ಗಾಂಧೀಜಿಯವರನ್ನು ಮಾನವಕುಲದ ರಕ್ಷಕರಲ್ಲೊಬ್ಬರೆಂದು ತಿಳಿಯಬಹುದು. ಗಾಂಧೀಜಿಯವರಂಥವರು ಎಷ್ಟೋ ಶತಮಾನಗಳಲ್ಲಿ ಒಮ್ಮೆ ಉದಯಿಸುವರು. ಲಂಡನ್ ಟಾಯಮ್ಸ್ ಪತ್ರಿಕೆಯ ಸಂಪಾದಕೀಯ ಅವರ ಮರಣದ ಮರುದಿನದ ಪತ್ರಿಕೆಯಲ್ಲಿ ಹೇಳಿದ್ದೇನೆಂದರೆ “ಭಾರತವನ್ನು ಬಿಟ್ಟು ಬೇರಾವ ದೇಶವೂ, ಹಿಂದೂ ಧರ್ಮವನ್ನು ಬಿಟ್ಟು ಬೇರಾವ ಧರ್ಮವೂ ಗಾಂಧೀಜಿಯವರಿಗೆ ಜನ್ಮಕೊಡಲು ಸಾಧ್ಯವಿರಲಿಲ್ಲ”. ಭಾರತದ ವಿಶಿಷ್ಟ ಗುಣಧರ್ಮಗಳನ್ನು ನಾವು ಗಾಧೀಜಿಯವರಲ್ಲಿ ಕಾಣುತ್ತೇವೆ. ಗಾಂಧೀಜಿಯವರು ಇದ್ದಿರದೇ ಹೋದಲ್ಲಿ ನಾವು ಇಷ್ಟು ತೀವ್ರ ಭಾರತದ ಸ್ವಾತಂತ್ರ್ಯವನ್ನು ಗಳಿಸಲು ಸಾಧ್ಯವಿರಲಿಲ್ಲ. ಪರಕೀಯರ ಆಳಿಕೆಯಿಂದ ಸ್ವತಂತ್ರ್ಯವಾದ ಯಾವ ದೇಶದಲ್ಲಿಯ ಚಳವಳಿಯೂ ಯಶಸ್ವಿಯಾಗಿ ರಕ್ತಪಾತವಿಲ್ಲದೇ ಕೊನೆಗೊಂಡಿತೆಂದು ಹೇಳಿಕೊಳ್ಳಲು ಸಾಧ್ಯವಿಲ್ಲ. ಆದರೆ ಗಾಂಧೀಜಿಯವರ ಭಾರತವು ಇದನ್ನು  ಸಾಧಿಸಿ ತೋರಿಸಿತು. ಭಾರತದ ಈ ಪ್ರಯೋಗವು ಈಗಲೂ ದಾಸ್ಯ ಶೃಂಖಲೆಯಿಂದ ಬಳಲುತ್ತಿರುವ ದೇಶಗಳಿಗೆ ಅನುಕರಣೀಯವಾಗಿದೆ. ಆದರೆ ಇಂಥ ದೇಶಗಳಿಗೆ ಗಾಂಧೀಜಿಯವರಂತಹ ಮಹಾಪುರುಷರ ಆಧ್ಯಾತ್ಮಕ ನೇತೃತ್ವ ಬೇಕು. ಭಾರತಕ್ಕೆ ಇಂತಹ ಆಗಾಧ ಶಕ್ತಿಯುಳ್ಳ ನೇತಾರನು ದೊರಕಿದ್ದು ಸುದೈವದ ಸಂಗತಿ. ಇವರಿಗಿಂತಲೂ ಮೊದಲು ಬಂದ ಭಾರತದ ಮುಂದಾಳುಗಳು ಸ್ವರಾಜ್ಯದ ಭದ್ರ ತಳಹದಿಯನ್ನು ಹಾಕಿದ್ದರು. ಗಾಂಧೀಜಿಯವರು ಬೇರೆ ಬೇರೆ ದಿಶೆಗಳಲ್ಲಿ ಹರಡಿದ ಈ ಪ್ರಯತ್ನಗಳಿಗೆ ಮತ್ತು ಹೋರಾಟಗಳಿಗೆ ಚೈತನ್ಯವನ್ನು ತುಂಬಿ ಅದನ್ನು ದೇಶಾದ್ಯಂತ ಒಂದೇ ಒಂದು ಚಳುವಳಿಯನ್ನಾಗಿ ಮಾರ್ಪಡಿಸಿ ಸ್ವರಾಜ್ಯವನ್ನೇ ಮೂಲಗುರಿಯನ್ನಾಗಿ ಮಾಡಿದರು.

ಗಾಂಧೀಜಿಯವರ ಜೀವನದ ಬಗ್ಗೆ ಸತ್ಯ ಮತ್ತು ನಂಬಲರ್ಹವಾದ ಸಂಗತಿಗಳು ಸಿಗುವಂತೆ ಬುದ್ಧ, ಮಹಾವೀರ, ಜಿಸಸ್ ಕ್ರೈಸ್ತ, ಪ್ರವಾದಿ ಮಹ್ಮದ, ಕನ್‌ಫ್ಯೂಶಿಯಸ್, ಝೊರೋಯಾಸ್ಟರ್, ಲಾವೋತ್ಸೆ ಇವರ ಜೀವನದ ಬಗ್ಗೆ ಸಂಗತಿಗಳು ದೊರಕುವುದಿಲ್ಲ. ಅವರ ಜೀವನದ ಸಂಗತಿಗಳು ವಿವರವಾಗಿ ವರ್ಣಿಸಲ್ಪಟ್ಟಿವೆ. ಈ ಶತಮಾನದ ಮೊದಲಿನ ಅರ್ಧಭಾಗದಲ್ಲಿ ಅವರನ್ನು ನೋಡಿದವರು, ಅವರ ಧ್ವನಿಯನ್ನು ಕೇಳಿದವರು, ಅವರ ಲೇಖನಗಳನ್ನು ಓದಿದವರು ಎಷ್ಟೋ ಜನರು ನಮ್ಮಲ್ಲಿದ್ದಾರೆ. ಜಗತ್ತಿನ ಎಲ್ಲ ಭಾಗಗಳಿಂದ ಅವರ ಆಶ್ರಮವನ್ನು ಅತಿ ಸಮೀಪದಿಂದ ವೀಕ್ಷಿಸಿದ್ದಾರೆ. ಲಕ್ಷಗಟ್ಟಲೆ ಜನರು ಅವರನ್ನು ನಿಕಟವಾಗಿ ಬಲ್ಲವರಾಗಿದ್ದಾರೆ. ಅವರ ಜೀವನವು ಯಾರಾದರೂ ಓದಬಹುದಾದ ತೆರೆದ ಪುಸ್ತಕವಾಗಿದ್ದಿತು. ರಾಜಕೀಯದಲ್ಲಿ ರಹಸ್ಯವನ್ನು ಅವರು ಪಾಪವೆಂದು ತಿರಸ್ಕರಿಸಿದರು. ರಾಜಕಾರಣವನ್ನು ಧರ್ಮದ ಎತ್ತರಕ್ಕೆ ಒಯ್ದರು. ಅವರು ತಮ್ಮ ಆತ್ಮಚರಿತ್ರೆಯಲ್ಲಿ ಮೋಕ್ಷವೇ ತಮ್ಮ ಜೀವನದ ಗುರಿಯೆಂದು ಹೇಳಿದ್ದಾರೆ. ರಾಜಕೀಯ ಕ್ಷೇತ್ರದಲ್ಲಿ ಅವರ ಪ್ರಯತ್ನಗಳು ಮಾನವಕುಲವನ್ನು ಮೋಕ್ಷದೆಡೆಗೆ ಒಯ್ಯುವ ದಿಶೆಯಲ್ಲಿ ನಡೆದಿದ್ದವು. ಅವರು ಜಗತ್ತಿನಲ್ಲಿ ಅವತರಿಸಿದ ಮಹಾಪುರಷರಲ್ಲಿ ಸತ್ಯವನ್ನು ಎತ್ತಿ ಹಿಡಿಯುವದರಲ್ಲಿ ಒಬ್ಬ ಸೀಮಾಪುರುಷರಾಗಿದ್ದರು. ಅವರ ಸತ್ಯ ಸಂಶೋಧನೆಯು ಯಾವ ಮುಚ್ಚುಮರೆಯಿಲ್ಲದೇ ನಡೆದಿತ್ತು. ಸತ್ಯಸಂಧರಿಗೆ ಗೌಪ್ಯತೆ ಎಂಬುದು ಇಲ್ಲ. ಅವರಿಗೆ ಸತ್ಯವಯ ದೇವರಾಗಿತ್ತು. ಭಾರತದ ಸ್ವರಾಜ್ಯಕ್ಕೆ ಅವರು ದುಡಿದರೂ ಸ್ವರಾಜ್ಯಕ್ಕಿಂತ ಸತ್ಯವು ಅವರಿಗೆ ಮಿಗಿಲಾಗಿತ್ತು. ರಹಸ್ಯಮಯತೆಯೆಂದರೆ ಭಯದ ಮೂಲವಾಗಿತ್ತು. ಅವರ ಪ್ರಕಾರ ಜನರಲ್ಲಿ ನಿರ್ಭಯತೆಯ ವಾತಾವರಣ ಹುಟ್ಟಬೇಕು. ಅಂದಾಗಲೇ ದಬ್ಬಾಳಿಕೆಯ ವಿರುದ್ಧ ಅಹಿಂಸಾತ್ಮಕ ಪ್ರತಿರೋಧವು ಸಾಧ್ಯವಾಗಬಲ್ಲದು. ಸರ್ಕಾರದ ಸುಗ್ರೀವಾಜ್ಞೆಗಳು ಗುಪ್ತ ಸಂಸ್ಥೆಗಳು ಸಂಸ್ಥೆಗಳು ಅವುಗಳ ಮುಖಾಂತರ ರಾಜಕಾರಣವು ನಡೆಯುತ್ತಿರುವಾಗ ಭಯವನ್ನುಂಟು ಮಾಡುತ್ತೇವೆ. ಆದರೆ ಅದೇ ಜನರು ಸೆರೆ ಹಿಡಿಯಲ್ಪಟ್ಟು ಜೇಲಿಗೆ ಹೋಗಲು ಸಿದ್ಧವಿರುವಾಗ ಭಯದ ವಾತಾವರಣವಿರುವುದಿಲ್ಲ. ಜನರು ಎಲ್ಲ ರೀತಿಯ ಕಷ್ಟ ನಷ್ಟಗಳನ್ನು ಅನುಭವಿಸಲು ಸಿದ್ಧರಾದಾಗ ಸರ್ಕಾರವು ಏನನ್ನೂ ಮಾಡಲು ಸಾಧ್ಯವಿಲ್ಲ. ಗಾಂಧೀಜಿಯವರ ಈ ಸತ್ಯದ ಪ್ರಯೋಗದ ಪರಿಣಾಮದ ಬಗ್ಗೆ ಭಿನ್ನಾಭಿಪ್ರಾಯವಿರಬಹುದು. ಆದರೆ ಆದ ಪರಿಣಾಮಕತೆಯ ಬಗ್ಗೆ ಉಪಯೋಗಿಸುವ ಸಾಧನಗಳ ಬಗ್ಗೆ ಯಾವ ಭಿನ್ನಾಭಿಪ್ರಾಯವೂ ಇರಲಾರದು.

