ಪ್ರತಿಯೊಬ್ಬ ಕವಿಯೂ ಒಂದು ನಿರ್ದಿಷ್ಟವಾದ ಕಾಲಮಾನದಲ್ಲಿ ಬದುಕಿರುತ್ತಾನಾದ್ದರಿಂದ ಅವನಿಗೆ ತಾನು ಬದುಕಿದ ಕಾಲ ಸಮಕಾಲೀನ ಎನ್ನುವುದು ಬಹಳ ಸರಳವಾದ  ಸಂಗತಿ.  ಒಂದು ಕವಿ ಕೃತಿಯನ್ನು ಕುರಿತು ನಾವು ವಿಮರ್ಶೆಯ ನೆಲೆಯಲ್ಲಿ  ನಿಂತು ಮಾತನಾಡುವಾಗ, ಕವಿ ತನ್ನ ಕೃತಿಯಲ್ಲಿ ತನ್ನ ಸಮಕಾಲೀನತೆಯನ್ನು ಸೊಗಸಾಗಿ ಪ್ರಕಟಿಸಿದ್ದಾನೆ ಎನ್ನುವಾಗ, ಅಲ್ಲಿ ಸಮಕಾಲೀನ ಎನ್ನುವ ಮಾತಿನ ಅರ್ಥ ವ್ಯಾಪ್ತಿ ತಟಕ್ಕನೆ ಬೇರೆಯಾಗಬೇಕಾಗುತ್ತದೆ. ಏಕೆಂದರೆ ಒಬ್ಬ ಕವಿ ಇಪ್ಪತ್ತೆಂಟು ವರ್ಷ ಮಾತ್ರ ಬದುಕಿದ್ದು ಸೊಗಸಾದ ಕಾವ್ಯರಚನೆ ಮಾಡಿರಬಹುದು. ಇನ್ನೊಬ್ಬ ಎಪ್ಪತ್ತೆಂಟು ವರ್ಷಕಾಲ ಬದುಕಿ ಕೃತಿರಚನೆ ಮಾಡಿರಬಹುದು. ಹೀಗೆ ಬದುಕಿದ ಕವಿಗೆ ಸಮಕಾಲೀನತೆ ಎಂದರೇನು ? ಆಯಾ ಕವಿ ಬದುಕಿದಷ್ಟು ಅವಧಿಯೊಳಗಿನ ಕಾಲವಷ್ಟೇ ಅವನಿಗೆ ಸಮಕಾಲೀನವೆಂದು ತಾನೇ ಅರ್ಥವಾಗಬೇಕು? ಅಂದರೆ ಒಬ್ಬನಿಗೆ ಇಪ್ಪತ್ತೆಂಟು ವರ್ಷಗಳ ಅವಧಿಯೆ ಸಮಕಾಲೀನ,  ಇನ್ನೊಬ್ಬನಿಗೆ ಎಪ್ಪತ್ತೆಂಟು ವರ್ಷಗಳ ಅವಧಿಯೆ ಸಮಕಾಲೀನ ಎಂದು ಅರ್ಥವೆ ? ಸಮಕಾಲೀನತೆಯನ್ನು ಕವಿಯ ಜೀವಿತಾವಧಿಯಷ್ಟನ್ನೇ ಗಮನಿಸಿ ಮಿತಿಗೊಳಿಸುವುದಾದರೆ ಅದು ಬಹಳ ತಪ್ಪು ಕಲ್ಪನೆಗೆಡೆಗೊಡುತ್ತದೆ. ಆದರೆ ನಾವು ಕವಿಕೃತಿಗಳನ್ನು ಕುರಿತು ಮಾತನಾಡುವಾಗ, ಕವಿಯ ಬದುಕಿನ ಅವಧಿಯನ್ನಷ್ಟೆ ಗಮನಿಸದೆ ಅವನು ಬದುಕಿದ ಶತಮಾನವನ್ನು ಮೂಲಮಾನವನ್ನಾಗಿರಿಸಿಕೊಳ್ಳುತ್ತೇವೆ. ಸಾಹಿತ್ಯ ಚರಿತ್ರೆಯನ್ನು ಅಭ್ಯಾಸ ಮಾಡುವಾಗ, ಸಾಹಿತ್ಯ ವಿಮರ್ಶೆಯನ್ನು ಮಾಡುವಾಗ ಆಯಾ ಶತಮಾನಗಳನ್ನು ಗಮನದಲ್ಲಿರಿಸಿಕೊಂಡು ಅಂದಂದಿನ ಕವಿಗಳನ್ನೂ, ಕೃತಿಗಳನ್ನೂ ಅಳೆದು ತೂಗುವುದು ವಿದ್ವಾಂಸರೆಲ್ಲರೂ ಅನುಕೂಲಕ್ಕಾಗಿ ಒಪ್ಪಿಕೊಂಡ ಒಂದು ಪರಂಪರೆ. ಆದಕಾರಣ ಒಬ್ಬ ಕವಿಯ ಸಮಕಾಲೀನತೆಯನ್ನು ನಾವು ಗುರುತಿಸುವಾಗ, ಅವನ ಬದುಕಿನ ಕೇಂದ್ರದ ಸುತ್ತ ಇರುವ ಅಂದಿನ ಶತಮಾನವೆ ನಮಗೆ ಪರಿಧಿ.

