ಕರ್ನಾಟಕದಲ್ಲಿ ಹಿಂದುಸ್ತಾನಿ ಸಂಗೀತದ ತೊಟ್ಟಿಲು ತೂಗಿದ್ದು ಮೈಸೂರಾದರೂ ಅದು ನಡೆದಾಡಲಾರಂಭಿಸಿ ಓಡಾಡಿ ಬೆಳೆದದ್ದು ಉತ್ತರ ಕರ್ನಾಟಕದಲ್ಲಿ. ಸಂಗೀತಗಾರರು ಮೈಸೂರಿಗೆ ಹೋಗುವಾಗ, ಅಲ್ಲಿಂದ ಹಿಂತಿರುಗುವಾಗ ಹುಬ್ಬಳ್ಳಿ-ಧಾರವಾಡದ ರಸಿಕರು ಅವರನ್ನು ಇಳಿಸಿಕೊಂಡು ಕಚೇರಿ ಏರ್ಪಡಿಸುತ್ತಿದ್ದರು. ಬರಬರುತ್ತಾ ಹಿಂದುಸ್ತಾನಿ ಸಂಗೀತವನ್ನು ಸವಿಯುವ ಆಸಕ್ತಿ ಅದನ್ನು ಕಲಿಯುವ ಹಂಬಲದಲ್ಲಿ ಪರಿವರ್ತಿತಗೊಂಡಿತು. ಕಿರಾಣಾ ಘರಾಣೆಯ ಸಂಸ್ಥಾಪಕ ಅಬ್ದುಲ್ ಕರೀಮಖಾನರು ಕರ್ನಾಟಕದ ತುಂಬ ಸಂಚರಿಸುತ್ತಿದ್ದರು. ಹುಬ್ಬಳ್ಳಿ, ಧಾರವಾಡ, ಬೆಳಗಾವಿ ಕುಂದಗೋಳಕ್ಕೆ ಮೇಲಿಂದ ಮೇಲೆ ಬರುತ್ತಿದ್ದರು. ಕುಂದಗೊಳದ ಬಾಲಕ ರಾಮಚಂದ್ರ ಅವರ ಶಿಷ್ಯನಾಗಿ ಸವಾಯಿ ಗಂಧರ್ವರಾಗಿ ಅಮರರಾದರು. ಗಂಗೂಬಾಯಿ ಹಾನಗಲ್, ಭೀಮಸೇನ ಜೋಶಿ ಗಂಧರ್ವರ ಶಿಷ್ಯರಾಗಿ ಕಿರಾಣಾ ಘರಾಣೆಯು ಕರ್ನಾಟಕದಲ್ಲಿ ಭದ್ರವಾಗಿ ಬೇರೂರಲು ಕಾರಣರಾದರು. ಅಬ್ದುಲ್ ಕರೀಮಖಾನರ ಇನ್ನೋರ್ವ ಶಿಷ್ಯ ಗಣಪತರಾವ ಗುರವ ಜಮಖಂಡಿ ಸಂಸ್ಥಾನದ ಆಸ್ಥಾನ ಗಾಯಕರಾದರು. ಅವರ ಮಗ ಸಂಗಮೇಶ್ವರ ಗುರವರನ್ನು ತಮ್ಮ ಗರಡಿಯಲ್ಲಿ ಪಳಗಿಸಿದರು. ಸಂಗಮೇಶ್ವರರು ತಮ್ಮ ಮಗ ಕೈವಲ್ಯಕುಮಾರರನ್ನು ತರಬೇತುಗೊಳಿಸಿದರು.

ಗಂಗೂಬಾಯಿ ಹಾನಗಲ್ಲರು ತಮ್ಮ ಮಗಳು ಕೃಷ್ಣಾ ಮತ್ತು ನಾಗನಾಥ ಒಡೆಯರನ್ನು ತಯಾರು ಮಾಡಿದರು. ಭೀಮಸೇನ ಜೋಶಿ ಶ್ರೀಪತಿ ಪಾಡಿಗಾರ, ಮಾಧವ ಗುಡಿ, ವಿನಾಯಕ ತೊರವಿ, ಅನಂತ ತೇರದಾಳ ಮೊದಲಾದವರನ್ನು ತಯಾರು ಮಾಡಿದರು ಇಂತು ಕರ್ನಾಟಕದಲ್ಲಿ ಕಿರಾಣಾ ಪರಂಪರೆ ದಾಂಗುಡಿಯಿಟ್ಟಿದೆ.