ಅವರ ಸತ್ಯಾಗ್ರಹದ ವಿಚಾರಗಳ ಬೆಳವಣಿಗೆಗೆ ಅವರ ಮೇಲಾದ ವಿವಿಧ ಪ್ರಭಾವಗಳಲ್ಲಿ ಬೇರೆ ಬೇರೆ ಸಂಗತಿಗಳ ಮತ್ತು ಶಕ್ತಿಗಳ ಪಾತ್ರ: ಅವರ ಬಾಲ್ಯ ಜೀವನದಲ್ಲಿ ಅವರ ಸತ್ಯಾಗ್ರಹ ವಿಚಾರಕ್ಕೆ ದಾರಿ ಮಾಡಿಕೊಟ್ಟ ಪ್ರಭಾವಗಳ ಪಾತ್ರವನ್ನು ನಿಶ್ಚಯಿಸುವುದು ಕಷ್ಟಕರ ವಿಷಯ. ಗಾಂಧೀಜಿಯವರು ಮೇಲ್ಮಟ್ಟದ ಕುಟುಂಬದಲ್ಲಿ ಜನಿಸಿದವರು. ಅವರಿಗೆ ಪ್ರೀತಿಸುವ ತಂದೆ ತಾಯಿಗಳು, ಬಂಧು ಬಳಗದವರು ಇದ್ದರು. ಮನೆಯ ವಾತಾವರಣವು ಅನುಕೂಲಕರವಾಗಿದ್ದರಿಂದ ಅವರ ವ್ಯಕ್ತಿತ್ವದ ಬೆಳವಣಿಗೆ ಸರಿಯಾಗಿ ನಡೆಸಲು ಯಾವ ಅಡೆತಡೆಯೂ ಇರಲಿಲ್ಲ. ಗುಜರಾತದಲ್ಲಿ ಜೈನ ಧರ್ಮದ ಪ್ರಾಬಲ್ಯವಿತ್ತು. ಅವರು ಹುಟ್ಟಿ ಬೆಳೆದ ಗುಜರಾತ ಜನರ ಜೀವನದ ಮೇಲೆ ಜೈನ ಧರ್ಮವು ಬೀರಿದಷ್ಟು ಪ್ರಭಾವವನ್ನು ಭಾರತದ ಯಾವ ಭಾಗದಲ್ಲಿಯೂ ಪ್ರಭಾವವನ್ನು ಬೀರಿಲ್ಲ. ಗುಜರಾತಿ ಹರಿಶ್ಚಂದ್ರ ನಾಟಕ ಮತ್ತು ಪಿತೃಪ್ರೇಮದ ಕಥೆಯಾದ ಶ್ರವಣನ ಕಥೆಯಂತಹ ಕೃತಿಗಳಿಂದ ಅವರ ಮನಸ್ಸು ಕದಕಿತು. ಅವು ಅವರ ಆದರ್ಶ ಗಳಾಗಿದ್ದವು. ತನ್ನ ನೆಚ್ಚಿನ ನಾಯಕರನ್ನು ಜೀವಂತ ಕಂಡಂತೆ ಅವರಿಗೆ ಅನಿಸಿತು. ಅರವತ್ತನೆಯ ವಯಸ್ಸಿನಲ್ಲಿ ತನ್ನ ಬಾಲ್ಯದ ದಿನಗಳನ್ನು ನೆನೆಯುತ್ತ ತನ್ನ ಮನೆಯ ಸೇವಕಿಯಾದ ರಂಭೆಯನ್ನು ತುಳಸೀದಾಸ ರಾಮಾಯಣದಿಂದ ಹಾಸ್ಯಾಸ್ಪದವಾದ ಭಯವನ್ನು ಹೊಡೆದೋಡಿಸಲು ಶ್ಲೋಕಗಳನ್ನು ಓದಲು ಹೇಳಿದುದಕ್ಕಾಗಿ ಕೃತಜ್ಞತೆಯಿಂದ ನೆನಪು ಮಾಡಿಕೊಂಡಿದ್ದಾರೆ. ರಾಮಾಯಣವು ಅವರ ಮನಸ್ಸಿನ ಅಂತರಾಳದಲ್ಲಿ ನೆಲೆಸಿತು. ಮತ್ತು ಅವರ ಜೀವನದುದ್ದಕ್ಕೂ ಅದರ ಪ್ರಭಾವ ಮಸಳಿಸಲಿಲ್ಲ. ಭಗವದ್ಗೀತೆಗೆ ಗಾಂಧೀಜಿಯವರ ದೃಷ್ಟಿ ಕೋನವನ್ನು ರೂಪಿಸುವಲ್ಲಿ ಅಗ್ರಸ್ಥಾನವಿದೆ. ಅದು ಮಹಾಭಾರತದಲ್ಲಿ ಒಂದು ಸಣ್ಣ ಭಾಗ ಮಾತ್ರ. ಆದರೆ ಅದು ಒಂದು ಪ್ರಮುಖ ಸ್ಥಾನವನ್ನು ಪಡೆದಿದೆ. ‘ಯಂಗ ಇಂಡಿಯಾ’ (೧೯೨೫) ದಲ್ಲಿ ಅವರು ಸರ್ ಎಡವಿನ್ ಆರ್ನೋರ್ಲ್ಡರ ಗೀತೆಯ ಭಾಷಾಂತರವನ್ನು ಓದಿದಾಗ ಅದು ಅವರ ಮೇಲೆ ಅಳಿಸಲಾಗದ ಪ್ರಭಾವವನ್ನು ಬೀರಿತು ಎಂದು ಬರೆದಿದ್ದಾರೆ. ಗೀತೆಯು ಅವರನ್ನು ಕಾರ್ಯೋನ್ಮುಖ ವ್ಯಕ್ತಿಯನ್ನಾಗಿ ಮಾಡಿತು. ಭಾರತೀಯರ ಹಕ್ಕಿಗಾಗಿ ಇಪ್ಪತ್ತು ವರ್ಷಗಳವರೆಗೆ ದಕ್ಷಿಣ ಆಫ್ರಿಕೆಯಲ್ಲಿ ಅವರು ಹೋರಾಡಿದರು. ಅದರಲ್ಲಿ ಜಯವನ್ನು ಗಳಿಸಿದರು. ಅವರು ಭಾರತದ ರಾಜಕೀಯ ಸ್ವಾತಂತ್ರ್ಯವನ್ನು ಗೆದ್ದುಕೊಂಡರು ಮತ್ತು ದೇಶದಲ್ಲಿ ಒಂದು ಹೊಸ ದೃಷ್ಟಿಕೋನವನ್ನು ಮೂಡಿಸಿದರು. ಅವರೊಬ್ಬ ಕರ್ಮಯೋಗಿಗಳಾಗಿದ್ದರು. ಫಲಾಪೇಕ್ಷೆಯಿಲ್ಲದೇ ಹೋರಾಡಿದರು. ಈ ವಿಷಯದಲ್ಲಿ ಗಾಂಧೀಜಿಯವರ ಅಭಿಪ್ರಾಯವೇನೆಂದರೆ ಜೀವನವೆಂದರೆ ಸೇವೆಗಾಗಿಯೇ ಮುಡಿಪಾಗಿರಬೇಕು. ಎಲ್ಲ ನಿಜವಾದ ಸೇವೆಯು ನಿರಾಸಕ್ತಿಯಿಂದ ಮಾಡಲ್ಪಡುತ್ತದೆ.

ಗಾಂಧೀಜಿಯವರು ಟಾಲ್‌ಸ್ಟಾಯ್ ಅವರ ‘ದೇವರ ರಾಜ್ಯ ನಿನ್ನಲ್ಲಿದೆ’ ಎಂಬ ಪುಸ್ತಕವನ್ನು ಓದಿದರು. ಟಾಲ್‌ಸ್ಟಾಯ್ ರಶಿಯಾದ ಉತ್ತಮ ಲೇಖಕರಾಗಿದ್ದರು. ದಕ್ಷಿಣ ಆಫ್ರೀಕಾದಲ್ಲಿ ಗಾಂಧೀಜಿಯವರ ಚಳವಳಿಯನ್ನು ಅವರು ಎತ್ತಿ ಹಿಡಿದರು. ಅದು ಆಗ ಇನ್ನೂ ಶೈಶವಾವಸ್ಥೆಯಲ್ಲಿ ಇತ್ತು. ಟಾಲ್‌ಸ್ಟಾಯ್ ಅವರ ವಿಚಾರಗಳಾದ ಅರಾಜಕತೆ, ಅಪರಾಧ, ನಿರುದ್ಯೋಗ, ಶ್ರೀಮಂತರ ಹುಚ್ಚು ವೈಭೋಗ, ಬಡವರ ದುಃಖಮಯ ಜೀವನ, ಜೀವನದಲ್ಲಿ ಹುದುಗಿರುವ ವಿರೋಧಾಭಾಸಗಳಾಗಿದ್ದು ಪ್ರೀತಿಯೆಂಬ ನಿಯಮದಿಂದಲೇ ಇವನ್ನು ಬಗೆಹರಿಸಲು ಸಾಧ್ಯವೆಂಬುದು ಗಾಂಧೀಜಿಯವರ ತತ್ವಗಳಲ್ಲಿ ಸಂಶಯ ದೃಷ್ಟಿಯನ್ನು ದೂರ ಮಾಡಿತು.

ಅಹಿಂಸೆಯನ್ನು ತಮ್ಮ ಜೀವನದ ಒಂದು ನಂಬಿಕೆಯನ್ನಾಗಿ ಮಾಡಿಕೊಂಡರು. ಅದು ಜೀವನದ ಸಮಸ್ಯೆಗಳನ್ನು ಬಗೆಹರಿಸಲು ಉತ್ತಮ ಸಾಧನವಾಯಿತು. ಇದು ಅವರ ಧ್ಯೇಯವಾದಿ ಜೀವನದ ತಳಹದಿಯಾಯಿತು. ಅಮೆರಿಕೆಯ ಲೇಖಕರಾದ ಹೆನ್ರಿ ಡೇವಿಡ್ ಥೊರಿಯೋ ಅವರ ಲೇಖನಗಳಿಗೆ ಬಹಳ ಮಹತ್ವಕೊಡಲಾಗಿದೆ. ಅವರು ಕವಿ, ತತ್ವಜ್ಞಾನಿ ಹಾಗೂ ವ್ಯಾವಹಾರಿಕ ವ್ಯಕ್ತಿಯಾಗಿದ್ದರು. ನುಡಿದಂತೆ ನಡೆಯುವವರಲ್ಲಿ ಅವರೊಬ್ಬರಾಗಿದ್ದರು. ಕರ್ತವ್ಯ ಪ್ರಜ್ಞೆಯಿಂದ ಅವರು ತಮ್ಮ ದೇಶಕ್ಕೆ ವಿರೋಧವಾದ ಸಂಗತಿಗಳನ್ನು ಬರೆದಿದ್ದಾರೆ. ಅದೆಷ್ಟೋ ಜನರನ್ನು ಅಮೇರಿಕಾದ್ಲಲಿ ದಾಸ್ಯದಲ್ಲಿ ಹಿಡಿದಿರುವುದು ಒಂದು ಪಾಪವೆಂದು ಅವರು ತಿಳಿದಿದ್ದರು. ಇಷ್ಟನ್ನೇ ಹೇಳಿ ಅವರು ಸಂತುಷ್ಟರಾಗಲಿಲ್ಲ. ಅವರು ಈ ವ್ಯಾಪಾರಕ್ಕೆ ತಡೆಯನ್ನು ಹಾಕಲು ಕರವನ್ನು ಕೊಡಲು ನಿರಾಕರಿಸಿದರು. ಗಾಂಧೀಜಿಯವರು ಅವರ ಲೇಖನಗಳನ್ನು ಓದಿ ಅವರ ಉದಾಹರಣೆಯು ದಕ್ಷಿಣ ಆಫ್ರಿಕೆಯಲ್ಲಿದ್ದ ಭಾರತೀಯರಿಗೆ ಅನ್ವಯಿಸುವುದೆಂದು ತಿಳಿದರು. ಸೆಪ್ಟೆಂಬರ್ ೧೦, ೧೯೩೫ ರಲ್ಲಿ ಭಾರತೀಯ ಸಮಾಜದ ಸೇವಕರ ಸಂಘದ ಪಿ. ಕೋದಂಡರಾವ ಅವರಿಗೆ ಬರೆದ ಪತ್ರದಲ್ಲಿ ಗಾಂಧೀಜಿಯವರು ತಮ್ಮ ಸತ್ಯಾಗ್ರಹದ ವಿಚಾರವು ಥೊರಿಯೋವಿನ “ನಾಗರೀಕ ಚಳವಳಿ” ಎಂಬ ನಿಬಂಧವನ್ನು ಓದುವ ಮೊದಲೇ ಎಷ್ಟೋ ಮುಂದುವರಿದಿತ್ತೆಂದು ಹೇಳಿದ್ದಾರೆ. ಆದಾಗ್ಯೂ ಅದು ತಮ್ಮ ಮೇಲೆ ಆಳವಾದ ಪ್ರಭಾವ ಬೀರಿದುದನ್ನು ಒಪ್ಪಿಕೊಂಡಿದ್ದಾರೆ.

