ಆಗ……ಕಾಟಿವಕ್ಕಲ ಕೊಣವೇಗೌಡ
ನೀಟುಗಾರ ನಮ್ಮಾರೇಗೌಡ
ಕುಲದಲ್ಲವನು ಕುರುಬರಗೌಡ
ಮತದಲ್ಲವನು ಮದ್ಗಿರಿಗೌಡ
ಅಯ್ಯೊ ಕಾಟಿವಕ್ಕಲ ಕೊಣವೇಗೌಡ
ನೀಟುಗಾರ ನಮ್ಮಾರೇಗೌಡ
ಅತಿ ಪುಣಿವಂತ ಕೊಣವೇಗೌಡ
ಅತಿ ಪುಣಿವಂತ ಮಾರೇಗೌಡ
ಅಯ್ಯೊ ಬಚ್ಚಲುಕಲ್ಲೆ ಬೆಳ್ಳಿಬಂಗಾರ
ಹಸಿಯ ಕಲ್ಲೆ ರವರತ್ನ
ರನ್ನದ ಕಣಜ ಚಿನ್ನದ ಕಣಜ
ಅತಿ ಪುಣಿವಂತ ಕೊಣವೇಗೌಡ
ಆಗ……ಕಾಟಿವಕ್ಕಲ ಕೊಣವೇಗೌಡ
ನೀಟುಗಾರ ನಮ್ಮಾರೇಗೌಡ
ಆರು ಹಿಂಡು ಹೆಗ್ಗಣಮರಿ ಸಾಲು
ಮೂರು ಹಿಂಡು ಇಲಿಮರಿ ಸಾಲು
ನಲವತ್ತಿಂಡು ಆಡಿನ ಸಾಲು
ಅರವತ್ತಿಂಡು ಕುರಿಗಳ ಸಾಲು
ಹತ್ತು ಹಿಂಡು ದನಗಳ ಸಾಲು
ಇಪ್ಪತ್ತಿಂಡು ಎಮ್ಮೆಯ ಸಾಲು
ಇಷ್ಟು ಪುಣಿವಂತ ಕೊಣವೇಗೌಡ
ಇಷ್ಟು ಪುಣಿವಂತ ಮಾರೇಗೌಡ
ಕೊಣವೇಗೌಡ ತಾನಾದು ಮೇಲೆ
ದಾನಧರ್ಮ ಮಾಡುವೊನಲ್ಲ
ದಾನಧರ್ಮ ಕೊಡುವೊನಲ್ಲ
ದಾನಧರ್ಮ ಕಲಿತೋನಲ್ಲ
ಹಸ್ತೊರಿಗನ್ನ ಇಕ್ಕಿದೋನಲ್ಲ
ಕುಡಿಯಲು ನೀರ ಕೊಟ್ಟವನಲ್ಲ
ಕೇಳೆ ಕೇಳೆ ಕೊಡಗಿನ ಮಾರಿ
ಕೇಳೆ ಕೇಳಲೆ ನನ್ನಯ ನಾರಿ
ಸರೀಕರಂತೆ ನಾವು ಬಾಳಬೇಕು
ಸದುದೋರಂತೆ ನಾವು ಬಾಳಬೇಕು
ಐದು ಜನ ಹೆಣ್ಣುಮಕ್ಕಳಲ್ಲಿ
ಒಬ್ಬಳ ಮದುವೆ ಮಾಡಲು ಬೇಕು
ಶಿವನೆ, ಮಕ್ಕಳು ಮದುವೆ ಮಾಡಲು ಗೌಡ
ಮದುವೆಲ್ಲನ್ನ ಇಕ್ಕಿದವನಲ್ಲ
ಕುಡಿಯಕು ನೀರ ನೀಡಿದೋನಲ್ಲ
ಸಭೆಯಲಿ ಈಳ್ಯ ಕೊಟ್ಟೋನಲ್ಲ
ಕಾಟಿವಕ್ಕಲ ಕೊಣವೇಗೌಡ
ಹೆಂಡ್ತಿಗೆ ಬುದ್ಧಿ ಏನೇಳುತಾನೆ
ಹರುಕರ ಕಾಟ ತಿರುಕರ ಕಾಟ
ಊರು ವಳಗೆ ನಮ್ಮನೆಯು
ಹರುಕಲು ತಿರುಕರು ಮನಿಗೆ ಬಂದ್ರೆ
ಯಾರಿಲ್ಲಂತ ಕದವ ತಗಿಬ್ಯಾಡ
ಅದಕೂ ಮೀರಿ ಬಂದ್ರೆ
ಅದಕೊಂದ್ಯುಕ್ತಿ ಹೇಳ್ತೀನಿ ಕೇಳೆ
ಮಾದಿಗರತ್ರ ಮಾತಾಡುವೋಣ
ಹೊಲಿಯರತ್ರ ಮನೆ ಕಟ್ಟುವೋಣ
ಮಾದಿಗರಂತ ಯಾರೂ ಬರೋದಿಲ್ಲ
ಹೊಲಿಯರಂತ ಯಾರೂ ಬರೋದಿಲ್ಲ
ಅದಕೂ ಮೀರಿ ನಮ್ಮನಿಗೆ ಬಂದ್ರೆ
ಅದೆಂತ ಯುಕ್ತಿ ಹೇಳಯ್ಯ ಗೌಡ
ಅದಕೂ ಮೀರಿ ಬಂದರೆ ಈಗ
ಕೇಳೆ ಕೇಳೆ ಕೊಡಗಿನ ಮಾರಿ
ಕಡಿಯೋ ನಾಯ ಮನೆ ಮುಂದೆ ಕಟ್ಟೆ
ಹಾಯೋ ಹಸವ ಬಾಕ್ಲಲ್ಲಿ ಕಟ್ಟೆ
ಅದಕೂ ಮೀರಿ ನಮ್ಮನಿಗೆ ಬಂದ್ರೆ
ಇನ್ನೊಂದು ಬುದ್ಧಿ ಹೇಳ್ತೀನಿ ಕೇಳೆ
