ಜನಪದ ದೈವಗಳ ವಿಶಿಷ್ಟ ಲಕ್ಷಣಗಳನ್ನು ಅವುಗಳ ಸಾಂಸ್ಕೃತಿಕ ಸಂಘರ್ಷದಲ್ಲಿ ಕಾಣಬಹುದಾಗಿದೆ. ಪಾವಿತ್ರ್ಯನಾಶದಂತಹ ದಿಟ್ಟ ಕ್ರಮಗಳನ್ನು ಜನಪದ ಹೆಣ್ಣು ದೈವಗಳು ತುಂಬಾ ಹಿಂದಿನಿಂದಲೇ ಕೈಕೊಂಡಿದುದನ್ನು ಗಮನಿಸಬಹುದಾಗಿದೆ. ಪಾತಿವೃತ್ಯದಂತಹ ಮೌಲ್ಯದ ಸಾಂಪ್ರದಾಯಿಕ ಗುಣಗಳನ್ನು ಪ್ರಶ್ನಿಸಿ, ಅದರ ಚಲನಶೀಲ ಮುಖವನ್ನು ಎತ್ತಿ ತೋರಿಸಿದ ಎಲ್ಲಮ್ಮನಂತಹ ಶಕ್ತಿ ದೇವತೆ ಇಂದು ಮುಖ್ಯವಾಗುವುದು ಇದೇ ಕಾರಣಕ್ಕಾಗಿ. ಜಮದಗ್ನಿ ತನ್ನ ಇಳಿವಯಸ್ಸಿನಲ್ಲಿ, ತರುಣಿ ಎಲ್ಲಮ್ಮನನ್ನು ಮದುವೆಯಾಗುತ್ತಾನೆ. ತನ್ನ ಯೌವನ ಸಹಜದ ವೈಭವದ ಜೀವನವನ್ನು ತೊರೆದ ಎಲ್ಲಮ್ಮ ಪತಿಪರಾಯಣಿಯಾಗಿ ಆತನ ಪೂಜೆ, ಜತ-ತಪದ ಬದುಕಿಗೆ ತನ್ನನ್ನು ಅರ್ಪಿಸಿಕೊಳ್ಳುತ್ತಾಳೆ. ಪೂಜೆಗೆಂದು ನೀರು ತರಲು ಹೋಗಿದ್ದ ಎಲ್ಲಮ್ಮ ಒಂದು ದಿನ ಗಂಧರ್ವನೊಬ್ಬ ತನ್ನ ಸ್ತ್ರೀಯೊಂದಿಗೆ ವಿಹರಿಸು ವುದನ್ನು ನೋಡುತ್ತಾ ನಿಲ್ಲುತ್ತಾಳೆ. ನಂತರ ಅವಳು ಆಶ್ರಮಕ್ಕೆ ಬರುತ್ತಾಳೆ. ಅವಳು ಚಂಚಲೆಯೆಂದು ತಿಳಿದು ಕೋಪಿಷ್ಠನಾದ ಜಮದಗ್ನಿ ಆಕೆಯನ್ನು ಆಶ್ರಮದಿಂದ ಹೊರ ಹಾಕುತ್ತಾನೆ. ಕುಷ್ಠರೋಗ ಬರಲೆಂದು ಶಾಪ ಕೊಡುತ್ತಾನೆ. ಕುಷ್ಠರೋಗಿಯಾದ ಎಲ್ಲಮ್ಮ ವನವನ ತಿರುಗತ್ತ, ನೋವನ್ನನುಭವಿಸುತ್ತ ಏಕನಾಥ ಮತ್ತು ಜೋಗಿನಾಥರೆಂಬ ಸಿದ್ಧರಲ್ಲಿ ಬೇಡಿಕೊಂಡು ತನ್ನ ರೋಗ ಕಳೆದುಕೊಂಡು ಮತ್ತೆ ಆಶ್ರಮಕ್ಕೆ ಬರುತ್ತಾಳೆ. ಆಗ ಜಮದಗ್ನಿ ಮಗ ಪರಶುರಾಮನನ್ನು