ಜಗದಂಬೆ ನೋಡ್ರಿ ಹೆಚ್ಚಿನಾಕಿ
ಹೆಣ್ಣು ಗಂಡು ಬತ್ತಲೆ ಮಾಡಿದಾಕಿ
ರ್ಯಾವಳ ಬತವನಳದಾಕಿ
ಸಿದ್ಧರಿಗೆ ಧಕ್ಕಿ ಹೊಡದಾಕಿ           ೧

ಪರಶುರಾಮ ಹೇಳತಾಳಂಜೀಕಿ
ಇಲ್ಲಿ ಕುಂದ್ರ ಬಲು ಜ್ವಾಕಿ
ಸಿದ್ಧರದು ಐತಿ ಆಳ್ವೀಕಿ
ನಾ ಹೊಡೆಯತೀನಿ ಜ್ವಾಕಿ          ೨

ಹೋಗಿ ನಿಂತಾಳ ಗವಿಯ ಮುಂದ
ಆಕಾಶಗಂಟೆ ನುಡಿದಾಂಗ
ಮುನ್ನೂರ ಮರಿ ಕೊಡ ಸಿದ್ಧರ
ನಿದ್ದಿ ಮಾಡುತ ಮಲಗ್ಯಾರ           ೩

ಕಾಶಮ್ಮನ ಕರೆದು ಹೇಳತಾರೆ
ಬನ್ನಿ ಪತ್ರಿ ತಂದು ಕೊಡಿರಂತ
ಹಿಡಿ ಹಿಡಿ ನೀಡತಾಳ ಎಲ್ಲ
ಒಬ್ಬ ಸಿದ್ಧ ಯಾಕ ಉಣವಲ್ಲ         ೪

ಕ್ಯಾದಿಗಿ ಮೆಳೆಯ ಸುತಗಟ್ಟಿ
ಜಗದವ್ವ ಹತ್ತ್ಯಾಳ ಮೆಟಗಟ್ಟಿ
ಜಾಗ ನೋಡತಾಳ ಇಸರಂಬ
ಅಳ್ಳಿಯಂಡಗಿ ಬಿದ್ದು ಗುಡ್ಡತುಂಬ    ೫

ಅವತ್ತೈತಿ ಮಂಗಳವಾರ
ಹಣಿಗ್ಹಚ್ಚಿದಾಳ ಭಂಡಾರ
ಮುಪ್ಪಾನ ಮುದಕಿ ಬಲು ನೀಟ
ಕವಡಿಸರ ಹಾಕ್ಯಾಳ ಹದಿನೆಂಟ     ೬

ಜೋಗ ಹಾಕತಾಳ ನಕ್ಕೋತ
ಬತ್ತಿಗೆ ಅಳ್ಳಿ ಕೊಡಿರೆನ್ನುತ
ಆಕೀಗಿ ಹಚ್ಚಿದರ ಪಂಟ
ಬತ್ತಿಗೆ ಅಳ್ಳಿ ಇಲ್ಲಂತ       ೭

ಅಳ್ಳೀಯಂಡಿರಗಿ ಹೊಡಿತಾನ ಸಾಗಿ
ಅವು ಹೊರಳಿ ಬಿದ್ದಾವ ಕಲ್ಲಾಗಿ
ಜಗದಂಬಾ ಮಹಿಮೆ ತಿಳಿಲಿಲ್ಲ
ಬತ್ತಿಗೆ ಅಳ್ಳಿ ಕೊಡಲಿಲ್ಲ     ೮