ನತ್ಥನಖಾನರ ಶಿಷ್ಯರೂ ಗ್ವಾಲಿಯರ, ಆಗ್ರಾ, ಜೈಪುರ ಘರಾಣೆಗಳ ತ್ರಿವೇಣಿಯಾಗಿದ್ದ ಭಾಸ್ಕರಬುವಾ ಬಖಲೆ ಧಾರವಾಡದ ಗಂಡು ಮಕ್ಕಳ ಟ್ರೇನಿಂಗ ಕಾಲೇಜಿನಲ್ಲಿ ೧೯೦೮ ರಿಂದ ೧೯೧೬ ರವರೆಗೆ ಸಂಗೀತ ಶಿಕ್ಷಕರಾಗಿದ್ದರು. ಭಾಸ್ಕರಬುವಾ ಹಲವು ಹಿಂದುಸ್ತಾನಿ ಸಂಗೀತಗಾರರ ಕಚೇರಿಗಳನ್ನು ಧಾರವಾಡದಲ್ಲಿ ಏರ್ಪಡಿಸಿದ್ದರು. ಟಿ.ಕೆ. ಪಿತ್ರೆ ವಕೀಲ ಮುಂತಾದವರಿಗೆ ಸಂಗೀತ ಕಲಿಸಿದರು. ಟಿ.ಕೆ.ಪಿತ್ರೆ ಹಲವರಿಗೆ ಹಿಂದುಸ್ತಾನಿ ಸಂಗೀತದ ಮೂಲಪಾಠ ಹೇಳಿಕೊಟ್ಟರು.

ಕರ್ನಾಟಕ ಸಂಗೀತದಲ್ಲಿ ಆಗಲೆ ಪಳಗಿದ್ದ ಪಂಚಾಕ್ಷರಿ ಗವಾಯಿಗಳು ಆಗಾಗ ಶಿವಯೋಗಮಂದಿರದಿಂದ (ಬಾದಾಮಿ ತಾಲ್ಲೂಕು, ಬಾಗಲಕೋಟ ಜಿಲ್ಲೆ) ಹುಬ್ಬಳ್ಳಿಗೆ ಬಂದು ಹಿಂದುಸ್ತಾನಿ ಸಂಗೀತವನ್ನು ಆಲಿಸಿ ಅದನ್ನು ಕಲಿಯಬಯಸಿದರು. ಕಿರಾಣಾ ಘರಾಣೆಯ ಹಿರಿಯ ಗಾಯಕ ಅಬ್ದುಲ್ ವಹೀದಖಾನರನ್ನು ಶಿವಯೋಗ ಮಂದಿರಕ್ಕೆ ಕರೆಸಿಕೊಂಡು ೧೯೧೭ ರಿಂದ ೧೯೨೨ರವರೆಗೆ ಕಲಿತರು. ತತ್ಪಲವಾಗಿ ಉಭಯ ಗಾಯನಾಚಾರ್ಯರಾದರು. ಅನೇಕ ಶಿಷ್ಯರನ್ನು ತಯಾರಿಸಿದರು. ಅವರಲ್ಲಿ ಪುಟ್ಟರಾಜ ಗವಾಯಿ, ಬಸವರಾಜ ರಾಜಗುರು, ಪಂಚಾಕ್ಷರಿ ಮತ್ತಿಗಟ್ಟಿ, ಸಿದ್ದರಾಮ ಜಂಬಲದಿನ್ನಿ ಪ್ರಮುಖರು. ಪುಟ್ಟರಾಜ ಗವಾಯಿಗಳ ಶಿಷ್ಯರಾದ ಎಂ. ವೆಂಕಟೇಶಕುಮಾರ, ಡಿ. ಕುಮಾರದಾಸ ಮತ್ತು ಬಸವರಾಜ ರಾಜಗುರು ಅವರ ಶಿಷ್ಯರಾದ ಸೋಮನಾಥ ಮರಡೂರ, ಷಣ್ಮುಖ ಗೊಜನೂರ, ಗಣಪತಿ ಭಟ್, ಪರಮೇಶ್ವರ ಹೆಗಡೆ, ಶ್ರೀಪಾದ ಹೆಗಡೆ, ಶಾಂತಾರಾಮ ಹೆಗಡೆ ಮೊದಲಾದವರು ಈ ಪರಂಪರೆಯನ್ನು ಮುಂದುವರಿಸುತ್ತಿರುವರು.

