಯಮಾವತಿ ಏಕತಾಳ

ವಾನರರಧಿಪನೆ ಕೇಳೆನ್ನ ಮಾತ |
ನೀನೆನ್ನ ಜರೆವುದೇಕಿಂದ್ರಜಾತ ||
ದಾನವರುಗಳ ದುಷ್ಟರ ತಲೆ ತರಿದು |
ಕ್ಷೋಣೀಭಾರವನಿಳುಹುವದೆಮ್ಮ ಬಿರುದು || ||೯೯||

ನ್ಯಾಯವೆ ತಮ್ಮನ ಸತಿಯ ಮುಟ್ಟುವದು |
ಹೇಯವಾದುದರಿಂದ ದೋಷ ತಟ್ಟಿದುದು ||
ಪ್ರಾಯಶ್ಚಿತ್ತಗಳಿದು ಪರದೋಷಗಳಿಗೆ |
ಕಾಯಖಂಡನವೆಂಬ ನಿಜಮಾತಿನೊಳಗೆ || ೧೦೦||

ಮುಂದಿನ್ನು ಬದುಕಬೇಕೆಂಬಾಸೆಯುಂಟೇ |
ಹಿಂದೆ ಕರೆವೆ ಬಾಣವದು ನೋಯದಂತೆ ||
ಒಂದೇ ಬುದ್ದಿಯೊಳೆಲ್ಲ ಸತ್ಯವ ಬಿಡದೆ |
ಚಂದವಾಗಿರುವುದು ಸರ್ವರೂ ಕಡೆಗೆ || ||೧೦೧||

ವಚನ || ಇಂತೆಂದು ಶ್ರೀರಾಮದೇವರು ಅಪ್ಪಣೆಯಂ ಕೊಡಲಾಗಿ ಆಗ ವಾಲಿಯು
ಈತನು ಸಾಕ್ಷಾತ್ ನಾಯಾಯಣನೆಂದೇ ತಿಳಿದು ಇವನ ಬಾಣದಿಂ ಮರಣವಿಟ್ಟರೆ ತನಗೆ ಸಾಲೋಕ್ಯ ಮುಕ್ತಿಯಂ ಪಾಲಿಸುವನೆಂದು ನಿಶ್ಚಯಿಸಿ ಆ ಸ್ವಾಮಿಯೊಡನೆ ಬಿನ್ನವಿಸುತಿರ್ದನದೆಂತೆನೆ –

ರಾಗ ಆಹೇರಿ ಆದಿತಾಳ

ಜಯ ಜಯ ರಾಮ ಹರೇ | ಸೀತಾಪತೇ ||
ಜಯ ಜಯ ರಾಮ ಹರೇ || ಪ ||

ವಿಕಸಿತಾಂಬುಜದಳಲೋಚನ | ಪಾಪನಾಶನ |
ಸಕಲಾಭರಣ ವಿಭೂಷಣ || ಜಯ ಜಯರಾಮ ಹರೇ || ||೧೦೨||

ದುರ್ಜನಜನಸಂಹಾರಣ | ಸದ್ವಿಚಾರಣ |
ಸಜ್ಜನಜನಪರಿಪಾಲನ || ಜಯ ಜಯ || ||೧೦೩||

ಕಂಜಬಾಂಧವಕುಲಶೇಖರ | ಮಂಜುಳಾಕರ |
ಕುಂಜರವರದನೆ ಶ್ರೀಕರ || ಜಯ ಜಯ || ||೧೦೪||

ರಾಗ ಕಾಪಿ ಏಕತಾಳ

ಕರುಣವಿದ್ದರೆ ಸಾಕು | ನಿನ್ನ ಪಾದದ |
ಕರುಣವಿದ್ದರೆ ಸಾಕು || ಪಲ್ಲವಿ ||

ಪರಿಪೂರ್ಣವಾಗಿ ಪಾಲಿಸಿಕೊಳ್ಳಬೇಕೆಂಬ || ಅನುಪಲ್ಲವಿ ||

ಮೂರು ದಿನದ ಈ ಸಂ | ಸಾರ ಶಾಶ್ವತವಲ್ಲ |
ಘೋರದುಃಖಗಳ ಸಂ | ಹಾರ ಮಾಡುವದೊಂದು || ಕರುಣ || ||೧೦೫||

