ಹೈನುಗಾರಿಕೆಗೆ ಒಳ್ಳೆಯ ಹಾಲಿನ ದನವೇ ಮೂಲ ಬಂಡವಾಳ. ಅದಿಲ್ಲದೆ. ಮತ್ತೇನಿದ್ದರೂ ವ್ಯರ್ಥ. ಹಿಂಡುವ ದನಗಳ ಉತ್ಪಾದನೆಗೆ ಕೃತಕ ಗರ್ಭಧಾರಣೆಯ ಮೂಲಕ ಮಿಶ್ರತಳಿ  ಸಂವರ್ಧನೆಯೇ ಮುಕ್ತ ಮಾರ್ಗ. ತನ್ನದೇ ದನಗಳಿಂದ ಉತ್ತಮ ತಳಿಯ ಹಸುಗಳನ್ನು ಪಡೆಯುವುದು ಇದರಿಂದ ಸಾಧ್ಯ. ಇದು ವೈಜ್ಞಾನಿಕವಾದ, ಆದರೆ ಹೆಚ್ಚು ಸಮಯ ಬೇಡುವ ದಾರಿ. ಇಲ್ಲಿ ರೈತ ತಾನು ಎಂತಹ ದನದ ರಕ್ತವನ್ನು ತನ್ನ ಹಿಂಡಿನಲ್ಲಿ ಸೇರಿಸುತ್ತಿದ್ದೇನೆಂದು ಹೆಚ್ಚು ನಿಖರವಾಗಿ ತಿಳಿಯಲು ಸಾಧ್ಯ.

ಉತ್ತಮ ಹಿಂಡುವ ದನವನ್ನು ಕೊಂಡುಕೊಂಡು ತಮ್ಮ ಹಿಂಡು ಬೆಳೆಸುವುದು ಇನ್ನೋಂದು ದಾರಿ. ಅನಿವಾರ್ಯವಾದಾಗ ಮಾತ್ರ ಹಿಡಿಯಬೇಕಾದ ದಾರಿ. ಹೀಗೆ ಕೊಂಡ ದನಗಳು ತಮ್ಮ ಗುಣ ಅವಗುಣಗಳನ್ನು ತಾವಷ್ಟೇ ಪ್ರಕಟಿಸದೆ ತಮ್ಮ ಸಂತಾನದಲ್ಲೂ ಬಿಟ್ಟು ಹೋಗುವುದರಿಂದ ಒಳ್ಳೆಯ ಜಾನುವಾರಿನ ಆಯ್ಕೆ ಮುಂಬರುವ ವರ್ಷಗಳ ಲಾಭ ನಷ್ಟಗಳನ್ನು ನಿರ್ಧರಿಸುತ್ತದೆ. ಹಾಗಾಗಿ ಸರಿಯಾದ ಜಾನುವಾರಿನ ಆಯ್ಕೆ. ಈ ದಾರಿ ಸಫಲವಾಗಲು ಮುಖ್ಯ ಕಾರಣ. ಉತ್ತಮ ಹಾಲಿನ ದನಗಳನ್ನು ಗುರುತಿಸುವ ಜ್ಞಾನವಿದ್ದಲ್ಲಿ ಇದು ಸುಲಭ. ಇಲ್ಲದಿದ್ದಲ್ಲಿ ಮೋಸ, ಮುಂದೆ ನಷ್ಟ.

ಹಿಂಡುವ ದನದ ಗುಣಗಳೆಂದು ಸಾಂಪ್ರದಾಯಿಕವಾಗಿ ವರ್ಣಿತವಾಗುವ ಸುಳಿ, ಬಾಲ, ಕೋಡುಗಳ ಲಕ್ಷಣಗಳಲ್ಲಿ ಹಲವು ಬಹುಮಟ್ಟಿಗೆ ಕಲ್ಪಿತವೇ ಹೊರತು ವೈಜ್ಞಾನಿಕವಾದವಲ್ಲ.

ಶ್ರೇಷ್ಠ ದನಗಳ ಗುಣಲಕ್ಷಣಗಳು

೧. ತಳಿ: ಜರ್ಸಿ ಇಲ್ಲವೇ ಹೋಲ್ ಸ್ಟೀನ್ (ಎಚ್. ಎಫ್) ಜಾತಿಯ ಮಿಶ್ರತಳಿಗಳು ಹಾಲಿಗೆ ಉತ್ತಮ. ಸಣ್ಣ ತಳಿಯಾದ್ದರಿಂದ ಗುಡ್ಡಗಾಡು ಪ್ರದೇಶಕ್ಕೆ, ಸಣ್ಣ ಹಿಡುವಳಿದಾರರಿಗೆ ಜರ್ಸಿ ಮಿಶ್ರ ತಳಿಯೇ ಸರಿ. ಹಾಲಿನಲ್ಲಿ ಕೊಬ್ಬಿನಂಶವೂ ಎಚ್. ಎಫ್. ಗಿಂತ ಹೆಚ್ಚು ನಿರ್ವಹಣೆ ಸುಲಭ.

ಕೊಬ್ಬಿನಂಶಕ್ಕಿಂತ ಹಾಲಿನ ಇಳುವರಿಯೇ ಮುಖ್ಯವಾದಲ್ಲಿ ಎಚ್. ಎಫ್. ಮಿಶ್ರತಳಿ ಸಾಕಬಹುದು. ಎಚ್. ಎಫ್. ನಲ್ಲಿ ಆಹಾರದ ಅವಶ್ಯಕತೆ ಹೆಚ್ಚಾಗಿದ್ದು. ಪೋಷಣೆ ವೆಚ್ಚವು ಹಾಲಿನ ಇಳುವರಿಗಿಂತ ಹೆಚ್ಚಾಗುತ್ತದೆ. ಮಿಶ್ರ ತಳಿಯಲ್ಲಿ ವಿದೇಶಿ ರಕ್ತ ಶೇ. ೫೦ ರಿಂದ ೭೫ ರೊಳಗೆ ಇರಬೇಕು. ಹೆಚ್ಚು ಹಾಲಿನ ಉತ್ಪಾದನೆಗಾಗಿ ವಿದೇಶಿ ರಕ್ತ ಹೆಚ್ಚಿಸಿದಲ್ಲಿ ಸಮಸ್ಯೆಗಳಿಗೆ ಆಹ್ವಾನ ಕೊಟ್ಟಂತೆ.

ಎಮ್ಮೆಗಳಲ್ಲಿ ಸೂರ್ತಿ ತಳಿ ಸರಿ. ಮುರ್‌ಆ ದೊಡ್ಡ ತಳಿಯಾದ್ದರಿಂದ ನಿರ್ವಹಣೆಗೆ ಹೆಚ್ಚು ಮುತುವರ್ಜಿ ಬೇಕು. ಖರ್ಚು ವೆಚ್ಚವು ಹೆಚ್ಚು.

೨. ಆರೋಗ್ಯ: ಆರೋಗ್ಯವಂತ ದನಗಳು ಬೇಕು ಎಂಬು‌ದರಲ್ಲಿ ಎರಡು ಮಾತಿಲ್ಲ. ಜಾನುವಾರಿನ ಆರೋಗ್ಯವನ್ನು ಸೂಚಿಸುವ, ತಜ್ಞರಲ್ಲದ ಸಾಮಾನ್ಯರ ದೃಷ್ಟಿಗೂ ಗೋಚರವಾಗುವ ಹಲವು ಲಕ್ಷಣಗಳಿವೆ.