ಕರೆದು ಆಕೆಯ ರುಂಡವನ್ನು ಕಡಿಯಲು ಆದೇಶ ಮಾಡುತ್ತಾನೆ. ಆಗ ಪರಶುರಾಮ ತಾಯಿಯ ರುಂಡವನ್ನೇ ಕಡಿಯುತ್ತಾನೆ. ಈ ಕಥೆಯಲ್ಲಿ  ವ್ಯಕ್ತವಾಗಿರುವ ಸಾಂಸ್ಕೃತಿಕ ಸಂಗತಿಗಳು ತುಂಬ ಮುಖ್ಯವಾಗಿವೆ. ಕಷ್ಟಗಳನ್ನು ಎದುರಿಸುತ್ತ, ಸಮಸ್ಯೆಗಳನ್ನು ಬಿಡಿಸಿಕೊಳ್ಳುತ್ತ ಬದುಕಲು ಜನಪದ ಸಂಸ್ಕೃತಿ ಬಯಸಿದರೆ, ಕಷ್ಟಗಳನ್ನೊಡ್ಡುತ್ತ, ಸಮಸ್ಯೆ ಗಳನ್ನು ಸೃಷ್ಟಿಸುತ್ತ ಮೆರೆಯುವ ಶಿಷ್ಟ ಸಂಸ್ಕೃತಿಯ ಅಟ್ಟಹಾಸ ನಿಚ್ಚಳವಾಗಿ ಕಾಣಿಸುತ್ತದೆ. ಎಲ್ಲ ಕಷ್ಟಗಳ ವಿರುದ್ಧ ಏಕಾಂಗಿಯಾಗಿ ದಿಟ್ಟತನದಿಂದ ಹೋರಾಡಿ, ಇಂದಿಗೂ ತನ್ನ ರುಂಡಗಳ ಮೂಲಕವೇ ಪೂಜೆಗೊಳ್ಳುತ್ತಿರುವ ಎಲ್ಲಮ್ಮ, ಾಂಸ್ಕೃತಿಕ ಸಂಘರ್ಷದ ಹೊಸ ಮೌಲ್ಯವಾಗಿ ಕಾಣಿಸುತ್ತಾಳೆ. ತನ್ನ ನಿಷ್ಠೆ, ತ್ಯಾಗ, ದಿಟ್ಟತನದಂತಹ ಗುಣಗಳಿಂದ ಸಂಪ್ರದಾಯ ವನ್ನು ಮೀರಿ ಚಲನಶೀಲಳಾಗಿ ಕಾಣಿಸುತ್ತಾಳೆ.

ಜನಪದ ಶಕ್ತಿದೇವತೆಗಳಲ್ಲಿಯೇ ಎರಡು ಭಿನ್ನವಾದ ಪರಂಪರೆಯನ್ನು ಕಾಣಬಹುದಾಗಿದೆ. ಒಂದು ಎಲ್ಲಮ್ಮನ ಪರಂಪರೆ ಮತ್ತೊಂದು ಮಾರೆಮ್ಮನ ಪರಂಪರೆ. ಎಲ್ಲಮ್ಮ ದಕ್ಷಿಣ ಭಾರತದ ದ್ರಾವಿಡ ಸಂಸ್ಕೃತಿಯ ಪ್ರತೀಕವಾಗಿ ಕಂಡರೆ, ಮಾರೆಮ್ಮೆ ಉತ್ತರ ಭಾರತದ ಆರ್ಯ ಸಂಸ್ಕೃತಿಯ ಪಳೆಯುಳಿಕೆಯಾಗಿ ಕಾಣಿಸುತ್ತಾಳೆ. ವೈದಿಕನಾದ ಜಮದಗ್ನಿ ಎಲ್ಲಮ್ಮನನ್ನು ಸಂಹರಿಸಲು ಕಾರಣವಾದರೆ, ಮಾರೆಮ್ಮನ ಕಥೆಯಲ್ಲಿ ವೈದಿಕಳಾದ ಮಾರೆಮ್ಮ, ತನ್ನ ಗಂಡ ದಲಿತರವನೆಂದು ಗೊತ್ತಾದ ಕೂಡಲೇ ಕೊಲ್ಲಿಸುತ್ತಾಳೆ. ಎರಡು ಸಂಸ್ಕೃತಿಗಳಲ್ಲಿರುವ ನೇರ ಸಂಘರ್ಷಗಳನ್ನಿಲ್ಲಿ ಕಾಣಬಹುದಾಗಿದೆ. ಎಲ್ಲಮ್ಮನ ಕಥೆಯಲ್ಲಿ, ಶೂದ್ರಳಾದ ಎಲ್ಲಮ್ಮ ಮೇಲ್‌ಜಾತಿಯ ಗಂಡನಿಂದ ಹತಳಾಗಿ, ರುಂಡದಲ್ಲಿದ್ದುಕೊಂಡೇ ಜೀವಸೆಲೆಯಾಗಿ ಹರಿಯುವ ರೀತಿ ಗಮನ ಸೆಳೆದರೆ; ಮಾರೆಮ್ಮನ ಕಥೆಯಲ್ಲಿ, ಮೇಲ್ ಜಾತಿಯ ಮಾರೆಮ್ಮನಿಂದ ಹತನಾದ ದಲಿತ, ಇಂದು ಆಸಾದಿಯಾಗಿ ಪ್ರತಿಭಟಿಸುವ ರೀತಿ ಕುತೂಹಲಕಾರಿಯಾಗಿದೆ. ಆರ್ಯ ಸಂಸ್ಕೃತಿ ಸಂಹಾರದ ಸಂಸ್ಕೃತಿಯಾಗಿ ಕಂಡರೆ, ದ್ರಾವಿಡ ಸಂಸ್ಕೃತಿ ಸಜೀವ ಸಂಸ್ಕೃತಿಯಾಗಿ ಕಾಣಿಸುತ್ತದೆ. ಸಂಹಾರಕ್ಕಾಗಲಿ, ಸಜೀವತೆಗಾಗಲಿ ಹೆಣ್ಣು-ಗಂಡುಯೆಂಬುದು ಮುಖ್ಯವಾಗದೆ ಸಂಸ್ಕೃತಿ ಮುಖ್ಯವಾಗುತ್ತದೆ, ಸಂಸ್ಕಾರ ಮುಖ್ಯವಾಗುತ್ತದೆ ಯೆಂಬ ಸತ್ಯ ಇದರಿಂದ ತಿಳಿದು ಬರುತ್ತದೆ.

ಮಾರೆಮ್ಮನ ಕಥೆಯುದ್ದಕ್ಕೂ ವರ್ಣಸಂಘರ್ಷವನ್ನು ಕಾಣಬಹುದಾಗಿದೆ. ತಾನು ದಲಿತನೆಂದು ಗೊತ್ತಾದ ಕೂಡಲೇ ಮಾರೆಮ್ಮನ ಗಂಡ, ಕೋಣದ ರೂಪ ಧರಿಸುವುದು, ಆ ಕೋಣವನ್ನು ಮಾರೆಮ್ಮ ಸಂಹರಿಸಲು ಹೇಳುವುದು ಇಲ್ಲೆಲ್ಲಾ ವರ್ಣ ಪ್ರಾಬಲ್ಯದ ಭಯಾನಕ ಪ್ರಸಂಗಗಳನ್ನು ಚಿತ್ರಿಸಲಾಗಿದೆ. ಜಾತಿ ವಿನಾಶ, ದ್ರಾವಿಡ ಸಂಸ್ಕೃತಿಯ ಮೂಲಗುಣವಾದರೆ, ಜಾತಿ ಸೃಷ್ಟಿ-ಜಾತಿನಿಂದನೆ-ಜಾತೀಯತೆಯ ಆಚರಣೆ ಆರ್ಯ ಸಂಸ್ಕೃತಿಯ ಅಭ್ಯಾಸವಾಗಿದೆ. ಇಂತಹ ಜಾತಿನಾಶದಂತಹ, ಪಾವಿತ್ರ್ಯನಾಶದಂತಹ ಪರಿಕಲ್ಪನೆಗಳನ್ನು ಜನಪದ ದೈವಗಳಲ್ಲಿ ಸೂಕ್ಷ್ಮವಾಗಿ ಕಾಣಬಹುದಾಗಿದೆ.