ಇಂಗ್ಲಿಷ್ ಪ್ರಬಂಧಕಾರನಾದ ಜಾನ್ ರಸ್ಕಿನ್‌ನು ಸಮಾಜ ಶಾಸ್ತ್ರ, ಅರ್ಥಶಾಸ್ತ್ರಗಳ ತತ್ವ ವಿಮರ್ಶಕನಾಗಿದ್ದನು. ಅದರಂತೆ ಸಾಹಿತ್ಯ ಮತ್ತು ಕಲೆಯ ವಿಮರ್ಶಕನೂ ಆಗಿದ್ದನು. ಅವನು ಬರೆದ ಪುಸ್ತಕ “ಈ ಕೊನೆಯ” (Unto the last) ಗಾಂಧೀಜಿಯವರ ಕೈಯಲ್ಲಿ ವಿಶಿಷ್ಟ ಪರಿಸ್ಥಿತಿಯಲ್ಲಿ ಬಂದಿತು. ಅವರು ಜೋಹಾನ್ಸಬರ್ಗದಿಂದ ದರ್ಬಾನದವರೆಗೆ ೨೪ ಗಂಟೆಗಳ ದೀರ್ಘ ಅವಧಿಯ ಕೆಲಸದ ಮೇಲೆ ಪ್ರವಾಸ ಮಾಡಬೇಕಾದ ಸಂದರ್ಭ ಬಂದಾಗ ‘ಟ್ಯಾನ್ಸ್ವಾಲ್ ಕ್ರಿಟಿಕ್’ದ ಉಪಸಂಪಾದಕನೂ, ಸಸ್ಯಾಹಾರದ ಮಿತ್ರನೂ ಆದ ಹೆನ್ರಿ ಪೋಲಕ್ ಎಂಬಾತನು ಅವರ ಕೈಗೆ ಈ ಪುಸ್ತಕವನ್ನು ಗಾಡಿಯಲ್ಲಿ ಓದಲು ಕೊಟ್ಟನು. ಗಾಂಧೀಜಿಯವರು ಒಂದೇ ಸಾರೆಗೆ ಪೂರ್ಣವಾಗಿ ಪುಸ್ತಕವನ್ನು ಓದಿದರು. ಈ ಪುಸ್ತಕವು ಅವರ ಮನಸ್ಸನ್ನು ಸೆರೆ ಹಿಡಿಯಿತು ಮತ್ತು ಅವರನ್ನು ಸಂಪೂರ್ಣವಾಗಿ ಬದಲಾಯಿಸಿತು. ತಮ್ಮ ಆತ್ಮ ಚರಿತ್ರೆಯಲ್ಲಿ ಈ ಪುಸ್ತಕವು ತಮ್ಮ ಜೀವನದ ಪರಿಪೂರ್ಣ ಬದಲಾವಣೆಗೆ ಹೇಗೆ ಕಾರಣವಾಯಿತೆಂಬುದನ್ನು ವಿವರಿಸಿದ್ದಾರೆ. ನಂತರ ಅವರು ಆ ಪಸ್ತಕವನ್ನು ‘ಸರ್ವೋದಯ’ ಎಂಬ ಹೆಸರಿನಿಂದ ಗುಜರಾತಿಗೆ ಭಾಷಾಂತರಿಸಿದರು. ಬರಬರುತ್ತ ಇದು ಗಾಂಧೀಜಿಯವರ ಸುಖೀ ಸಮಾಜದ ವಿಚಾದರ ಸ್ವರೂಪ ತಳೆಯಿತು. ‘ಸರ್ವೋದಯ’ ಎಂಬ ಶಬ್ದವನ್ನು ಗಾಂಧೀಜಿಯವರ ತಯಾರಿಸಿದ್ದು ಭಾರತೀಯ ಭಾಷೆಗಳಲ್ಲಿ ಅದನ್ನು ಎಲ್ಲರೂ ಸುಸ್ವಾಗತಿಸಿದ್ದಾರೆ. ರಸ್ಕನ್‌ನ ಅರ್ಥಶಾಸ್ತ್ರದ ತತ್ವಗಳು ಅವರ ಆಶ್ರಮದ ಸಂಘಟನೆಯು ಅವರದೇ ಆದ ವಿಚಾರಗಳ ಮೇಲೆ ನಿಂತಿದ್ದರೂ ರಸ್ಕಿನ್‌ನ ತತ್ವಗಳೇ ಅದಕ್ಕೆ ಆಧಾರವಾಗಿ ನಿಂತಿವೆ.

ಈ ಅರ್ಥಶಾಸ್ತ್ರದ ತತ್ವಗಳು ಅವರು ವ್ಯವಹಾರದಲ್ಲಿ ಬಳಸಲು ಉಪಯೋಗಿಸಿದರು. ದರ್ಬಾನದ ಹತ್ತಿರ ಫೊನಿಕ್ಸ್ ಸ್ಟೇಶನ್‌ನ ಬಳಿ ೧೦೦ ಎಕರೆ ವಿಸ್ತೀರ್ಣವಾದ ಜಮೀನನ್ನು ಖರೀದಿಸಿ ೧೯೦೪ ರಲ್ಲಿ ಪೋನಿಕ್ಸ್‌ ವಸತಿಯನ್ನು ಸ್ಥಾಪಿಸಿದರು. ‘ಇಂಡಿಯನ್ ಒಪಿನಿಯನ್’ದ ಮುದ್ರಣಾಲಯವನ್ನು ಅದರಲ್ಲಿ ಕೆಲಸ ಮಾಡುವವರು ಅಲ್ಲಿಗೆ ಸ್ಥಳಾಂತರಿಸಿದರು. ಅಲ್ಲಿ ವಾಸಿಸುವ ಎಲ್ಲ ಜನರು ಜಮೀನಿನ ಮೇಲೆ ದೈಹಿಕ ಶ್ರಮದಿಂದ ತಮ್ಮ ಜೀವನ ನಡೆಸಬೇಕೆಂದೂ, ತಿಂಗಳಿಗೆ ಮೂರು ಪೌಂಡ್ ಸಂಬಳವನ್ನು ಸ್ವೀಕರಿಸಬೇಕೆಂದೂ ಒಪ್ಪಂದವಾಯಿತು. ಎಷ್ಟೋ ಸ್ನೇಹಿತರು ಮತ್ತು ಸಂಬಂದಿಕರು ಈ ಸಂಘವನ್ನು ಸೇರಿ ಉತ್ಸಾಹದಿಂದ ಅವಶ್ಯವಿದ್ದ ಗುಡಿಸಲುಗಳನ್ನು ಸಣ್ಣ ಮನೆಗಳನ್ನು ನಿರ್ಮಿಸಿ ಮುದ್ರಣಾಲಯವನ್ನು ನಡೆಸುತ್ತಿದ್ದರು. ಅವರ ಮೊದಲಿನ ವಿಚಾರವು ವಕೀಲಿವೃತ್ತಿಯನ್ನು ಬಿಟ್ಟು ಆ ವಸತಿಯಲ್ಲಿ ನೆಲೆಸಿ ತಾವು ದೈಹಿಕ ಶ್ರಮದಿಂದ ಜೀವನ ನಡೆಸಬೇಕೆಂಬುವದಾಗಿತ್ತು. ಆದರೆ ಟ್ರಾನ್ಸ್‌ವಾಲದಲ್ಲಿ ಅವರ ಸಾಮಾಜಿಕ ಕೆಲಸದ ಒತ್ತಡದಿಂದ ಇದು ಸಾಧ್ಯವಾಗಲಿಲ್ಲ.

ಇವೆಲ್ಲ ಕ್ರಮಗಳನ್ನು ಅನುಸರಿಸುತ್ತಿರುವಾಗ ತಮ್ಮ ಜೀವನದ ಸಂದೇಶವಾದ ‘ಅಹಿಂಸೆ’ಗಾಗಿ ತಮಗೆ ಹೊತ್ತಿಲ್ಲದಂತೆಯೇ ಸಿದ್ಧತೆಗಳನ್ನು ನಡೆಸಿದ್ದರು. ಹೆಚ್ಚು ಕಡಿಮೆ ಅವರು ಸನ್ಯಾಸಿಯ ಜೀವನ ನಡೆಸುತ್ತಿದ್ದರು. ಬಡತನದ ಜೀವನಕ್ಕಾಗಿ ಪಣತೊಟ್ಟು ಪರರ ಸೇವೆಗಾಗಿ ತಮ್ಮ ಜೀವನವನ್ನೇ ಮುಡುಪಾಗಿಟ್ಟರು. ದೈಹಿಕ ಶ್ರಮದ ಮಹತ್ವವನ್ನು ಅವರು ಗುರುತಿಸಿದರು. ಯಾವ ಕೆಲಸವೂ ಕೀಳಲ್ಲ ಯಾವ ಮನುಷ್ಯನೂ ಕ್ಷುದ್ರನಲ್ಲ ಎನ್ನುವ ಅಭಿಪ್ರಾಯ ಅವರದಾಗಿತ್ತು. ಕಸಹೊಡೆಯುವುದು ಅವರ ಪ್ರೀತಿಯ ಕೆಲಸವಾಗಿತ್ತು. ಇದು ರಸ್ಕಿನ್‌ನ ಪುಸ್ತಕವನ್ನು ಓದಿದ ಪರಿಣಾಮವಾಗಿದ್ದಿತು. ಆ ವಸತಿಯಲ್ಲಿ ಒಡೆದು ಕಾಣುವ ದೃಶ್ಯವೆಂದರೆ ಅವರ ಜೀವನದಲ್ಲಿ ಯಾವುದೇ ಜನಾಂಗದ ಅಥವಾ ಧಾರ್ಮಿಕ ಭೇದ ಭಾವನೆಗಳು ಕಂಡುಬರುತ್ತಿರಲಿಲ್ಲ. ಜೋಹಾನ್ಸಬರ್ಗದಲ್ಲಿ ಅವರ ಸುತ್ತ ಮುತ್ತು ಕೂಡುತ್ತಿದ್ದ ಜನರಲ್ಲಿ ಹಿಂದುಗಳು, ಮುಸ್ಲಿಮರು, ಪಾರ್ಸಿಗಳು, ಭಾರತೀಯರ ಕ್ರಿಶ್ಚಿಯನ್ನರು, ಪಾಶ್ಚಾತ್ಯರು, ಬಡವರು, ಶ್ರೀಮಂತರು, ಗಂಡಸರು, ಹೆಣ್ಣುಮಕ್ಕಳು ಎಲ್ಲರೂ ಸೇರಿದ್ದರು.