ಕೇಳೆ ಕೇಳೆ ಕೊಡಗಿನ ಮಾರಿ
ಕೇಳೆ ಕೇಳೆಲೆ ನನ್ನಯ ನಾರಿ
ವಕ್ಕಡೆ ಗೋಡೆ ಬಿಟ್ಟುಕೊಳೆ ನಾರಿ
ಮುಂದಲ ಬಾಗಿಲಿಗೆ ಮುಳ್ಳೆಳೆಯೆ ನಾರಿ
ಅದಕೂ ಮೀರಿ ಬಂದರೆ ಗೌಡ
ಮಾಡೋದೇನು ಹೇಳಯ್ಯ ಗೌಡ
ಅದಕೂ ಮೀರಿ ಬಂದರೆ ಈಗ
ಹಾಳು ಗ್ವಾಡೇಲಿ ವಾಸ ಮಾಡುವಾನ
ಅದಕೂ ಮೀರಿ ಬಂದರೆ ಈಗ
ಇನ್ನೊಂದು ಯುಕ್ತಿ ಹೇಳುತೀನಿ ಕೇಳು
ಅಂಬಲಿ ಕೊಡಂತ ಅಮರಿಕೊತ್ತಾರೆ
ಸಪ್ಪು ಕೊಡಂತ ತಗಲಿಕೊತ್ತಾರೆ
ಕೊಡದೇ ಹೋದರೆ ಕೇಳೆ ಕೇಳೆ
ಕೇಳೆ ಕೇಳೆಲೆ ಕೊಡಗಿನ ಮಾರಿ
ಊರು ಮುಂದೆ ಕುಂತುಕೊಂಡೀಗ
ಬಯ್ಕೊಂದಾದರೂ ಅದರೋಯ್ತಾರೆ
ಮೂರು ದಾರಿ ಕೊಡಿತ್ತಾಕೆ
ಮೂರು ಮಂಕರಿ ಮಣ್ಣೆರಚ್ತಾರೆ
ಮೂರು ಮಂಕರಿ ಮಣ್ಣೆರಚಿಬಿಟ್ರೆ
ಕೇಳೆ ಕೇಳೆ ಕೊಡಗಿನ ಮಾರಿ
ಕಡೆಗೂ ನಮಗೆ ಕರ್ಮವಲ್ಲವೆ ?
ಕಡೆಗೂ ನಮಗೆ ಪಾಪವಲ್ಲವೆ ?
ಕೇಳೆ ಕೇಳೆ ಕೊಡಗಿನ ಮಾರಿ
ಊರ ಮುಂದಲ ಹೊಲವಿದ್ರೆ
ಕಂದಾಯ ನಾವ್ ಕೊಡಬೇಕು
ಕಾಣಿಕೆಯನ್ನೇ ನಾವ್ ಕಟ್ಟಬೇಕು
ಹಿಟ್ಟು ಉಂಟು ಬಿಟ್ಟೀ ಉಂಟು
ಕೇಳು ಕೇಳೆಲೆ ಕೊಡಗಿನ ಮಾರಿ
ಅಯ್ಯೊ ಊರು ಮುಂದೆ ಹೊಲವಿದ್ರೆ
ಕೋಳಿ ಕೊಕ್ಕರೆ ಮೇಯುಕೊತ್ತವೆ
ಊರು ಮುಂದಲ ಹೊಲವೇ ಬೇಡ
ಊರು ವಳಗಲ ಮನಿಯೇ ಬೇಡ
ಏಳು ಬೆಟ್ಟದ ಗಿಡವೇ ಕಡಿದು
ಆರು ಗಾವುದ ಹೊಲವೇ ಮಾಡಿ
ಗಿಡವೇ ಗೆಂಡೆ ಕಡಿಸೋನೆಣ್ಣೆ
ಹೊಲವನಾದರೆ ನಾವು ಮಾಡೋನೆಣ್ಣೆ
ಪಾಳುಬೆಟ್ಟದ ನಡುವೆ ಸೇರಿದರೆ
ಕಂದಾಯ ಕಾಣಿಕೆ ಇಲ್ಲೇ ಇಲ್ಲ
ಹಿಟ್ಟು ಇಲ್ಲ ಬಿಟ್ಟೀ ಇಲ್ಲ
ಹೇಳುವರಿಲ್ಲ ಕೇಳುವರಿಲ್ಲ
ಕಂದಾಯವಿಲ್ಲ ಕಾಣಿಕೆ ಇಲ್ಲ
ನನ್ನ ಕೇಳೋರು ಮೊದ್ಲೆ ಇಲ್ಲ
ಇನ್ನೊಂದು ಬುದ್ಧಿ ಹೇಳ್ತಿನಿ ಕೇಳು
ಇನ್ನೊಂದು ಉಪಾಯ ಹೇಳ್ತೀನಿ ಕೇಳು :
ಹರುಕರು ತಿರುಕರು ಮನಿಗೆ ಬಂದ್ರೆ
ತಲೆಯನ್ನಾದರೆ ಕೆದರಿಕೊಳ್ಳೆಣ್ಣೆ
ತಲೆಯನ್ನಾದರೆ ಬಿಚ್ಚಿಕೊಳ್ಳೆಣ್ಣೆ,
ಕೆಂಗರುಗಣ್ಣ ಬುಟ್ಟುಕೊಳ್ಳೆಣ್ಣೆ ;
ಹಿತ್ತಲಿಗೆ ಹೋಗಿ ಬೆಯ್ತಿಲೆ ಬಾರೆ ;
ನಾಚಿಕಂದ ಓಡೋಯ್ತಾರೆ ;
ಮಕಮಾರೆ ಮೆಸಿಯ ಬಳಿಕೊಳ್ಳೆಣ್ಣೆ,
ನೋಡಕೆ ರಾಕ್ಷಸಿಯಂಗೆ ಆಗು ಹೆಣ್ಣೆ
ನಿನ್ನ ರೂಪು ಲಾವಣ್ಯ ನೋಡಿಬುಟ್ಟು
ಹೆದರಿಕೊಂಡೆ ಓಡೋಯ್ತಾರೆ !