ಸಮಕಾಲೀನ ಪ್ರಜ್ಞೆ ಎಂದರೆ, ಆಯಾ ಕವಿ ತಾನು ಬದುಕಿದ ಆ ಒಂದು ಕಾಲದ ಅಥವಾ ಶತಮಾನದ ಸಮಕಾಲೀನ ಜೀವನವನ್ನು ಎಷ್ಟರ ಮಟ್ಟಿಗೆ ಜೀವಂತವಾಗಿ ಅನುಭವಿಸಿ ತನ್ನ ಕೃತಿಯಲ್ಲಿ ಅಭಿವ್ಯಕ್ತಗೊಳಿಸಿದ್ದಾನೆ ಎನ್ನುವುದನ್ನು ಕುರಿತದ್ದು. ಪ್ರತಿಯೊಬ್ಬ ಕವಿಯೂ ಅಂದಂದಿನ ಕಾಲ ದೇಶಗಳ ಯಾವುದೋ ಒಂದು ಬಿಂದುವಿನಲ್ಲಿ ಬದುಕಿರುವ ಕಾರಣ, ಅವನು ಅಂದಿನ ಶತಮಾನದ ಸತ್ವದಿಂದ ಅನಿವಾರ್ಯವಾಗಿ ಬದ್ಧನಾಗಿರುತ್ತಾನೆ. ಆದಕಾರಣ ಅವನ ಕೃತಿ ಅವನಿಗಿಂತ ಹಿಂದಿನ ಶತಮಾನದ ಕವಿಕೃತಿಗಳಿಂದ ಮತ್ತು ಅವನ ನಂತರದ ಮುಂದಿನ ಶತಮಾನದ                                          ಕವಿಕೃತಿಗಳಿಂದ ಸಹಜವಾಗಿಯೇ ಬೇರೆಯಾಗಿರುತ್ತದೆ. ಪಂಪಕವಿ ತನ್ನ ‘ವಿಕ್ರಮಾರ್ಜುನ ವಿಜಯ’ವನ್ನು ಹತ್ತನೇ ಶತಮಾನದಲ್ಲಿ ಬರೆದ. ಒಂದು ವೇಳೆ ಪಂಪ ಅದೇ ಕೃತಿಯನ್ನು ಹನ್ನೆರಡನೆ ಶತಮಾನದಲ್ಲಿ ಬರೆದಿದ್ದರೆ ಅದು ತನ್ನ ಸ್ವರೂಪ ಸ್ವಭಾವಗಳಲ್ಲಿ ಈಗಿರುವುದಕ್ಕಿಂತ ಭಿನ್ನವಾಗಿಬಿಡುತ್ತಿತ್ತು ಎನ್ನುವಷ್ಟರ ಮಟ್ಟಿಗೆ ಅದು ಹತ್ತನೆಯ ಶತಮಾನದ ಸತ್ವದಿಂದ ಬದ್ಧವಾಗಿದೆ. ಎಂದರೆ ಪ್ರತಿಯೊಂದು ಶತಮಾನವೂ ತನ್ನದೇ ಆದ ‘ಸಮಕಾಲೀನತೆ’ಯನ್ನು ಅಂದಂದಿನ ಕೃತಿಗಳಲ್ಲಿ ಪ್ರಕಟಪಡಿಸಿಕೊಂಡಿದೆ.