ನೀಲಕಂಠಬುವಾ ಮಿರಜಕರ ಮೂಲತಃ ಬಾಗಲಕೋಟ ಜಿಲ್ಲೆಯ ಹೊಳೆ ಆಲೂರಿನವರು. ಅಡ್ಡಹೆಸರು ಆಲೂರಮಠ ಎರಡು ಮೂರು ತಲೆಮಾರು ಹಿಂದೆ ಮಿರಜಿನಲ್ಲಿ ನೆಲಸಿದ್ದರಿಂದ ಮಿರಜಕರ ಆಯಿತು. ನೀಲಕಂಠಬುವಾ ಗ್ವಾಲಿಯರ ಘರಾಣೆಯ ಬಾಳಕೃಷ್ಣಬುವಾ ಈಚಲಕರಂಜಿಕರರ ಶಿಷ್ಯ. ನೀಲಕಂಠಬುವಾ ಶ್ರೇಷ್ಠ ಗುರುಗಳು. ಮಲ್ಲಿಕಾರ್ಜುನ ಮನಸೂರ, ಪಂಚಾಕ್ಷರಿಗವಾಯಿ, ಬಸವರಾಜ ರಾಜಗುರು ಅವರಿಗೆ ನೀಲಕಂಠಬುವಾ ಗುರುಗಳಾಗಿದ್ದರು.

ಹುಬ್ಬಳ್ಳಿಯ ಸಿದ್ದಾರೂಢ ಮಠದಲ್ಲಿ ಕಬೀರದಾಸರೆಂಬ ಸಂತರಿದ್ದರು. ಸಿದ್ದಾರೂಢರ ಶಿಷ್ಯರು. ಅವರು ಎಲ್ಲಿಯವರು, ಯಾವಾಗ ಸಿದ್ದಾರೂಢಮಠಕ್ಕೆ ಬಂದರು ಎಂಬುದೊಂದು ತಿಳಿಯದು. ಅವರು ಜ್ಞಾನಿಗಳು ಮೇಲಾಗಿ ಸಂಗೀತಗಾರರು. ಹೀಗಾಗಿ. ಹುಬ್ಬಳ್ಳಿಗೆ ಬರುವ ಸಂಗೀತಗಾರರಿಗೆಲ್ಲ ಸಿದ್ಧಾರೂಢಮಠ ಪಾದಗಟ್ಟಿಯಾಯಿತು. ಅಬ್ದುಲ್ ಕರೀಮ್ ಖಾನರು ಒಮ್ಮೆ ಹುಬ್ಬಳ್ಳಿಗೆ ಬಂದಾಗ ನೇರವಾಗಿ ಸಿದ್ಧಾರೂಢಮಠಕ್ಕೆ ನಡೆದರು. ಭರ್ಜರಿ ಹಾಡಿದರು. ಕಬೀರದಾಸರ ಪಕ್ಕದಲ್ಲಿ ಕುಳಿತಿದ್ದ ವ್ಯಕ್ತಿಯೊಂದು ‘ಗಲಾ ಅಚ್ಛಾ ಹೈ’ ಎಂದಿತು. ಭಾರತಾದ್ಯಂತ ಜಯಭೇರಿ ಹೊಡಿದಿದ್ದ ಅಬ್ದುಲ್ ಕರೀಮಖಾನರ ಗಾಯನದ ಬಗೆಗೆ ಏನೂ ಹೇಳದೆ ಕಂಠ ಮಾತ್ರ ಚೆನ್ನಾಗಿದೆ ಎಂದು ಹೇಳುವ ಧಾರ್ಷ್ಟ್ಯ ತೋರಿದ ವ್ಯಕ್ತಿ ಯಾರಿರಬೇಕು? ಅವರೇ ಭೂಗಂಧರ್ವ ರೆಹಮತ್ ಖಾನರು.