ಅವರಿಗೆ ಉತ್ತೇಜನ ನೀಡಿ ಅನಂತ ಪ್ರಭಾವ ಬೀರಿದ ವಿಷಯಗಳೆಂದರೆ ಕ್ರಿಶ್ಚಿಯನ್, ಇಸ್ಮಾಂ, ಭೌದ್ಧ, ಜೈನ, ಮಾರ್ಕ್ಸವಾದ ಮತ್ತು ವಯಕ್ತಿಕ ಕಷ್ಟಗಳು. ಒಬ್ಬ ಆಂಗ್ಲನು ಅವರಿಗೆ ಬೂಬಲ್ ಓದಲು ಹೇಳಿದರು. ಹಳೆಯ ಒಡಂಬಡಿಕೆಯಲ್ಲಿ ಅವರಿಗೆ ಒಟ್ಟು ಅಷ್ಟು ಅಸ್ಥೆ ಇರಲಿಲ್ಲ. ಆದರೆ ಹೊಸ ಒಡಂಬಡಿಕೆ (ನ್ಯೂ ಟೆಸ್ಟಾಮೆಂಟ್)ದಲ್ಲಿ ಅವರಿಗೆ ಬಹಳ ಆಸಕ್ತಿ ಉಂಟಾಯಿತು. ಅದರಲ್ಲಿ ‘ ‘ಸರ್ಮನ್ ಅನ್ ದಿ ಮೌಂಟ’ (ಪರ್ವತ ಪ್ರಸಂಗ) ಅವರಿಗೆ ಬಹಳ ಪ್ರಿಯವಾಗಿತ್ತು. ಅದು ಗೀತೆಯಷ್ಟೇ ಅವರಿಗೆ ಮಹತ್ವದ್ದಾಗಿತ್ತು. ಈ ಅಭ್ಯಾಸದಿಂದ ಅವರು ಬೇರೆ ಧಾರ್ಮಿಕ ಗುರುಗಳ ಜೀವನ ಚರಿತ್ರೆಯನ್ನೋದಲು ಅವರಿಗೆ ಹೆಚ್ಚಿನ ತೃಷೆಯುಂಟಾಯಿತು. ಕಾರ್ಲೈಲನು ಬರೆದ ಪ್ರವಾದಿ ಮಹಮ್ಮದನ ಜೀವನ ಚರಿತ್ರೆಯನ್ನು ಓದಿದರು. ಧರ್ಮಗಳು ಎಷ್ಟೇ ಇದ್ದರೂ ಅವುಗಳೆಲ್ಲವುಗಳ ತಿರುಳು ಒಂದೇ ಎಂದು ಅವರು ನಂಬಿದ್ದರು. ಬೌದ್ಧ ಮತ್ತು ಜೈನ ಧರ್ಮದ ತತ್ವಗಳ ಪ್ರಕಾರ ದ್ವೇಷಿಸುವವರನ್ನು ಪ್ರೀತಿಸಬೇಕೆಂಬುದನ್ನುಅ ವರು ಮನಗಂಡರು. ಅಸ್ಪೃಶ್ಯತೆಯನ್ನು ರೂಢಿಯಲ್ಲಿ ತಂದ ಹಿಂದೂ ಧರ್ಮದ ಪರಿಪೂರ್ಣತೆಯ ಬಗ್ಗೆ ಗಾಂಧೀಜಿಯವರಿಗೆ ಸಂಶಯ ಹುಟ್ಟಿದಾಗ ಅವರು ಕ್ರಿಶ್ಚಿಯನ್ ಧರ್ಮವನ್ನುಸ ವೀಕರಿಸಬೇಕೆಂದು ವಿಚಾರಿಸಿದಾಗ, ರಾಯಚಂದಬಾಯಿ ಎಂಬ ವಜ್ರಗಳ ಮತ್ತು ಮುತ್ತಿನ ವ್ಯಾಪಾರಿಯೊಬ್ಬರ ಅಭಿಪ್ರಾಯದಂತೆ ಹಿಂದೂ ಧರ್ಮದ ಆಳವಾದ ಅಭ್ಯಾಸ ಮಾಡಿದರು. ರಾಯಚಂದಭಾಯಿ ಅವರು ಖೇವಲ ವ್ಯಾಪಾರಿಗಳಾಗಿರದೇ ಘನ ವಿಚಾರವೆತ್ತರೂ, ಸತ್ಯವಂತರೂ, ಧರ್ಮದರ್ಶಿಗಳೂ ಆಗಿದ್ದರು. ಅವರಿಗೆ ವೇದ ಉಪನಿಷತ್ತುಗಳು ಚೆನ್ನಾಗಿ ಗೊತ್ತಿದ್ದವು. ಗಾಂಧೀಜಿಯವರು ಜಗತ್ತಿನ ಎಲ್ಲ ಧರ್ಮಗಳಿಂದ ಶಕ್ತಿಯನ್ನು ಪಡೆದರು. ತಮ್ಮ ಪ್ರೀತಿ ಮತ್ತು ಸಹಾನುಭೂತಿಗಳಿಂದ ಇಡೀ ಜಗತ್ತಿಗೆ ಬೇಕಾದವರಾಗಿದ್ದರು. ಅವರು ಹಿಂದೂ ಸಂಸ್ಕೃತಿಯಲ್ಲಿ ಬೆಳೆದು ಬಂದವರಾಗಿದ್ದರು. ಹಿಂದೂ ಧರ್ಮವು ಸತ್ಯವ ತಳಹದಿಯ ಮೇಲೆ ನಿಂತಿದ್ದು, ಸತ್ಯವೇ ದೇವರೆಂದು ಅದು ನಂಬುತ್ತಿದೆ. ಮತ್ತೊಮ್ಮೆ ಗಾಂಧೀಜಿಯವರು ಕಾರ್ಲಮಾರ್ಕ್ಸನ ‘ಕ್ಯಾಪಿಟಲ್’ ಎಂಬ ಪುಸ್ತಕವನ್ನೋದಿದರು. ಕಾರ್ಲಮಾರ್ಕ್ಸನ ಬಗ್ಗೆ ಅವರಿಗೆ ಒಳ್ಳೆಯ ಅಭಿಪ್ರಾಯವಿದ್ದಿತು. ಆದರೆ ಅವರಿಗೆ ಮಾರ್ಕ್ಸನ ಕನೆಯ ತತ್ವಗಳನ್ನು ಅರಗಿಸಿಕೊಳ್ಳುವುದು ಸಾಧ್ಯವಾಗಲಿಲ್ಲ. ಯಾವುದೇ ರೀತಿಯ ಹಿಂಸೆಯನ್ನು ಅವರು ನಂಬುತ್ತಿರಲಿಲ್ಲ. ಇಷ್ಟೇ ಅಲ್ಲದೇ ಅವರ ಜೀವನದ ಸಂಕಷ್ಟಗಳು ಅವರಲ್ಲಿದ್ದ ಬೇರೆ ಬೇರೆ ಗುಣಗಳಾದ ನಿರ್ಭಯತೆ, ಸರಳತೆ, ತ್ಯಾಗ ಮುಂತಾದವುಗಳನ್ನು ಬೆಳೆಸಿ ಕಷ್ಟದಲ್ಲಿ ಬಳಲುತ್ತಿರುವ ಮಾನವ ಕುಲಕ್ಕಾಗಿ ಏನನ್ನೂ ತ್ಯಾಗ ಮಾಡಲು ಸಿದ್ಧರನ್ನಾಗಿ ಮಾಡಿದರು. ಇವೆಲ್ಲ ಶಕ್ತಿಗಳು ಮತ್ತುಸಂಗತಿಗಳು ಅವರ ವಿಚಾರಗಳಿಗೆ ಮತ್ತು ದೃಷ್ಟಿ ಕೋನಕ್ಕೆ ಮೂರ್ತರೂಪ ಕೊಟ್ಟು ಅವು ಬೆಳೆಯುವಂತೆ ಮಾಡಲು ಸಹಾಯಕವಾದವು.

ಗಾಂಧೀಜಿಯವರ ಸತ್ಯಾಗ್ರಹದ ಕಲ್ಪನೆ: ಅದರ ಅರ್ಥ ಮತ್ತು ಉದ್ದೇಶಗಳ ವಿಶ್ಲೇಷಣೆ: ಗಾಂಧೀಜಿಯವರು ‘ಹಿಂದ ಸ್ವರಾಜ್ಯ’ ಎಂಬ ತಮ್ಮ ಪ್ರಸಿದ್ಧ ಪುಸ್ತಕವನ್ನು ದಕ್ಷಿಣ ಆಫ್ರಿಕೆಯಲ್ಲಿ ಬರೆದರು. ಅದು ಗಾಂಧೀಜಿಯವರ ಸರ್ವತತ್ವಗಳ ಸಮಾರೋಪವನ್ನು ಒಳಗೊಂಡಿದೆ. ಸತ್ಯ, ಅಹಿಂಸೆ, ಶಿಕ್ಷಣ, ಯಾಂತ್ರಿಕತೆ ವಕೀಲರು, ನ್ಯಾಯಾಲಯಗಳು, ವೈದ್ಯರು, ಭಾಷೆ, ವೈಜ್ಞಾನಿಕ ಶೋಧನೆಗಳು, ಮುಸ್ಲಿಮರ ಐಕ್ಯತೆ, ಪಾಶ್ಚಾತ್ಯ ಸಂಸ್ಕೃತಿಗೆ ವಿರೋಧ ಇವೆಲ್ಲವು ಸೇರಿವೆ. ೧೯೦೩-೧೯೦೬ರ ವರೆಗೆ ಅವರ ಜೀವನದಲ್ಲಿ ಒಂದು ಮಹತ್ವದ ಮೈಲುಗಲ್ಲು. ಆಗ ಅವರ ಜೀನವದ ಗತಿಯು ಬದಲಾಯಿತು. ಆಗ ಬಹುದೂರ ಪರಿಣಾಮ ಬೀರತಕ್ಕ ನಿರ್ಣಯಗಳನ್ನು ಆಗ ಅವರು ಕೈಕೊಂಡರು. ಅವರ ಜೀನವದಲ್ಲಿ ಅಷ್ಟೇ ಅಲ್ಲ. ದೇಶದ ಸ್ವಾತಂತ್ರ್ಯದ ಚಳುವಳಿಯಲ್ಲಿಯೂ, ಮಾನವನ ಇತಿಹಾಸದಲ್ಲಿಯೂ ಮಹತ್ತರವಾದ ಪಾತ್ರ ವಹಿಸಿವೆ. ಅವರ ಆಂತರಿಕ ಜೀವನದ ರಚನೆ ಈ ಎಲ್ಲ ನೈತಿಕ ಮತ್ತು ಧಾರ್ಮಿಕ ಶಕ್ತಿಗಳಿಂದ ಒಂದು ತುತ್ತತುದಿಯನ್ನು ಮುಟ್ಟಿ ಅವರನ್ನು ಸತ್ಯಾಗ್ರಹದ ಜನಕನನ್ನಾಗಿ ಮಾಡಿದವು. ೧೯೦೬ ನೇ ಇಸ್ವಿ ಸೆಪ್ಟೆಂಬರ್ ೧೧ ರಂದು ಅವರು ಜೋಹಾನ್ಸಬರ್ಗನಲ್ಲಿ ಮಾಡಿದ ಭಾಷಣದಲ್ಲಿ ಸತ್ಯಾಗ್ರಹ ಉದಯವಾಯಿತು. ಅವರು ಯಾರ ವಸ್ತುಗಳನ್ನೂ ಹಿರಿಯದ ಶಪಥ (ಅಪರಿಗ್ರಹ) ಮಾಡಿದ್ದರು. ಮತ್ತು ಎಲ್ಲರನ್ನೂ ಸರಿಸಮಾನರೆಂದು ತಿಳಿದಿದ್ದರು. ತಾವು ಗಳಿಸಿದುದೆಲ್ಲವನ್ನೂ ಬಿಟ್ಟುಕೊಟ್ಟರು. ಅದೆಲ್ಲವನ್ನೂ ತನ್ನ ತಮ್ಮನಿಗೆ ಬಿಟ್ಟು ತಾವು ಬಳಸಬೇಕೆಂದು ಹೇಳಿದರು. ೧೯೦೪ ರಲ್ಲಿ ‘ಇಂಡಿಯನ್ ಓಪಿನಿಯನ್’ ಎಂಬ ವಾರಪತ್ರಿಕೆಯನ್ನು ಪ್ರಾರಂಭಿಸಿದರು. ಅವರು ಅದನ್ನು ಸಂಪಾದಿಸುತ್ತಿದ್ದರು. ‘ನವಜೀವನ’ ಪತ್ರಿಕೆಗಳನ್ನು ಅವರು ಸತ್ಯಾಗ್ರಹ ಚಳವಳಿಯ ಸಾಧನಗಳಾಗಿ ಪ್ರಾರಂಭಿಸಿದರು.