ಪ್ರತಿಯೊಂದು ಶತಮಾನಕ್ಕೂ ತನ್ನದೇ ಆದ, ಗುರುತಿಸಬಹುದಾದ ಕೆಲವು ವೈಲಕ್ಷಣ್ಯಗಳಿವೆ. ಒಂದೊಂದು ಶತಮಾನವೂ ತನಗಿಂತ ಹಿಂದಿನ ಶತಮಾನಗಳಿಂದ ಭಿನ್ನವಾದ ಪರಿಸರವನ್ನು ಹೊಂದುವುದು ಪ್ರಗತಿಯನ್ನೋ ಬದಲಾವಣೆಯನ್ನೋ ಸೂಚಿಸುತ್ತದೆ. ಹತ್ತನೆ ಶತಮಾನ ವೀರಯುಗ ;   ಹನ್ನೆರಡನೆಯ ಶತಮಾನ ಭಕ್ತಿಯುಗ; ಇಪ್ಪತ್ತನೆ ಶತಮಾನ ವೈಜ್ಞಾನಿಕ ಯುಗ ಎಂದಾಗ ಅದು ಆಯಾ ಕಾಲದ ಪ್ರಮುಖವಾದ  ಜನಮನೋಧರ್ಮವನ್ನು ಸೂಚಿಸಿದ ಹಾಗಾಯಿತು.  ಕಾಲದಿಂದ ಕಾಲಕ್ಕೆ ಜನಜೀವನದಲ್ಲಾದ ಧಾರ್ಮಿಕ, ರಾಜಕೀಯ, ಸಾಮಾಜಿಕ ಬದಲಾವಣೆಗಳಿಂದ ಆಯಾ ಕಾಲದಲ್ಲಿ ವೈಚಾರಿಕ ಕ್ರಾಂತಿಯಾಗುತ್ತದೆ. ಅದರ ಪರಿಣಾಮವಾಗಿ ಹೊಸ ಮೌಲ್ಯಗಳೂ, ಹೊಸ ಜೀವನದೃಷ್ಟಿಗಳೂ ಕಾಣಿಸಿಕೊಳ್ಳುತ್ತವೆ. ಅಂದಂದಿನ ಈ ಸಮಕಾಲೀನತೆಯನ್ನು ಕವಿಯ ಪ್ರಜ್ಞೆ ಗ್ರಹಿಸಿ ಅದಕ್ಕೆ ಅನುಗುಣವಾದ ಅಭಿವ್ಯಕ್ತಿಯನ್ನು ನೀಡುತ್ತದೆ.   ಈ ಅಭಿವ್ಯಕ್ತಿಯ ಕ್ರಮವೂ ಕಾಲದಿಂದ ಕಾಲಕ್ಕೆ ಬೇರೆಯಾಗಿರುತ್ತದೆ.  ಹೀಗಾಗಿ ವಸ್ತುವಿನಲ್ಲಿ, ರೀತಿಯಲ್ಲಿ, ದೃಷ್ಟಿಯಲ್ಲಿ ಪ್ರಮುಖವಾದ ಬದಲಾವಣೆಗಳು ಅಂದಂದಿನ ಕವಿಗಳಲ್ಲಿ ಕಂಡುಬಂದು, ಅದು ಸಾಹಿತ್ಯದ ಪ್ರಗತಿಯನ್ನೂ, ಜೊತೆಗೆ ಅಂದಂದಿನ ಸಾಹಿತಿಗಳಿಗೆ ಇರುವ ಸಮಕಾಲೀನ ಪ್ರಜ್ಞೆಯನ್ನೂ ಪ್ರಕಟಿಸುತ್ತದೆ. ಆದಕಾರಣ ನಾವು ಯಾವ ಕವಿಯಲ್ಲಿ ಅಂದಿನ ಯುಗದ ಅಥವಾ ಕಾಲದ ನಿಜವಾದ ಜೀವನಾನುಭವದ ವಿಶಿಷ್ಟ ಸ್ಪಂದನವನ್ನು ಗುರುತಿಸುತ್ತೇವೆಯೋ, ಅಂಥ ಕವಿಯನ್ನು ಸಮಕಾಲೀನಪ್ರಜ್ಞೆ ಉಳ್ಳವನೆಂದು ಹೇಳುತ್ತೇವೆ.