ರೆಹಮತ್ ಖಾನರು ಗ್ವಾಲಿಯರ ಘರಾಣೆಯ ಆದ್ಯರಾದ ಹದ್ದೂಖಾನರ ಪುತ್ರರು. ಏಶಿಯಾದಲ್ಲಿಯೆ ಪ್ರಥಮ ಸರ್ಕಸ ಕಂಪನಿ ಕಟ್ಟಿದ ವಿಜಾಪುರದ ವಿಷ್ಣುಪಂತ ಛತ್ರೆ ಸಿದ್ಧಾರೂಢರ ಭಕ್ತರು. ಹದ್ದೂಖಾನರ ಶಿಷ್ಯರು. ರೆಹಮತ್ ಖಾನರ ಗುರುಬಂಧು. ಒಂದು ದಿನ ಬನಾರಸದಲ್ಲಿ ಹುಚ್ಚರಂತೆ ಅಲೆದಾಡುತ್ತಿದ್ದ ರೆಹಮತ್ ಖಾನರನ್ನು ಕಂಡರು. ಎಪ್ಪಾ, ಎಣ್ಣಾ ಅಂದು ಕರೆತಂದು ತಮ್ಮ ಸರ್ಕಸ್ ಹುಲಿಗಳೊಂದಿಗೆ ಈ ಸಂಗೀತಹುಲಿಯನ್ನು ಸಾಕಿದರು. ರೆಹಮತ್ ಖಾನರು ಕೆಲವರ್ಷ ಸಿದ್ದಾರೂಢ ಮಠದಲ್ಲಿ ಇದ್ದರು. ಜಾಲಿಯಾರಂತೆಯೆ ಇದ್ದ ಅವರಿಗೆ ಕಬೀರದಾಸರ ಸಹವಾಸವೆಂದರೆ ಪಂಚಪ್ರಾಣ. ರೆಹಮತ್ ಖಾನರು ತಮಗೆ ಇಷ್ಟವಾದರೆ ಮಾತ್ರ ಹಾಡುವವರು. ಎಷ್ಟು ದಮ್ಮಯ್ಯ ಅಂದರೂ ಹಾಡುವವರಲ್ಲ. ಯಾರಾದರೂ ಚೆನ್ನಾಗಿ ಹಾಡಲಾರಂಭಿಸಿ ಮಧ್ಯದಲ್ಲಿ ಬೇಸೂರ ಮಾಡಿದರೆ ಕೈಗೆ ಸಿಕ್ಕಿದ್ದನ್ನು ಅವರತ್ತ ಎಸೆದು ಅಲ್ಲಿಂದ ತಾವು ಗಾಯನ ಮುಂದುವರೆಸುತ್ತಿದ್ದರು. ಈ ತಂತ್ರ ಬಳಸಿ ಒಮ್ಮೆ ಅವರನ್ನು ಸಿದ್ಧಾರೂಢಮಠದಲ್ಲಿ ಹಾಡಿಸಿದ್ದುಂಟು. ರಾತ್ರಿ ೧೦ ರಿಂದ ಬೆಳಗಿನ ೨ ರವರೆಗೆ ಒಂದೇ ರಾಗ ಹಾಡಿದ್ದರಂತೆ. ಅಂಥ ಸಮರ್ಥರು.

ಕರ್ನಾಟಕದಲ್ಲಿ ಗ್ವಾಲಿಯರ ಘರಾಣೆಯ ಗಾಯನದ ರುಚಿ ಹಚ್ಚಿದವರು ರೆಹಮತ್ ಖಾನರಾದರೆ ಅದನ್ನು ಪ್ರಚುರಪಡಿಸಿದವರು ರಾಮಕೃಷ್ಣಬುವಾ ವಝೆ ಅವರು ರೆಹಮತ್ ಖಾನರ ಅಣ್ಣ ನಿಸ್ಸಾರ ಹುಸೇನ ಖಾನರ ಶಿಷ್ಯರು. ವಝೆಬುವಾ ಎಲ್ಲ ಕಡೆ ಸುತ್ತಾಡಿ ಪ್ರಸಿದ್ಧಿ ಪಡೆದು ಬೆಳಗಾವಿಯಲ್ಲಿ ನೆಲಸಿದರು. ಅವರ ಶಿಷ್ಯರಲ್ಲೊಬ್ಬರಾದ ಗುರುರಾವ ದೇಶಪಾಂಡೆ ಧಾರವಾಡದಲ್ಲಿ ಸಂಗೀತಶಾಲೆ ಆರಂಭಿಸಿ ಅನೇಕ ವರ್ಷ ವಿದ್ಯಾದಾನ ಮಾಡಿದರು. ಆಗ್ರಾ ಘರಾಣೆಯ ವಿಲಾಯತ ಹುಸೇನಖಾನರ ಶಿಷ್ಯ ಹನುಮಂತರಾವ ವಾಳ್ವೇಕರರೂ ಧಾರವಾಡದಲ್ಲಿ ಹಲವಾರು ವರ್ಷ ಸಂಗೀತ ಕಲಿಸಿದರು.