ವರ್ಗಶೋಷಣೆಗೆ ಗುರಿಯಾದ ದೇವತೆಯೆಂದರೆ ಮಾತಂಗಿ. ಈಕೆ ದಲಿತ ವರ್ಗದಿಂದ ಬಂದ ಬಡವಿ. ಹುಲಿಗೆಮ್ಮನೊಂದಿಗೆ ಹೋಗಿ ಹಸಿವೆಯಾದಾಗ ಗೌಡರ ತೋಟದ ಬದನೆಕಾಯಿ ಕದಿಯುತ್ತಾಳೆ. ಆಗ ಬೆನ್ನಟ್ಟಿ ಬಂದ ಗೌಡರು ಈಕೆಗೆ ಹೊಡೆದು ಬಡಿದು ಮುಂದೆಲೆ ಕೊಯ್ದು ಮಾನ ಕಳೆಯುತ್ತಾರೆ. ಈ ಪ್ರಸಂಗದ ವಿವರಗಳನ್ನು ಮುನಿರಾಬಾದದ ಹುಲಿಗೆಮ್ಮನ ಕಥೆಯಲ್ಲಿ ಕಾಣಬಹುದಾಗಿದೆ.

ಮೇಲ್ವರ್ಗದವರು ಸಣ್ಣಸಣ್ಣ ಕಾರಣಗಳಿಗಾಗಿ ಕೆಳವರ್ಗದವರನ್ನು ಹೇಗೆ ಶೋಷಣೆ ಮಾಡುತ್ತಿದ್ದರು, ಶ್ರೀಮಂತರಾದವರು ಬಡವರನ್ನು ಹೇಗೆ ಹಿಂಸಿಸುತ್ತಿದ್ದರೆಂಬ ವಿವರಗಳು ಈ ದೇವತೆಗಳ ಅಧ್ಯಯನದಿಂದ ಪ್ರಕಟವಾಗುತ್ತಾ ಹೋಗುತ್ತವೆ. ಬದನೇಕಾಯಿ ಕದ್ದದ್ದಕ್ಕೆ ಮಾನ ಕಳೆದುಕೊಂಡ ಮಾತಂಗಿ ಇಂದಿಗೂ ಹುಲಿಗೆಮ್ಮನ ಗುಡಿ ಎದುರು ಕಲ್ಲಾಗಿ ನಿಂತಿದ್ದಾಳೆ. ಹುಲಿಗೆಮ್ಮನಿಗಿಂತ ಮೊದಲು ಮಾತಂಗಿಗೆ ಪೂಜೆ ಸಲ್ಲುತ್ತದೆ.

ಮೈಲಾರಲಿಂಗನ ಕಥೆಯೂ ಕೂಡ ಈ ದೃಷ್ಟಿಯಿಂದ ಕುತೂಹಲ ಕೆರಳಿಸುತ್ತದೆ. ಮೈಲಾರಲಿಂಗ ಇಲ್ಲಿ ಮೇಲ್‌ಜಾತಿಯ ಕನ್ಯೆಯನ್ನು ಮದುವೆಯಾಗುತ್ತಾನೆ ಮತ್ತು ವೆಂಕಟರ ಮಣನಿಗೆ ಪಂಗನಾಮ ಹಾಕಿ ಏಳುಕೋಟಿ ಏಳು ಕೋಟಿ ಎಂದು ಕಡೆಗಾಗುತ್ತಾನೆ. ಗಂಗಿಮಾಳವ್ವನಂತಹ ಸುಂದರಿಯನ್ನು ಮದುವೆಯಾಗುವುದು ಮತ್ತು ಹಣ ಕೊಡುತ್ತೇನೆಂದು ಸಾಲ ಪಡೆದು ಶ್ರೀಮಂತನನ್ನು