ಕನ್ನಡ ಸಾಹಿತ್ಯ ಪರಂಪರೆಯ ಪರಿಚಯವಿರುವವರು ಈ ಸಮಕಾಲೀನ ಪ್ರಜ್ಞೆ ಉದ್ದಕ್ಕೂ ಹಲವು ಘಟ್ಟಗಳಲ್ಲಿ ಅಂದಂದಿನ ಪ್ರಮುಖ ಕವಿಗಳಲ್ಲಿ ಹೇಗೆ ವ್ಯಕ್ತವಾಗಿದೆ ಎಂಬುದನ್ನು ಕಾಣಬಹುದು. ಆದರೆ ನಮ್ಮ ಕವಿಗಳು ಬಹುಮಟ್ಟಿಗೆ ಅವಲಂಬಿಸಿರುವ ಪೌರಾಣಿಕ, ಐತಿಹಾಸಿಕ, ಕಾಲ್ಪನಿಕ ವಸ್ತುಗಳಿಂದಾಗಿ ಈ ಸಮಕಾಲೀನತೆ ಎನ್ನುವುದು, ಅಂದಂದಿನ ಜನಜೀವನದಿಂದಲೇ ಅವರು ಯಥಾವತ್ತಾಗಿ ವಸ್ತುಗಳನ್ನೆತ್ತಿಕೊಂಡು ಕೃತಿರಚನೆ ಮಾಡಿದ್ದರೆ, ನೇರವಾಗಿ ಮತ್ತು ಇನ್ನೂ ಪರಿಣಾಮಕಾರಿಯಾಗಿ ಪ್ರಕಟವಾದಬಹುದಾದಷ್ಟರಮಟ್ಟಿಗೆ, ಪ್ರಕಟವಾಗಲು ಸಾಧ್ಯವಾಗಿಲ್ಲ ಎನ್ನುವ ಅಂಶವೊಂದು ಎದ್ದು ನಿಲ್ಲುತ್ತದೆ. ಪಂಪ ತನ್ನ ‘ವಿಕ್ರಮಾರ್ಜುನ ವಿಜಯ’ವನ್ನು ಬರೆಯುವಾಗ ಮಹಾಭಾರತವನ್ನು ವಸ್ತುವನ್ನಾಗಿ ತೆಗೆದುಕೊಂಡಿದ್ದರಿಂದ, ಅವನು ಅದರ ಮೂಲಕವಾಗಿಯೇ ಹತ್ತನೇ ಶತಮಾನದ ಸಮಕಾಲೀನ ಪ್ರಜ್ಞೆಯನ್ನು ಪ್ರಕಟಪಡಿಸಬೆಕಾದ ನಿರ್ಬಂಧಕ್ಕೆ ಒಳಗಾಗಿದ್ದಾನೆ;  ಆದರೆ ಅವನು  ಅದರ ಬದಲು ತನ್ನ ಸಮಕಾಲೀನವಾದ ವಸ್ತುವೊಂದನ್ನಾರಿಸಿಕೊಂಡಿದ್ದ ಪಕ್ಷಕ್ಕೆ ಇನ್ನೂ ನೇರವಾಗಿ, ಸೊಗಸಾಗಿ ತನ್ನ ಕಾಲದ ಮನೋಧರ್ಮವನ್ನು ವ್ಯಕ್ತಪಡಿಸಬಹುದಾಗಿತ್ತಲ್ಲವೆ ಎಂಬ  ಪ್ರಶ್ನೆ ಏಳಬಹುದು.  ಈ ಮಾತು ವಸ್ತುನಿಷ್ಠವಾಗಿಯೆ ಬರೆಯಬೇಕಾದಂಥ ಕಾಲದ ಕವಿಯನ್ನು ಕುರಿತದ್ದಾಯಿತು. ಆದರೆ ಆಧುನಿಕ ಕಾಲದವರಾದ ಕುವೆಂಪು ಅವರೂ ಮಹಾಕಾವ್ಯವನ್ನು ಬರೆಯುವಲ್ಲಿ ರಾಮಾಯಣದಂಥ ‘ಹಳೆಯಕಾಲದ’ ವಸ್ತುವನ್ನಾರಿಸಿಕೊಳ್ಳುವ ಬದಲು, ಸಮಕಾಲೀನವಾದ ವಸ್ತುವೊಂದನ್ನಾರಿಸಿಕೊಂಡಿದ್ದರೆ ಇಂದಿನ ಸಮಕಾಲೀನ ಪ್ರಜ್ಞೆಯನ್ನು ಸಮರ್ಥವಾಗಿ ವ್ಯಕ್ತಪಡಿಸಬಹುದಾಗಿತ್ತಲ್ಲ ಎಂಬ ಆಕ್ಷೇಪಣೆಯನ್ನು ಹಲವರು ಎತ್ತಿದ್ದುಂಟು. ಹೀಗಾಗಿ ಎಷ್ಟೋವೇಳೆ ಕವಿಗಳು ತಾವು ಬದುಕಿದ ಕಾಲದ ಜನಜೀವನದಿಂದ ವಸ್ತುಗಳನ್ನಾರಿಸಿಕೊಂಡ ಕಾರಣದಿಂದಲೆ ಅವರಲ್ಲಿ ಸಮಕಾಲೀನಪ್ರಜ್ಞೆ ಇದೆ ಎಂತಲೂ, ಸಮಕಾಲೀನವಲ್ಲದ ಐತಿಹಾಸಿಕ, ಪೌರಾಣಿಕ  ವಸ್ತುಗಳನ್ನಾರಿಸಿಕೊಂಡು ಕೃತಿರಚನೆ ಮಾಡಿದ ಕವಿಗಳಿಗೆ ಸಮಕಾಲೀನ ಪ್ರಜ್ಞೆ ಅಷ್ಟಾಗಿ ಇಲ್ಲವೆಂದೋ, ಅವರು ಸಮಕಾಲೀನ ಜೀವನವನ್ನೆದುರಿಸಲಾರದೆ ಪಲಾಯನ ಮಾಡಿದ್ದಾರೆಂದೋ ಕೆಲವರು ವಿಮರ್ಶೆಯಲ್ಲಿ  ರೋಚಕವಾಗಿ ಮಾತನಾಡಿರುವುದುಂಟು.