ದಕ್ಷಿಣ ಆಫ್ರಿಕೆಯ ಹೋರಾಟದ ಮಹತ್ವವು ಗಾಂಧೀಜಿಯವರು ಸತ್ಯಾಗ್ರಹದ ಆಯುಧವನ್ನು ಶೋಧಿಸಿ, ಅದನ್ನು ಹರಿತಮಾಡಿ ಸತ್ಯ ಮತ್ತು ಅಹಿಂಸೆಯ ಮೇಲೆ ಅದು ಅವಲಂಭಿಸಿರುವಂತೆ ಮಾಡಿದುದರಲ್ಲಿ ಕಂಡು ಬರುತ್ತದೆ. ಅವರು ನಂತರದಲ್ಲಿ ಈ ಆಯುಧವನ್ನು ಭಾರತದಲ್ಲಿ ಬಳಸಲು ಸಹಾಯವಾಯಿತು. ಅವರ ದಕ್ಷಿಣ ಆಫ್ರಿಕದ ದಿನಗಳು ಈ ಭೂಮಿಕೆಯನ್ನು ಸಿದ್ಧಪಡಿಸಿದವು. ಅವರಿಗೆ ಗೊತ್ತಿಲ್ಲದೆಯೇ ಈ ಕಲೆಯು ಅವರಿಗೆ ಬಂದಿತು. ಅವರು ಬೆಳೆಸಿದ ಈ ಸಾಧನವು ತಾತ್ಪೂರ್ತಿಕವಾಗಿ ಅಲ್ಲದೇ ಭವಿಷ್ಯದಲ್ಲಿಯೂ ಉಪಯೋಗವಾಗುವ ಸಾಧನವಾಯಿತು. ಅಹಿಂಸಾ ಚಳವಳಿಯು ಭಾರತದಲ್ಲಿ ಬ್ರಿಟೀಷರ ಆಳಿಕೆಯನ್ನು ಒತ್ತಾಯದಿಂದ ಕಿತ್ತು ಹಾಕಲು ಪ್ರಾರಂಭದಲ್ಲಿ ಉಪಯೋಗವಾಯಿತು. ಸಾಧನೆಗಳು ಮತ್ತು ಗುರಿ ಇವುಗಳ ಮಧ್ಯ ನಿಕಟ ಸಂಬಂಧವನ್ನು ಕಲ್ಪಿಸಿದರು. ಸಾಧನೆಗಳ ಪಾವಿತ್ರ್ಯವನ್ನು ಅವರು ಒತ್ತಿ ಹೇಳಿದರು. ಆ ವೇಳೆಯಲ್ಲಿ ಕ್ರಾಂತಿಕಾರಕ ಪದ್ಧತಿಯೇ ರೂಢಿಯಲ್ಲಿರುವಾಗ ಇದೊಂದು ಹೊಸ ತಂತ್ರವಾಗಿ ಕಂಡು ಬಂದಿತು. ಸೆಪ್ಟೆಂಬರ್ ೧೯೩೩ ರಲ್ಲಿ ನೆಹರೂ ಅವರಿಗೆ ಬರೆದ ಪತ್ರದಲ್ಲಿ ಗಾಂಧೀಜಿಯವರು ತಾವು ನೆಹರೂರವರೊಡನೆ ಸಂಪೂರ್ಣ ಸ್ವಾತಂತ್ರ್ಯಕ್ಕೆ ಒಪ್ಪಿಗೆ ಇತ್ತಿದ್ದರೂ ಅದನ್ನು ಸಾಧಿಸುವ ಸಾಧನಗಳ ಪಾವಿತ್ರ್ಯದ ಬಗ್ಗೆ ತಮ್ಮ ಹೆಚ್ಚಿನ ಲಕ್ಷ್ಯವಿರುವುದೆಂದು ತಿಳಿಸಿದ್ದಾರೆ. ಪವಿತ್ರವಾದ ಸಾಧನಗಳನ್ನು ಉಪಯೋಗಿಸಿದರೆ ಸಾಧನೆಯ ಗುರಿಯನ್ನು ತಲುಪಿದಂತೆಯೇ ಎಂದು ಅವರಿಗೆ ಭರವಸೆ ಇದ್ದಿತು. ಒಮ್ಮೆಯೂ ದುಷ್ಟ ಸಾಧನೆಗಳನ್ನು ಉಪಯೋಗಿಸಬಾರದೆಂದು ಅವರ ವಿಚಾರವಾಗಿದ್ದಿತು. ಅವರಿಗೆ ಸಾಧನಗಳು ಮತ್ತು ಗುರಿಗಳ ನಡುವೆ ಬೀಜವೃಕ್ಷದ ಸಂಬಂಧವಿದ್ದಿತು. ಸ್ವಲ್ಪು ಒಳಿತಾಗುವುದೆಂಬ ದೃಷ್ಟಿಯಿಂದ ಯಾರೂ ಅಯೋಗ್ಯ ಮಾರ್ಗವನ್ನು ಅವಲಂಭಿಸಬಾರದು. ಹಿಂಸಾತ್ಮಕವಾದ ಕ್ರಾಂತಿಗಳಿಂದ ಪ್ರತಿಕ್ರಾಂತಿಗಳು ಹುಟ್ಟಿಕೊಂಡಿವೆ. ಇವು ಜನರಿಗೆ ಹೊಸ ರೀತಿಯ ದಾಸ್ಯವನ್ನು ತಂದೊಡ್ಡಿವೆ. ಸ್ವಲ್ಪೇ ದಿನಗಳಲ್ಲಿ ಸಾಬರಮತಿ ಮತ್ತು ಸೇವಾಗ್ರಾಮಗಳು ‘ದಂಡಿ ಪಾದಯಾತ್ರೆ’ ಮತ್ತು ‘ಭಾರತವನ್ನು ಬಿಟ್ಟು ತೊಲಗಿರಿ’ ಚಳುವಳಿಗಳ ಕೇಂದ್ರಗಳಾದವು. ಖಾದೀ ಮತ್ತು ಗ್ರಾಮೋದ್ಯೋಗಗಳ ಮುಖಾಂತರ ಶಾಂತಯುವ ಬದಲಾವಣೆಯ ಮುಖ್ಯ ಭಾಗವಾಗಿ ಗಾಂಧೀಜಿಯವರು ಜನರ ಸ್ವಾವಲಂಬನೆಯನ್ನುಬೆಳೆಸಲು ಬಯಸಿದರು.

ಸತ್ಯಾಗ್ರಹದ ಮೂಲ ಅರ್ಥ ಸತ್ಯವನ್ನು ಕೈಬಿಡದೇ ಇರುವುದು. ಈ ಸತ್ಯಾಗ್ರಹವು ಸತ್ಯದ ಬಲವೇ ಇರಬಹುದು. ಸತ್ಯಾಗ್ರಹದ ವಿಚಾರ ಮತ್ತು ಆಚರಣೆಯು ಗಾಂಧೀವಾದದ ಹೃದಯ ಮತ್ತು ಆತ್ಮಗಳಾಗಿವೆ. ಅದರ ಬೇರೆ ಎಲ್ಲ ವಿಚಾರಗಳೂ ಇದರ ಸುತ್ತಲೂ ತಿರುಗುತ್ತವೆ. ಕೆಟ್ಟುದನ್ನು ಒಳ್ಳೆಯದರಿಂದ ಗೆಲ್ಲಬೇಕೆಂಬ ಕ್ರಿಶ್ಚಿಯನ್ ಧರ್ಮದ ನಂಬಿಗೆಯು ಅವರ ತತ್ವಕ್ಕೆ ಬಹಳ ನಿಕಟವಾಗಿದೆ. ಸತ್ಯಾರಾಧಕ ಅಹಿಂಸೆಯಿಂದ ತನ್ನ ಬಲವನ್ನು ಸಿದ್ಧ ಮಾಡುತ್ತಾನೆ. ಸತ್ಯವು ಅಹಿಂಸೆಯಿಂದ ತನ್ನ ಬಲವನ್ನು ತೋರಿಸುತ್ತದೆ. ಅಹಿಂಸೆಯಿಂದ ಹಿಂಸೆಯನ್ನು, ಸತ್ಯದಿಂದ ಅಸತ್ಯವನ್ನು, ಪ್ರೀತಿಯಿಂದ ದ್ವೇಷವನ್ನು ಗೆಲ್ಲಬೇಕು. ಸತ್ಯಾಗ್ರಹಿಯು ಪ್ರೀತಿ ಮತ್ತು ಸತ್ಯದ ಆಯುಧಗಳನ್ನು ಉಪಯೋಗಿಸುತ್ತಾನೆ. ಪರಂಪರೆಯಿಂದ ಬಂದ ಪಶುಬಲವನ್ನು ಅವನು ಉಪಯೋಗಿಸಲಾರನು. ವೈರಿಗೆ ಕೇಡು ಬಯಸದೆ ಅಥವಾ ದ್ವೇಷ ಸಾಧಿಸದೆ ಅವನು ಕಷ್ಟವನ್ನು ಅನುಭವಿಸಲು ಸಿದ್ಧನಾಗಿರುತ್ತಾನೆ. ಇದರಿಂದ ಎದುರಾಳಿಗೆ ಅವನ ನ್ಯಾಯಯುತ ಕಾರಣದ ಬಗ್ಗೆ ಅರಿವು ಮೂಡುತ್ತದೆ. ಬ್ರಿಟೀಷರು ಭಾರತೀಯರನ್ನು ಬಂದೂಕು ತೋಫುಗಳಿಂದ ಯುದ್ಧ ಮಾಡಲು ಕರೆ ನೀಡಿದ್ದಾರೆಂಬುದು ಗಾಂಧೀಜಿಯವರಿಗೆ ಹೊಳೆದಿತ್ತು. ಯಾಕೆಂದರೆ ಅವರ ಹತ್ತಿರ ಆಯುಧಗಳಿದ್ದವು. ಭಾರತೀಯರ ಹತ್ತಿರ ಯಾವ ಆಯುಧಗಳೂ ಇರಲಿಲ್ಲ. ಗಾಂಧೀಜಿಯವರಿಗೆ ಬ್ರಿಟೀಷರನ್ನು ಸೋಲಿಸಲು ಭಾರತೀಯರ ಹತ್ತಿರ ಇರುವ ಆಯುಧವೆಂದರೆ ನೈತಿಕವಾದದ್ದು-ಅದು ಸತ್ಯ ಮತ್ತು ಅಹಿಂಸೆ ಎಂದು ತಿಳಿದಿತ್ತು. ಈ ಆಯುಧವು ಬ್ರಿಟೀಷರಲ್ಲಿ ಇರಲಿಲ್ಲ. ಮೊದಲು ಗಾಂಧೀಜಿಯವರು ತಾವೇ ಶಿಸ್ತಿನ ಸಿಪಾಯಿಗಳಾದರು. ನಂತರ ತಮ್ಮ ಅನುಯಾಯಿಗಳಿಗೆ ತರಬೇತಿ ನೀಡಿದರು. ಮೊದಲು ಅವರು ತಮ್ಮ ಭಾವನೆಗಳ ಮೇಲೆ ಹತೋಟಿ ಇರಿಸಿ, ಅಹಿಂಸೆಯ ಪಾಲನೆ ಮಾಡಲು ಕರೆ ನೀಡಿದರು. ಅನುಯಾಯಿಗಳಿಗೆ ತರಬೇತಿ ನೀಡುವುದು ಮತ್ತು ಶಿಸ್ತನ್ನು ಕಲಿಸುವುದು ಕಠಿಣ ಕೆಲಸವೆಂದು ಅವರಿಗೆ ತಿಳಿದಿತ್ತು. ಚೌರಿಚೌರಾ ಘಟನೆಯಿಂದ ಈ ಮಾತು ಸ್ಪಷ್ಟವಾಗುತ್ತದೆ. ಚಳವಳಿಯು ಹಿಂಸೆಯ ಸ್ವರೂಪ ತಳೆದಿದ್ದರಿಂದ ಅವರು ಒಮ್ಮೆಲೇ ಅಸಹಕಾರ ಚಳವಳಿಯನ್ನು ತಡೆಹಿಡಿಯಬೇಕಾಯಿತು. ಸ್ವರಜ್ಯಕ್ಕಿಂತ ಅಹಿಂಸೆಯು ಹೆಚ್ಚಿನದೆಂದು ಅವರು ತಿಳಿದಿದ್ದರು. ಅಸಹಕಾರ ಚಳವಳಿಯ ದಿನಗಳಲ್ಲಿ ಸ್ವರಾಜ್ಯದ ಕನಸು ನನಸಾಗುವುದು ದೂರವಿರಲಿಲ್ಲ. ಎದುರಾಳಿಯನ್ನು ತಮ್ಮೆಡೆಗೆ ಗೆದ್ದುಕೊಳ್ಳಲು ಕಷ್ಟವನ್ನು ಅನುಭವಿಸುವುದು ಉತ್ತಮ ಮಾರ್ಗವೆಂದು ಅವರು ತಿಳಿದಿದ್ದರು. ಅದು ಅವನ ಹೃದಯಕ್ಕೆ ಮತ್ತು ಆತ್ಮಕ್ಕೆ ನೇರವಾಗಿ ತಟ್ಟುವುದು. ಸತ್ಯಾಗ್ರಹವು ದುರ್ಬಲರ ಅಸ್ತ್ರವಲ್ಲ. ಬಲವುಳ್ಳವರ ಅಸ್ತ್ರ. ಅದನ್ನು ಸರಿಯಾಗಿ ಉಪಯೋಗಿಸಿದರೆ ಇಡೀ ಜಗತ್ತು ನಿಮ್ಮೊಡನೆ ಒಪ್ಪಂದಕ್ಕೆ ಧಾವಿಸುವುದು.