ಅಡಿಗೆ ಮಾಡೊ ಬುದ್ದೇಳ್ತೀನಿ
ಕೇಳೆ ಕೇಳೆ ಕೊಡಗಿನ ಮಾರಿ
ಮೂರು ವರ್ಷದ ಮುಗ್ಗಿನ ಜೋಳ
ಆರು ವರ್ಷದ ಬುರುಡೆ ರಾಗಿ ೧
ಅಳದೆ ಮೂರು ಪಾವು ತಕ್ಕೊಳ್ಳೆಣ್ಣೆ
ಮಾಡಲಿ ಬೇಡ ಕೇರಲಿ ಬೇಡ
ಬಿಸಲಿಗಾಕಿ ಒಣಗಿಸಬೇಡ
ಗಾಳಿಗಾಕಿ ತೂರಲು ಬೇಡ
ಗುಬ್ಬ ಚಕ್ಕರ್ದ ತಿಂದೋಯ್ತವೆ
ನನ್ನ ಹೊಟ್ಟಿಗೆ ಕಡಿಮ್ಯಾಗ್ತೈತೆ
ಮನಿ ಹಿಂದಲ ಹೊಲಕೆ ಹೋಗಿ
ಮೂರು ಮಂಕರಿ ಸೊಪ್ಪ
ತರುಕೊಂಡು ಬಾರೆ ಕೊಡಗಿನ ಮಾರಿ
ಮುರುಕೊಂಡು ಬಾರೆ ನನ್ನಯ ನಾರಿ
ಸೊಪ್ಪುಗಿಪ್ಪು ಸೋಸಿಯ ಜೋಕೆ
ಹುಳಗಿಳ ತಗದಿಯ ಜೋಕೆ
ಸೊಪ್ಪಿಗೆ ಉಪ್ಪೊಂದಾಕಿಯ ಜೋಕೆ
ನಮ್ಮಪ್ಪರಾಣೆ ಕೊಡಗಿನ ಮಾರಿ
ನನ್ನ ಮಾತು ಮೀರಿ ಉಪ್ಪಾಕಿಬುಟ್ರೆ
ಹಜಾಮರ ಕರಸೇನು ಕಂಡ್ಯ
ತಲೆ ಮೂರು ಪಟ್ಟೆ ಬೋಳಿಸೇನು ಕಂಡ್ಯ
ಸುಣ್ಣದ ಪಟ್ಟೆ ಹೊಡಿಸೇನು ಕಂಡ್ಯ
ಕೆಮ್ಮಣ್ಣು ಬರೆಯ ಎಳಿಸೇನು ಕಂಡ್ಯ
ಒಡಕಲು ತಮಟೆ ಹೊಡಿಸೇನು ಕಂಡ್ಯ
ಹಳೆ ಮರ ಛತ್ರಿ ಹಿಡಿಸೇನು ಕಂಡ್ಯ
ಕೇಳುಕೇಳೆಲೆ ಕೊಡಗಿನ ಮಾರಿ
ಗಂಡನ ಮಾತು ಮೀರೊ ಹೆಂಡ್ತ್ಯಲ್ಲ
ಹೆಂಡ್ತಿ ಮಾತು ಮೀರೊ ಗಂಡಲ್ಲ
ಕತ್ತೆಮ್ಯಾಲೆ ಕುಂಡ್ರಿಸೇನು ಕಂಡ್ಯ
ಮೆರವಣಿಗೆಯ ಮಾಡಿಸೇನು ಕಂಡ್ಯ
ನಿಮ್ಮ ಮಾತು ನಾ ಮೀರೋಳಲ್ಲ
ನಿಮ್ಮ ಮಾತು ನಾ ತಗಿಯೋಳಲ್ಲ
ಇಬ್ಬರ ದೃಡವೆ ಒಂದಾಗೈತೆ
ಅವರಿಬ್ಬರ ಗ್ಯಾನ ಒಂದಾಗೈತೆ
ಎತ್ತಿನಗುದಿಗೆ ಹೆಗಲಮೇಲಿಟ್ಟುಕೊಂಡು
ಹೊರಟು ಬಿಟ್ಟನು ಕೊಣವೇಗೌಡ
ಏಳು ಗಾವುದ ಗಿಡ ಕಡಿಸ್ಯಿವನೆ
ಆರು ಗಾವುದ ಹೊಲ ಮಾಡ್ಯವನೆ
ಏಳು ಬೆಟ್ಟದ ನಡುವೆ ಅವನು
ಆಗ ಮನೆಯನಾದುರೆ ಕಟ್ಟಿಸವನೆ
ಹಿಟ್ಟು ಇಲ್ಲ ಬಿಟ್ಟಿ ಇಲ್ಲ
ಹೇಳುವರಿಲ್ಲ ಕೇಳುವರಿಲ್ಲ