ಆದರೆ ಯಾವ ಕವಿಯೂ ಸಮಕಾಲೀನಪ್ರಜ್ಞೆಯನ್ನು ಪ್ರಕಟಿಸುವುದಷ್ಟೆ ತನ್ನ ಉದ್ದೇಶವೆಂದುಕೊಂಡು ಕೃತಿನಿರ್ಮಿತಿಗೆ ತೊಡಗುವುದಿಲ್ಲ ; ಅಲ್ಲದೆ ಸಮಕಾಲೀನ ಪ್ರಜ್ಞೆಯ ಪ್ರಕಟನೆಗೆ ವಸ್ತುವೂ ಸಹ ಸಮಕಾಲೀನವಾಗಿರಲೇಬೇಕು ಎನ್ನುವ   ಭ್ರಮೆಗೂ ಒಳಗಾಗಿರುವುದಿಲ್ಲ. ಏಕೆಂದರೆ ಸಮಕಾಲೀನಪ್ರಜ್ಞೆ ವ್ಯಕ್ತವಾಗುವುದಕ್ಕೆ ವಸ್ತುವೂ ಸಮಕಾಲೀನವಾಗಿರಲೇಬೇಕಾಗಿಲ್ಲ ಎನ್ನುವುದು ಗಮನಿಸಬೇಕಾದ ಅಂಶ. ವಸ್ತುವಿನ ಆಧಾರದ ಮೇಲಿನಿಂದ ಕವಿಯಲ್ಲಿ ಸಮಕಾಲೀನತೆ ಪ್ರಕಟವಾಗಿದೆಯೆ ಇಲ್ಲವೆ ಎಂದು ಪರಿಶೀಲಿಸುವುದು ಸರಿಯಲ್ಲ. ಕೇವಲ ವಸ್ತುವೈವಿಧ್ಯ ಹೆಚ್ಚೇನನ್ನೂ ಸೂಚಿಸುವುದಿಲ್ಲ. ವಸ್ತು ಯಾವ ಕವಿಗೂ ಬರೀ ಒಂದು ನಿಮಿತ್ತ ಮಾತ್ರ. ಕವಿ ತಾನು ಆರಿಸಿಕೊಂಡ ವಸ್ತುವಿನ ಮೂಲಕ ಪ್ರಕಟಪಡಿಸಿರುವ ಅವನ ಅನುಭವ ಶ್ರೀಮಂತಿಕೆ, ಮತ್ತು ಅಭಿವ್ಯಕ್ತವಾಗಿರುವ ರೀತಿ ಇವುಗಳಲ್ಲಿ ನಾವು ಅಂದಿನ ಜನಮನೋಧರ್ಮ ಅಥವಾ ಸಮಕಾಲೀನತೆ ವ್ಯಕ್ತವಾಗಿದೆಯೋ ಇಲ್ಲವೋ ನೋಡಬೇಕು. ಏಕೆಂದರೆ ನಿಜವಾದ ಕೃತಿ ಕೇವಲ ‘ಕಥಾವಸ್ತು’ವಲ್ಲ ; ಆ ವಸ್ತುವಿನ ಮೂಲಕ ಪ್ರಕಟವಾಗಿರುವ ಆ ಯುಗದ ಮನೋಧರ್ಮ, ಯುಗಮೌಲ್ಯಗಳು ಇತ್ಯಾದಿ. ಇದಕ್ಕಿಂತ ಮುಖ್ಯವಾಗಿ ಗಮನಿಸಬೇಕಾದದ್ದು ಕೃತಿಯ ಭಾಷೆ-ಶೈಲಿ. ಏಕೆಂದರೆ ಪ್ರತಿಯೊಂದು ಕಾಲವೂ ತನ್ನದೇ ಆದ ಅಭಿವ್ಯಕ್ತಿಯ ಮಾಧ್ಯಮಗಳನ್ನು ಸಮರ್ಥನಾದ ಕವಿಯ ಮೂಲಕ ರೂಪಿಸಿಕೊಳ್ಳುವುದರಲ್ಲಿಯೇ, ಅದು ತನ್ನಲ್ಲಾದ ಆಂತರಿಕ ಬದಲಾವಣೆಗಳನ್ನು ಪ್ರಕಟಪಡಿಸುತ್ತದೆ. ಇಂದಿಗೂ ವಿದ್ವಾಂಸರಾದವರು ಒಂದು ಕೃತಿಯ ಕಾಲನಿರ್ಣಯ ಮಾಡುವಲ್ಲಿ ಆ ಒಂದು ಕೃತಿಯಲ್ಲಿ ಕಂಡುಬರುವ ಭಾಷಾಪ್ರಯೋಗಗಳನ್ನು ಗಮನಿಸಿಯೆ ಇದು ಇಂಥ ಕಾಲಕ್ಕೆ ಸೇರಿದ್ದು ಎಂದು ಗುರುತಿಸಲು ಸಾಧ್ಯವಾಗಿದೆ. ಸಾಹಿತ್ಯದಲ್ಲಿ ಕಂಡುಬರುವ ಎಲ್ಲ ಚಟುವಟಿಕೆಗಳೂ ಮೂಲತಃ ಹೊಸ ಹೊಸತಾಗಿ ಭಾಷೆಯ ಸಾಧ್ಯತೆಗಳನ್ನು ಸೂರೆಮಾಡಿ, ಅಂದಂದಿನ ಸಂವೇದನೆಗಳಿಗೆ   ಅಭಿವ್ಯಕ್ತಿಯನ್ನು ನೀಡುವ ಸಾಹಸಗಳೇ ಆಗಿವೆ. ಆದಕಾರಣ ಸಮಕಾಲೀನ ಪ್ರಜ್ಞೆಯ ಹೊಳಹು, ಆಯಾ ಕವಿ ತನ್ನ ಅಂದಂದಿನ ಕಾಲಕ್ಕೆ ರೂಪಿಸಿಕೊಂಡ ಅಭಿವ್ಯಕ್ತಿಯ ಸಾಮಗ್ರಿಯಾದ ಭಾಷೆಯಲ್ಲಿದೆ ; ಹಾಗೆಯೇ ಆ ಭಾಷೆ ಎಷ್ಟರಮಟ್ಟಿಗೆ ಅಂದಿನ ಸಂವೇದನೆಗಳನ್ನು ಪ್ರಕಟಿಸಲು ಸಮರ್ಪಕವಾಗಿದೆ ಎನ್ನುವ ಅಂಶದಲ್ಲಿಯೂ ಇದೆ.