ಸೈನಿಕರು ಮತ್ತು ಅಧಿಕಾರಿಗಳು ಯುದ್ಧಕ್ಕೆ ಹೋಗುವ ಮೊದಲು ಆಳವಾದ ತರಬೇತಿಯನ್ನು ಪಡೆಯುವಂತೆ, ಜನರು ಮತ್ತು ಅವರ ಮುಂದಾಳುಗಳು ಕಷ್ಟದ ಮತ್ತು ದೀರ್ಘವಾದ ತರಬೇತಿಯನ್ನು ಪಡೆದಾಗಲೇ ಅಹಿಂಸಾ ಯುದ್ಧವನ್ನು ತಮ್ಮ ವಿರೋಧಿಗಳೊಡನೆ (ಬ್ರಿಟೀಷರೊಡನೆ) ಮಾಡಬಲ್ಲವರಾಗಿದ್ದರು.

ಗಾಂಧೀಜಿಯವರ ಸತ್ಯಾಗ್ರಹ ತತ್ವಕ್ಕೆ ದೀರ್ಘವಾದ ಇತಿಹಾಸವಿದೆ. ಮಾನವಕುಲದ ಅಧ್ವರ್ಯುಗಳಾದ ಬುದ್ದ ಮತ್ತು ಜೀಸಸ್ ಕ್ರೈಸ್ತರು ಅದನ್ನು ಬೋಧಿಸಿದ್ದಾರೆ. ಆದುನಿಕ ಲೇಖಕರಾದ ಟಾಲ್‌ಸ್ಟಾಯ್, ರಸ್ಕಿನ್ ಮತ್ತು ಥೋರೂ ರಂತಹ ವಿಚಾರವಾದಿಗಳ ಪುಸ್ತಕಗಳಲ್ಲಿಯೂ ಈ ತತ್ವದ ಪ್ರತಿಪಾದನೆ ಇದೆ. ಗಾಂಧೀಜಿಯವರ ಮೂಲಕೊಡುಗೆ ಎಂದರೆ ಈ ತತ್ವವನ್ನು ಅವರು ಮಾನವನ ಎಲ್ಲ ಜೀವನ ರಂಗಗಳಿಗೂ ಅನ್ವಯಿಸ ಬಯಸಿದರು. ಅವರು ಮೊದಲು ವ್ಯಕ್ತಿಯು ತನ್ನ ಖಾಸಗೀ ಜೀವನದಲ್ಲಿ ಬಳಕೆ ತಂದೆ ಮೇಲೆ ಅದನ್ನು ಸಾರ್ವಜನಿಕ ಕಾರ್ಯಗಳಿಗೆ ಅನ್ವಯಿಸಬೇಕೆಂದು ಹೇಳಿದರು. ಒಬ್ಬ ವ್ಯಕ್ತಿಯು ತನ್ನ ಖಾಸಗೀ ಜೀವನದಲ್ಲಿ ಅಹಿಂಸೆಯನ್ನು ಆಚರಿಸಲು ಸಾಧ್ಯವಾಗುವುದಿಲ್ಲ.

ಸತ್ಯಾಗ್ರಹವು ಕೆಳಗಿನ ರೂಪಗಳಲ್ಲಿ ಕಂಡು ಬರಬಹುದು: ) ಹಿಜ್ರತ್: ಸ್ವ ಪ್ರೇರಣೆಯಿಂದ ಸ್ಥಾನ ತ್ಯಾಗ ಮಾಡುವುದು. ಗಾಂಧೀಜಿಯವರು ಮರ್ಯಾದೆಯಿಂದ ಬಾಳಲಾರದವರಿಗೆ ಅಥವಾ ಸ್ವರಕ್ಷಣೆ ಮಾಡಿಕೊಳ್ಳಲಾರದವರಿಗೆ ಈ ಸ್ಥಾನ ತ್ಯಾಗವನ್ನು ಶಿಫಾರಸ್ಸು ಮಾಡಿದರು. ೧೯೨೮ ರಲ್ಲಿ ಬಾರ್ಡೋಲಿ ಸತ್ಯಾಗ್ರಹಿಗಳಿಗೆ ಮತ್ತು ೧೯೩೯ ರಲ್ಲಿ ಜುನಾಗಡ ಮತ್ತು ವಿಠಲಗಡದ ಸತ್ಯಾಗ್ರಹಿಗಳಿಗೆ ಇದನ್ನು ಉಪದೇಶಿಸಿದರು. ೧೯೩೫ ರಲ್ಲಿ ಕೈಥಾದ ಹರಿಜನರಿಗೆ ಉಚ್ಚ ಜಾತಿಯ ಹಿಂದೂ ಜನರು ಭಯೋತ್ಪಾದನೆಯಲ್ಲಿ ತೊಡಗಿದಾಗ ಸ್ಥಾನ ಬಿಟ್ಟು ಹೋಗಲು ಉಪದೇಶಿಸಿದರು. ಈ ರೀತಿಯ ಕಾರ್ಯವನ್ನು ಅಹಿಂಸೆಯನ್ನು ಕಾರ್ಯರೂಪದಲ್ಲಿ ತರಲು ಪರಿಣತರಲ್ಲದವರಿಗೆ ಅವಲಂಬಿಸಲು ಹೇಳಲಾಗಿದೆ.

) ಹರತಾಳ: ದುರಾಡಳಿತದಲ್ಲಿ ತೊಡಗಿದ ಸರ್ಕಾರಕ್ಕಾಗಲೀ, ಸಂಘಕ್ಕಾಗಲೀ, ಸಂಸ್ಥೆಗಾಗಲೀ ಹರತಾಳದಿಂದ ಲಕ್ಷ್ಯ ಸೆಳೆಯಲು ಸಾಧ್ಯವಾಗುವುದು. ಹಿಂಸೆಗೆ ಇಲ್ಲಿ ಸ್ಥಾನವಿಲ್ಲ. ಹರತಾಳಕ್ಕೆ ಎರಡು ಸಂಗತಿಗಳು ಅವಶ್ಯವಾಗಿವೆ.

೧) ಅದು ಸ್ವಪ್ರೇರಣೆಯಿಂದ ನಡೆಯಬೇಕು. ೨) ಅದು ಮೇಲಿಂದ ಮೇಲೆ ನಡೆಯಬಾರದು. ಇಲ್ಲದಿದ್ದರೆ ಅದು ಪರಿಣಾಮಕಾರಿಯಾಗಲಾರದು.

) ಪಿಕೆಟಿಂಗ್: ಇದು ಶಾಂತರೀತಿಯಿಂದ ಅನ್ಯಾಯ ಅಥವಾ ಅನಾಚಾರವು ನಡೆದ ಸ್ಥಾನಗಳ ಮುಂದೆ ಶಾಂತರೀತಿಯಿಂದ ವಿರೋಧವನ್ನು ವ್ಯಕ್ತಪಡಿಸುವುದರಲ್ಲಿ ಇದೆ.

) ಸಂಪು: ಸಂಪು ನಡೆಸುವಲ್ಲಿ ರಾಜಕೀಯ ಉದ್ದೇಶಗಳು ಇರಬಾರದು. ಅದು ಸಂಪು ನಡೆಸುವವರಿಗೆ ತೊಂದರೆಯನ್ನು ತಂದೊಡ್ಡುತ್ತದೆ. ಸಾರ್ವಜನಿಕ ನಂಬಿಗೆಯನ್ನು ಸಂಪಾದಿಸಿದ ನಿಷ್ಪಕ್ಷಪಾತಿ ಜನರ ಬೆಂಬಲವು ಅವರಿಗೆ ಇರಬೇಕು. ಗಾಂಧೀಜಿಯವರು ಸೇವೆಯಲ್ಲಿರುವವರಿಗೆ ಮತ್ತು ಕೂಲಿಕಾರರಿಗೆ ಆ ಉದ್ಯೋಗವು ತಮ್ಮದೆಂದೇ ತಿಳಿಯುವಂತೆ ಮಾಲಿಕರು ವರ್ತಿಸಬೇಕೆಂದು ಗಾಂಧೀಜಿಯವರು ಉಪದೇಶಿಸಿದರು. ಅವಶ್ಯಕ ಸೇವೆಗಳಲ್ಲಿ ಗಾಂಧೀಜಿಯವರು ಸಂಪನ್ನು ಎತ್ತಿ ಹಿಡಿಯಲಿಲ್ಲ.

) ನಾಗರಿಕ ಅವಿಧೇಯತೆ ಚಳವಳಿ: ಇದು ಅಸಹಕಾರ ಚಳವಳಿಯ ಒಂದು ಭಾಗವಾಗಿದೆ. ಅನಾಚಾರ ಮತ್ತು ಅನ್ಯಾಯಗಳ ವಿರುದ್ಧ ಇದು ಕೊನೆಯ ಮತ್ತು ಉಗ್ರ ಸಾಧನವಾಗಿದೆ. ಗಾಂಧೀಜಿಯವರು ‘ಅವಿಧೇಯತೆ’ ಗಿಂತ ‘ನಾಗರಿಕ’ ಶಬ್ದವನ್ನು ಎತ್ತಿ ಹೇಳಿದರು. ಚಳವಳಿಯು ಒಳ್ಳೆಯ ರೀತಿಯಿಂದ ಸುಧಾರಿಸಿದ ಪದ್ಧತಿಯಲ್ಲಿ, ನಯವಾಗಿ ನಡೆಯಬೇಕು. ಜನರ ಹಿತದ ವಿರುದ್ಧವಾಗಿ ಪಾಸಾದ ಎಲ್ಲ ಕಾಯ್ದೆಗಳನ್ನು ಮುಡಿಯಬೇಕು. ನಾಗರಿಕ ಅವಿಧೇಯತೆಯು ಒಬ್ಬ ಮುಂದಾಳುವಿನಿಂದಾಗಲೀ, ಅಥವಾ ಕೆಲವು ಆರಿಸಿದ ಮುಂದಾಳುಗಳ ಗುಂಪಿನಿಂದಾಗಲೀ ಜನರಿಗೆ ಈ ದಿಶೆಯಲ್ಲಿ ಮಾರ್ಗದರ್ಶನ ಕೊಡುವದರ ಮೂಲಕ ಪ್ರಾರಂಬವಾಗಬೇಕು.