ಕಾಡಿಸುವುದು. ಈ ಘಟನೆಗಳನ್ನು ಗಮನಿಸಿದಾಗ ಮೈಲಾರ ಲಿಂಗನ ಕಥೆಯಲ್ಲಿ ವರ್ಗಸಂಘರ್ಷ ಹಾಗೂ ವರ್ಣಸಂಘರ್ಷದ ವಿವಿಧ ಮುಖಗಳನ್ನು ಕಾಣಬಹುದಾಗಿದೆ. ವಿಶಿಷ್ಟವೆಂದರೆ ಪ್ರಮುಖ ಧರ್ಮಗಳಾದ ಜೈನ-ವೀರಶೈವ-ವೈಷ್ಣವಗಳು ಒಂದಲ್ಲ ಒಂದು ರೀತಿಯಿಂದ ಮೈಲಾರನನ್ನು ಪುರಾಣೀಕರಣಗೊಳಿಸುವೆ. ಇಷ್ಟೆಲ್ಲ ಧರ್ಮಗಳ ಮೂಲಕ ವಿವಿಧ ಬಗೆಯ ಚರ್ಚೆಗೊಳಗಾದ ಮೈಲಾರಲಿಂಗ, ಎಲ್ಲಮ್ಮನ ಸೋದರನಾಗಿ ರುವುದು ಮತ್ತೊಂದು ವಿಶೇಷ. ಗಂಗಿಮಾಳವ್ವ ವೀರಶೈವಳೆಂದು ಕೆಲವು ಕಥೆ ಹೇಳಿದರೆ, ಕುರುಬರವಳೆಂದು ಕೆಲವು ಕಥೆ ಹೇಳುತ್ತವೆ. ಅನೇಕ ಪತ್ನಿಯರನ್ನು ಮೈಲಾರಲಿಂಗ ಹೊಂದಿದ್ದ ನೆಂಬ ವಿಷಯ ಇಲ್ಲಿ ಮುಖ್ಯವಾಗದೆ ಶ್ರೀಮಂತಿಕೆ ಮತ್ತು ಜಾತಿಯ ವಿರುದ್ಧ ಪುಟಿದೆದ್ದ ಮೈಲಾರಲಿಂಗನ ವಿವಿಧ ಲೀಲೆಗಳು ಇಲ್ಲಿ ಪ್ರಧಾನ ಸ್ಥಾನ ಪಡೆಯುತ್ತವೆ. ಎಲ್ಲಮ್ಮ ಮತ್ತು ಮೈಲಾರಲಿಂಗ ಇವರ ಸಾಂಸ್ಕೃತಿಕ ಬದುಕು ತುಂಬ ಸಂಕೀರ್ಣವಾದುದು. ಇದನ್ನು ಹೀಗೇ ಎಂದು ಖಡಾಖಂಡಿತವಾಗಿ ಹೇಳಲಿಕ್ಕಾಗುವುದಿಲ್ಲ. ಅನೇಕ ಐತಿಹ್ಯಗಳು, ವಿವಿಧ ಪುರಾಣ ಕಥೆಗಳು ಅನೇಕ ಗೋಜಲುಗಳನ್ನು ಸೃಷ್ಟಿಸಿವೆ. ಆದರೆ ಉಳಿದ ದೇವತೆಗಳಿಗೆ ಹೋಲಿಸಿದರೆ ಈ ದೈವಗಳು ತುಂಬ ಚಾಲೇಂಜಿಂಗ್ ಆಗಿ ಕಾಣಿಸುತ್ತವೆ. ಮಂಟೇಸ್ವಾಮಿ ಮತ್ತು ಮಲೆಮಾದೇಶ್ವರರ ಸಾಂಸ್ಕೃತಿಕ ಜೀವನವೂ ಕುತೂಹಲಕಾರಿಯಾಗಿದೆ.