ಸಮಕಾಲೀನ ಪ್ರಜ್ಞೆಯ ಪರಿಶೀಲನೆಯಲ್ಲಿ, ಆ ಒಂದು ಯುಗದ ಸಾಮಾಜಿಕ ಧಾರ್ಮಿಕ, ರಾಜಕೀಯ ಬದಲಾವಣೆಗಳ ಪರಿಣಾಮದಿಂದ ನಿರ್ಮಿತವಾದ ಮೌಲ್ಯ  ಪ್ರಜ್ಞೆ ಮತ್ತು ಈ ಪ್ರಜ್ಞೆಯನ್ನು ಅಭಿವ್ಯಕ್ತಿಗೊಳಿಸಲು ಕವಿ ತಾನು ನಿರ್ಮಿಸಿಕೊಂಡ ನವನವೋಲ್ಲೇಖಶಾಲಿನಿಯಾದ ಭಾಷಾ ಶೈಲಿ ಇವುಗಳನ್ನು ಮೂಲಮಾನವನ್ನಾಗಿ    ಮಾಡಿಕೊಳ್ಳಬೇಕಾಗುತ್ತದೆ. ಶಕ್ತನಾದ ಕವಿ ಅತ್ಯಂತ ಪ್ರಾಚೀನವಾದ ವಸ್ತು- ವನ್ನಾಶ್ರಯಿಸಿಯೂ ತನ್ನ ಸಮಕಾಲೀನತೆಯನ್ನು ಪ್ರಕಟಿಸಬಲ್ಲ. ಕೇವಲ ಸಮಕಾಲೀನ ವಸ್ತುವನ್ನು ತೆಗೆದುಕೊಂಡು ಕೃತಿರಚನೆ ಮಾಡುವುದರಲ್ಲಿಯೆ, ಅಥವಾ ಸಮಕಾಲೀನ ಸಂಗತಿಗಳನ್ನು ಯಥಾವತ್ತಾಗಿ ನಿರೂಪಿಸುವುದರಲ್ಲಿಯೇ ಸಮಕಾಲೀನ ಪ್ರಜ್ಞೆ ಇದೆ ಎಂದು ಭಾವಿಸುವುದು ಅರ್ಧ ಸತ್ಯ ಮಾತ್ರ.

ಪ್ರತಿಯೊಬ್ಬ ಕವಿಯೂ ತನ್ನ ಸಮಕಾಲೀನ ಜೀವನಾನುಭವದಿಂದಲೆ ಕೃತಿ ರಚನೆ ಮಾಡುತ್ತಾನೆ ಎಂದರೂ, ಅದೂ ಪೂರ್ಣ ಸತ್ಯವಲ್ಲ. ಏಕೆಂದರೆ ನಿಜವಾದ ಕವಿ ನಮಗೆ ಯಾವುದೋ ಒಂದು ಕಾಲದ ‘ಸಮಕಾಲೀನತೆ’ಯಲ್ಲಿ ಬದುಕುತ್ತಿರುವಂತೆ ತೋರಿದರೂ ಅವನ ಹಿಂದೆ ಒಂದು ಜೀವಂತ ಇತಿಹಾಸವೆ ಅವನ ಸಾಹಿತ್ಯ ನಿರ್ಮಿತಿಯ ಪರಂಪರೆಯ ಒಂದು ಮುಂದುವರಿಕೆಯಾಗಿ ಕೆಲಸಮಾಡುತ್ತಿರುತ್ತದೆ. ಈ ಐತಿಹಾಸಿಕ ಪ್ರಜ್ಞೆಯಿಂದ ನಿಜವಾದ ಲೇಖಕ ಹೊರತಾದವನಲ್ಲ. ಅವನು ಎಷ್ಟರಮಟ್ಟಿಗೆ ಸಮಕಾಲೀನನೋ  ಅಷ್ಟೆ ಭೂತಕಾಲಕ್ಕೂ ಸಂಬಂಧಿಸಿದವನು. ಹಾಗೆಯೇ ಅವನ ಕೃತಿ ಭವಿಷ್ಯದ್ ಘಟನೆಗಳಿಗೆ ಒಡ್ಡಿದ ಕನ್ನಡಿ ; ಅವನ ಕೃತಿ ಒಂದು ಆಶಯ, ಒಂದು ಹಾರೈಕೆ. ಈ ಕೆಲವು ಹೇಳಿಕೆಗಳನ್ನು ನೋಡಿ :