ಹೊಲವನಾದರೆ ಉಳುವುದಕಾಗ
ಮತ್ತೇನು ಯೋಚನೆ ಮಾಡುತಾನಾಗ
ಮುಂದಿನ ಅರಿಗೆ ಚಿನ್ನದ ನೊಗವು
ಹಿಂದಲ ಅರಿಗೆ ಬೆಳ್ಳಿ ನೊಗವು
ಮುಂದಲಾರಿಗೆ ತಮಟೆ ಶಿವನ
ಹಿಂದಲಾರಿಗೆ ಕೊಂಬು ಶಿವನ
ಸಾಲುಕೂಡೋ ಟೈಮಿನಲ್ಲಿ
ಬಡಬನಂತ ತಮಟೆ ಬಡಿತಾನೆ
ಕುಣಿಕುಣಿನಂತೆ ಕೊಂಬೂದುತಾನೆ
ಇಷ್ಟೊಂದು ಬುದ್ಧಿ ಮಾಡಿಬುಟ್ಟು
ಮನೆಗೆ ಗೌಡ ಬರುತಾನೆ
ಆಗ ಕಾಟಿವಕ್ಕಲ ಕೊಣವೇಗೌಡ
ನೀಟುಗಾರ ನಮ್ಮಾರೇಗೌಡ
ಮಾಡಲಿಲ್ಲ ಕೇರಲಿಲ್ಲ
ಹಂಗೆ ವಡೆದು ಅಂಬಲಿ ಕಾಸಿ,
ಮನೆ ಹಿಂದಲ ಹೊಲಕ್ಕೆ ಹೋಗಿ
ಮೂರು ಮಕ್ಕರಿ ಸೊಪ್ಪು ತಂದು
ಸೊಪ್ಪುಗಿಪ್ಪು ಸೋಸೆ ಇಲ್ಲ
ಸೊಪ್ಪಿಗೆ ಉಪ್ಪೊಂದಾಕೇ ಇಲ್ಲ
ಸೊಪ್ಪಿನಲ್ಲುಳ ತಗದೇ ಇಲ್ಲ
ಒಂದು ಕೊನೆ ಬೆಂದೇ ಇಲ್ಲ
ಒಂದು ಕಡ್ಡಿ ಬೆಂದೇ ಇಲ್ಲ
ಬೇಗನೆ ಬೇಗ ಸೊಪ್ಪನು ಮಾಡಿದಾಳು
ಚಿನ್ನದ ಚೆಂಬಲಿ ನೀರ ತಂದಿಟ್ಟಾಳು
ಅಯ್ಯೋ ಅಯ್ಯೋ ಕಟ್ಟ ಬಡ್ಡಿ ಮುಂಡೆ
ಎಷ್ಟು ಸವದೋಯ್ತೆ ಚಿನ್ನದ ಚೆಂಬು
ಎತ್ತಿನ ಗುದಿಗೇಲಿ ಮೂರಾರೇಟ
ಹೇರಿಬಿಟ್ಟನು ಕೊಣವೇಗೌಡ
ಚಿನ್ನದ ಚೆಂಬ ವಳಗಿಟ್ಟಾಳು
ಕಾಲುಮೊಗೆಲ್ಲಿ ನೀರು ತಂದಾಳು
ಕೈ ಕಾಲು ಮಕವ ತೊಳೆದುಕೊಂಡು
ಶಿವಪೂಜೆಗೆ ತಾನು ಕುಳಿತುಕೊಂಡವ್ನೆ
ಸ್ವಾಮಿ-ಮೂಲೆಲಿವ್ದ ಸುಂಡಣ್ಣನ್ನೋರು
ಗಿರ್ ಗಿರ್ ಮೀಸೆ ತಿರುವುತಾರಂತೆ
ಕೊಣವೇಗೌಡನ ಜೊತೆಯಲ್ಲಾಗ
ಶಿವಪೂಜೆಯ ಮಾಡ್ತಾರಂತೆ
ಮೂಲೆಲಿದ್ದ ಸುಂಡಣ್ಣನ್ನೋರು
ಮತ್ತೊಂದು ಕೆಲಸ ಮಾಡುತಾರಂತೆ
ಕೈಕಾಲು ಮಕವ ಬೇಗದಿಂದಲೆ
ತೊಳಕೊಂಡರು ಸುಂಡಣ್ಣಾಗ
ಸರಸತಿ ಗೂಡಿಗೆ ಹಾರಿ ಆಗ
ಕೈಗೆ ಮೈಗೆ ವಿಭೂತಿ ಬಳುಕೊಂಡಾಗ
ಕೊಣವೇಗೌಡನ ಬೆನ್ನಿನ ಮೇಲೆ
ಶಿವಪೂಜೆಯ ಮಾಡ್ಯಾರು ಶಿವನೆ