ಭೂತಪಂಚಕ ದೇಹ | ಏತಕಿಷ್ಟರ ಮೋಹ |
ಚೇತನಾತ್ಮಕ ನಿನ್ನ | ಮೂರ್ತಿಪದಾಂಬುಜದ || ಕರುಣ || ||೧೦೬||

ತಂದೆ ತಾಯಿಗಳೆಂಬು | ದೊಂದು ಸ್ವಪ್ನವಿಚಾರ |
ಎಂದೂ ನಿನ್ನ ಪದಾರ | ವಿಂದ ಪೂಜಿಸುವಂಥ || ಕರುಣ || ||೧೦೭||

ರಾಗ ಆನಂದಭೈರವಿ ಏಕತಾಳ

ರಾಮ ನಿನ್ನ ಬಾಣ ತಾಗಿದ | ಮೇಲಿನ್ನುಂಟೆ |
ಭೂಮಿಯೊಳಾಸೆ ಯೆನಗೆ ||
ಕಾಮಿತ ಬೇರಿಲ್ಲ ಚಿತ್ತದಿ | ಮುಕ್ತಿಯನಿತ್ತು |
ಪ್ರೇಮದಿ ರಕ್ಷಿಸೆನ್ನನು || ||೧೦೮||

ಇತ್ತ ಬಾ ತಮ್ಮ ಸುಗ್ರೀವ | ಕಿಷ್ಕಿಂಧ ಪಾರು |
ಪತ್ಯವ ಪಾಲಿಸಯ್ಯ ||
ಸತ್ಯವಂತೆ ಈ ತಾರೆಯ | ಮಾನವ ಕಾಯ್ದು |
ಸ್ವಸ್ಥದಿ ಲಾಲಿಸಯ್ಯ || ||೧೦೯||

ಬಾಲ ಬುದ್ಧಿಯನರಿಯ | ಈ ಅಂಗದನ |
ಮೇಲೆ ಕಟಾಕ್ಷವಿರಲಯ್ಯ ||
ಮೇಲಾದ ಕಪಿವೀರರು | ನಮ್ಮ ನಂಬಿಷ್ಟು |
ಕಾಲವಿದ್ದಂಥವರು || ||೧೧೦||

ಕಷ್ಟವ ಮಾಡಿಕೊಳ್ಳದೆ | ಸಜ್ಜನರೊಳು |
ದುಷ್ಟನೆನಿಸಿಕೊಳ್ಳದೆ ||
ಅಷ್ಟಸೌಭಾಗ್ಯದಿಂದಲಿ | ಕಿಷ್ಕಿಂಧ ರಾಜ್ಯ |
ಪಟ್ಟವಾಳಿರು ಸುಖದಿ || ||೧೧೧||

ಭರತ ಶತ್ರುಘ್ನರಂದದಿ | ಶ್ರೀರಾಮ ನಮ್ಮ |
ತರಳ ಸುಗ್ರೀವರಲ್ಲಿ ||
ನಿರತ ಕಟಾಕ್ಷವಿರಲಿ | ಈ ವಂಶದವರಲಿ |
ಕರುಣಿಸಿ ಮುಕ್ತಿಂ ದೇಹಿ || ||೧೧೨||

ಶ್ರೀರಾಮ ರಾಮ ರಾಮ | ರಾಜೀವ ನೇತ್ರ |
ನಾರಾಯಣ ನಾರಾಯಣ || ||೧೧೩||

ವಾರ್ಧಕ

ಬಾಣವನು ಸೆಳೆದು ತೆಗೆದಾಕ್ಷಣವೆ ನೋಡಿದರೆ
ಪ್ರಾಣಹಾರಿದುದಿಂದ್ರಸುತಗೆ ಸೂರ್ಯಾತ್ಮಜಂ
ಕಾಣುತಣ್ಣನ ಶರೀರದ ಮೇಲೆ ಬಿದ್ದವನ ಗುಣಗಳಂ ಕೊಂಡಾಡುತ |
ಕೇಣವಿಲ್ಲದೆ ಕ್ಲೇಶದಿಂದಳುವ ವೇಳೆಯಲಿ
ಕ್ಷೋಣಿಪತಿ ದಯದಿ ಸಂತವಿಸೆ ಕೀಶಾಧಿಪನ
ರಾಣಿ ತಾರಾದೇವಿಗೋಳಿಟ್ಟು ಮರುಗಿದಳು ಕಲ್ಮರಂ ಕರಗುವಂತೆ || ||೧೧೪||