1.    ಟಿ. ಎಸ್. ಇಲಿಯಟ್ ಹೇಳುತ್ತಾನೆ-ನಿಜವಾದ ಲೇಖಕನಿಗೆ ಐತಿಹಾಸಿಕ ಪ್ರಜ್ಞೆ (Historical sense) ಬೇಕು…. “this historical sense involves a perception, not only of the pastness of the past, but of its presence ; the historical sense compels a man to write not only with his own generation in his bones, but with a feeling that the whole of literature of Europe from Homer and within the whole of literature of his own country has a simultaneous existence and composes a simultaneous order. This historical sense which is a sense of the timeless and of the temporal together, is what makes a writer traditional.”[1]

2.    “All art including contemporary art, is historical”.[2]-Hellan Gardner.

3.    “Poets are the mirrors of the gigantic shadow which futurity casts upon the present.”[3]-Shelly

ಈ ಕೆಲವು ಮಾತುಗಳನ್ನು ನೋಡಿದರೆ ‘ಸಮಕಾಲೀನತೆ’ ಎಂಬ ಮಾತಿನ ಅರ್ಥವೇ ಬೇರೆಯಾಗಬೇಕಾಗುತ್ತದೆ. ಕವಿ ಮನುಷ್ಯ ವ್ಯಕ್ತಿಯಾಗಿ ಯಾವುದೋ ಒಂದು ಕಾಲದಲ್ಲಿ ಬದುಕುವಂತೆ ಕಂಡರೂ, ಅವನು ತನ್ನ ಕಾಲದ ಸತ್ವದಿಂದ ಬದ್ಧನಾದಂತೆ ಕಂಡರೂ, ವಾಸ್ತವವಾಗಿ ಅವನು ಹಿಂದು-ಇಂದು-ಮುಂದುಗಳನ್ನೊಳಗೊಳ್ಳುವ ಕಾಲಾತೀತ ವರ್ತಮಾನದ ನೆಲೆಗೆ ನಿಲ್ಲುತ್ತಾನೆ. ಓದುಗರ ದೃಷ್ಟಿಯಿಂದ ನೋಡಿದರಂತೂ ಯಾವ ಕಾಲದ ಕೃತಿಯೂ ನಮ್ಮ ಅನುಭವದಲ್ಲಿ, ನಮ್ಮ ಸಮಕಾಲೀನ  ಅನುಭವದಿಂದಲೇ ಆಸ್ವಾದ್ಯವಾಗುತ್ತದೆ. ಈ ಅರ್ಥದಲ್ಲಿ ನಮಗೆ ಎಲ್ಲ ಕವಿಗಳೂ ಸಮಕಾಲೀನರೇ !