ಆಗ ಬಂಗಾರದಂತ ತಟ್ಟೆಯನ್ನು
ಬೆಳಗಿಕೊಂಡು ಊಟಕ್ಕಿಡುವಾಗ
ಅಯ್ಯೊ ಅಯ್ಯೊ ಕೊಡಗಿನ ಮಾರಿ
ಎಷ್ಟು ಸವದೋಯ್ತೆ ಬಂಗಾರದ ತಟ್ಟೆ
ಕಳ್ಳರು ಗಿಳ್ಳರು ಕಂಡುಬುಟ್ರೆ
ಕದ್ದುಕೊಂಡಾದರು ಹೋಯ್ತರೆ ಕಣೆ
ಎತ್ತಿನ ಗುದಿಗೆ ಹೆಗಲೆಲಿಟ್ಟು
ಮೂರಾರೇಟ ಹಾಕ್ಯಾನು ಗೌಡ
ಬಂಗಾರದಂತ ತಟ್ಟೆ ತೆಗೆದು
ಕಣಜಕಾದುರೆ ಹಾಕೆಬುಟ್ಟು
ಮತ್ತೊಂದು ಪೂಜೆ ಮಾಡ್ತಾನೆ ಗೌಡ
ಮಗದೊಂದು ಸಾರಿ ಪೂಜೆ ಮಾಡ್ತಾನೆ ಗೌಡ
ಮನೆ ಹಿಂದಲ ಕೊಟ್ಟಿಗ್ಗೋಗಿ
ಮೂರು ಮಂಕರಿ ಮುದೆಮ್ಮೆ ಸಗಳಿ
ಮೂರು ಮಂಕರಿ ಮುದೆಮ್ಮೆ ತೊಪ್ಪೆ
ದೊಡ್ಡ ದೊಡ್ಡ ತೊಪ್ಪೆ ಎತ್ತಿಕೊಂಡ್ ಬಂದು
ನಡುಮಲ್ಲವಳು ಕಟ್ಟೆ ಕಟ್ಯಾಳು
ನಡುಮಲ್ಲವಳು ಕಟ್ಟೆ ಕಟ್ಟಿ
ಕಟ್ಟಿಗೆ ತಂದು ಸೊಪ್ಪಾಕ್ಯಾಳು
ಕಟ್ಟೆಗೆ ತಂದು ಸೊಪ್ಪು ಸುರಿದಾಳು
ಆಗ ಊಟಕಾದರೆ ಕೂತವ್ನಲ್ಲೋ
ಕಾಟಿ ವಕ್ಕಲ ಕೊಣವೇಗೌಡ
ಊಟಕಾದರೆ ಕೂತಗಂಡವ್ನು
ಇನ್ನೊಂದು ಕೆಲಸ ಮಾಡುತಾನೆ ಗೌಡ
ಕೈಯಿಲಿ ತಿಂದ್ರೆ ಕೈಗಾಯ್ತೈತೆ,
ಬಾಯಿಲಿ ತಿಂದ್ರೆ ಎಂಜಲಾಗ್ತೈತೆ
ಅರಬಗ್ಗ ಬಗ್ಗಿದ ಗಔಡ
ನಾಯಿ ನೆಕ್ಕಿದಂಗೆ ನೆಕ್ಕುತನೆ ಗೌಡ
ನಾಯಿ ತಿಂದಂಗೆ ತಿಂದನೆ ಗೌಡ
ಕತ್ತೆ ತಿಂದಂಗೆ ತಿಂತಾನೆ ಸೊಪ್ಪ
ಸೊಪ್ಪು ತಿನ್ನೋ ಟೇಮಿನಲ್ಲಿ
ಹಾಳಾದ ನೊಣ ಎಲ್ಲಿತ್ತಪ್ಪ
ಹಾಳಾದ ನೊಣವು ಬಂದು ಶಿವನೆ
ಅಂಬಲಿ ವಳಿಕೆ ಬಿದ್ದೀತಪ್ಪ
ಓಡಿಬಾರೆ ಓಡಿಬಾರೆ ನೀ
ಓಡಿಬಾರೆ ಕೆಟ್ಟ ನನ್ನ ಹೆಣ್ಣೆ
ನೊಣವುನಾದರೆ ಅಂಬ್ಲಿ ಕುಡೀತಲ್ಲೆ
ನನ್ನ ಹೊಟ್ಟೆಗೆ ಸಾಲದು ಅಲ್ಲೇ
ಹಿಂದಲ ಕೊಟ್ಟಿಗ್ಗೆ ಮುಳ್ಳೆಳೆಯೇ
ಮುಂದಲ ಬಾಗಲಿಗೆ ಅಗಣಿ ಹಾಕಿ
ಎಂದು ಕೂಗಿದನು ಕೊಣವೇಗೌಡ
ನೊಣವನಾದುರೆ ಹಿಡುಕೊಂಡನು