) ಉಪವಾಸ: ಅದರ ಮೂಲ ಉದ್ದೇಶವು ಆತ್ಮಶುದ್ಧಿಯಾಗಿದೆ. ಇದು ಎದುರಾಳಿಯ ನೈತಿಕ ವಿಚಾರವನ್ನು ತಲುಪುತ್ತದೆ. ಎದುರಾಳಿಯ ನೈತಿಕ ಬದಲಾವಣೆಯನ್ನು ಮಾಡಿ ಯಾವದು ನ್ಯಾಯಯುತವಾಗಿರುವುದೋ ಅದಕ್ಕೆ ಅವನನ್ನು ತಿರುಗಿಸುತ್ತದೆ.

) ಸಮಾಜದಿಂದ ದೂರಿಡುವಿಕೆ: ಸಮಾಜದ ಅಭಿಪ್ರಾಯವನ್ನು ಧಿಕ್ಕರಿಸುವವರನ್ನು ಸಮಾಜದಿಂದ ದೂರದಲ್ಲಿಡಬೇಕು.

ಗಾಂಧೀಜಿಯವರು ಆತ್ಮದಲ್ಲಿ ಹುದುಗಿದ ಆಗಾಧ ಶಕ್ತಿಯನ್ನು ಕಂಡು ಹಿಡಿದರು. ಒಬ್ಬ ವ್ಯಕ್ತಿಯೂ ಕೂಡ ಬಲಶಾಲಿಯಾದ ಅನ್ಯಾಯದ ಸಾಮ್ರಾಜ್ಯವನ್ನೇ ಧಿಕ್ಕರಿಸಬಲ್ಲನು. ಸತ್ಯಾಗ್ರಹವು ಸಾಮಾಜಿಕ, ಆರ್ಥಿಕ ಮತ್ತು ರಾಜಕೀಯ ಕಾರ್ಯಗಳಿಗೆ ಸಾಧನೆಯಾಗಿದೆ. ಶಾಂತಯುತ ಕ್ರಾಂತಿಯ ತತ್ವಜ್ಞಾನ ಮತ್ತು ರೀತಿಗೆ ಇದು ಗಾಂಧೀಜಿಯವರ ವಿಶೇಷ ಕೊಡುಗೆಯಾಗಿದೆ.

ಸರ್ವತ್ರ ಅದರ ಉಪಯೋಗವಾಗುವ ಒಳಾರ್ಥಗಳು: ಗಾಂಧೀಜಿಯವರು ಅಸ್ತಂಗತರಾದಾಗ ದುಃಖ ಶೋಕಗಳು ಜಗತ್ತಿನ ನಾಲ್ಕೂ ಮೂಲೆಯಲ್ಲಿ ಹರಡಿದವು. ಅವು ಸಂದೇಶವು ಜಗತ್ತಿಗೆ ಮಹತ್ವದ್ದಾಗಿದ್ದಿತೆಂದು ಇದು ಸೂಚಿಸುತ್ತದೆ. ಇಡೀ ಏಶಿಯಾ ಖಂಡವು ತನ್ನ ಒಬ್ಬ ನೇತಾರನ್ನು ಕೆಳೆದು ಕೊಂಡಂತೆ ಆಯಿತು. ಇಡೀ ಮಾನವ ಕುಲವು ತನ್ನ ಸನಿಹದ ಮತ್ತು ಪ್ರೀತಿಯ ವ್ಯಕ್ತಿಯೊಬ್ಬನನ್ನು ಕಳೆದುಕೊಂಡಂತೆ ಆಯಿತು. ಅವರು ಏಶಿಯಾದ ಆಸೆ ಆಕಾಂಕ್ಷೆಗಳನ್ನು ಈಡೇರಿಸಿ ಪಾಶ್ಚಾತ್ಯ ವಸಾಹತುವಾದದರಿಂದ ಸಂಪೂರ್ಣ ಬಿಡುಗಡೆ ಹೊಂದಲು ಹೋರಾಡುವ ಧೀರ ನಾಯಕರಾಗಿದ್ದರು. ಅವರನ್ನು ಇತಿಹಾಸದಲ್ಲಿ ಒಬ್ಬ ಮಹಾಪುರುಷರೆಂದು ತಿಳಿಯಲಾಗಿದೆ.

ಮಾನವ ಇತಿಹಾಸದಲ್ಲಿ ನಿಜವಾದ ಕ್ರಾಂತಿಕಾರಕರೆಂದರೆ ಸರ್ವಾಧಿಕಾರಿಗಳಾಗಲೀ, ಯೋಧರಾಗಲೀ ಅಲ್ಲ. ಶಿಕ್ಷಕರು, ತತ್ವಜ್ಞಾನಿಗಳು ಪ್ರವಾದಿಗಳು ವಿಜ್ಞಾನಿಗಳು ಕ್ರಾಂತಿಕಾರಕರಾಗಿದ್ದಾರೆ. ತಮ್ಮ ಉಪದೇಶದ ಬಲದಿಂದ ಅವರು ಸಮಾಜದಲ್ಲಿ ಕ್ರಾಂತಿಯನ್ನು ಹುಟ್ಟಿಸುತ್ತಾರೆ. ಅಲೆಕ್ಸಾಂಡರ ಅಥವಾ ನೆಪೋಲಿಯನ್‌ನಲ್ಲ. ಪ್ಲೇಟೋ, ಸೀಜರನಲ್ಲ, ಸಿಸಿರೋ, ಹಿಟ್ಲರ್ ಅಥವಾ ಮುಸಲೋನಿಯಲ್ಲ, ಗಾಂಧೀಜಿ ಜಿವಾದ ಕ್ರಾಂತಿಕಾರರು. ಅವರು ವಿನೀತ, ಉದಾರ, ದಯಾಪೂರ್ಣ, ನೈತಿಕ ಕ್ರಾಂತಿಸಾಧಕರಾಗಿದ್ದರು. ಅವರು ಹೇಳುತ್ತಿದ್ದುದೆಂದರೆ ಒಬ್ಬನೆ ಸತ್ಯಾಗ್ರಹಿಯು ಇದ್ದರೂ, ಅಷ್ಟೇ ಸಾಕು. ಅವರು ತಾವೇ ಒಬ್ಬರೇ ಹೋರಾಡಲು ಸಿದ್ಧರಿದ್ದರು. ಮಾನವಕುಲದ ಅಂತರಾತ್ಮವನ್ನು ಅವರು ಪ್ರತೀಕರಿಸಿದ್ದರು. ಅವರ ಧ್ಯೇಯವು ಅಪಸ್ವರವಿದ್ದಲ್ಲಿ ಸುಸ್ವರ. ಹೋರಾಟವಿದ್ದಲ್ಲಿ ಶಾಂತಿ, ಹಿನ್ನಡೆಯಿದ್ದಲ್ಲಿ ಮುನ್ನಡೆಯಾಗಿದ್ದಿತು. ಅವರ ಸತ್ಯಾಗ್ರಹದ ಸಂದೇಶವು ಜಗತ್ತಿನ ಎಲ್ಲ ಕಂಪನಮಯ ಹೃದಯಗಳಿಗೂ ತಟ್ಟಿದೆ.

ಅಹಿಂಸಾ ಚಳುವಳಿಯನ್ನು ಅಂತಾರಾಷ್ಟ್ರೀಯ ಮಟ್ಟದಲ್ಲಿ ಪ್ರಾರಂಭಿಸಬೇಕು. ಪ್ರತಿಯೊಂದು ದೇಶದಲ್ಲಿಯ ಶಾಂತಿಕಾರ್ಯಕರ್ತರು ತಮ್ಮ ಸರ್ಕಾರದ ಮೇಲೆ ಸಂಪೂರ್ಣ ನಿಶ್ಯಸ್ತ್ರೀಕರಣಕ್ಕೆ ಒತ್ತಾಯ ತರಬೇಕು. ಶಸ್ತ್ರೀಕರಣದ ಭಯಂಕರತೆಯ ಬಗ್ಗೆ ಎಷ್ಟೋ ದೇಶಗಳಲ್ಲಿಯ ಜನರಿಗೆ ಇನ್ನೂ ಕಲ್ಪನೆಯಿಲ್ಲ. ಅವರಿಗೆ ದೇಶಭಕ್ತಿಯ ತಪ್ಪು ಕಲ್ಪನೆಗಳಿದ್ದು ಇದರಿಂದ ಆ ಸರ್ಕಾರಗಳು ಅಧಿಕಾರದಲ್ಲಿ ಮುಂದುವರಿಯುತ್ತವೆ. ಆದಕಾರಣ ಜನರ ವಿಚಾರ ಶೈಲಿಯನ್ನು ಬದಲು ಮಾಡಬೇಕು. ಅದರಿಂದ ಮಾನವಕುಲವು ಒಂದಾಗಬಹುದು. ಶಕ್ತಿಯುತ ಮತ್ತು ಪರಿಣಾಮಕಾರಿ ಸಾಮಾಜಿಕ ಅಭಿಪ್ರಾಯವನ್ನು ಎಲ್ಲ ದೇಶಗಳಲ್ಲಿ ಅಹಿಂಸಾ ಪ್ರದರ್ಶನದಿಂದ ಏರ್ಪಡಿಸಬೇಕು. ಇದನ್ನು ಬೃಹತ್ ರಾಷ್ಟ್ರಗಳಲ್ಲಿ ಸೈನಿಕ ಒಪ್ಪಂದಗಳಲ್ಲಿ ಸೇರಿದಂತೆ ಮೊದಲು ಸಾಧಿಸಬೇಕು. ಅಲಿಪ್ತ ರಾಷ್ಟ್ರಗಳು ಭೇರೆ ದೇಶಗಳ ಮೇಲೆ ಸೈನಿಕ ಒಪ್ಪಂದದಿಂದ ಹೊರಗಿರುವಂತೆ ಮನವೊಲಿಸಬೇಕು. ಜಗತ್ತಿನ ಎಲ್ಲ ರಾಷ್ಟ್ರಗಳಲ್ಲಿಯ ಜನರು ಹಿಂಸಾಚಾರವನ್ನು ಬಿಟ್ಟುಕೊಟ್ಟರೆ ಶಾಂತಿಯು ಮರಳಿ ಸ್ಥಾಪಿತವಾಗುವುದು. ಸಂಧಾನ ಮತ್ತು ಒಪ್ಪಂದಗಳು ಸತ್ಯಾಗ್ರಹದ ಅವಿಭಾಜ್ಯ ಅಂಗಗಳಾಗಿವೆ. ಇದೇ ತತ್ವದ ಮೇಲೆ ಜಗತ್ತಿನ ರತಡು ಸಂಸ್ಥೆಗಳು ಸ್ಥಾಪಿತವಾಗಿವೆ. ಸಂಯುಕ್ತರಾಷ್ಟ್ರ ಸಂಘದ ಪ್ರಣಾಲಿಯು ಗಾಂಧೀಜಿಯವರ ತತ್ವಜ್ಞಾನವನ್ನು ಒಳಗೊಂಡಿದೆ ಎಂದು ಹೇಳುವುದರಲ್ಲಿ ಯಾವ ಅತಿಶಯೋಕ್ತಿಯೂ ಇಲ್ಲ. ಅದೆಂದರೆ ಅಂತರಾಷ್ಟ್ರೀಯ ವ್ಯಾಜ್ಯಗಳನ್ನು ಶಾಂತರೀತಿಯಿಂದ ಬಗೆಹರಿಸುವುದು.