ರಾಗ ನೀಲಾಂಬರಿ ರೂಪಕತಾಳ

ಏತಕೆ ಮಲಗಿದೆ ಧರೆಯೊಳು | ಕೋತಿಕುಲಾಧಿಪ ಏಳೈ |
ಖಾತಿಯಿದೇಕೆನ್ನೊಳು ಮೃದು | ಮಾತಾಡತಿ ದಯದಿ || ಪ||

ಇರಿದರೊ ಸುರಧೇನುವ ನೆರೆ | ಮುರಿದರೊ ಸುರಕುಜವನು ಶಿಖಿ |
ಗುರಿದರೆ ಕಾಮಿತರತ್ನವ | ಹರಹರ ಕಾಂತನನು ||
ತರಿದೆಯ ರಾಘವದೇವನೆ | ಕರುಣಾಕರ ನೀನೆನ್ನುವ |
ಬಿರುದೆತ್ತಡಗಿಸಿದೆಯೋ ನಾ | ಧರಣಿಯೊಳೆಂತಿಹೆನು || ||೧೧೫||

ಆಯಿತೆ ಸಂತಸ ರಾಜ್ಯ | ಶ್ರೀಯ ವಿನೋದವು ಮದನನ |
ಬೀಯಕೆ ಕೊಲಿಸಿದೆ ಪತಿಯನು | ತೋಯಜಸಖಸುತನೆ ||
ಪ್ರೀಯದೊಳರ್ಯಮ ಧರೆ ಚಂ | ದ್ರಾಯತ ಕೀರ್ತಿಯಧರಿಸಿದೆ |
ದಾಯಿಗರೊಳಗುತ್ತಮ ಮನ | ದಾಯತ ತೀರಿದುದೆ || ||೧೧೬||

ಕಂದನೆ ನಿನ್ನನು ಕರುಣದಿ | ತಂದೆಯು ಕೊಟ್ಟಿಹನ್ಯಾರಿಗೆ |
ಮುಂದೆಮಗಾರೈ ಗತಿಯೇ | ನೆಂದಿಹ ನಿನ್ನೊಡನೆ ||
ಸಂದುದು ಋಣ ಪಿತನದು ಬಲು | ಚಂದದಿ ಸಲಹುವರಾರೈ |
ಮುಂದೆಮ್ಮನು ಕೃಪೆಯಲಿ ಹಾ | ಯೆಂದೆನುತಳಲಿದಳು || ||೧೧೭||

ರಾಗ ಮೋಹನ ಏಕತಾಳ

ಅಳುವುದೇತಕೆ ನೀ ತಾರೆ | ನಿನ್ನಯ ಮನ |
ದೊಳು ಧೈರ್ಯ ತಾಳು ನೀರೆ ||
ನೆಲೆಯಲ್ಲ ಸಂಸಾರವೆಂಬುದು ಮೊದಲೆ ನೀ |
ತಿಳಿದಿಪ್ಪ ಕಾರ್ಯ ಕಾಣೆ | ಕೇಳೆಲೆ ಜಾಣೆ || ||೧೧೮||

ಬಾಲ ನೀ ಮುರುಗದಿರು | ಲಕ್ಷ್ಮಣನಂತೆ |
ಪಾಲಿಸಿಕೊಂಬೆ ಸೇರು ||
ವಾಲಿನಂದನ ಹಿಡಿ ಕೊಡುವೆ ನಂಬುಗೆಯನ್ನು |
ಜಾಲಮಾತಲ್ಲವೆನ್ನ | ನಂಬಿರು ಮುನ್ನ || ||೧೧೯||

ತರಣಿನಂದನ ಸುಗ್ರೀವ | ತಾರಾದೇವಿ |
ಗರುಹು ನೀನತಿಧೈರ್ಯವ ||
ಧರೆಯೊಳು ಸುಜನರೀ ದೇವಿಯ ನಾಮವ |
ಸ್ಮರಿಸಿಕೊಂಡಿರಲು ಮೋಕ್ಷ | ವೆಂಬ ಕಟಾಕ್ಷ || ||೧೨೦||