 • ಹೊಳೆಯುವ ಕಣ್ಣುಗಳ ಚುರುಕು ನೋಟ ಇರಬೇಕು.
 • ಒದ್ದೆಯಾಗಿರುವ ಮೇಲ್ದುಟಿ ಇರಬೇಕು. ಒಣಗಿದ ಮೇಲ್ದುಟಿ ಜ್ವರ, ಅನಾರೋಗ್ಯವನ್ನು ಸೂಚಿಸುತ್ತದೆ.
 • ಶಾಂತವಾಗಿ ನಿಂತು, ಮಲಗಿ, ಮೆಲುಕು ಹಾಕುತ್ತಿರುವ ದನ ಆರೋಗ್ಯವಂತವಾಗಿರುತ್ತದೆ.
 • ದೇಹ ತೀರಾ ಬಡಕಲೂ ಅಲ್ಲದ ಕೊಬ್ಬಿರುವುದೂ ಅಲ್ಲದಂತೆ ಇರಬೇಕು.
 • ತಿಂಗಳು ತುಂಬಿದ ಗರ್ಭದಲ್ಲಿರುವುದರ ಹೊರತು ಒಟ್ಟು ಉಳಿದ ಸಂದರ್ಭದಲ್ಲಿ ಪಕ್ಕೆಲುಬುಗಳು ಕಾಣುತ್ತಿರುತ್ತವೆ. ಹಾಗಂತ ಎಲುಬಿನ ಹಂದರವಲ್ಲ. ತೀರ ಕೊಬ್ಬಿದ ದನ ತಿಂದದ್ದನ್ನು ಹಾಲು ಉತ್ಪಾದನೆ ಮಾಡುವ ಬದಲು ಕೊಬ್ಬಾಗಿ ಪರಿವರ್ತಿಸುವುದೇ ಜಾಸ್ತಿ.
 • ಓಡಾಟ ಸರಾಗವಾಗಿರುತ್ತದೆ. ತೊಂದರೆಯಿಲ್ಲದೆ ದಾರಿಯಲ್ಲಿ ಏರು ಹತ್ತಿ ಇಳಿಯಬಲ್ಲವು, ಮಲಗಿ, ಏಳಬಲ್ಲವು.
 • ಚರ್ಮ ಹೊಳಪಾಗಿದ್ದು, ಕೂದಲು ನುಣುಪಾಗಿರುತ್ತದೆ. ಒಠಟಾದ ಚರ್ಮ, ಕೂದಲು ಅವಲಕ್ಷಣವಷ್ಟೇ ಅಲ್ಲ. ಅನಾರೋಗ್ಯದ ಲಕ್ಷಣ ಕೂಡ.

೩. ದೇಹ: ಒಳ್ಳೆಯ ಹಾಲಿನ ದನದ ದೇಹ ಮೂರು ಕಡೆಗಳಿಂದ ತ್ರಿಕೋನಾಕಾರದಲ್ಲಿ (ಬೆಣ್ಣೆಯಂತೆ) ಕಾಣುತ್ತದೆ.

ಅ) ಪಕ್ಕದಿಂದ ನೋಡಿದಾಗ ಮೇಲೆ, ಬೆನ್ನಿನ ಕಡೆ ಅಗಲವಾಗಿ ಕೆಲಗಡೆ ಸಪುರ ಕಡಿಮೆ ಅಗಲ ಇರುವ ತ್ರಿಕೋನಾಕಾರವಾಗಿರುತ್ತದೆ.

ಆ) ಮೇಲ್ಗಡೆಯಿಂದ ನೋಡಿದಾಗ ಹೆಗಲಿನ ಕಡೆ ತೆಳುವಾಗಿದ್ದು ಹಿಂದುಗಡೆ ಬಂದಂತೆ ಅಗಲವಾಗಿರುತ್ತದೆ.

ಇ) ಹಿಂದಿನಿಂದ ನೋಡಿದಾಗ, ಮೇಲ್ಗಡೆ ಅಗಲವಾ‌ಗಿದ್ದು, ಕೆಳಗಡೆ ಚೂಪಾಗಿರುತ್ತದೆ ಪೃಷ್ಠದ ಎರಡೂ ಬದಿಯ ಮೂಳೆಗಳ ಅಂತರ ಹೆಚ್ಚಿದಷ್ಟೂ ಒಳ್ಳೆಯದು. ಕೆಚ್ಚಲಿಗೆ ಸಾಕಷ್ಟು ಸ್ಥಳಾವಕಾಶವಿರುತ್ತದೆ.

೪. ಕಾಲುಗಳು : ಉದ್ದುದ್ದ ಕಾಲುಗಳು ಸಾಮಾನ್ಯವಾಗಿ ಕೆಲಸದ ಜಾತಿಯ ಲಕ್ಷಣ, ಹಾಲಿನ ದನಗಳಲ್ಲಿ ದೇಹಕ್ಕೆ ಹೋಲಿಸಿದರೆ ಕಾಲುಗಳು ಗಿಡ್ಡವಾಗಿರುತ್ತವೆ.

