ದೇವಿ ಅವತಾರ ನೋಡಮ್ಮ ಈ ಜಗದೊಳು
ಎಲ್ಲಮ್ನವತಾರ ನೋಡಮ್ಮಾ        ಪಲ್ಲ

ಕೆಂಜಡೆಯನು ಬಿಟ್ಟು ಮುಂದಕೆ ಸಾಗುತ
ಕೆಂಡದಂತೆ ಕಣ್ಣ ಕಿಡಿಕಿಡಿ ಸೂಸುತ
ಕರಕರ ಹಲ್ಲ ತಿಂದು ದೇವಿ ಬರತಾಳ
ಕರಿಯಲ್ಲ ಬೇಡಿದವಗೆ ತಾ ನೀಡತಾಳ        ೧

ಭಂಡ ಜನರಿಗೆ ಬಂಡ ಮಾಡಿದಳು
ಅಖಂಡರೂಪ ತಾಳಿ ನಿಂತಿಹಳು
ಕೆಂಡದಂತೆ ಕಣ್ಣ ಕಿಡಿಕಿಡಿ ಸುರಿಸುತ
ಹಿಂಡಿ ಹಿಪ್ಪಿ ಮಾಡಿ ಒಗೆದಾಳಂಬಾ ೨

ಬಲ್ಲೆನೆಂಬವನ ಹಲ್ಲ ಕೀಳಿಸಿದಳು
ಇಲ್ಲದ ಬಲಿಹಾಕಿ ಕೊಲ್ಲುತ ಬರುತಾಳೂ
ನಲ್ಲಿ ಹೊಟ್ಟೆಗಳ ತೊಳಿಸುತ ಬರುತಾಳೂ
ಕುಲ್ಲ ಜನರಿಗಲ್ಲವೆನಿಸಿದಳಂಬಾ     ೩

ಘಾತಕಿ ಜನರಿಗೆ ನೂಕುತ ಬರುತಾಳು
ನೀತಿ ತಪ್ಪಿದರ ಪಾತಾಳಕ್ಕೆ ತುಳಿತಾಳು
ಸೋತು ಬಂದವರಿಗೆ ಪ್ರೀತಿಲಿ ಕಾಯ್ತಾಳು
ಘಾತಕಜನ ಲೂಟಿ ಮಾಡಿದಳಂಬಾ ೪

ಹುಚ್ಚು ನೊರಜುಗಳ ಸವರುತ ಬರುತಾಳೂ
ಅಕ್ಕರ ದಿನದಲಿ ಸೊಕ್ಕನು ಮುರಿತಾಳು
ಚಿಕ್ಕಾಡಿ ತಗಣಿ ವರಸಿದಂತೆ ತಿಕ್ಕಿ
ಮುಕ್ಕುತ ಬರುತಾಳೆ ಜಗದಂಬಾ   ೫

ಶರಣು ಬಂದವರಿಗೆ ಕರುಣಿಸಿ ಕಾಯ್ತಾಳು
ದುರಿತ ಕಂಟಕಗಳ ಸಂಹಾರ ಮಾಡ್ತಾಳು
ದಾರಿಗೆ ದೊರೆಯದ ಪದವಿಯ ಕೊಟ್ಟಾಳು
ಗುರುಬುದ್ಧಿ ಸ್ವಾಮಿಗೆ ದೊರೆತಾಳಂಬಾ       ೬