ಹಾಳಾದ ನೊಣವೆ ಎಷ್ಟಂಬ್ಲಿ ಕುಡಿದೆ
ಹಾಳಾದ ನೊಣವೆ ಎಷ್ಟಂಬ್ಲಿ ಹೀರಿದೆ
ನನ್ನ ಹೊಟ್ಟೆಗೆ ಸಾಲದೆ ಬಂತು
ನನ್ನ ಹೊಟ್ಟೆಗೆ ಎಟಕದೆ ಬಂತು
ನೊಣವನ್ನಾದರೆ ಹಿಡಕೊಂಡನು
ಒಂದು ಜಬ್ಬಾಟ ಜಬ್ಬಿದನು
ಒಂದು ಜಬ್ಬಾಟ ಜಬ್ಬಿದ ಗೌಡ
ಒಂದು ಸೀಪಾಟ ಸೀಪಿದ ಗೌಡ
ಹೊಟ್ಟೆ ಎಂಬುದು ಗುಡಾಣವಾಯ್ತು
ಹಾಳಾದ ಕೆಮ್ಮು ಎಲ್ಲಿತ್ತೊ ಕಾಣೆ
ಒಂದು ಕೆಮ್ಮಾಟ ಕೆಮ್ಮಿದ ಗೌಡ
ಉಡುದಾರೆಂಬುದು ಭಡ್ಡಂದೋಯ್ತು
ಹೊಟ್ಟೆಯೆಂಬುದು ಗುಡಾಣವಾಯ್ತು
ನಡುಮಲ್ಲಾಗ ಬಿದ್ದನು ಗೌಡ
ನಿನ್ನ ನರಿಗೆ ಹುರಿಯ ತತ್ತಾರೆ
ನಿನ್ನ ನರಿಗೆ ದಾರ1 ತತ್ತಾರೆ
ಕೇಳಿ ಕೇಳಲೆ ಕೊಡಗಿನ ಮಾರಿ
ಕೇಳೆ ಕೇಳೆ ನನ್ನಯ ನಾರಿ
ಆಗ ನರಿಗೆಯ ದಾರ
ಕೊಡುತಾಳಲ್ಲೊ ಕೊಡಗಿನ ಮಾರಿ
ನರಿಗೆ ದಾರ ಸಾಲದೆ ಆಗ
ಕದಬೆ ಹೆಗ್ಗ ಕೊಟ್ಟಳು2 ಆಗ
ಮೂರು ಪಟ್ಟು ಸುತ್ತಿಕೊಂಡನೆಲ್ಲೊ
ಮೂರು ಸುತ್ತು ಸುತ್ತಿಕೊಡನಲ್ಲೊ
ಕಾಟಿವಕ್ಕಲ ಕೊಣವೇಗೌಡ
ನೀಟುಗಾರ ನಮ್ಮಾರೇಗೌಡ
ಆಗ ಹೊಲಕೆ ಬಿತ್ನೆ ಮಾಡಬೇಕು
ಅದಕ್ಕೆ ಹೊರಟಾನಲ್ಲೋ ಕೊಣವೇ ಗೌಡ
ಹಳೇದ ಬಿತ್ನ ಮಾಡಿದರೆ
ಆಯ್ತದೊ ಕಾಣೆ ಹೋಯ್ತದೊ ಕಾಣೆ
ನನ್ನ ಹೊಲಕೆ ಮಳೆ ಹೂದರೆ
ಕೇಳು ಕೇಳೊ ದೇವೇಂದ್ರರಾಯ
ಆರು ಕಾಲನು ಬೇಡಿ ಕೊಟ್ಟೇನು
ಮೂರು ಕಣ್ಣಗಳ ಸಾಲ ಮಾಡಿ ಕೊಟ್ಟೇನು
ಮೂರು ಪಾವು ಜೋಳವನ್ನೆ
ಬಿತ್ನೆ ಮಾಡಾಕೆ ಹೋದನು ಗೌಡ
ಮೂರು ಪಾವನೆ ತಕ್ಕೊಂಡಾಗ
ಬಿತ್ನೆಯನೆ ಮಾಡಿಬಂದವ್ನೆ ಗೌಡ
ಇದರ ಸತ್ಯಾವ ನೋಡಬೇಕೆಂದು
ದೇವೇಂದ್ರ ಮಳೆಯನಾದರೆ ಹುಯ್ಲೇ ಇಲ್ಲ
ಆಳನ್ನಾದರೆ ಕರಕೊಂಡಾಗ
ಮೂರು ಪಾವು ಜೋಳವನ್ನೆ
ಬಿತ್ನೆ ಮಾಡಿದ್ದ ಆಯಿಸಿ ಬಿಟ್ಟವ್ನೆ !