೫. ಕೆಚ್ಚಲು: ಜಾನುವಾರಿನ ಲಕ್ಷಣಗಳೇನೇ ಇರಲಿ ಕೊನೆಗೂ ಹಾಲು ಉತ್ಪಾದನೆಯಾಗ ಬೇಕಾದ್ದು ಇಲ್ಲಿಯೇ. ಕೆಚ್ಚಲನ್ನು ಬರೀ ಕಣ್ಣಿನಲ್ಲೇ ಅಳೆದು ಬಿಡಬೇಡಿ, ಮುಟ್ಟಿ ನೋಡಿ, ತಟ್ಟಿ ಭಾರ ಅಳೆದು ನೋಡಿ, ಕೆಚ್ಚಲಿನ ಚರ್ಮ ಮೃದುವಾಗಿ ತೆಳುವಾಗಿದ್ದರೆ ಚೆನ್ನ. ನವಿರಾದ ರೇಷ್ಮೆಯಂತಹ ಕೂದಲು ಕೆಚ್ಚಲ ಮೇಲಿರಬೇಕು. ಮೊಲೆಗಳು ಒಂದೇ ಪ್ರಮಾಣದಲ್ಲಿದ್ದು ಅವುಗಳ ನಡುವಿನ ದೂರವೂ ಒಂದೇ ರೀತಿ ಇರುತ್ತದೆ. ತೀರ ಹತ್ತಿರ ಹತ್ತಿರವಿರುವ ಮೊಲೆಗಳು ಸರಿಯಲ್ಲ. ಒಳ್ಳೆಯ ದನದ ಕೆಚ್ಚಿಲಿನ ನಾಲ್ಕು ಭಾಗಗಳನ್ನು ಸ್ಪಷ್ಟವಾಗಿ ಗುರುತಿಸಬಹುದು. ಕೆಚ್ಚಲು ಜೋತುಬಿದ್ದಿರದೇ ದೇಹದ ಭಾಗವೇ ಆಗಿ ಮೇಲ್ಗಡೆ ಚೆನ್ನಾಗಿ ಹೊಂದಿಕೊಂಡಿರುತ್ತದೆ.

ಮೊಲೆಯ ತುದಿ ನೆಲದಿಂದ ಒಂದೂವರೆ ಅಡಿ ಮೇಲಿದ್ದರೆ, ಗಾಯಗಳಾಗುವ ಸಾಧ್ಯತೆ ಕಡಿಮೆ. ನೆಲಕ್ಕೆ ಹತ್ತಿರವಿರುವ ಮೊಲೆ ಜೋಲು ಕೆಚ್ಚಲನ್ನು ಸೂಚಿಸುತ್ತದೆ. ಜೋಲು ಕೆಚ್ಚಲು ಬೇಡ. ಹಾಲಿನ ನರಗಳು (ಇವು ನರಗಳಲ್ಲ, ರಕ್ತನಾಳಗಳು) ಕೆಚ್ಚಲಿನ ಮೇಲೆ ಬಲೆಯಂತೆ ಹರಡಿರುತ್ತವೆ. ದೊಡ್ಡದಾಗಿ, ಅಂಕುಡೊಂಕಾಗಿದ್ದಷ್ಟು ಹಾಲಿನ ಉತ್ಪಾದನೆಗೆ ಬೇಕಾದ ರಕ್ತ ಸಂಚಾರ ಒದಗಿಸಲು ಅನುಕೂಲ.

ಕೆಚ್ಚಲಿನಲ್ಲಿ ಗಂಟಾಗಲೀ, ನೋವಿನ ಲಕ್ಷಣವಾಗಲೀ ಇರಬಾರದು.

೬. ಹಾಲಿನ ಉತ್ಪಾದನೆ: ಹಾಲನ್ನು ನಿಮ್ಮ ಎದುರಿಗೇ ಕರೆದುನೋಡಿ. ಬೆಳಿಗ್ಗೆ ಸಾಯಂಕಾಲ ಕನಿಷ್ಠ ಎರಡು ಬಾರಿ ಹೀಗೆ ಮಾಡಿ, ದನ ಎಷ್ಟು ಹಾಲು ಹಿಂಡಿತು ಎಂದು ನೋಡುವುದರೊಟ್ಟಿಗೆ,