ಗಾಂಧೀಜಿಯವರು ಹೇಳುವಂತೆ ಮನುಷ್ಯನು ಆಯುಧಗಳೊಂದಿಗೆ ಹುಟ್ಟಿರುವುದಿಲ್ಲ. ಅವನಿಗೆ  ಹುಲಿಯ ಉಗುತುಗಳಾಗಲೀ ಅಥವಾ ಕಾಡು ಕೋಣದ ಕೋಡುಗಳಾಗಲೀ ಇರುವುದಿಲ್ಲ ಅವನು ಒಂದು ಆತ್ಮಚೇತನದೊಡನೆ ಹುಟ್ಟಿದ್ದಾನೆ. ಯಾವ ದೇಶಕ್ಕೂ ಹಿಂಸೆಯ ಮಾರ್ಗವನ್ನು ಅನುಸರಿಸುವುದು ಅವಶ್ಯವಿಲ್ಲ. ಜಗತ್ತಿನ ಮೇಲೆ ಯಾವ ಶಕ್ತಿಯೂ ಯಾವ ದೇಶವನ್ನು ಮನುಷ್ಯನ ಚೇತನವು ಉದ್ದೀಪನಗೊಂಡಾಗ ಅಂಕಿತದಲ್ಲಿಡಲು ಸಾಧ್ಯವಿಲ್ಲ. ನಿಃಸಂಶಯವಾಗಿ ಅಹಿಂಸೆಯ ಉದಾಹರಣೆಗಳು ಬೇಕಾದಷ್ಟಿವೆ. ಆದರೆ ಇತಿಹಾಸವು ಯಶಸ್ವಿಯಾಗಿ ನಡೆದ ಅಹಿಂಸಾ ಚಳುವಳಿಯ ಉದಾಹರಣೆಗಳನ್ನು ಇನ್ನೂ ತೋರಿಸಬೇಕಾಗಿದೆ. ಭಾರತದ ಉದಾಹರಣೆಯು ಅವುಗಳಲ್ಲಿ ಒಂದಾಗಿದೆ. ಬೇರೆ ದೇಶಗಳು ತಮ್ಮ ರಾಷ್ಟ್ರೀಯ ಮತ್ತು ಅಂತರ್‌ರಾಷ್ಟ್ರೀಯ ಸಮಸ್ಯೆಗಳನ್ನು ಬಲಶಾಲಿಯಾದ ಪ್ರೀತಿ ಮತ್ತು ಅಹಿಂಸಾ ಅಸ್ತ್ರಗಳಿಂದ ಇಂತಹ ಉದಾಹರಣೆಗಳನ್ನು ಅನುಸರಿಸಬಹುದು. ಇದನ್ನು ಎಲ್ಲ ದೇಶಗಳು ಅನುಸರಿಸಿದರೆ, ಸತ್ಯಾಗ್ರಹವು ಉದ್ಧದ ಸ್ಥಾನವನ್ನು ನೈತಿಕ ಬಲಕ್ಕೆ ದಾರಿಮಾಡಿಕೊಡಬಹುದು. ಎಲ್ಲ ಯುದ್ಧಗಳೂ ದಾರುಣಮಯವಾಗಿದ್ದರಿಂದ, ಅಹಿಂಸಾಕೃತಿಗಳನ್ನು ಯುದ್ಧ, ಹಿಂಸೆ, ವಿಧ್ವಂಸಕ ಕೃತ್ಯಗಳಲ್ಲಿ ತೊಡಗಿರುವ ಜನರ, ಗುಂಪಿನ, ರಾಷ್ಟ್ರಗಳ, ಶಕ್ತಿ ಬಣಗಳ ವಿರುದ್ಧವಾಗಿ ಉತ್ತೇಜಿಸಬೇಕು.

ಗಾಂಧೀಜಿಯವರ ದೃಷ್ಟಿಯಲ್ಲಿ ಸಾಮಾಜಿಕ ರಚನೆಯು ಸತ್ಯ ಮತ್ತು ಅಹಿಂಸೆಯ ಮೇಲೆ ನಿಂತಿರಬೇಕು. ಅವರು ಮಾರ್ಕ್ಸ ಮತ್ತು ಲೆನಿನ್‌ರಿಗಿಂತ ಹೆಚ್ಚಿನ ಕ್ರಾಂತಿಕಾರಿ ಪುರುಷರಾಗಿದ್ದರು. ಏಕೆಂದರೆ ಪಾಶ್ಚಾತ್ಯ ರಾಷ್ಟ್ರಗಳ ನೈತಿಕ ಶಕ್ತಿಯಿಲ್ಲದ ಭೌತಿಕ ಸಂಪತ್ತಿನ ತಳಹದಿಯನ್ನೇ ಅವರು ಅಲ್ಲಾಡಿಸಿದರು. ಗಾಂಧೀವಾದಿಗಳು ನಮಗೆ ಸಿಗದೇ ಇರಬಹುದು. ಆದರೆ ಎಲ್ಲ ರಾಜಕೀಯ ತತ್ವಗಳ ಸಾರಾಂಶವು ಗಾಂಧೀಜಿಯವರ ಜೀವನಮಾರ್ಗವನ್ನು ಒಳಗೊಂಡಿರುತ್ತದೆ. ಸತ್ಯ, ಅಹಿಂಸೆ, ಪ್ರೀತಿ ಮಾನವ ಇತಿಹಾಸದಷ್ಟೇ ಪುರಾತನವಾಗಿವೆ. ಅವು ಇನ್ನೂ ಎಷ್ಟೋ ಶಾಶ್ವತ ಮೌಲ್ಯಗಳನ್ನು ಬೆಳೆಸಿಕೊಂಡು ಬಂದಿವೆ. ಇವುಗಳನ್ನು ಅನುಸರಿಸದಿದ್ದರೆ ಮನುಷ್ಯನು ತನ್ನ ಮರಣದ ಜಾಗಟೆಯನ್ನು ತಾನೇ ಬಾರಿಸಬೇಕಾಗುವ ಪರಿಸ್ಥಿತಿಯು ಬಂದೊದಗಬಹುದು.

ಮುಕ್ತಾಯ: ಸತ್ಯಾಗ್ರಹವು ಜಗತ್ತಿನ ಘರ್ಷಣೆ ಮತ್ತು ಅನ್ಯಾಯಗಳೆಲ್ಲವನ್ನೂ ತೊಡೆದುಹಾಕುವುದೆಂದು ಹೇಳಲು ಬರಲಿಕ್ಕಿಲ್ಲ. ಗಾಂಧೀಜಿಯವರ ನಾಗರಿಕ ಅವಿಧೇಯತೆಯು ಸತ್ಯಾಗ್ರಹದ ಒಂದು ತೀವ್ರರೂಪದವಾಗಿ ಕಂಡು ಬರುತ್ತದೆ. ಅದನ್ನು ನಾವು ಶಸ್ತ್ರಾಸ್ತ್ರದ ಹೋರಾಟಕ್ಕೆ ಪರಿಣಾಮಕಾರಿಯಾದ ಮತ್ತು ರಕ್ತರಹಿತ ಬದಲು ವ್ಯವಸ್ಥೆಯೆಂದು ಪರಿಗಣಿಸಬಹುದು. ಆದರೆ ಈ ಚಳವಳಿಯು ಉದ್ಧಟವಾಗಿ ಅಸಂತೋಷದಿಂದ ದ್ವೇಷದಿಂದ ಕೂಡದೇ ಇರುವದೆಂದು ಹೇಳಲು ಯಾವ ಭರವಸೆ ಇದೆ? ಪ್ರತಿಯೊಬ್ಬರೂ ಗಾಂಧೀಜಿಯವರ ವಿಚಾರದಂತೆ ಸತ್ಯಾಗ್ರಹಿಯಾಗಲು ಸಾಧ್ಯವಿಲ್ಲ. ಎಲ್ಲರೂ ವಿನೋಬಾ ಭಾವೆಯಾಗಲೀ ಅಥವಾ ಜಯಪ್ರಕಾಶ ನಾರಾಯಣರಾಗಲೀ ಆಗಲು ಸಾಧ್ಯವಿಲ್ಲ. ಎಲ್ಲ ಸತ್ಯಾಗ್ರಹಿಗಳೂ ಗಾಂಧೀಜಿಯವರ ಮಟ್ಟದಲ್ಲಿ ಕೆಲಸ ಮಾಡಲು ಸಾಧ್ಯವಿಲ್ಲ. ಸತ್ಯಾಗ್ರಹಿಯಲ್ಲಿರುವ ದೋಷಗಳನ್ನು ಸತತ ಪ್ರಯತ್ನದಿಂದ ಅಳಿಸಿ ಹಾಕಬೇಕಾಗುತ್ತದೆ. ಪರಿಪೂರ್ಣತೆಯನ್ನು ಸಾಧಿಸುವುದು ಸಾಧ್ಯವಿರಲಿಕ್ಕಿಲ್ಲ. ಆದರೆ ಪ್ರಯೋಗ ಮಾಡುತ್ತಲೇ ಇರಬೇಕಾಗುತ್ತದೆ. ಇದು ಗಾಂಧೀಜಿಯವರ ತತ್ವಳ ರಹಸ್ಯವಾಗಿದೆ. ಗಾಂಧಿ ವಿಚಾರ ಪದ್ಧತಿಗಳು ಬೇರೆ ಬೇರೆ ದೇಶದಲ್ಲಿ ಬೇರೆ ಜನರು ಅನುಸರಿಸುತ್ತಿದ್ದಾರೆಂಬುದನ್ನು ನಾವು ಇಲ್ಲಿ ಲಕ್ಷಿಸಬೇಕು. ಸತ್ಯಾಗ್ರಹದ ಮೂಲ ತತ್ವಗಳನ್ನು ಒಪ್ಪದೇ ಇದ್ದವರೂ ಸಹ, ಎಷ್ಟೋ ಸಾರೆ ಗಂಧೀಜಿಯವರ ರೀತಿಗಳಿಗೆ ಶರಣು ಹೋಗಬೇಕಾಗುತ್ತದೆ. ಭಾರತದ ಕಮ್ಯೂನಿಷ್ಟ ಪಕ್ಷವು ಉಪವಾಸವನ್ನು ಹಿಡಿದುಕೊಂಡು ಈ ವಿಧಾನಗಳನ್ನು ಬೇರೆ ಯಾವ ಮಾರ್ಗವೂ ತೋಚದಾಗ ಅನುಸರಿಸುತ್ತದೆ. ಹಿಂಸೆಯಲ್ಲಿ ತೊಡಗಿದವರೂ ನಿಜವಾದ ಅಥವಾ ಕಾಲ್ಪನಿಕ ಅನ್ಯಾಯಗಳನ್ನು ಸರಿಪಡಿಸಿಕೊಳ್ಳುವಾಗ ತಮ್ಮನ್ನು ಸತ್ಯಾಗ್ರಹಿಗಳೆಂದೇ ಕರೆದುಕೊಳ್ಳುತ್ತಾರೆ. ಅವರು ಸತ್ಯಾಗ್ರಹದ ಯುದ್ಧವನ್ನು ಸಾರಿದ್ದೇವೆಂದು ಹೇಳುತ್ತಾರೆ. ಗಾಂಧೀಜಿಯವರ ವಿಧಾನಗಳು ಗಾಂಧೀಜಿಯವರ ಸತ್ಯ, ಅಹಿಂಸೆ, ಸಾಧನ-ಗುರಿಗಳ ಪಾವಿತ್ರ್ಯ ಇವುಗಳ ಮೂಲಗಳಲ್ಲಿ ನಂಬಿಗೆ ಇಡುವವರು ಬಳಸಿದರೆ ಕೆಲಸ ಮಾಡುತ್ತವೆ.

 

Bibilography

1. Dr. T.K.N. Unnithan, (Gandhi in Free India,) Vora and Company Publishers, Bombay, 1956

2. J.B. Kripalani, (Gandhian Thought) Orient Longmans, New Delhi, 1961

3. M. K. Gandhi (India of My Dreams) Navajeevan Publishing House, Ahmedabad 1947.

4. U.S. Mohan Rao (The Massage of Mahatma Gandhi) Publications Division, Ministry of Information and Broadcasting, Government of India, 1968

5. M. K. Gandhi (My Religion) Navajeevan Publishing House, Ahmedabad 1955.

6. Venkatarangayya, (Gandhiji’s Gospel of Satyagraha) Bharatiya Vidya Bhavan, Bombay.

7. R.L. Gupta, (Great Political Thinkers (from) East and West), Laxmi Narain Agarwal, Agra, 1974.

8. J.P. Suda, (Modern Political Thought; Bentham to Present Day) K. Nath and Company, Meerut, 1972-73

* *  *