ವಾರ್ಧಕ

ಅರಸು ಮಕ್ಕಳು ಕೇಳಿ ನಿಮ್ಮ ಪಿತನೀರೀತಿ
ವರ ಪತಿವ್ರತೆಸುತರ ಸಂತಯ್ಸುತಂದು ವಾ
ನರಶಾಸ್ತ್ರವಿಧಿಯಿಂದ ವಾಲಿಗಾಗುವ ಶೇಷಕರ್ಮಂಗಳಂ ವಿರಚಿಸಿ ||
ಸುರರು ಮುನಿಗಳು ಸಿದ್ಧ ಸಾಧ್ಯ ಗಂಧರ್ವ ಕಿ
ನ್ನರ ಕಿಂಪುರುಷರು ರಾಘವಸಹಿತ ಕಿಷ್ಕಿಂಧ
ಪುರಕೆಯಧಿಪತಿಯಾಗಿ ಸುಗ್ರೀವನಂ ಮಾಡಿದರು ಶಾಸ್ತ್ರವಿಧಿಗಳಿಂದ || ||೧೨೧||

ರಾಗ ಢವಳಾರ ತ್ರಿವುಡೆತಾಳ (ಧ್ರುವತಾಳ)

ನಾಕವನಾ | ಳುವ ದೇ | ವತೆಗಳು |
ಶ್ರೀಕರ ಸು | ಗ್ರೀವನ | ಹರಸುತ |
ಈ ಕಪಿಗಳಿ | ಗೆ _ | ಲ್ಲ _ | ಅರ _ | ಸಾ _ | ಗು_ |
ಅರಸಾಗೆಂ | ದೆನುತಲಿ | ಹರಸುತ |
ಶ್ರೀಕರಾ | ಕ್ಷತೆ | ಯ _ | ತಳಿ _ | ದ _ | ರು _ || ||೧೨೨||

ಗುಪಿತದೊಳನು | ಗಾಲ ವ | ನದೊಳಿಹ |
ತಪಸಿಗಳೈ | ತಂದು ಸು | ಗ್ರೀವನ |
ಕಪಿನಾಯಕ | ರಿಗೆ | ಲ್ಲ _ | ಅರ _ ಸಾ _ | ಗು _ |
ಅರಸಾಗೆಂ | ದೆನುತಲೆ | ಹರಸುತ |
ಅಪರಿಮಿತಾ | ಕ್ಷತೆ | ಯ _ | ತಳಿ _ | ದ _ | ರು _ || ||೧೨೩||

ಅಂಬರದಲಿ | ಚರಿಸುವ | ನಾರದ |
ತುಂಬುರರ | ಯ್ತಂದು ಸು | ಗ್ರೀವನ |
ಜಾಂಬವ ಮೊದ | ಲಾ _ | ದ _ | ಕಪಿ _ | ಗ_ | ಳ _ |
ಕಪಿಗಳಿಗರ | ಸಾಗೆಂ | ದೆನುತಲೆ |
ಸಂಭ್ರಮದ | ಕ್ಷತೆ | ಯ _ | ತಳಿ _ | ದ _ | ರು _ || ||೧೨೪||

ವಾರ್ಧಿಕ

ತರಳ ಕೇಳಿಪ್ಪತ್ತಯಿದು ದಿನಕೆ ಕಿಷ್ಕಿಂಧ
ಪರುವತದಿ ನಿಲಲು ಮಳೆಗಾಲ ಬಂತೆಂದು ವಾ
ನರಸೈನ್ಯಮಂ ಕಳುಹಿ ನಾಲ್ಕು ತಿಂಗಳ ಮೇಲೆ ಬರುವ ತಹಗಳನೆ ಮಾಡಿ ||
ತರಣಿನಂದನನ ಬೀಳ್ಕೊಟ್ಟು ರಘುರಾಮ ಸೋ
ದರಸಹಿತ ಶ್ರವಣಪರ್ವತಕೆ ನಡೆತಂದಲ್ಲಿ
ಇರುವರೆಂಬಲ್ಲಿಗಾಯಿತು ಸಂಧಿ ಕಣ್ವಪುರ ಕೃಷ್ಣನ ಕಟಾಕ್ಷದಿಂದ || ||೧೨೫||

|| ವಾಲಿಸಂಹಾರ ಪ್ರಸಂಗ ಮುಗಿದುದು ||