ಒಂದೂವರೆ ಸೇರು ಜೋಳ ತಕ್ಕೊಂಡು
ಹೊಲಕ್ಕೆ ಬಿತ್ನೆ ಮಾಡಿ ಬಂದವ್ನೆ
ತೇನೆ ಬಿಟ್ಟಂತ ಜ್ವಾಳದಲ್ಲಿ
ಹಾಳಾದ ಹಕ್ಕಿ ತಿಂದುಹೋಗ್ತಾವೆ
ಜ್ವಾಳದ ತೆನಿಯ ಕೀಳುತಾರೆ
ಹರಕರು ತಿರುಕರು ಬರುತಾರೆ
ಜ್ವಾಳದ ತೆನಿಯ ಕೇಳುತಾರೆ
ಗುಂಚಕ್ಕರ್ದ1 ತಿಂದೋಯ್ತವೆ
ಹಕ್ಕಿಪಕ್ಕಿ ಮೆದೋಯ್ತವೆ
ಜೋಳದ ತೆನಿಗೆ ಪು ಚೀಲವ
ಹೊಲೆಸಿಬಿಟ್ಟನು ಕೊಣವೇಗೌಡ |
ಜ್ವಾಳದ ತೆನಿಗೆ ಮುಸುಕನಾದರೆ
ಮಾಡಿಸಾನಲ್ಲೊ ಕೊಣವೇ ಗೌಡ
ನಾಯಿಗೆ ಸ್ವಲ್ಪ ಹಿಟ್ಟಾಕದಂತೆ
ಈ ರೀತಿ ಮಾಡಿದ ನಮ್ಮ ಕೊಣವೇಗೌಡ
ಹೆಂಡ್ತಿ ಮಾತು ಮೀರೊ ಗಂಡಲ್ಲ
ಗಂಡನ ಮಾತು ಮೀರೊ ಹೆಂಡ್ತಲ್ಲ
ಇಂತ ಬದುಕಿದಂತ ಕೊಣವೇ ಗೌಡನ
ಸತ್ಯವನ್ನೆ ನೋಡುಬೇಕೂ ಅಂತ
ಪರಮೇಶ್ವರನು ಆವಾಗ
ಕೊಣವೇಗೌಡನ ಭಕ್ತಿಯವಾಗನೋಡಬೇಕೂ ಅಂತ ದೇವರು
ಆಗ ಹಣ್ಣಣ್ಣಾದರು ಮುದುಕಾಗಿ
ಬಂದನಲ್ಲೊ ಶಿವನೇ ಶಿವನೇ
ಕೊಣವೇ ಗೌಡನ ಬಳಿಗೆ ಹೋಗಿ
ಜ್ವಾಳದ ತೆನಿಯ ಕೇಳ್ತವನಲ್ಲೊ
ಊಟ ಮಾಡೊತ್ತಿಗೆ ಊಟಕ್ಕೆ ಬಂದ್ರೆ
ಊಟವಾದರೂ ಕೊಡಿಸೇನು ನಿನಿಗೆ
ಈ ಜ್ವಾಳದ ತೆನೆ ನನ್ನದಲ್ಲ
ಈ ಜ್ವಾಳದ ಹೊಲ ನನ್ನೆದಲ್ಲ
ಹಾಗೆ ಆಗಲಿ ನಡಿಯಯ್ಯ ಗೌಡ
ಮುದ್ದೆನಾದರೆ ಕೊಡಿಸಪ್ಪ ಗೌಡ
ಓಡೋಡಿ ಓಡೋಡಿ ಓಡೋಡಿ ಗೌಡ
ಮನಿಯನಾದರೆ ಹೊಗುತಾನೆ
ಹರುಕರು ತಿರುಕರು ಬತ್ತಾರೆ
ನೀ ಬೀಗನಾದರೆ ಹಾಕಲೆ ಮಾರಿ
ಊಟ ಮಾಡೋತಕ್ಕೆ ಬಂದು
ಅಂಬ್ಲಿಕೊಡಂತ ಅಮರಿಕೊತ್ತಾರೆ
ಸೊಪ್ಪು ಕೊಡಂತ ತಗಲಿಕೊತ್ತಾರೆ
ಹಿಟ್ಟಕ್ಕಂತ ಹೊಡೆಯಾಕೆ ಬತ್ತಾರೆ
ನಾನೇನು ಮಾಡ್ಲಿ ಹೇಳಲ ಹೆಣ್ಣೆ
ನಾನೇನು ಮಾಡ್ಲಿ ಹೇಳಲ ನಾರಿ
ಗೌಡನ ಮಾತು ನಿಜವಂತ್ಹೇಳಿ
ಬೀಗನಾದರೂ ಹಾಕಿಕೊಂಡಳು
ಆಗ ಮಾಯದ ಶಿವನು
ಮಾಯವಾಗಿ ಮನಿಗೆ ಹೊಂಟ
ಈಗ ಕೇಳು ಕೇಳಲೆ ನಾರಿ
ಕೇಳು ಕೇಳಲೆ ಕೊಡಗಿನ ಮಾರಿ
ನಾನೇಳೊ ಮಾತ ಕೇಳಲೆ ನೀನು
ನನ್ನ ಸುದ್ದಿಯ ಕೇಳಲೆ ನೀನು
ಈಗ ದಾಸ ಜಂಗಮ ಬಂದರೆ
ನಾ ಸತ್ತಂಗೆ ಮಲಗಿಕೊತ್ತೀನಿ
ಒಂದು ಬಟ್ಟೆನಾದರೆ ಹೊಚ್ಚಿ ಹೆಣ್ಣೇ
ಚೆಲ್ಲದ ನೀರ ನನ್ನ ಮೇಲುಯ್ಯೆ
ಬೆಲ್ಲದ ಸೀಗೆ ನೊಣ ಆದರೆ
ಜೀಯಂತ ಮುತ್ತಿಕೊತ್ತವೆ
ಸತ್ಯೋಗವ್ನೆ ಅಂತ ನನ್ನ
ಬಿಟ್ಹೋಗುತಾನೆ ಬಿಕ್ಷಕನು !
