ಎಲ್ಲಿ ಕಾಣೆಲ್ಲಿ ಕಾಣೇ ಎಲ್ಲಮ್ಮ ನಂಥಾಕಿನ
ಎಲ್ಲಿ ಕಾಣೆಲ್ಲಿ ಕಾಣೇ ಕೊಳ್ಳದವ್ವನಂಥಾಕಿನ   ಪಲ್ಲ

ಎಲ್ಲೆಲ್ಲಿ ಕಾಣದೆ ಶಿವನ ವಲ್ಲಭೆ ಎನಿಸಿದಿ
ಕಲ್ಲಿನೊಳಗ ಹುಟ್ಟಿ ಉಗರಕೊಳ್ಳಕ ಬಂದಿ
ಬಲ್ಲಿದವ್ರೆಲ್ಲ ಹಿಡ್ದು ಸಲ್ಲಸಲ್ಲಿಗಿ ಮಾನಾನುಡ್ದು
ಯೋಳ ಕೊಳ್ಳದಾಗ ಬಾಲೇರಾಳೋ ಎಂಥಾ ಕರುಣಿ ೧

ಭಾಳ ಮುಂದಿನ ಬತ್ತಲೆ ಮಾಡಿದಿ
ಬೇವ ಉಡ್ಸಿ ಮೋಜ ನೋಡಿದಿ
ತಾಳ ಝಾಂಗಟಿ ಬಾಜಾ ನುಡಸಿದಿ
ಮ್ಯಾಳಗೊಂಡು ಭಿಕ್ಷಕ ಜೋಡಿಸಿದಿ            ೨

ಮಂಡಲದೊಳಗ ಮಾಯಕಾರ್ತಿ
ಜಮದಗ್ನಿಗೆ ಶಿರವ ಕೊಡಿಸಿದ್ದಿ
ಎಲ್ಲಾ ನೀನ ಪುಂಡಗಾರ್ತಿ
ಗಂಡ ಹೆಂಡರನ ಬಿಡಿಸಿದ್ದಿ ೩

ಭಂಡಾರ ಚೀಲಾ ಹಿಡಿಸಿದ್ದಿ
ರಂಡ್ಯುಣಿವ್ಗಿ ಬಳಿ ಒಡಿಸಿದ್ದಿ
ತಂಡ ತಂಡೆಲ್ಲ ಮೆರಿಸಿದ್ದಿ
ರಾಜ ಮುತ್ತೈದಿತನ ಕೊಡಿಸಿದ್ದಿ       ೪