ಈಗ ದೃಶ್ಯ ಉತ್ತರ ಭಾರತದ ಭಾವನಗರದಲ್ಲಿ ಆರಂಭಗೊಂಡು ಧಾರವಾಡದಲ್ಲಿ ಅಂತ್ಯಗೊಳ್ಳುತ್ತದೆ. ಇನ್ನೊಬ್ಬ ರಹಿಮತ್ ಖಾನರು ಸಿತಾರರತ್ನ ರಹಿಮತ್ ಖಾನರು ಮೈಸೂರು ದರಬಾರದಲ್ಲಿ ಕಾರ್ಯಕ್ರಮ ನೀಡಲು ಹೋಗುವ ಮುನ್ನ ಧಾರವಾಡದಲ್ಲಿ ತಂಗಿದ್ದರು. ಧಾರವಾಡದ ಸೃಷ್ಠಿ ಸೌಂದರ್ಯ, ಪ್ರಶಾಂತ ವಾತಾವರಣಕ್ಕೆ ಮನಸೋತು ೧೯೧೨ ರಲ್ಲಿ ಧಾರವಾಡದಲ್ಲಿ ನೆಲೆನಿಂತರು. ರಹಿಮತ್ ಖಾನ ಧಾರವಾಡಕರ ಎಂದೇ ತಮ್ಮನ್ನು ಕರೆದುಕೊಂಡರು. ವಿಂಧ್ಯದೀಚೆ ಸಿತಾರ ಸಂಸ್ಕೃತಿ ತಂದ ಶ್ರೇಯಸ್ಸು ಅವರದು. ಮೊಮ್ಮಕ್ಕಳಾದ ಉಸ್ಮಾನ ಖಾನ, ಬಾಲೇಖಾನ, ಹಮೀದ ಖಾನ, ಛೋಟೆ ರಹಿಮತ್ ಖಾನ, ಶಫೀಕ್ ಖಾನ, ರಫೀಕ ಖಾನ ಅಜ್ಜನ ಭವ್ಯ ಸಿತಾರ ಕಲೆ ಧಾರವಾಡದಲ್ಲಿ ಮಹಾವೃಕ್ಷವಾಗಿ ಬೆಳೆದಿದೆ.

ಹುಬ್ಬಳ್ಳಿಯ ದಿ.ದತ್ತೋಪಂತ ಪಾಠಕ ಬೀನ್ (ರುದ್ರವೀಣೆ) ವಾದಕರು. ಮುರಾದಖಾನ ಬೀನಕಾರರಿಂದ ಕಲಿತವರು. ದತ್ತೋಪಂತಹ ಮಗ ದಿ.ಬಿಂದುಮಾಧವ ಪಾಠಕ ತಂದೆಯ ಪರಂಪರೆಯನ್ನು ಮುಂದುವರಿಸಿದ್ದರು ಹುಬ್ಬಳ್ಳಿಯ ವಿಠ್ಠಲ ಕೋರೆಗಾಂವಕರ ಶ್ರೆಷ್ಠ ಹಾರ್ಮೋನಿಯಮ್ ವಾದಕರು. ಮಹಾರಾಷ್ಟ್ರದ ಅಮರ ಹಾರ್ಮೋನಿಯಮ್ ವಾದಕ ಗೋವಿಂದರಾವ ಟೇಂಬೆ ಅವರಿಗೆ ಸರಿಹೊರೆಯಾಗಿದ್ದವರು. ಇಂದಿನವರಲ್ಲಿ ಗದಗಿನ ಪುಟ್ಟರಾಜ ಗವಾಯಿಗಳು. ಬೆಳಗಾವಿಯ ರಾಯಭಾವು ವಿಜಾಪುರೆ, ಸುಧಾಂಶು ಕುಲಕರ್ಣಿ, ರವೀಂದ್ರ ಕಾಟೋಟೆ ಧಾರವಾಡದ ವಸಂತ ಕನಕಾಪುರ ಇದ್ದಾರೆ. ತಬಲಾವಾದನದಲ್ಲಿ ಶೇಷಗಿರಿ ಹಾನಗಲ್ಲ ಮತ್ತು ದಿ.ಬಸವರಾಜ ಬಂಡಿಗೇರಿ ಹಿರಿಯ ತಲೆಮಾರಿನ ಉನ್ನತ ತಬಲಾವಾದಕರಾಗಿರುವಂತೆಯೆ ರಘುನಾಥ ನಾಕೋಡ ಮತ್ತು ರವೀಂದ್ರ ಯಾವಗಲ್ಲ ಇಂದಿನ ತಲೆಮಾರಿನ ಶ್ರೇಷ್ಠ ತಬಲಾವಾದಕರಾಗಿರುವರು.