ನನ್ನ ಜನ್ಮವು ಹೋದರು ನಾನು
ದಾನ ಧರ್ಮ ಮಾಡೊನಲ್ಲ !
ಆಗ ಸತ್ಯಕಾರಿ ಸದ್ಗುರುವಾಗ
ಮನಿಗೆ ಬೇಗ ಇಳುದಾನೆ
ಮಾಯಕಾರಿ ಜಗದೀಶ್ವರನು
ಮಾಯದಿಂದ ಮನಿಗೆ ಬಂದ
ಬೆಲ್ಲದ ನೀರ ಮೇಲೆಸ್ತವಳೆ
ಕೈಕಾಲನ್ನೆ ಮದುರವಳೆ
ಸತ್ತೋನಂಗೆ ಬಿದ್ದುಕೊಂಡವ್ನೆ
ಉಸಿರಿಲ್ಲದೊನಂಗೆ ಉಳ್ಳಿಕೊಂಡವ್ನೆ
ಅಯ್ಯೊ ಕೊಣವೇಗೌಡ ಕೊಣವೇಗೌಡ
ಮೇಲಕೇಳೊ ಕೊಣವೇಗೌಡ
ಶಿವನೆ, ಕೊಳ್ಳಿನಾದರೆ ಎಟ್ಟಿದರಿಲ್ಲ
ಮೇಲಕ್ಕಾದರು ಎದ್ದವನಲ್ಲ
ಕತ್ತೆ ಬಾಲಕು ಕಟ್ಟಿಸ್ಯಾನಲ್ಲೊ
ಸತ್ಯಾಚಾರಿ ಪರಮೇಶ್ವರನು
ಕತ್ತೆ ಬಾಲಕು ಕಟ್ಟಿಸ್ಯಾನಲ್ಲೊ
ಕೊಣವೇಗೌಡನ ಸತ್ಯಾಚಾರಿ ಶಿವನು
ಊರು ಮೂರು ಸುತ್ತು
ಮೆರವಣಿಗೆ ಮಾಡಿಸ್ಯಾನಲ್ಲೊ |
ಮೆರವಣಿಗೆ ಮಾಡಿಸಿದರು
ಬಾಯನಾದುರೆ ಬಿಡಲಿಲ್ಲ
ರಕ್ತ ಎಂಬುದು ಹೊಳಿಯಾಗಿ
ಹರಿತೈತಾಲ್ಲೊ ಶಿವನೆ !
ಸತ್ಯಾಚಾರಿ ಜಗದೀಶ್ವರನು
ಶಾಪವಾದರೆ ಕೊಟ್ಟನಾಗ
ನೀನು ಎಷ್ಟು ಬೆಳೆದ ಕಾಲಕು
ಪರಮ ಲೋಭಿ ಆಗಯ್ಯ ನೀನು !
ದಾನ ಧರ್ಮ ಮಾಡಬೇಕಂತ
ಸತ್ತೋನಂಗೆ ಬಿದ್ದುಕೊಂಡ್ಯಲ್ಲೊ ?
ಶಾಪವನ್ನು ಕೊಟ್ಟರು ಶಿವನು
ಶಿವನಿಗಾದರೂ ಬಿಟ್ಟು ಕೊಡಲಿಲ್ಲ
ಧಾನ ಮಾಡದ ಕೊಣವೇಗೌಡ
ಕೈಲಾಸವ ಸೇರಿಕೊಂಡವ್ನೆ
ಕೊಣವೇಗೌಡನ ಕತೆಯನ್ನೀಗ
ಕೇಳಿರಣ್ಣ ಜನಗಳು ಎಲ್ಲ
ಮಾಡಿದ ಕರ್ಮ ಪರಿಹಾರ ಎಲ್ಲ ಶಿವನೆ
ಮಾಡಿದ ಪಾಪ ಪರಿಹಾರ ಎಲ್ಲ ಜಗದೀಶ.

ಪಾಠಾಂತರ ಪಠ್ಯ :

೧. ಕೊಣವೇಗೌಡ; ಹನೂರು ಕೃಷ್ಣಮೂರ್ತಿ, ಜನಪದ ಮತ್ತು ಬುಡಕಟ್ಟು ಗೀತೆಗಳು ಸಾಹಿತ್ಯ ಅಕಾಡೆಮಿ ಬೆಂಗಳೂರು – ೧೯೯೮ ಪು.ಸಂ. ೧೫೩-೧೫೮ *      ಕಾಟಿವಕ್ಕಲ ಕೊಣವೇಗೌಡ; ನಾಗೇಗೌಡ ಎಚ್.ಎಲ್. ಪದವವೆ ನಮ್ಮ ಎದೆಯಲ್ಲಿ, ಬೆಂಗಳೂರು ವಿಶ್ವವಿದ್ಯಾಲಯ ಬೆಂಗಳೂರು ೧೯೭೬ ಪು.ಸಂ. ೨೧೫-೨೨೪