ಸರಿಯಗಾಣೆನು ಧರಣಿಯೊಳಗಮ್ಮ
ಕರುಣಿ ಎಲ್ಲಮ್ಮ, ಸರಿಯಗಾಣೆನು ಧರಣಿಯೊಳಗಮ್ಮ ಪಲ್ಲ

ಏನು ಹೇಳಲಿ ನಿನ್ನ ಕೌತುಕವ
ನೀ ಆದಿಯಲ್ಲಿ ತುಂಬಿ ತುಳುಕಿದಿ ಏಕಭಾವದಿ
ಜ್ಞಾನುಳ್ಳ ಮೂವರು ಶಿವನ ಬಳಿಯಲಿ ಮಡಿದರು
ಜ್ಞಾನಶಕ್ತಿ ಅವರಿಗಿತ್ತು ಮಾನಶಕ್ತಿ ಅವರಿಗಿತ್ತೆ            ೧

ಪ್ರಥಮಯುಗದಲಿ ಪರಶಿವಗೆ ಪತ್ನಿಯಾಗಿ
ನಿತ್ಯ ಮೆರೆದೆ ನೀ ರಜತಗಿರಿಯೊಳಗೆ
ಕಾರ್ತವೀರ್ಯನ ಸೊಕ್ಕನಡಗಿಸಿ ನಲಿದೆ
ಯುದ್ಧಮುಖದಲ್ಲಿ ನಿನಗೆ ಪ್ರತಿಯುಂಟೆ ಇಹದಿ ೨

ದ್ವಾಪರಯುಗದಲ್ಲಿ ಪಾಂಡವರಿಗೆ ಪತ್ನಿಯಾಗಿ
ಪಾಪಿ ಕೌರವ ಕರ್ಣ ದುಶ್ಯಾಸನರು
ತಾಪ ಕೊಡಲು ನಿನ್ನ ಅಂತ ಕರಣಕೆ
ಕೋಪದೊಳು ಕುರುಕುಲವ ಕೆಡವಿದಿ          ೩

ತ್ರೇತಾಯುಗದೊಳು ಭೂಮಿಯೊಳು ಜನಿಸಿ
ರಾಮಚಂದ್ರನಿಗೆ ನೀ ಸತಿಯಳಾಗಿ
ಕೋತಿಬಳಗವ ಕೂಡಿಕೊಂಡು ಸೇತುವೆ ರಚಿಸಿ
ಪಾತಕಿ ರಾವಣನ ಕುಲ ನಾಶಮಾಡಿದೆ       ೪

ಕಲಿಯುಗದಿ ಆದಿ ಎಲ್ಲಮ್ಮ ನೀನಾಗಿ
ಜಮದಗ್ನಿ ಋಷಿಗೆ ಭಾರ್ಯೆಯಾದೆಮ್ಮ
ಕಾರ್ತವೀರ್ಯನ ತಲೆಯ ಕೊಯ್ಸಿಬಿಟ್ಟೆಮ್ಮ
ಒಲಿದ ಭಕ್ತರಿಗೆ ಪ್ರೀತಿಯ ಮಾತೆಯಾದೆಮ್ಮ  ೫