ಹೀಗೆ ಕವಿ ನಿತ್ಯವರ್ತಮಾನಕ್ಕೆ ಸಲ್ಲಬೇಕಾದರೆ ಅವನು ತನ್ನ ಸಮಕಾಲೀನತೆಯನ್ನು ಎಷ್ಟರಮಟ್ಟಿಗೆ ಸರ್ವಕಾಲೀನವನ್ನಾಗಿಸುವ ಸಾಮರ್ಥ್ಯವನ್ನು ಪಡೆದಿದ್ದಾನೆ ಎನ್ನುವುದು ಮುಖ್ಯವಾದದ್ದು. ಇದೇ ಕಲಾ ರಹಸ್ಯ. ತನ್ನ ಅನುಭವದ ಕ್ಷಣವೊಂದನ್ನು ಅನಂತಕ್ಷಣದ ನಿಲುವಿನಲ್ಲಿ ತೇಲಿಬಿಡುವ, ತನ್ನೊಬ್ಬನ ಅನುಭವವನ್ನು ಅನೇಕರ ಆಸ್ವಾದ್ಯದ ವಸ್ತುವನ್ನಾಗಿ ಮಾಡುವ ಈ ಸಾಧಾರಣೀಕರಣ ಕೌಶಲದಲ್ಲಿಯೇ ಕವಿಕರ್ಮದ ಮಹತ್ವವಿರುವುದು.[4] ಹೀಗೆ ಸಂತತ ವರ್ತಮಾನಕ್ಕೆ ಅಥವಾ ಸಾರ್ವಲೀನತೆಗೆ ಏರದ ಸಮಕಾಲೀನತೆ ಕೇವಲ ಚರಿತ್ರೆಯ, ವೈಯಕ್ತಿಕ ಸಂಗತಿಗಳ ಸಾಲಿಗೆ ಸೇರಿಹೋಗಿ, ಸಂಶೋಧಕರ ಕುತೂಹಲದ, ಅಡಿಟಿಪ್ಪಣಿಯ ವಸ್ತುಗಳಾಗುತ್ತದೆ. ಹಳಗನ್ನಡ ಕಾವ್ಯಗಳಲ್ಲಿ  ಇಂಥ ಎಷ್ಟೋ ಚಾರಿತ್ರಿಕಾಂಶಗಳು, ವೈಯಕ್ತಿಕ ವಿಷಯಗಳು, ಮತಧರ್ಮಕ್ಕೆ ಮಾತ್ರ ಕಟ್ಟುಬಿದ್ದ ಸಾಮಗ್ರಿಗಳು ಓದುಗರನ್ನು ಕಂಗೆಡಿಸುತ್ತಾ ಕಸದ ಹಾಗೆ ಬಿದ್ದಿವೆ. ಅಂದಂದಿನ ‘ದೇಶಕಾಲ ವಿಶೇಷಾವೇಶ’ವನ್ನು ವಸ್ತುವನ್ನಾಗಿ ಉಳ್ಳ ಕೃತಿಗಳು ಅಂದಂದಿನ ಸಮಕಾಲೀನರ ಅನುಗ್ರಹ-ಆಗ್ರಹಗಳಿಂದ ಉಜ್ವಲವೆಂಬಂತೆ ತೋರಿ, ಅನಂತರದ ಕಾಲದವರಿಗೆ ಕೇವಲ ಇದ್ದಲು-ಬೂದಿಗಳಾಗಿ ಉಳಿದಿರುವ ನಿದರ್ಶನಗಳೂ ಉಂಟು. ಆದಕಾರಣ ಕೃತಿ ಸಮಕಾಲೀನ ಪ್ರಜ್ಞೆಯನ್ನು ಪ್ರಕಟಿಸುತ್ತದೆ ಎಂದರೆ ತನ್ನ ಕಾಲದವೇ ಆದ ಕೆಲವು ವೈಲಕ್ಷಣಗಳನ್ನು ಒಳಗೊಂಡೂ, ಎಲ್ಲ ಕಾಲಕ್ಕೂ ಹಳದಾಗದ ಸಾರ್ವತ್ರಿಕಾಂಶಗಳನ್ನು ಪ್ರಕಟಿಸುವ ನಿಲುವಿಗೆ ಏರುವ ಸಾಮರ್ಥ್ಯವನ್ನು ಪಡೆದಿದೆ ಎಂದು ಅರ್ಥ. ನಿಜವಾದ ಅರ್ಥದಲ್ಲಿ ಒಬ್ಬ ಲೇಖಕ ಸಮಕಾಲೀನನೂ ಹೌದು, ಸಾರ್ವಕಾಲೀನನೂ ಹೌದು. ಸಮಕಾಲೀನ, ಅವನು ತನ್ನ ಶತಮಾನದ ಪರಿಸರಕ್ಕೆ ಪಡಿಮಿಡಿಯುವ ಸಾಮರ್ಥ್ಯವನ್ನು ಪಡೆದಿದ್ದಾನೆಂಬುದಕ್ಕೆ ಅವನ ಕೃತಿ ಸಾಕ್ಷಿಯಾಗಿದೆ ಎನ್ನುವ ಅರ್ಥದಲ್ಲಿ ; ಅವನು ಸಾರ್ವಕಾಲೀನ, ಎಲ್ಲಾ ಕಾಲಕ್ಕೂ ನವನವೋನ್ಮೇಷ ಶಾಲಿಯಾಗುವ ಅರ್ಥ-ಭಾವ ಮೌಲ್ಯಗಳಿಗೆ ಸಾಂಕೇತಿಕವಾದ ವಿಶಿಷ್ಟಾಭಿವ್ಯಕ್ತಿಯನ್ನು ನಿರ್ಮಿಸಿದ್ದಾನೆ ಎಂಬ ಅರ್ಥದಲ್ಲಿ.

ಗತಿಬಿಂಬ ೧೯೬೯


[1] T. S. Eillot : Selected prose-page 23.

[2] Hellan gardner : The business of criticism-P. 17.

[3] Shelly : A defence of poetry  : English critical essays (19th century) :  Ed. Edmund D. Jones-P.138.

[4] The experience of a poem is the experience both of a moment and of a life time-T. S. Elliot : Selected Prose-page 48.