ಜನಪದ ದೈವಗಳ ವಿಶಿಷ್ಟ ಲಕ್ಷಣಗಳನ್ನು ಹೀಗೆ ಬೇರೆ ಬೇರೆ ನೆಲೆಗಳ ಮೂಲಕವೂ ಗುರುತಿಸಲು ಸಾಧ್ಯವಿದೆ. ಪ್ರಮುಖ ಲಕ್ಷಣಗಳೆಂದರೆ ಈ ದೈವಗಳು ಸ್ಥಳೀಯ ಮೂಲದಿಂದ ಬಂದವುಗಳು. ಆದಿಯಲ್ಲಿದ್ದ ದ್ರಾವಿಡ ಸಂಸ್ಕೃತಿಯನ್ನು ಮೈಗೂಡಿಸಿಕೊಂಡು, ಮಾತೃಪ್ರಧಾನ ಪರಂಪರೆಯಲ್ಲಿ ಬೆಳೆದವುಗಳಾಗಿವೆ. ಬಹುತೇಕ ದೈವಗಳು ಮಾನವ ಮೂಲದಿಂದ ಬಂದವು ಗಳೇ ಆಗಿವೆ. ಮನುಷ್ಯ ಪ್ರಯತ್ನಕ್ಕೆ, ಮಾನವ ಸಾಧನೆಗೆ ಗೌರವ ತಂದ ಪ್ರಸಂಗಗಳು ಇವಾಗಿವೆ. ಇಲ್ಲಿ ವ್ಯಕ್ತಿ-ಶಕ್ತಿಯಾಗಿ, ಜೀವ-ದೇವನಾಗಿ, ನರ-ಹರನಾಗಿ ಬೆಳೆದುದರ ಬೆಳವಣಿಗೆ ಯನ್ನು ಕಾಣಬಹುದಾಗಿದೆ.

ಜನಪದ ದೈವಗಳ ವೈಶಿಷ್ಟ್ಯವೆಂದರೆ ಇವು ಜಾತ್ಯಾತೀತವಾಗಿವೆ, ಭಾಷಾತೀತವಾಗಿವೆ. ಇಲ್ಲಿಯ ಪೂಜಾರಿಗಳೆಲ್ಲ ಬ್ರಾಹ್ಮಣೇತರರು, ಕೆಳವರ್ಗದಿಂದ, ದುಡಿವ ವರ್ಗದಿಂದ ಬಂದವ ರಾಗಿದ್ದಾರೆ. ಮಡಿವಂತಿಕೆಯನ್ನು ತೊರೆದು ಸರಳತೆಯನ್ನು ಮೈಗೂಡಿಸಿಕೊಂಡಿರುವ ಈ ದೈವಗಳು ಪ್ರತಿಷ್ಠಿತ ಸಂಸ್ಕೃತ ಭಾಷೆಯನ್ನು ಕೈಬಿಟ್ಟು ಸ್ಥಳೀಯ-ಪ್ರಾದೇಶಿಕ ಭಾಷೆಗಳಲ್ಲಿಯೇ ಮಾತನಾಡುತ್ತವೆ. ಆಯಾ ಪ್ರದೇಶದ ಭಕ್ತರ ಭಾಷೆಯೇ ಈ ದೈವಗಳ ಭಾಷೆಯಾಗಿದೆ. ಇವುಗಳ ಪೂಜಾ ವಿಧಾನ ಬಹು ಸರಳವಾದುದು. ನಿತ್ಯನೇಮಗಳಿಲ್ಲ, ಮಡಿ-ಮೈಲಿಗೆಗಳಿಗಿಲ್ಲ. ನೆನೆದವರ ಮನದಲ್ಲೆಂಬಂತೆ ಬಡವರ ಬೆಳಕಾಗಿ, ಶೋಷಿತರ ಆಸರೆಯಾಗಿ ಈ ದೈವಗಳಿರು ವುದನ್ನು ಕಾಣಬಹುದಾಗಿದೆ. ವರ್ಣ-ವರ್ಗಗಳ ಭೇದವನ್ನು ತೊಡೆದು ಭಾವೈಕ್ಯತೆಯನ್ನು ಮೂಡಿಸುವ, ಸೌಹಾರ್ದತೆಯನ್ನು ಕಲಿಸುವ, ಸಾಮರಸ್ಯವನ್ನು ಬೆಳೆಸುವ ಜನಪದ ದೈವಗಳು ಸಾಂಸ್ಕೃತಿಕ ಅಧ್ಯಯನದ ದೃಷ್ಟಿಯಿಂದ ತುಂಬ ಮುಖ್ಯವಾಗಿವೆ.