ನಮ್ಮ ಹಿಂದುಸ್ತಾನಿ ಸಂಗೀತಗಾರರನೇಕರು ಹೊರನಾಡಿನಲ್ಲಿ ನೆಲಸಿದವರು. ಸಂತ ಸಂಗೀತಗಾರ ದತ್ತಾತ್ರೇಯ ಪರ್ವತಿಕರ ಮೂಲತಃ ಬಾಗಲಕೋಟೆ ಜಿಲ್ಲೆಯ ಗುಳೇದಗುಡ್ಡದವರು. ಹೃಷಿಕೇಶದಲ್ಲಿ ನೆಲಸಿದ್ದರು. ದತ್ತವೀಣೆ ಎಂಬ ಹೊಸ ವಾಧ್ಯವನ್ನು ಆವಿಷ್ಕರಿಸಿದ್ದರು. ಅದು ವೀಣೆ, ಸಿತಾರ, ಸ್ವರಮಂಡಲಗಳ ಸಮನ್ವಯದಂತಿದೆ. ಅವರು ನುಡಿಸುತ್ತಿದ್ದದ್ದು ಅದನ್ನೆ. ಸಂಗೀತದಲ್ಲಿ ತಮ್ಮ ಹಾದಿ ತುಳಿದ ಕುಮಾರಗಂಧರ್ವ ಮಧ್ಯಪ್ರದೇಶದ ದೇವದಾಸದಲ್ಲಿ ನೆಲೆಸಿದ್ದರು. ಮೂಲತಃ ಬೆಳಗಾವಿ ಜೆಲ್ಲೆಯ ಸುಳೇಬಾವಿಯವರು. ನಿಜನಾಮ ಶಿವಪುತ್ರ ಕೊಂಕಾಳಿಮಠ. ಭೀಮಸೇನ ಜೋಶಿ ಗದಗಿನವರು. ಪುಣೆಯುಲ್ಲಿ ನೆಲಸಿರುವರು. ಪ್ರಭುದೇವ ಸರದಾರ ಸೊಲ್ಲಾಪುರದವರು. ಆಗ್ರಾ ಘರಾಣೆಯ ಕೆ.ಜಿ.ಗಿಂಡೆ ಬೈಲಹೊಂಗಲದವರು. ದಿನಕರ ಕಾಯ್ಕಿಣಿ, ಎಸ್.ಸಿ.ಆರ್.ಭಟ್ ಕೂಡ ಆಗ್ರ ಘರಾಣೆಯ ಗಾಯಕರೆ. ದೇವೇಂದ್ರ ಮುರ್ಡೇಶ್ವರ ಮತ್ತು ನಿತ್ಯಾನಂದ ಹಳದಿಪುರ ಬಾಂಸುರಿವಾದಕರು. ರಮೇಶ ನಾಡಕರ್ಣಿ ಗಾಯಕ-ಸಂಗೀತಜ್ಞರು. ಮೋಹನ ನಾಡಕರ್ಣಿ ಹೆಸರಾಂತ ಸಂಗೀತ ವಿಮರ್ಶಕರು ಇವರೆಲ್ಲ ಉತ್ತರ ಕನ್ನಡ ಜಿಲ್ಲೆಯವರು. ಮುಂಬೈನಲ್ಲಿ ನೆಲಸಿದ್ದರು/ನೆಲಸಿರುವರು.