 • ಸೊರ ಬಿಡಲು ತೆಗೆದುಕೊಂಡ ಸಮಯವೆಷ್ಟು ?
 • ಎಲ್ಲಾ ನಾಲ್ಕು ಮೊಲೆಗಳಲ್ಲಿ ಹಾಲು ಬರುತ್ತದೆಯೇ?
 • ಹಾಲಿನ ಧಾರೆ ನೇರವಾಗಿಯೇ ? ಅಡೆ ತಡೆಯಿಲ್ಲದೆ ಬರುತ್ತಿದೆಯೇ?
 • ಹಾಲು ಹಿಂಡುವಾಗ ಇಂತದ್ದೇ ಹಿಂಡಿ, ಮೇವು ಬೇಕು ಎಂಬುದಿದೆಯೇ ಅಥವಾ ಹಿಂಡಿ ನೀಡದೆಯೂ ಹಿಂಡುತ್ತದೆಯೇ?
 • ಹಾಲು ಹಿಂಡುವವರು ಇಂಥವರೇ ಇರಬೇಕೆಂಬುದಿದೆಯೆ? ಇವೆಲ್ಲವನ್ನೂ ಗಮನಿಸಿರಿ. ಹಾಲಿನ ಧಾರೆ ಸರಿಯಾಗಿರದಿದ್ದಲ್ಲಿ ಹಿಂಡುವಾಗ ಹಿಂಡಿ, ಮೇವುಬೇಕಾದಲ್ಲಿ ಇಂಥದ್ದೇ ವ್ಯಕ್ತಿ ಕರೆಯಬೇಕೆಂದಿದ್ದಲ್ಲಿ ದನ ಮುಂದೆ ಸಮಸ್ಯೆಯಾಗಬಹುದು. ಬೇರಾರಿಗೂ ಹಿಂಡಲು ಬಿಡದ ದನ ಕಟ್ಟಿಕೊಂಡು ಒದ್ದಾಡುವವರನ್ನು ನಾವು ನೋಡಿಲ್ಲವೇ?

೭. ವಯಸ್ಸು: ಸಾಮಾನ್ಯವಾಗಿ ೩-೪ ನೇ ಕರಾವಿನಲ್ಲಿ ದನಗಳು ಅತಿ ಹೆಚ್ಚು ಹಾಲು ಹಿಂಡುತ್ತವೆ. ಮುಂದಿನ ಕರಾವುಗಳಲ್ಲಿ ಹಾಲು ಇಳಿಮುಖವಾಗುತ್ತದೆ. ಮೊದಲ ಕರಾವಿನಿಂದ ಮೂರನೇ ಕರಾವಿನವರೆಗೆ ಉತ್ಪಾದನೆ ಮೇಲ್ಮುಖವಾಗಿರುತ್ತದೆ. ಹೀಗಾಗಿ ೨-೩ ನೇ ಸೂಲಿನ ದನಗಳನ್ನು ಆಯ್ಕೆ ಮಾಡುವುದು ಸೂಕ್ತ. ದನ ಎಷ್ಟು ಕರು ಹಾಕಿದೆ ಎಂದು ನಿರ್ಣಯಿಸುವುದು ಅಷ್ಟು ಸುಲಭವಲ್ಲ. ಇಲ್ಲಿಯೇ ಅತಿ ಹೆಚ್ಚು ಮೋಸವಾಗುವುದು. ವಯಸ್ಸನ್ನು ಹೆಚ್ಚು ನಿಖರವಾಗಿ, ಹಲ್ಲುಗಳ ಸಂಖ್ಯೆಯನ್ನು ನೋಡಿ ಹೇಳಬಹುದು. ಎಂಟು ಹಲ್ಲುಗಳೊಳಗಿರುವ ದನ ಎಳೆಯ ವಯಸ್ಸಿನದು, ಅದೇ ಸರಿ.

