ಲೇಲೋ ಲೇಲೋ ಲೇಲಯಾ ಲೇಲೋ
ಆಡುತ ಕುಣಿಯುತ ಬಾರೆಲೆ ಮಾಯದ ಸೂಳೆ
ಮಾಯಕಾರ್ತಿ ಸೂಳೆಯ ಮಾಯದ ಆಟ
ಮಾಯ ಮಾಯದ ಆಟವ ನೋಡಲು ಬಾರಮ್ಮ
ನೋಡುವ ಹೆಣ್ಗಳ ಕಣ್ಣೆಲ್ಲವು ಕುರುಡು
ಆಡುವ ಸೂಳೆಯ ಕಾಲೊಂದು ಕುಂಟು
ಬೆಟ್ಟದಿ ಮನ್ನಪ್ಪ ಸಾಕಿದ ಸೂಳೆ
ಚೀರಂಗಿ ರಾಯನು ತಂದಿಹ ಸೀರೆ
ಸೀರೆಯ ಉಡುವಲಿ ಚುಚ್ಚುವನೆರಿಗೆ
ಆ ಸೀರೆಯೂ ಆಗದು ಸೂಳೆಯೆ ನಿನಗೆ
ಕೋಯಿ ಕೋಟಂಗಡಿ ಉದ್ದದ (ಚೀರಾಳಿ) ಸೀರೆ
ಬಾನನು ಮುಟ್ಟಿ ನೆಲ ತಾಗುವ ಉದ್ದನ ಸೀರೆ
ಸರಿಬಂದಿದೆ ತಾನೆ ಸೀರೆಯು ನಿನಗೆ
ಬಾಚುತ ಬೈತಲೆ ತಿದ್ದಿಕೊ ನೀ ಸೂಳೆ
ಕುಣಿಸುವ ತಲೆಗೆ ಸರಿಯಾಗಿದೆ ಸೀರೆ
ತಲೆ ಇಲಿವಸ್ತ್ರಕೆ ಸರಿಹೊಂದಿದೆ ಸೀರೆ
ಉದ್ದದ ಹಣೆಗು ಸರಿಹೊಂದಿಹ ಬೊಟ್ಟು
ಅರ್ಚಕನಿಟ್ಟಿಹ ಚಂದದ ಗಂಧದ ಬೊಟ್ಟು
ಕಿವಿಯೊಳು ಚಿನಿವಾರನು ಮಾಡಿಹ ಒಡವೆ
ಚಿನ್ನದ ಓಲೆಯದು ತುಂಬಿದೆ ತಾನು
ಕೊರಳಿಗೆ ಚಿನಿವಾರನು ಮಾಡಿಹ ಒಡವೆ
ಚಿನ್ನದ ಪತ್ತಾಕವು ತೂಗಾಡಿದೆ ತಾನು
ದಪ್ಪನ ಮೊಲೆಗೆ ಏನಿದೆ ಕಟ್ಟು
ದಪ್ಪನ ಮೊಲೆಗಿದೆ ಕುಪ್ಪಸ ಕಟ್ಟು
ಬಳುಕಿನ ನಡುವಿಗೆ ಹೊಂದಿದೆ ಏನು !