ಜಾನುವಾರಿನ ಹಾಲಿನ ಉತ್ಪಾದನೆ ಎಷ್ಟೆಂದು ಕೇಳಿದರೆ ಅದರ ದಿನವೋಂದರ ಗರಿಷ್ಠ ಉತ್ಪಾದನೆಯನ್ನು ಹೇಳುವುದು ರೂಡಿ. ಸರಾಸರಿ ಉತ್ಪಾದನೆ ಇದರಿಂದ ನೇರವಾಗಿ ತಿಳಿಯುವುದಿಲ್ಲ. ಸ್ವಲ್ಪ ಲೆಕ್ಕಾಚಾರ ಮಾಡಬೇಕಾಗುತ್ತದೆ. ಒಳ್ಳೆಯ ದನ ಹಾಕಿದ ೨೦ ರಿಂದ ೪೦ ದಿನಗಳಲ್ಲಿ ಗರಿಷ್ಠ ಉತ್ಪಾದನೆ ಮುಟ್ಟಿ, ಮುಂದೆ ಸಾಕಷ್ಟು ದಿನ ಇದನ್ನು ಉಳಿಸಿಕೊಳ್ಳುತ್ತದೆ. ಸಾಮಾನ್ಯವಾಗಿ ಗರಿಷ್ಟ ಉತ್ಪಾದನೆಯು ೨/೩ ಭಾಗ ಸರಾಸರಿ ಉತ್ಪಾದನೆಯಾಗಿರುತ್ತದೆ. ಅಂದರೆ ಒಂಬತ್ತು ಲೀಟರ್ ಗರಿಷ್ಠ ಉತ್ಪಾದನೆಯ ದನದ ಸರಾಸರಿ ಲೀಟರ್ ಆರು ಲೀಟರ್ ಹಾಗೂ ಆರು ಲೀಟರ್ ಗರಿಷ್ಠ ಉತ್ಪಾದನೆಯೆಂದರೆ ಸರಾಸರಿ ೪ ಲೀಟರ್ ಆಗಿರುತ್ತದೆ.

ಈ ಎಲ್ಲಾ ಲಕ್ಷಣಗಳನ್ನು ಗಮನಿಸಿದ ಮೇಲೂ ಪರಿಚಿತರಲ್ಲಿ ವಿಶ್ವಾಸಿಕರಲ್ಲಿಯೇ ದನಕೋಳ್ಳುವುದು, ಮಾರಾಟ ವ್ಯವಸ್ಥೆಗಳನ್ನು ಗಮನದಲ್ಲಿಟ್ಟು ದನಗಳ ಆಯ್ಕೆ ಮಾಡುವುದು. ಹೆಚ್ಚುಹಾಲು ಹಿಂಡುತ್ತದೆಯೇ ಎಂದು ನೋಡುವುದಕ್ಕಿಂತ ಲಾಭದಾಯಕವಾಗಿ ಉತ್ಪಾದನೆ ಮಾಡಬಹುದೇ ಎಂದು ಗಮನಿಸುವುದು ಅಪಾಯವನ್ನು ದೂರವಿಡುವ ದಾರಿ. ಹಸು/ಎಮ್ಮೆಗಳನ್ನು ಕೊಂಡುಕೊಳ್ಳುವುದೇ ಆದರೆ ದುಬಾರಿ ಹಣ ತೆತ್ತಾದರೂ ಉತ್ತಮ ರಾಸುಗಳನ್ನೇ ಖರೀದಿಸಬೇಕು. ಕರು ಹಾಕಲು ಇನ್ನು ಕೆಲವೇ ದಿನಗಳಿರುವ ಮತ್ತು ರಸ್ತೆಯಲ್ಲಿ ಇಲ್ಲವೇ ಮನೆಗೆ ಬಂದು ೮-೧೦ ದಿನಗಳಲ್ಲಿ ಕರು ಹಾಕುವ ತುಂಬುಗಬ್ಬದ ರಾಸುಗಳನ್ನು ಕೊಂಡುಕೊಳ್ಳಬಾರದು. ಗರ್ಭಧರಿಸಿ ೪-೫ ತಿಂಗಳಿಗೆ ಖರೀದಿಸಿ ಸಾಕುವುದು ಆರ್ಥಿಕವಾಗಿ ಭಾರವೆನಿಸಿದರೆ, ಈಯಲು ಒಂದು ತಿಂಗಳು ಮುಂಚೆಯಾದರೂ ಕೊಂಡು ಮನೆಗೆ ತಂದರೆ, ಕರು ಸಾಯುವ, ಕಸ ಬೀಳದಿರುವ, ಇಳುವರಿ ಕುಸಿಯುವ ಹಾಗೂ ಇತರ ಅನೇಕ ಸಮಸ್ಯೆಗಳನ್ನು ತಪ್ಪಿಸಿಕೊಳ್ಳಬಹುದು.