ನಡುವಿಗೆ ಸುತ್ತಿದೆ ಬೆಳ್ಳಿಯ ಡಾಬು
ಮುಂಗೈಯೊಳುತೊಟ್ಟಿದೆ ಏನದು ತಾನು
ಕೈಯೊಳು ತೊಟ್ಟಿಹ ಕರಿಬಳೆ ಬೆಳ್ಳಿಯ ಕಡಗ
ಕಾಲೊಳು ತೊಡಿಸಿದೆ ಏನದು ಒಡವೆ
ಕಾಲೊಳು ಇದೆ ಕಾಲಂದಿಗೆ ಉಂಗುರವೆ
ಮೇಲಿದೆ ತೊಟ್ಟಿಹ ಕುಪ್ಪಸ ಕೆಳಗಿದೆ ಉಟ್ಟಿಹ ಸೀರೆ
ಕಂಗಳ ಕಾಡಿಗೆ ಕತಗನ ಹಕ್ಕಿಯ ಹೋಲಿದೆ
(ಕಂಗಳ ಕಾಡಿಗೆ ಕತಗನ ಹಕ್ಕಿಯ ತೆರದಿ ಇದೆ)
ಕೆನ್ನೆಗೆ ಅರಿಶಿನ ಮಂಜ ಹಕ್ಕಿಯ ಹೋಲಿದೆ
ಕನ್ನಡಿಯೊಳಗಲಿ ನಿನ್ನೊಮ್ಮೆ ನೋಡು
ಸಂತಸ ಉಕ್ಕಿದೆ ಅಲ್ಲವೆ ಸೂಳೆ
ಎಲ್ಲಕು ನಿನ್ನನು ನೋಡೆ ಕಣ್ಣಲಿ ಕುಶಿಯು
ಹುತ್ತರಿ ಹಬ್ಬದ ಆಟದ ಖ್ಯಾತಿಯ ಕೇಳಿ
ಕೊಂಬೆಯ ಬಿಟ್ಟು ಹಾರುತಕೋಡಗ ಕೂಡ ಬಂದಿದೆ
ಬಾಗುತ ಬರುತಲಿ ಕುಣಿದಾಡು ಕುಂದ
ಬಾಳೆಯ ತೆರೆದೊಳು ಬಳುಕಾಡು ಸೂಳೆ
ನಿನ್ನೊಳು ಕೂಡಿದ ಒಬ್ಬ ಅವಗಿದೆ ಗಡ್ಡ
ತುಂಬಿಹ ಅಲ್ಲಿಯ ಕೂರೆಯ ಕಿತ್ತೊಗೆ ಸೂಳೆ
ಕುಂದ ನಿನ್ನಯ ಸೂಳೆಯ ಸೀರೆಯ
ನೆರಿಗೆಗೆ ಹತ್ತಿಹ ನಾಯುಣ್ಣಿಯ ಕಿತ್ತೊಗೆ
ಕೇರಿಯ ತರುಣರು ಕಾಣಲು ನೀ ಸೂಳೆ
ಹೂಬಾಳೆ ಹಣ್ಣದು ಕೈಗೆಟುಕಿದ ತೆರದಿ
ಕುಶಿ ನಿನಗಿಹುದಲ್ಲವ ಸೂಳೆ !
ನಿನ್ನೊಳು ಕೂಡಿಹ ಗಂಡನ ಕಾಣಲು ನಿನಗೆ
ಕಕ್ಕಡೆಮುಳ್ಳಲಿ ಪೆಟ್ಟನ ತೆರದಿ ನಿನಗೆ
ಕುಂದನನೀ ಬಿಟ್ಟೋಡಿದರಲ್ಲಿಯ
ತಿಳಿದಿರಲಿಲ್ಲವು ಆ ಹೆಡ್ಡನಿಗೆ
ಏ ಹೆಡ್ಡನೆ ಹುಡುಕಿಯೆ ಬಾ ಆ ಉತ್ತನ
ಮಾಯದೊಳಿದ್ದಿಹ ಉತ್ತನ ಕರೆ ತಂದನು ಕುಂದ
ಕುಂದನ ಕೈಯಿಗೆ ತೆಂಗನು ಕೊಡಿರಿ
ಸೂಳೆಯ ಕೈಯಿಗೆ ಉಂಗುರ ಕೊಡಿರಿ
ಕುಣಿತವು ಮುಗಿಯಿತು ಎಲ್ಲರು ಕಾಣಿರಿ
ಈ ವರ್ಷಕೆ ಬಂದಿಹ ಪುತ್ತರಿ ಆಟವ
ಮುಂದಿನ ವರುಷವು ಬಂದೇ ಬರಲಿ
ಮಾಯದಿ ಬಂದು ಮಾಯದಿ ಸಾಗಿದೆ
ಹರುಷದ ಹುತ್ತರಿ ನಮ್ಮಯ ಹುತ್ತರಿ